ಗುರುದಕ್ಷಿಣೆ
ಬಿಳುಪಿಗೂ ಬಿಲ್ಲಿಗೂ ಹೊಸ್ತಿಲಾದ ಹನಿಗೆ ಹುದುಗಿದ್ದ
ಚೈತನ್ಯದ ಗುರು ಕಿರಣವೇನೇ?
ಮಳೆಹನಿಯ ರಭಸಕ್ಕೆ ತಾಳಿಕೆಯ ತೋರಿಸಿದ
ಮರದೆಲೆಯು ಹನಿಗೆ ಗುರು ತಾನೇ?
ಹರಿವ ಆಸೆಗೆ ತಗ್ಗಿಗೆ ನುಗ್ಗಿದೊಡೆ ಸಾಗರದ
ಹಾದಿಗೊಯ್ದ ಗುರುವು ಭುವಿ ತಾನೇ?
ಕಣ್ಣಹನಿ ಮುತ್ತೆಂದು ಒಡನೆ ಚಾಚಿದ ಬೊಗಸೆ
ಮೌಲ್ಯದ ಮತಿಹೇಳೋ ಗುರು ತಾನೇ?
ರಕ್ತ ಮಾಂಸವಂತೆ ಬುದ್ಧಿ ಭಾವಗಳಂತೆ
ಪಂಚಭೂತಗಳಂತೆ ಜೀವದಾ ರಚನೆಗೆ.
ಜೀವಿಯ ಜೀವಂತಿಕೆಗೆ ಪಂಚವೆಲ್ಲಾ ಕೊಂಚ!
ಕಣಕಣದೊಳೊಕ್ಕಿ ಕಲಿಕೆ ಹುಚ್ಚ ಹಚ್ಚೋ
ಅಸಂಖ್ಯಾಣು ಅದ್ಭುತಗಳೇ ಶಿಲ್ಪಿ ಬದುಕೀಗೆ.
ದಕ್ಷಿಣೆಯ ಹೆಸರೆತ್ತೆ ಅದ್ಭುತ ಅದ್ಭುತವೇನೇ?!
– ಶಚಿ ಪಿ.
ಸೊಳ್ಳೆ ಎನುವರಷ್ಟೆ!
ತಾಸುಗಟ್ಟಲೇ ತಾಳ್ಮೆಗೆಡದೆ,
ಪರದೆಯ ಹಿಂದೋ, ಮುಂದೋ..
ಮೇಲೋ, ಕೆಳಗೋ.. ತಾವ ಹುಡುಕಿ,
ಅವಿತು ಕುಳಿತು ನರರ ನರಗಳ ರಕುತ ಹೀರುವ,
ನಮ್ಮನ್ನು ಜನ ಸೊಳ್ಳೆಗಳೆನ್ನುತ್ತಾರೆ.
ಜನರ ಕಣ್ಣಿಗೆ ಮಾತ್ರ,
ಹುಟ್ಟು ನಾರುವ ಕೊಚ್ಚೆಯೇ ಇರಬಹುದು.
ಆದರೆ ಆವಾಸ ಐಷಾರಾಮಿ ಹೆಂಚಿನ ಮನೆಯಲ್ಲೋ,
ಕೆಲವೊಮ್ಮೆ ಭೂತ ಬಂಗಲೆಯಲ್ಲೋ,
ಮತ್ತೊಮ್ಮೆ ರೆಸಾರ್ಟಲ್ಲೋ ಉಳಿದುಬಿಡುತ್ತೇವೆ.
ಜನ ಅದನೆಲ್ಲ ತಲೆಗೆ ಸುರಿದುಕೊಳ್ಳುವರಲ್ಲ,
ಆದರೂ ನಮ್ಮನ್ನು ಸೊಳ್ಳೆ ಎನ್ನುತ್ತಾರೆ.
ನಾವು ನಮ್ಮ ಕಾಯಕವ,
ಮರೆಯುವುದೇ ಇಲ್ಲ,
ಬಹುತೇಕ ಮರೆತಂತೆ ನಟನೆಯಷ್ಟೆ.
ಕಾಲ ಬಂದಾಗ ಕಾರ್ಯೋನ್ಮುಕ,
ಜಂಜಡಗಳ ಜಡ್ಡಾಟ ಜನರಿಗೆ ವಿಸ್ಮೃತಿ,
ನಾವು ಹುಟ್ಟು ಕಸುಬಿಗೆ ವಿಮುಖರಲ್ಲ,
ಜನ ನಮ್ಮನ್ನ ಸೊಳ್ಳೆ ಎನುವುದ ಬಿಡುವುದಿಲ್ಲ.
ಶಾಶ್ವತ ನಿರ್ನಾಮಕೆ ಜನ,
ಅಷ್ಟೇನು ತಲೆ ಕೆಡಿಸಿಕೊಳುವವರಲ್ಲ.
ಕಚ್ಚಿದಾಗ ಮಾತ್ರ ಬೊಬ್ಬೆಯಿಡುತ್ತಾರೆ,
ಹೆಚ್ಚಿನ ಸಮಯ ಪರದೆ ಕಟ್ಟಿ ನಿದ್ದೆಗೊರಗಿ,
ಮಂಪರಲ್ಲೇ ಗೊರಕೆಯೊಡೆಯುತ್ತಾರೆ.
ನಮ್ಮ ಕೆಲಸ ಇದ್ದೇ ಇದೆ,
ಅವರದ್ದೇ ರಕುತದ ಕೊಳ್ಳೆ,
ನಮ್ಮ ಸಾವು ಅಷ್ಟಕ್ಕಷ್ಟೆ, ಮರೆವ ಮನುಜರು.
ನಮ್ಮನ್ನ ಸೊಳ್ಳೆ ಎನುವರಷ್ಟೆ.
– ರಾಜೀವ ಸಖ
*ತೇರನೆಳೆವ ಬನ್ನಿ*
ತೇರನು ಎಳೆವವರು ನಾವು !
ಊರು ಯಾವುದಾದರೇನು?
ದಾರಿ ನೂರು, ಬಂದು ಸೇರಿದೆವು
ಗುರಿಯೊಂದು ಒಂದುಗೂಡಿದೆವು
ತೇರನೆಳೆವವರು ನಾವು
ಹೇಗಿದ್ದರೇನು? ಎಂತಿದ್ದರೇನು ?
ಅಕ್ಕರಗಳ ಕಲಿತವರಷ್ಟೇ ಅಲ್ಲ
ಸಕ್ಕರೆಯಂತ ಮಾತಿನವರು
ಉಕ್ಕುವ ಅಭಿಮಾನವದು
ಎದೆಯ ತುಂಬಿ ಸೊಕ್ಕಿದವರು
ಬರೆಯುವವರು ಜೊತೆಗಿಹರು
ಸರಿಯವವರಲ್ಲ ಹಿಂದೆ
ಚರಿತೆಯನು ಅರಿತಿಹೆವು
ಯಾರ ಭಯವೂ ಇಲ್ಲಮೆಗೆ
ಎಲ್ಲಿಂದಲೋ ಬಂದು
ಇಲ್ಲಿ ನೆಲೆ ನಿಂದವರಿಗೆ
ಒಲ್ಲೆನೆಂದರೂ ಬಿಡದೆ
ಕಲಿಸಲೇ ಬೇಕು ಕನ್ನಡ
ಅದುವೇ ನಮ್ಮ ನಿರ್ಣಯವು
ನುಡಿತಾಯಿ ಸಡಗರದಿ
ಏರಿ ಕುಳಿತಿಹ ತೇರು
ನಾಡಿನ ಜನರೆಲ್ಲ ಕೂಡಿ
ಜೋರಿನಿಂ ಎಳೆವ ತೇರು
ಪ್ರಾದೇಶಿಕ ಭಿನ್ನತೆಯ
ವರ್ಣಗಳ ಹೊದ್ದ ತೇರು
ವಿಧ ವಿಧ ಧಳವಾದರೂ
ಏಕತೆಯ ಪರಿಮಳದ ತೇರು
-ಚಂದ್ರೇಗೌಡ ನಾರಮ್ನಳ್ಳಿ
ಇವರೆಲ್ಲ ! ಏನಾದರು ..?
ಹ್ಹ
ಮೊನ್ನೆ ಮೊನ್ನೆ ಕೇಳಿದೆಯಲ್ಲ
ಬುಸುಗುಟ್ಟಿ ಸಿಡಿದು
ಅಬ್ಬರಿಸಿ ಹೋದವರು
ಇಂದು ! ಏನಾದರು?
ಬಾಯ್ಬಾಯಿ ಬಡಿದು
ಮೂತಿ ಮೋರೆ ತಿರುವಿ
ಕೈ ಕೈ ಮಿಲಾಯಿಸಿ
ದರ್ಪ ತೋರಿ ಆರ್ಭಟಿಸಿದರು
ಒಂದೋ ಎರಡೋ ಕಿತಾಪತಿ
ಇದ್ದಾಗ ಬರೀ ಫಜೀತಿ
ಕೇಳಿ ಕೇಳಿ ಗಂಟಲು ಕಿವಿ
ಸೋಕಾಡಿ ಬತ್ತಿದವು
ಊರೇ! ಉಪಕಾರವರಿಯದು
ಇಂಥವರ ಅರಿಯುವುದೇ ?
ಬಲ್ಲವರನ್ನೂ ಬಿಡೋದಿಲ್ಲ
ಈ ಶನಿಕಾಟ , ವಿಪರೀತ
ಛೀ ಥೂ ಎಂದು ಉಗಿದರು
ಹಿಡಿ ಶಾಪ ಹಾಕಿದರು
ಇವರ ಹೆಸರೆತ್ತಿದರೆ
ಪಂಚಭೂತಗಳಿಗೂ ಸಿಟ್ಟು !
ಅತ್ತಾಗಿತ್ತಾಗೆ ಹೋದರು
ಊರುಗೋಲೇ ಕಗ್ಗಂಟಾಯಿತು
ಗುರುತೆಯಿಲ್ಲ ದಿಟ್ಟಿಸಿದರು
ಸೋತು ಸುಣ್ಣವಾದರು !!
-ಆದಿತ್ಯಾ ಮೈಸೂರು
ಎರಡು ಗಜಲ್‍ಗಳು
1.
ನೆಂದು ಶೀತವಾದೀತು ಎಂದು ಕಣ್ಣು ಕೆಂಪು ಮಾಡಿದ ನಿನ್ನ ಮಾತು ಕೇಳಬೇಕಿತ್ತು
ನಿನಗಿಂತ ಮುಂದಾಗಿ ಬಂದಪ್ಪುವ ಒಲವಿನ ತಾಪಕ್ಕೆ ಬೇಲಿ ಹಾಕಬೇಕಿತ್ತು
ಬರ್‍ಪೂರ್ ಮಳೆ ಗಾಳಿ ಹಿಂದೆಯೆ ಅಡಗಿ ಕುಳಿತ ನಿನ್ನ ಗುರ್ತಿಸಿಕೊಳ್ಳಬೇಕಿತ್ತು
ಗಂಜಿ ಉಪ್ಪಿನಕಾಯಾದರೂ ಬಡಿಸು ಬೇಗ ಎಂದಾಗಲೆ ತಿಳಿಯಬೇಕಿತ್ತು
ಗರಡಿಮನೆ ನೆನಪಿಸಿಕೊಂಡವಳಂತೆ ಗಾಳಿ ಗುದ್ದಾಡುವಾಗ ಹಠ ಬಿಡಬೇಕಿತ್ತು
ಸೊಕ್ಕಿನ ಹೆಣ್ಣು ನಡೆದದ್ದೇ ದಾರಿ ಎಂದು ಕರೆದಿದ್ದರ ಅರ್ಥ ತಿಳಿಯಬೇಕಿತ್ತು
ಗರತಿಯಂತೆ ಸಂತೆ ಪೇಟೆಯಲಿ ಚೌಕಾಸಿ ಲೆಕ್ಕ ಮಾಡುವಾಗಲೇ ಕೈ ನಡುಗಿತ್ತು
ತರಕಾರಿಗಳೆಲ್ಲ ಕಣ್ಣು ಹೊಡೆದು ಕರೆವಾಗ ನಿರಾಕರಿಸುವ ಮನಸು ಬರಬೇಕಿತ್ತು
ಏನು ಹೇಳಲಿ ಸಖ ನಂಬಿಸಿ ಮೋಸ ಮಾಡಿದವನ ಪರಿಚಯವ ಅರುಹಬೇಕಿತ್ತು
ಕರುಣೆಗಿಟ್ಟಿಸಿ ಕೊನೆಗೊಂದು ಗುಳಿಗೆಯನಾದರೂ ನಿನ್ನಿಂದ ಪಡೆಯಬಹುದಿತ್ತು.
2.
ದೂರವಾಗಬೇಕೆಂದೆ ಮಾತು ಮುಗಿಸುವೆ ನೀ ಸರಿ ತಪ್ಪು ಅರಿಯೆ ನಾ
ಒಂದು ಮಾತು ಎನ್ನುತ್ತ ನೆನಪಿನಲ್ಲುಳಿವೆ ನೀ ಸರಿ ತಪ್ಪು ಅರಿಯೆ ನಾ
ನಿನ್ನ ಮುಂಗುರುಳು ನಾನಾಗುವಾಸೆ ಎಂದಾಗ ಪ್ರೀತಿ ಉಕ್ಕಿ ಕಾಮನಬಿಲ್ಲು ಬಣ್ಣ
ತುಂಬುವಷ್ಟರಲ್ಲಿ ಬಹು ಕಾಲವೇ ಮಾಯವಾಗಿ ಬಿಡುವೆ ನೀ ಸರಿ ತಪ್ಪು ಅರಿಯೆ ನಾ
ಮನಸು ಅರಿತಿರುವೆ ಅರಿತು ಬೆರೆತಿರುವೆ ಕಣ್ಣಲ್ಲೆ ನುಂಗಿ ನೀರು ಕುಡಿದಿರುವೆ
ಎಂದೆಲ್ಲ ಅಂದಾಗಲೂ ಸಾಮಿಪ್ಯ ಮರೆವ ನೀ ಸರಿ ತಪ್ಪು ಅರಿಯೆ ನಾ
ಬಾಯ್ ಎಂದು ಹೊರಟ ಮೇಲೂ ಉಳಿಯುವ ನಿನ್ನ ಎಹಸಾಸ್ ಎದೆಚಿಪ್ಪಿನಲ್ಲಿ
ಅಸಂಖ್ಯ ಹನಿಯಿಟ್ಟು ಸ್ವಾತಿ ಮುತ್ತಾದರೆ ನೀ ಸರಿ ತಪ್ಪು ಅರಿಯೆ ನಾ
ಎಲ್ಲವನ್ನು ಮರೆತೆ ಎಂದು ಅದೆಷ್ಟು ಸಲ ಹೇಳಿರುವೆ ಕೇಳಿರುವೆ ನೋಡಿರುವೆ
ಕನಸು ಹುಟ್ಟಿಸುವ ರೀತಿ ಬದಲಾಯಿಸಿಕೊಂಡರು ನೀ ಸರಿ ತಪ್ಪು ಅರಿಯೆ ನಾ
ಮದರಂಗಿಯ ಹಸಿಗಂಧ ನಿನ್ನ ಮನಸ್ಸಿನಿಂದಲೆ ಹೊರಟಾಗ ಇರಬಾರದೆ
ಒಂದಿಷ್ಟು ಹೊತ್ತು ಸುಖಕ್ಕಾದರು ಎನಿಸಿದರೂ ನೀ ಸರಿ ತಪ್ಪು ಅರಿಯೆ ನಾ
ಅಕ್ಷತಾ ಕೃಷ್ಣಮೂರ್ತಿ
ಹೊಗೆ –
ದೈವದ
ಕರದಲ್ಲಿ ಕರಗುವ
ಪ್ರತಿ ಕ್ಷಣವೂ
ಕರ್ಪುರ ಆರಿದ
ಮೇಲಿನ ಹೊಗೆ !
– ಬರಸಿಡಿಲು –
ಬದುಕಿಗೆ ಬಂದ
ಬೆಳಕಲ್ಲಿ ಅದೇನಿತ್ತೋ !
ಸತ್ಯೋದಯವಾಗ್ಹೋತ್ತಿಗೆ
ಬದುಕೇ ಬೂದಿಯಾಗಿತ್ತು !!
– ಅಗೋಚರ –
ಕವಿ ಕೊರಳಿಗೆ
ಉರುಳಾದ ಕವಿತೆ
ಅದ್ಹೇಗೋ ಒಂದು ದಿನ
ಅಮರವಾಗಿತ್ತು,
ಕವಿ ಮಾತ್ರ ಜಗತ್ತಿಗೆ
ಅಪರಿಚಿತನಾಗಿಯೇ
ಉಳಿದು ಹೋದ !
– ಪ್ರಾಯಶ್ಚಿತ –
ಅಹಂಕಾರದ
ನೈವೇದ್ಯಕ್ಕಿಂತ
ಪ್ರಾಯಶ್ಚಿತದ
ಹನಿಕಣ್ಣೀರೇ ಸಾಕು
ಮನದ ನೆಮ್ಮದಿಗೆ
– ವ್ಯಾಪಾರ –
ಇಲ್ಲಿ ಎಲ್ಲ
ವ್ಯವಹಾರಿಕವಾಯೇ
ನಡೆಯುವಂಥದ್ದು
ಧರ್ಮ, ಸಾಹಿತ್ಯ,
ರಾಜಕಾರಣ ಇತ್ಯಾದಿ
ಇತ್ಯಾದಿ ಅಷ್ಟೆಯಲ್ಲ
ಪ್ರೇಮ… ಸ್ನೇಹ..
ಕಾಮ..ಗೀಮ… ಎಲ್ಲ
– ಅ..ಸಾದ್ಯ –
ಆ ಕ್ರೂರ ಕೈಗಳಿಗೆ
ಅಮಾಯಕ ಕಣ್ಣು
ಕಿತ್ತುಕೊಳ್ಳುವ
ತಾಕತ್ತಿದ್ದರೂ
ಇರಬಹುದು
ಕನಸು ಕೊಲ್ಲೋ
ಸಾಮರ್ಥ್ಯ ಅಸಾಧ್ಯ!
– ವಿಚಿತ್ರ –
ಸವಿ ನೆನಪುಗಳು
ಸಹ ಒಮ್ಮೊಮ್ಮೆ
ಹೃದಯಕೆ
ವೇದನೆಯಾಗೋ
ವಿಷಯ ಅದೆಂಥ
ವಿಚಿತ್ರ…ವಿಪರ‍್ಯಾಸ
– ವಂದನೆ –
ಕದನ ಕಲಹ
ವಿರಸ ವಿನಾಶದ
ಸಂಕಟ
ನಿರಂತರವಾಗಿಸಿ
ಹೋದ ನಿನಗೆ
ವಂದನೆ !
ಅಭಿವಂದನೆ !!
– ನೆನಪು –
ಸವಿಯನುಭವಗಳ
ಹಿಂದೆ ಹಿಂದೆ
ಕಹಿನೆನಪುಗಳ
ಸಾಲು ಮೆರವಣಿಗೆ !
– ಆರದ ಗಾಯ –
ಪಂಜರದ ಹಕ್ಕಿಗೆ
ಮುಕ್ತಿಯೇನು ದೊರಕಿತು
ಹೃದಯಗಾದ ಗಾಯದ
ಗೀರುಗಳು ಮಾತ್ರ ಹಾಗೇ ಇವೆ
– ಅಶ್ಫಾಕ್ ಪೀರಜಾದೆ
ಕಣ್ಣಂಚಿನ ಕಂಬನಿ
ಮನಸಿನ ತಳಮಳ ಹೆಚ್ಚುತಲಿ
ಕಂಠ ಬಿಗಿದು ಬಾಯಾರುತಲಿ
ತನ್ನವರನೆಲ್ಲ ಒಮ್ಮೆ ನೋಡುತಲಿ
ಹಿಂದಿನದನು ನೆನೆದಳು ಮೌನದಲಿ
ಅಮ್ಮನ ಸಿಹಿ ಮುತ್ತುಗಳು
ಅಪ್ಪನ ಬಿಗಿದಪ್ಪುಗೆಗಳು
ಓಡಹುಟ್ಟಿದವರೂಡನೆಯ ಹುಸಿ ಜಗಳಗಳು
ನೆನಪಾಗಿ ಹೋಯಿತು ಎದೆ ಗೂಡಿನಲಿ
ತಾನಾಡಿದ ಚೆಂದದ ತೊಟ್ಟಿಲು
ಇಣುಕಿಣುಕಿ ಕಂಡಿತು ಮೂಲೆಯೊಳು
ಘಲ್ ಘಲ್ ಎಂಬ ನಾದಗಳು
ಮೂಡುತಿತ್ತು ತನ್ನ ಬೆಳ್ಳಿ ಗೆಜ್ಜೆಯಲಿ
ಗೆಜ್ಜೆಯ ತೂಟ್ಟ ಪುಟ್ಟ ಪಾದಗಳು
ಎಡವುತ ಹೆಜ್ಜೆಯ ಇಡುತಿರಲು
ಖುಶಿಯಲಿ ಅಮ್ಮನು ಹಿಗ್ಗಿದಳು
ತೂದಲುತ ಅಮ್ಮಾ ಎಂದು ಕರೆಯುತಲಿ
ಕಣ್ಣರಳಿಸಿ ಸುತ್ತಲು ನೋಡಿದಳು
ತಾನ್ಬೆಳೆದ ಮನೆಯ ಕಂಬಗಳು
ಮಡಿಲಕ್ಕಿ ಹಿಡಿದು ನಿಂತಿಹವು
ಮನೆಮಗಳನು ಕಳಿಸುವ ತಯಾರಿಯಲಿ
ಮುಗಿಯಿತು ಮನೆಯ ನಂಟುಗಳು
ಸಡಲವಾಯಿತು ಸಂಭಂಧದ ಗಂಟುಗಳು
ಎಂದು ನೆನೆಯುತ ತನ್ನ ಮನದೂಳು
ಯಾರಿಗೂ ಕಾಣದಂತೆ ಒರೆಸಿದಳು
ಕಂಣಂಚಲಿ ಹರಿಯುತ್ತಿದ್ದ ಕಂಬನಿ.
-ರಂಜಿತ ಪ್ರಹಲ್ಲಾದ್
ನಿನ್ನ ನೋಡಿದ ಮೇಲೆ
ಸುಖವಾಗಿ,
ಬದುಕಲಾಗುವುದೇ ನನಗೆ
ನಿನ್ನ ನೋಡಿದ ಮೇಲೆ?
ಈಗ,
ಹಾಡಲಾಗುವುದೇ ನನಗೆ
ನಿನ್ನ ನೋಡಿದ ಮೇಲೆ?
ಧ್ವನಿಸುತ್ತೆ,
ಬದುಕೆನ್ನ
ಹಾಡಲಾಗುವುದೇ ನನಗೆ
ನಿನ್ನ ನೋಡಿದ ಮೇಲೆ?
ಸಾಗುತ್ತೆ
ಬದುಕೆನ್ನ
ನಡೆಯಲಾಗುವುದೇ ನನಗೆ
ನಿನ್ನ ನೋಡಿದ ಮೇಲೆ?
ನಗುತ್ತೆ,
ಚಂದ್ರಮುಖ ಮೇಲೆ ಆಕಾಶದಿ
ನೋಡಲಾಗುವುದೆ ನನಗೆ
ನಿನ್ನ ನೋಡಿದ ಮೇಲೆ?
ಗುಲಾಬಿ ತೋಟದಲಿ
ಬಣ್ಣದ ಚಾಪೆ, ಪರಿಮಳದ ಗಾಳಿ
ಹಿರಲಾಗುವುದೇ ನನಗೆ
ನಿನ್ನ ನೋಡಿದ ಮೇಲೆ?
ಸುಖವಾಗಿ,
ಬದುಕಲಾಗುವುದೇ ನನಗೆ
ನಿನ್ನ ನೋಡಿದ ಮೇಲೆ?
*ಉರ್ಬನ್ ಡಿಸೋಜ
ಮುಂಗಾರು
ಮರಳಿ ಮರಳಿ ಮುಂಗಾರು
ಕದತಟ್ಟಿದೆ ನೆನಪಿನ ಮನೆಯ
ಕಳೆದ ಕ್ಷಣಗಳು, ದಿನಗಳು
ಹೊನ್ನ ಉಡುಗೆಯನುಟ್ಟು ,
ನನ್ನೆದುರೇ ನಿಂತಂತೆ.
ಕಾಗದದ ದೋಣಿಯ ಪೈಪೋಟಿ,
ಬಣ್ಣ ಬಣ್ಣದ ಛತ್ರಿ ,
ಭಯ ತರುವ ಮಳೆಯ ಆರ್ಭಟ.
ಮಳೆಯ ಪರಿವೆಯಿಲ್ಲದ ಆಟ,
ಆಗಾಗ ನೆನೆಯುವ ಖಯಾಲಿ.
ಮಳೆಯ ಹನಿಯಂತೆ ,
ಮುದನೀಡುವ ನೆನಪುಗಳು…
ಬಾರದಿದ್ದರೂ ಆ ಕ್ಷಣ
ತರುವುದು ನಿಷ್ಕಲ್ಮಶ ನಗು…
ನೆನಪೇ ಜೀವಾಳ…
– ಶಿಲ್ಪಾ ಕೆ