Me too
ಮುಗಿದು ಹೋದ ಕಥೆಗೆ
ಅನುಭವಿಸಿಯಾದ ವ್ಯಥೆಗೆ
ಯಾಕೆ ಬೇಕಿತ್ತು ಈಗ Me too
ಬಿಸಿ ಇರುವಾಗಲೇ ಮುಗಿಸಬೇಕಿತ್ತು
ಕಂಪ್ಲೆಂಟ್ ಕೊಟ್ಟು
ಆಗುತ್ತಿತ್ತಾಗಲೇ ಗುಟ್ಟು ರಟ್ಟು
ಅಂದು ಅನುಭವಿಸುವಾಗ ಮಜ
ಈಗ ಅದು ಸಜ
ಇರಬಹುದು ಇದಕೆ ಕಾರಣ ದ್ವೇಷ
ಜೊತೆಗೆ ಹಣದ ಆಮಿಷ
ಯೋಚಿಸಲಿ ಪೂರ್ವಾಗ್ರಹ ಬದಿಗಿಟ್ಟು
ಸತ್ಯಾಸತ್ಯತೆಗೆ ಬೆಲೆಕೊಟ್ಟು
ಬಲಿಯಾಗದಿರಲಿ ಮರ್ಯಾದೆ
ಸುಮ್ಮ ಸುಮ್ಮನೆ ತೆಗೆಯದಿರಲಿ ತಗಾದೆ
ನಿಜಕೂ ಅನ್ಯಾಯವಾಗಿದ್ದರೆ ಅದು ಸರಿ
ಬರಲಿ ಬೆಳಕಿಗೆ ರಕ್ಕಸರ ತೇವಲಿ
ಅನ್ಯಾಯವಾದರೂ ಆಗಿಹರಾಗಲೇ ಬಲಿ
ಕಳೆದುಹೋದದ್ದಕ್ಕೆ ಚಿಂತಿಸುವುದ ಬಿಡಿ
ನಿಜವಾಗಲೂ ನಮಗಿದ್ದರೆ ಅಭಿಮಾನ
ಭಾರತೀಯರಿಗಾಗದಿರಲಿ ಅವಮಾನ
ಎಷ್ಟೇ ಇದ್ದರೂ ತಾಜಾ ಒಗ್ಗರಣೆಯ ಘಾಟು
ಮೂಗಿಗೆ ಬಡಿಯದಿರುವುದೇ ಹಳಸಿದ ವಾಸನೆಯ ಏಟು
ಕೆಸರು ತಕ್ಷಣ ತೊಳೆದುಕೊಂಡು ಬಿಡಿ
ಕಲ್ಲೆಸೆದಷ್ಟೂ ಆಗುವುದು ರಾಡಿ
ಖಂಡಿಸಬೇಕಿತ್ತು ತತ್ ಕ್ಷಣ
ಬಯಲಾಗುತ್ತಿತ್ತು ಅವರವರ ಬಣ್ಣ
ಈಗ ಕೆದಕಿದಷ್ಟೂ ಉಲ್ಬಣಿಸುವುದು ವೃಣ
Me too ವಿನಿಂದ ಬಯಸದಿರಿ ಕರುಣ
ಇರಲಿ ಅನ್ಯಾಯದ ವಿರುದ್ಧ ಸೆಣಸಾಟ
ಆದರೆ ಆತ್ಮಸಾಕ್ಷಿಗಾಗದಿರಲಿ ತೊಳಲಾಟ
ತಪ್ಪಿಲ್ಲದಿರೆ ನಡೆಸೋಣ me too ಅಭಿಯಾನ
ಕಾಂಚಾಣಕೆ ಮಾರಿಹೋಗದಿರಲಿ ಸ್ವಾಭಿಮಾನ
ನಿಜನೊಂದ ಮನಕೆ ಸಿಗಲಿ ಸಾಂತ್ವನ
ಸಜ್ಜನತೆಗಿರಲಿ ಸದಾ ಸಮ್ಮಾನ
ನಿರಪರಾಧಿಗಳ ಕಾಡದಿರಲಿ Me too ಕಾಟ
ನೊಂದವರ ಜೊತೆ We too ಇದು ದಿಟ
@ ನಾವೆ
ಐ ಲವ್ ಯೂ…..
ಎನ್ನ ಮನಕು ನಿನ್ನ ಗುಣಕು
ಅದೇನೋ ಅನೂಹ್ಯ ಸಂಬಂಧ
ಬದ್ಧತೆ ಸಿದ್ಧಾಂತಗಳ ಹಂಗು
ಅದಕು ಇಲ್ಲ ನಿನಗೂ ಇದ್ದಂತ್ತಿಲ್ಲ
ನಿನ್ನಂತೆಯೇ ಮನಸ್ಸು ಸಹ
ಮನಬಂದಂತೆ ಹರಿದಾಡಿ
ನೀ ಎಳೆದುಯ್ಯದಕಡೆಗೆಲ್ಲ
ಕಲ್ಲುಮುಳ್ಳು ಯಾವದೂ ಲೆಕ್ಕಿಸದೆ
ನಿನ್ನ ಹಿಂಬಾಲಿಸಿ ನಿನ್ನ
ಉಸಿರಲ್ಲಿ ಉಸಿರಾಗಿ ಬೆರತಿದೆ
ವಿಕ್ಷಿಪ್ತ, ಅಲೆಮಾರಿ ನಿನ್ನಂತೆ
ಗೊತ್ತುಗುರಿ ಇಲ್ಲದೆ
ಸಂಚರಿಸೊ ಪಯಣಿಗ
ನೀನೇ ಅದಕೆ ಗುರು ಆದರ್ಶ
ಮಾದರಿ ಮಾರ್ಗದರ್ಶನವೆಲ್ಲ
ಬಸ್ಸಿನ ಹೆಸರು ಸಹ ಓದದೇ
ಯಾವುದೋ ನಿಲ್ಧಾನಕ್ಕೆ ಹತ್ತಿ
ಇನ್ನಾವುದೋ ನಿಲ್ದಾಣಕ್ಕೆ ಇಳಿಯುವ
ನಿನ್ನಂತೆಯೇ ಅಶಿಸ್ತು ಅಬದ್ಧತೆ
ಸುಳ್ಳು ಸಿದ್ಧಾಂತ
ಪೊಳ್ಳು ಭೋದನೆಗಳ
ಅಭದ್ರತೆಯ ನಡುವೆ
ನಶೆಯೇರಿಸಿಕೊಂಡು
ಜೋಲಿಹೊಡೆಯುತ್ತ ನಡೆದವ
ಅಸ್ತವ್ಯಸ್ತ ತೆಲೆಗೂದಲು
ಕರಚಲು ಗಡ್ಡ ಮೀಸೆಯಂತೆ
ಅಡ್ಡಾದಿಡ್ಡಿ ಯೋಚಿಸಿತ್ತಾ
ಏನೇನೋ ಯಾಚಿಸುತ್ತ
ಅಲೆಮಾರಿಯಾಗಿ ಅಂಡಲೆದವ
ಜತನದ ಒಳ್ಳೆತನದಿಂದ ಮೆಚ್ಚಿಸಿದಂತೆ
ಅಚಾನಕ್ಕಾ ಕೊಟ್ಟ ಶಾಕಗಳಿಂದ
ಬೆಚ್ಚಿಬೀಳಿಸಿದಾಗಲೂ ಮಾಡ್ಕೊಂಡ
ಗಂಡನಿಗೆ ನಿರ್ವಾಹವಿಲ್ಲದೆ
ಒಪ್ಪಿಕೊಂಡಂತೆ ಅಪ್ಪಿಕೊಂಡಂತೆ
ಪೂರ್ವಸಿದ್ಧತೆ,
ಮುಂದಾಲೋಚನೆಗಳ್ಯಾವೂ ಇಲ್ಲದೆ
ಎಲ್ಲೋ ಹುಟ್ಟಿ ಹೆಸರಿಲ್ಲದಂತೆ ಎಲ್ಲೋ
ಸತ್ತು ಹೋಗುವ ಜೀವಕೆ ಕಾಲವೇ ಗತಿ …
ಒಳ್ಳೆಯದು ಕೆಟ್ಟದರ ಲೆಕ್ಕಾಚಾರಗಳು
ತೆಲೆಕೆಳಗಾಗಿ
ಮರಣಾನಂತರವೂ ಜಗಕೆ
ನೆನಪುಗಳು ನಿರಂತರವಾಗಿಸೊ
ಹಿತಶತ್ರು ಜಿಂದಗಿ
ಐ ಲವ್ ಯೂ…..
– ಅಶ್ಫಾಕ್ ಪೀರಜಾದೆ
ಬಿಸಿಲು ನೋಟದ ರೆಕ್ಕೆಗಳು
ಬಿಸಿಲ ನೋಟದ ರೆಕ್ಕೆಗಳು
ಬೆಳಕ ಪೊರೆಯ ಸೆಳುವಿನಲಿ
ಬತ್ತದ ಗರಿ ನುಂಗಿ
ಮಣ್ಣ ಪದರಿನ ತೊಳ್ತೆಕ್ಕೆ ಹೊಕ್ಕು
ಹೊಲ ಗದ್ದೆಯ ಬದುವಿನ ಗರಿಕೆಯಲಿ
ಸೆಡವುಗೊಂಡು
ಬಯಲ ದರ್ಪದ ಕೊಡೆಯಾಗಿ ತೋರಿಕೆ
ಮೋಡದ ನೋಟಗಳು
ಬಾಯಿ ಸೆಳುವಿನ ಗದ್ದಲದಲಿ
ಒಂಟಿ ಕಡ್ಡಿಗಳ ಒಡಲು ನುಂಗಿ
ಚಂದ್ರ ತಾರೆಗಳ ಬಯಲು ಹೊಕ್ಕು
ಬರದ ತಾಣದಲಿ
ಒಣಗಿದ ಎದೆಯಾಗಿ
ಕಲ್ಲುಗಂಬದ ನದಿಯಾಗಿ ಬಿದ್ದಿವೆ
***
ಹಗಲ ಕಣ್ಣುಗಳು
ನಂಜಿನ ತಟ್ಟೆಗಳಾಗಿ
ಬಂಜರು ನೆಲದ ಬಯಕೆಗಳ ನುಂಗಿ
ಅನಾಥ ಕಂಬಿಗಳ ಕನಸುಗಳಲಿ ಹೊಕ್ಕು
ರಸ್ತೆಯ ಚಿತ್ತಗಳಲಿ
ಮೌನದ ತೊರೆಯಾಗಿ
ಮನಸು ಮುಸುಕುವ ನಡಿಗೆಯಾಗಿದೆ
ರಾತ್ರಿಯ ದ್ವನಿಗಳು
ಆಪ್ತ ನಗುವಿನ ಮೋಡಿಯಾಗಿ
ಎದೆಯ ಪಿಸುಮಾತು ತಿಂದವು
ಹಸಿವಿನ ನೆತ್ತಿಯ ಹೆಜ್ಜೆಗಳ ಹೊಕ್ಕು
ನೆಲೆಯ ತಳದ ನೆಮ್ಮದಿಯ ಬಳೆದುಕೊಂಡು
ಬೆಸುಗೆಯಲಿ ಬೆಂದುಂಡ ಮಾಸದ ಗುರುತುಗಳಲಿ
ಗುಪ್ತ ತೊರೆಯಾಗಿ
ತೊಗಲ ಗೊಂಬೆಯ ಬಾವಲಿಯಾಗಿ ಕಂಡವು
***
ಈ ಹಗಲು ಈ ಇರುಳ ನಾಲಿಗೆಗಳು
ನೋಟಿನ ಗೋಪುರಗಳಾಗಿ
ಮನುಷ್ಯ ಮನುಷ್ಯರ ಬೀಕರಿಗಿಟ್ಟವು
ತೊಗಲ ಕೆರಿಕೆಯಲಿ
ಹುಣ್ಣಿನ ಬಟ್ಟಲು ಬೀದಿಯಂಗಳ ಚಲ್ಲಿ
ಓಟಿನ ಸಂತೆಯಲಿ ಹರಾಜಿಗಿಳಿದವು
ಕಾವೇರಿದ ಬಯಲ ಮಿಡಿಗಾಗಿ
ಒಡಲ ತೇಪೆಯ ಬಿರುಕಿಗಾಗಿ
ಯಾವ ಬರವಸೆ ಮೊಳಗಿಸದೆ
ತೆಪ್ಪಗೆ ಕುಳಿತವು ರಾಜಧಾನಿಯ ಬೀದಿಗಳು
ಮರಗಲಿಲ್ಲ ಮಮತೆಯ ತೆಪ್ಪ ಕಟ್ಟಲಿಲ್ಲ
ಜನರ ನಾಡಿಯಾಗಬೇಕಿದ್ದ
ನ್ಯಾಯದ ಕಣ್ಣಿಗೆ
ಅಸಮಾನತೆಯ ಪೊರೆ ಬಿದ್ದಿದೆ
***
ಕಾಲದ ನದಿಯೊಳಗೆ ತೇವಗಟ್ಟಿ
ಉಸುರೊ ಗುರುತುಗಳು
ಹೊಸದೀಪದ ತೈಲವಾಗಿ ಬೆಳಗಬೇಕಿದೆ
ಅಲೆಯ ನಗೆಯೊಳಗೆ ಉಸುರುಗಟ್ಟಿ
ನೆನಪುಗಳ ನೆಲಕ್ಕುರುಳಿಸಿದ ಮರಗಳು
ಹಾದಿ ಜಂಗಮರ ದನಿಯಾಗಿ
ಮತ್ತೆ ಮತ್ತೆ ಚಿಗುರಲಿ
-ಕಿರಸೂರ ಗಿರಿಯಪ್ಪ
ಕಾವೇರಿ -ಸಂಗಮದ ಮಜ್ಜಿಗೆ ಮಾರುವವಳ ಗೂಡಚಾರಿಕೆ
ಹೊಳೆಗಳ ಓಣಿಗಳಲಿ
ಹಸಿರು-ಕಪ್ಪು ನದಿಗಳ ಸಂಮಿಲನ
ಹುಲ್ಲಿನ ಹಾಸುಬೆಗಳಲಿ ಅಂಬಿಗನ ಎದೆಯ ಬಡಿತ
ಕೊಂಚ ಜೋರು
ಕನಸು ಸಾವಿನ ಜೊತೆ ರೋಚಕ ಪ್ರಯಾಣ
ಕಂಗಳಲಿ ನಕ್ಷತ್ರಲೋಕ
ಸ್ವರ್ಗ ತೋರಿಸುವ ಹಬ್ಬಿ -ಹಪ್ಪಿ ಮುಸ್ಸಂಜೆ
ಕಾಡುದಿಬ್ಬದಿ ಕಂದು ನೊಂದಭಾವ
ಅಡವಿಯ ಸಿಬ್ಬಂದಿ ಸಿಪಾಯಿ
ಜೊತೆ ಗೂಢಚಾರಿಕೆ ಮಾಡುವಳು
ಮಜ್ಜಿಗೆ ಬೇಕು ಮಜ್ಜಿಗೆ ಬೇಕೆಂದು
ಕೂಗುವಳು
ಸೂಕ್ಷ್ಮತೀತ ಮನಸು ಬಚ್ಚಿಕೊಂಡು
ಗಡಿಯ ಪಹರೆಯ ಕಾಯುವಳು
ರಂಗು ಮಿಂದು ಕಪ್ಪುಬಣ್ಣದಿ ಕುದಿಯುವಳು
ಮಹಾ ನದಿಯ ಸಂಗಮ
ಒಳಸುಳಿಗಳ ಅರಿವನು ಬಲವಳು
ಆ ಮಜ್ಜಿಗೆ ಮಾರುವ
ಮೇಕೆದಾಟಿನ ಅಣಿಗಳಲಿ
ಸಾಗುವ ಜನರಿಗೆ ರಕ್ಷಣೆಯಲ್ಲಿದೆ ?
ತೂಗುವರು ಪ್ರಾಣದ ಭಯದ
ನದಿಯಲಿ ಮೀಯುವರು
ಹೊಗೆಕವಿದಂತ ಬೆಟ್ಟಗಳು ಕಾಣುವುದು
ಮುಸುಕಿನಲಿ ನಿತ್ಯ ಸಮರಸ್ಯಕೆ
ಒಳ ಚಿತ್ತಾರಗಳ ಜೊಂಪೆ ಅವಳು
– ನಂದಿನಿ ಚುಕ್ಕೆಮನೆ
ಭೋರ್ಗರೆಯಲಿ ಒಲವ ಧಾರೆ
ಒಲವಿನೊಲವೆ
ಸವಿದಷ್ಟು ಸವಿಯಬೇಕೆನ್ನುವ
ಒಲವ ಧಾರೆ ಭೋರ್ಗರೆಯಲಿ ಬಿಡು
ಕಟ್ಟದಿರು ಅದಕೆ ಬಲವಂತದಿ ಆಣೆಕಟ್ಟೆ
ಮಾನವತೆಯ ಸುಮ ತಾನಾಗಿಯೇ ಅರಳುತಿರಲು
ಜಗದಲ್ಲೆಡೆ ಪ್ರೀತಿಯ ಘಮ ಪಸರಿಸಲಿ ಬಿಡು
ಅನಾಥ ಬೀಜಗಳು ಒಲವಿನ ತಂಗಾಳಿಯಲಿ ಬೆರೆಯಲಿ ಬಿಡು
ಹಾಕದಿರು ಜಾತಿ ಮತ ಭಾಷೆಗಳ ಬೇಲಿ
ಜೀವ ಜೀವಗಳ ಜೇನಿನ ಹೊನಲು ಹರಿಯುತಿರಲು
ಭುವಿಯ ಬಯಲೆಲ್ಲ ಬಾನಿನ ಒಡಲ ಮುತ್ತಲಿ ತೇಲಲಿ ಬಿಡು
ಸೂಪ್ತ ನಿಧಿಯ ಕನಸುಗಳು ಗಗನದೆತ್ತರಕ್ಕೆ ಹಾರಲು ಬಿಡು
ಹಚ್ಚದಿರು ಭಾವಾವೇಶದ ವಿಷದಳ್ಳುರಿಯ
ಸವಿಮನನಸುಗಳ ಮುಂಗುರುಳುಗಳು ಕೆನ್ನೆಗೆ ಮುತ್ತಿಕ್ಕುತಿರಲು
ಕತ್ತಲಲ್ಲಾದರೂ ವೈಮನಸ್ಸುಗಳು ಬೆತ್ತಲಾಗಲಿ ಬಿಡು
ಈಗಲಾದರೂ ಅರಿಯಲಿ ಬಿಡು ಅಂತರಾಳವ
ಹೊತ್ತಿಸದಿರು ಬೆಂಕಿಯ ಬೆಳಕು
ಹೊಸ ಹೊಸ ಗುರಿಯೆಡೆ ಖುಷಿಯಲಿ ಗರಿ ಕಟ್ಟಿ ಹಾರುತಿರಲು
ಕಾದಿವೆ ಅಸಂಖ್ಯ ಹೃದಯಗಳು ಹಿಡಿ ಪ್ರೀತಿಗಾಗಿ
ಸರ ಹದ್ದು ಮೀರಿ ಹಾರಿ ಮೆರೆಯಲಿ ಬಿಡು
ಮುರಿಯದಿರು ಮಧುರ ಬಾಂಧವ್ಯದ ನೂರಾರು ಆಸೆಗಳ
ನಡೆಯಲಿ ಬಿಡು ಪ್ರೀತಿಯ ಅಭಿಷೇಕ ಪ್ರತಿ ಕ್ಷಣ
ಬೋರ್ಗರೆಯಲಿ ಬಿಡು ಒಲವ ಧಾರೆ ಪ್ರತಿ ದಿನ
ನಳ ನಳಿಸಲಿ ಜನ ಜೀವನ ನಿತ್ಯ ನೂತನ
-ಜಯಶ್ರೀ.ಜೆ. ಅಬ್ಬಿಗೇರಿ
ಕೈ ನೋವು . . .
ಉದ್ದುದ್ದ ಕೈಯಿದ್ದರೂ
ಯಾರೂ ಸಿಕ್ಕುವುದಿಲ್ಲ
ಮೊದಲಿನಂತೀಗ
ಎತ್ತೆತ್ತಿ ಕೈ ರಟ್ಟೆ
ನೊಂದಿದ್ದೇ ಬಂತು
ಬಸ್ಸಿನಲಿ ಕುಂತು
ದಾರಿ ಸವೆದಂತೆಲ್ಲ
ಜನರೆಲ್ಲ ದೂರ ದೂರ
ಎದೆಯೊಂದೆ ಭಾರ
ಕುರುಡು ಪಯಣದ ವೇಳೆ
ಏನೂ ತಿಳಿಯುವುದಿಲ್ಲ
ನಸುಕು ಬರಬೇಕಲ್ಲ
– ರಮೇಶ ಹೆಗಡೆ
‘ಅವಲೋಕಿಸೆ’
ಹಾಲ್ಬೆಳಕ ಇಳೆಗ್ಹರಡಿದ ದಿಂಗಳೊಳು,
ನಿರೀಕ್ಷೆಯ್ಹುಟ್ಟಿಸದ ನಿನ್ನ ಅದೃಶ,
ಸಪ್ಪೆ ಗಳಿಗೆಗಳ್ಯಾಕೋ,
ತಂಗಳೆನಿಸುತ್ತವೆ ಗೆಳತಿ..
ಇರುಳ ಇಳೆಯೊಳು,
ಅಂಬರ ಚುಂಬನ ಬಯಸಿದೆದೆಗೆ,
ತೇಲಿ ಹೋಗ್ವ ಕಾರ್ಮೋಡಗಳು..
ಕಣ್ಣ ತೀಡುತಿಹ ತಂಡಿ ಗಾಳಿಯೊಳು,
ನಿನ್ನ ಬಿಂಬವೂ ಮನದ ಭಿತ್ತಿಗ್ಹೊದೆಯುವುದೇ?!
ನೀಲಾಗಸಕೆ ತೇರ ಕಟ್ಟಿ ಮೆರೆವ ಬಯಕೆಯ,
ಧೂಳಾಗಿಸಿ ಎದೆಯಲುಳಿಯದ ಪಸೆ..
ನಿರೀಕ್ಷೆಗಳಿಗೆರಚಿದ ನೋವ ಬಂಡಿಗೆ,
ನಿನ್ನಾಲಿಂಗನದ ಚಕ್ರ ಬಯಸಿಹೆ ನಲ್ಲೆ….
ಮಾಯಗಾತಿ ಕಣ್ಬೆಳದಿಂಗಳೊಳೊಮ್ಮೆ ನಿಲ್ಲೆ,
ಅಡಿಗಡಿಗೆ ಅಮರುವ ಆದರವನು ಮೆಲ್ಲೆ..
ಅದನ್ಹೊರತು ಅಸಾಧುಗಳ ನಾ ಒಲ್ಲೆ..
ಗೆಳತಿ, ,
ನನ್ನ ನಯನಗಳ ಸೆಳವ ಸುಳಿಗೆ ಸಿಕ್ಕು,
ನಿನ್ನ ಸೌಂದರ್ಯ ಗಳಿಸಿರಬಹುದೊಂದಿಷ್ಟು ಬೆಲೆ,
ಇಲ್ಲದಿರೆ ಅದಕ್ಕೆಲಿರುತಿತ್ತು?..
ಹರವಿದ ನನ್ನ ಅಂತರಂಗದೊಳು ಮೌಲಿಕ ನೆಲೆ..
ಜತನದಿ ಮನದ ಬೆಳಕಿನಲ್ಲೊಮ್ಮೆ ಅವಲೋಕಿಸೆ..
ನನ್ನಿಡೀ ಹಗಲ ವ್ಯರ್ಥ ತುಮುಲವನೋದಿ,
ಕಿಡಕಿಯಾಚೆ ಕಟಕಿಯಾಡಿ ರವಿ ಮುಳುಗಿಯಾನು!..
– ‘ರಾಜೀವ ಸಖ’
ಮನದ ಹಾಯ್ಕುಗಳು :-
ಉತ್ಕಟವಾಗಿ ಪ್ರೇಮಿಸಲು
ಸಾಧ್ಯವಾದಲ್ಲಿ ಮಾತ್ರ
ನಿನಗೆ ಧ್ಯಾನದ ಉಪಲಬ್ಧತೆಯಾಗುತ್ತದೆ !
ಮನದೊಳಗಿನ ವಾಸನೆಗಳ
ಕೆಸರೆಲ್ಲ ತಳಕ್ಕಿಳಿದು
ತಿಳಿಯಾದ ಮೇಲಷ್ಟೇ
ಅರಿವಿನ ಹೊಳಪು ಕಾಣುವುದು !
ಕಂಗಳಿಂದ ಕಾಣಲಾಗದ್ದು
ಬಣ್ಣನೆಗೆ ನಿಲುಕದ್ದು
ಮಾತಿಗೆ ಸಿಗಲಾರದ್ದು
ಮೌನದಿಂದಷ್ಟೇ ಅನುಭವಿಸಲು
ಸಾಧ್ಯವಾಗುವುದು ಅವನ ಅರಿವಿನ ಸಾನಿಧ್ಯ !
ಬಯಸಿ ಪಡೆಯಲಾಗದು
ಹಾಗಂತ ನಿರಾಕರಿಸಲು ಆಗದು
ಅನುಕ್ಷಣದಿ ಅಂಕುರಗೊಳ್ಳುತ್ತಲೇ
ಇರುವ ಅರಿವಿಗೆ ಅತರ್ಕವಾಗಿ
ಅನುರಕ್ತಗೊಳ್ಳುವದೇ ಧ್ಯಾನ !!
– ಪ್ರವೀಣಕುಮಾರ್ ಗೋಣಿ
MEE TOO Thuma chennagide. aga bekiddudu ega bedavadaga apavada horisidare hege. avakashakko, asrego, sukhakko, hanakko, preetigo, yavudakko bekiddaga beku munisu bandaga beda. chennagi baredidderi sister. We too