ಅದೆಷ್ಟು ಕಷ್ಟ ಬುದ್ಧನಾಗುವುದೆಂದರೆ…!
ಅದೆಷ್ಟು ಕಷ್ಟ ಈಗ ಬುದ್ಧನಾಗುವುದೆಂದರೆ
ಆಸೆಯ ಬಿಡುವ ಯುದ್ಧ ಒಂದೆಡೆಯಾದರೆ
ಸಕಲವ ತ್ಯಜಿಸಿ ಎದ್ದು ಬಿಡುವುದು ಇನ್ನೊಂದು!
ಕಲ್ಲೆಸೆದವರ ಎದೆಯಲ್ಲಿ ಪ್ರೀತಿ ತುಂಬಿ
ಬೆರಳ ಹಾರ ಮಾಡಿದವರ
ಕೊರಳಲ್ಲಿ ಶಾಂತಿ ಧ್ವನಿ ನುಡಿಸಿ
ರೋಗಕ್ಕೆ ಹೆದರಿ, ಸಾವಿಗೆ ಬೆದರಿ
ಮಧ್ಯರಾತ್ರಿ ದಿಗ್ಗನೆ ಎದ್ದು ನಡೆದುಬಿಡುವುದೆಂದರೆ
ಉದ್ದುದ್ದ, ಮಾರುದ್ದದ ಬೋಧನೆ ನೀಡದೇ
ಸದ್ದು ಮಾಡದೆ ಭೋಧಿಯಡಿಯಲ್ಲಿ ಸಿದ್ಧಿ ಪಡೆದು
ಸಿದ್ದಾರ್ಥನ ನಿರ್ವಾಣ ಮಾಡಿ
ಗೌತಮನ ನಿರ್ಮಾಣ ಹೊಂದುವುದೆಂದರೆ
ಕಡು ಕಷ್ಟವೇ ಅದು!!
ಬುದ್ಧನಾಗುವುದೆಂದರೆ ಬರೀ ವೇಷ ಹಾಕಿದಂತಲ್ಲ
ದಮ್ಮ ದೀಕ್ಷಾ ಪಡೆದು ಬೊಮ್ಮ ಆದಂತಲ್ಲ
ಓದಿ ಓದಿ ತಿದಿಗೊತ್ತಿಕೊಂಡಂತೆ ಅಲ್ಲವೇ ಅಲ್ಲ!
ಕಾದಿ ಕಾದಿ ಬಿಡುಗಡೆ ಪಡೆದಂತಲ್ಲ!
ಬುದ್ಧನಾಗುವುದೆಂದರೆ
ಸಿದ್ಧನಾಗುವುದು..!!
ಸಿದ್ಧನಾಗುವುದೆಂದರೆ ಶುದ್ಧನಾಗುವುದು..!!
ಅರಿವಿಲ್ಲದಂತೆ ಆಸೆ ತೊರೆಯಲು
ಬೆರಳು ಹಿಡಿವ ಬಂಧಗಳ ಮುರಿಯಲು
ಸಾವಿಗೆ ಸಾಸಿವೆ ಇಲ್ಲವೆನ್ನಲು
ಕೋವಿಗೆ ಪ್ರೀತಿ ಪಾರಿವಾಳ ಕಟ್ಟಲು
ನೋವಿಗೆ ಶಾಂತಿ ಮದ್ದೆನ್ನಲು
ಧರ್ಮ ಎಂದರೆ ಆಚರಣೆ ಅಲ್ಲ
ಅದು ಬದುಕಿನ ವಿಧಾನ ಎನ್ನಲು..!
ಜ್ಞಾನವೆಂದರೆ ಪಡೆಯುವುದಲ್ಲ
ನಿನ್ನೊಳಗೆ ಉದಯಿಸುವಂತದ್ದು ಎಂದು ಬೋಧಿಸಲು..
ಬುದ್ಧನಾಗಲು ಸಾಧ್ಯವಿಲ್ಲ
ಸಿದ್ಧನಾಗಲು ಸಾಧ್ಯವಿದೆ!!
ಸಿದ್ಧನಾಗಿ, ಶುದ್ಧವಾಗಿ ಎದ್ದು ನಿಂತರೆ
ಬುದ್ಧನಾಗದಿದ್ದರೂ ಕೊನೆಗೆ ಅವನ
ಪರಿಶುದ್ಧ ನಗುವಾಗಲು ಸಾಧ್ಯವಿದೆ!!
–ಸಾವನ್ ಕೆ
ಅಹವಾಲು
ಓ ಮನುಜ ನಿನಗೇ
ಏಕಿಷ್ಟು ಪ್ರಾಮುಖ್ಯ ?
ಇರಬಾರದೇನು
ನಾವುಗಳು ನಿನ್ನ ಸಖ್ಯ!
ಭೂಮಿಗೆ ನೀನೊಬ್ಬನೇ
ಹಕ್ಕುದಾರನೇನು ?
ಬದುಕಲು ನಮಗಾವ
ಅರ್ಹತೆಯು ಇಲ್ಲವೇನು !
ಬಟಾಬಯಲಾಗುವಂತೆ
ಕಾನನಗಳ ತರಿದೆ
ಕೊಳೆ ಕಸಗಳ ತಂದು
ಸಾಗರಕೆ ಸುರಿದೆ
ನೀರು ನೆರಳು ಆಹಾರಕೆ
ತತ್ವಾರವನು ತಂದೆ
ಊರೂರುಗಳ ಕಟ್ಟುತಾ
ಸಂಕುಲವನೇ ಸಂಹರಿಸಿದೆ
ನಿನ್ನ ಮೋಜಿಗೆ ನಮ್ಮ
ನೆಮ್ಮದಿಯ ಕಸಿದೆ
ಬೆದಕುತ್ತಾ ಖನಿಜಗಳ
ನೆಲದ ಒಡಲನು ಬಗೆದೆ
ಭಗವಂತ ಕೊಟ್ಟಿಹನು
ಒಂದಷ್ಟು ಅಧಿಕ ಬುದ್ದಿ
ಸರಿದಾರಿಯಲಿ ಅದನು ಬಳಸೆ
ಸಕಲ ಜೀವರಾಶಿಗೂ ಸಿದ್ಧಿ
ನೆಲ ಜಲ ಜೀವಿ ನಿರ್ಜೀವಿ
ಎಲ್ಲರೂ ಕಲೆತು ನಲಿಯುತಿರೆ
ಸರ್ವಾಂಗ ಸುಂದರಳು ಈ ತಿರೆ
ಸ್ವಾರ್ಥ ತೊರೆಯೋ ಅ-ಸುರ
ಸೆರಗೊಡ್ಡಿ ಬೇಡುವೆವು ನಿನ್ನ
ಒಸಕದಿರೆಮ್ಮ.. ನೂರು ನಮನ
ಸರಿಸಮರೆಂದು ಭಾವಿಸು ತಮ್ಮಾ
ನಗಲಿ ಸದಾ ಬುವಿಯೆಂಬ ಕುಸುಮ
-ಎಂ.ಡಿ.ಚಂದ್ರೇಗೌಡನಾರಮ್ನಳ್ಳಿ
ಪದಬಂಧ
ಮೂಲ: ಜಾವೇದ ಅಖ್ತರ್
ನಾವಿಬ್ಬರೂ ಬರೀ ಅಕ್ಷರಗಳಾಗಿದ್ದೆವು
ಒಂದು ದಿನ ನಾವು ಜೊತೆಯಾದೆವು
ಆಗ ಒಂದು ಪದ ಸೃಷ್ಟಿಯಾಯಿತು
ಮತ್ತು ನಾವು ಅರ್ಥ ಪಡೆದುಕೊಂಡೆವು
ನಂತರ ನಮ್ಮ ಮೇಲೆ ಅದೇನು ಗತಿಸಿತೋ
ಈಗ ಹೀಗಿದ್ದೀವಿ
ಖಾನೆಯೊಂದರಲ್ಲಿ
ನೀನು ಅಕ್ಷರ ಆಗಿರುವೆ
ಮತ್ತೊಂದು ಖಾನೆಯಲ್ಲಿ
ನಾನು ಅಕ್ಷರ ಆಗಿರುವೆ
ನಡುವೆ
ಎಷ್ಟೊಂದು ಕ್ಷಣಗಳ ಖಾನೆಗಳು ಖಾಲಿ ಇವೆ
ಮತ್ತೊಮ್ಮೆ ಒಂದು ಪದ ಸೃಷ್ಟಿಯಾಗಬೇಕಿದೆ
ಮತ್ತು ನಾವಿಬ್ಬರೂ ಅರ್ಥ ಪಡೆದುಕೊಳ್ಳಬೇಕಿದೆ
ಹೀಗಾಗಬಹುದು
ಆದರೆ
ಖಾಲಿ ಉಳಿದ ಖಾನೆಗಳಲ್ಲಿ
ಏನು ತುಂಬಬೇಕು ಯೋಚಿಸಬೇಕಿದೆ.
– ಅಶ್ಫಾಕ್ ಪೀರಜಾದೆ
ಅವಳ ನೆನಪು
ಹೆಜ್ಜೆ ಮೇಲೆ ಹೆಜ್ಜೆ ತುಳಿದು ಜೊತೆ ನಡೆದವಳು ನೀನು
ಬಯಕೆಗಳು, ಕನಸುಗಳು ಬತ್ತಿದವು ಇಂದು.
ನನ್ನ ಹೃದಯದ ಗೂಡಿನಲ್ಲಿ ಮನೆ ಮಾಡಿ
ಕೋಟಿ ಕನಸುಗಳು ಕೂಡಿ ಹಾಕಿ
ರೆಕ್ಕೆಯಿಲ್ಲದ ಹಕ್ಕಿಯಂತೆ ನನ್ನನ್ನು ಬಂಧಿಸಿದವಳು ನೀನು.
ಪ್ರೀತಿ ಗೂಡು ಗುಟ್ಟಾಗಿ ಉಳಿಯಲಿಲ್ಲ
ಜೊತೆ ಕಳೆದ ನೆನಪುಗಳು ಮಾಸಲಿಲ್ಲ
ಪ್ರೀತಿ ಗೂಡಲ್ಲಿ ನೀನೊಬ್ಬಳೇ ಸ್ವತಂತ್ರದ ಹಕ್ಕಿ
ಈ ಗೂಡಲ್ಲಿ ಪುಕ್ಕವಿಲ್ಲದ ಹಕ್ಕಿ ನಾನು.
ಅಂದು ಆಕಾಶದಲ್ಲಿ ಹಾರುವ ಎರಡು ಹಕ್ಕಿ ಕಂಡೆ..!
ಇಂದು ಭುವಿಯಲ್ಲಿ ನೀ ಇಲ್ಲದೆ ನಾ ಒಂಟಿ ಎಂದುಕೊಂಡೆ.
ಮಳೆಯಂತೆ ಕನಸುಗಳು ಸುರಿಯ ತೋಡಗಿದವು ಅಂದು
ಅವಳ ನೆನಪುಗಳು ದೂರ ಸಾಗಿದವು ಇಂದು…..
ಮರೆತು ಬಿಡಲೇ ಅವಳ ನೆನಪಿನ್ನೇಕೆ...
-ಮೂಗಪ್ಪ.ಸಿ ಮಾಲವಿ
ಮರೆತು ಬಿಡು ಮನವೆ ಅವಳ !!!
ಯಾಕೆ ಈ ನಿಟ್ಟುಸಿರು ಓ ಮನವೇ !
ನೋವ ಕುಲುಮೆಯಲಿ ಬೆಂದು
ತಲ್ಲಣಿಸಿ ಕಂಬನಿ ಮಿಡಿಯುವೆ
ಮರೆತು ಬಿಡು ಮನವೆ ಅವಳ !!
ಮಿಂಚು ಮೂಡಿ ಮರೆಯಾದಂತೆ
ಮುಂಜಾವಿನ ಇಬ್ಬನಿ ಕರಗಿದಂತೆ
ಅಂತರಂಗ ಪ್ರೀತಿ ಅಳಿದು ಹೋಗಿದೆ
ಮರೆತು ಬಿಡು ಮನವೆ ಅವಳ !!
ಅಂದು ಭಾವ ಬಂದನದಿ ಬೆಸೆದು
ನೀನಿರದೆ ಇರಲಾರೆನು ಎಂದ್ಹೇಳಿ
ಇಂದು ನಿರ್ಭಾವ ತೋರಿ ದೂರಾದ
ಅವಳ ಮರೆತು ಬಿಡು ಮನವೆ !!
ಪ್ರೀತಿ ಕಡಲ ನಡುವೆ ತೊರೆದು
ಬಾಳ ಯಾನದಿ ಒಂಟಿಯಾಗಿಸಿ
ಭಗ್ನ ಪ್ರೇಮಿ ಮಾಡಿ ಹೊರಟ
ಅವಳ ಮರೆತು ಬಿಡು ಮನವೆ !!
ಒಲವ ತುತ್ತ ಉಣ ಬಡಿಸಿ
ಬಾಹು ಬಂಧನದಲಿ ಬಿಗಿದಪ್ಪಿ
ಪಾಷಾಣ ಕೈಗಳಿಂದ ಹೊರದಬ್ಬಿದ
ಅವಳ ಮರೆತು ಬಿಡು ಮನವೆ !!
ಮಾತುಗಳಲಿ ಜೀವಕ್ಕೆ ಜೀವವಾದ
ತೋರಿಕೆಗೆ ಸಾಂಗತ್ಯವ ನೀಡಿದ
ಭ್ರಮೆಯ ಬಲೆಯಲಿ ನಿನ್ನ ದೂಡಿದ
ಅವಳ ಮರೆತು ಬಿಡು ಮನವೆ !!
-ಆದಿತ್ಯಾ ಮೈಸೂರು