ಮೊದಲ ಸಾಲಿನ ಹುಡುಗಿ
ಸರಿಗಮಪದ ಹಿಡಿದು ತಂತಿಯ ಮೇಲೆ
ಹರಿಸಿ ಉಕ್ಕಿಸುವ ಆಲಾಪದಮಲು
ಎದೆಗೆ ಅಪ್ಪದ ಸಿತಾರಿನ ಮೇಲೆ
ಸರಿವ ಅವನ ಸಪೂರ ಬೆರಳುಗಳು
ಅವಸರದಲ್ಲಿ ತುಡಿವ ಸರಸದಂತೆ
ಏನೊ ಮುಚ್ಚಿಟ್ಟ ಗುಟ್ಟುಬಿಚ್ಚಿ ಕಿವಿಗೆ
ಪಿಸುಗುಟ್ಟುತ್ತಿರುವಂತೆ ಅವನ ತೆಳು
ತೆರೆದು ಮುಚ್ಚುವ ಎಸಳ ತುಟಿಗಳು
ಉದ್ದ ಕೂದಲ ಸರಿಸಿ ಹಿಂದಕ್ಕೊಗೆವ
ಠೀವಿಯ ಹೊಳಪಿನ ಭಾವ ಮುಖ
ಮುಚ್ಚಿಬಿಡುವ ದಟ್ಟ ಕಪ್ಪು ಕಣ್ಣುಗಳು
ಕಣ್ಣುಮುಚ್ಚಾಲೆಯಲ್ಲಿ ರಾಗದೆಳೆಗಳು
ಆಲಾಪಕ್ಕೆ ತಲೆದೂಗುವ ಒಳ ಆಸೆಗಳು
ತಾಳ ಲೆಕ್ಕಕ್ಕೆ ಪಕ್ಕಾಗದ ಹಸ್ತ ವ್ಯಸ್ತಗಳು
ಎಣಿಕೆ ತಪ್ಪುತ್ತಿರುವುದು ಅವನ ಹುಸಿನಗು
ವಿಗೆ ಕಾರಣವೆಂಬ ಸಣ್ಣ ಗುಮಾನಿಯೂ
ಕಣ್ಣರಳಿಸಿ ಮತ್ತವನ ಕಡೆಗೆ ತದೇಕ
ಶೆರ್ಲಾಕ್ ಹೋಮ್ಸನು ನಿಗೂಢದ
ಹಿಂದೆ ಬಿದ್ದಂತೆ ಸಂಶಯದ ಪಾತ್ರ
ಅವನ ಒರಟು ಬಾಹುಗಳ ನೋಟ
ತಬಲದೋಘ ಹಾರ್ಮೋನಿಯಮಿನಾರ್ತ್ರತೆ
ತಾನಪೂರದ ನಿರ್ಲಿಪ್ತತೆಯೊಳಗಣ ಆಪ್ತತೆ
ಕಾಪಿಟ್ಟ ಪ್ರೇಮ ತತ್ತಿಯಲ್ಲಿಣುಕಿದ ಜೀವ ಪರಿವೆ
ನೇವರಿಕೆಗೆ ಝೇಂಕರಿಸುವ ಸಿತಾರ ಸರಿಗೆ
ತಾರಕದಲ್ಲಿ ಕಛೇರಿ ಮುಗಿಸುವ ಕಾತರ
ಅವನೊಡನೆ ಸಾಥಿಗಳ ಉತ್ಕಟ ಪಾತ
ಸರಿದ ಸೀರೆಯ ಪಲ್ಲು ಒಪ್ಪವಿರಲೆಂಬ ಆಸೆ
ಲಾಸ್ಯ ಹಸ್ತಗಳಲ್ಲಿ ಪಲ್ಲವಿಸಿದ ಭರವಸೆ
ಮುಂಜಾವು ಕಿಟಕಿ ಬಳಿಯ ಗುಲಾಬಿ ಮೊಗ್ಗು
ಈಗ ಅರಳಿರಬಹುದೆನ್ನುವ ಅಚಾನಕ ಹಿಗ್ಗು
ಅವನ ಸಮೀಪ ನಿಲ್ಲುವ ತವಕ ಚಡಪಡಿಕೆ
ಓರಣಿಸುವ ಸೆರಗಲ್ಲು ಸಿತಾರ ರಾಗ ಬಯಕೆ
– ಅನಂತ ರಮೇಶ್
ಪ್ರತೀಕ್ಷೆ
ಯಾವ ದಾರಿಯ ಮೇಲೆ ನೆಟ್ಟಿವೆ
ಕಣ್ಣುಗಳು ಉಸಿರು ಬಿಗಿಹಿಡಿದಿಟ್ಟಿವೆ
ಪಹರೆ ಕಾಯುತ್ತಿವೆ ರೆಪ್ಪೆಗಳು
ಕೊಕ್ಕೆ ಹಾಕಿಕೊಂಡಿವೆ
ಅವನ ಚಿತ್ರದ ಚೌಕಟ್ಟಿಗೆ
ಆತುಕೊಂಡಿವೆ ಬೆಳಕಿಗೆ
ಮಿಣ್ಣಗೆ ಮಿಡುಕಿದರೂ
ಜಾರಿ ಹೋಗುವ
ಒಡೆದು ಚೂರಾಗುವ
ಭಯದೊಳಗೆ
ಒಂಟಿಕಾಲಿನ ಜಾಗರಣೆ
‘ಹುತ್ತಗಟ್ಟಿದ ಚಿತ್ತ’ ದೊಳಗೆ
ಕಾಡ ಹಾದಿಯ ಹಿಡಿದು
‘ಭೃಂಗದ ಬೆನ್ನೇರಿ’
ಹಾರಿ ಹೋಗಿದೆ ಮನ
ಹೂ ಹೂಗಳ ಹಿಂದೆ
‘ಗಾಳಿ ಗಿರಕ್ಕೆಂದ ಕಡೆ’
ಕಿವಿ ನಿಮಿರಿ
ಸದ್ದು ಬಯಲಾಗಿದೆ
ದೂರದ ಬೆಟ್ಟವೇ ಕೈಕಾಲುಗೊಂಡು
ಬಳಿ ಬಂದು
ನುಣ್ಣಗೆ ಮುತ್ತಿಟ್ಟಿದೆ ಗಲ್ಲಕೆ…..
ಭ್ರಾಂತಿ ಹರಿಯದು
ದಡ ಹರಿದು
ಮಡು ಹರಿ ಹರಿದು
ಹರಿವು ನಿಲ್ಲದು
ಕಾಯುವುದು ತಪವೆಂದರು
ಬೇಯುವುದೇನು
ಕಾಮರೂಪಿಯಲ್ಲ
ಬಯಕೆಗಳಿದ್ದರೂ
‘ಬಿನ್ನಹಕೆ ಬಾಯಿಲ್ಲ’
ಉಪ್ಪು ಹುಳಿ ರಸಾಯನದ
ಸಚೇತ
ಈ ಕಾಯ
ಕರಗುವ ಮುನ್ನ
ಕಳವಳ
ನಿಃಕಾಯ
ನೀ ಕಾಯಗೊಂಡು ನಿಲ್ಲೋ…….
•ಗಿರಿಜಾಶಾಸ್ತ್ರಿ, ಮುಂಬಯಿ
ನಮ್ಮೀ ಪ್ರೀತಿಯ ಮೇಲಾಣೆ..
ನೀನಿಲ್ಲದ ಒಂದು ಕ್ಷಣ
ಪ್ರೀತಿ ಅಮರಿ ಕೂತು
ಮನಸಿನ ಕಾಗುಣಿತ ಏರು ಪೇರು
ಕವನ ಅಣಿಯಲು ಪದಗಳೇಕೊ ಕಾಟು
ಮನಸು ಹಿಂಡುವ ನೋವಿಗೆ
ತಡೆದುಕೊಳ್ಳುವ ಶಕ್ತಿ ನನಗಿಲ್ಲ
ಉಮ್ಮಳಿಸಿ ಬರುವ ಅಳುವಿಗೆ
ತಡೆಗೋಡೆ ನಿರ್ಮಿಸಲು
ದೇಹ ಮತ್ತು ಮನಸು ಅಣುವಿನಷ್ಟಾಗುತಿದೆ
ನಾನಿರಬೇಕು ಸದಾ ನಿನ್ನ ಜೊತೆ
ನೋಡುತಿರಬೇಕು ನಿನ್ನ ಮುಖ ನಾನು
ನನ್ನ ಮುಖ ನೀನು
ಕಣ್ಣುಗಳಲಿ ಅರಳಿದ ಭಾವನೆಗಳು
ಗಾಯ ಮಾಡಿಕೊಳ್ಳುವುದ ತಡೆದು
ಎತ್ತಿ ಮುದ್ದಾಡುವ ಖುಷಿಯ ಕಣ್ತುಂಬಿಕೊಳ್ಳಬೇಕು
ನೀನು ರೇಗಿದರೂ,ನನ್ನ ಮೇಲೆ
ನೀನು ಸದಾ ನನಗೆ ಮಗುವಾಗಿ ಕಾಣುತ್ತೀಯ
ಕೋಪ ತಮಣೆಗೊಳಿಸಿ
ಮುದುರಿ ಮಲಗಿಸಿ,ಕೌದಿ ಹೊದಿಸಿ ತಟ್ಟುತ್ತೀಯ
ಅವತ್ತು,ನಿನ್ನ ಬಸ್ಸಿಗೆ ಹತ್ತಿಸಿ
ನನಗೆ ನಾನೇ ಕಾಣದಷ್ಟು ಕಣ್ಣಲ್ಲಿ ನೀರು
ತಲೆ ಕರೆದು ಮುಖ ತೀಡಿಕೊಂಡು
ಕಣ್ಣ ರೆಪ್ಪೆ ಪಿಳ ಪಿಳನೆ ಆಡಿಸಿದೆ
ನೀರ ಒಳ ನುಗ್ಗಿಸಲು
ಅಬ್ಬಾ! ಇಷ್ಟು ಗಾತ್ರದ ದೇಹ ಮನಸಿಗೆ ಶರಣು
ಪ್ರೀತಿಗೆ ನೈಜತೆಯ ಹಂಗು ಗೊತ್ತಿಲ್ಲ
ನಾನಿರಬೇಕಷ್ಟೆ ನಿನ್ನ ಜತೆ
ಹಣವನ್ನು ಚೂರು ಚೂರು ಮಾಡುವ
ನಮ್ಮೀ ಪ್ರೀತಿಯ ಮೇಲಾಣೆ
ಇನ್ನೆಂದೂ ಒಬ್ಬಳನೆ ಕಳುಹಿಸುವುದಿಲ್ಲ ಎಲ್ಲಿಗೂ
ಎಂದಿಗೂ..
ಬಿದಲೋಟಿ ರಂಗನಾಥ್
ಈ ಬದುಕು ಹೀಗೂ ಉಂಟಾ?
ಕಣ್ಣಂಚಲಿ ಮಳೆಹನಿ
ತುಟಿ ಮೇಲೆ ಕಾಮನಬಿಲ್ಲು
ನೆನಪುಗಳ ನೆರೆಹಾವಳಿ
ತೋಳಲ್ಲಿ ತೋಳ ಬೆಸೆದು
ಹೆಜ್ಜೆಗೆ ಹೆಜ್ಜೆ ಸೇರಿಸುವ ನಿನ್ನ
ಆಣೆ ಪ್ರಮಾಣ ನನ್ನ
ಒಂಟಿತನವನ್ನು ಹಂಗಿಸಿದೆ
ಅಕ್ಕಿಯಲ್ಲಿ ಕಲ್ಲು ಹುಡುಕುವುದಕ್ಕೂ
ಮೊಸರಿನಲ್ಲಿ ಕಲ್ಲು ಹುಡುಕುವುದಕ್ಕೂ
ವ್ಯತ್ಯಾಸವಿದೆ
ನನ್ನೊಳಗಿನ ನಿನ್ನ ಹುಡುಕಾಟ
ಎಂಥದ್ದು, ಹೇಳು.
–ಆಶಾ ಜಗದೀಶ್
ನೀನಿಲ್ಲದೆ. …
ನನ್ನ ಕನಸಿಗೊಂದು ಕನಸಿದೆ
ನನ್ನ ಮನಸಿಗೊಂದು ಮನಸ್ಸಿದೆ
ಆ ಕನಸು-ಮನಸು ಎರಡೂ
ನಾನಾಗ ಬೇಕೆಂಬ ಹಂಬಲವಷ್ಟೇ
ಈ ಮನಸ್ಸಿಗೆ…
ಏನ ಬೇಡುವುದಿಲ್ಲ
ಆಗ್ಗಾಗ ನೋಡಿ ಕ್ಷೇಮ ಕೇಳಿದರೆ ಸಾಕು
ಆ ಪ್ರೀತಿಗೆ ತಲೆಬಾಗಿ
ಬಾಕಿ ಜೀವನವೆಲ್ಲ ನಿನಪಲೆ ಕಳೆವೆ
ಇಂದು ನೀನಿಲ್ಲ,ಬರುವ ಸೂಚನೆಯೂ ಇಲ್ಲ
ಬರುವ ನಿರೀಕ್ಷೆಯಷ್ಟೆ ಈ ಕಣ್ಣಿಗೆ, ಕಣ್ಮನಸಿಗೆ…
ನೀ ಬಾರದಿದ್ದಲ್ಲಿ,ನೊಂದ ಮನಕೆ-
ಸಾವು ಕರೆಯುತಿರೆ ನೋಡಾ
ಈ ಜೀವ ಇದ್ದು ಸತ್ತಂತೆ ಕೇಳಾ…
ಬಾರದ ಮಳೆಗೆ ಕಾದು
ಕೂರೋದೆ ಪ್ರೀತಿ ಇರಬೇಕು.
ಆ ಮಳೆಗೆ ಕಾದು ಕೂತ
ಹುಚ್ಚುಬಡುಕ ನಾನು
-ಪುನೀತ್
ಒಂದು ಬೆಳಗಲ್ಲಿ
ನಿನ್ನ ಕಿರೀಟಗಳಿಗೆ ಅಂಟಿಸಿದ
ವಜ್ರಗಳು ಇಲ್ಲವಾಗುತ್ತವೆ!
ಕೂತ ಸಿಂಹಾಸನದ ಕಾಲುಗಳಿಗೆ
ಗೆದ್ದಲು ಹಿಡಿಯುತ್ತದೆ
ನಿನ್ನರಮನೆಯ ಬುನಾದಿ ಕುಸಿದುಬೀಳುತ್ತದೆ
ನಿನ್ನ ಅಂತ:ಪುರದ ರಾಣಿಯರು
ಅವರ ದಾಸಿಯರು
ಕಾವಲಿನ ಸೇವಕರ ಜೊತೆ ಓಡಿಹೋಗುತ್ತಾರೆ
ನೀನಾಳಿದ
ನರಸತ್ತ ನಾಮರ್ದ ಪ್ರಜೆಗಳೆಲ್ಲ
ವೀರ್ಯವತ್ತರಾಗಿ
ಹೊಸ ಸೂರ್ಯನ ಹುಟ್ಟಿಸುತ್ತಾರೆ!
ಬಂಜರು ಭೂಮಿಯಲ್ಲೂ ಹೂತೋಟ ಬೆಳೆಸುತ್ತಾರೆ
ಇರುಳ ಬಣ್ಣಗಳನೆಲ್ಲ ಅಳಿಸಿ
ಹಗಲಿನ ಹೊಸಬಣ್ಣ ಬಳಿಯುತ್ತಾರೆ
ನಿನ್ನ ಶಸ್ತ್ರಾಗಾರದ ಆಯುಧಗಳನ್ನೆಲ್ಲ
ಕಡಲಿಗೆಸೆದು
ಅಲ್ಲಿ ವೀಣೆ ತಂಬೂರಿಗಳನ್ನಿಡುತ್ತಾರೆ
ನಿನ್ನೆಲ್ಲ ವಿಜಯಗಳ ಸಂಕೇತವಾಗಿ ಕಟ್ಟಿಸಿದ ಸ್ಥಾವರಗಳನ್ನೆಲ್ಲ
ಕೆಡವಿ
ಮಕ್ಕಳಿಗೆ ಹಾಲು ನೀಡುವ ಕಾಮಧೇನುವನಲ್ಲಿ ಕಟ್ಟುತ್ತಾರೆ
ಸುಮ್ಮನೇ ಶರಣಾಗಿ ಬಿಡು
ಬಡಿದಾಡಿ ಹೈರಾಣಾಗಬೇಡ!
-ಕು.ಸ.ಮಧುಸೂದನ ರಂಗೇನಹಳ್ಳಿ
ಜನನ ಮರಣ
ಅದೆಷ್ಟೋ ದೇವರ ವ್ರತಗಳ ಮಾಡಿ
ಹರಕೆಯ ಹೊತ್ತು
ಅರಳೀಮರವ ಸುತ್ತಿ
ದೇವರ ಕೃಪೆಗೆ ಪಾತ್ರರಾಗಿ
ಒಂಭತ್ತು ತಿಂಗಳು ಹೊತ್ತು
ಒಡಲಾಳದಲಿ ಒಲವ ತುಂಬಿ
ಜನ್ಮ ಭೂಮಿಗೆ
ಜನನಿ ಕೊಡುವ
ಜೀವಂತ ಜೀವ
ಹೆತ್ತವರ ನಯನದಲ್ಲಿ
ಆನಂದ ಭಾಷ್ಪ ತರುವ
ಜೀವಿಯ ಮೊದಲ ಕಾಲಘಟ್ಟ … ಜನನ.
ಯಾವುದೋ ಮಾಯೆಯಿಂದ
ವಯಸ್ಸಿನ ಮಿತಿಯೇ ಇಲ್ಲದೇ
ಎಲ್ಲೆಂದರೆಲ್ಲಿ ಹೇಗೆಂದರೆ ಹಾಗೆ
ಉಸಿರನ್ನೇ ತೊರೆದು
ತನ್ನವರನ್ನೆಲ್ಲಾ ಬಿಟ್ಟು
ಇಹಲೋಕವ ತ್ಯಜಿಸಿ
ನೆನಪಲ್ಲಿ ಬರೀ ನೆಪವಾಗಿ
ವ್ಯಕ್ತಿಯೊಂದು ವಸ್ತುವಾಗಿ
ತನ್ನವರಿಗೆಲ್ಲಾ ಆ ನೊಂದ ಭಾಷ್ಪ ಕೊಟ್ಟು
ಚಿರನಿದ್ರೆಗೆ ಜಾರುವ
ಜೀವಿಯ ಅಂತಿಮ ಕಾಲಘಟ್ಟ … ಮರಣ.
-ರಘು. ಕ.ಲ.
ಕತ್ತಲ ಜೋಳಿಗೆಯಲಿ ಕೈತಾಗದ ಬೆಳಕರಕ್ತ
ಮೆತ್ತಿದೆ ಬೆಳಕಾತ್ಮದ ಅವನೊಳಗೆ
ಎಷ್ಟುರಕ್ತದ ಹೊಳೆ ಅರಿಯಿತೋ?
ಬಲ್ಲವರಿಲ್ಲ
ದಶ-ದಶಮಾನಗಳಿಂದಲೂ
ಮುಸುಕು-ಮುಸುಕು
ನೆರಳಿನ
ತಣ್ಣನೆಯ ಕಗ್ಗೊಲೆ ನೆತ್ತರು
ಚೆಲ್ಲುತ್ತದೆ ನೀಲಿತೆರೆಯೊಳಗೆ
ಬಿದ್ದರೂ ಕೆಂಪಾಗುವಂತಿಲ್ಲ
ಅವನ ಕತ್ತಲಲಿ
ಉದಯಿಸುವ ಅಕ್ಷರ
ಸಾಹಿತ್ಯ ಕಿನಾರೆಯಲಿ
ಹವಣಿಸುವನು ಮಿನುಗಲು
ಎಂತಹ ಚತುರನೋ?
ಚದುರಂಗ ಪಾರಾಂಗತನೋ?
ಬೆಂಕಿಯಲಿ ಸೇರಲು
ತವಕಿಸುವನು ಪ್ರತಿಯೊಳಗೆ
ಅದ್ಯಾತ್ಮ ಪ್ರರ್ವತಕನಂತೆ
ವಿದ್ವಾಂಸರ ಜಗತ್ತಿಗೆಲ್ಲ ಇವ ಪರಿಚಯ
ಕತ್ತಲ ಗೂಡಿನೊಳಗೆ
ಬೆಳಕಿನ ಹಂಬಲ
ನಕ್ಷತ್ರವಾಗಲು
ಎಲ್ಲಾವನು ಸುಟ್ಟುಬಿಟ್ಟ
ಯಾವ ಕುರುಹುಗಳಿಲ್ಲದಂತೆ
ಇವನಿಲ್ಲಿ
ಧ್ರುವತಾರೆಯಂತೆ ಮಿನುಗುತ್ತಾನೆ
ಇವನ ಮನನದೊಳಗೆ
ಕಾಡುತ್ತದೆ ಸಾವಿನ ಭಯ
ಅವನ ಚದುರಂಗ ಸೇನೆಯ
ಕಾವಲು ಪಡೆಗಳು
ಶ್ವೇತ ವಸ್ತ್ರಗಳ ಧರಿಸಿ
ಕೋಟೆ ಸುತ್ತಲು ಗರುಡ ಪಟಲು
ಅವನ ನಡುವಲ್ಲಿ ಒಂದು ಶಾರ್ಪಗನ್
ಮತ್ತೆ ಪುಸಕ್ತದ ತಂಪು ಇಬ್ಬನಿಯಲಿ ಮೀಯುತ್ತಾನೆ
ಕುಡಿಯುವನು ಕುಡಿಯುವನು
ಅದೇ ಮುಬ್ಬು ಸಂಜೆಗೆ
ಭಂಗಿ ಸೇದುವನು ಹಿಮಾಲಯ ಸಾಧುಗಳಂತೆ
ಸೂಫಿ-ಸಂತರೆಂದರೆ ಏನೋ ಕುತೂಹಲ
ಅದೆಷ್ಟೋ ಸಂಶೋದನೆ
ಪುಸ್ತಕಗಳ ಬರೆದನು
ಆದರೂ ಆಚೆ-ಇಚೆ ವಿಶಾಲದಿ
ಅಲ್ಲಿ ಅರ್ಥವಾಗದ ಮಾಂತ್ರಿಕನಾಗುತ್ತಾನೆ
ಅದೇ ಬೆಳಕಿನ ಬುದ್ದನ
ಬರಹದೊಳಗೆ ಆವರಿಸುತ್ತಾನೆ
ತಂಪು ಋತು-ಋತುಗಳ ಕಾದು
ತನ್ಮಯವೆಲ್ಲೆ ಎಚ್ಚರವಾಗಿ
ಹೊಡೆಯುತ್ತಾನೆ ಅದೇ ಚೆಸ್ ಆಟದಂತೆ
ಅಲ್ಲಿ ಕಾಬಾಮಂತ್ರಿ ಆಪ್ತ ಸಲಹೆ
ಕತ್ತಲ ಮಹಾಜೋಳಿಗೆ ಕಾಯಕ
ಸಿಂಗಲ್ ವೇ
ಸಾಮ್ರಾಟನಾಗಿ ಮೆರೆಯುತ್ತಿಹನೆ
ಈಗಲೂ ಶೋದಿಸುತ್ತಿದ್ದಾನೆ
ಕಾವಲುಹಾದಿಯ ಹುಡುಕುತ್ತಿಹನೆ
ಹಪಹಪಿಸಿ ಮತ್ತೆ ಎಚ್ಚರದಿ
ಅಂತರ್ಮುಖಿಯಾಗುತ್ತಾನೆ
ಒಂದೇ ದಾರಿಯಲಿ ವಾಪಸ್ಸು ಬರಲು
ತೀರದ ಹಿಂಸೆ ತಾಳುತ್ತಾನೆ
ಮತ್ತೆ ಅವ ಬೆಳ್ಳಿ ಆಕಾಶಕೆ ಜಿಗಿಯುತ್ತಾನೆ
ಅದೇ ಅಕ್ಷರದ ಬೆಂಕಿಯಲಿ ಬಿದ್ದು ಕುದ್ದು
ಶಾಂತನೇಯ ಅರಿವನು ಜಗಕ್ಕೆ ಉಣಬಡಿಸುತ್ತಾನೆ
ಅದೇ ಕತ್ತಲಗುಪ್ಪೆಯಲಿ ಒಳಗೊಳಗೆ ನಡುಗುತ್ತಾನೆ
ನೆರಳಿನ ಕತ್ತಲ-ಬೆಳಕಾಟದ ದಿನ
ಚಕ್ರದೊಳಗೆ ಅರಿವ ಬಾಳ ಕಳೆಯುತ್ತಿಹನೆ
ಅವನೇ ಗೆಲ್ಲುತ್ತಾನೆ
ಆದರೆ ಸಾವು ಮಾತ್ರ ಮತ್ತೆ-ಮತ್ತೆ ತಟ್ಟುತ್ತದೆ
ಆತನ ಚಟಗಳಂತೆ
ಕಾಡಿ-ಕಾಡಿ ಹೈರಾಣಮಾಡುತ್ತದೆ ಕತ್ತಲಲಿ
ಓಶೋ ಆವರಿಸಿ
ಮಹಾಚಿಲುಮೆಯ ಜೋಶಲಿ ಕುಣಿಯುತ್ತಾನೆ
ಮಹಾಕತ್ತಲ ಕಮನೀಯತೆ ಸವಿಯುತ್ತ
ಮುಳುಗುತ್ತಾನೆ ಕಪ್ಪುಶರಧಿಯ ಹಿನ್ನೀರ ಕೊಳದೊಳಗೆ
ಕತ್ತಲ ಜೋಳಿಗೆಗೆ ಕೈಹಾಕುತ್ತಾನೆ ನಡುಕದಲಿ
ಅತಿ ಎಚ್ಚರದೊಳಗೆ
ಹಸಿ-ಹಸಿಯಾಗಿ ಜೀವಕೊಂದುದ
ಕಾಲಚಕ್ರಕೆ ಕೈತಾಗದಂತೆ
ಅದೇ ವಿಶ್ವದೆದುರು ಬೆಳ್ದಿಂಗಳಲಿ ಬೆಳಕಾಗುತ್ತಾನೆ !!?
* ಸಿಪಿಲೆನಂದಿನಿ
"ಸಂಗೀತ ಶಿಖರ ಶ್ರೀ ಪದ್ಮನಾಭ"
**********************
ಧರಣಿ ಮಂಡಲ ಮಧ್ಯದೊಳಗೆ
ಹರಿಯುತಿಹ ಕಾವೇರಿ ತೀರದೊಳ್
ಇರುವ ರುದ್ರ ಪಟ್ಟಣದ
ಧೃವತಾರೆ ಚರಿತೆಯ ಪೇಳ್ವೆನು ||1||
ಮಹಾಸಾದ್ವಿ ಶಾರದಮ್ಮ
ಪಂಡಿತೋತ್ತಮ ಕೃಷ್ಣಶಾಸ್ತ್ರಿ
ಉದರದೊಳ್ ಉದಯಿಸಿದ ಚೇತನ
ಗಾನಶ್ರೀ ಪದ್ಮನಾಭರು ||2||
ಹಸಿರು ಸಿರಿಯ ಮಡಿಲಿನಲ್ಲಿ
ಸಂಗೀತದುಸಿರಿನ ಸಂಗಮದಲ್ಲಿ
ವಿದ್ವಾನ್ ಮಣಿಗಳ ಒಡನಾಟದಿ
ಗಾನ ಕೋಗಿಲೆಯಾದರು ||3||
ಸಂಗೀತ ಗುರು ನಂಜುಂಡ ಸ್ವಾಮಿ
ವಿದ್ವಾನ್ ಸೀತಾರಾಮ ಶಾಸ್ತ್ರೀ
ಗರಡಿಯಲಿ ಸಂಗೀತ ಜ್ಞಾನವ
ಸತತ ಸಾಧಿಸಿ ಪಡೆದರು ||4||
ವಾದಿರಾಜ ಗುರುವರೇಣ್ಯರ
ಅಪ್ರತಿಮ ಗುರು ಕಾರುಣ್ಯದಿ
ವಾಗ್ದೇವಿಯ ವರವ ಪಡೆದು
ಗಾನ ಭೂಷಣರಾದರು ||5||
ಬಹುಮುಖ ಪ್ರತಿಭಾವಂತಿಕೆ
ಸಂಗೀತ ಕೃಷಿಯ ವಿಶೇಷ ಸ್ವಂತಿಕೆ
ದಣಿವು ಅರಿಯದ ಹಾಡುಗಾರಿಕೆ
ಪದ್ಮನಾಭರ ಹಿರಿಮೆಯು ||6||
ಅತ್ಯುತ್ತಮ ಸಂಘಟನೆ ಶಕ್ತಿ
ಗಾನ ಪ್ರಿಯರೇ ಇವರ ಸ್ಫೂರ್ತಿ
ವಿಶ್ವದೆಲ್ಲೆಡೆ ಇವರ ಕೀರ್ತಿ
ಹರಡಿ ಖ್ಯಾತಿಯ ನೀಡಿದೆ ||7||
ದೀರ್ಘ ಅವಧಿಯ ಕಛೇರಿಗಳ
ನಡೆಸಿ ದಾಖಲೆ ಬರೆದ ಇವರ
ಶಾರೀರವದು ಶಾರದಾ ಸುತ
ಎಂಬುದನು ದೃಢಪಡಿಸಿದೆ ||8||
ಮಾತುಗಾರಿಕೆ ಮೃದು ಮಧುರ
ಹಾಡುಗಾರಿಕೆ ವೀಣೆಯ ಸ್ವರ
ನಟನೆಯಲ್ಲಿಯು ಇವರು ಚತುರ
ಸಾಧನೆಯ ಈ ಗೋಪುರ ||9||
ಗಾನ ವಾರಿಧಿ ಕಲಾ ಭೂಷಣ
ಸಂಗೀತದ ಸಾಮ್ರಾಟರಾಗಿ
ಹೆಸರು ಪಡೆದ ಪದ್ಮನಾಭರ
ಕಲಾ ಸೇವೆ ಅಜರಾಮರ ||10||
ಹುಟ್ಟಿದೂರಿನ ಋಣವ ತೀರಿಸೆ
ಸಪ್ತ ಸ್ವರ ದೇಗುಲವ ಕಟ್ಟಿಸೆ
ಪ್ರವಾಸಿಗರ ಕ್ಷೇತ್ರವಾಗಿದೆ
ರುದ್ರ ಪಟ್ಟಣ ಗ್ರಾಮವು ||11||
ಶಿಷ್ಯ ಕೋಟಿಯ ಸೃಷ್ಟಿ ಮಾಡಿ
ಸಿದ್ಧಿಸಿದ ಕಲೆ ದಾನ ನೀಡಿ
ಶಾಸ್ತ್ರೀಯ ಸಂಗೀತವ
ಬೆಳೆಸಿ ಉಳಿಸುತಲಿರುವರು ||12||
ಕನಕ ಪುರಂದರ ವಾದಿರಾಜರ
ಕೃಷ್ಣಾಶಾಸ್ತ್ರಿ ತ್ಯಾಗರಾಜರ
ಮುತ್ತುಸ್ವಾಮಿ ದೀಕ್ಷಿತರ
ಪೂರ್ಣ ಅನುಗ್ರಹದಾತರು ||13||
ವರುಷಕೊಮ್ಮೆ ಹಮ್ಮಿಕೊಳ್ಳುವ
ವಿದ್ವನ್ಮಣಿಗಳ ಸಂಗೀತೋತ್ಸವ
ನಾಡಿನೆಲ್ಲೆಡೆ ಪಸರಿಸುವುದು
ಸ್ವರ ಸಂಭ್ರಮದನುಭವ ||14||
ಇಂತಿರ್ಪ ಪದ್ಮನಾಭರು
ನಾಡಿನ ಪ್ರತಿ ಗ್ರಾಮದಲ್ಲು
ಜನಿಸಿ ಸಾಧನೆ ಪ್ರಭೆಯ ಬೆಳಗಿಸ-
ಲೆಂಬುದೆ ನನ್ನ ಹರಕೆಯು ||15||
"ಸಾಧನೆಗೆ ಅಸಾಧ್ಯವಾದುದು
ಇಲ್ಲ ಜಗದಲಿ ತಿಳಿಯಿರಿ"
-ಹೊರಾ.ಪರಮೇಶ್ ಹೊಡೇನೂರು
ಪುಸ್ತಕ ಮತ್ತು ನಾನು
******************
ಪುಟದ ತುದಿಯನು ಮಡಿಸಿಟ್ಟಿದ್ದೆ
ಮತ್ತೆಂದೋ ಓದಲು ಗುರುತಿಗಾಗಿ.
ಮತ್ತೆ ಅದರ ವಿಷಯವೇ ಮರೆತಿದ್ದೆ
ಓದಿನಲ್ಲೇ ಆಸಕ್ತಿ ಕಡಿಮೆಯಾಗಿ.
ಇಂದು ಪುಸ್ತಕ ಮತ್ತೆ ಸೆಳೆಯಿತು, ಪುನಹ
ನನ್ನ ಕರೆಯಿತು ಮಡಿಸಿಟ್ಟ ಪುಟವು.
ಈ ದಿನ ಕೆಲಸ ನೂರಿತ್ತು, ಆದರೂ ಸಹ
ತೆರೆದೆನು ಪುಸ್ತಕ, ಹಾಗಿತ್ತು ಓದಿನ ಒಲವು.
ಪುಸ್ತಕವೂ ಹಳೆಯದಾಗಿತ್ತು, ಹಳಬ
ನಾನೂ ಕೂಡ. ಅಳಿಸಿದ ಅಕ್ಷರ ಅಲ್ಲಲ್ಲಿ,
ಪುಸ್ತಕ ಪುಸ್ತಕವಾಗುಳಿದಿಲ್ಲ. ಹೊಸಬ
ನಾನು ಪುಸ್ತಕಕ್ಕೆ, ನಾನೂ ನಾನಾಗುಳಿದಿಲ್ಲ.
ಈ ಪುಸ್ತಕ ಹಿಂದೊಮ್ಮೆ ತೆರೆದಾಗ ನಾನು
ಬೇರೆಯವನೇ ಆಗಿದ್ದೆ. ಇಂದು ಪುಸ್ತಕ
ನನ್ನ ಒಪ್ಪಲಿಲ್ಲ,ಅಂದು ಕಾಣಿಸಿತ್ತು ಹೊಸ ಬಾನು,
ಅಲ್ಲಿ ನಕ್ಷತ್ರ, ಇಂದು ಕಾಣಲಿಲ್ಲ ಅಂದು ಕಂಡ ಲೋಕ
ಆ ದಿನ ಪುಟ ಮಡಿಸುವ ಮೊದಲು
ಆ ಪುಟವನ್ನಾದರೂ ನಾನು ಓದಬೇಕಿತ್ತು.
ಅಥವಾ ಪುಟ ಮಡಿಸುವ ಬದಲು
ನಾನು ಪುಸ್ತಕವ ಓದಿ ಮುಗಿಸಬೇಕಿತ್ತು.
-ಕಿರಣ್ ಕುಮಾರ್ ಕೆ. ಆರ್.
ಚೆನ್ನಾಗಿವೆ.:-)
[…] (https://www.panjumagazine.com/?p=12793) […]