ಅಜ್ಜ ಬರುವುದ ಇನ್ನೂ ಬಿಟ್ಟಿಲ್ಲ..!!
ಅಗೋ..! ನೋಡು ಅಲ್ಲಿ..?
ಗೋಡೆನೆತ್ತಿಯ ಮೊಳೆಯಲ್ಲಿ
ಅಹಿಂಸಾ ಮೂರುತಿಯ
ಬಂಧಿಸಿ ಕಟ್ಟಿ ಹಾಕಿದಂತೆ
ನೇತು ಹಾಕಿದೆ
ಬಿಟ್ಟ ಕಣ್ಣು ಬಿಟ್ಟ ಹಾಗೆ
ಹುಬ್ಬುಗಂಟಿಕ್ಕದೆ
ಒಮ್ಮೆ ನಸು ನಗುತ್ತಾ
ಜೀಸಸ್ ಕ್ರಿಸ್ತನಂತೆ ಕಾಣುತ್ತಿದ್ದಾನೆ..!!
ನನ್ನ ತಾತ ಕೋಲು ಹಿಡಿದು
ಸುಕ್ಕುಗಟ್ಟಿದ ಮೈಯ್ಯಲ್ಲಿ
ತುಂಡು ಬಟ್ಟೆ ತೊಟ್ಟು
ಮೇಲೆ ಹೊದಿಕೆ ಹೊದ್ದು
ಕಾಲ್ನಡಿಗೆಯಲ್ಲೇ
ಯಾರನ್ನೋ ? ಯಾವುದನ್ನೋ !
ಅರಸುತ್ತಾ , ನಡೆಯುತ್ತಾ
ಹೊರಟಂತಿದೆ…!!
ಕಪ್ಪು ಜನಾಂಗೀಯ ನಿಂದನೆ ದಹಿಸಿ
ಅಹಿಂಸೆಯಿಂದ ಹಿಂಸೆ ಜಯಿಸಿ
ಮುಳುಗದ ಸೂರ್ಯ ಮುಳುಗಿಸಿ
ಬಂಧ ಮುಕ್ತಗೊಳಿಸಿ
ಸ್ವಾತಂತ್ರ್ಯಧಾರೆ ಎರೆದು ಕೊಟ್ಟ..!!
ಇಂದು
ಟಾಕೀಸಿನ ಮುಂದಿನ ಸೀಟಿನಲ್ಲಿ
ಕೂತು ಹಾಸ್ಯಕ್ಕೀಡಾಗಿದ್ದರೂ
ತಲೆ ನೆರೆತರೂ ಕಾಣುವುದ,
ಬರುವುದ ಇನ್ನೂ ಬಿಟ್ಟಿಲ್ಲ..!!
ಮಿಂದ ಕತ್ತಲೆಯ ಹಣತೆಯಲ್ಲಿ
ಮಠ – ಮಂದಿರ, ರಸ್ತೆ ಸೆರಗಂಚಲ್ಲಿ
ಶೋಷಿತರ ದನಿಯಲ್ಲಿ
ದವಾಖಾನೆ, ಬಂಧೀಖಾನೆ
ಕೋರ್ಟು ಠಾಣೆಗಳಲ್ಲಿ
ದೀನ ದಲಿತರ ಹಟ್ಟಿಗಳಲ್ಲಿ
ವಿಕೃತಕಾಮಿಗಳಿಗೆ ಬಲಿಯಾದ
ಬಾಲಕಿಯರ ಹೆಪ್ಪುಗಟ್ಟಿದ ರಕ್ತದಲ್ಲಿ
ತಂದೆ ತಾಯಿಗಳ ಆಕ್ರಂದನ ಕಂಬನಿಗಳಲ್ಲಿ
ಅಸಹಾಯಕ ಸ್ಥಿತಿಯ
ಹೋರಾಟದ ಕಿಡಿಗಳಲ್ಲಿ…!!
ನನ್ನಜ್ಜ ಚರಕದಲ್ಲಿ
ನೂಲುವುದ, ನೇಯ್ಯುವುದ
ಇನ್ನೂ ಬಿಟ್ಟಿಲ್ಲ
ಮತ – ಧರ್ಮ, ಜಾತಿ – ಕುಲ,
ವೇಷ – ಭಾಷೆ, ಮೇಲು – ಕೀಳು
ಭೇಧ – ಭಾವ, ಒಡೆದ ಮನ ಬೆಸೆಯಲು
ಕೊಳೆತ ಮನಸ್ಸಿಗೆ ಶುದ್ಧಿ ಸುಚಿ ಮಾಡಿ
ಹೊಸ ಬಟ್ಟೆ ತೊಡಿಸಲು
ಕಾಲ, ಯಂತ್ರ ಉರುಳುತ್ತಿದ್ದರೂ
ಹೊಲೆಯುತ್ತಾ ಕೂತಿದ್ದಾನೆ
ಇದರ ಜೊತೆಗೆ ನಡೆಯುತ್ತಿದ್ದಾನೆ
ಮುಂದೆಯೂ ನಡೆಯುತ್ತಿರುವನು..!!
-ಆದಿತ್ಯಾ ಮೈಸೂರು
ಈಗಾಗಲೇ………..
ಎಲ್ಲವನೂ ಬರೆಯಲಾಗಿದೆ
ವಿನಮ್ರತೆಯಿಂದ ಓದಬೇಕಷ್ಟೇ;
ಹಾಳೆ ತಿರುವಿದ ಸಶಬ್ದ ನಾಚಬೇಕಿದೆ.
ಎಲ್ಲವನೂ ಹಾಡಲಾಗಿದೆ
ತನ್ಮಯದಿ ಕೇಳಬೇಕಷ್ಟೇ;
ಗೀತಗಂಧ ಸುತ್ತೆಲ್ಲ ಪಸರಿಸಬೇಕಿದೆ.
ಎಲ್ಲವನೂ ಬದುಕಲಾಗಿದೆ
ಜೀವಂತದಿ ಗಮನಿಸಬೇಕಷ್ಟೇ;
ಅರಳೀಮರವೇ ಆಹ್ಲಾದವಾಗಿದೆ.
ಎಲ್ಲವನೂ ಅನುಭವಿಸಲಾಗಿದೆ
ಭವಮುಕ್ತವಾಗಿ ಧರಿಸಬೇಕಷ್ಟೇ;
ಸಾವು ಸಮೀಪದಲೇ ಇರುತದೆ.
ಎಲ್ಲವನೂ ಮಾತಾಡಲಾಗಿದೆ
ಕಿವಿಗೊಟ್ಟು ಕೇಳಬೇಕಷ್ಟೇ;
ಅಹಮಿನ ಸರ್ಪ ಸಾಯಬೇಕಿದೆ.
ಅದೇ ಪಂಚಭೂತ; ಅದೇ ದೇವದೂತ
ಹೊಸದೇನೇನೂ ಇಲ್ಲ ಜಗದಲಿ;
ಮನಸು ಮಧುರವಾಗಬೇಕಿದೆ.
ಹಳೆಯದು ಹಳಸಲಾಗದಂತೆ
ಜತನವಾಗಿ ಕಾಪಾಡಬೇಕಿದೆ;
ಅಕ್ಕಿಯೇ ಅನ್ನವಾಗಿ ಹಬೆಯಾಡುತಿದೆ.
ಖಾಲಿ ಬಿದಿರಲಿ ರಾಗ ಹೊಮ್ಮಿಸುವ
ಪವಾಡ ಹೊಸದೆಂದು ತಿಳಿಯಬೇಕಿದೆ;
ಸುಮ್ಮನೆ ಇದ್ದು ಸುಮ್ಮಾನ ಹೊಂದಬೇಕಿದೆ.
– ಡಾ. ಹೆಚ್ ಎನ್ ಮಂಜುರಾಜ್,
ಒಲಿಯದ ಜೀವಕೆ….
೧
ಮೊಗ್ಗರಳಿ ಹೂವಾದೆಯೆಂದು
ಖುಷಿಯಾದೆ ನಾನು
ಬೇರೊಂದು ದುಂಬಿಗೆ
ಮಧುವಾದೆ ನೀನು…!
೨
ನಿನ್ನ ಹೆರಳಿಗೆ ತೊಡಿಸಲೆಂದು
ಹೂವು ತಂದೆ ನಾನು
ಅದಾಗಲೇ ಯಾರಿಂದಲೋ
ಹೂವ ಮುಡಿದೆ ನೀನು
೩
ನಿನ್ನ ಚೆಲುವನು ಬೊಗಸೆ ತುಂಬಿ
ಸವಿಯಲೆಂದೆ ನಾನು
ಅದಾರದೋ ಬೊಗಸೆ ತುಂಬಲು
ಅಣಿಯಾದೆ ನೀನು
೪
ನಿನ್ನ ಜೀವದ ಜೀವವಾಗಿ
ಬಾಳಲೆಂದೆ ನಾನು
ಅದನ್ನರಿಯದೆ ಬಿಟ್ಟು ನನ್ನ
ದೂರ ಸರಿದೆ ನೀನು
೫
ನಿನ್ನ ಮನದ ಆಸೆಯನ್ನು
ಅರಿಯದಾದೆ ನಾನು
ಮನಸ್ಸು ಗಟ್ಟಿ ಮಾಡಿಕೊಳುವೆ
ಸುಖದಿ ಬಾಳು ನೀನು.
-ಸೋಮಲಿಂಗ ಬೇಡರ ಆಳೂರ
ಮೊರೆಯು ಕೇಳದು ಯಾರಿಗು
ಎತ್ತ ಕಂಡರು ಹಸಿರ ಕಾನನ
ಕತ್ತ ತಿರುಗಿಸೆ ತರುಲತೆ
ಬಿತ್ತುತಿರುವುದು ಮನವ ಕಲಕುತ
ಸತ್ತು ಹೋಗಿಹ ಈ ಕಥೆ
ಮತ್ತು ನೀಡುವ ಮದನ ಬಂಗಿಯ
ಬೆತ್ತ ಬಿದಿರಿನ ಹಂದರ
ಗತ್ತ ತರವಂತಿದ್ದ ಮರದೊಳ
ಗಿತ್ತು ಅವನಿಯ ಮಂದಿರ
ಕಡಿಯ ಬೇಡಿರಿ ಮೊರೆಯನಿಟ್ಟರು
ಪಡೆದೆ ತೀರುವೆನೆಂದರು
ತಡೆಯ ತಂದರು ಕೇಳದಾದರು
ಕಡಿದು ಮಾರುತ ನೆಡೆದರು
ಗೆದ್ದೆವೆಂದರು ಗಳಿಸಿ ಹಣವನು
ಮೆದ್ದು ಮಕ್ಕಳು ಮರಿಗಳು
ಬಿದ್ದು ಹೋಯಿತು ಜಗದ ನಿಯಮವು
ಸದ್ದ ತಿಳಿಯದೆ ಹೋದರು
ಚಿತ್ತ ಸೂರೆಯ ಗೊಳ್ಳುತ್ತಿದ್ದುದು
ತುತ್ತು ನೀಡುತ ದೀನಗು
ನೆತ್ತಿ ನೆರಳಿಗು, ಬಿತ್ತೊ ಬೀಜಕು
ಕುತ್ತು ಬಂದಿತು ಕೂಳಿಗು
ಹರಿಸಿ ಮುನಿಸನು ಸೇಡು ಪರಿಸರ
ನೆರೆಯ ರೂಪದಿ ಸಿಡಿಸಿತು
ಜನರು ನೊಂದರು ಕೊಚ್ಚಿ ಹೋದರು
ಮೊರೆಯು ಕೇಳದು ಯಾರಿಗು
-ವೈಶಾಲಿ ಜಿ. ಆರ್
ಎರಡು ಗಝಲ್ ಗಳು
1.ಖಾಲಿ ಜೋಳಿಗೆ
ಕಾಡು ಫಕೀರನಂತೆ ಸವಿ ಜೀವಾಳದ, ಸೌಮ್ಯದ ಕೆಂಪು ಬಟ್ಟೆಯ ಬೌದ್ದಬಿಕ್ಕು
ಸತ್ಯದ ಖಾಲಿ ಜೋಳಿಗೆ ತುಂಬಿದಂತೆ, ನಗೆಯ ಬೀರಿದ ಬೌದ್ದ ಬಿಕ್ಕು
ರಕ್ತದಿ ಮಡುಗಟ್ಟಿದ ಕಂಬನಿಗಳನು ಒರೆಸಿ, ಕಮಲದ ಎಸಳಿನ ಹನಿಗಳ ತುಂಬಿದ ಬೌದ್ದಬಿಕ್ಕು
ಹಳದಿ ಮೈಲಿಗೆಯ ಮಹಾ ಸಾವಿಗೆ ‘ಮಲ್ಲಿಗೆ ಪರಿಮಳ’ ತುಂಬಿ ಬುದ್ದನನ್ನು ಪ್ರಾರ್ಥಸಿದ್ದ ಬೌದ್ದಬಿಕ್ಕು
ಯುದ್ದದ ಕರಾಳ ಛಾಯೇಯ ಬೆಟ್ಟದಿ, ಹಿಮದ ತಣ್ಣನೇಯ ಸರೋವರ ಅಪ್ಪಿ ಈಜುತ್ತಿದ್ದ ಬೌದ್ದಬಿಕ್ಕು
ಅಕ್ಕಸಾಲಿನ ಅಂಗಡಿಯಲಿದ್ದ ಜೀವ- ಜೀವಗಳಿಗೆ, ಮುತ್ತಿನ ಮಳೆಯ ನೀರ ಹರಿಸಿದ್ದ ಬೌದ್ದಬಿಕ್ಕು
ವಲಸೆ ನಾಡನೇ ನನ್ನ ಪರಧಿಯ ನೆಲವೆಂದು, ನೆನೆದು ದುಗುಡ ತೊರೆದ
ಮಹಾಮೌನದ ಅರಿವಿನ ಬೌದ್ದಬಿಕ್ಕು
ಪುಸ್ತಕದ ರಾಶಿಯಲ್ಲಿ ಅವನು ಬುದ್ದನ ಬಿಟ್ಟು, ಅವನ್ನೇ ಅವನೇ ಧ್ಯಾನಿಸುತ್ತಿದ್ದ ಬೌದ್ದ ಬಿಕ್ಕು.
2 . ನೀಲಿ ಅಪರೂಪ ಚಂದಿರ.
ತಾರಸಿ ಮ್ಯಾಗ ಮಾವಿನ ಹೊತಳಿರು ಸೂಸಿದಾಗ ನೀಲಿ ಚಂದಿರ ನಕ್ಕ
ರಾತ್ರಿ ನೆರಳ ನೀರವತೆ ಕಾಡು ಮಲ್ಲಿಗೆ ಪರಿಮಳದಿ ನೀಲಿ ಚಂದಿರ ನಕ್ಕ
ಧಾರವಾಡದ ಧಾವಣಿ ಲಂಗ ತೊಟ್ಟ ಜೋಪಡಿ ಹುಡುಗಿಯ ಓದಿನಲಿ ನೀಲಿ ಚಂದಿರ ನಕ್ಕ
ಬೆಳ್ನೊರೆಯ ಮಂಜುಗಾನ ಇರುಳಿನ ದುಂಬಿ ಕಾನನಗೂಡಿನಲಿ ನೀಲಿ ಚಂದಿರ ನಕ್ಕ
ಹಾಲಕ್ಕಿ ಹಸಿವಿನ ಕಂಗಳಿಗೆ ಬೆಳ್ದಿಂಗಳ ಬೆಳಕನಿಟ್ಟ ಇಲಿ ಬಿಲ ತೋರುತ್ತ ನೀಲಿ ಚಂದಿರ ನಕ್ಕ
ಶ್ಯಾಮಲ ವರ್ಣ ಸಂಪಿಗೆ ಹೂವುಗಳಲ್ಲಿ ನೀಲಿ ಚಂದಿರ ನಕ್ಕ
ಕತ್ತಲು ಕೆಂಪು ಮೂತಿ ಹುಡುಗನ ಮಾತಿಗೂ ಪಿಸುಗುಟ್ಟುತ್ತ ನೀಲಿ ಚಂದಿರ ನಕ್ಕ
ರಸ್ತೆಗಳ ಕಾರು ಬೆಳಕಿನ ಕನ್ನಡಿ ಒಲವಿನಲಿ ನೀಲಿ ಚಂದಿರ ನಕ್ಕ
ಇಬ್ಬನಿ ಕುಳಿರ್ಗಾಳಿ ಮುತ್ತು- ಮುತ್ತಿನ ಜೇಡರದ ಬಲೆಯಲಿ ನೀಲಿ ಚಂದಿರ ನಕ್ಕ
ಸುಗ್ಗಿಗಳ ವಿಕಾಸನ ಮೈತುಂಬ ಜಿಂಕೆ ಮುಕಟದ ಚಿತ್ತಾರ ಕಡೆದು ನೀಲಿ ಚಂದಿರ ನಕ್ಕ
–ನಂದಿನಿ ಚುಕ್ಕೆಮನೆ