ಗಜಲ್
ಕೊನೆಯುಸಿರವರೆಗೂ ನಿನ್ನದೇ ಹಾಡು ಹಾಡಬೇಕೆಂದಿರುವೆ ಮುಗಿಸಿಬಿಡು ಈ ಜಗದ ಲೆಕ್ಕ
ನೆನ್ನೆಗೇ ವಿದಾಯ ಹೇಳಿ ನನ್ನೆಲ್ಲ ತಪ್ಪುಗಳ ಚೀಟಿ ಬರೆದಿಟ್ಟಿರುವೆ ಮುಗಿಸಿಬಿಡು ಈ ಜಗದ ಲೆಕ್ಕ
ಪ್ರೀತಿಯ ಯುಗಾದಿ ಮೊಹರಂಗಳು ಈ ಜಗತ್ತಿನಲಿ ಎಲ್ಲಿಯವರೆಗೆ ಒಂದಾಗಲಾರವೋ ಸಾವು
ಮೆರೆಯುವುದು ಗಲ್ಲಿಯಲಿ ಸದ್ದಿಲ್ಲದಂತೆ ಬೇವು ಬೆಲ್ಲ ಕೊಟ್ಟಿರುವೆ ಮುಗಿಸಿಬಿಡು ಈ ಜಗದ ಲೆಕ್ಕ
ಅಪ್ಪ ಕಣ್ಣು ಅಮ್ಮ ಹೃದಯ ರಕ್ತ ಚರಿತ್ರೆಯಲಿ ದಾಖಲಾಗಿ ಕಣ್ಣೀರಿಗೆ ಬದಲು ರಕ್ತ ಸೋರಿಹುದು
ಅಟ್ಟಹಾಸದ ಬೆಂಕಿಗೆ ಆಹುತಿಯಾದ ಆತ್ಮಗಳ ಕ್ಷೇಮ ಕೋರಿರುವೆ ಮುಗಿಸಿಬಿಡು ಈ ಜಗದ ಲೆಕ್ಕ
ಬಣ್ಣಗಳಲಿ ಕೆಂಪು ಬಣ್ಣ ಇಷ್ಟಪಡುವ ಜನಕೆ ಹೃದಯವೊಂದು ಮಾಂಸವೇ ಹೊರತು ಬೇರೇನೂ
ಅಲ್ಲ ಸಾಲು ಶವಗಳ ಕಂಡ ಮೇಲೆ ಎದೆಯನೊಮ್ಮೆ ಮುಟ್ಟಿಕೊಂಡಿರುವೆ ಮುಗಿಸಿಬಿಡು ಈ ಜಗದ ಲೆಕ್ಕ
ಯಾರಿಗೂ ಯಾವುದರದೂ ಭಯ ಇಲ್ಲ ಇಲ್ಲಿ ಅಂದಮೇಲೆ ಎಷ್ಟು ಬರೆದರೂ ಕೊರೆದರೂ ಮಾತುಗಳು
“ಜಾಲಿ” ಗೆ ಖಾಲಿಹಾಳೆ ಕಂಡರೂ ಭಯ ಬರೆಯುವೆ ಏನೆಂಬ ಪ್ರಶ್ನೆಗೆ ಹೆದರಿರುವೆ ಮುಗಿಸಿಬಿಡು ಈ ಜಗದ ಲೆಕ್ಕ
-ವೇಣು ಜಾಲಿಬೆಂಚಿ
ಗಝಲ್
ನಮ್ಮ ನಡುವಿನ ಸವಿ ಬಂಧವೇ ಕಳಚಿ ಬಿದ್ದಿದೆ ಬೇಸರವಿಲ್ಲ ಬಿಡು
ಬೃಹನ್ನಾಟಕದ ಅಂಕ ಪರದೆ ಸರಿದು ನಿಂತಿದೆ ಬೇಸರವಿಲ್ಲ ಬಿಡು
ಮಾತೆಲ್ಲ ಮುತ್ತಾಗಿ ಚಮಕಿಸದ ಮೇಲೆ ಜೇನು ಬೆರೆಸಿದರೇನು
ಎದೆಗಾಯವಿಲ್ಲಿ ಒಣಗೊಣಗಿ ನಗುತಿದೆ ಬೇಸರವಿಲ್ಲ ಬಿಡು
ಆದರಿಸದ ಮೇಲೆ ಸುಮ್ಮನೆ ಆಪ್ತವಾಗುವ ನಟನೆ ಏಕೆ
ಅಪಮಾನದ ಹಸಿ ಇನ್ನೂ ಒಸರುತ್ತಿದೆ ಬೇಸರವಿಲ್ಲ ಬಿಡು
ಗೆದ್ದವರ ಒಣಜಂಬಕ್ಕಷ್ಟೇ ಜಗತ್ತಿನೆಲ್ಲೆಡೆ ಮನ್ನಣೆಯಲ್ಲವೇ
ಜಗಮಗಿಸಿದ ಬದುಕಿಗೆ ಮಸಿ ಬಳಿದೆ ಬೇಸರವಿಲ್ಲ ಬಿಡು
ಎತ್ತಣ ಕಡಲ ಮೊರೆತ ಎತ್ತಣ ಪ್ರಶಾಂತ ಪೌರ್ಣಮಿ ನೋಡು
ಅವಮಾನಿಸಿ ಅಮಾನತ್ತಿನ ಗೆರೆ ಎಳೆದೆ ಬೇಸರವಿಲ್ಲ ಬಿಡು
ಆಡಿದ ಮಾತಿಗೆಲ್ಲ ಕಿಸುರಂಟಿಸುವುದಾದರೆ ನೂರೆಂಟು ಸಿಗದೇ
ಹಗೆತನಕೆ ನೆವವೇಕೆ, ಎಲ್ಲ ನಿಚ್ಚಳವಾಗಿದೆ ಬೇಸರವಿಲ್ಲ ಬಿಡು
ಬಾಡಿದ ಮೇಲೆ ಹೂವು ಮತ್ತೆ ಅರಳುವುದೇ ಹೇಳು “ಸುಜೂ”
ಗಿಲೀಟಿನ ಬಾಂಧವ್ಯ ಬಿಳಿಚಿ ಗಹಗಹಿಸುತಿದೆ ಬೇಸರವಿಲ್ಲ ಬಿಡು
ಸುಜಾತಾ ಲಕ್ಮನೆ
ನೆಮ್ಮದಿಯ ಬೆಳಕು
ಬದುಕದಿರಿ ಪಾಪಿಗಳಾಗಿ ಬದುಕಿ ದೀಪಗಳಾಗಿ
ತಿಮಿರ ಆವರಿಸಿದ ಪ್ರಸ್ತುತ ಬದುಕಿಗೆ
ಅಲ್ಪವಿರಾಮವಿಟ್ಟು ನಡೆಯಿರಿ, ಬಾಲ್ಯದ ಬೆಳಕಿನೆಡೆಗೆ!
ಗುಡಿಯಂತಿತ್ತು ಬಾಲ್ಯ, ಪ್ರೌಡತೆ ರಾಜ್ಯ ದೇಶಗಳ ಗಡಿಯಂತಾಗಿ,
ಮುಖಮುಚ್ಚಿಕೊಂಡಿದೆ ಸಾಲು ದೀಪಗಳೆದುರು
ಮಾನ ಬೀದಿಪಾಲಾಗದಿರಲೆಂದು!
ಅಂಬೆಗಾಲಿಡುವಾಗ, ನೆಮ್ಮದಿಯ ಬೆಳಕು ನೆತ್ತರಾಗಿ
ಹರೀತಿತ್ತು ನರನಾಡಿಯಲಿ, ಇಂದು,
ಚಿಂತೆಗೆ ಚಿತೆ ಏರಿ ಜವಾಬ್ದಾರಿ ಜೊತೆ ಸೆಣಸುವ ಅಬಲ ಜಟ್ಟಿ ನಾವು!
ಭವಿಷ್ಯ ಭಜಿಸುತ್ತ ದೀಪ ಹಚ್ಚಿಟ್ಟು
ನೆಮ್ಮದಿಯ ನಿಟ್ಟುಸಿರು ಬಿಡಲಾಗದೆ, ಉಲಿವ ಕಾಲ
ಗೆಜ್ಜೆಗೆ ಬೆದರಿ ಕೈಕಟ್ಟಿ ನಿಂತುಬಿಟ್ಟಿದೆ ಬದುಕು!
ಸಾಲುದೀಪಗಳು ಬಾಗಿ ಕಾಲು ಹಿಡಿದತ್ತರೂ ನಿಲ್ಲುತಿಲ್ಲ
ಕಾಮದಿ ಹೆಣ್ಣುದೀಪವ ಹರಿದುಣ್ಣುವ ದುರುಳರ ಕ್ರೂರತನ!
ಜಗ ನೈಜತೆ ಬೆತ್ತಲಿಸಿ ಬೀಗಿದ ದೀಪಗಳ ನಗು,
ಮನಮೂಲೆಯ ಅಂಧಕಾರ ಭೇದಿಸಲಾಗದೆ ಸೋತು
ಆರುತ್ತಲೇ…ಇವೆ, ಗುರಿಮುಟ್ಟದ ನಿರಾಸೆಯಲ್ಲಿ!
ಬೆಸೆಯೇ ಬೆಳಕೇ ಬಿರಿದ ಬಾಂಧವ್ಯದ ಕೊಂಡಿ,
ತೆರೆಯೇ ಬೆಳಕೇ ಅಧಮರೊಳ ತಮವ ಓಡಿಸಲು ಕಿಂಡಿ
ನಗುತ್ತಲೇ ತಿದ್ದೇ ಬೆಳಕೇ ವಿರಸದಿ ಮುಕ್ಕಾದ ಮನಸುಗಳ
ಶೋಧಿಸಲಿ ಹಚ್ಚಿದ ದೀಪಗಳ ನಗು,
ಅಧರ್ಮ ಅನ್ಯಾಯದ ಹೂಳಲಿ ಹುದುಗಿದ,
ಸತ್ಯ ನ್ಯಾಯ ನೀತಿ ಧರ್ಮವ!
-ಅಯ್ಯಪ್ಪಕಂಬಾರ
ಜೀವಪ್ರಿಯವೂ… ಜೀವಹರವೂ…
ದೀಪಗಳು ನಂದುವುದಿಲ್ಲ…
ತಮ್ಮಷ್ಟಕ್ಕೆ ತಾವೇ…
ಗಾಳಿ ಮೇಲಾಡಿ ಮುಗಿಸುವವರೆಗು
ಅವಕ್ಕೆ ಗೊತ್ತೇ ಆಗುವುದಿಲ್ಲ…
ಪಾಪ ಮುಗ್ದ ಜ್ಯೋತಿಗೆ ಗಾಳಿ
ಪ್ರಾಣಾಯುವೆಂದು ಮಾತ್ರ ಗೊತ್ತು !
ತಾವುರಿಯಲು ಬೆಳಗಲು ಗಾಳಿಯೊಂದೇ
ಎಂಬ ಸತ್ಯದ ಜೊತೆಗಿರುವ
ಮತ್ತೊಂದು ಸತ್ಯ ಅವಕ್ಕೆ
ಇನ್ನೂವರೆಗು ಗೊತ್ತಿಲ್ಲ !
ಉರಿಸುತ್ತೇನೆ, ಭರಿಸುತ್ತೇನೆ, ನಿನ್ನ
ಜೊತೆಗೇ ಇರುತ್ತೇನೆಂದ ಗಾಳಿಯ
ಮಾತಿಗೆ ಮಾರುಹೋಗಿ ಹತ್ತಿರ-ಹತ್ತಿರ
ಬಿಟ್ಟುಕೊಳ್ಳುತ್ತಲೇ…
ಎತ್ತರೆತ್ತರ ಉರಿವ ಸೋಜಿಗಕ್ಕೆ
ಮರುಳಾಗುತ್ತದೆ ದೀಪ.
ಎತ್ತರೆತ್ತರಕ್ಕೇರಿ ಬೇರಿಗೆ ನೀರು
ಸಿಗದಂತಾದಾಗಲೇ ಅರಿವಾಗುವುದು
ತಾನಿನ್ನು ಬಹುಕಾಲ ಉಳಿಯುವುದಿಲ್ಲವೆಂದು !
ಮೈಯಿತ್ತೆ, ಮನವಿತ್ತೆ, ನನ್ನ ಬಟ್ಟಲದೆಣ್ಣೆ
ವ್ಯಯಿಸಿ ಉರಿದೆ… ಗಾಳಿರಾಯ ನಿನ್ನ
ಸಾಂಗತ್ಯ ಸಹಚರ್ಯೆಯಲೆಂದ
ದೀಪ ಇದ್ದಕ್ಕಿಂದಂತೆ ಹತ್ತಿರ ಬಂದ ಭೂಪನಿಗೆ
ಎಲ್ಲಾ ಒಪ್ಪಿಸುವ ಭರದಲಿ…
ಕಬಳಿಸಿ ಬೆಳಕ ಕುರುಹೂ ಉಳಿಸದ
ಗಾಳಿಗೆ ತನ್ನನ್ನೇ ತೆತ್ತುಕೊಳ್ಳುತ್ತಾ ಬರಿದಾಗುತ್ತದೆ.
ನಿಜ; ಜೀವಪ್ರಿಯವು ಜೀವಹರವಾಗುವುದು
ಗೊತ್ತಾಗುವುದಿಲ್ಲ !
ಗೊತ್ತಾಗುವುದೇ ಇಲ್ಲ !
-ಉಷಾನರಸಿಂಹನ್
ನೆರೆ ತೆರೆಯ ದರೆಯ ಮೇಲೆ
ನಿಲ್ಲದ ಬೋರ್ಗರೆತ
ರಾಶಿ ರಾಶಿ ಜಲಪಾತಗಳು
ಮಿಂದು ಶ್ವೇತವಾಗಿಹವು
ಹಸಿರು ರಾಶಿ
ಮಡುಗಟ್ಟಿದ ದುಃಖ
ರಭಸದ ಹನಿಯ ತೊಳಲಾಟ
ಕೂಗು ಆಕ್ರಂಧನ
ಮನೆ ಮಠ ಜೀವಂತ ಸ್ಮಶಾನ
ರಾಜಕಾರಣಿಗಳ ನೀರವ ಮೌನ
ರೈತ ಕಂಗಾಲು
ವರ್ಷಿಣಿಯ ಬುದ್ಧಿ ವಕ್ಕಾಲೋ ಮುಕ್ಕಾಲು
ಸೂರು,.. ಗೋಡೆ,…
ಕೆರೆ-ಕಟ್ಟೆ ಒಡೆದು
ಸೇತುವೆ ಹೆರಿಗೆಯಾಗಿದೆ
ಅವಶೇಷಗಳನ್ನೋ
ತನ್ನಸ್ಥಿಪಂಜರವನ್ನೋ
ಸಾಗರದ ಬುಸುಗುಡುವಿಕೆ
ಜಲಚರಗಳು ನರಕಕೆ..
ಒಡೆದ ವಿನಾಶದ ಆಣೆಕಟ್ಟು
ಪಾಪ ಪ್ರಜ್ಞೆಯ ಬಿಟ್ಟು
ಹೊಸ ಇತಿಹಾಸ
ಮರು ಹುಟ್ಟು
ನವೋದಯದೆಡೆಗೆ
ಅತಿವೃಷ್ಟಿಯ ನರ್ತನ
ಒಂದಿನ ಅಧಃಪತನ
ನಿಶ್ಚಿತ ಪ್ರಳಯ
ಹಂತ ಹಂತ
ವಿಜ್ಞಾನವೂ ಮೀರಿದ
ಆಗಂತುಕ
-ಅರುಣ್ ಕೊಪ್ಪ
ಮಾನವೀಯತೆಯ ಪಾಠ
ಯಾವದೋ ಅಮ್ಮನ ಮಡಿಲಿಗೆ
ಯಾರದೋ ಮಗು ಮಲಗಿದೆ
ಮನೆ ಕಳೆದುಕೊಂಡವರ ತಲೆಗಳಿಗೆ
ಇನ್ನಾರದೋ ಸೂರು ಆಸರೆ ಕಲ್ಪಿಸಿವೆ
ಯಾರೋ ತಂದ ಅನ್ನ ಹಸಿವಿನಿಂದ
ನರಳುವರ ಪಾಲಿಗೆ ಮೃಷ್ಟಾನ್ನವಾಗಿದೆ
ಗಂಜಿ ಕೇಂದ್ರ ನಿರಾಶ್ರಿತರ ಶಾಲೆಗಳಲಿ
ವಿಧಿ ಮಾನವೀಯತೆಯ ಪಾಠ ಕಲಿಸಿದೆ
ಬಡವ ಸಿರಿವಂತರೆಲ್ಲ ಭೇದಭಾವ
ಮರೆತು ಪರಸ್ಪರ ಸಹೋದರರಾಗಿದ್ದಾರೆ
ದುಕ್ಕದುಮ್ಮಾನ ಹಂಚಿಕೊಂಡ ಮನಗಳು
ಒಬ್ಬರ ಕಣ್ಣೀರು ಇನ್ನೊಬ್ಬರು ಕುಡಿದಿದ್ದಾರೆ
ನಿರಂತರ ಜಗಳನಿರತ ಜಾತಿ ಧರ್ಮಗಳು
ಒಂದಾಗ್ನಿಂತು ನಿಜದ ಭಾವವೈಕ್ಯತೆ ಸಾರಿವೆ
ಮಂದಿರ ಮಸೀದಿಗಳು ತಮ್ಮ ಮಡಿವಂತಿಕೆ
ಮರೆತು ಮನುಜೋದ್ಧಾರಕ್ಕೆ ಕರೆ ನೀಡಿವೆ
ಜನರ ಮನಸ್ಸು ಮೈಲಿಗೆಯಲ್ಲ
ಮಹಾ ಪ್ರವಾಹದಲಿ ಕೊಚ್ಚಿಹೋಗಿದೆ
ಮನುಷ್ಯತ್ವ ಮನುಷ್ಯನಿಗೆ ಮಾತ್ರವಲ್ಲ
ಮೂಕ ಪ್ರಾಣಿಗಳ ವೇದನೆಗೂ ಮಿಡಿದಿದೆ.
– ಅಶ್ಫಾಕ್ ಪೀರಜಾದೆ
ನಿಸ್ವಾರ್ಥದಲಿ ಬಾಳು ..!!
ನಾಳಿನ ಕನಸಿನ
ಬುತ್ತಿಯ ಗಂಟಿಗೆ
ನೇಸರ ಮೂಡಿ
ನನಸು ಮಾಡಿ
ಜೀವನ ಸಾಕಾರಗೊಳಿಸುವನು !
ಬಾಡುವ ಫಲ – ಪುಷ್ಪ
ಮೈದುಂಬಿ ಬೆಳೆದು
ಮನವರಳಿಸಿ ರಸತಣಿಸಿ
ಸ್ಪೂರ್ತಿ ಸೆಲೆಯಾಗಿ
ಮರೆಯಾಗವವು !!
ಬನದ ಮೈಸಿರಿಯು
ಮುಗಿಲ ಮುಟ್ಟಿ
ಬಾಗಿ ಬಳುಕಿ
ರಮಣೀಯ ರತಿಯಾಗಿ
ಮನಸೂರೆಗೊಳ್ಳುವಳು !!
ಋತು ಚೈತ್ರ ಮಾಸದ
ಮಾಮರದ್ಹಕ್ಕಿಯ
ಗಾನ ಮಾಧುರ್ಯಕ್ಕೆ
ಜಗವೇ ತಲೆದೂಗಿ
ಮುದಗೊಂಡಿಹುದು !!
ನಿಸ್ವಾರ್ಥದಲಿ ಬದುಕಿ
ಪರರ ಬಾಳಿಗೆ ದಾರಿ ತೋರಿ
ಮೆರೆಯುವ ನಿಸರ್ಗದಂತೆ
ನಿನ್ನದಲ್ಲದ ಸಂಪತ್ತಿಗೆ
ಮರುಳಾಗದೆ ನೀ
ನಡೆಯೋ ತಮ್ಮಣ್ಣ !!!
ಆದಿತ್ಯಾ ಮೈಸೂರು
ಪುಟ್ಟ ಕೋಣೆ
ಮನದ ಮೂಲೆಯಲಿ
ಪುಟ್ಟದೊಂದು
ಕೋಣೆಯಿರಬೇಕಂತೆ,
ನಾವು ಏಕಾಂತದಲಿ
ತಂಗಿರಲು.
ಹೊರಗೆ ತೋರಿಸುವ ಸುಭಗ
ಮೋರೆಯನಲ್ಲದೆ
ಇರುವ ಇನ್ನೊಂದು
ಮೋರೆಯನು ತೆರೆಯಲು.
ಮುಚ್ಚಿಟ್ಟ ಗುಟ್ಟುಗಳ
ಸುಟ್ಟು ಹಾಕಲು
ಬೇರೆಯವರಿಗೆ
ಅರಿಯದಂತೆ.
ಬಿಕ್ಕಳಿಸುವ
ಅಸಹಾಯಕತೆಯನು
ಮುಚ್ಚಿ ನಗುವ
ತೋರಿಕೆಯ
ಮುಖವಾಡ ಕಿತ್ತೆಸೆದು
ನಾವು ನಾವಾಗಿಯೇ
ಇರಲು.
ಮತ್ತೊಮ್ಮೆ ಮುಖವಾಡದ
ಬಣ್ಣ ಹಚ್ಚುವವರೆಗೆ…..
-ಡಾ|| ವೃಂದಾ ಸಂಗಮ
sooper
“ಪುಟ್ಟ ಕೋಣೆ” ಕವನ ಸೊಗಸಾಗಿದೆ. ನಾವೆಲ್ಲರೂ ಬಹುಶಃ ಆನೆಯಂತೆ. ಆನೆ ಹೊರಗೆ ತೋರಿಸುವ ಹಲ್ಲು ಬೇರೆ, ಆಹಾರ ಅಗೆಯುವ ಹಲ್ಲು ಬೇರೆ. ಹಾಗೇ ನಾವು ಹೊರಜಗತ್ತಿಗೆ ತೋರಿಸುವ ಮುಖ ಬೇರೆಯಾದರೆ ನಮ್ಮ ಒಳಗಿನ ಮುಖ ಬೇರೆ ಇರುತ್ತದೆ. ತುಂಬಾ ಮಾರ್ಮಿಕವಾಗಿ ಇಲ್ಲಿ ಹೇಳಿದ್ದಾರೆ.
ಉಷಾ ನರಸಿಂಹನ್ ಅವರ ಕವಿತೆ ಭಾವವನೂ ಚಿಂತನೆಯನೂ ಹೊದ್ದು ಸಹೃದಯರನು ಆಲೋಚಿಸುವಂತೆ ಮಾಡುವಲ್ಲಿ ಸಫಲವಾಗಿದೆ. ದೀಪವೂ ಗಾಳಿಯೂ ಪರಸ್ಪರ ಮತ್ತು ಅಪಸ್ವರ………
ಈ ಪರಿಕಲ್ಪನೆಯೇ ಹೊಸದು ಮತ್ತು ಸೃಜನಶೀಲವಾದದ್ದು.
ನಿಸರ್ಗವೇ ಹಾಗೆ. ಸಮವೂ ವಿರುದ್ಧವೂ ಒಟ್ಟೊಟ್ಟಿಗೆ ನೇಯ್ದುಕೊಂಡಿರುತ್ತದೆ. “ನೀ ಮಾಯೆಯೋ ನಿನ್ನೊಳು ಮಾಯೆಯೋ ಎಂದ ಕನಕದಾಸರು ಎರಡೂ ಅಲ್ಲ; ಎಲ್ಲ ನಿನ್ನೊಳಗೋ ಕೃಷ್ಣ” ಎಂದರಲ್ಲ ಹಾಗೆ.
ಹೀಗೆ ಎಲ್ಲವನೂ ತಾತ್ತ್ವಿಕವಾಗಿ ನೋಡಿದರೆ ಸಾಹಿತ್ಯ ಹುಟ್ಟುವುದಿಲ್ಲ! ಅದಕ್ಕೇ ತಾತ್ತ್ವಿಕರು ಕವಿಗಳಾಗಲಾರರು !!ಆದರೆ ಕುವೆಂಪು, ಬೇಂದ್ರೆ, ಡಿವಿಜಿಯಂಥವರು ಇದನು ಮೀರಿದರು. ತತ್ತ್ವಕಾವ್ಯವನು ಕಾವ್ಯತತ್ತ್ವವನ್ನಾಗಿಸಿದರು.
ಮೇಡಂ ಕವಿತೆ ಹೀಗೆ ನಮ್ಮನು ಚಿಂತನೆಗೆ ಹಚ್ಚುತ್ತದೆ; ಹಾಗೆಯೇ ಆಸ್ವಾದಿಸುತಾ ಲೋಕಗ್ರಹಿಕೆಯನು ಹೆಚ್ಚಿಸುತ್ತದೆ. ಬರೆದ ಮತ್ತು ಪ್ರಕಟಿಸಿದ ಇಬ್ಬರಿಗೂ ಧನ್ಯವಾದಗಳು.
– ಹೆಚ್ ಎನ್ ಮಂಜುರಾಜ್