**ಮಾರಿಬಲೆಯಾ **
ಬಲೆಯೆತ್ತಿ ಹೊರಟಿಹರು
ಬೆಸ್ತರು ಸಡಗರದಿ
ಜಡಿಮಳೇಲಿ ಕಡಲ ತಡಿಗೆ I
ಇಂದು ಸಿಕ್ಕಾವೋ?
ಭೂತಾಯಿ ಕೊಡವಾಯಿ
ಕಂಡಿಕಿ ಜಾರಿ ನನ್ನ ಬಲಿಗೆ I
ಬಂದಿಹುದು ಮಳೆಗಾಲ
ಬೀಸುವುದೇ ಬಲೆ ಈಗ!
ಸಿಕ್ಕೇ ಸಿಕ್ಕಾವು ಎಸುಡಿ ಸಿಗಡಿ I
ಮರವಂತೆ ಕಡೆಹೋಪ
ಬರುವುದು ಬಾರಿ ಬೆಲೆ
ಸಿಕ್ಕರೆ ಭೂತಾಯಿ ಕಂಡಿಕಿ I
ಬೋರ್ಗರೆವ ಕಡಲೆಡೆಗೆ
ಬಂದಾನೋ ಮೊಗವೀರ
ಬೀಸಿದಾ *ಮಾರಿ**ಬಲೆಯಾ I
ನನ್ನಯ ಮನೆಯಿಂದ
ದೂರಾದ ಮೈಲುವರೆಗೂ
ಇಂದು ನನ್ನದೇ ಬಲೆಯೂ I
ಬಲೆ ಬಿಡುವುದು ಬಿಡುವೆನು
ಎಳೆವಾಗ ಬರುವಾರೋ
ನನ್ನಯ ಮಗ ಅಳಿಯಾ?
ಮನೆಯಲ್ಲಿ ಹೇಳಿದೆ
ಅರೆಯಿರಿ ಖಾರವಾ
ಯಾವ್ಯಾವ ಮೀನು ಸಿಕ್ಕಾವೋ?
ಬಂದರು ಮಗ ಅಳಿಯ
ಎಳೆದಾರು ಬಲೆಯನ್ನು
ಕುಣಿದಾಡಿತು ಸಂತಸ ಮೊಗದಿ I
ಬೆಸ್ತಗೆ ಖರ್ಚಿಗೆ ಕಾಸಿಲ್ಲ,
ಮಾರಿದರೆ ಝಣ!ಝಣ!
ಚಿಂತಿಸ ಸುರುಮಾಡ್ದ ಮನದಿ I
ಮೀನುಗಳ ಪಾಲ್ ಮಾಡಿ
ಕೊಟ್ಟನೋ ಮನೆಗಾಗಿ
ಉಳಿದದ್ದು ಮಾರೋಕೆ ಎಂದು I
ಮತ್ತೊಂದು ಚೀಲ ತುಂಬಿ
ಹೊರಟಾನೋ ಮೊಗವೀರ
ಮರವಂತೆ ಕಡಲ ಕಡೆಗಂದು I
ಇದಕಂಡು ಅಳಿಯಾನ
ಮುಖಸಪ್ಪಿ ಆಗೋಯ್ತು
ಓ!ಎಳೆದದ್ದೇ ಬಂತಲ್ಲ ಬಲೆಯಾ! I
ಮೈ ಕೈ ನೋವಾಗಿ
ಜ್ವರಬಂದು ಅಳಿಯಾಗೆ
ಹೊತ್ತೊಯ್ದು **ಮಾರಿ ಬಲೆಯಾ**!!
-ವೈಶಾಲಿ ಜಿ. ಆರ್
ಗಜಲ್
ನೀ ನನ್ನಲಿ ಬೆರೆತಿರುವುದಕ್ಕೆ ಏನೋ ಮನಸ್ಸು ಭಾರವಾಯಿತು
ನದಿಯಂತೆ ಹರಿದು ನನ್ನನು ನೀ ಸೇರಿದಾಗ ಹೃದಯ ಕಡಲಾಯಿತು
ರತಿಯಲ್ಲಿ ಇನ್ನೆಷ್ಟು ಜನ್ಮ ಪ್ರಾರ್ಥಿಸಲಿ ಸಖಿ ನಿನ್ನ ಪ್ರೀತಿಗಾಗಿ
ದುಂಬಿ ಬರುವಿಕೆಗಾಗಿಯೇ ಮೊಗ್ಗು ಮಕರಂಧ ತುಂಬಿ ಹೂವಾಯಿತು
ಕೆಂಬಣ್ಣದಿ ಉರಿವ ರವಿ ಮಂಕಾದ ನಿನ್ನೊಳಗಿನ ನಗುವ ಕಾಂತಿಗೆ
ಮಳೆಯಂತೆ ನೀ ಬಂದು ನನ್ನಲಿ ಸೇರಿದಾಗ ಇಳೆ ತಂಪಾಯಿತು
ಚಂದ್ರನ ವದನವನೇ ನೋಡುತ ಹರಿಯಿತು ನೀರಾಗಿ ಮಂಜು ನಾಚಿ
ಪ್ರೀತಿ ಸಂಕೇತವಾಗಿ ನನ್ನೆದೆಯಲಿ ಈ ಗಜಲ್ ಸೇರಿಯಾಯಿತು
ಕಡಲಿನಾಳದ ಕಪ್ಪೆಚಿಪ್ಪಲ್ಲಿನ ಮುತ್ತಿನಂತವಳ ಕಾದಿದ್ದೆ
ಪ್ರೀತಿ ಬಯಸಿದ ಪ್ರೀತಿಯೊಂದಿಗೆಯೇ ನಂರುಶಿ ಜೀವ ಬೆರೆಯಿತು.
ನಂರುಶಿ ಕಡೂರು.
ಗಜಲ್
ಬಯಸಿದ್ದನ್ನೆಲ್ಲಾ ಪಡೆಯುವುದರಲ್ಲಿಲ್ಲ ಸಂತೋಷ, ತಿಳಿಯಿತೇ ಸಖಿ
ಸುಖವೆಂದರೆ ಪಡೆದಿದ್ದನ್ನು ಪ್ರೀತಿಸುವುದು, ತಿಳಿಯಿತೇ ಸಖಿ
ಒಬ್ಬರ ಬದುಕಿನಂತೆ ಇನ್ನೊಬ್ಬರ ಬದುಕಿರುವುದಿಲ್ಲ
ಎಂದೆಂದಿಗೂ
ಕಾರಿರುಳು ಕಾಣದೇ ನಡೆದವರು ಯಾರಿಲ್ಲ ಬಾಳಿನಲ್ಲಿ ,ತಿಳಿಯಿತೇ ಸಖಿ
ಬೆಳಕನೀಯುವ ದೀಪಕ್ಕೂ ಇದೆ ಉರಿಯುವ ಸಂಕಟ
ನೋವುಂಡ ಮನವೇ ಮುಕ್ತವಾಗಿ ನಗುವುದು, ತಿಳಿಯಿತೇ ಸಖಿ
ನದಿಯಲ್ಲಿ ಬಿದ್ದಾಗ ಧೈರ್ಯದಿಂದ ಈಜಿದರೇನೆ ಸಿಗುವುದು ದಡ
ಕಷ್ಟಗಳ ಹಿಮ್ಮೆಟ್ಟಿಸಿದರೆ ಗೌರವಿಸುವುದು ಬದುಕು,
ತಿಳಿಯಿತೇ ಸಖಿ
“ಕಾಂತ” ಕಲ್ಲನೋವುಗಳಿಗೆ ಉಳಿಪೆಟ್ಟು ಬಿದ್ದರೆ ಬದುಕೇ ಸುಂದರ ಶಿಲೆ
ಕಾರ್ಪಣ್ಯದ ಸಮುದ್ರ ಮಥಿಸಿದರೇನೆ ಕಾರುಣ್ಯದ ಅಮೃತ, ತಿಳಿಯಿತೇ ಸಖಿ
–ಲಕ್ಷ್ಮಿಕಾಂತ ನೇತಾಜಿ ಮಿರಜಕರ. ಶಿಗ್ಗಾಂವ
ಮಿರಜಕರ್ ಸರ್, ನಿಮ್ಮ ಗಜಲ್ ಇಷ್ಟವಾದವು.ಹೀಗೇ ಬರೆಯುತ್ತಿರಿ