ಕಾವ್ಯಧಾರೆ

ಪಂಜು ಕಾವ್ಯಧಾರೆ

ಶ್ರಾವಣ….

ಎಲ್ಲೆಲ್ಲೂ ಹಸಿರು, ತಳಿರು ತೋರಣ,
ನೀ ಬಂದೊಡನೆ ಬಂಜರು ಭೂಮಿಯಲ್ಲೂ ಹಬ್ಬದ ವಾತಾವರಣ …
ಎಲ್ಲೆಲ್ಲೂ ಸಂತೋಷ, ನಗು, ಸಂಭ್ರಮ,
ಸ್ವರ್ಗ ವಾಗುವುದು ಧರೆ ಲೆಕ್ಕಿಸದೆ ಪಟ್ಟಣ ಗ್ರಾಮ …
ಆದರಲ್ಲಿ ಸಂಭವಿಸಿದ್ದು ಕಾಲನ ತಾಂಡವ,
ಹರಿಯಿತು ಜಲ ಧಾರೆ ಲೆಕ್ಕಿಸದೇ ನಿನ್ನಯ ಬರುವಿಕೆಯ…
ಆಕ್ರಂಧನ ಮಾತ್ರ ಕೇಳುತಿತ್ತು,
ಅಲ್ಲಿ ದೇವರ ಸ್ವಂತ ನಾಡು ಮುಳುಗುತಿತ್ತು….
ನಿಸ್ಸಹಾಯಕರಾದರು ಮನುಜರು,
ದಡ ಸೇರದಾದರು ಈಜಿದರೂ….
ನಿನ್ನ ಆಗಮನಕ್ಕೆ ಕಾದಿದ್ದ ಹೂರಾಶಿಗಳೆಲ್ಲ,
ನೆಲದ ಮೇಲಿನ ರಂಗೋಲಿಯಾಗದೆಯೇ ಅಸುನೀಗಿದವು…
ಎಲ್ಲವನ್ನು ನುಂಗುತ್ತಿದ್ದ ನೀರ, ರಭಸದಿಂದ ಅಪ್ಪಳಿಸಿದ ಮಳೆಯ
ತಡೆಯಲಾರದಾಯಿತು ಮಹಾಬಲಿ ಮತ್ತವನ ಕೊಡೆಯೂ…
ಸಾವಿನ-ಬದುಕಿನ , ಹಸಿವಿನ-ನೋವಿನ ಓಕಳಿಯಾಟಕ್ಕೆ,
ಚೆಲ್ಲಾಪಿಲ್ಲಿ ಯಾಗಿ ಕಣ್ಣೀರ ಮೊರೆ ಹೊಕ್ಕಿದೆ,
ದೇವರ ಸ್ವಂತ ದೇಶ …
ನೀರಿಳಿದು ಭುವಿ ಕಂಡರೂ, ಕಣ್ಣಲ್ಲಿದೆ
ಈ ಸಂವತ್ಸರ ನೀ ತಂದ ಕ್ಲೇಷ ……

— ಶೀತಲ್ ….

 

 

 

 

(ಇಲ್ಲಿ “ನೀ ” ಎಂದರೆ ಶ್ರಾವಣ, ಹಾಗೂ ಶ್ರಾವಣ ಬರುವಾಗ ಕೇರಳಕ್ಕೆ ತಂದ ಪ್ರಳಯದ ಕುರಿತು ಈ ನನ್ನ ಕವನ..)


ಬೆಳದಿಂಗಳಾಗಿ ಬಂದೆ..
ಬೇಸರದಿ ಈ ಜೀವನದಿ ನೀ
ಅದೆಲ್ಲಿಂದಲೊ ಬಂದೆ…
ತನುವ ನೋವ ಮರೆಸಿದೆ
ಹೂವಂತ ನಗೆಗೆ ಗೆಲುವಾದೆ
ಕಣ್ಣಮಿಂಚಲಿ ನನ್ನ ನಾ ಮರತೆ
ತುಟಿಯಂಚಿನ ಮಂದಹಾಸಕೆ ಸೋತೆ
ಮುಂಗುರುಳ ಮೋಹಕತೆಗೆ ಸೆರೆಯಾದೆ
ಗುಳಿಕೆನ್ನೆಯ ಕನ್ಯೆಯೆ ಒಲವಲಿ ಮಿಂದೆ
ನೆಮ್ಮದಿ ಕಾಣದ ಗಾವಿಲನಾಗಿದ್ದೆ
ಚಲುವ ಚಲ್ಲಿ ಬಳಿಸಾರಿ ನಿಂದೆ
ಪುರುಷೊತ್ತಿಲ್ಲದ ಬಯಕೆಗಳ ತಂದೆ
ಭಾವನೆಗಳಿಗೆ ಜೇನಾಗಿ ಜೊನ್ನವಾದೆ
ಅನುರಾಗದಲಿ ಅನುದಿನವೂ ಬೆರೆತೆ
ಸವಿಮಾತಿನಲಿ ನನ್ನೀ ಜೀವನದ ಒರತೆ
ಸೋಜಿಗವು ಈ ಬದುಕು ನಿನ್ನಿಂದ ಅರಿತೆ
ಮಡಿಲಮಗುವಾದೆ ಮರೆತೆ ಎಲ್ಲ ಕೊರತೆ
ಹೇ ಕರುಣಾಮಯಿ ಬರದಿದ್ದರೆ ನೀ
ಈ ಮನ ಗಾಳಿಗಿಟ್ಟ ದೀಪವಾಗಿತ್ತು
ಬಂದಾಗಿಂದ ಅದೇನು ಶಾಂತ ಈ ಮನ
ಬದುಕ ಕಲಿಸಿದೆ ಕರುಣೆಯಲಿ ಕೈ ಹಿಡಿದೆ
ಚಲುವು ಒಲವು ಗೆಲವು ನಲಿವು
ಎಲ್ಲ ನೀನಿತ್ತ ಸುಂದರ ವರವು
ನನ್ನಿ ಜೀವನವೇ ನೀ ಬರೆದ ಬರಹ
ಕತ್ತಲಬಾಳಿಗೆ ಬೆಳದಿಂಗಳಾಗಿ ನೆಲೆಯಾದೆ
-ಜಯಶ್ರೀ ಭ.ಭಂಡಾರಿ.

 

 

 

 


“ಬಾನ್ನೋಟ”
……………….
ಇರುಳಿನ ತುದಿಯಲಿ ತೂಗಾಡಿದ ಕನಸೊಂದು
ಬೇಡಿತು ಚಂದಿರನ ಕೈಹಿಡಿದು ನಡೆಸೆಂದು.
ಓಡಿದ ಚಂದಿರ ಜಾಣ್ಗಿವುಡನೋ ಎಂಬಂತೆ
ಕೈಹಿಡಿದು ಕರೆತರಲು ಭಾನುವ ಬಾನ ಮುಂದೆ.

ಅಪೂರ್ಣತೆಯ ಧ್ಯಾನದಿ
ಪರಿಪೂರ್ಣತೆಯ ಹಂಬಲದಿ
ಭಾನುವಿಗೆ ಬೀಳ್ಕೊಡುಗೆಯ ನೆಪವೊಡ್ಡಿ
ಸಜ್ಜುಗೊಂಡವು ಚಂದಿರನ ಸ್ವಾಗತಕೆ.
ಕೋಟಿಕಣ್ಗಳು ಕಾತುರತೆಯ ಕೈಚಾಚೆ
ಕೈಕೊಟ್ಟ ಪ್ರವೀಣ ಹೇಳಿದ್ದು… ಜಾಣ್ಮರುಳು!!

– ಶಚಿ ಪಿ.

 

 

 


ಅಪ್ಪ
ಅಳುವ ಕಂದನ ಮೊದಲ ದನಿಗೆ
ತಂದೆಯ ಜನನ…
ಕನಸು ಹೆಣೆಯುವ,
ನನಸು ಮಾಡುವ
ಕಂದನ ಸಲುವಾಗಿ.
ಇರುವ ಅರೆಜನ್ಮವ
ಮಗುವಿಗಾಗಿಯೇ ಸವೆವ…

ಬದುಕು ಕಟ್ಟಿಸಿ ಕಂದನ
ತಾ ಬಡವನಾಗಿಯೇ ಉಳಿವ.
ಎಲ್ಲ ನೋವಿನ ಕೊನೆಗೆ
ಎಲ್ಲ ತ್ಯಾಗದ ನಡುವೆ
ಆಶ್ರಮದ ದಾರಿಯೇ
ಗುರಿಯಾಯ್ತು ತಂದೆಗೆ…

ಕಳೆದ ಬಳಿಕವೇ ಕಾಲ,
ಅರಿವುದು ಅದರ ಮೌಲ್ಯ.

ಇದ್ದಾಗ ಉಪಚರಿಸದೇ,
ಇರದ ತಂದೆಯ ನೆನೆದು
ಗೋಳಿಡುವ ಶಾಪಕೆ
ಕಾರಣರು ಬೇರಾರೂ ಅಲ್ಲ…
– ಶಿಲ್ಪ


ಕ್ಷಮೆ ಇರಲಿ
ಕ್ಷಮೆ ಇರಲಿ ನೋವುಗಳೇ
ನಿಮ್ಮತ್ತ ಗಮನ ಕೊಡಲಾಗುತ್ತಿಲ್ಲ,
ನಾನೀಗ ಸಂತೋಷದ
ಕ್ಷಣಗಳ ಸಂಭ್ರಮದಲ್ಲಿದ್ದೇನೆ!

ಕ್ಷಮೆ ಇರಲಿ ವೈರಿಗಳೇ
ನಿಮ್ಮ ಕುಹಕಗಳಿಗೆ ಕಿವಿಗೊಡಲಾಗುತ್ತಿಲ್ಲ
ನಾನೀಗ ಸವಿನುಡಿಗಳ
ಆಹ್ಲಾದತೆ ಅನುಭವಿಸುತ್ತಿದ್ದೇನೆ!

ಕ್ಷಮೆ ಇರಲಿ ಕಷ್ಟಗಳೇ
ನಿಮ್ಮ ದಾಳಿಗೆ ಎದೆಗುಂದಲಾಗುತ್ತಿಲ್ಲ,
ನಾನೀಗ ಎಲ್ಲ ಗೆಲ್ಲುವ
ಧೈರ್ಯದಲ್ಲಿ ಮುನ್ನುಗ್ಗುತ್ತಿದ್ದೇನೆ!

ಕ್ಷಮೆ ಇರಲಿ ಆಸೆಗಳೇ
ನಿಮ್ಮ ಬೆನ್ನಿಗೆ ಬೀಳಲಾಗುತ್ತಿಲ್ಲ,
ನಾನೀಗ ತ್ಯಾಗದಿಂದ ಬದುಕು ಗೆದ್ದ
ಬುದ್ಧನ ಮಾರ್ಗದಲ್ಲಿದ್ದೇನೆ!
ಅಶೋಕ ವಿ ಬಳ್ಳಾ

 

 

 

 


ಹುಚ್ಚ

ನನಗೇ ಹುಚ್ಚ ಎನ್ನುತ್ತಾರೆ..!
ಏನೆನ್ನಲಿ ಈ ಜನರ ಹುಚ್ಚಿಗೆ?

ಹೌದು
ಸುಮ್ಮನೆ ಕುಳಿತಿರುತ್ತೇನೆ ನಾನು
ಎಲ್ಲ ಮರೆತು ತಾಸು ತಾಸುಗಟ್ಟಲೆ
ಖಾಲಿ ಮುಗಿಲಿನಾಳವ ನೋಡುತ್ತ;
ಇರುವುದಿಲ್ಲ ಯಾವುದರ ಅರಿವೂ ನನಗೆ,
ಯಾರೇ ಬಂದು ಹೋದರೂ ಪರಿವೆಯಿರದು…

ಹೀಗೆ ಯಾರ ಗೊಡವೆಗೂ ಹೋಗದೇ
ನನ್ನಷ್ಟಕ್ಕೆ ನಾನು ದಿಗಂತ ನೋಡುವುದು ಹುಚ್ಚೆ?

ಏಕೆ, ನೋಡುತ್ತಿರಲಿಲ್ಲವೆ,
ಶಹಾಜಾನ್ ಕೈದಿನಲ್ಲಿದ್ದರೂ ನೀರು ಅನ್ನದ
ಅರಿವಿರದೇ ತಾಜಮಹಲನು…!

ಹೌದು
ನನ್ನಷ್ಟಕ್ಕೆ ನಾನು ಮಾತಾಡುತ್ತಿರುತ್ತೇನೆ,
ಒಮ್ಮೊಮ್ಮೆ ಕೈಚಲಿಸುತ್ತವೆ ಗಾಳಿಯಲಿ ತಮ್ಮಷ್ಟಕ್ಕೆ,
ಬೆರಳುಗಳು ತಾನಾಗಿಯೇ ಏನೋ ಲೆಕ್ಕಹಾಕುತ್ತವೆ,
ಕುಳಿತಲ್ಲಿಯೇ ಪಾದಗಳು ಚರಿಸುತ್ತವೆ
ದ್ವನಿರಹಿತ ಲಯದೊಡನೆ…

ಹೀಗೆ ನನ್ನೊಳಗೆ ನಾನು ಹಾಡಿಕೊಳ್ಳುವುದು,
ಏನೇನೋ ಆಡಿಕೊಳ್ಳುವುದು ಹುಚ್ಚೆ?

ಏಕೆ, ಪ್ರತಿ ಶೇರ್’ಗೆ ಗಾಲಿಬ್ ತನ್ನಷ್ಟಕ್ಕೆ ತಾನು
ಗುನುಗುನಿಸುತ್ತ ಹಾಕುತ್ತಿರಲಿಲ್ಲವೆ ರುಮಾಲಿಗೆ ಗಂಟು…!

ಹೌದು
ಎಲ್ಲಿಂದಲೋ ಎದ್ದು ಎಲ್ಲಿಗೋ
ಹೊರಟು ಇನ್ನೆಲ್ಲಿಗೋ ತಲುಪುತ್ತೇನೆ
ಬಂದ ಕೇರಿಯ ಹೆಸರು, ನಿಂತ ಊರಿನ ಹೆಸರು,
ಹೋಗುವ ದಾರಿ ಗುರುತು, ಯಾವುದೂ ಇಲ್ಲ, ಗೊತ್ತಿಲ್ಲ
ಆದರೂ ಎಂದೂ ದಾರಿ ತಪ್ಪಿಲ್ಲ, ಎಲ್ಲೂ ಮುಗ್ಗರಿಸಿಲ್ಲ..

ಹೀಗೆ ಸ್ಥಳ ನಾಮ ರೂಪದ ಹಂಗುತೊರೆದು, ದಿಕ್ಕು
ದೆಸೆಗಳ ಮುಲಾಜಿಗೆ ಬೀಳದೇ ನಡೆಯುವುದು ಹುಚ್ಚೆ?

ಏಕೆ, ಕಬೀರ ಹೊತ್ತುಗೊತ್ತು ನೋಡದೇ ಏಕತಾರಿ
ಮೀಟುತ್ತ ಮೀರುತ್ತಿರಲಿಲ್ಲವೆ ಲೋಕದ ನೇಮಗಳನು…!

ಹೌದು, ಹುಚ್ಚ ನಾನು,
ಇದ್ದರೆ ಇರಲಿ ಬಿಡು ಇಂತಹ ಹುಚ್ಚು ನನಗೆ ಉಸಿರಿರುವವರೆಗೆ..!

ನನಗೇ ಹುಚ್ಚ ಎನ್ನುತ್ತಾರೆ..!
ಏನೆನ್ನಲಿ ಈ ಜನರ ಹುಚ್ಚಿಗೆ?

-‘ಅಲ್ಲಮ’ ಗಿರೀಶ ಜಕಾಪುರೆ,

 

 

 

 

 


 

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಪಂಜು ಕಾವ್ಯಧಾರೆ

Leave a Reply

Your email address will not be published. Required fields are marked *