ಕಾವ್ಯಧಾರೆ

ಪಂಜು ಕಾವ್ಯಧಾರೆ

ಕನಸು ಕನ್ನಡಿಯೊಳಗೆ…

ನಮ್ಮ
ಖಾಸಗೀ ಕನಸಿನ
ಲೋಕದೊಳಗೆ
ಪ್ರವೇಶ ಮಾಡುವರು
ನಮ್ಮ ಖಾಸಾ ಮಂದಿ

ಅಚ್ಚು ಮೆಚ್ಚಿನವರು
ಪ್ರೀತಿಪಾತ್ರರು
ಸಂಬಂಧಿಕರು
ಸ್ನೇಹಿತರು
ಮುಂತಾದವರು

ಒಮೊಮ್ಮೇ
ನಾವು ಕಂಡು
ಹೃನ್ಮನ ತುಂಬಿಕೊಂಡ
ಸಿನೇಮಾದವರು
ಸಿಲೇಬ್ರಟಿಗಳು
ಆದರ್ಶ ವ್ಯಕ್ತಿಗಳು
ಸಮಾಜಕ್ಕೆ ಮಾದರಿ,
ಮಾರಿಯಾದವರು

ಹಾಗೇ
ಒಮ್ಮೊಮ್ಮೇ
ನಮ್ಮ ಸ್ವಪ್ನ ಲೋಕಕ್ಕೆ
ಲಗ್ಗೆ ಇಟ್ಟು
ಬೆಚ್ಚಿ ಬೀಳಿಸುವರು
ಭಯಾನಕ ಚಹರೆಗಳು
ವಿಕೃತ ಮನಸ್ಸುಗಳು
ದುಷ್ಟರು, ಭ್ರಷ್ಟರು
ಸಮಾಜ ಘಾತುಕರು
ಖೂಳರು, ಪಿಶಾಚಿಗಳು

ಧುತ್ತೆಂದು
ಪ್ರಕಟವಾಗುವರು
ಎಲ್ಲೋ ಮಾತಾಡಿ
ಮರೆತು ಬಿಟ್ಟವರು
ಹಗಲ್ಹೋತ್ತು ಕಾಡಿದವರು
ಜಗಳಾಡಿದವರು
ಕಾದಾಡಿದವರು

ರಾತ್ರಿ ಕನಸಿನೂರಿಗೆ
ಬಂದೇ ಬಿಡುವರು
ದಾರಿಗೆ ಮುಳ್ಳಾದವರು
ಪ್ರೀತಿಗೆ ಗೋಡೆಯಾದವರು
ಜೀವನಕೆ ಕತ್ತಲಾದವರು

ವಾಸ್ತವ ಲೋಕದಲಿ
ಕರೆಯದೆ ಬರುವ
ಅತಿಥಿತಿಗಳಂತೆ

ಬಂದು ಅಚ್ಚರಿ ಮೂಡಿಸಿ
ಬೆವರಿಳಿಸುವಾಗ
ಕನಸೂ ಒಮೊಮ್ಮೇ
ಭಗ್ನವಾಗುವುದು
ಕೈಜಾರಿ ಬಿದ್ದ ಕನ್ನಡಿಯಂತೆ.

ಅಶ್ಫಾಕ್ ಪೀರಜಾದೆ

 

 

 

 


ಮನದ ಕಿಚ್ಚಿಗೆ?

ಬದುಕೆಲ್ಲ ತೇಪೆ ಹಚ್ಚುವುದರಲ್ಲಿ ಲೀನ
ಹೆಚ್ಚು-ಕಡಿಮೆ ತಾರತಮ್ಯ
ದೂಷಣೆ, ಆರೋಪ, ಅಸಹನೆ
ಎಂಥ ವಿಪರ್ಯಾಸ ಇದಕಿಲ್ಲವೇ ಕೊನೆ…..?

ಅಹಂಬೆಟ್ಟ ಏರಿ ನಿಂತು
ಕೈ ಚಾಚಿ ಮುಗಿಲಿಗೆ ಕಣ್ಣರಳಿಸಿ
ನೋಡಲಿಳೆ, ಇರುವುದೆಲ್ಲಿ ಮನವು
ಸತ್ಯಲೋಕ…? ಮಿಥ್ಯಲೋಕ…?
ಸತ್ತ ಮೇಲೆ ಆಹುತಿ ಸತ್ಯ
ದೇಹ ಮಣ್ಣಿಗೆ ಪ್ರಾಣ ಮುಗಿಲಿಗೆ ಸತ್ಯ

ಉಸಿರಿರುವಷ್ಟು ದಿನ ಮಿಥ್ಯ ಹೀನಾಯ ನಡೆ
ನಿಂತ ಮೇಲೆ ವಿನಾಯಿತಿ
ಗೇಣು ಹೊಟ್ಟೆಗಾಗಿ ಕಚ್ಚಾಟ, ಕಿತ್ತಾಟ
ತುಂಬಿದ ಮರುಕ್ಷಣ ಉದರ ಭರ್ತಿ
ಮನದ ಕಿಚ್ಚು……? ಅಪೂರ್ಣ
ಶುರು ಮತ್ತೆ ವ್ಯರ್ಥ ಡೊಂಬರಾಟ

ಇರಲು ಬಲ ಎಲ್ಲವೂ ನನ್ನದೆ
ನನಗಾಗಿಯೇ ಸರ್ವ ಜಗದ ಫಲ
ಒಳಿತು ಸ್ವಂತಕ್ಕೆ ಸೀಮಿತ, ಮಿಕ್ಕವರಿಗೆ ಬರ
ಲೆಕ್ಕಕ್ಕಿಲ್ಲ, ನರಿ ಬುದ್ಧಿ ಮನದಿ ಆರದೀ ಕಿಚ್ಚು

ಇರುವುದೊಂದು ರಸನ, ನುಡಿಯಲಿ
ಮಾನ, ಗುಣದ ತೀರ್ಮಾನ
ಸಿಟ್ಟು, ರೋಷದಿ ಸಾಧಿಸಿ ದ್ವೇಷ
ಪಡೆದುದೇನು…? ಕ್ಷಣಿಕ ಸುಖ

ಪ್ರೀತಿ, ಸ್ನೇಹ, ತ್ಯಾಗ, ಕರುಣೆ
ಶಾಶ್ವತ ಹಿತ, ಅಂತ್ಯದಾಟ
ನನ್ನದು ಹೋಗಿ ನಮ್ಮದಾಗಬೇಕು
ಮನದ ಸೌಂದರ್ಯ ಸತ್ಯ, ಉಳಿದುದೆಲ್ಲ ಮಿಥ್ಯ
ಇಂದು ಎಂದು ನಿತ್ಯ, ಪೂರ್ಣ
ಮನದ ಕಿಚ್ಚು ಸ್ವಚ್ಛ, ಇದು ನನ್ನ ಇಚ್ಛ…
-ವರದೇಂದ್ರ.ಕೆ


 

 

 


ಮಳೆಯ ಹಾಡುಗಳು
೧. ನೆನಪು
ಧಾರೆಯಾಗಿ ಮಳೆ ಬಿದ್ದಾಗ
ಒದ್ದೆಯಲಿ ದೇಹ ಚಳಿಯಾದಾಗ
ಮೂಗಿನಿಂದ ನೀರು ಇಳಿದಾಗ
ನೆನಪು ಬಂತು
ಕೊಡೆಯದಲ್ಲ,
ಬಿಸಿ ಕಾಫಿಯದಲ್ಲ,
ಪ್ರೇಯಸಿಯ ಅಪ್ಪುಗೆಯಲ್ಲ,
’ಬೇಗ ತಲೆ ಒರೆಸಿ
ಬಟ್ಟೆ ಬದಲಾಯಿಸು, ಜ್ವರ ಬಂದೀತು’
ಎಂದ ಅಮ್ಮನದು.

೨.ಕಣ್ಣೀರು
ನೀರಿನ ಮಳೆ
ಯಾರದ್ದು?
ಗರ್ಭ ಧರಿಸಿದ ಮೋಡದೊಳಗೆ
ಬದುಕಿ
ಮಲಗಲು ಮನೆ ಇಲ್ಲದೆ
ಅಲೆಯುವ
ಸತ್ತವರ ಕಣ್ಣೀರದ್ದು?

೩.ಮಳೆಯಿಂದ

ಮಣ್ಣು ಅಮ್ರತ
ಕುಡಿಯುತ್ತೆ,
ಮಳೆಯ ಕಣ್ಣೀರಿಂದ
ಹೊಲದ ಬಾಯಾರಿಕೆ
ನೀಗಿಸುತ್ತೆ.
ಮಳೆಯ ದುಃಖದಿಂದ,
ಮನುಷ್ಯನ ಬದುಕು
ಬೆಳೆಯುತ್ತೆ.
ಮಳೆಯ ಎಂಜಲಿಂದ,
ಪ್ರಕ್ರತಿಯ ಎದೆ
ಬಡಿಯುತ್ತೆ.

* ಉರ್ಬನ್ ಡಿಸೋಜ.

 

 

 

 

 


ಕಳೆದು ಹೋದ ಸದ್ದು…

ನಿನ್ನ ಕಮ್ಮನೆಯ ಮಾತುಗಳಲ್ಲಿ
ನನ್ನ ಎದೆಬಡಿತದ ಸದ್ದು..
ಗಗನಕೆ ಹಾರಿದ ಹಕ್ಕಿಗಳ
ರೆಕ್ಕೆಗಳಿಗೆ ಪಕ್ಕ ಬಲಿತ ಸಾಕ್ಷಿ…

ಬದುಕೆಂದರೆ ಮೌನ
ಆಳುವದಲ್ಲ…
ಕೊನೆಗೆ ಗೌತಮ ಬೋಧಿವೃಕ್ಷಕ್ಕೆ
ಮೌನ ಕೊಟ್ಟು ತಂದಿದ್ದು
ಎದೆ ತಣಿವ ಮಾತುಗಳನ್ನೇ…

ಇಲ್ಲಿ ಸಂತೆಯಲಿ ಈಗ
ಮಾತುಗಳದ್ದೇ ಸದ್ದು…
ಈ ಸದ್ದುಗಳಿಗೆ ಮೌನಗಳಿಲ್ಲ
ಗೋರಿಗೆ ಮಾರಿಕೊಂಡ ಮೌನ
ಭಯ ತಂದಿದೆ ಎಲ್ಲರಿಗೆ…

ಒಂಟಿತನಕೆ ಮುತ್ತುವ ಎಲ್ಲೋ
ಕರಗಿದ ಸದ್ದು ಕಣ್ಣಿಗೆ ಕಾಣುತ್ತಿದೆ
ಅದಕ್ಕೆ ಮಿಡಿತ ತುಂಬಲಿ ಹೇಗೆ…?!
-ಬೀ


ಬದುಕಿನ ಬಂಡಿ
ಬದುಕಿನ ಬಂಡಿ ಮುರಿಯುತ್ತಿದೆ
ಇನ್ನು ಕೈ ಹಿಡಿದು ಎತ್ತವರಿಲ್ಲ
ಹೇ ಜಗದಾತಾ, ವಿಶ್ವದಾತಾ
ದಾರಿ ಕಾಣದೆ ತೊಳಲುತಿದೆ ಮನ
ನೊಂದು ಬೆಂದು ದೂಡುತಿದೆ ಹಣೆಬರವ
ಬಂಡಿ ಮುರಿಯುತಿದೆ.

ನೋವ ನುಂಗಿ, ನಗುತ ನಡೆದು
ಕ್ರಾಂತಿ ಅಳಿಸಿ, ಶಾಂತಿ ಉಳಿಸಿ,
ಸ್ನೇಹ ಬೆಳಸಿ, ಪ್ರೇಮ ಹರಿಸಿ
ಪ್ರೀತಿ ವಾತ್ಸಲ್ಯ, ಕರುಣೆಗೆ ಅರ್ಥ
ಕಲ್ಪಿಸಿದ ಮೂರ್ತಿಯ ಜೀವಕೆ ಆಸರೆ ಇನ್ನೆಲ್ಲಿ ದೇವಾ
ಬಂಡಿ ಮುರಿಯುತಿದೆ..

ಭಾವನೆಗಳಲಿ ಮಿಂದು
ದಿನದಿನವೂ ನೋವಲಿ ಬೆಂದ
ಬಂಧುವಿಗೆ ಜೊತೆಯಾಗಿ ನೋವು,
ಸರಿಸಿದ ಬಾಳು ಬೆಳಗಿದ
ಜ್ಯೋತಿಗೆ ಭರವಸೆಗಳಿಲ್ಲದೇ ?
ಬಂಡಿ ಮುರಿಯುತಿದೆ..

ಜೀವನ ಎರಡು ಹಳಿಗಳಂತೆ
ತಪ್ಪಿದರೊಂದು ಮುಗಿಯಿತು ಸಂತೆ
ಹಳಿಗಳೆರೆಡು ಅಪರಿಚತರಂತೆ
ಒಂದಿಲ್ಲವಾದರೂ ಪಯಣ ಸಾಗದಂತೆ
ಅಕ್ಕಪಕ್ಕವಿದ್ದರೂ ಬಾಳಿನ ಕೊನೆಗೂ ಸಂಧಿಸುವಂತೆ
ಬಂಡಿ ಮುರಿಯುತಿದೆ

ದೃಷ್ಟಿ ಕೊನೆಯವರಿಗೂ ಹರಿಸಿದರು
ಕಾಣದು ಅವುಗಳ ಸ್ಪಂದನ
ಅವುಗಳಿಂದಲೇ ಬಾಳ ಬಂಧನ
ಸಾಗುತಿದೆ ಜೀವನ ಚಿರಂತನ…

-ಕವಿತಾ ಸಾರಂಗಮಠ, ರಾಣೆಬೆನ್ನೂರ

 

 

 

 


ಹೃದಯದ ಪಿಸು ಮಾತು…!!

ಅದೇಷ್ಟೊ ಚಂದ….ಅದೇಷ್ಟೊ ಅಂದ
ಮಳೆಯೊಳು ತೊಳೆದು ನಿಂತ್ತಾಗ…
ನಿನ್ನಯ ಮುಗುಳ್ನಗೆ…ಸುಂಟರಗಾಳಿ,
ನೀರಿನೊಳ ಸುಳಿಯಂತೆ, ಕೈ ಬಿಸಿ
ಆಹ್ವಾನವಿತ್ತಿದೆ ಕೆನ್ಯೆಯ ಮೇಲಿನ
ಕಚಗೊಳಿ ಮುತ್ತಿಕ್ಕಲು…..||

ಧೋ ಎಂದು ಸುರಿದು ಮೈ ತೊಳೆದು
ನಿನ್ನ ತುಟಿಯ ಮೇಲೆ ಸರಸವಾಡಿ
ಕೆಳ ಜಾರಿ ನಿನ್ನ ಮೈಯೊಳಗೆ ನಡುಕ
ಸೃಷ್ಠಿಸಿದ ಆ ಮಳೆಹನಿಯ ಮೇಲೆ
ನನಗೆ ಸ್ವಲ್ಪ ಜಾಸ್ತಿನೆ ಮುನಿಸೂಂಟು||

ಇದೀಗ ತಾನೆ ಟೀಸಿಲೊಡಿದ ಸಸಿಯಂತೆ
ಕಂಗೊಳಿಸುತ್ತಿರುವ ನಿನ್ನಯ ಸೌಂದರ್ಯ
ಸಿರಿ…ಹಚ್ಚಹಸರಿನ ಎಲೆಯ ಮೇಲೆ
ಕುಣಿದಾಡುತ್ತಿರುವ ಮಳೆ ಹನಿಯ
ಸೌಂದರ್ಯ ಲೀಲೆ….ನಿನ್ನಯ ದೇಹದ ಮೇಲೆ
ಹರಿದಾಡುತ್ತಿರುವ ಮಿಂಚಿನ ಬೆಳ್ಳಿಯ ಹನಿಯಂತೆ||

ವರಣನ ಆರ್ಭಟವ… ಸ್ಥಿರವಾಗಿ
ನಿನ್ನಯ ಕಾಲ್ಗಜ್ಜೆಯ ಸದ್ದಿನಲಿ
ಮಳೆಹನಿಗಳು ಸರಿಗಮಪದನಿ
ನಾದ ಸ್ವರಗಳ ಸದ್ದು ಮರ್ದನಿಸುತ್ತಿದೆ
ನಿನ್ನಯ ಅಪ್ಪುಗೆಯ ಪುಳಕಗಳು
ನೆತ್ತಿಯವರೆಗೆ ಹರಿದು ಈ ತಣ್ಣನೆಯ
ತಂಗಾಳಿಯಲಿ ನಿನ್ನಯ ಬಿಸಿ ಅಪ್ಪುಗೆ
ಬೇಕೆಂದು ಈ ಹೃದಯದ ಪಿಸು ಮಾತು||

*ಯಲ್ಲಪ್ಪ ಎಮ್ ಮರ್ಚೇಡ್*

 

 

 

 

 


 

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಪಂಜು ಕಾವ್ಯಧಾರೆ

  1. ಪಂಜು ಪತ್ರಿಕಾ ಬಳಗದವರಿಗೆ ನಮಸ್ಕಾರಗಳು.
    ಮೊದಲ ಬಾರಿಗೆ ಕಳಿಸಿದ ನನ್ನ ಕವಿತೆಯನ್ನ ತಮ್ಮ ಪತ್ರಕೆಯಲ್ಲಿ
    ಪ್ರಕಟಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು.ನನಗೆ ಮತ್ತಷ್ಟು ಸಾಹಿತ್ಯ
    ರಚನೆಯಲ್ಲಿ ಪುಷ್ಟಿ ನೀಡಿದಂತಾಯಿತು.ನಿರಂತರವಾಗಿ ಪತ್ರಿಕೆಯ
    ಸಂಪರ್ಕದಲ್ಲಿರ ಬಯಸುತ್ತೇನೆ.ತಮ್ಮ ಪತ್ರಿಕೆಯ ಪರಿಚಯವನ್ನು ಕಲಾವಿದ ನಾಮದೇವ ಕಾಗದಗಾರ ಅವರು ತಿಳಿಸಿಕೊಟ್ಟರು. ಕವಿತಾ ಸಾರಂಗಮಠ.ರಾಣೇಬೆನ್ನೂರು..

    1. ಪಂಜು ಪತ್ರಿಕೆ ಉದಯೋನ್ಮುಖರ ವೇದಿಕೆ. ನಾಡಿನ ಯುವ ಸಾಹಿತಿ, ಕಲಾವಿದರಿಗೆ ಉತ್ತಮ ಅವಕಾಶಕಾಶಗಳನ್ನು ನೀಡಿ ಸಾಹಿತ್ಯವಲಯದಲ್ಲಿ ಗುರುತಿಸುವಂತೆ ಮಾಡುವ ಶಕ್ತಿ ಪಂಜು ವಿನಿಂದ ಮಾತ್ರ ಸಾಧ್ಯ.
      ಮೂರ್ನಾಲ್ಕು ಸಂಕಲಗಳಾಗುವಷ್ಟು ಕವಿತೆಗಳನ್ನು ಬರೆದಿಟ್ಟುಕೊಂಡು ಎಲೆಮರೆಯಲ್ಲಿ ಇದ್ದ ಕವಿತಾ ಸಾರಂಗಮಠ ಎಂಬ ಅತ್ಯದ್ಭುತ ಕವಯತ್ರಿಯ ಅಕ್ಷರಗಳಿಗೆ ಇಲ್ಲಿ ಭದ್ರಬುನಾದಿ ಕೊಟ್ಟಿದೆ.ಇಂತಹ ಹತ್ತುಹಲವಾರು ಯುವ ಪ್ರತಿಭೆಗಳು ಪಂಜುವಿನ ಮೂಲಕ ಸಾಹಿತ್ಯದ ಮುಖ್ಯವಾಹಿನಿಗೆ ಬರಲಿ ಎಂದು ಆಶಿಸುವೆ.
      -ನಾಮದೇವ ಕಾಗದಗಾರ.

  2. Online ಪತ್ರಿಕೆ PANJU ಗೆ ಹ್ಯಾಟ್ಸಾಫ್..
    ಯುವ ಕವಿಗಳಿಗೆ ಒಂದು ಉತ್ತಮ ಪತ್ರಿಕೆಯಾಗಿದೆ.
    ಪಂಜುಕಾವ್ಯದಾರೆಯಲ್ಲಿ ಕವಿತಾ ಸಾರಂಗಮಠ ರವರ “ಬದುಕಿನ ಬಂಡಿ” ಕವಿತೆ ಉತ್ತಮವಾಗಿದೆ.
    ಬದುಕಿನ ಏರಿಳಿತ,ಅನುಭವವನ್ನು ಅಕ್ಷರಳ ೂಮೂಲಕ ಚೆನ್ನಾಗಿ ವ್ಯಕ್ತ ಪಡಿಸಿರುತ್ತಾರೆ.
    ಅವರಿಂದ ಇನ್ನು ಹೆಚ್ಚಿನ ಕವಿತೆಗಳು ಬರಲಿ.

    ಜೊತೆಗೆ ಉರ್ಬನ್ ಡಿಸೋಜಾರವರ ಮಳೆ ಯ ಹಾಡುಗಳಳನ್ನ ಚೆನ್ನಾಗಿ ಪ್ರಸ್ತುತಪಡಿಸಿದ್ದಾರೆ. ವರದೇಂದ್ರ.ಕೆ ರವರ “ಮನದ ಕಿಚ್ಚಿಗೆ” ಕವಿತೆ ಉತ್ತಮವಾದದ್ದು. ಒಟ್ಟಿನಲ್ಲಿ ಪ್ರತಿವಾರ ಪಂಜುವಿನಲ್ಲಿ ಹೊಸದನ್ನು ತೋರಿಸುತ್ತಾ ಹೊಸಪ್ರತಿಭೆಗಳಿಗೆ ಅವಕಾಶ ನೀಡುತ್ತಿದೆ
    -ಜಗದೀಶ ಮರದ, ಚಿತ್ರದುರ್ಗ

Leave a Reply

Your email address will not be published. Required fields are marked *