ನಿನ್ನ ಅಕ್ಷರ ಪ್ರೀತಿ ಅಮರವಾಗಲಿ
(ಜಿಎಸ್‍ಎಸ್ ನೆನಪು)
ಕನ್ನಡ ಸಾಹಿತ್ಯದ ಕಿರೀಟವಾದೆ
ಕನ್ನಡಿಗರ ಮನದ ಮುಕುಟವಾದೆ
ಪ್ರೀತಿ ಇಲ್ಲದ ಮೇಲೆ ಎಂದು
ಎಲ್ಲರಿಗೂ ಪ್ರೀತಿಯ ಅರ್ಥ ತಿಳಿಸಿದೆ
ಕಾಣದ ಊರಿಗೆ ನಿನ್ನ ಪಯಣ
ಸದಾ ತುಂಬಿರುವೆ ಜನಮನ
ಕನ್ನಡ ಭೂಮಿಯಲ್ಲಿರುವ ಒಂದೊಂದು ಕಣಕಣ
ಹಾಡಿ ಹೊಗಳಿದೆ ನಿನ್ನ ಗುಣಗಾನ
ಕನ್ನಡಾಂಬೆಯ ಪುತ್ರ ನೀ
ಕನ್ನಡಿಗರೆಲ್ಲರ ಮಿತ್ರ ನೀ
ದೇಹದಿ ಆತ್ಮ ಅಗಲಿದರೇನು
ಭಾವದಿ, ಜೀವದಿ ನಿನ್ನ ನೆನಪು ಅಳಿಯುವುದೇನು?
ನಾನು ನೊಂದೆ,
ಒಮ್ಮೆ ನಿನ್ನ ನೋಡಬೇಕೆಂಬ ಆಸೆ ಕಮರಿದಾಗ
ಆದರೆ ಇಂದು ಖುಷಿ,
ಪ್ರತಿಕ್ಷಣ ಮನದಿ, ಕಾವ್ಯದಿ
ನೀನೇ ತುಂಬಿರುವೆ
ಮತ್ತೆ ಹುಟ್ಟಿ ಬಾ ಜಿಎಸ್‍ಎಸ್
ಕಾಯುತಿರುವೆವು ನಿನ್ನ ಹಾದಿಯ
ಹರಿಸು ಮತ್ತೆ ಕಾವ್ಯಧಾರೆಯ
ಅರಳಿಸು ಪ್ರೀತಿಯ ಕುಸುಮವ
ಸಂಘರ್ಷ ಮರೆಯಾಗಲಿ
ನಿನ್ನ ನೆನಪು ಚಿರಾಯುವಾಗಲಿ
ನಿನ್ನ ಅಕ್ಷರ ಪ್ರೀತಿ ಅಮರವಾಗಲಿ
-ಸುವರ್ಣ ಶಿ. ಕಂಬಿ
ಪಿಸುಮೌನದ ಆರ್ದಶ ಬಾಪು
ತುಂಬ ಕನಸುಗಳ ಸುರಿದೆ ಮೌನದಿ
ಶಾಂತಿ ತುಂಬಿದ ಹೂವುಗಳ ಪರಿಮಳ
ಸೂಸಿದೆ ಎಂದೂ ಬದಲಾಗದ ಭಾವ
ಎದೆಯೊಳಗೆ ಸರಳವೇ ಸಿರಿವಂತಿಕೆ
ತಿಳಿಸಿ ಕೊಟ್ಟ ಬಾಪು ಎಂದರೆ ನನಗೆ
ಈಗಲೂ ಆದರ್ಶವೇ
ಜೀವನದ ಸತ್ಯ ದರ್ಶನಗಳ
ನೀಡಲು ಪ್ರಾಣವನೇ ಕೊಟ್ಟೆ
ಮಹಾತ್ಮರಾಗಲು ಯಾವಗಲೂ
ಅರ್ಹ ನೀವು ಭುವಿ ಎಲ್ಲಾ ಜನ್ಮಕೂ
ಮಹಾನಿತ್ಯದ ದೀಪೋತ್ಸವದಂತೆ
ನೀವು ಇದ್ದರೆಯೇ ವಿಶ್ವವೇ ಉಳಿಯುವುದೇನು?
ನಡೆದ ಮಹಾ ಬೆಳಕಿನ ಸುವರ್ಣಪುಟಗಳ
ತಿರುವುಗಳ ಶೋಧಿಸುತ್ತಲೆ ಇದ್ದಾರೆ ಜಗದ ವಿದ್ವಾಂಸರು
ಮಾಡದ ತಪ್ಪಿಗೆ ಇತಿಹಾಸದ ಉಗ್ರರೆಲ್ಲ
ದೂರವಿಟ್ಟರೂ ನಿಮ್ಮನು..ನನಗೆ ಯಾವ ಚಿಂತೆಯಿಲ್ಲ
ಮನದೊಳಗೆ ಚಿರಸ್ಥಾಯಿ ಉಳಿದಿರುವೆ
ಜಾಗತೀಕರಣದ ವಿಚಿತ್ರ ಸ್ತಬ್ದದ
ಹಿಂಸೆಗಳನೆಲ್ಲ ತಣ್ಣನೇ ಸಹಿಸಿಕೊಂಡಿರುವೆ
ನಿನ್ನ ಮೌನ ಪ್ರತಿ ಅಹಿಂಸೆಯ
ಮಾನವೀಯತೆಯ ಎಲ್ಲಾ ಚಳುವಳಿಗಳು ಈಗಲೂ
ಜೀವದುಸಿರಾಗಿವೆ.. ಸಿಹಿಯಾದ ಭವಿತ್ಯವ ಕೊಟ್ಟಿದೆ
ಆಧುನಿಕಯುಗದಿ ನಿನ್ನ ಆರಾಧಿಸಲು
ಮಹಾ ತತ್ವಗಳ ನೈಜತೆ ತಿಳಿಯದೆ
ಮೆಲ್ಲನೆ ಉರಿಯುವ ನಕ್ಷತ್ರ ಕೂಟಗಳು
ನಿನ್ನ ಪುಟಗಳ ತೆರೆದರೆ ಅಮರವಾದಂತೆ
ಹೊನ್ನ ಮುಗಿಲಲಿ ಹಾರುವ ಬೆಳ್ಳಕ್ಕಿಯಂತ
ನಿನ್ನ ಹಣಕಾಸಿನಚಿಂತನೆಗಳು..
ಹರಿಜನರು- ನೊಂದವರಿಗೆ
ಮಹಾಬುದ್ದನಂತಹ, ಉನ್ನತ ತಾಯಿಯಂತೆ ಕಂಡೆ
ಕಸ್ತೂರಿ ಬಾ ತೊಡುತಿದ್ದ
ಉಡುಗೆಯಷ್ಟೆ ಪ್ರಾಣಿ ಹಿಂಸೆ ಮಾಡದೇ
ಪ್ರಾಣವನೇಬಿಟ್ಟ ಪ್ರತಿ ಜೌತಣದ ಜೀವಾಳದಂತೆ
ಸವಿಯಾದ ತಲ್ಲಣಿಸುವ ಮುಂಜಾನೆಯ
ಮನೋಹರ ಅಲೆಯಂತೆ
ಇಡೀ ಜೀವಮಾನದ
ಮಹಾ ಸ್ಪೂರ್ತಿದಾತೆ ನನ್ನ ಪ್ರೀತಿ ಮಾತೆ
ಜಗವೇ ರಕ್ತಸಿಗ್ದತೆಯಲಿ
ಈಗಲೂ ಉರಿಯುವ
ಅವರೆದೆಯೊಳಗೆ ನೀನು ನೆಲೆಸಿಬಿಡು
ಕುದಿಯುವ ಶರಧಿಯಂತೆ
ಹೃದಯಗಳಿಗೆ ನಿನ್ನ ನಿಷ್ಠೆಯ
ಪಿಸು ನುಡಿಗಳನು ಹಾಡಿ
ಮಹಾಕರುಣೆ ಬೀಜ ಬಿತ್ತನೆಮಾಡಿ
ಸಕಲ ಜೀವಪ್ರೀತಿ ತುಂಬಿ ಬಿಡು, ಅವರಲ್ಲಿಯೇ ಒಮ್ಮೆ.
-ಸಿಪಿಲೆ ನಂದಿನಿ
ಮರಗಳ ಮಾರಣಹೋಮ…
ಅಲ್ಲಲ್ಲಿ ನಿಂತಿವೆ ಬಾಳಿ ಬದುಕಬೇಕಾದ ಮರಗಳೆಲ್ಲ
ಬೋಳಾಗಿ ಹೋಳಾಗಿ ಹಾಳಾಗಿ
ಘಜ್ನಿ ಧಾಳಿಗೆ ತುತ್ತಾಗಿ ರುಂಡ ಕಳೆದುಳಿದ
ಮುಂಡ ಶಿಲ್ಪಗಳಂತೆ…!
ನರ ನಡೆದ ನಾಡಿನಲಿ ಕಾಡಿನಲಿ
ಉಡುಗಿದ ಹಸಿರು ಕಂಡು ಕೆಂಡವಾದ
ಕೋಪಾರುಣನೇತ್ರ
ಹಿಮ ಕರಗಿಸಿ ಬಂದೆರಗಿಸಿ ಕಾನನಕೆ
ನರಬಲಿ ನೈವೇದ್ಯವೆ ಮುಂದಿನ ಅವನ ಸೂತ್ರ..!
ಮಳೆ ಇಲ್ಲದಿರೆ ಮಾತ್ರ ಬರ ಎನ್ನುವಿರಲ್ಲ
ಮರದ ಕೊರಗು ಕಾಣದೇನು…?
ಚಿತೆಯೊಳಗೆ ಬಂಧು ಸುಡುವ ಸಂಕಟದಿ ಅಳುವಿರಲ್ಲ,
ಕೊರಡು ಸುಡುವುದಕ್ಕೆ ಅಳುವಿರೇನು.?
ಮರ ಕತ್ತರಿಸುವಾಗ ಕೊಡಲಿಗಾದ ನೋವು
ನಿಮ್ಮ ಒಡಲಿಗಾಗಲಿಲ್ಲವೆಂಬ ಆಕ್ರೋಶ ನನ್ನದು
ಮರ ತ್ಯಾಗಿ ಅದು ಬಾಗಿ ಬಳುಕಿ ಬದುಕುತ್ತದೆ
ನರ ಭೋಗಿ ಇವನು ಬಾಗದೆ ಬೀಗುತ್ತಾನೆ
ತಿಂದು ತೇಗಿ ಎಲ್ಲದನ್ನು ತೂಗಿ ಬದುಕುತ್ತಾನೆ…!
ಅಯ್ಯಪ್ಪಕಂಬಾರ
ಎನ್ನ ಕಣ್ಣಂಚಲಿ
ಪುಟ್ಟ ಪುಟ್ಟ ಹೆಜ್ಜೆಯಿಟ್ಟು
ಅಮ್ಮ ಎಂದು ಕೂಗಿದಾಗ
ಎನ್ನಕಂದ ನೋಟ ಚೆಂದ
ಮುಂದೆ ಮುಂದೆ ಬಂದು
ಎನ್ನ ಕೈ ಎಳೆದಾಗ
ನಾ ಹಿಂದೆ ಹಿಂದೆ ಸರಿದಾಗ
ಅವನ ಪುಟ್ಟ ಕಂಗಳಿಂದ
ಸುರಿವ ಮುತ್ತು ಕೋಟಿ
ಹೊನ್ನು ಹರಿದು ಹೋಯಿತಲ್ಲ
ಅನ್ನೋ ಭಾವ ಎನ್ನಲಿ
ಪುಟ್ಟಕಂದನಾಟ ನೋಡಲೆಂತ
ಚೆಂದವೋ..
ಅವನ ಆಟದ ಆಟಿಕೆ ಆದೆನಲ್ಲ
ಎಂಬ ಭಾವ ಎನ್ನಲಿ
ಆಡುತಾಡುತಾ ನಾನು
ನಿನ್ನೆಯ ನೆನಪಲ್ಲಿ ಸೇರಿ ಎನ್ನ
ತುಂಟಾಟದಿಂದ ಅಮ್ಮ
ನಿನ್ನ ಅದೆಷ್ಟು ಗೋಳಾಡಿಸಿದೆನೋ..?
ಅನ್ನೋ ಭಾವ ಎನ್ನ ಕಣ್ಣಂಚಲ್ಲಿ.
-ಕಲ್ಯಾಣಿ ಕರಣಂ
ಹೊಸ ಭೂಮಿ
ಭೂಮಿ ಕೇಂದ್ರ ನಶಿಸಿ ಹೋಗಿ,
ಸೂರ್ಯ ಕೇಂದ್ರದ ಹೊಳಪು
ಅದೂ ಮಸುಕಾಗಿ,
ಇಂದು ಉಪಗ್ರಹಗಳು ಗಿರಕಿ
ಹೊಡೆಯುವಾ ಮೆರಗು
ಇರುವದರಲ್ಲೇ ಸಂತೃಪ್ತಿ
ಹೊಂದಲು, ಮಾನವನೇನು?
ಇತರ ಜೀವಿಗಳಂತೆ ಸಾಮಾನ್ಯನೇ ?
ತನ್ನ ತಿಳಿವಿಗೇ ಹುಯ್ಲೆಬ್ಬಿಸುವ , ಮಾಂತ್ರಿಕ.
ಇರುವ ಭೂಮಿಯೂ ಸಾಲದೇ
ಇನ್ನೊಂದು ಭೂಮಿಯ ಸೃಷ್ಟಿಸುವಲ್ಲಿ
ಬಿಗ್-ಬ್ಯಾಂಗ್ ಸಿದ್ದಾಂತಕ್ಕೆ
ಮುನ್ನುಡಿ ಬರೆದ ಸಾಧಕ
ಯಾರಿಗೇನು ಗೊತ್ತು?
ಇಂಟರನೆಟ್ ಇಲ್ಲದ ಮನೆಗೆ
ಹೋಗೆನೆಂಬ ಮಗುವಿನ
ಜಾಹೀರಾತಿನ ಬದಲು,
ಹೊಸ ಭೂಮಿ ಸೃಷ್ಟಿಯಿಲ್ಲದಾ
ಮನೆಗೆ ಹೋಗನೆಂಬ
ಜಾಹೀರಾತು ಬಂದರೂ ಬರಬಹುದು
ಅದಕ್ಕೆ ಅಲ್ಲವೇ ಹಿರಿಯರು ಹೇಳಿದ್ದು
ಇರುವದೆಲ್ಲವ ಬಿಟ್ಟು
ಇರುದುದರೆಡೆಗೆ ತುಡಿವದೇ,
ಜೀವನ ಎಂದು.
-ಬೀನಾ ಶಿವಪ್ರಸಾದ
ಕಾವ್ಯಧಾರೆಯು ಅಂತರಂಗದ ಯಾತನೆಯನೂ ಮಕರಂದ ಗಂಧದ ಸುವಾಸನೆಯನೂ ಒಟ್ಟೊಟ್ಟಿಗೆ ಪಸರಿಸುತಾ ಪಯಣಿಸಿದೆ. ಕಾವ್ಯಾಸಕ್ತಿಯೇ ಇಲ್ಲಿನ ಮೊದಲ ಗುಣ. ಉಳಿದದ್ದು ಗೌಣ.
ಒಂದೇ ಸಲ ಬರೆದು ಮಾಗಿ ಬಿಡುವ ದಾರಿ ಯಾವತ್ತೂ ದುಬಾರಿ. ಬರೆದೂ ಬರೆದೂ ಮಾಗುವ ಹಾದಿಯೇ ನಿಜದ ಯುಗಾದಿ. ಇಂಥ ಪ್ರಯತ್ನಗಳು ಇನ್ನಷ್ಟು ಪರಿಶ್ರಮಗಳಲಿ ಪರಿಪರಿಯಾಗಿ ಪ್ರವಹಿಸಲಿ.
ಧನ್ಯವಾದಗಳು.
ಡಾ. ಹೆಚ್ ಎನ್ ಮಂಜುರಾಜ್, ಮೈಸೂರು, 9900119518
ಆತ್ಮೀಯ ಸಂಪಾದಕರಿಗೆ ವಂದನೆಗಳು.
ಈಗಾಗಲೇ ಎಂಬ ನನ್ನ ಕವಿತೆಯನು ಪ್ರಕಟ ಮಾಡಿದ್ದಕ್ಕಾಗಿ ಧನ್ಯವಾದಗಳು.