ಒಡೆದ ನೆನಪಿನ ಚೂರುಗಳು…!!
ಆ ತೋರು ಬೆರಳು ಸಹ
ಕಣ್ಣ ಮಿಟಿಗಿಸುತ್ತ
ಮೊಬೈಲ್ನ ಮೂರು ಗಳಿಗೆಯೂ
ಬ್ಲಾಕ್ ಮಾಡಿರುವ
ವಾಟ್ಸಾಪ್ ನಂಬರ್, ಫೇಸ್ಬುಕ್ನ ಐಡಿ
ನೋಡುವುದ ಬಿಡೋದಿಲ್ಲ
ಅದಕ್ಕೂ ತಿಳಿದಿರಬೇಕು
ನಾವು ದೂರವಾಗಿರುವ ವಿಷಯವು
ಪದೇ ಪದೇ ನಿನ್ನ ನೆನಪಿಸುತ್ತಿದೆ !!
ನೋಡು
ನಮ್ಮನಗಲಿಕೆಯ ಕಂಡು
ಆ ಬಸ್ಸು – ಲಾರಿ, ಕಾರು- ಸ್ಕೂಟರುಗಳು
ಒಂದೇ ಸಮನೇ ಜೋರು
ಸದ್ದು ಮಾಡಿ ರಸ್ತೆಗುಂಟ
ಕೇಕೆ ಹಾಕುತ್ತ
ಹೊಟ್ಟೆ ಉರಿಸುತ್ತಿವೆ…!!
ಒಡೆದ ಕನ್ನಡಿಯೂ ಹೇಳುತ್ತಿತ್ತು
ಛಿದ್ರ -ಛಿದ್ರವಾದ ಚೂರುಗಳಲ್ಲಿಯೂ
ಪಳಪಳನೆ ಹೊಳೆಯುತ್ತೇನೆಂದು
ಆದರೆ ನೀನು ಮಿಂಚದೆ
ಒಡೆದ ಮನದ
ಮಡಕೆಯ ಚೂರುಗಳಾದೆ…!!
ಸೂಜಿಯ ಜೊತೆ ಕಣ್ಣ ರೆಪ್ಪೆಯ
ಪೋಣಿಸಿ, ಹರಿದು ಹೋದ
ಹೃದಯವನ್ನ ಹೋಲಿಯಬೇಕಿದೆ…!!
ಹೊಲಿಗೆ ಯಂತ್ರವು ಉರುಳುತ್ತಿಲ್ಲ
ನಮ್ಮ ಹೆಜ್ಜೆಯ ಗುರುತ್ತನ್ನೇ
ಬಯಸುತ್ತಿದೆ…!!
ಯಾವುದೋ ಮಾತಿಗೋ ನೀ ಕಿವಿಗೊಟ್ಟು
ನೀ ಯಾರೆಂದು ಕೇಳಿದೆ ?
ನಿನ್ನ ಗುಳಿಗೆನ್ನೆಯ ಕಿರುನಗೆಗೂ
ಕಿರು ಬೆರಳ ಮಚ್ಚೆಗೂ ಕೇಳು
ನಾ ಯಾರೆಂಬುದ ತಿಳಿಸುತ್ತದೆ…!!
ಆದಿತ್ಯಾ ಮೈಸೂರು
‘ಸೃಷ್ಟಿಯ ಸಂವೇದನೆ’
ಮೋಡಗಳಾಚೆಯ ತಾರೆಯಲಿ
ಯಾರು ದೀಪವನು ಹಚ್ಚುವರೊ?
ಇರುವಿಕೆಯ ತಿಳಿಸಲೆಂದು
ಅಂಧಕಾರವ ಅಳಿಸಲೆಂದು ||
ಸಾಗರದಾಳದ ಚಿಪ್ಪಿನಲಿ
ಯಾರು ಮುತ್ತುಗಳ ಇರಿಸುವರೊ?
ಕೊರಳ ಹಾರವಾಗಲೆಂದು
ಹೆಣ್ಣಿಗೆ ಅಲಂಕಾರವಾಗಲೆಂದು ||
ದೇಶ ಕಾಯುವ ಯೋಧರಲಿ
ಯಾರು ಭಕ್ತಿಯ ತುಂಬುವರೊ?
ಪರಾಕ್ರಮ ಮೆರೆಯಲೆಂದು
ನಮ್ಮೆಲ್ಲರ ಕಾಪಾಡಲೆಂದು ||
ಕನಸಿನೂರಿನ ಬೆನ್ನತ್ತಿ
ಯಾರು ಗುರಿಯ ಮುಟ್ಟುವರೊ?
ಅವರೆ ಶ್ರಮಿಕರೆಂದು
ನಿಜವಾದ ಸಾಧಕರೆಂದು ||
ಸುಂದರ ಹೂವಿನ ಒಡಲಿನಲಿ
ಯಾರು ಜೇನ ಸುರಿಸುವರೊ?
ಸಿಹಿತುಪ್ಪವಾಗಲೆಂದು
ನಾವೆಲ್ಲರು ಸವಿಯಲೆಂದು ||
-ಕೆಂದೆಲೆ ವನಜ ತುಮಕೂರು