ಇನ್ನಾದರೂ ತುಸು ಹೊತ್ತು
ಖುಷಿಯಿಂದ ಉಳಿದುಬಿಡುತ್ತೇನೆ
ಬದುಕಿಗೆ ಬೇಸರ ಬರುವಷ್ಟು ..
ಈ ಬದುಕು ಸುರುವಿದ ಅಸಂಖ್ಯ
ಅವಕಾಶಗಳ ಎಣಿಸುತ್ತಾ ಕೂತು
ಕಳೆದಿದ್ದೇನೆ ಹೀಗೆ
ಬಳಸಿಕೊಳ್ಳೋದ ಮರೆತು
ಪ್ರತಿ ಖುಷಿಯ ಹಿಂದೊಂದು
ಮುಗಿಯದ ಖಾಲಿತನವನ್ನು
ಸುಮ್ಮನೇ ಉಳಿಸಿಕೊಂಡಿದ್ದೇನೆ
ನನ್ನಂಥ ಕಡುಮೌನಿಯೂ
ನಿನ್ನ ಮಾತಿಗೆ ಹಪಹಪಿಸಲು
ಶುರುವಿಡುವ ಈ ಹೊತ್ತು ಇಲ್ಲೇ ಸ್ತಬ್ಧವಾಗಲಿ ಬಿಡು
ಮಾತು ಮೀರಿದ ಘಳಿಗೆ ಎದುರಿಗಿದ್ದಾಗ …
ಬೆರಳ್ಹಿಡಿದು ನಡೆಸಿದ ಕಾಲುಹಾದಿಯ
ಬದುಕು ಜಾರಿಸಲು ಶುರುವಿಟ್ಟು
ನಗುತಾ ನಿಂತ ಸಮಯ
ಬೇಕೆನಿಸಿದೆ ನಿನ್ನ ಸಾಂಗತ್ಯ
ಸುಮ್ಮನೇ ಎದೆಗೊರಗಿ ಜೊತೆ ನಡೆಯಲು ….
-ಕಾವ್ಯ ಎಸ್ ಕೋಳಿವಾಡ್
ನಾನು ನೀನು
ಇನ್ನೆಂದೂ ಸಿಗುವುದಿಲ್ಲ
ಈ ಪರಮ ಸುಖದ ಸಾವು
ಜಗತ್ತಿಗೆ ಮಾತ್ರ
ಸಾವೆಂಬುವುದು ನಿನಗಿಲ್ಲ
ನನಗೂ ಇಲ್ಲ
ಇಲ್ಲಿ ಕಳೆದು ಹೋಯಿತು
ಎಂಬುದಕ್ಕಷ್ಟೇ ದುಃಖ..!
ಮತ್ತೆ ತಿರುಗಿ ಅದನ್ನೇ
ಪಡೆಯುತ್ತೇವೆ
ಎನ್ನುವುದಕ್ಕಲ್ಲ..!
ಸಕ್ಕರೆಯಂತೆ ಕರಗುವ ಮುನ್ನ
ರೌದ್ರಕಲ್ಲು ಏನಾಗಿತ್ತು..?
ವಿಶಾಲ ನದಿಯ ಈಜಿ
ದಾಟುವ ಮುನ್ನ
ಆ ರೋಚಕ ಕ್ಷಣ ಏನಾಗಿತ್ತು..?
ಎಲ್ಲವೂ ಸ್ತಬ್ಧವಾಗಿತ್ತು
ಅಗೋಚರವಾಗಿತ್ತು
ಉನ್ಮಾದದ ಮುನ್ನ
ಹಣೆ
ಚಚ್ಚಿಕೊಳ್ಳುವ
ಸೋಜಿಗದ ಬೇನೆಯಾಗಿತ್ತು
ಅಷ್ಟೇ..!
ಹೌದು ಅದೇ ಸಾವು
ಇಲ್ಲಿನ ಪ್ರತಿ ಸಾವು
ಸಹ
ಹೊಸ ಹುಟ್ಟು
ಮತ್ತೆ ಹುಟ್ಟುವ
ಯೋಗ ನಮಗಿಲ್ಲ..!
ಹುಟ್ಟುವುದೇ ಬೇಡ ನಾವು..?
ನಿನಗೆ ನಾನು
ನನಗೆ ನೀನು ಸಿಗದಿರುವುದೇ
ನಾನು ಕಂಡ ಸಾವು
-ಶಶಿ ತರೀಕೆರೆ
ಆತ್ಮ ಮಿಲನ
ವಿಸ್ಪೋಟಕ ಸುದ್ದಿಯೊಂದು
ಸದ್ದುಗದ್ದಲದೊಂದಿಗೆ ನಗರವೆಲ್ಲ ಹರಡಿತು
ಕಲಿಯುಗವೂ ನಂಬಲಾಗದ
ದೃಶ್ಯವಳಿಗಳ ದಾಳಿ ಕಣ್ಣಮುಂದಿತ್ತು
ಸಮಾಧಿಯೊಂದು ನಡುಗುತಿದೆ…..
ಎದೆಬಡಿತದಂತೆ ಕಂಪಿಸುತಿದೆ…..
ಏಕೆ ಹೀಗಾಗುತಿದೆ? ಯಾರಿಗೂ ತಿಳಿಯದೆ
ವಿಜ್ಞಾನಕೆ ಸವಾಲಾಗಿದಂತೆ ಕಾಡಿದೆ
ಇಡೀ ಖಬರಸ್ಥಾನ ಮೌನದಕಡಲಾಗಿದೆ
ಬಿಸೋಗಾಳಿ ಸುಡುವಂತಾಗಿದೆ ನರಗಳೆನ್ನದೆ
ಮೃಗಖಗಗಳೆನ್ನದೆ
ಸಮಾಧಿಯ ಮೇಲಿನ ಗಿಡವೂ ಒಣಗಿದೆ
ಮೋಡಕವಿದಾದರೂ ಮಳೆ ಬರಬಾರದೇ
ದಿಗ್ಭ್ರಮೆಯಲಿ ಜನರೆಲ್ಲರು ನೋಡುತಿರೆ
ನಡುನಡುವೆ ಮಾಧ್ಯಮದವರು ನುಗ್ಗುತಿರೆ
ಗಲಭೆ ಗಲಾಟೆ ತುಸು ಹೆಚ್ಚಾದಂತಿದೆ
ಏಕೆ ಏನಾಯ್ತೆಂದು ಪ್ರಕೃತಿಗೂ ತಿಳಿಯದಾಗಿದೆ
ಗಂಡಸರಿಗೆ ಮಾತ್ರ ಪ್ರವೇಶವಂತೆ ಅಲ್ಲಿ
ಹೆಂಗಸರಿಗಿಲ್ಲ ನೋಡುವ ಭಾಗ್ಯವೂ ಅಲ್ಲಿ
ಮಲೀನವಾಗುವುದಂತೆ ಖಬರಸ್ಥಾನ
ಇದರ ಉಲ್ಲೇಖ ಇದಿಯಂತೆ ಹದೀಸ್ಗಳಲ್ಲಿ
ತುಸು ಹೊತ್ತು ಕಂಪನ ಹಾಗೆಯೇ ಸರಿಯಿತು
ಇಮಾಮರು ಹಾಜೀಗಳು ಬಂದಿದ್ದರು
ಖುರಾನ್ ಪಠಣ ಜೋರಾಗಿ ನಡೆದಿತ್ತು
ಅಲ್ಲಾ ನೀನೆ ಬಲ್ಲೆ ಎಲ್ಲಾ ಪಿಸುಮಾತು
ಸುದ್ದಿಯ ಸರಮಾಲೆ ಕಟ್ಟುತಲಿದ್ದರು
ಸಮಾಲೋಚಕರು ಚಿಂತಿಸುತಿದ್ದರು
ಮುಗ್ಧ ಜನ ಬೆರಗಾಗಿ ನೋಡುತಿದ್ದರು
ಯಾರಿಗೂ ಏನು ತಿಳಿಯದಂತಾಗಿತ್ತು
ಪುಣ್ಯಾತ್ಮರು ಯಾರೋ ನೀರು ತಂದರು
ಸಮಾಧಿಯ ಮೇಲೆಲ್ಲಾ ಚುಮುಕಿಸಿದರು
ತಂಪಾಗಲಿ ಈ ಜೀವಕ್ಕೆಂದು ಪ್ರಾರ್ಥಿಸಿದರು
ಮೌನ ಮನ ಕಫನಿನಲ್ಲಿ ಅಸ್ಥಿಯಾಗಿರೂ ಮಿಡಿಯುತಲೆಯಿತ್ತು
ಸುದ್ದಿ ತಿಳಿದು ಬಂಧು ಬಳಗವೆಲ್ಲ ದಾವಿಸಿತು
ನನ್ನವರು ಹಿರಿಯರು ಕಿರಿಯರು ನೋಡಬಂದರು
ಆದರೆ ಗಂಡಸರು ಮಾತ್ರ ನನ್ನ ಸನಿಹಕೆ
ಬುರ್ಖಾ ಧಾರಿಗಳು ಹೊರಗೇ ನಿಂತರು
ಕುತೂಹಲದ ಕಣ್ಣುಗಳಲ್ಲಿ ನನ್ನ ಪ್ರಿಯತಮೆಯು ಇದ್ದಳು
ಧಾರಾಕಾರವಾಗಿ ಕಂಬನಿ ಸುರಿಸುತಿದ್ದಳು
ಯಾರಿಗೂ ತಿಳಿಯದಂತೆ ನಿಖಾಬಿನಲ್ಲಿ ರೋಧಿಸುತಿದ್ದಳು
ಪ್ರೇಮದ ತುಡಿತ ಮಿಡಿತ ಹೃದಯಬಡಿತ ಮುಗಿಲೆತ್ತರವಾಗಿತ್ತು
ಬದುಕು ಬರಡಾಗಿತ್ತು ಮನ ಬರಿದಾಗಿತ್ತು
ಜನರ ನಿಂದನೆಗಳಿಗೆ ಅವಳ ಹೃದಯವೂ ನೊಂದಿತ್ತು
ಚಿಂತೆಗಳಲ್ಲೆ ಕೊರಗಿ ಸಾಯುವಂತಿದ್ದಳು
ಅಸ್ಸಲಾಂವಲೈಕ್ಕುಂ ಅವಳ ಕಂಬನಿ ನುಡಿಯಿತು
ಜಾರಿದ ಕಣ್ಣಹನಿಯಿಂದ ಸಮಾಧಿಯ ಬಡಿತ ತಣ್ಣಗಾಯಿತು
ಪವಾಡ ಸಾದೃಶ್ಯವೇ ಎಂದು ಜನ ಮೂಕರಾದರು
ಸೂರ್ಯನ ಪ್ರಖರಕೆ ಪ್ರಜ್ಞಾಹೀನಳಾದಳು ನನ್ನವಳು
ಬೆವರು ಕತ್ತಲಿಗೂ ಆವರಿಸಿ ಬೆವತುನೀರಾಗಿತ್ತು
ಎಲ್ಲವೂ ಸ್ತಬ್ಧ ನಿಶಬ್ಧ
ಗಗನವೂ ಮೌನ ಅವಳು ನೆನೆದಳು ಬದುಕನ್ನು
ನನ್ನೊಲವ ಕ್ಷಣಗಳನ್ನು
ಭೂಮಿ ಸುತ್ತಿದಂತಾಗಿ ಆಕಾಶವೇ ಬಿದ್ದಂತಾಗಿ
ಹಲ್ಲು ಕಚ್ಚಿ ಕಣ್ಣಮುಚ್ಚಿ ಧುಪ್ಪನೆ ಬಿದ್ದಳು
ನೋಡನೋಡುತ್ತಿದ್ದಂತೆ ಅವಳ ಪ್ರಾಣಪಕ್ಷಿ
ಅವಳಂತೆ ಶ್ವೇತ ಪಾರಿವಾಳವಾಗಿ ನನ್ನೆದೆಯ ಮೇಲೆ ಕುಳಿತು
ಏನೋ ಗುಟ್ಟೋಂದನ್ನು ಗುಟುಕರಿಸುತಿತ್ತು
ಕ್ಷಣ ಒದ್ದಾಡಿ ಚಡಪಡಿಸಿ ನರಳಿ ಸಾಯ್ತು
ಸಮಾಧಿಯ ಪರಿಮಳ ಈಗ ಪಸರಿಸಿತು
ಮೌನ ಮಾತಾಡಿತು ಎರಡು ಜೀವ ಒಂದಾಯ್ತು
ನನ್ನಿ ಸಮಾಧಿಗೆ ಸಮಾಧಾನ ತಾಕಿದಂತಾಯಿತು
ನಮ್ಮೀ ಮಿಲನಕೆ ಒಲವಿನ ಸಾಕ್ಷಾತ್ಕಾರವಾಯ್ತು
-ಹೆಚ್, ಷೌಕತ್ಅಲಿ ಮದ್ದೂರು.
ಅಂತರಾಳ
ದುಃಖತಪ್ತಳಾಗುತ್ತೇನೆ ಚಿಕ್ಕ ಪುಟ್ಟ ಮನಸ್ತಾಪಕ್ಕೆ
ನನ್ನೆದೆಯ ಭಾರವ ಹೊರಲು ಯಾರಾದರೂ ಇರುವಿರಾ?
ಗುರಿಯೆಡೆಗೆ ನಡೆವಾಗ ದಾರಿ ತಪ್ಪಿ ನಿರ್ಗತಿಕಳಾಗುತ್ತೇನೆ
ದಾರಿ ತೋರಿ ಮುನ್ನಡೆಸಲು ಯಾರಾದರೂ ಇರುವಿರಾ?
ಕಾಯುತ್ತೇನೆ ನಿಸ್ವಾರ್ಥ ಪ್ರೀತಿಯ ಸವಿಯುವುದಕ್ಕಾಗಿ
ಸ್ವಾರ್ಥ ತೊರೆದು ಪ್ರೀತಿಸಲು ಯಾರಾದರೂ ಇರುವಿರಾ?
ಅನ್ಯಾಯಕ್ಕೊಳಗಾದಾಗ ಅನ್ಯ ಜೀವದ ಅಪ್ಪುಗೆ ಬಯಸುತ್ತೇನೆ
ತಬ್ಬಿ ಸರಿಪಡಿಸಲು ಯಾರಾದರೂ ಇರುವಿರಾ?
“ನಾನಿದ್ದೇನೆ”, ಅಂತರಾಳದ ಮೆಲು ದನಿಯ ನಾದ
ಹೊರಹೊಮ್ಮಲು, ಮತ್ತೆ ಸಶಕ್ತಳಾಗುತ್ತೇನೆ…
-ಶೃತಿ ದೇವಾಂಗಮಠ…
ಗಜಲ್-೧
ಈ ಬೆಳಗಿನಲ್ಲಿ ಶುಭನುಡಿಯೊಂದನ್ನು ಕಳಿಸಿದ್ದೇನೆ
ಸದಾ ಗುನುಗಲು ಎದೆಯ ಹಾಡೊಂದನ್ನು ಕಳಿಸಿದ್ದೇನೆ
ಎದುರಿಗೆ ಸಿಕ್ಕ ಹೃದಯಗಳೆಲ್ಲ ಹೀಗೇಕೆ ತಣ್ಣಗಿವೆ
ಬಿಸುಪ ಹರಿಸಲು ಚಿಲುಮೆಯೊಂದನ್ನು ಕಳಿಸಿದ್ದೇನೆ
ಬದುಕೆಂದರೆ ಯಾಂತ್ರಿಕ ನಡೆ ನುಡಿ ಚಲನೆಯೇನು
ಬಂಡಾಯವೆಬ್ಬಿಸಲು ಪಿಸುಮಾತೊಂದನ್ನು ಕಳಿಸಿದ್ದೇನೆ
ಎದೆ ಹಿಂಡುವ ಆರ್ತತೆಯಲ್ಲಿ ನೋಡದಿರು, ಗೆಳೆಯಾ
ಭರವಸೆಯ ಹೊಸಯಿಸಲು ನಗುವೊಂದನ್ನು ಕಳಿಸಿದ್ದೇನೆ
ನವೀಕರಣಗೊಳ್ಳುತ್ತಲೇ ಇರಬೇಕು ನೋಟ ‘ ವಿಶೂ’
ಸದಾ ಬೆಳಗಿಕೊಳ್ಳುತ್ತಿರು, ಕಿರಣಗಳನ್ನು ಕಳಿಸಿದ್ದೇನೆ
ಗಜಲ್- ೨
ಆಡುತ್ತ ಆಡುತ್ತ ನಾನು ಬಾಲ್ಯವನು ಕಳೆದುಕೊಂಡೆ
ಹಾಡುತ್ತ ಹಾಡುತ್ತ ನನ್ನ ಎದೆಯನ್ನು ಕಳೆದುಕೊಂಡೆ
ಕೂಡಿದ್ದು ಕಳೆದದ್ದರ ಅರಿವೇ ಆಗುವುದಿಲ್ಲ ನೋಡು
ನೋಡುತ್ತ ನೋಡುತ್ತ ನನ್ನ ನೋಟವನು ಕಳೆದುಕೊಂಡೆ
ಗಿರಿ ಗುಹೆ ಬೆಟ್ಟ ಬಯಲು ನದಿ ಕಡಲು ಕಾನು
ಸುತ್ತುತ್ತ ಸುತ್ತುತ್ತ ನನ್ನ ಚಲನೆಯನು ಕಳೆದುಕೊಂಡೆ
ಬರೀ ಧೇನಿಸಿಯೇ ಎಲ್ಲ ಕಲಸಿಹೋದವೇ ಹೇಗೆ
ಕನಸುತ್ತ ಕನಸುತ್ತ ನಾನು ನೆಲವನ್ನು ಕಳೆದುಕೊಂಡೆ
ಎದೆಬತ್ತಿಯ ಉರಿಸುತ್ತಲೇ ನಿಂತಿರುವೆ ‘ವಿಶೂ’
ಬರೆಯುತ್ತ ಬರೆಯುತ್ತ ನಾ ಬರೆಗಳನು ಕಳೆದುಕೊಂಡೆ
-ಡಾ. ಗೋವಿಂದ ಹೆಗಡೆ
ಮೌನಧ್ಯಾನದ ಅರಿವು
ಮೌನದಿಂದಿರು ಮನವೇ!
‘ಸಂಕಲ್ಪ ಮಾಡು’ ಗುರಿಯಾ..
ಸಮಭಾವ ತೋರುವಾ… ಜಗವ ನಂಬು;
ತೇಜಿಸಿಬಿಡು ‘ನಾ’ ಎನ್ನುವ ಇಂಬು..
ದಿನ ಬಾಳಿನಾ, ಬೇಸಿಗೆಲ್ಲ ಸುಡದೇ- ಹೆದರದೇ..
ಮೋಡಗಳಂತಹ..
ತಾಳ್ಮೆ ಭಾವವಾ ತಂದಿಕೋ..
ಸಹನೆ ಇಂದ ಇರು, ಆತ್ಮವೇ..
-ಬುವಿಯಂತೆ;
ಕತ್ತಲಲ್ಲಿ ಕಾಣದ ಸ್ವಪ್ನಗಳು..
ಬೆಳಕಾಗುವ ದಿನ ಬರುವುದೆಂದು;
‘ಸಾಧನೆಯನು’ ಗುಪ್ತವಾಗಿಟ್ಟು,
ನೀ ನಿಧಾನವಾಗಿ ಕಾದಿರು…
ನಿನ್ನ ಪರಿಶುದ್ದ ಮನಸಾಕ್ಷಿಯಾ ನಂಬೀ..
ನೀರವತೆಯ ಕಂಬನಿಹನಿಗಳನೆಲ್ಲ
ಸಾವಧಾನದ ಬಿಂದುನಂತೆ;
ಜೀವಾತ್ಮದ ಬೆಳಕ ಹನಿಯಾಗಿ ಮಾಡಿಕೋ..
ಇಹಲೋಕ ಸಂಪತ್ತು, ಅತಿ ಆಸೆ ವರ್ಜಿಸಿ..
ಬೇದತೋರದೆ..
ನೊಂದ ಜೀವಗಳಿಗೆ
ಪ್ರೀತಿ- ಕರುಣೆಯ ತೋರು..
ಸುಮ್ಮನೆ ಶೂನ್ಯ ಜಗಕೆ,
ತಣ್ಣನೇ ಮಳೆ ಅರಿವನು ಸುರಿಸಿ ಬಿಡು..
ತಪ್ಪಿಲ್ಲದೇ ಅಪರಾಧಿಯಾಗಿಸಿ,
ದಹಿಸುವ ಅಂತರಂಗಗಳ ಬಾಗಿಲನು ತೆರೆದು..
ನೀ ಶಾಂತಿ ಬೆಳಕ ತೋರು
ಓ ಮನದ ಮೌನವೇ!..
-ನಂದಿನಿ ಚುಕ್ಕೆಮನೆ