ಸ್ವರ್ಗ ಸೃಷ್ಟಿಯಾಗುತಿರಲು
ಸುಳಿಯುತಿರುವ ಗಾಳಿ ಗಂಧ
ಬಳಿಯಲಿರುವ ಯಮುನೆ ಚಂದ್ರ
ಸುಳಿಯದಿರುವ ಸಖನ ನೆನೆದು
ನಳಿನೆ ಕಾಯುತಿದ್ದಳು
ಅಂದುಗೆ ಧನಿ ‘ಘಲ್” ಎನಲು
ಎದೆಯು ಮಿಡಿದು ‘ಝಲ್” ಎನಲು
ಬಂದನೇನೆ………. ಮಾಧವನು
ಎಂದು ರಾಧೆ ನೊಂದಳು
ಸುತ್ತಮುತ್ತ ಭೃಂಗ ಪಾನ
ಹೊತ್ತಿ ಎದೆಯ ರಸದ ಗಾನ
ಮೆತ್ತನೊಮ್ಮೆ ಮುಖವನೆತ್ತಿ
ಮುತ್ತನೊತ್ತ ಬಾರದೇ
ಹಾರುತಿತುವ ಸೆರಗ ಬಿಟ್ಟು
ಜಾರುತಿರುವ ನೆರಿಗೆ ಬಿಟ್ಟು
ಹಾರಿ ಬರುವ ಮುರಳಿಯಡೆಗೆ
ನೀರೆ ಓಡಿ ಬಂದಳು
ಬಂದ ನಲ್ಲನೊಡನೆ ಕೂಡಿ
ಒಂದು ಘಳಿಗೆ ಎಲ್ಲ ಮರೆತು
ಸ್ವರ್ಗ ಸೃಷ್ಠಿಯಾಗುತಿರಲು
ರಾಧೆ ಲೀನವಾದಳು.
***
ಮರೆಯಲ್ಹ್ಯಾಂಗ ಸಾಧ್ಯ !
ವಾರದ ಹಿಂದ ಊರಿಗೆ ಹೋದವ
ಇಂದ ಬಂದಾನ | ನನ್ನ ಗೆಳೆಯಾ
ಊರಿಂದ ಬಂದಾನ,
ವಾರದಿಂದ ದಾರಿ ಕಾದು ಕಾದು ನನಗ
ಕೊರಗುತಿತ್ತ ಮನಸ | ಮರಮರ
ಮರಗುತಿತ್ತ ಮನಸ,
ಕೆಂಪು ಜರೀ ಸೀರಿ ಹಸಿರು ಕುಪ್ಪಸಾ
ಇಂದ ತೊಡತೇನಿ | ಅವನ
ಮುಂದ ಸುಳಿಯತೇನಿ,
ನದಿಯ ದಂಡ್ಯಾ ಮಾವಿನ ನೆರಳಾಗ
ಕಾದು ನಿಲ್ಲತೇನಿ | ದೂರದಿಂದ
ನೋಡಿ ನಾಚತೇನಿ,
ಯಾರಿಗು ತಿಳೀಧ್ಹಂಗ ನನ್ನ ನೋಡು ಅವಾ
ಹುಬ್ಬ ಹಾರಸತಾನ| ಮೀಸಿ ನಡುವ
ನಗೀ ತುಳಕಸತಾನ,
ದೂರದ ಊರಾಗ ನನ್ನ ಮರೆಸುವಂಥ
ಹೂವ ಕಂಡನೇನ | ನನ್ನ
ನೆನಪು ಮರತನೇನ,
ನಾನ ರಾಧೆಯಾಗಿ, ಅವನ ಕೃಷ್ಣನಾಗಿ,
ಯಮುನ ನದಿಯೇ ಇದ | ಅವ ನನ್ನ
ಮರೆಯಲ್ಹ್ಯಾಂಗ ಸಾಧ್ಯ
-ಡಾ|| ವೃಂದಾ ಸಂಗಮ.
೧.
ಮೌನರಾಗ
ಹೃದಯದಿಂದ ಹೊರಟ ಮಾತು
ಕೊರಳು ದಾಟದೆ, ಶಿಥಿಲವಾಯಿತೇ…
ಮನದ ಪುಟದ ಮೇಲೆ ಚಿತ್ರ
ಮಂಕಾಗಿದೆ, ರಂಗು ಮೂಡದೇ…
ಶಶಿಯ ಬೆಳಕು ಸೋಕದೇನೆ
ಇರುಳು ಕಾಡಿದೆ… ಮರುಳು ಮಾಡಿದೆ…
ಸೋನೆ ಮಳೆಯ ಸಂಗೀತ
ದೂರವೆಲ್ಲೊ ಅಲೆವ ಸ್ವರದಿ
ಜೋಡಿಯಾಗಿದೆ… ಮೋಡಿಮಾಡಿದೆ.
೨.
ಭೂಮಿ ಪರಿಭ್ರಮಿಸುವುದಾದರೂ
ಸವೆದ ಪಥದಲಿ ಮತ್ತೆ ಸಾಗದು…
ನಡೆದ ದಾರಿಯಲೆ ಸುಳಿದು
ಜರುಗಿದ ಪ್ರಮಾದವನೇ
ನೆನೆದು ಅನುದಿನ
ಹಂಗಿಸುವ ಪರಿಯಾಕೆ ಮನವೇ…
-ಶಿಲ್ಪಾ ಕೆ
ಹರಿದ ಹೊಕ್ಕಳ ಬಳ್ಳಿ
ಹೌಹಾರಿದ ಕೂಸನ್ನು ಎದೆಗವಚಿಕೊಂಡು
ಗಾಬರಿ ಹೀರಿ ಹುಟ್ಟಿಸಿ ಭರವಸೆ
ಸಂತೈಸಿದ ಹಡೆದಮ್ಮಳ ಬಳ್ಳಿ ಹರಿದಿದೆ
ಚಿಗುರುವಾಗ ಎರೆದ ಕ್ಷೀರ ಸಾಗರ ಹೆಪ್ಪುಗಟ್ಟಿದೆ
ಹೆಪ್ಪುಗಟ್ಟಿದ ನೆತ್ತರನ್ನು ಕರಗಿಸಬಹುದು
ಒಣಗಿಸಿ ಕಿತ್ತೊಗೆಯಬಹುದು
ಹೃದಯವನ್ಹೇಗೆ ಒರಿಸುವುದು
ಎರಡು ಹೆಣ್ಗಳ ಒಲುಮೆ ಮಿಗಿಲಾವುದು?
ತೊದಲು ನುಡಿಗೆ ಮರುಳಾದವಳು ಅವಳು
ತೊಗಲ ಮುದ್ದೆಗೆ ಬಲಿಯಾದವಳು ಇವಳು
ಅವಳ ಅನುಭವ ಇವಳಿಗೆ ಖಾತರಿ
ನನ್ನೊಡಲಿಗೆ ಹರಿಸಿದ ನೆತ್ತರ ಬಳ್ಳಿಗೆ ಕತ್ತರಿ
ಆಗಿಬಿಟ್ಟಿದೆ ಹೃದಯದೊಳಗೆ ಮೋಹದ ಒತ್ತುವರಿ
ಬಿಗಿಹಿಡಿದು ಉಸಿರು ನೀಡಿದೋಳ ಹೆಸರುಳಿದಿಲ್ಲ
ಹೇಳದೇ ನುಂಗಿ ಕಟಿ ಬಿರುಸು ಮಾತುಗಳಿಗೆ
ಒಲವಿನ ಭಾವ ತುಂಬಿ ಪದ ಹಾಡಿದೋಳ ಗುರುತಿಲ್ಲ
ಹಾದರ ಮಾಡಿದ ಕಾಯಕ್ಕೆ ಉದರ ಹರಿದು ಬೆಳಕಿಗೆ
ಒಡ್ಡಿದೋಳಿಗೆ ಕೈ ಹಿಡಿಯೋ ಬೆರಳಿಲ್ಲ
ಹೊಕ್ಕಳ ಬಳ್ಳಿಗೆ ಇಕ್ಕಳ ಹಾಕುವ
ತಿಕ್ಕಳು ಮನಸಿಗೆ ಧಿಕ್ಕಾರ
ಹಿಡಿ ಪ್ರೀತಿ, ಬೊಗಸೆ ತುಂಬ ಅನ್ನ ನೀಡದ
ಉಪವಾಸಕೆಡವಿ ಘಾಸಿ ಮಾಡುವ
ಕ್ರೂರಿ ಹೊಕ್ಕಳ ಬಳ್ಳಿಗೆ ಧಿಕ್ಕಾರ ಧಿಕ್ಕಾರ
–ವರದೇಂದ್ರ ಕೆ
ಅಗೋ
ಕತ್ತಲೆಯಲೂ ಸದಾ ಜಿಂಗುಡುವ ಬೆಳಕು
ಬೆಳಕಿನ ಮರೆಯಲ್ಲಿ
ಎಷ್ಟೋ ಚೀರಾಡುವ ಒರತೆಗಳು
ಮೇಣ್ ರೋಡಿನ
ಅಕ್ಕ ಪಕ್ಕದಲ್ಲಿ ಎತ್ತೆತ್ತರ ಕಾಂಪೌಂಡಗಳ
ಮೇಲೆ ಒಣಗುತ್ತಿರುವ ಹರಕಲು ಬಟ್ಟೆಗಳು
ಕಾರಿಡಾರಿನ ಮೇಲೊಂದು ಚಾಪೆ
ಮೊಲೆ ಹಾಲು ಕುಡಿಸುವ ಅವ್ವ
ಕಪ್ಪಗೆ ಕಟು ಮಸ್ತು ಹರೆಯದ ತಂಗಿ
ಜೋತೆಗೆ
ಗಂಡುಗಳೆನಿಸಿಕೊಂಡವರು ಹರಿದ ಚಾದರಿನೊಳಗೆ ಕಾಲು ಸಿಗಿಸಿ
ಸಹಜ ಕನಸುಗಳ ತೂರಾಟ
ಇಲ್ಲಿ ಮಡಿ, ಮಡಿದೆವೆಂಬುದಿಲ್ಲ.
ಸೀದ ಕಾಲುಳ್ಳವರ ಮಡಿವಂತಿಕೆಯ
ವಕ್ರ ದೃಷ್ಟಿ
ಹೆಂಗಸಿನ ಮೊಲೆಯ ತೊಟ್ಟು
ಎದೆಯ ಭಾಗದ ಮೇಲೆ ಮಾತ್ರ
ಸೀಟಿ ಬದಲಾಗುತ್ತಿದೆ
ಮೆಟ್ರೋ, ಬಸ್ಸು, ಲಾರಿ, ಕಾರು ಬೈಕು
ಈಗ ಟೈಯರುಗಳಿಗಿರುವ ಬೆಲೆ
ಹೆಜ್ಜೆಗಳಿಗಿಲ್ಲ
ಅದಕೆಂತಲೇ ಬುಲೆಟ್ ಟ್ರೇನು,
ಆಗಸದೆತ್ತರ ಪ್ಲೈಟು
ಡಿಜಿಟಲ್ ಜಗತ್ತು .
-ಸೋಮಲಿಂಗ ಮೆಳವಂಕಿ
ಸರ್ವಂ ಪ್ರೇಮಮಯಂ :-
ಮನಸು ತೆರೆದುಕೊಂಡು
ಒಮ್ಮೆಯಾದರೂ ಜಗವನ್ನ
ನೋಡಿದ್ದೇಯಾದಲ್ಲಿ
ಪ್ರೀತಿಯೊಂದನ್ನ ಹೊರತುಪಡಿಸಿ
ಬೇರಾವ ಮಾಧುರ್ಯವೆನ್ನುವುದೇ ಇಲ್ಲ .
ಭುವಿಯ ಕಣ ಕಣದೊಳಗಿನ
ಕಾಣದಂತಿರುವ ಪ್ರೀತಿ
ಹಸಿರ ಹೆತ್ತು ವನವ ಹೊಮ್ಮಿಸಿದರೆ
ಮೋಡದ ಹನಿ ಹನಿಯೊಳಗೆ ಹುದುಗಿದ
ಪ್ರೀತಿ ಧುಮ್ಮಿಕ್ಕಿ ಭೋರ್ಗರೆವ
ನದಿಗಳನ್ನ ಉಗಮವಾಗಿಸಿಹುದು
ಅರಳಿ ನಲಿವ ಅರುಣನ
ಆಲಾಪದಿಂದ ಆರಂಭಗೊಂಡು
ಕತ್ತಲಾವರಿಸಿ ನೆತ್ತಿಯ
ಮೇಲಿನ ಆಗಸದೊಳಗೆ
ನಕ್ಷತ್ರಗುಚ್ಛಗಳ ನಡುವೆ ಮೂಡುವ
ಶಶಿಯವರೆಗೂ ಪ್ರೀತಿಯೇ ತೊಟ್ಟಿಕ್ಕುತ್ತಿರುವುದು .
ಮೊಗ್ಗುಗಳು ಅರಳಿ ಹೂವಾಗಿ
ನಲಿಯುತ್ತಿರಲು ಎಲ್ಲೋ
ಅಡಗಿದ್ದ ದುಂಬಿಗಳು
ಮಕರಂದ ಹೀರಲು ಹಾರಿಬರಲು
ಪ್ರಕೃತಿಯೊಳಗಿನ ಪ್ರೀತಿಯೇ ಕಾರಣವಲ್ಲದೆ ಮತ್ತೇನು ?
– ಪ್ರವೀಣಕುಮಾರ್ ಗೋಣಿ
ನಾನೆಂದೂ ನಿನ್ನ ಪ್ರೀತಿಸಲೇ ಇಲ್ಲ!
ನಿನ್ನ ಒಂದೊಂದು ನಡೆ ನುಡಿಯಲ್ಲೂ
ನನ್ನ ನಾ ಕಂಡೆ !
ನಿನ್ನ ನೋವನು ನನ್ನದೇ ಎಂದು ನೊಂದು ಅನುಭವಿಸಿದೆ
ನಿನ್ನ ಖುಷಿಯಲಿ ನನ್ನ ಖುಷಿಯಿದೆಯೆಂದು ಸಂಭ್ರಮಿಸಿದೆ !
ಆದರೂ ನಾನೆಂದೂ ನಿನ್ನ ಪ್ರೀತಿಸಲೇ ಇಲ್ಲ !!
ನಿನ್ನ ಪ್ರತಿ ಹೆಜ್ಜೆಯಲೂ ಹೆಜ್ಜೆಯನಿಡುವ ಕನಸ ಕಂಡೆ !
ನೀನಿಡುವ ಪ್ರತಿ ಹೆಜ್ಜೆಯೂ ಉನ್ನತಿಗೆ ಸೋಪಾನವಾಗಬೇಕೆಂದುಕೊಂಡೆ !
ನೀನೇರಿದ ಎತ್ತರವ ಕಂಡು ಸಂತಸಗೊಂಡೆ
ಆದರೂ ನಾನೆಂದೂ ನಿನ್ನ ಪ್ರೀತಿಸಲೇ ಇಲ್ಲ !!
ನೀ ಸನಿಹವಿರದಿದ್ದರೂ, ಸದಾ ಮನಸಿಗೆ ಜೊತೆಯಾದೆ !
ಅಕ್ಕರೆ ಪ್ರೀತಿಯಲಿ ದೂರದ ಹಿಮಾಲಯಕೂ ಎತ್ತರವಾದೆ !
ಮಮತೆ ಮೋಹದಲಿ ಪ್ರೇಮಕಾಶ್ಮೀರವಾದೆ
ಆದರೂ ನಾನೆಂದೂ ನಿನ್ನ ಪ್ರೀತಿಸಲೇ ಇಲ್ಲ !!
ಯಾವ ಜನ್ಮದ ಮೈತ್ರಿಯೋ ನಾನರಿಯೆ
ಈ ಜನ್ಮದ ಪ್ರೀತಿಗೆ ನಾ ಮಾರುಹೋದೆ !
ಪ್ರೀತಿಗೇ ಪ್ರೀತಿಯ ಅರ್ಥವನು ನಾ ಹೇಳ ಬಯಸಿದೆ !
ಆದರೂ ನಾನೆಂದೂ ನಿನ್ನ ಪ್ರೀತಿಸಲೇ ಇಲ್ಲ !!
ದೇವರಾಜ್ ನಿಸರ್ಗತನಯ
ಬರುವುದಿಲ್ಲ ಮರಳಿ . . . :
ಹಸಿಯ ಬೆಣ್ಣೆಯ
ಹೊಳೆವ ರೂಪ
ಕಣ್ಣಿಗಂತು ಚೆಂದ
– ಖೋಲಿ ತುಂಬ ಘಮಲು . . .
ದೂರ ಬೆಳಕಿನ
ಕುಣಿತ ಬೆಂಕಿ
ಮಾಯದಲ್ಲಿ ಬೆಳೆವ ಅಂಕಿ
– ಸೆಳೆವ ಬಾಹು
ಬಂಧನ . . .
ಬೆಣ್ಣೆ ಓಡಿ ಹೋಗಲತ್ತ
ನಿಮಿಷದಲ್ಲಿ ತುಪ್ಪ
– ಹೊತ್ತಿ ಹೋದ
ವಾಸನೆ . . .
ಉರಿಯು ಆರುವುದಿಲ್ಲ
ಚೂರೂ ಬಾಗುವುದಿಲ್ಲ
– ಆದರೆಂದೂ
ಬೆಣ್ಣೆ ಮರಳುವುದಿಲ್ಲ . . . !
– ರಮೇಶ ಹೆಗಡೆ
ಮುಪ್ಪಾದ ಮರಕೆ ಚೆಲುವು ಬಂದಾಗ
ಮುಪ್ಪಾಗಿದ್ದ
ತನು ಮನವು
ಕೊತ ಕೊತನೇ
ಕುದಿದು ತಾಪವೂ
ಹುದುಗಿ ಹೋಗಿತ್ತು
ಮನದೊಳಗಿನ
ಪಿಸುಮಾತು
ಪಕ್ಕಕ್ಕೆ ಸರಿದು,
ನಾಲಿಗೆ ಮೇಲಿನ
ಅಕ್ಷರಗಳು
ಅರ್ಥ ಕಳೆದುಕೊಂಡು
ಕರಗಿ ಹೋಗಿದ್ದವು
ಮುಪ್ಪಾದ ಜೀವವನ್ನು
ಕೈಯಲ್ಲಿ
ಹಿಡಿದು ನಿಂತಾಗ,
ಇನ್ನೊಂದು ಮುಪ್ಪಾದ
ಜೀವ ಆಸರೆಗೆ ಬಂದು
ತನು ಮನವು
ಮಿಡಿದು ಕರಗಳು
ಆಲಂಗಿಸಲು ಹಾತೊರೆಯುತ್ತಿತ್ತು
ನಲುಗಿ ಹೊಗಿದ್ದ
ಮನದ ಪಿಸುಮಾತಿಗೆ
ತುಸು ಪ್ರೀತಿ ಸಿಕ್ಕಿತ್ತು.
ಮುಪ್ಪಾದ ಜೀವಕ್ಕೆ
ಮತ್ತೆ ಚೆಲುವು ಬಂದಿತ್ತು.
-ಚೈತ್ರಾ ವಿ.ಮಾಲವಿ
ಪಿಸು ಮೌನವೇ ..ಮಾತಾಡು..
ಕಾಡಿನ ಒಲವೇ.. ಮಾತಾಡು..
ಆಡಿದ ಮಾತುಗಳಲ್ಲಿ ಏನಾದರೂ
ತಪ್ಪು ಇದ್ದರೆ ಒಮ್ಮೆ ಕ್ಷಮಿಸಿ..
ಹಕ್ಕಿಯ ಪರಿಭಾಷೆಯಲಿ ಮಣಿಸಿ
ಆಕಾಶದಷ್ಟು …ಮಿಂಚುಮಿನಪ ಅಷ್ಟು
ನಿನ್ನೇ ರಮ್ಮಿಸಿ
ತಣ್ಣನೇ ಸುಯ್ಯವ ಮಳೆಯಷ್ಟು
ಮಿಗಿಲಾಗಿ ಧ್ಯಾನಿಸುತ್ತಿರುವೇ
ಮಿರಿ ಮಿರಿಯುವ ಹಸಿರು ಕಣಿವೆ
ಜೀವದಾಳದಾಣೆ
ಮಿಂಚುಹುಳು ತುಂಬಿದ
ಇರುಳಮೌನದ ಬೆಳಕಿನ ಉಸಿರೇ
ತಂಗಾಳಿ ಪರಿಶುದ್ದತೆಯ ಮಿನಿದು
ಈಗ ತಾನೇ ಹನಿದ ಇಬ್ಬನಿ ಹೂವಿನ ಚೆಲುವು
ಪಿಸುಗುಟ್ಟಿದೆ
ಜಿನಿಯುವ ಹಾಲಿನ ಝರೀ ನಾಚಿ
ಒಲವಿನ ಸಂದೇಶ ಸಾರಿ ನೀ ಮರೆತರೆ
ಈ ಕಂಗಳೇ ಶೂನ್ಯವಾದಂತೆ
ಈ ಪ್ರಕೃತಿಯಷ್ಟು ಪ್ರೇಮವು ಸತ್ಯವೇ
ನಂಬು ಏಕಾಮೇವ ಏಕಾಂತದ ಇನಿಯನೇ
ನಿನ್ನಲ್ಲಿ ಹೇಳದೆ ಮುಚ್ಚಿಟ್ಟ
ವಿಶೇಷ ವಿಷಯಗಳು ಸಹಾಸ್ರರು
ಶೋಲಾದ್ರಿ ಪಿಸುಮಾತುಗಳ ಆಲಿಸಿದೆ
ಸುಮ್ಮನೆ ಯಾಕೆ ನನ್ನನ್ನು ದೂರುವೇ
ಅದೆಷ್ಟು ಮಳೆಕಾಡಿನ ವಿಷಯಗಳವೇ ತಿಳಿಸಲು
ಅನುಮಾನ ಮಾಡದೆ
ಮಳೆಯಾಗಿ ಸುರಿದು ಬಿಟ್ಟರೆ ನೀ
ಜುಳು –ಜುಳುವ ನೀರಧಾರೆ
ದಮನಿ ಪಾಚಿ ಹಸಿರಾಗುವುದು
ಕತ್ತಲ ನೆರಳಿನ ಕಾಡಿನ ಸೊಬಗೊಳಗೆ
ಪ್ರಾಣದುಸಿರಿನ ಕಣಿವೆಯೇ
ನಮ್ಮೂರು ರೆಂದು ಹೇಗೆ ತಿಳಿಸಲಿ
ನಿನ್ನೆ ಗುಟ್ಟ ಹೇಳು
ನಾನಿಲ್ಲಿ ವಿನೀತಳಾಗಿ ಬಿನ್ನಪಿಸುತ್ತಿರುವೆ..
-ನಂದಿನಿ ಚುಕ್ಕೆಮನೆ
ನಾ ಹೋಗಿ ಮತ್ತೆ..ಬರುತ್ತೇನೆ..
ನಾನು ಸತ್ತಿಲ್ಲ ಸಾಯೋದೂ ಇಲ್ಲ
ಭಾರತಾಂಬೆಯ ಮಡಿಲಲಿ ಮಲಗಿದ್ದೇನೆ
ಕೊಂಚ ವಿಶ್ರಾಂತಿಗಾಗಿ ನನ್ನವರ ಜತೆಯಲೇ
ಛಿದ್ರವಾಗಿರಬಹುದೇನೋ ನನ್ನದೀ ನಶ್ವರ ದೇಹ
ದೇಶ ಛಿದ್ರವಾಗಲು ಬಿಡದಂತೆ ಹಿಡಿದಿದ್ದೇನೆ
ರಟ್ಟೆಯ ಕಸುವ ತುಂಬಿಸಿಬಂದೇ ಬರುವೆ
ಈಗ ಹೀಗೆ ಹೋಗಿ ಮತ್ತೆ ಹಾಗೇ
ನಾ ಹೋಗಿ ಬರುತ್ತೇನೆ
ನಾವು ವೀರ ಯೋಧರು
ಈ ನೆಲದ ನಾಡಿಮಿಡಿತ
ನಮ್ಮ ಗೆಲುವಿನಲಿದೆ
ಅಖಂಡ ಭಾರತೀಯತೆಯ ಗುರಿ
ಎವೆಗಳಿಲ್ಲದ ನಯನದಂದದಿ
ಅವಳ ರಕ್ಷಣೆ ನಮ್ಮ ಹೊಣೆ
ಹಿಮಾಲಯದ ಅಚಲತೆ
ನಮ್ಮ ಧೈರ್ಯದ ಸಂಕೇತ
ಗಿರಿಕಂದರಪರ್ವತಗಳೆನೆಲ್ಲ
ಸಂರಕ್ಷಿಸುವ ಧರ್ಮ ಪಾಲನೆಗೆ
ಹೊಸಶಕ್ತಿ ಸಂಚಯಕಾಗಿ
ಹೋಗಿ ಮತ್ತೆ ಬರುತ್ತೇನೆ
ನಾ ಹೋಗಿ ಬರುತ್ತೇನೆ
ಯೋಧ ನಾನು,
ದಂಡೆತ್ತಿ ಬಂದವರ ರುಂಡ ಚಂಡಾಡುವ.
ಯುದ್ಧ ನಮ್ಮ ಕರ್ತವ್ಯ
ಸಮರ ಸಾರಿ ನೋಡಿ ನೀವು
ಎದೆಗೆ ಎದೆ ಕೊಟ್ಟು ಹೋರಾಡುತ್ತೇನೆ
ಸಾವಿನ ಹೆದರಿಕೆಯ
ನಿಯತಿ ಮಡಿಲಲಿಟ್ಟಿರುವೆ
ಪ್ರತಿ ಹೃದಯದ ಪ್ರೀತಿ ಇದೆ
ಆ ತಾಯಿಯ ದರ್ಪಣ ನಮಗೆ
ಪುಂಡಪೋಲಿಗಳಂತೆ ಕಲ್ಲೆಸೆದು
ರಣಹೇಡಿಯಂತೆ ಓಡಬೇಡಿ
ನಿಮ್ಮ ಕಾಲುಗಳೂ ಛಿದ್ರವಾದಾವು ಜೋಕೆ !
ಭಂಡರ ಪುಂಡಾಟ ಹುಟ್ಟಡಗಿಸಲು
ಹೋಗಿ ಮತ್ತೆ ಬರುತ್ತೇನೆ
ಹೋಗಿ ಬರುತ್ತೇನೆ
ಗಡಿಯ ಆಚೆಯೂ ಹಲವು
ಪರಿವಾರಗಳಿರಬಹುದು
ಛಿದ್ರವಾಗಿರಲೂ ಬಹುದು ಅವರ ಹೃದಯಗಳೂ
ನನ್ನ ತಾಯಿ ಕರುಣಾರ್ದ್ರದವಳು ನೀಡುವುಳು
ಅವರ ಮಕ್ಕಳಿಗೂ ಸಾಂತ್ವನದ ಹನಿಗಳನು
ಯುದ್ಧವೆಂದರೆ ಅವರಿಗೆ ತಿಳಿಯುವುದೇ ಬೇಡ
ಶಾಂತಿಯ ಗಾಳಿ ಅನುಕ್ಷಣವೂ ಪಸರಿಸುತಿರಲಿ
ಈ ಜಗದ ತುಂಬ…
ಮಾನವತೆಯ ಲತೆಯಲಿ
ದೇಶ ಪ್ರೇಮದ ಹೂವು ಅನವರತ
ಅರಳುತಿರಲಿ ಹೂವು ಕಾಯಾಗಲೆಂದೇ
ಹೋಗಿ ಮತ್ತೆ ಬರುತ್ತೇನೆ
ನಾ ಹೋಗಿ ಬರುತ್ತೇನೆ
-ಜಹಾನ್ ಆರಾ ಎಚ್ ಕೋಳುರು
ಹೇ ಜೀವಾ..
ಕೆಲವೊಮ್ಮೆ ಶಾಂತವಾದ ವಾತವರಣವೂ ಕೂಡ
ಮನದಲ್ಲಿ ಹಲವು ಗಲಭೆಗಳನ್ನು ಎಬ್ಬಿಸಿಬಿಡುತ್ತದೆ..
ಅಂತಹ ಸಮಯದಲ್ಲಿ ಸಮಾಧಾನದತ್ತ
ನನ್ನ ಕರೆದೊಯ್ಯುವ ಶಕ್ತಿ ನಿನ್ನ ಮಾತುಗಳಿಗಷ್ಟೇ ಇರೋದು..!
ನಿನ್ನ ಬಯಸಿದ ಹಂಬಲದ ಉಸಿರು ಭಾವಲೋಕಕ್ಕೆ ನನ್ನ
ಕರೆದೊಯ್ದಿತು.. ನಿನ್ನ ಪ್ರೇಮದ ದಿವ್ಯತೆಯ ತೋರಿಸಿತು..
ಈ ದಿವ್ಯತೆ ಎದೆಯೊಳಗೆ ಒಂದು ಸ್ಮಾರಕವಾಗಿ ಉಳಿಯಲಿ..
ನಾ ಮತ್ತೆ ನಿನ್ನ ಭೇಟಿಯಾಗುವವರೆಗೆ..
ಅಂತರಾಳದ ದೀಪ ಹೊತ್ತಿಸಿ
ಮನದ ನೆಲ ಬೆಳಗುವುದು
ನಿನ್ನ ಪ್ರೇಮ..
ಈ ದೀಪಕೆ ಜೀವದ ಎಣ್ಣೆ ತುಂಬು.. ಮಂಕಾಗಲು ಬಿಡದಿರು..
ಕಂಗಳಿಗೆ ಕಣ್ಣೀರು ತುಂಬಿ ಮಂಜಾಗಲು ಬಿಡಬೇಡ..
ನಿನ್ನ ಕಾಣದೆ ಇರಲು
ಹೃದಯ ದಾಹದಿಂದ ಬಳಲಿ
ನಾ ನಾಶವಾದಂತೆ ಅನಿಸುವುದು..
ನೀ ನನ್ನ ಅದೆಷ್ಟು ಪ್ರೇಮಿಸುವೆಯೋ!?
ಆದರೆ.. ನಾ ನಿನ್ನ ಪ್ರೀತಿಸುವ ಪ್ರತಿ ಕ್ಷಣವೂ..
*ದೇವರು ನನ್ನ ಹೃದಯಲ್ಲಿದ್ದಾನೆ ಎಂದುಕೊಳ್ಳುವುದಕ್ಕಿಂತ..*
*ನಾ ದೇವರ ಎದೆಯಲ್ಲಿದ್ದೇನೆ*
ಎಂದುಕೊಳ್ಳುತ್ತೇನೆ..
ನಾ ನಿನಗೆ ದೇವತೆಯಾಗಲಾರೆ..!
ನಿನ್ನ ಪ್ರೀತಿಗೆ ನಾ ದಾಸಿಯಾಗಿಯಾಗಿರಲು
ಬಯಸುತ್ತೇನೆ..
ನನ್ನ ಪ್ರೀತಿಗೆ ನೀನೆಂದಿಗೂ *ದೊರೆಯೇ..!*
ಕೇವಲ ಬದುಕಿರುವ ದಿನಗಳಲ್ಲೇ ಅಲ್ಲ ನಾ ನಿನ್ನ ಜೊತೆಯಿರಲು
ಬಯಸುವುದು..
ಸಾವಿನ ಕೊನೆ ಕ್ಷಣದಲ್ಲೂ..
ಸಾವಿನಲ್ಲೂ ಗೋರಿಯ ಒಳಗೂ
ನಾವು ಜೊತೆಯಿದ್ದಾಗ
ನಮ್ಮಗಿದ್ದ ಆತ್ಮಗಳು ಹೊರಬಂದು
ಈ ಪ್ರೇಮದ ದಿವ್ಯತೆಯಲ್ಲಿ ಜೊತೆಯಾಗಬೇಕು
ಆಗಷ್ಟೇ ನಾವಿಬ್ಬರು ಪ್ರೀತಿಸಿ ಜೀವಿಸಿದ
ಈ ಬದುಕಿಗೆ ಸಾರ್ಥಕತೆಯ ನೀಡಬಲ್ಲೆವು..
ನನ್ನ ಪ್ರೇಮ ನಿನಗೆ ಅತಿಶಯ ಎನಿಸಬಹುದು..
ನಾ ನಿನ್ನೊಟ್ಟಿಗೆ ಎಷ್ಟು ಕಾಲ ಪ್ರೇಮದ ಜೀವನ ನಡೆಸುತ್ತೇನೋ..
ಅದಕ್ಕಿಂತ ಹೆಚ್ಚು ಒತ್ತುಕೊಡುವುದು
ನಿನ್ನೊಡನೆಯೇ ಉಸಿರು ಹೋಗಲಿ ಎಂದು ಬಯಸುವುದು..
ಈ ನನ್ನ ಸಣ್ಣ ಕೋರಿಕೆಗೆ ಯಾವ ದೈವೀ ಹಸ್ತಗಳು ಕೈ ಅಡ್ಡ ಹಾಕದಿರಲಿ..
ನನ್ನೊಳಗಿರುವ ಈ ನಿನ್ನ ಮೇಲಿನ ಅಚಲ ಪ್ರೇಮ ನನ್ನ ಬಲಶಾಲಿಯೂ..
ನನ್ನ ದೌರ್ಬಲ್ಯವೂ.. ಅದನ್ನು ನೀನಷ್ಟೇ ನಿಭಾಯಿಸಬಲ್ಲೆ..
ನಾ ನಿನ್ನ ಪ್ರೀತಿಸುತ್ತೇನೆ ಎಂದು ಹೇಳಬೇಕೆಂದು
ಅದೆಷ್ಟೋ ಬಾರಿ ನಿನಗೆ ಹೇಳಬೇಕೆಂದು ಎಂದುಕೊಳ್ಳುತ್ತೇನೆ..
ಆದರೆ ಅದು ಕೇವಲ ಶಬ್ದವೆನಿಸಿಬಿಡಬಹುದೇನೋ ಎಂದೆನಿಸುತ್ತದೆ..
ನನ್ನ ಪ್ರೇಮವನ್ನು ನಾ ನಿನ್ನೊಂದಿಗೆ ಕಳೆಯ
ಬಯಸುವ ಜೀವನವನ್ನು ಈ ಪತ್ರದ ಮುಖೇನ ಹೇಳಿದ್ದೇನೆ..
ಆದರೂ ಹೇಳಲಾಗದ ಅದೆಷ್ಟೋ ಭಾವನೆಗಳು,
ನಿನ್ನೆಡೆಗಿನ ನನ್ನ ಅದಮ್ಯ ಪ್ರೀತಿಯನ್ನು ನಾ ಹೇಳದಿದ್ದರೂ..
ಪದಗಳಿಗೂ ಮೀರಿದ ನನ್ನ ಮೌನದಲ್ಲೇ ಎಲ್ಲವೂ ಅಡಗಿದೆ..
ಈ ಪತ್ರದಲ್ಲಿಲ್ಲದ ಮಾತನ್ನು ನನ್ನ ಮೌನದಲ್ಲೇ ನೀನು
ಕೇವಲ ನೀನಷ್ಟೇ! ಅರ್ಥಮಾಡಿಕೊಳ್ಳಬಲ್ಲೆ…
ನನ್ನ ಪ್ರೇಮದ ನಿವೇದನೆಯನ್ನು
ನೀ ಒಪ್ಪಿಕೊಳ್ಳುವೆ ಎಂಬ
ನಿರೀಕ್ಷೆಯಲ್ಲಿ..
ನಿನ್ನವಳು
ಮುದ್ದು
–ನಂದಾ ದೀಪಾ, ಮಂಡ್ಯ
All poems are amazing.. but Dr. Vranda’s poem touched me a lot.. nice work.. keep it going !!
ಡಾ. ವೃಂದಾ ಸಂಗಮ್ ಅವರು ಇಷ್ಟು ಒಳ್ಳೆಯ ಕವನ ಬರೆದು ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟುಕೊಂಡು ಪ್ರಕಟಿಸುವುದೋ ಬೇಡವೋ ಅನ್ನುವ ಗೊಂದಲದಲ್ಲಿದ್ದರು. ಸ್ಬಲ್ಪ ಧೈರ್ಯ ಹೇಳಿದ ಮೇಲೆ ಪ್ರಕಟಿಸಲು ಒಪ್ಪಿಕೊಂಡರು. ಸೊಗಸಾದ ಕವನ.