ಆರದಿರಲಿ ಬೆಳಕು
ಒಲೆ ಉರಿಸುವುದು ಕಲೆಯೇ…
ಬಲು ತಾದ್ಯಾತ್ಮಕತೆಯ ಅಲೆ
ಮೆಲ್ಲನೆ ಕಡ್ಡಿ ಗೀರಿ
ಇನ್ನೂ ಮೆಲ್ಲನೆ ಬೆಂಕಿ ನೀಡಿ
ಉಸಿರ ಸಾರ ಹೀರಿ
ಚಿಕ್ಕದಾಗಿ ಪೇರಿಸಿಟ್ಟ –
ಗರಿ ಗರಿ ಕಾಯಿ ಸಿಪ್ಪೆ
ಚಿಕ್ಕ ಚಿಕ್ಕ ಸೌದೆ ಚೂರು
ಇದಕ್ಕೆಲ್ಲ ಕಿಚ್ಚು ಹಿಡಿಸಬೇಕೆಂದರೆ
ಬೆಂಕಿ ತಲ್ಲೀನತೆಯ ಬೇಡುತ್ತದೆ
ತಾಳ್ಮೆ ಪರೀಕ್ಷಿಸುತ್ತದೆ!
ಈ ಕಲೆಯ ಅಸ್ಮಿತೆ ಉಳಿಸಲಿಕೋಸ್ಕರ
ಏನೇನೆಲ್ಲ ಮಾಡಬೇಕಿದೆ…
ಕಣ್ತುಂಬ ನೀರು ತಂದು
ಕೊಳವೆ ತುಂಬ ಗಾಳಿ ಊದಿ
ಸುರುಳಿ ಸುರುಳಿ ಹೊಗೆಯ ಹೊದೆದು
ಬೂದಿಯೊಳಗಿನ ಕೆಂಡವನ್ನು ತುಳಿಯಬೇಕು!
ಅಷ್ಟಿಷ್ಟು ಬೆಂಕಿ ಹಿಡಿಯಿತೆಂದು ಹಿಗ್ಗಬೇಡ
ಮುಗಿಯಲಿಲ್ಲ ಇಲ್ಲಿಗೆ
ಮತ್ತೆ ಆರದಂತೆ ಕಾಪಿಡಬೇಕು…
ಗಾಳಿ
ಅಲ್ಲಲ್ಲ ಬಿರುಗಾಳಿ ಬೀಸುತ್ತದೆ.
ಗಾಳಿಗೆ ಒಮ್ಮೊಮ್ಮೆ ಆರಿದರೆ
ಇನ್ನೊಮ್ಮೆ ಭಗಭಗನೆ ಹೊತ್ತಿ ಉರಿಯುತ್ತದೆ
ಎರಡು ಕಷ್ಟವೆ ಉರಿಸಿದವಳಿಗೆ
ಬೇರೆ ದಾರಿಯೇ ಇಲ್ಲ ಕವಿತೆಗೆ…..!
– ಸಂಗೀತ ರವಿರಾಜ್
ನಾಯ ಬಾಯೊಳಗಣ ಎಲುಬು
ನಾಯ ಬಾಯೊಳಗಣ ಎಲುಬು
ಜೊಲ್ಲು ವಸರಿದ ಜಾಡು
ಜಿನುಗು ನೆತ್ತರು ತುಟ್ಪಿಕ್ಕಿ
ಬಿಕ್ಕಿ ಬಿಕ್ಕಿ ಕೇಳುತಿದೆ
ನಿನ್ನ ಕೋರೆಗಿ ನನ್ನ ಕರುಳು ಸರಿಯೇ?
ಅವ್ವನ ಉದರ ಹರಿದು
ಬಂದು ಉರುಳಿಲ್ಲ ವಸಂತ
ಖಂಡ ಬಲಿತಿಲ್ಲ ಗೂಡು ತೊರೆದಿಲ್ಲ
ಬೆಚ್ಚನೆಯ ಮಡಿಲಿಂದ ದೂರ ಹಾದಿಲ್ಲ
ಆಗಲೇ ಕಾಯ ಕಳೆಗಟ್ಟಿತಲ್ಲ
ಸರಿಯೇ ನಿನ್ನ ಕೋರೆಗೆ ನನ್ನ ಕರುಳು?
ನರರ ಬುದ್ಧಿಗಿಂತ ಮಿಗಿಲು ಅಂದಾರು
ನಿಷ್ಠೆಗಂತ ಮೀಸಲು ನಿನ್ನ ಇಟ್ಟಾರು
ನಂಬಿ ಬಿಟ್ಟಾರು ಕಟ್ಟದೇ ಪಾಶ
ಪಾಯಸವ ಹೊಯ್ದಾರು
ತಿಂದು ತೇಗಿ ಮಾಡಿದೆಲ್ಲ ನೀ ರೊಟ್ಟಿಗೆ ಮೋಸ
ಸರಿಯೇ ನನ್ನ ಕರುಳು ನಿನ್ನ ಕೋರೆಗೆ?
ಮೀಸಲೆಂದಿಟ್ಟ ತುತ್ತು ನಿನ್ನ ಪಾಲಿಗೆ
ಆವತ್ತೂ ಇತ್ತು
ಈ ಹೊತ್ತೂ ಇತ್ತು
ಆದರೂ ಎಲ್ಲಿ ನೆಕ್ಕಿ ಬಂದು
ಸವಿ ಕಂಡು ಬಾಯ್ಹಾಕಿ ಅಗೆದೆ
ಸರಿಯೇ ಇದು? ನಿನ್ನ ಬಾಯೊಳಗಣ ಎಲುಬು
ನನ್ನ ಪ್ರೇಮದ ಕೆಂಪು ಪಾನಕ
ತಾಕಿ ಬಿಡಲಿ ನಿನ್ನ ಮನಕ
ಅರಿವು ತುಂಬಲಿ ನಿನ್ನ ಹೃದಯಕ
ನಾನೇ ಆಗಲಿ ಕೊನೆಯ ಬಲಿ ನಿನ್ನ ತನುಕ
-ವರದೇಂದ್ರ ಕೆ
ಮಾನವನ ಒಲಿಕೆ
ಯತ್ರ ನಾರ್ಯಸ್ತು ಪೂಜ್ಯಂತೇ
ರಮಂತೇ ತತ್ರ ದೇವತಾಃ
ಎಲ್ಲಿ ನಾರಿ ಪೂಜೆಗೊಳಪಡುವಳೋ
ಅಲ್ಲಿ ದೇವತೆಗಳು ನೆಲೆಸುವರು,
ಹೆಣ್ಣಾದ ಕಾಮಧೇನುವಿನೊಳಗೆ
ಮುಕ್ಕೋಟಿ ದೇವರು ನೆಲೆಸಿರುವರು
ಆದರೂ ದೇವ ಮಂದಿರದೊಳಗೆ
ನಾರಿ ಹೆಜ್ಜೆ ಇಟ್ಟರೆ
ದೇವ ಅಪವಿತ್ರ.
ನಿನ್ನೆ ಬೀಡಿ ಸಿಗರೇಟ್ ಸೇದಿ
ಮಧ್ಯದ ನಶೆಯಲ್ಲಿ ತೇಲಿದವ
ನಾಳೆ ದೇವಮಂದಿರದ ಒಳಗೆ
ಆಗಲೂ ದೇವ ಪವಿತ್ರನಾಗೇ ಇರುವ
ಆದರೆ ನಿನ್ನೆ ನೀನೆ ನೀಡಿದ
ನೈಸರ್ಗಿಕ ಕ್ರೀಯೆಯಿಂದ ಬಳಲಿದ
ಹೆಣ್ಣು ನಾಳೆ ದೇವಮಂದಿರದೊಳಗೆ
ಹೋದರೆ ದೇವ ಅಪವಿತ್ರ
ಸಮಝಾಯಿಶಿ ನೀಡುತ್ತಿಲ್ಲ ಹೆಣ್ಣೇ
ಆಚರಣೆಗಳಿಲ್ಲದೇ ಹೋದ
ನೀನು ಸಮರ್ಥನೀಯವೆಂದು
ಸಹನಾಮೂರ್ತಿಯಾದ ನೀನು
ಭಾವನೆಗಳಿಗೆ ಬೆಲೆಕೊಡುವ ನೀನು
ಕಟ್ಟುಪಾಡನ್ನೂ ಅನುಸರಿಸಿ
ಒಳಹೊಕ್ಕಿದ್ದರೆ ದೇವರನಾಡಿನ
ದೇವನ ಜೊತೆಗೆ ಒಲಿಯದ
ಮಾನವನೂ ಒಲಿಯುತ್ತಿದ್ದನೇನೋ?
-ಬೀನಾ ಶಿವಪ್ರಸಾದ
ಅಲ್ಲಮನ ಗಜಲ್
ಎದುರಿಗಿದ್ದ ದಿಗಂತ ತಲುಪಿದೆ, ಇನ್ನೊಂದು ದಿಗಂತ ಕಂಡಿತು
ಗಡಿಗಳನು ಗೆಲ್ಲಲು ಹೊರಟಿದ್ದೆ, ಅಲ್ಪನಿಗೆ ಅನಂತ ಕಂಡಿತು
ಗುರಿ ತಲುಪಿದ ಉತ್ಸಾಹವೆಲ್ಲವೂ ಜರ್ರನೆ ಇಳಿದುಹೋಯಿತು
ಒಂದು ಹಂತ ದಾಟುವಷ್ಟರಲ್ಲಿ ಮಗದೊಂದು ಹಂತ ಕಂಡಿತು
ನೀನು ಎಲ್ಲಿಯೇ ಹೋದರೂ ಮರಳಿ ಬರಲೇಬೇಕು ಇಲ್ಲಿಗೇ
ಈ ಖಗೋಳದ ಆರಂಭ ಬಿಂದುವಿನಲ್ಲಿಯೇ ಅಂತ ಕಂಡಿತು
ವಾಸ್ತವವೆಂದರೆ ನಮ್ಮ ಕೈಲಿ ಯಾವುದೂ ಇಲ್ಲ, ಏನೇನೂ ಇಲ್ಲ
ಅಷ್ಟೇ ಸೋಜಿಗವೆಂದರೆ ಎಲ್ಲಡೆಗೂ ಭಾರಿ ಧಾವಂತ ಕಂಡಿತು
ಗ್ರೀಷ್ಮದಲಿ ಎಲೆಯುದುರಿ ಬೋಳಾದ ವನ ಕಂಡು ಮರುಗಿದೆ
ಎಲ್ಲ ತ್ಯಜಿಸಿ ಹೊರಡಬೇಕು ಎನುವಷ್ಟರಲ್ಲಿ ವಸಂತ ಕಂಡಿತು
ನನ್ನ ಅಂತ್ಯಯಾತ್ರೆಯಲಿ ಅವಳು ಬಂದಿರುವ ಸುದ್ಧಿ ನಿಜವಿದೆ
ಮಡಿದಿದೆ ಎಂದು ತಿಳಿದಿದ್ದೆ ಅವಳ ಪ್ರೀತಿ, ಜೀವಂತ ಕಂಡಿತು
ದೂರದಿಂದ ನೋಡು ಸೌಂದರ್ಯ, ಪರಿಮಳ ಅನುಭವಿಸು
ಹೂ ಕಿತ್ತು ಮುಡಿಯುವಲ್ಲಿ, ಮೂಸುವಲ್ಲಿ ಬಲವಂತ ಕಂಡಿತು
ಹೇಗಿನ್ನು ಮೈತ್ರಿಯ ಮೇಲೆ ಭರವಸೆ ಹುಟ್ಟಬಹುದು ‘ಅಲ್ಲಮ’
ಎಲ್ಲಿ ನೋಡಿದಲ್ಲಿ ಮೋಸ ವಂಚನೆ, ಘಾತ, ದುರಂತ ಕಂಡಿತು
-‘ಅಲ್ಲಮ’ ಗಿರೀಶ ಜಕಾಪುರೆ
ಸಂಕ್ರಾಂತಿ ಅಂದು-ಇಂದು..!!
ಸಂಕ್ರಾಂತಿಯೆಂದರೆ, ಅಂದು..!
ಏನು ಸೊಬಗು ಏನು ಸೊಗಸು
ತುಂಬಿ ಹರಿಯುವಾ ಹೊಳೆ
ಹುಲುಸಾಗಿ ಬೆಳೆದ ಬೆಳೆ
ರೈತನಾ ಮೊಗದಲಿ ಹೊಮ್ಮಿ ಹರುಷ
ಸ್ವಾಗತಿಸುತ್ತಿತ್ತು ಹೊಸ ವರುಷ..!
ಸಂಕ್ರಾಂತಿಯೆಂದರೆ, ಅಂದು..!
ಚುಮುಗುಡುವ ನಸುಕಿನಲೆದ್ದು
ಹಸು ಎಮ್ಮೆ ಕುರಿ ಮೇಕೆಗಳ ಹೊಳೆದಂಡೆಗೊಯ್ದು
ಕೊರೆವ ತಣ್ಣೀರಲಿ ಮೈತೊಳೆದು
ಸಗಣಿ ಗಂಜಲವ ಶುಭ್ರಗೊಳಿಸಿ
ಹಬ್ಬಕೆ ಅಣಿಗೊಳಿಸುವ ಸಂಭ್ರಮ..!
ಸಂಕ್ರಾಂತಿಯೆಂದರೆ, ಅಂದು..!
ಹಸು, ಎತ್ತು, ಹೋರಿಗಳಾ ಕತ್ತು
ಗೆಜ್ಜೆಗಳಿಂದ ತುಂಬಿ ತುಳುಕುತ್ತಿತ್ತು
ಕೊಂಬುಗಳಿಗೆ ರಂಗುರಂಗಿನಾ ಬಣ್ಣ
ಸೆಳೆಯುತಿತ್ತು ನೋಡುಗರಾ ಕಣ್ಣ
ಕೊಮ್ಮು ಕುಕ್ಕೆ ಗೆಜ್ಜೆಗಳಿಂಪಿನ ಸದ್ದು
ಸೂರೆಗೊಳ್ಳುತಿತ್ತು ಜನರ ಮನಸ ಕದ್ದು..!
ಸಂಕ್ರಾಂತಿಯೆಂದರೆ, ಅಂದು..!
ಊರ ಹಿರಿಯರೆಲ್ಲ ಒಂದುಗೂಡಿ
ಮಾವು ಬೇವು ತೋರಣ ಕಟ್ಟಿ
ಊರಬಾಗಿಲಿಗೆ ಸಿಂಗಾರ ಮಾಡಿ
ಊರೆಲ್ಲಾ ಡಂಗೂರ ಸಾರಿ
ಕಿಚ್ಚು ಹಾಯಿಸುತ್ತಿದ್ದರು ಎತ್ತು ಹೋರಿ..!
ಸಂಕ್ರಾಂತಿಯೆಂದರೆ, ಅಂದು..!
ಊರ ಗೂಳಿಗೊಂದು ಸುಂದರವಾದ ಪಟ
ಕಿತ್ತುಕೊಂಡವರಿಗಿತ್ತು ಧೈರ್ಯವಂತನ ಪಟ್ಟ
ಪಡೆಯಲು ಎಳ್ಳುಬೆಲ್ಲ ಕಬ್ಬು ನೋಟಿನ ಕಂತೆ
ಗೂಳಿಯ ಅಡ್ಡಗಟ್ಟಿ ಪಟ ಕೀಳಬೇಕಂತೆ
ರಂಕೆ ಹಾಕಿ ಹೂಂಕರಿಸಿದರೆ ಕೊಬ್ಬಿದ ಗೂಳಿ
ಹಿಡಿಯೋ ಗಂಡುಗಲಿಗಳೇ ಚೆಲ್ಲಾಪಿಲ್ಲಿ..!
ಸಂಕ್ರಾಂತಿಯೆಂದರೆ, ಅಂದು..!
ಮನೆಮಂದಿಯೆಲ್ಲಾ ಹೊಸಬಟ್ಟೆ ತೊಟ್ಟು
ಎಳ್ಳು ಬೆಲ್ಲ ಕೊಟ್ಟು ಒಳ್ಳೆ ಮಾತಾಡಿ
ಸಡಗರ ಸಂಭ್ರಮದಿಂದ ಸುಗ್ಗಿ ಹಬ್ಬ ಮಾಡಿ
ನಲಿಯುತಿದ್ರು ಊರ ಮುಂದೆ ಒಟ್ಟಿಗೆ ಕೂಡಿ
ಹರಿಸುತಿದ್ರು ಬಾಂಧವ್ಯದ ಮಹಾಕೋಡಿ..!
ಸಂಕ್ರಾಂತಿಯೆಂದರೆ ಇಂದು..!
ಸೊಗಡಿಲ್ಲ, ಸೊಗಸಿಲ್ಲ ಸೊಭಗಿಲ್ಲ,
ನೀರಿಲ್ಲ, ಮೇವಿಲ್ಲ, ಮಳೆಯಿಲ್ಲ ಬೆಳೆಯಿಲ್ಲ
ಹಸು,ಎತ್ತು ಹೋರಿಗಳಾ ಸುಳಿವಿಲ್ಲ
ಸುಗ್ಗಿಯಾ ಸಂಭ್ರಮವಿಲ್ಲ, ಸಡಗರವಿಲ್ಲ
ಊರಿನಲಿ ಒಗ್ಗಟ್ಟು ಮೊದಲೇ ಇಲ್ಲ
ಫೇಸ್ಬುಕ್ಕು ವಾಟ್ಸಪ್ಪು ಈಮೇಲು ಜೀಮೇಲು
ಶುಭಾಶಯದ ರವಾನೆ ಅಷ್ಟೇ…
ಮುಗಿಯಿತು ಸಂಕ್ರಾಂತಿ..!
ಮಿಕ್ಕಿದ್ದೆಲ್ಲಾ ಭ್ರಾಂತಿ..!!
-ದೇವರಾಜ್ ನಿಸರ್ಗತನಯ
ಗಝಲ್ . . . :
ರೆಕ್ಕೆ ಅಂಟಿಸಿಕೊಂಡು ಕನಸು ಹಾರಿತು ಮೇಲೆ/
ಅಂತರಂಗದಿ ಎಂದು ಬರಿ ನವಿಲುಗರಿ ಶಾಲೆ//
ಭಾವದೋಟಕೆ ಎಲ್ಲಿ ಒಂದು ಕಡೆಯಲಿ ಎಲ್ಲೆ/
ಉಕ್ಕಿ ಸೊಕ್ಕಲು ಹೊಳೆಯು ಕದವು ತೆರೆಯುವ ನಾಲೆ//
ಕಿರು ಬೆರಳ ಉಗುರಲ್ಲಿ ಹರಿದು ಕೂರುವ ನೋವು/
ಬಿರುಕು ಮೂಡಿದ ರೀತಿ ಕಣ್ಣ ಕನ್ನಡಿ ಮೂಲೆ//
ಚಣದ ಕಾಮನ ಬಿಲ್ಲು ಮನವ ಸೆಳೆದರೆ ಏನು/
ಖಾಲಿ ಮೈ ಮನದಲ್ಲಿ ಹೊತ್ತಿ ಉರಿಯುವ ಜ್ವಾಲೆ//
ನಮಗಲ್ಲ ಬೊಗಸೆ ಜಲ ಹೀರುವುದು ಕಾದ ನೆಲ/
ರಸವು ಆರಿದ ಬಳಿಕ ಜೀವ ಬಾಡಿದ ಮಾಲೆ//
– ರಮೇಶ ಹೆಗಡೆ
ಪ್ರೇಮಾಮೃತ
ನನ್ನೊಳು ನಾನಿದ್ದೆ ನನ್ನಷ್ಟಕೆ
ನೀ ಬಂದು ಲಗ್ಗೆಯಿಟ್ಟೆ ಈ ಹೃದಯಕೆ
ಕಣ್ಣೋಟ ನಾಂದಿಯಾಯ್ತು ಈ ಪ್ರೇಮಕೆ
ನನ್ನನ್ನೇ ನಾ ಮರೆತೆ ನಿನ್ನ ತುಂಟಾಟಕೆ
ರೆಕ್ಕೆಬಿಚ್ಚಿ ಹಾರಿದೆ ಮನ ಬಾನಂಗಳದೊಳು
ಸ್ವರ್ಣಮುಗಿಲ ರಥವನೇರಿ ಜೊತೆಗೆ ಸಾಗಲು
ಜಂಟಿಯಾಗಿ ರಂಗಿನೋಕುಳಿಯಲಿ ಮಿಂದೇಳಲು
ಬಂದೇ ಬರುವೆ ನೀನೆಂಬ ಭರವಸೆಯೊಳು
ನಿನ್ನ ಕಣ್ಣ ಕಾಂತಿಯೇ ಬಾಳಿಗೆ ಆಶಾಕಿರಣ
ತುಟಿಯಂಚಿನ ಮುಗುಳ್ನಗೆಯೇ ನವ ಚೇತನ
ಓ ಜೀವವೇ ನೀನೆಂದರೆ ನನಗೆ ಪ್ರಾಣ
ನಿನಗಾಗಿಯೇ ಮುಡಿಪು ನನ್ನ ಜೀವನ
ಸಿಹಿಜೇನು ತುಂಬಿಹುದು ಎದೆಯಗೂಡಿನಲಿ
ಪ್ರೇಮಾಮೃತವನುಣಿಸಲು ಕಾದಿದೆ ಒಲವಿನಲಿ
ಅಂದಗಾರ ಚಂದ್ರನೂ ನಾಚಿ ನಿಂತಿಹ ಮರೆಯಲಿ
ಈ ಮನವು ಲೀನವಾಗಿದೆ ನಿನ್ನ ಪ್ರೇಮದ ಹನಿಯಲಿ
ಧಮನಿಧಮನಿಯಲೂ ಹರಿಯುತಿದೆ ನಿನ್ನೊಲವ ಜೀವಸೆಲೆ
ನರನಾಡಿಯಲೂ ಮಿಡಿಯುತಿದೆ ನಿನ್ನದೇ ಕಾವ್ಯದಲೆ
ಮಧುರ ಚುಂಬನಕಾಗಿ ಕಾದಿದೆ ಮುಂದಲೆ
ಎನ್ನ ಸೆಳೆದೊಯ್ದಿಹುದು ನಿನ್ನ ಪ್ರೇಮದಾಂತರ್ಯದಲೆ
@ನಾವೆ
ಸ್ತ್ರೀ
ನಿನ್ನ ಹೆಸರೇ ಕೇಳುತ್ತದೆ ಮನೆಯಲೆಲ್ಲ
ನಾಲ್ಕು ದಿಕ್ಕಿನಿಂದ, ನಾಲ್ಕೈದು ಧ್ವನಿಗಳಿಂದ
ಕಾಳಜಿಯಿಲ್ಲ, ತ್ರುಣ ಪ್ರೀತಿಯೂಯಿಲ್ಲ
ಬರಿಯ ದುಡಿತಕ್ಕಾಗಿ, ಅವರವರ ಕೆಲಸಕ್ಕಾಗಿ!
ಮಗಳಾಗಿ, ಸತಿಯಾಗಿ, ತಾಯಿಯೂ ಆಗಿ
ಅವರಿವರ ಸೇವೆಯಲಿ ಸದಾ ನಿರತಳಾಗಿ
ಹಗಲಿರುಳು ಮನೆಯ ಹಿತಕ್ಕಾಗಿ, ಮನೆಯವರ ಸುಖಕ್ಕಾಗಿ, ದುಡಿದೆ ನೀ ನಿರಂತರವಾಗಿ!
ಉಂಡೆಯಾ ಎಂದು ಕೇಳುವವರಿಲ್ಲ
ಮೆತ್ತನೆಯ ಹಾಸಿಗೆಯ ಹಾಸುವವರಿಲ್ಲ
ಸ್ವಲ್ಪ ಸುಧಾರಿಸು ಎಂದು ಹೇಳುವವರೂ ಇಲ್ಲ
ಕ್ಷೇಮ ಸಮಾಚಾರದ ಸುದ್ದಿಯಂತೂ ಇಲ್ಲವೇಯಿಲ್ಲ!
ಏಕೆ ಈ ತ್ಯಾಗ, ಎಷ್ಟು ಈ ಸಹನೆ
ಆಗದು ಇನ್ಯಾರಿಂದಲೂ ಸುಮ್ಮನೆ
ಆ ಶಕ್ತಿ ನಿನಗೂಬ್ಬಳಿಗೇ ಓ ಹೆಣ್ಣೇ!!
-ರಂಜಿತಾ ಪ್ರಹ್ಲಾದ್
ಗಡಿಯಾರದ ಪಿಸುಮಾತು ಮತ್ತದರ ಮೌನ
ತುಂತುರು ಮಳೆ ಗಾನದ ಮರಗಳು
ತಂಗಾಳಿ ತೂಗಿನ ತಣ್ಣನೇಯ
ಉಸಿರಿನ ಬಡಿತ ಏನೋ ಸವಿ ಮಿಡಿತ
ಜೀವ-ಬಿರುಗಾಳಿ ನಡುಕುತ್ತಿದ್ದರೂ
ಹೃದಯ ಮಾತ್ರ ಶಾಂತ
ಕಾಲೇಜು ಸಹಾಪಾಠಿಗಳ ಸನಿಹ ಚರ್ಚೆ
ಜಯನಗರದ ಗ್ರಂಥಾಲಯದೊಳಗೆ
ಅದೇನೋ ಮೌನ
ಜಂಗಮವಾಣಿ ಸದ್ದಲವೆಲ್ಲ ಸ್ತಬ್ದ
ಕಡಲ ಮಳೆ ನೀರವ ಭಾವ ಗುರುವಿನ ಧ್ಯಾನ
ಈಸ್ಟ್ ಎಂಡ್‍ನಲ್ಲಿ ತೂಗುವ
ಆಕಾಶ ಚುಂಬಿ ಗಡಿಯಾರದಷ್ಟೆ
ಜೋಪಾನದ ಸಂದೇಶ.
ಏನೋ ದೂರದ ಜೀವದುಸಿರನ
ಪ್ರೇಮದ ಮಳೆಬಿಲ್ಲು
ಸಂದೇಶಕೊಟ್ಟು ಮರೆಯಾದಂತೆ
ಒಳಗೆ ಒಳಗೆ ಕಚ್ಚಗುಳಿಇಟ್ಟು
ಪ್ರತಿ ಒಂದು ಘಂಟೆಗೆ
ಡಣ ಡಣ ಎಂದು ಪಿಸುಮಾತುನಂತೆ
ಎಚ್ಚರಿಸುವುದು ಮನಕೆ
ಏನೋ ಹರ್ಷವ ತಂದು
ಒಂದು ಸ್ಪೂರ್ತಿಯ ಆಗುವುದು
ಮೇಲು ಸೇತುವೆ ತೂಗುವ ಬೆಡಗು
ದೂರದ ಬಹುಮಹಡಿಕಟ್ಟಡಗಳು
ಮಿಣ ಮಿಣನೇ ಮಿನಿಯುವವು
ಕೊಲ್ಮಿಂಚಿನ ಬೇರಾಆಕೃತಿ ಮಿಂಚಿಗೆ
ರಸ್ತೆಯ ಹಂಚಿನಲ್ಲಿ
ಮಂದ ನಗೆ ಜನತಾ ಬಂಜಾರಿನ
ಕೈಗಾಡಿಯಲಿ ಮೆರಗಿನ ಜಾತ್ರೆ
ದಿನದ ಕಣ್ಣಿಗೆ ಹಬ್ಬ
ಪುಟುಬಾತು ವ್ಯಾಪರಿಗಳು
ದಿನ ದಿನದ ಸಡಗರ
ಟುಬಿಯಾ ಹೂ ನಗೆಯಗಾನ
ಕಾರು, ಜೀಪು, ಬಸ್ಸು, ಸಪ್ಪಳದೊಳಗೆ
ಸಿಗ್ನಲ್‍ಗಳು ಕಲಿಸುವ ತಾಳ್ಮೆ
ನಿಧಾನವಾಗಿ ಸಾಲು ಗಟ್ಟಿ ನಿಂತ
ವಾಹನಗಳು ಸ್ತಬ್ದ ಚಿತ್ರ
ಪರಿಮಳವಿಲ್ಲದ
ಮಾಸಲುಮಲ್ಲಿಗೆಗಳ
ಮುಡಿದ ಮಂಗಳಮುಖದ ಸಿಂಗರಿಯರ ದರ್ಶನ
ಬಿಕ್ಷೆಗಾಗಿ ಕ್ಯಾಬ್‍ಗಳ ಅಡ್ಡ ಕಟ್ಟಿ
ಹಕ್ಕು ಎಂಬಂತೆ ಭಿಕ್ಷೆಯ ಬೇಡುವರು
ಆಟೋದವರನ್ನು ಮುಂದಕೆ ಬಿಡದೆ
ನಾಚಿಕೆ ಸ್ವಾಭಿಮಾನ ಆತ್ಮದೊಳಗೆ
ಅವರು ಕಂಗಳು ಉರಿಯುತ್ತೇವೆ
ಈ ಒಳಗಿನ ಇಂಗಾಲ ಬಿಡುವ ಗಾಳಿಗೆ
ಒಮ್ಮೆ ಕಂಪಿಸಿ ಬಿಡುತ್ತದೆ ಜಗತ್ತಿನ ಕ್ರೂರತೆಗೆ
ಸಂಜೆಯ ಕಾರ್ಮೋಡಗಳು ಇಳಿದ
ಮಳೆ ಸುಶ್ರಾವ್ಯಗಾನ ನಿಭ್ರರತೆ ಅಂಬಾರ
ಅದೇ ಸಪ್ಪಳವಿಲ್ಲದ
ಮುಂಜಾನೆ ತಂಪನೇಯ ಇಬ್ಬನಿ
ಕೋಲೆ ಬಸವ ನಿರಾಶ್ರಿತ ಭಾವ
ಅಂತಕರಣವೇ ಝಲ್ಲನೆಯೆನ್ನುವ
ಹರಿದ ಸೆರಗಿನ ಹಸಿದ ಹಳದಿ ಕಂಗಳ ಕೂಸು
ವಿಚಿತ್ರ ಧ್ಯಾನದ ಕೂಗಿನ ಹಸು
ಜೀವದೊಳಗೆ ಏನೋ ಕಂಪನ ಅಗೋಚರ
ಅಡ್ಡ ಗೋಡೆ ಸೂಪರ್ ಮಾಲ್ ಮುಂದೆ
ಗೊಂಬೆ ವ್ಯಾಪರ ಬಲೂನು ಮಾರುವ
ಹುಡುಗಿಯರ ಲಂಗದೊಳಗೆ ರಾಜಸ್ಥಾನಿಯ ವಿನ್ಯಾಸ
ಚ¯ನೆ ಕಾಣದ ವಿನಯವಂತ
ಜನರು ಮೇಳೈದ ಮಬ್ಬುಗತ್ತಲು
ಈಸ್ಟ ಇಂಡ್ ಗಡಿಯಾರ ಢಣ ಢಣ ಸ್ವರಯಾನ
ಮೆಲ್ಲನೆ ಜೀವಚಕ್ರಗಳಲ್ಲಿ ಚಲಿಸುವ ಮುಳ್ಳುಗಳು
ಖಾಲಿ ಖಾಲಿ ಕಡುಮೌನ
-ನಂದಿನಿ ಚುಕ್ಕೆಮನೆ
ಮಾಂದಳಿರ ಹೂರಣ*
ಕರುನಾಡೆಂದರೆ….
ಉಸಿರನೀವ ಹಸಿರು
ಹೂಗಳು ಹೊತ್ತ ಮಲರು
ಮಲೆಗಳ ಖ್ಯಾತಿಯ ತವರು
ಕರುನಾಡೆಂದರೆ..
ಗುಡಿಯೊಳಗಿನ ಶಿಲೆ
ಶಿಲೆಯೊಳರಳಿದ ಕಲೆ
ಕಲಾಸಕ್ತರಿಗೆ ಶ್ರೇಷ್ಠನೆಲೆ
ಕರುನಾಡೆಂದರೆ..
ಜನ್ಮ ನೀಡಿದ ಮಾತೆ
ಅನ್ನ ನೀಡಿದ ದೇವತೆ
ಮರೆಯಲಾಗದ ಮಮತೆ
ಕರುನಾಡೆಂದರೆ..
ಮಾಂದಳಿರ ತೋರಣ
ಹೊಂಬೆಳಕಿನ ಚಾರಣ
ಸವಿನುಡಿಗಳ ಹೂರಣ
ಕರುನಾಡೆಂದರೆ..
ಅಪಾರ ಆಳದ ಕಡಲು
ಮುಗಿಲ ಮೊರೆವ ಸಿಡಿಲು
ತಾಯ್ಮಡಿಲಿನ ಒಲವ ಮುಗಿಲು
ಕರುನಾಡೆಂದರೆ…
ವೈಭವಗಳ ತವರು
ಕನ್ನಡಮ್ಮನ ತೇರು
ನಿತ್ಯ ಬೆಳಗುವ ಸೊಡರು
*ಸುಶೀಲಾ ಕಿಬ್ನಳ್ಳಿ*
ಏ ಹುಡುಗಿ*
ಮಾರುಹೋದೆ ಹುಡುಗಿ
ನಿನ್ನಯ ಈ ಸುಂದರ ಪಟವ ನೋಡಿ
ಸಾವಿರ ಸಲ ನೋಡಿದರೂ
ನನ್ನಯ ಅಕ್ಷಿಗಳಿಗೆ ಅತೃಪ್ತಿ
ಆ ಗಿಳಿ ಮೂಗಿನ
ಕೆಂಬಿಳುಪಿನ ವದನಕೆ
ರೇಶಿಮೆ ಯಂತಹ ಮೃದು ತನುವಿನ
ಚೆಲುವಿಗೆ ಮರಳಿ ಮಾರುಹೋದೆ !!
ಮಾರನು ಮೋಹಿನಿಗೆ
ಸೋತನೆಂದರಿದು …..
ಮಾಯದ ಮೋಹದ ಬಾಣವ
ಬಿಡಲು ಪುಳಕವು ಮೈಗೆ
ಆಸೆಯ ಹಠಕ್ಕೆ ದೇಹ
ಸೂರ್ಯನನ್ನೆ ಸುಡುವ ತಾಪದಲ್ಲಿದೆ
ಕಾಣುವ ತವಕದಲಿರುವ ನೇತ್ರಗಳಿಗೆ ನೇಸರನೆ ನಾಚುತಿಹನು
ಉಮ್ಮಳಿಸುವ ಉಮ್ಮಸ್ಸು
ಉರಿದು ಹೋಯಿತು
ಆದರೂ ಅನುಭೋಗದ ಆಸೆ
ತೀರಿಲ್ಲ
ರೇಷ್ಮೆ ಉಡುಗೆ ಸರಿದಂತೆ,
ಹೂವಿನ ಪರಿಮಳ ನಾರುವಂತೆ
ಕೋಗಿಲೆಯ ಕಂಠ ಕರ್ಕಶದಂತೆ
ವರ್ಣಗಳೆಲ್ಲ ಕಪ್ಪಾಗಿ ಕಾಣುತ್ತಿವೆ
ನೀ ಸನಿಹವಿಲ್ಲದೆ
ಮನ್ಮಥನ ಹೂ ಬಾಣ ತಗುಲಿ
ಬಾಯಾರಿ ಬಸವಳಿದು ಬಿದ್ದಿರುವೆ ಎಳೆಮೃಗದಂತೆ
ಕರುಣೆದೋರಿ ಮೇಲೆತ್ತಿ ತಣಿಸಬಾರದೆ ದಾಹ..
ಪಟದೊಳಗಿನ ಪಂಚರಂಗಿ……
*ರಾಜೇಶ್,ಬಿ.ಹೊನ್ನೇನಹಳ್ಳಿ*
*ನನ್ನಾಕೆ*
(ಒಂದು ಗಜಲ್)
ನನ್ನಾಕೆ ನನ್ನ ಮನ ಮೆಚ್ಚಿಸಬೇಕು ಸಖ||
ಆಕೆ ಬಂದು ಬದುಕ ಸುಖ ಹೆಚ್ಚಿಸಬೇಕು ಸಖ||
ಬೆಳ್ಳಿಚುಕ್ಕಿ ಜೊತೆ
ಬೆಲ್ಲದ ಕನಸು ಮೂಡಿ|
ಇಳಕಲ್ ಜರಿಸೀರೆ ಧಾರಿ
ಕಣ್ಣ ಕುಕ್ಕಿಸಬೇಕು ಸಖ||
ಬಾಜಾ-ಭಜಂತ್ರಿ ಆರತಿ ಪಿಡಿದು
ಊರ ದ್ವಾರದಿ ಕಾದು|
ಬೀದಿ-ಬೀದಿಗಳ ಸುತ್ತಿ
ದಿಬ್ಬಣದಿ ಸ್ವಾಗತಿಸಬೇಕು ಸಖ||
ಬಿಲ್ಹುಬ್ಬ ಮಧ್ಯದಿ ಕೆಂಬಿಂದು
ಹೊಳೆವ ನಯನದ ಚೈತ್ರವಾಹಿನಿ|
ನಗೆಯ ಬೆಳಕ ಬೀರಿ
ಬದುಕ ದನಿಯಾಗಿಸಬೇಕು ಸಖ||
ಚಾಕ-ಚಕ್ಯತೆಯ ಚತುರಿ
ನಯ-ವಿನಯವ ತೋರಿ|
ಮನೆ-ಮನಸುಗಳು ಮುರಿಯದಂತೆ
ಮನ್ವಂತರವ ಸೃಜಿಸಬೇಕು ಸಖ||
ಇರುಳು ಹೊತ್ತಿಗೆ ಬಿಡಿಸಿ
ಮನವ ಮೊಬ್ಬಲಿ ಇರಿಸಿ|
ತನುವ ಧಿವ್ಯತೆಯ ತೋರಿ
ನನ್ನಾತ್ಮವ ಆವರಿಸಬೇಕು ಸಖ||
ನಕ್ಕು ನಾಚಿ ನೀರಾಗಿ
ಕ್ಷೀರ ಸಕ್ಕರೆಯೇ ಆಗಿ|
ಚಂದ್ರನ ತಂಬೆಳಕ ಅಮೃತದಿ
ಹಿಮ ಕರಗಿ ಝರಿಯಾಗಿಸಬೇಕು ಸಖ||
ನನ್ನಾಕೆ ನನ್ನ ಮನ ಮೆಚ್ಚಿಸಬೇಕು ಸಖ||
ಆಕೆ ಬಂದು ಬದುಕ ಸುಖ ಹೆಚ್ಚಿಸಬೇಕು ಸಖ||
–ಚಂದ್ರಯ್ಯ ಚಪ್ಪರದಳ್ಳಿಮಠ
ಸೂಚನೆ: ರಧೀಫ್ ನ ಕೊನೆಯ ಪದ ‘ಸಖ ‘. ಅದನ್ನು ‘ಸಾಕಿ’ ಅಂತಲೂ ಹಾಡಿಕೊಳ್ಳಬಹುದು..
ಗಜಲ್-೬
ಇಳಿಸಂಜೆ ಹೊತ್ತಿನಲ್ಲಿ ತೇಲಿಹೋದ ಮಾತು ನನ್ನ ನಿನ್ನ ನಡುವೆ
ರೆಪ್ಪೆಬಡಿಯುವದರೊಳಗೆ ಕರಗಿಹೋಗಿತ್ತು ಇಳಿಸಂಜೆಯು ನನ್ನ ನಿನ್ನ ನಡುವೆ
ಮಧುಶಾಲೆ ತೆರೆದಿತ್ತು ಬಾಕಿ ಏನಿತ್ತು? ನನ್ನ ನಿನ್ನ ನಡುವೆ
ಶಯನಕ್ಕೆ ಬರುವುದರೊಳಗೆ ಮಧುಬಟ್ಟಲು ಖಾಲಿಯಾಗಿತ್ತು ನನ್ನ ನಿನ್ನ ನಡುವೆ
ಯುದ್ಧಗಳು ಸಾವಿರ ನಡೆದವು ಸಾವಿರ ನಡೆಯಲಿವೆ
ಸಂತಸದ ಘಳಿಗೆಗಳು ಹಾಗೇ ಸರಿದಿದ್ದವು ನನ್ನ ನಿನ್ನ ನಡುವೆ
ಪ್ರೇಮ ಕಾಮಕೆ ಎರಡು ಕಣ್ಣುಗಳಾಗಿ ನೀನಿರಲು
ಒತ್ತರಿಸಿ ಬರುವ ನೂರು ಆಸೆಗಳೂ ಬತ್ತಿಹೋದವು ನನ್ನ ನಿನ್ನ ನಡುವೆ
ಕೋಮುಗಲಭೆಗಳ ದಳ್ಳುರಿಗೆ ಜಗದೊಡಲು ಉರಿಯುತಿರಲು ಸಾಕಿ ಬರೆನು
ನಾ ಮಧುಶಾಲೆಗೆ ಮೊದಲು ವಿಷದ ಬೀಜ ಸುಡಬೇಕು ‘ಜಾಲಿ’ ನನ್ನ ನಿನ್ನ ನಡುವೆ
-ವೇಣು ಜಾಲಿಬೆಂಚಿ
ವೇಣು ಜಾಲಿಬೆಂಚಿಯವರ ಗಜಲ್ ತುಂಬಾ ಇಷ್ಟವಾಯಿತು.
ಧನ್ಯವಾದಗಳು ಸರ್