೧.
*ಒಲವಿನ ಕನಸು *
ಕಂಡಿರದ ಮೊಗದ
ಮೂರ್ತಿಯನು ಕೆತ್ತಿ…
ತನ್ನಿಷ್ಟದ ಭಾವಗಳ
ಅದರೆದೆಗೆ ಮೆತ್ತಿ…
ಕಣ್ಣಕಾಂತಿಯಲಿ ಸವಿದು
ಒಲವ ಸೊಬಗನು…
ನೆನಪು-ಕನಸುಗಳ
ಜಂಟಿ ಓಲಗದಿ…
ಸಾಕ್ಷ್ಯ ಬರೆದಿತ್ತು
ಚಂದ್ರಮನ ಕಾಂತಿ…
೨.
*ತೆರೆದ ಪುಸ್ತಕದಂತ ಬದುಕು*
ತೆರೆದ ಪುಸ್ತಕದಂತ ಬದುಕು
ಓದುಗರು ಹಲವರು
ಹಲವು ತೆರನವರು
ತೆಗಳುವವರು, ಹೊಗಳುವವರು
ಓದಿಯು ಓದದಂತಿರುವವರು
ಓದದೆಯು ಜರೆಯುವವರು
ಓದದೆಯು ಹೊಗಳುವವರು
ಎಲ್ಲರ ಬಾಯಿಗೆ ಆಹಾರವಾಗೋ ಬಾಳು
ತೆರೆದ ಪುಸ್ತಕದಂತ ಬಾಳು
ಎನ್ನ ನೋವುಗಳ ಜ್ವಾಲೆಯಲ್ಲಿ
ಚಳಿ ಕಾಯಿಸಿಕೊಂಡವರೆಷ್ಟೋ
ಎನ್ನ ನಲಿವುಗಳ ನಗುವನು
ಹಳಿದವರಿನ್ನೇಷ್ಟೋ…
ಒಳಿತು ಕೆಡುಕುಗಳ ನಡುವೆ
ಗೆಲುವು ಶಿಖರವನೇರಿದ ಮೇಲೆ
ಎಲ್ಲವನು ಬದಿಗೊತ್ತಿ
ಬದುಕಲೇಬೇಕು
ತೆರೆದ ಪುಸ್ತಕದಂತ ಬದುಕು
-ಶಿಲ್ಪ ಕೆ
ಇವತ್ತೇ ಹೇಳು ನೀನು
ರತಿಯೋ
ಸತಿಯೋ
ಸವತಿಯೋ
ಕನಸೋ
ನನಸೋ
ಪರವಶವೋ
ಇವತ್ತೇ ಹೇಳು ನೀನು
ಕಾವ್ಯದಲ್ಲಿ ಒಬ್ಬ ಕನ್ಯೆ
ಕಡಲ ಮೇಲೆ ನಡೆಯುವಾಕೆ
ಏಕಾಂತ ಬಯಸುವ ಚೆನ್ನಿಗೆ
ನೆಲದಗಲ ಸೆರಗು ಹರವಿ ಕುಳಿತವಳೇ
ಹೆರಳ ರಾಶಿ ಬೆನ್ನು ಸುರಿಸುವ ಜಲಪಾತ
ಯಾರೇ ನೀನು?
ಇವತ್ತೇ ಹೇಳು ನೀನು
ಇರುಳ ಎದೆಯ ಒಳಗೆ ಇಟ್ಟು
ಹಗಲ ತುಟಿಯ ಮಧ್ಯ ತೊಟ್ಟು
ಹುಬ್ಬು ತುಂಬಾ ಮಳ್ಳಿಕಳ್ಳಿ ಚೆಲ್ಲಾಟ
ನಡು ಮೊಸರ ಕಡೆಯುವ ತೊನೆದಾಟ
ಪಾದ ನದಿ ಹರಿದ ಹಾದಿ ನಿಲ್ಲದ ಪಯಣ
ಯಾರೇ ನೀನು?
ಇವತ್ತೇ ಹೇಳು ನೀನು
ಏಳು ಮಲೆಗಳಲ್ಲೂ ಕಾಣದ ಚೆಲುವೆ
ಅನುದಿನ ತಿಂಗಳ ಬೆಳಕು ಹೊತ್ತ ಕಣ್ಣೆ
ಸಾವಿರದ ಹಡಗಿನ ತೇಲಿಸುವ ಸಾಗರಕನ್ನಿಕೆ
ಕಾಲವ ದೀರ್ಘ ಕಾಮಿಸಿ ಅನುಗಾಲವ ಹೆತ್ತವಳೇ
ಸಮಯವ ರಮಿಸಿದ ನಿಡು ಮೌನದ ಉಸಿರೇ
ಯಾರೇ ನೀನು?
ಇವತ್ತೇ ಹೇಳು ನೀನು
– ಅಕ್ಷಯ ಕಾಂತಬೈಲು
ಬದಲಾಗಲಿಲ್ಲ
ಚಿಕ್ಕದಿರುವಾಗ ತಿನ್ನುತ್ತಿದ್ದ ತಂಗಳವೀಗ
ಗಂಟಲಿಂದ ಇಳಿಯುತ್ತಿಲ್ಲ
ಕೇಳಿದರೆ ಆರೋಗ್ಯದ ಪ್ರಶ್ನೆ!
ಹರಿದ ಅಂಗಿಗೆ ಹೊಲಿಗೆ
ಹಾಕಲು ಮನಸ್ಸು ಬರುತ್ತಿಲ್ಲ
ಕೇಳಿದರೆ ಮರ್ಯಾದೆ ಪ್ರಶ್ನೆ!
ಬದಲಾಗಲಿಲ್ಲ ಯಾವುದು ಹಳ್ಳಿಯಲ್ಲಿ ,
ನಾವಾಗೇ ಬದಲಾದದ್ದು ಜೀವನದ ಸಂತೆಯಲ್ಲಿ!
ಅಂಬಾಬೂಚಿಗಳು
ಕರೆಯುತಿವೆ ಹಟ್ಟಿಯಲ್ಲಿ
ಹುಲ್ಲನು ತರಲು ಅಮ್ಮನಲ್ಲದೆ
ಇನ್ನಾರಿಲ್ಲ ಮನೆಯಲ್ಲಿ.
ಬಿದ್ದ ತೆಂಗಿನಕಾಯಿ
ಮೊಳಕೆ ಬಂದಿದೆ ತೋಟದಲ್ಲಿ
ಅಪ್ಪನಲ್ಲದೇ ಅದಕೆ
ವಾರೀಸುದಾರ ಯಾರು ಹೇಳಿ?
*
ಮನೆ ತುಂಬ ಮಕ್ಕಳಲ್ಲೇ ನಿನಗೆ,
ಎಂದು ಬಾಯ್ತುಂಬಾ ಕರೆದವರೇ ಎಲ್ಲಾ
ಹಳತಿನ ಕಾಲಕ್ಕೆ ಅನಾಥವಾಗಿ
ಬಿದ್ದಿವೆ ಅಲ್ಲಿ-ಇಲ್ಲಿಯೆಲ್ಲಾ !
ಅಪ್ಪ ,ಅಮ್ಮನ ಸೇರಿಸಿ ನೋಡಿಕೊಳ್ಳುವವರೂ
ಯಾರೂ ಇಲ್ಲ
ಹಳ್ಳಿಯಲ್ಲಿ ನೋಡಿಕೊಳ್ಳುವವರು ಯಾರೂ ಇಲ್ಲ.
*
ಬದಲಾಗಲಿಲ್ಲ ಯಾವುದು ಹಳ್ಳಿಯಲ್ಲಿ ,
ನಾವಾಗೇ ಬದಲಾದದ್ದು ಜೀವನದ ಸಂತೆಯಲ್ಲಿ!!
– ಸಿಂಧು ಭಾರ್ಗವ್
ಓಲೆ
ನನ್ನ ಇನಿಯನ
ಓಲೆಗಾಗಿ
ಕಾದು ಕುಳಿತಿದ್ದೆ
ಮನೆಯ ಮುಂದೆ
ಪ್ರತಿದಿನವು ತಪ್ಪದೇ
ಅವನಿರುವನು
ನನ್ನಿಂದ ನೂರಾರು ಮೈಲಿ
ದೂರದ ಊರಿನಲ್ಲಿ
ಅವನಿಂದ ನನಗೊಂದು
ಓಲೆ ಬರುವುದೆಂದು
ಆಶಿಸಿದ್ದೆ
ಪ್ರೀತಿಯಲಿ ಪ್ರೇಮದಲಿ
ಅದನ್ನು ಬರೆದು
ನನಗೆ ಕಳುಹಿಸುತ್ತಾನೆಂದು
ಆದರೆ ಅವನ ಓಲೆ
ಬರುವ ಸೂಚನೆ
ಇರಲಿಲ್ಲ
ಕಾದು ಕಾದು
ಸುಸ್ತಾಗಿ ಹೋಗಿದ್ದೆ
ಸುತ್ತೆಲ್ಲಾ ಕತ್ತಲು
ತುಂಬಿ ಹೊತ್ತು ಮುಳುಗಿ
ತೆಂದು, ಅವನು ಬಲು
ದೂರದ ಆ ಸ್ವರ್ಗದಲಿ
ಹೋಗಿ ನೆಲೆಸಿದ್ದಾನೆಂದು
ನೆನಪಾಗಿ ಒಳಗೆ
ಬಂದು ಚಾಪೆ ಮೇಲೆ
ಹೊರಳಿದೆ.
-ಚೈತ್ರಾ ವಿ.ಮಾಲವಿ