ಕಾವ್ಯಧಾರೆ

ಪಂಜು ಕಾವ್ಯಧಾರೆ

ಎನಿತು ಇನಿದು…

ಎನಿತು ಇನಿದು
ಅಕ್ಷಿನೋಟ;
ಇಕ್ಷು ಮಧು!
ಸ್ಪರ್ಶಿಸಿದ ರೇಶಿಮೆ ಮೈ ಎಷ್ಟು ಮೆದು!!

ಮಧುರ ದನಿ
ಅಧರ ಗಿಣಿ
ಬರುವವೀ ಜಾತಿ ಧರ್ಮ; ಘನಪದರು ಎದುರ
ದಾಟಬೇಕು ಸೀಳಿ; ಕೊಡದೆ ಸದರ

ಏಕೆ?
ಅಂಜುವೆ; ಎದೆಗುಂದುವೆ
ಬಂದಿಹ ನಾ ವ್ಯಾಧನೆ?
ನಾ; ಕಾಯುವ ಯೋಧ!

ನಾವು ಆವು
ಜೊತೆಗಿಹರು ಹಾವು
ನಿತ್ಯ ಕಾಣುವುದು ಸಾವು-ನೋವು
ಈ ಬಾಳೇ; ಸಿಹಿ-ಕಹಿ-ಬೇವು!

-ಅಯ್ಯಪ್ಪಕಂಬಾರ

 

 

 

 


ಕೇಳು ನನ್ನೊಲವೇ …!

ಒಲವೇ – ! ನೀನೇಕೆ ಇಂದು
ಮನದಲಿ ಕತ್ತಲ ತುಂಬಿ
ನೋವಿನಲೆಗಳ ಮೇಲೆ
ಬಾಳ ದೋಣಿಯ ತೇಲಿಸಿ
ತೊರೆದು ಹೋಗಿರುವೆ ?

ಕ್ಷಣ ಕ್ಷಣವೂ ನಿನ್ನ ನೆನಪಿನಲಿ
ಮುಳುಗಿ ಮನ ತುಡಿಯುತಿಹುದು
ಪ್ರೀತಿ ಬುತ್ತಿಯ ಸವಿಯನದು
ಮೆಲುಕು ಹಾಕುತಿಹುದು

ಬೇಸತ್ತ ಜೀವವಿಂದು ನರಳಿದೆ
ವಿರಹದಾ ಬೇಗುದಿಯಲಿ
ರೋದಿಸಿದೆ ನಿನ್ನ ಜಪಿಸುತ
ಚಿಂತೆಯೆಂಬ ಚಿತೆಯಲಿ

ಒಡಲಾಳದ ತಾಪದಲಿ
ಬೆಂದು ನೊಂದಿದೆ ಈ ತನುವು
ಚಿಂತಾಜನಕ ಸ್ಥಿತಿಗೆ ಎನ್ನ
ತಳ್ಳಿದೆ ನಿನ್ನಗಲಿಕೆಯು

ಮರಳಿ ಚೇತರಿಸಿ ನಾ
ಕಾಯುತಿಹೆ ಚಾತಕಪಕ್ಷಿಯಾಗಿ
ಮರಿಚೀಕೆಯಾಗದೆ ನೀ
ನನ್ನೆಡೆಗೆ ಬರುವೆಯೆಂದು
ಒಲವ ವರ್ಷಧಾರೆಯಲಿ
ಹೃದಯ ಸೇರುವೆಯೆಂದು …

ಆದಿತ್ಯಾ ಮೈಸೂರು

 

 

 

 


ಬಿಟ್ಟು ಬಿಡು

ಎಕ್ಕಡದ ಪಾದ ಮುಳ್ಳ ಸರಿಸಿ ನಡೆಯುತಿದೆ
ಸಾಲಿಗನ ಮುಖ ತಪ್ಪಿಸಿ
ಓಡುವ ಕಳ್ಳ ಕಣ್ಣಂತೆ
ಹರಿದ ನೀರದು ಮುಂದಿನ ಹೊಲದ
ಪಾಲು
ಉಳಿದ ಆರ್ದ್ರತೆ ಮಾತ್ರ ನಿನ್ನದು
ಕಣ್ಣು ಕವಡೆ ಹಾಕಿ ಹಾಕಿ
ಲೆಕ್ಕ
ತಪ್ಪುತಿದೆ
ಅಕ್ಷರಗಳ ಬರೆ ಬರೆದು ಅಳಿಸೋ ಮಗುವಿನಂತೆ!
ನೆನಪುಗಳ ಚಾದರ ಹೊದ್ದ ಮನಸು
ಹಳೆಯ ಹಾಡ ಹಾಡುತ್ತಾ ಸಾಗುತಿದೆ;ಹಳೇ ಸಿನಿಮಾದ ನಾಯಕ
ಸೂರ್ಯ ಮುಳುಗೋ ದಿಕ್ಕಿಗೆ ಹೋದಂತೆ.
ಕನಸುಗಳ ಮೂಟೆ
ಹೆಗಲಲಿದೆ
ಬಿಟ್ಟುಬಿಡು
ಬಯಲಿಗೆ ಆಯ್ದುಕೊಳ್ಳಲಿ ಕಂಡವರು,
ಕನಸಿಲ್ಲದ ಕಣ್ಣಿನವರು,
ನಾಳೆಗಳಲಿ ದಿಟ್ಟಿಯಿಟ್ಟು ಬದುಕುವವರು!
ಬಿಟ್ಟುಬಿಡು ನಿನ್ನದೇನಿದೆ ಎಲ್ಲವನು
ಕಾದಿದೆ
ನಿನಗೆ ಅವರಿವರಿಗೆ ದಕ್ಕದ್ದು
ಪೂರ್ವಜರು ಕಾಣದ್ದು
ನಿನ್ನದೇನೂ ಇಲ್ಲ ಬಿಟ್ಟುಬಿಡು!

****
ನಾನು ನಿಮ್ಮವನಲ್ಲ

ಹಣೆಯಲಿ ಬಣ್ಣದ ಗುರುತು, ಕೊರಳ ದಾರ
ಎದೆಯ ಪದಕ ಒಂದೂ ಇಲ್ಲ
ನಡೆಯುತ್ತಿದ್ದೇನೆ ನಾಳೆಯ ಕಡೆಗೆ
ಕೈಯಲ್ಲಿಷ್ಟು ಬೀಜಗಳ ಹಿಡಿದು
ಹದ ನೆಲ ಸಿಕ್ಕರೆ ಬಿತ್ತಿ ಮುಗಿಲಿಗೆ ಮುಖ ಮಾಡಲೆಂದು…ಕ್ಷಮಿಸಿ ನಾನು ನಿಮ್ಮವನಲ್ಲ!
ತಲೆಯ ಮೇಲೆ ಟೋಪಿ
ನೆತ್ತಿ ಸಮೀಪ ಕಪ್ಪು ಚುಕ್ಕೆ
ಮೈ ತುಂಬ ಅತ್ತರು ಇಲ್ಲ
ನಡೆಯುತ್ತಿದ್ದೇನೆ ಕನಸುಗಳ ಮೂಟೆ ಹೊತ್ತು
ಎದೆ ತುಂಬಾ ಹನಿವ ಹಯನಿದೆ
ಯಾರು ಸಿಕ್ಕರೂ ಹನಿಸಿ ಸಾಗುವೆ..ಬಿಡಿ ನಾನು
ನಿಮ್ಮವನಲ್ಲ!
ಕೊರಳು ನೋಡಿ ಫಲಕವಿಲ್ಲ
ಎಡದಿ ಬಲಕೆ,ಹಣೆಯಿಂದ ಎದೆಗೆ ಕೈ
ಮುಟ್ಟಿ ಬರುವ ಸನ್ನೆಯಿಲ್ಲ
ಬರಿದೆ ಪಯಣ ಹಜ್ಜೆಗಳ ಜೊತೆ ಮುಂದೆ
ಸಿಕ್ಕಾರು ನಾಲ್ಕು ಜನ
ಮನುಷ್ಯರೆನಿಕೊಂಡಾರೆಂದು; ಮನ
ಬುದ್ಧ,ಬಸವ,ಬಾಪು- ಗಳ ಹೊತ್ತಿಲ್ಲ..ಇಸ
ವಿರದ ಹಣ್ಣ ಹುಡುಕುತ್ತಾ ನಡೆದೆ..ನಾನು ನಿಮ್ಮವನಲ್ಲ
ನಿಮ್ಮ ಕಣ್ಣಿಗೆ ನಾನು ಎಲ್ಲ
ಆಗಬಲ್ಲೆ; ಮನಜನೆನಿಸುವ ಕುರುಹು ನನ್ನಲಿ
ಇಲ್ಲವೆಂದೇ
ಚಿಹ್ನೆಗಳ ಸ್ಕೇಲು,ಟೇಪು ಹಿಡಿದಿದ್ದೀರಿ..ಆದರೆ
ನಾನು ನಿಮ್ಮವನಲ್ಲ!
***
ಬಂದು ಬಿಡು ಮಾಯಿ

ಎದಿ ಜೇನ ಬಾಯೊಳಿಟ್ಟು ಇದೋ
ಮಡಿಲ ಜೋಲಿಯೊಳಿದ್ದ ಕೂಸು
ಕಾಣುತಿಲ್ಲ, ಕಂಡಿರೇ?
ಎದಿ ಬಸಿದು ರಕುತ ಬೆವರ ಮಾಡಿ ನಿಲ್ಲಿಸಿದ
ಗ್ವಾಡಿಗಳೆಂಬ ಗುಡಿಸಲ ಮಹಲು
ಈಗಿತ್ತು,ಈಗಿಲ್ಲ…ಕಂಡಿರೇ?
ಹಡೆದ ಹೊಟ್ಟೆ, ಎತ್ತರದ ಹೆಗಲು- ಗಳ ಕೂಡೆ
ಖೋಲಿಯಲ್ಲಿ ಮಲಗಿದ್ದೆ
ಕಣ್ಣು ಬಿಟ್ಟರೆ ಮಾಯ?… ಕಂಡಿರೇ?
ಉಟ್ಟ ಅರಿಬೆ ಉಳಿದು
ಎತ್ತಿಟ್ಟಿದ್ದೆಲ್ಲವೂ ಎತ್ತಲೋ ಸಂತನಂತೆ,
ನೆರಳಂತೆ ಸರಿದು ಹೋಗಿ
ಬಯಲ ಬೈರಾಗಿ ಬಾಳುವೆ ಕಣ್ಮುಂದೆ… ಕಂಡಿರೇ?
ಜವರಾಯ ಬರುವಾಗ ಬರಿಗೈಲಿ
ಬರ,
ಯಪ್ಪಾ…ಒಳ್ಳೊಳ್ಳೆ ಗಿಡನ ಕಡಿ ಬಂದ
ಕಡಿದಾರ ಕಡಿಲೇಳು
ಉಡುದಾರದಷ್ಟು ಉದಾರತೆಯೂ ಇರದಾಯ್ತೆ
ಈ ಮಳಿ ಮಾಯಾವಿಗೆ?
ಎದಿಗಿಳಿದ ಹಾಡು
ತುಟಿಗೆ ತರುವನಕ
ಕೊಳ್ಳ ಕೊಯ್ದು ಬಿಸಡುವಂತೆ ಮನ ಮನೆ
ಅದೆಲ್ಲಿಗೋ ಒಯ್ದೋ…..
ಮಳಿಗಿಷ್ಟು…. ಬೆಂಕಿ ಬೀಳ!
ಒಲವ ಹಾತೊರೆದ ಮನಕೆ ಮೈಮೇಲೆ ಬೀಳ್ವ ಖೂಳವ್ಯಾಘ್ರ ಅರ್ಬುತವೀ ವರ್ಷ- ಉರುಳು!
ಮಾಯಿ, ಎಲ್ಲಿ ಹ್ವಾದಿ?
ಹೆಪ್ಪುಗಟ್ಟಿದ ಕನಸ ಮಂದಿರ ಗೋರಿಯೂ ಆಗದೇ
ಹರಿದ ಹೋತು, ಸರಿದು ಹೋತು
ನಾಳೆಗಳ ನಾಲೆಗೆ ನೀರುಣಿಸೋ ಮುನ್ನ
ಕಣ್ಣ ಒಡ್ಡು ಒಡೆದೈತಬೆ
ಸಾಲು ಸಾಲು ಹೆಣ
ನೀರಲ್ಲಿ ತೇಲಿದ್ದು ಅಲ್ಲ ; ಹಿಡಿ ಕೂಳು, ಆಸು ರೊಟ್ಟಿ, ಈಸು ನೀರಿಗೆ
ಸರದಿ ಸಾಲಿನ್ಯಾಗ ನಿಂತ ಜೀವದ ಸಾವು
ಮಳಿನೇ ಸತ್ತಂತೆನಿಸಿದೆ.
ಮಾಯಿ…ಬಾ..ಮಳಿ ಹ್ವಾದರೂ, ಬಂದರೂ
ಎದಿಗಪ್ಪಿ
ಎದಿಹಾಲ ಎರಿಯಲಾದರೂ ಬಾ
ಕವಿದ ಮೋಡ
ಕಳಚೋದೆಂದೋ,
ಬಂದ ಬಿಡ ಒಂದಾಗೇ ಹೋಗೂಣು
ಮಳಿಗೂ ಈಟ ಸಮಾಧಾನ ಆಗಲಿ ಮಾಯಿ…
ಬಾ…ಬಾ..ಬಾ!

ಸಂತೆಬೆನ್ನೂರು ಫೈಜ್ನಟ್ರಾಜ್

 

 

 

 

 


ಇದು ಉಳುವವನ ಭೂಮಿ…

ಪಾಲಿಸಿದರು, ಪೋಷಿಸಿದರು
ದೂರಿದರು, ದೂಷಿಸಿದರು
ಹಂಬಲಿಸಿದರು, ಹಾರೈಸಿದರು
ಬೆಳೆದರು, ಕಳೆ ಇದ್ದರು
ಕಿತ್ತೆಸೆದರು, ಬರಸೆಳೆದರು
ನೀರೆರೆದರು, ಸುಮ್ಮನಿದ್ದರು
ಹೇಗೆ ನಡೆಸಿಕೊಂಡರೂ
ನಾ ಸ್ಥಾವರ

ಈ ಎದೆಯ ಒಲವ
ಕೊಳ್ಳೆ ಹೊಡೆಯಲಾಗದು
ಪ್ರೇಮದೊರತೆಯ ಇಂಗಿಸಲಾಗದು
ಪ್ರೀತಿಯ ನಿಕ್ಷೇಪವ ಭೇಧಿಸಲಾಗದು
ಪಾಳು ಬೀಳಿಸಿ ಬಂಜಾರಾಗಿಸಲಾಗದು

ಇದು ಉಳುವವನ ಭೂಮಿ
ಇಲ್ಲಿ ಬೆಳೆದವನದೇ ಬೆಳೆ ಸ್ವಾಮಿ

ಗೆದ್ದೆನೆಂಬ ಗರ್ವವ
ಸೋತನೆಂಬ ವಿಷಾದವ
ಸಿಗಲೇಬೇಕೆನ್ನುವ ದುರಾಸೆಯ
ಕೈತಪ್ಪಿತೆನ್ನುವ ನಿರಾಸೆಯ
ಸಿಗದೇ ಹೋಗಲೆನ್ನುವ ಶಾಪವ
ತಣ್ಣಗಿರಲೆಂಬ ಹಾರೈಕೆಯ
ನನ್ನದಲ್ಲವೆನ್ನುವ ಅತೃಪ್ತಿಯ
ನನ್ನದೇ ಎನ್ನುವ ಸಂತೃಪ್ತಿಯ

ಈ ಎಲ್ಲ ರೂಪಕ್ಕೂ ನಾ
ಜೋಳಿಗೆ ಕಟ್ಟಿದ್ದೇನೆ
ಜೋಗುಳ ಹಾಡಿದ್ದೇನೆ
ಹುಬ್ಬು ತೀಡಿ ಬಾಚಿ ತಬ್ಬಿದ್ದೇನೆ

ನೀವು ನೀಡಿದ ಕೂಸುಗಳ
ನಿಮಗೇ ಕೊಟ್ಟಿದ್ದೇನೆ
ಮತ್ತೆ ಖಾಲಿಯಾಗಿ
ಮಳೆರಾಯನ ಕರೆದಿದ್ದೇನೆ
ಮತ್ತೆ ಹಸಿರಾಗಿ
ಮೈದಳೆಯುತ್ತೇನೆ
-ರಾಜೇಶ್ವರಿ. ಎನ್

 

 

 

 


 

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಪಂಜು ಕಾವ್ಯಧಾರೆ

Leave a Reply

Your email address will not be published. Required fields are marked *