ಬೇಸರದ ಬಾವಲಿಗಳಿಗೆ
ಕಣ್ಣಿಲ್ಲ.
ಬೀಸುವ ಗಾಳಿಗೆ
ಎದೆಯ ಕಾಗುಣಿತ ಅಪಥ್ಯ.
ಇದ್ದಲ್ಲೇ ನುರಿಯುವ ಈ
ನಿರುದ್ದೇಶಿ ಕುರ್ಚಿಗೆ
ಕಾಲುಗಳು, ನೆಪಕ್ಕೆ ಮಾತ್ರ ಪೋಣಿಸಿದ್ದಾನೆ-ಬಡಗಿ,
ಇದು ಹಳೆಯ ಗುಟ್ಟು. ಒಪ್ಪಿಕೊಂಡು ಎಷ್ಟೋ ಕಾಲವಾಗಿದೆ.
ಕೆಲವು ಕಾರಾಗೃಹಗಳಿಗೆ
ಗೋಡೆಗಳಿರುವುದಿಲ್ಲ.
ಕೆಲವು ಮಾತುಗಳಿಗೆ ಪದಗಳೂ..
ನಿಟ್ಟುಸಿರಿಗೆ ಮಾತ್ರ ಬಣ್ಣಗಳು –
ಬಿನ್ನ ಬಿನ್ನ.
ಯಾರದೋ ಒಬ್ಬಂಟಿತನದ ಬೇಟೆಗೆ
ಮರಳ ಮಯ್ಯ ಮೇಲೆ ಬರೆದ
ಚಿತ್ರಗಳಂತೆ ಬದುಕು.
ಆದಿ ಅಂತ್ಯಗಳ ವಿಧಿ ಲಿಖಿತಗಳ ಗೊಡವೆ ಮರೆವೆಗೆ ಕೊಟ್ಟು,
ಅಲೆ ಕೊಚ್ಚಿಕೊಂಡು ಹೋಗಲೆಂದೇ ಕಾಯುತ್ತಾ
ಬೆಳೆಯುವ ರೇಖೆ. ಹಳ್ಳ. ಕಪ್ಪೆ ಚಿಪ್ಪಿನ ಸಿಂಗಾರ.
ನಿಶಬ್ಧ ಬರೆವ ಆತ್ಮಕಥೆಗೆ
ಲಿಪಿಯ ಹಂಗು ಹೆಣ ಭಾರ
ಬೇಸರವಾಗುತ್ತದೆ.
ಯಾರದೋ ನಿರ್ಭಾವದ ಅಂಟಿನ,
ನಂಟಿನ
ಇಕ್ಕಳಕ್ಕೆ ಕೊರಳ ನೀಳವನು
ಮನಸಾರೆ ಚಾಚಬೇಕು. ಮುನ್ನವಾಗಿ.
ಇಲ್ಲಿ, ಈ ಪಾಪಗಳ ಕಮಟಿಗೆ ಪ್ರಜ್ಞೆ ತಪ್ಪಿರುವ ಪಕ್ಕೆಯ
ಆಳದಲ್ಲಿ ರೆಕ್ಕೆಯೊಂದು ಜೀವ
ತಳೆದ ಇರುಸು ಮುರುಸು.
ವೃದ್ದಾಪ್ಯದ ಬಸಿರಂತೆ, ಅಂತೂ ಜೋಂಪಿಗೆ ಜಾರಿದ
ತಕ್ಕಡಿಯ ವಿಚಲಿತಗೊಲಿಸುತ್ತದೆ.
ಈಗೀಗ ಸಿಂಗಾರ ಬಂಗಾರಗಳಿಗಿಂತ
ಬಿಡುಗಡೆಗಳು ನೀಡುವ ಭಿಕಾರಿತನದ
ನಿರಾಳ ಚೆಲುವು ಬಿಡದಂತೆ ಸೆಳೆಯುತ್ತಿದೆ.
ದಿಣ್ಣೆ ಹತ್ತಿ, ಬೇಲಿ ಜಿಗಿದು ಗೋಣನೆತ್ತಿ
ಮೋಡಕೇ ಮೂಗ ತೂರಿಸಿದರೂ
ಬೆನ್ನ ಮೇಲೇ ಅವೇ ಹಳೆಯ ಕಣ್ಣು.
ಒಲೆ ಹಚ್ಚಿ ಯಾವುದೋ ಕಾಲವಾಗಿಹೋದ
ಒಪ್ಪವಾಗಿಟ್ಟ ಬಾಳು ಮುಗಿದ ಮನೆಯಂತ ಕಣ್ಣು.
ಬೇಸರವಾಗುತ್ತದೆ
ಗೋಡೆ ಹಾರಲಾಗದ ಅಸಹಾಯಕತೆಗೆ.
ಹಾರಬಾರದೆಂಬ ಗತಿಗೆಟ್ಟ ನೈತಿಕತೆಗೆ
ಹಾರಿದರೆ?! ಎಂಬ ಹುಡುಗು ಸಾಹಸಕ್ಕೆ
ಹಾರದೇ ಉಳಿದ ಬೇಸರಕ್ಕೆ.
ಬೇಸರವಾಗುತ್ತದೆ.
ಚೋಟುದ್ದ ಗೋಡೆಯನು ಹಾರದೇ ಉಳಿದ ಬೇಸರಕೆ.
–ಮೌಲ್ಯ ಸ್ವಾಮಿ
ಲೆಕ್ಕಾಚಾರ
ಬೆಳ್ಳಂಬೆಳಗ್ಗೆ ಬಗ್ಗಿ ಬಗ್ಗಿ
ಬೀದಿಗುಂಟ ಹೆಂಗಳೆಯರ ನೋಟ
ಫ್ರೆಶ್ ಆದ ಹೂ ಮಾಲೆ
ಮನೆ ಮುಂದೆ ಸುಳಿದಾವೆ
ಕೂತಲ್ಲೇ ಖರೀದಿಸಲು
ಮಾರುವವರ ನಿರೀಕ್ಷೆ.
ಸೇವಂತಿಗೆ, ಮಲ್ಲಿಗೆ, ಜಾಜಿ, ಕಾಕಡಾ
ದೂರದಲ್ಲಿ ಆಗಾಗ ಕೂಗುವ ಕೂಗಿಗೆ
ಕಿವಿಯಾಲಿಸಿ ಒಂದಷ್ಟು
ಮಾಡುವ ಕೆಲಸ ಬದಿಗೊತ್ತಿ
ಬರೀ ಚಿಲ್ಲರೆ ಕಾಸೇ ಇರಲಿ
ಸಾಕು ಇನ್ನೆಷ್ಟು ಬೇಕು
ನೋಟಿಗೆ ಕೊಟ್ಟಾನೇ ಚಿಲ್ಲರೆ
ನಂಬಿಕೆ ಢಮಾರ್!
“ಎಷ್ಟಣ್ಣಾ ಸೇವಂತಿಗೆ, ಗುಲಾಬಿ, ಮಲ್ಲೆ”
ತಂದವ ಕರಗಿಬಿಡಬೇಕು
“ಮೊಳಾ ಹತ್ತು, ಮಾರೈವತ್ತು ಕಣಕ್ಕೋ
ಮಲ್ಲಿಗೆ ಮಗುವಿನ ನಗುವಾಂಗೈತೆ”
ಕವಿಯ ಮಾತಿನಲಿ
ಹೂವ ವರ್ಣನೆಯ ತಂತು ಬಿಟ್ಟಾ
ಕಿಂಚಿತ್ತು ಕಾಸು ದಕ್ಕೀತೆಂಬ ಆಸೆ
ಒಳಗೊಳಗೇ ಸಂಭ್ರಮಿಸುತ್ತಾ…
“ತತ್ತಾ ಎರಡು ರೂ.ಕಡಿಮೆ ಮಾಡು”
ಮೊಣಕೈ ಉದ್ದಕ್ಕೆ ಚೌಕಾಶಿ
ಮಹಡಿ ಮನೆಯ ಖರೀದಿ ಜೋರು
ಉದಾರವಾಗಿ ಕೊಳ್ಳುವರೆಂಬ
ಲೆಕ್ಕಾಚಾರ ತಲೆ ಕೆಳಗು
ಬೀದಿ ಸುತ್ತಿ ಸವೆದು ಬೆಂಡಾದ
ಮನಕದೆಷ್ಟು ಖೇದವೋ!
ಕೊಂಬವರ ಕಂಜೂಸುತನ
ಎಂದು ಬಿಟ್ಟಾತು?
ಗುಡಿಗೋಪುರಕೆ ಶರಣೆನ್ನುತ
ಜಣ ಜಣ ಕಾಂಚಾಣ ತೇದು
ಬಂದಿಲ್ಲಿ ಉಳಿಸುವ ಧಾವಂತ
ಬೆವರಿಳಿಸುವವನಿಗಿಂತ
ಕುಂತ ಶಿಲೆಯಮೇಲುಧಾರತೆ
ಯಾಕೀ ಜಿಪುಣತನ?
ಸಂಜೆಗತ್ತಲವರೆಗೆ ಸುತ್ತಿ ಸುತ್ತಿ
ನಡೆವ ದಾರಿ ಸವೆತವದೆಷ್ಟೋ
ಅಡಿಗಡಿಗೆ ಮನ ಕರುಣೆಯಲಿ
ತನ್ನಷ್ಟಕ್ಕೆ ಕಮರುವುದು
ನಿರಾಳವಿಲ್ಲದವರ ಬದುಕ ಕಂಡು
ಇವರಿಗಿಂತ ತಿಂದು ತೇಗುವವರಿಗೇ
ಹೆಚ್ಚು ಉಳಿಸುವಾಂಛೆ!
ತಳ್ಳು ಕೈಗಾಡಿ
ತಳ್ಳುತಳ್ಳುತ್ತ ಬರುವ
ಮನೆಯಂಗಳದ ಮುಂದೆ
ತರಕಾರಿ, ಹಣ್ಣು, ಹೂ ಘಮಲು
ಎದೆ ತಾಕುವುದಿಲ್ಲವೇ ಇವರಿಗೆ
ಎರಡೆಚ್ಚು ಕಾಸು ಕೊಟ್ಟು ಕೊಂಡು
ಅವರೂ ನಮ್ಮಂತೆ ;
ಜೀವ ತೇದು ಬದುಕುವ ಜೀವ
ಪಾಪ! ಬದುಕಲೆಂಬ ಅನುಕಂಪ?
ಇರುಳು ಮನೆ ಸೇರಿ
ನಿತ್ರಾಣದಲಿ ಎಣಿಸಿ ಕಾಸು
ಲೆಕ್ಕ ಹಾಕಲದೆಷ್ಟು
ಲಾಭವೋ ನಷ್ಟವೋ
ಯಾರಿಗ್ಗೊತ್ತು ಸ್ವಲ್ಪ ಯೋಚಿಸಿ
ಬದುಕ ಬವಣೆಯ ಮಂದಿಗೆ
ತೋರಿ ಕೊಂಚ ಉದಾರತೆ ನೀವು.
ಪೇಟೆ ಮಹಲು ತಿರುಗಿ
ಐಷಾರಾಮಿ ಜೀವನಕೀವೆ
ಸಾವಿರಾರು ದೊಡ್ಡ ನೋಟು
ಹುಂಡಿಗಾಕುವದಕ್ಕಂತೂ ಲೆಕ್ಕವಿಲ್ಲ
ನಿಯತ್ತಿನ ದುಡಿತದವರ ಮುಂದೆ
ಓ ಮನುಜಾ
ಸದಾ ಹಾಕುವೆಯೇಕೆ
ಲೆಕ್ಕ ಲೆಕ್ಕ ಲೆಕ್ಕ…??
-ಗೀತಾ ಜಿ.ಹೆಗಡೆ, ಕಲ್ಮನೆ.
ಗಜಲ್
ನೀನೆಂದಿಗೂ ನನ್ನವಳೆಂದು ಈ ಹೃದಯದ ಮೇಲೆ ಬರೆದಾಗಿದೆ ಓ ನಲ್ಲೆ |
ಆ ಖುಧಾ ನಮ್ಮಿಬ್ಬರ ಹೃದಯಗಳ ಬೆಸೆದಾಗಿದೆ ಓ ನಲ್ಲೆ ||
ನೀನಿಲ್ಲದೆ ಈ ಬದುಕು ಕ್ಷಣಮಾತ್ರವು ಸಾಗದು ಎಂದೂ |
ನನ್ನಂತರಂಗದ ಪ್ರತಿ ಮಿಡಿತವು ನೀನಾಗಿರುವೆ ಓ ನಲ್ಲೆ ||
ನೀನಿಲ್ಲದೆ ಗಳಿಗೆಯೂ ನರಕದಂತೆ ಬಾದಿಸುವುದು ಖಂಡಿತವಾಗಿ |
ಜೊತೆಯಲ್ಲಿ ಬದುಕುವ ಸುಂದರ ಕನಸು ಮರೆತಿರುವೆಯಾ ಓ ನಲ್ಲೆ ||
ಅದೆಷ್ಟು ಶರಾಬು ಹೀರಿದರೂ ಕರಗದು ನಿನ್ನ ನಿಶೆ ಎಂದೂ |
ಬಾನ ಚಂದಿರನ ಮೊಗದಲ್ಲಿ ನೀ ಕಾಣದಾಗಿರುವೆ ಓ ನಲ್ಲೆ ||
ಬದುಕಿನ ಬಣ್ಣಗಳು ಕಳೆಗುಂದುತ್ತಿವೆ ನಿನ್ನ ಹಾಜರಿ ಇಲ್ಲದೆ |
ವ್ಹಿಸಿಯ ಮನದೊಳಗೆ ಹೊಸ ಚೈತ್ರಮಾಸ ನೀನಾಗಲಾರೆಯಾ ಓ ನಲ್ಲೆ ||
-ವೆಂಕಟೇಶ ಚಾಗಿ
ನೀನು
ನನ್ನ ಬದುಕನ್ನು ನೋವಿನಲ್ಲಿ ನೇಯ್ದವ ನೀ
ಎಳೆ ಮನಸ್ಸಲ್ಲಿ ಹಸಿ ಕನಸನ್ನು ತುಂಬಿ
ಎಲ್ಲವನ್ನು ಹುಸಿಯಾಗಿಸಿ
ನೋವಿನೆಳಿಯಿಂದ ಬದುಕನ್ನು ಹೆಣೆದವ ನೀ
ನಿನ್ನನ್ನು ದೂರುವುದಿಲ್ಲ ಗೆಳೆಯಾ
ನನ್ನ ಬಳಿ ಬರಬೇಡ
ನಾ ಬೆಂಕಿ ಅಂದೆ ನೀ
ಬೆಂಕಿಯಲ್ಲಿ ಬೆಚ್ಚಗಾಗಲು ಬಂದು ಹೃದಯ ಸುಟ್ಟಿಕೊಂಡವಳು ನಾನು!
*****
ನಲ್ಲ
ಇವತ್ತು ಬರೀ ಗಾಜಿನ ಬಳೆ ಧರಿಸಿರುವೆ
ನೀ ನನ್ನ ಚಿನ್ನ, ನನಗೇಕೆ ಚಿನ್ನದ ಬಳೆ
ನನ್ನನ್ನು ನೀ ಬಲವಾಗಿ ಅಪ್ಪಿದಾಗ
ಅದೆಲ್ಲ ಒಡೆದು ಪುಡಿ ಪುಡಿಯಾಗಲಿ
ನಮ್ಮ ಮಿಲನದ ಸದ್ದು ಯಾರಿಗೂ ಕೇಳದಾಗಲಿ!
*****
ವಿದ್ಯಾರ್ಥಿ
ಕಲಿಯಲು ಬಂದೆ ಜ್ಞಾನದೇಗುಲಕ್ಕೆ
ಕಲಿಸುವುದು ಯಾರಿಗೂ ಬೇಕಿರಲಿಲ್ಲ
ಕಲಿಯುವುದೂ ಸಹ
ತುರುಕಬೇಕಿತ್ತು ನಮ್ಮ ತಲೆಯಲ್ಲಿ
ನಮ್ಮ ತಲೆಯಲ್ಲಿ
ಅಂಕಿ ಅಂಶಗಳನ್ನು,
ಹಣ ಗಳಿಸುವ ವಿಧಾನಗಳನ್ನು,
ಜಗತ್ತಿನಲ್ಲಿ ಬದುಕುವ ಪರಿಯನ್ನು!
ತಪ್ಪೇನಿಲ್ಲ, ಇದು ಸಹ ಮುಖ್ಯವೇ
ತಿನ್ನಲಾದೀತೇ ಭಾವನೆಗಳನ್ನು,
ನವಿರಾದ ಪದಗಳನ್ನು ?
*****
ಜಿಯೋ
ಜಿಯೋ ಬಂತು ಜಿಯೋ
ಎಲ್ಲ ಮುಫತ್ತು ಓಹೋ!
ಮುಖ ಪುಟವೇ?
ತೆರೆದು ನೋಡಬೇಡ
ಅಲ್ಲೇ ಮನೆ ಮಾಡು
ತೆರೆಬೇಕಿಲ್ಲ ಬಾಡಿಗೆ
ನೋಡಿಕೊಳ್ಳುವುದು ಜಿಯೋ !
ಕೊಳ್ಳಬೇಕೆ ಏನಾದರು ?
ಚಿ0ತೆಯಿಲ್ಲದೆ ಹುಡುಕು
ಬೇಡ ನಿನಗೆ ಸಮಯದ ತೊಡಕು
ಬಾಳು ನೀನು ಜಿಯೋ ಬದುಕು!
ಮಾತಾಡು ಮನಬಂದಷ್ಟು
ಸಂದೇಶ ಕಳಿಸು ಬೇಕಾದಷ್ಟು
ಇರದಿರಲಿ ನಿನಗೆ ಖರ್ಚಿನ ಚಿಂತೆ
ಜಿಯೋ ಇದೆಯೆಲ್ಲ ನಿನ್ನ ಗೆಳೆಯನಂತೆ
-ಸಹನಾ ಪ್ರಸಾದ್