ಪಂಜು ಕಾವ್ಯಧಾರೆ

ನೀವಲ್ಲವೆ…

ಬದುಕಲ್ಲಿ ಸಖನಾಗಿ
ಒಲವಲ್ಲಿ ಜೊತೆಯಾಗಿ
ಮನದಲ್ಲಿ ಹಿತವಾಗಿ
ಪ್ರೀತಿ ಅರಳಿಸಿದವರು

ದ್ವಂದದಲಿ ನಾನಿರಲು
ಕರವಹಿಡಿದೆನ್ನ
ಸಿಹಿಕನಸು ಮನದಲ್ಲಿ
ಮುಡಿಸಿದವರು

ನಾ ಮುನಿಸುಗೊಂಡಾಗ
ಮಲ್ಲಿಗೆಗೆ ಮುನಿಸೇಕೆ
ಎಂದೆನುತಾ ಮುತ್ತಿಟ್ಟು
ಒಳಗೊಳಗೆ ನಕ್ಕವರು

ತವರೂರು ಹೊರಟಾಗ
ಬಾಗಿಲಬಳಿ ನಿಂದು
ಬೇಗ ಬಾ ಎಂದೆನುತಾ
ಕಣ್ಣಂಚಲಿ ನೀರ ಹನಿಸಿದವರು

ವಾರವೂ ಕಳೆಯುವ ಮುನ್ನ
ಮತ್ತೆ ತವರಿಗೆ ಬಂದು
ಬೇಗ ಬರುವೆಯಾ ಎನುತ
ಬೇಸರದಿ ಎನ್ನ ಕರವ ಹಿಡಿದವರು

ಮನದ ವೇದನೆಯ
ಮೌನದಲೇ ಮುಟ್ಟಿಸಿ
ಮನೆಯ ದಾರಿಯ
ತೋರಿದವರು ನೀವಲ್ಲವೆ.

-ರೇಷ್ಮಾ ಉಮೇಶ ಭಟ್ಕಳ.

 

 

 

 


ನಾನು ಪ್ರೀತಿಸುತ್ತೇನೆ…

ನಾನು ಪ್ರೀತಿಸುತ್ತೇನೆ
ಮತ್ತೆ ಬಾರದ ಬಾಲ್ಯವನ್ನು…
ಜೇಬಿನಲಿ ಸಿರಿಯಂತೆ ಇರಿಸಿಕೊಂಡಿದ್ದ
ಬಣ್ಣದ ಬುಗುರಿ-ದಾರವನ್ನು…
ಕದ್ದ ಪೇರಳೆಯ ಹಂಚಿ ತಿಂದಿದ್ದ
ಹರಕು ಅಂಗಿಯ ಗೆಳೆಯನನ್ನು…
ಪೆಟ್ಟಿಗೆಯೊಳಗೆ ಜೋಪಾನವಾಗಿಟ್ಟಿರುವ
ಗೆಳತಿ ಕೊಟ್ಟ ನವಿಲುಗರಿಯನ್ನು…..

ನಾನು ಪ್ರೀತಿಸುತ್ತೇನೆ
ದುಡಿದರೂ, ದುಡಿಯದಿದ್ದರೂ ತುತ್ತು ನೀಡಿ
ಮಮತೆ ತೋರುವ ಅಮ್ಮನನ್ನು…
ಕೋಪದೊಳಗಿನ ಕಾಳಜಿಯಲ್ಲೇ
ದಾರಿ ತೋರುವ ಅಪ್ಪನನ್ನು…
ಜಗಳಕಾದು ದೂರ ನಡೆದು
ಮತ್ತೆ ಪ್ರೀತಿಸುವ ತಂಗಿಯನ್ನು…..

ನಾನು ಪ್ರೀತಿಸುತ್ತೇನೆ
ಬಡವ ನಾನೆಂದು ತಿರಸ್ಕರಿಸಿ ಹೋದ
ಮರೆವಿಗೆ ನಿಲುಕದ ‘ಅವಳ’ನ್ನು…
ಸೋಲು, ನೋವು, ನಿರಾಸೆಗಳಾಚೆಗೆ
ಇನ್ನೂ ಉಳಿದಿರುವ ಒಲವನ್ನು….

ನಾನು ಪ್ರೀತಿಸುತ್ತೇನೆ
ನಗು, ನೋವುಗಳ ಒಟ್ಟಿಗೇ ತರುವ
ಅನಂತಾನಂತ ನೆನಪುಗಳನ್ನು…
ಪ್ರೀತಿಸುವ ಅವಕಾಶ ಕೊಟ್ಟ
ಈ ಭಾವಪೂರ್ಣ ಜೀವನವನ್ನು..

-ವಿನಾಯಕ ಅರಳಸುರಳಿ,

 

 

 

 


ಕಾಲ್ಗೆಜ್ಜೆಯ ನೆನಪು

ನಿನ್ನ ಕಾಲುಗಳಿಗೆ ಗೆಜ್ಜೆ ತಂದು
ಹಾಕಿದ ನೆನಪುಗಳೆಲ್ಲಾ
ಈಗಲೂ ನನ್ನ ಹೃದಯದಲ್ಲಿ
ಗೆಜ್ಜೆಯ ಸವಿನಾದ
ಕೇಳಿಸುತ್ತದೆ ಎನಗೆ

ಗೆಜ್ಜೆಯ ನಾದಕ್ಕೆ ಮನತಣಿದು
ಕೈಗೆ ಕೈಬೆರಳನ್ನು ಕೂಡಿಸಿದ ಆ ನೆನಪು
ಆಕಾಶದಲ್ಲಿ ತೇಲಿ ಬಿಟ್ಟಿಯೆಲ್ಲೇ
ನೀ ನನ್ನ ವಲ್ಲೇ ಎಂದು..?

ಮಾತಿಗೆ ಮಾತು ಬೆಳೆಸಿ ಪ್ರೀತಿಗೆ ಪ್ರೀತಿ ಸೇರಿಸಿ
ಕಾಲ್ಗೆಜ್ಜೆ ಬೇಕು ಎಂದೆಲ್ಲ ನನಗೆ
ಕಾಲ್ಗೆಜ್ಜೆ ಹಾಕಿದ ದಿನ ಮುಗಿಲು ಕೂಡ
ನಾಚಿ ನಿಂತಿತ್ತು ನಿನ್ನ ಕಾಲುಗಳನ್ನು ನೋಡಲು
ನೀರು ಕೂಡ ಹರಿಯುವುದನ್ನು ಬಿಟ್ಟು
ನಿನ್ನ ಕಾಲ್ಗುಗಳನ್ನು ನೋಡುತ್ತಾ ನಿಂತಿತ್ತು ಯಾರದು?
ಇರಬಹುದು ಈ ಹೆಜ್ಜೆಯ ಸಪ್ಪಳೆಂದು

ಕಾಯಿಸಿ, ನೋಯಿಸಿ, ಪ್ರೀತಿಸಿ, ಮೋಹಿಸಿ
ಸುಟ್ಟು ಹಾಕಿದಿಯಲ್ಲೇ ಈ ಕನಸುಗಳ ಗೂಡನ್ನು
ಈ ಪ್ರೀತಿ ಗೂಡಲ್ಲಿ ನೀನಿಲ್ಲವೆಂಬ ಕೊರಗು
ಎನಗೆ…!
ಏನ್ಮಾಡ್ಲಿ ನಿನ್ನ ಕಾಲ್ಗೆಜ್ಜೆಯ ನೆನಪು
ಎನಗೆ.
– ಮೂಗಪ್ಪ ಸಿ.ಮಾಲವಿ

 

 

 

 


ಅಮರ ….

ಭಾವನೆಗಳು ಬತ್ತಿದರೂ ,
ನೆತ್ತರು ಎದೆಯಲ್ಲಿ ಹರಿಯಬೇಕಿದೆ …
ಮರೆಯಲಾರದೆ ನಿನ್ನ,
ಸಾವಿಗೆ ಕಾದು ಬದುಕಬೇಕಿದೆ…
ನೀ ಕಾಣದಿದ್ದರೂ ಇನ್ನೆಂದಿಗೂ,
ನಿನಗಾಗಿ ಪದಗಳು ಹುಡುಕಲು ನಯನಗಳು ಬೇಕಿವೆ..
ಕಂಬನಿಯ ಕೊಡ ಮುಗಿದಿದ್ದರೂ ,
ಖೇದದ ಬಾವಿಯಲ್ಲಿ ಇನ್ನೂ ನೀರು ಸಾಗರದಷ್ಟಿದೆ …
ಪ್ರೀತಿಸುವುದನ್ನೇ ತ್ಯಜಿಸಿದರೂ,
ನಿನ್ನೊಂದಿಗಿನ ಕ್ಷಣಗಳ ಕಲೆ ಹಾಕಲು ಹೃದಯ ಬೇಕಿದೆ…
ನಿನ್ನ ಧ್ವನಿ ಕೇಳದೇ ಇದ್ದರೂ ,
ಕಾಲನ (ಯಮನ) ಕರೆ ಆಲಿಸಲು ಕರ್ಣಗಳು ಬೇಕಿವೆ ….
ಸವೆಯದಿರು ಸಮಯವೇ ,
ಅವಳ ನೆನಪುಗಳೊಂದಿಗೆ ಇನ್ನೂ ಸಂಭಾಷಿಸಬೇಕಿದೆ….
ನಾ ಅಳಿಸಿ ಹೋದರೂ,
ನಮ್ಮ ಪ್ರೀತಿ ಈ ಪದಗಳಲ್ಲಿ ಅಮರವಾಗಬೇಕಿದೆ…

—ಶೀತಲ್

 

 

 

 


ಮುತ್ತು ಹೊತ್ತಿಗಾಗಿ ಕಾದಿದೆ.

ಮುಂಗುರುಳ ಮೋಹಕ ಮೋಹಿನಿ
ಮನದಲ್ಲಿ ಸದಾ ನೀ ನೆನಪಗಣಿ
ತಡೆಯದ ಆಸೆ ನನ್ನೊಳಗೊಂದು
ಚೆಲ್ವಮೊಗದಿ ನೀಡಲೇ ಜೇನೊಂದು

ನೀ ನದಿಯಾದರೆ ನಾ ಮಳೆಯಾಗಿ
ನಿನ್ನ ಒಡಲ ಸೇರುವೆ ಹನಿಯಾಗಿ
ನೀ ಕಡಲಾದರೆ ನಾ ಅಲೆಯಾಗಿ
ನಿನ್ನ ಮಡಿಲಲಿ ಮೆರೆವೆ ಮುತ್ತಾಗಿ

ಮುತ್ತು ಹೊತ್ತಿಗಾಗಿ ಕಾದಿದೆ
ರಾತ್ರಿರಾಣಿಯ ಸುಗಂಧ ಕರೆದಿದೆ
ಕಣ್ಣಂಚು ಸಂಚಿನ ರಸನಿಮಿಷಕ್ಕಾಗಿ
ಕೆಂದುಟಿಯ ಮುತ್ತಿನ ಮತ್ತಿಗಾಗಿ

ಬಾ ರಾಣಿ ಬೇಗುದಿನೀಗು ಬಾರ
ಒಡಲ ಮಿಡಿತವೆ ಮುಖವ ತೋರ
ಮುನಿಸ ಮರೆತು ಹೂ ಮುತ್ತ ತಾರ
ಕಾದಧರಣಿಗೆ ಮಳೆಹನಿಯಾಗಿ ಬಾರ

ತವಕದಿ ಕಾಯುತಿಹೆ ಒಲವೆ
ತಾಜಮಹಲಿನ ತಿಂಗಳ ಬೆಳಕಿನಲಿ
ತೀರದ ದಾಹಕೆ ಮುನ್ನುಡಿ ಬರೆಯಲಿ
ಒಲವಿಗಾಗಿ ನಿರ್ಮಿಸಿದ ತಾಜನಲಿ

ನಿನ್ನ ಬಯಕೆಯ ಸ್ವರ್ಗತಾಣ
ನಮ್ಮಿಬ್ಬರ ಮೊದಲ ಸಮಾಗಮ
ಅಲ್ಲಿಯೆ ನೀಡು ಮೊದಲಮುತ್ತು
ನೀಡಲಿ ಈ ಉಸಿರಿಗೆ ನವಗಾನ

ಜಯಶ್ರೀ ಭ.ಭಂಡಾರಿ.

 

 

 

 


ಕಸುವು

ಬಾಯಾರಿ ಬೆಂಡಾಗಿ
ಬಿರಿಬಿಟ್ಟ ನೆಲಕೆ
ತೊಟ್ಟು ನೀರು ಹನಿಯೆ
ಮೊಳಕೆಯೊಡೆಸುವ
ಕಸುವುಂಟು

ಮಾಘಿಗೆ ಮರುಗಿ
ಬೋಳಾಗಿ ಬರಡಾದ
ಮರಕೆ ಮತ್ತೆ
ಚಿಗುರೊಡೆದು ನಳನಳಿಸುವ
ಕಸುವುಂಟು

ಬೇರು ಕಡಿದು
ತಲೆ ಸವರಿ ಬಿಸುಟ ಕಾಂಡಕೆ
ಕಣ್ತೆರೆದು ನೆಲದೊಳಗೆ ಬೇರಿಳಿಸಿ
ನಿಂತು ಗಿಡವಾಗುವ
ಕಸುವುಂಟು

ಎದ್ದವನ ಗುದ್ದಿ
ಮತ್ಸರದಿ ಕಾಲೆಳೆದು ಬೀಳಿಸಿ
ಅಟ್ಟಹಾಸವಗೈಯುವವನೆದುರು
ಅಟ್ಟಹಾಸದ ಹುಟ್ಟಡಗಿಸೋ
ಕಸುವು ಎಲ್ಲರಿಗುಂಟು

-ರಾಘವೇಂದ್ರ ಈ ಹೊರಬೈಲು

 

 

 

 


ಅನುಭವ
ಗುಡ್ಡಕ್ಕಿ೦ತಲೂ
ಎತ್ತರವಾದ ಅಪ್ಪನ
ಭುಜದ ಮೇಲಿನ
ಮಗಳು
ಅದೆಲ್ಲಿ ಹಾರಿಸುವಳೋ
ಗಾಳಿಪಟವನ್ನು?
ಮರಗಳಿಲ್ಲ
ಗಾಳಿ ಎಲ್ಲಿದೆಯೋ?
ನೀಲಿ ಆಕಾಶವಿಲ್ಲ
ಎತ್ತರ ಎಲ್ಲಿದೆಯೋ?
ಆದರೂ,
ಗಾಳಿಪಟ ಹಾರಿಸಲು
ಅಪ್ಪನ ಜೊತೆ
ಹೊಗುವುದೇ
ಒ೦ದು ಅನುಭವ
ಹೌದೆನೋ?
– ಉರ್ಬನ್ ಡಿಸೋಜ, ಮೂಡಬಿದರೆ.

 

 

 

 


ನೆಮ್ಮದಿ

ನೀನು ಯಾರ ಪಾಲಿಗೆ
ಬಡವನೋ ಶ್ರೀಮಂತನೊ
ಚಿಕ್ಕವರೋ ದೊಡ್ಡವರೊ
ಸೋತವರೊ ಗೆದ್ದವರೊ

ಎಲ್ಲರು ಬಯಸುವ ಆಸ್ತಿ
ನೆಮ್ಮದಿಗಾಗಿ ಮಾಡಬೇಕಾ ಕುಸ್ತಿ ?
ನೆಮ್ಮದಿ ಮತ್ತು ನಿನ್ನು ಆಗಬೇಕು ಜಂಟಿ
ಇಲ್ಲವೆಂದರೆ ಜೀವನವೇ ಒಂಟಿ

ಕಷ್ಟವೋ ಸುಖವೊ
ಕಾಯಕದ ವ್ಯಕ್ತಿ
ಸಹಾಯಕೆ ಸಿದ್ದ ನಿಲ್ಲವ
ಎಲ್ಲರು ನೆಮ್ಮದಿಯ ಒಡೆಯರು.

ಅತಿಯಾಸೆ ಬಿಟ್ಟವ
ತಪ್ಪನು ಅರಿಯವ
ಗುರು ಹಿರಿಯರ ಗೌರವಿಸುವ
ಎಲ್ಲರು ಸಂಭ್ರಮಿಸವರು ನೆಮ್ಮದಿಲಿ.

-ಮಲ್ಲು ನಾಗಪ್ಪಾ ಬಿರಾದಾರ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Yallappa m
5 years ago

ರೇಷ್ಮಾ ಉಮೇಶ್ ರವರ ರಚನೆಯ “ನೀವಲ್ಲವೆ” ಕವಿತೆ ತುಂಬಾ ಸೊಗಸಾಗಿ ಮನದೊಡೆಯನ ಬಗ್ಗೆ
“ನಾ ಮುನಿಸುಗೊಂಡಾಗ
ಮಲ್ಲಿಗೆಗೆ ಮುನಿಸೇಕೆ
ಎಂದೆನುತಾ ಮುತ್ತಿಟ್ಟು
ಒಳಗೊಳಗೆ ನಕ್ಕವರು” ಭಾವನಾತ್ಮಕ ಸಂಭಂದಗಳು ಮನ ಮುಟ್ಟುವಂತೆ ಮೂಡಿ ಬಂದಿದೆ ಕವನದೊಳಗೆ, ಸೂಪರ್

1
0
Would love your thoughts, please comment.x
()
x