ಪಂಜು ಕಾವ್ಯಧಾರೆ

ಸಹಜ-ಸುಧೆ

ಸಾಗರದಾಚೆಗೆ ಏನೆಂದು ತೀರಕೇ ಅರಿವಿಲ್ಲ
ಅಂಚಿನಾ ಚಿಂತೆಯ ಮಂಥನ ಬೇಕೇ?
ಸಾಗರದಲೆಯಿರಲು ಒಂದೊಂದೂ ಅನನ್ಯ
ಸೆರೆಯಾಗಲಿ ಕಣ್ಮನ ಅದಕೇ!

ಅತಿ ಹೆಚ್ಚು! ಅತಿ ದೊಡ್ಡ! ಅತಿ ಜಾಣ! ಅತಿ ಭಾರ!
ಅತಿ ಅವನತಿ ಅತೀತಗಳ ಗತಿಗಿದೆ ಕರ್ಮ
ಅವಲೋಕನಗಳ ಕೊನೆ ನಿಲ್ದಾಣವಿಗೋ ಮರ್ಮ|
ಜೀವ-ಜೀವವೂ ಆಗಿರೆ ಜೀವಾಳದನ್ವಯ
ವ್ಯಾಖ್ಯಾನ ಚಿತ್ರಿಸುತಿದೆ ಅನುಭವದ ಅವ್ಯಯ||

ಸಾಧ್ಯತೆಯ ಸಲೀಸಿಗೆ ಸೋತರದು ಅಫಲ
ಸಾಧಕದ ಸ್ಥಾಯಿಯ ಮೆಟ್ಟರೊಲೀತು ಸಫಲ|
ಸಾಧು ತಾನೆಂದು ಹೊಳೆಯುತಿರೆ ಸಾರ್ಥಕತೆ
ಸದ್ದು-ಸುದ್ದಿಯ ಹಂಗೇ ಸಾಧನೆಯನಳೆವ ಸಾಧನಕೆ?

– ಶಚಿ ಪಿ.

 

 

 

 


ಕೇದಿಗೆ ಕಂಪು ಜಾರುವ ಮುನ್ನ…

ಹರಿಯುವ ಹಳ್ಳದಲಿ ಸಾಗತಿದ್ದೆ
ಜುಳುಜುಳು ನಾದದಲಿ ಮೈಮರೆತಿದ್ದೆ
ಅಜುಬಾಜು ಕೇದಿಗೆಕಂಪಿನ ಹೊಡೆ
ಸಂಜೆಯಹಾಡಿಗೆ ತಂದ ಚಂದ್ರಕೊಡೆ

ಮಬ್ಬುಗತ್ತಲು ಮನದ ತುಂಬ ನಿನ್ನ ಬಿಂಬ
ಬಾನದಾರಿಯಲಿ ಆಗಸದಲ್ಲೆಲ್ಲ ತಾರೆಗಳಂದ
ನಸುನಾಚುತ ಮೋಡಗಳ ಮರೆಯಿಂದ
ತುಸುವೆ ಇಣುಕುತಿಹ ನಿನ್ನಂತೆಯೆ ಚಂದ್ರ

ಮನವಾಯ್ತು ಕೇದಿಗೆಯ ವನ
ನೀರಹರಿವಾಯ್ತು ರಭಸದಿ ಹರುಷ
ಒಲವಧಾರೆ ಸೂರೆಯಾಯ್ತು ಕ್ಷಣಕ್ಷಣ
ಬೆಳದಿಂಗಳ ಮೊಗ ನೆನೆದು ಒಡಲು ಕಡಲಾತು

ನಡೆವದಾರಿ ಮರೆತೆ ಮಧುರ ನೆನಪಲಿ
ಆಗಾಗ ಇಳಿದು ನನ್ನೊಳಗೆ ಹಳ್ಳವಾಗತಿ
ಹೃದಯದರಮನೆ ನಡುಗಿಸಿ ನವಿಲಾಗತಿ
ನೆನಪ ಬುತ್ತಿಗೆ ಇಂಬುನೀಡಿ ರಂಗೋಲಿಯಾಗತಿ

ಮುದವ ನೀಡಿ ಹದವಾಗಿ ಬಾ ಸಖಿ..
ಎಲ್ಲೆಯಿಲ್ಲದ ಈ ಪ್ರೀತಿಗೆ ಸಂಪ್ರೀತಿ ನೀಡು ಬಾ
ತಿಂಗಳ ಬೆಳಕು ಕಂಗಳಲಿ ಆರುವ ಮುನ್ನ..
ಕೇದಿಗೆ ಕಂಪು ಜಾರುವ ಮುನ್ನ
ಹಳ್ಳದನೀರು ದಾರಿ ಬದಲಿಸೋ ಮುನ್ನ…

ಮುಂಗುರುಳ ಮುನ್ನಿಯೆ ಮನ್ನಿಸು…
ಚಂದ್ರನರಮನೆಯಿಂದ ಜಾರಿಬಿಡು..
ಬಿಟ್ಟಕಂಗಳಲಿ ನೆಟ್ಟನೋಟದಲಿ ಕಾಯುತಿಹೆ…
ಚಾಂದನಿಯಿಲ್ಲದೆ ಈ ಚಂದ್ರ ಇರಲಾರ ಕಣಿ…ಮುತ್ತಿನ ರಾಣಿ

ಜಯಶ್ರೀ ಭ.ಭಂಡಾರಿ.

 

 

 

 


ಗಜಲ್

ಮನದ ಮಾತುಗಳು ಹೇಗೆ ಹೇಳಲಿ ನಿನ್ನ ಮುಂದೆ
ಕೇಳಲು ಇಚ್ಛಿಸಿದರೆ ಹೇಗೆ ಬಿತ್ತರಿಸಲಿ ನಿನ್ನ ಮುಂದೆ,

ಬಿಸ್ತಾರದ ಮೇಲೆಯೂ ನೂರಾರು ನೀರೀಕ್ಷೆಗಳು
ಬೀಳುವ ಕನಸುಗಳು ಹೇಗೆ ನೆನಪಿಸಲಿ ನಿನ್ನ ಮುಂದೆ,

ಬದುಕಿನ ಸೋಗಿಗೆ ಸವಲತ್ತುಗಳು ಮೂಡಿವೆ
ಸವಿ ಮುತ್ತುಗಳು ಕೆನ್ನೆಗೆ ಹೇಗೆ ಕೊಡಲಿ ನಿನ್ನ ಮುಂದೆ,

ಬೆನ್ನು ಬಿಡದೆ ಸಲ್ಲಾಪಗಳು ಸಲಿಗೆಯಾಗಿವೆ
ನವಿರಾದ ಒಲುಮೆ ಹೇಗೆ ತಿಳಿಸಲಿ ನಿನ್ನ ಮುಂದೆ,

“ಶಂಕರನ” ಮನಸು ಶುದ್ಧವಾಗಬೇಕಾಗಿದೆ
ತನು,ಮನ,ಧನ ಹೇಗೆ ಅರ್ಪಿಸಲಿ ನಿನ್ನ ಮುಂದೆ,

-ಶಿವಶಂಕರ ಕಡದಿನ್ನಿ

 

 

 

 


ಬಾಳ್ ಗೆ ಮೆರುಗು.

ಲೋಕ ನಾಟಕ ರಂಗ
ಎಷ್ಟು ಪಾತ್ರಗಳೋ..
ಅದೆಷ್ಟು ಅಂಕಗಳೋ..
ಒಂದರಂತಿನ್ನೊಂದು ಇರಲೆಂತು ಚೆಂದ?

ತಮವಿದ್ದೆಡೆ ಬೆಳಕ ಹಪಹಪಿಯು..
ಉರಿಉಂಡರೇ.. ಮಂಜ ಕನವರಿಕೆ,
ಅಧಮರಿರಬೇಕು, ಕತ್ತಲಿದ್ದರಲ್ಲವೇ ಚಂದ್ರಗೊಳಪು..
ಬೆಳಗ ನೆನಪು.

ಎಲ್ಲರೂ ಧರ್ಮರಾದರೆಂತು ಚೆನ್ನ?
ಪಾಂಡವರು ಬೇಕು,
ಕೌರವರೂ ಬೇಕು.
ಚಲಿಸಲದು ಘರ್ಷಣೆ ಇರಲೇಬೇಕು.

ನೀತಿಯ ಕಿಡಿಯದುವ ಕಂಡವರು ಬರೆದಿಹರು
ಅರಿತವರು ಬೆಳಗಿಹರು
ಯಾವ್ ಕಾಲವಾದರೇನ್?
ಚಿತೆಯೇರುವಾ ಮುನ್ನ,
ಚಿಂತೆ ಕಳೆದು
ನೀತಿತಳೆದು
ಧರ್ಮಪೊರೆದು, ನಡೆದರಲ್ಲವೇ..
ಬಾಳ್ಗೆ ಮೆರುಗು?
– ಯಶಸ್ವಿನಿ ಪುರಂದರ್.


ಮುಸ್ಸಂಜೆ ಮನುಷ್ಯನ ದಿನಚರಿ

ಮುಸ್ಸಂಜೆ ಮನುಷ್ಯ
ಮುಂಜಾವಿಗೆ ಮಗುವಾಗುವನು
ನಿಸರ್ಗದ ಅಂಗಳದಲಿ
ಚುಮು ಚುಮು ಬೆಳಗು
ಹಕ್ಕಿ-ಪಕ್ಷಿಗಳ ಚಿಲಿಪಿಲಿ ಇಂಚರ
ಮುಂಜಾನೆ ಆಹ್ಲಾದ
ಅರಳು ಹುರಿದಂತೆ ಅರಳುವ ಹೂಗಳು
ಮಂಜು ಮುಸಕಿದ ದಾರಿ
ಸ್ನಾನಕ್ಕಿಳಿದ ಮರಗಿಡಗಳು
ಅಮ್ಮನ ಮಡಿಲು ಬಿಟ್ಟು
ಕಣ್ಣ ಬಿಡುತ್ತಿರುವ ತರುಲತೆಗಳು
ಸುಪ್ರಭಾತ ಹಾಡುವ ಕವಿ ಕೋಗಿಲೆ
ಹರ್ಷದೀ ನೃತಿಸುವ ನವಿಲುಗಳು,
ಹಸಿರ‍್ಹೊದ್ದು ಮಲಗಿದ ಮಧುವಣಗಿತ್ತಿ
ಆಹಾ ! ಈಗಷ್ಟೆ ಹಾಸಿಗೆ ಬಿಟ್ಟೆದ್ದು
ಮೈಮುರಿಯುತ್ತಿರುವ ನಯನ
ಮನೋಹರಿ…
ಸೌಂದರ್ಯ ಸವಿಯುತ
ನವೀರಾದ ಸೂರ್ಯ
ಕಿರಣಗಳನ್ನು ಚುಂಬಿಸುತ್ತಾ
ತಂಗಾಳಿಯ ಹಿತಾನುಭವಿಸುತ್ತ
ನಿಧಾನವಾಗಿ ದೇಹಭಾರ ಕಳಚುತ್ತ ಕಳಚ್ಚುತ್ತ
ಮನಸ್ಸು ಮಲ್ಲಿಗೆಯಾಗಿಸಿ ಮನೆಗೆ ಮರಳಿ
‘ವಾಕಿಂಗ್ ಸ್ಟಿಕ್’ ಮನೆ ಮೂಲೆಗೆಸೆದು
ಟಿವಿ ಸುದ್ದಿಗೆ, ಜಗದ ಗದ್ದಲಕೆ
ಕಿರಿಕಿರಿಯ ನುಡಿಗಳಿಗೆ ಕಿವಿಯಾಗಿ
ದಿನಚರಿ ಮುಗಿಸಿ ರಾತ್ರಿ
ವಿಷಾದದ ಚಾದರ ಹೊದ್ದು
ಅನಿಶ್ಚಿತತೆಯ ಚಿಂತೆಯಲಿ ವಿಶ್ರಮಿಸಿ
ಮತ್ತೇ ಮುಂಜಾವಿಗೆ
ನಿಸರ್ಗದ ಮಗುವಾಗುವನು
ನಡಿತಾ ನಡಿತಾ ಮತ್ತೆ ಹೊಸ ಮನುಷ್ಯನಾಗುವನು.

– ಅಶ್ಫಾಕ್ ಪೀರಜಾದೆ.

 

 

 

 


ಅಪ್ಪ ಕಟ್ಟಿದ ದೇಗುಲ

ಕಾರ್ಗತ್ತಲೆ ತುಂಬಿದ ಹಳ್ಳಿಯಲಿ
ಬರೀ ದೆವ್ವಗಳೇ ತುಂಬಿದಾವೆ
ಬೆಳಕು ಹೆಜ್ಜೆ ಇಡದ ಈ ಊರಿನಲಿ
ಅಪ್ಪ ಒಂದು ದೇಗುಲ ಕಟ್ಟಿದ್ದಾರೆ
ಕತ್ತಲು ಬೆಳಕಿನ ನಡುವೆ
ವ್ಯತ್ಯಾಸವೇ ಗೊತ್ತಿಲ್ಲದಂತೆ!

ಜಗದ ದಂದುಗಗಳ ವಿಶ್ಲೇಷಕ ಭಕ್ತರು
ಅಪಾರ ಶ್ರದ್ಧೆ ಭಕ್ತಿಯಿಂದ ಬರುತ್ತಾರೆ
ಹೊಟ್ಟೆ ತುಂಬ ತೀರ್ಥ ಕುಡಿಯುತ್ತಾರೆ
ಅಲ್ಪ ಸ್ವಲ್ಪ ಪ್ರಸಾದವೂ ತಿನ್ನುತ್ತಾರೆ
ಜ್ಞಾನೋದಯವಾಗಿ ಜೀವನಾದರ್ಶಗಳನ್ನು
ಭೋದಿಸುತ್ತಾ ಬೀದಿ ಬೀದಿ ಅಲೆಯುತ್ತಾರೆ
ಶಬ್ದಗಳ ಕಲಬೆರಕೆ ಮಾಡಿಯೇ ಪುಂಗಿಊದುವರು
ಸ್ವಚ್ಛ ಕನ್ನಡದಲಿ ಅಚ್ಚ ಆಂಗ್ಲ ಪದಗಳು ಸೇರಿಸಿ!

ಉಪದೇಶಗಳನ್ನು ಕೇಳಿಸಿಕೊಂಡ
ಕೆಲವರ ಮುಖಗಳಲಿ ನಗೆ ತೇಲುತ್ತದೆ
ಇನ್ನೂ ಕೆಲವರ ಹೊಟ್ಟೆ ತುಂಬ ಹುಣ್ಣುಗಳು
ಮಿಕ್ಕಿದವರಿಗೆ ಬೇಜಾನ್ ಕಿರಿಕಿರಿಯೂ
ಆದರೂ ಸೂರ್ಯೋದಯದ ಹಾಗೆ
ಆ ಸೂರ್ಯಾಸ್ತವೂ ತಪ್ಪಿಸಲಾಗುತ್ತಿಲ್ಲವಲ್ಲ!

ಬಿತ್ತರ ಕಡಲಿನಲಿ ಒಂಟಿ ಹಡಗು ತೇಲುತ್ತಾ
ಬಂದು ದಡ ಸೇರಿದ ಹಾಗೆ
ಕೆಲವರು ಬೆಚ್ಚನೆಯ ಗೂಡು ಸೇರಿದರೆ
ಕಂಠಪೂರ್ತಿ ಕುಡಿದಂತೆ ಸೂರ್ಯ
ಕೆಂಪು ಬಣ್ಣಕ್ಕೆ ತಿರುಗಿ ಪಡುವಣದಲಿ ಬೀಳುವ ಹಾಗೆ
ಹಲವರು ಚರಂಡಿಯೊಳಗೆ ಬಿದ್ದು
ನೆಮ್ಮದಿಯಿಂದ ನಿದಿರೆಗೆ ಜಾರುತ್ತಾರೆ
ಆಧುನಿಕತೆಯ ಭರಾಟೆಯಲಿ ಸಿಲುಕಿರುವ
ಯಂತ್ರ ಮಾನವರ ನಡುವೆ ತಂಪು ಜೀವಿಗಳು!

ಐದು ಬೆರಳುಗಳಿಂದ ಹೂವಿಗೆ ಹೊಡೆದ ಹಾಗೆ
ಮುಳ್ಳಿಗೆ ಹೊಡೆಯಲು ಯಾವ ಬೆರಳು ಮುಂದಾಗುವುದಿಲ್ಲ
ಭಕ್ತರಿಗೆ ತೀರ್ಥ ಹಂಚುವವರೆಲ್ಲ ಪೂಜಾರಿಗಳಲ್ಲ
ಅಪ್ಪ ಕಟ್ಟಿದ ದೇಗುಲಕ್ಕೆ ಬಾಗಿಲು ಹಾಕಿಸಿದ
ದೆವ್ವಗಳ ಕಣ್ಣ ಮುಂದೆಯೇ
ಅಸಂಖ್ಯ ಭವ್ಯ ದೇವಸ್ತಾನಗಳ ಪ್ರತಿಷ್ಟಾಪನೆ
ಆದರೂ ಹಳ್ಳಿಗೆ ರೋಗ ಬರುವುದಿಲ್ಲ
ದೆವ್ವಗಳಿಗೆ ಕಣ್ಣು ಕಾಣುವುದೂ ಇಲ್ಲ
-ರಾಜ ಹಂಸ

 

 

 

 


ದಾರಿ ದೀಪ

ಬೆಳಕ ಕಂಡು
ಬೆಂಕಿಯೆಂದರೆ
ಕತ್ತಲೇನು ಮಾಡೀತು
ಗುರಿ ನೋಡಿ
ಗಿರಿಯೆಂದು ಕುಳಿತರೆ
ಛಲವೇನು ಗೆದ್ದೀತು

ಯಾವ ದಾರಿಗೂ
ಕೊನೆಯಿಲ್ಲ, ಬದಲು
ತಿರುವು, ತಡೆಗಳುಂಟು
ಸ್ಥಾನ ಮಾನಗಳೂ ಉಂಟು
ಹೆಜ್ಜೆ ಹಾಕು, ದೇಹ
ಅಭಿಮಾನ ಸಾಕು

ಸಿಗುವುದು ಸೂರು
ಬಿಡದಿರು ಬೇರು
ತಡೆಯರು ಯಾರು
ದುಡಿತ ಒಂದು ಕಾಯಕ
ಮುಗಿಯಲಿಲ್ಲ ಬದುಕು
ಬಯಕೆ ಕೊನೆತನಕ
ಸಿಗುವುದಿಲ್ಲ ನಾಕ

ಬಾಳು, ಕಾಳ ನೀಡಿ
ಖಳೆ ಮಾರುವುದು
ಬೇಳೆ ಬೆಂದಂತಾಗುವುದು
ಗಿರಿ ಚಿಕ್ಕ ಮೇರೆ ಆಗುವುದು

ಸತ್ಯದಲ್ಲಿ ಮಿಂದು
ನಿತ್ಯ ಮನದಲ್ಲಿ ನೆಂದು
ಹೋಗು ನೀ ಮುಂದ
ಬಿಡದಿರು ಹಿಂದಿನವರ
ಹಿಂಡು ಎಂದೆಂದು

ಇದು ನಮ್ಮ ದಾರಿ ದೀಪ
ಕಳೆಯುವುದು ಆಲಸ್ಯದ ಶಾಪ
ಕೋಪ, ಪಾಪ ಎಲ್ಲವೂ ತಾಪ
ತೊರೆದು ನಿಂತವನೆ ಭೂಪ.
-ವರದೇಂದ್ರ ಕೆ.


ದನಗಾಹಿ

ಊರು ಕೇರಿಗಳ ಹಿಂಬಿಟ್ಟು
ಬೋಳುದಾರಿಯಲಿ ಪಯಣ
ಉದರತುಂಬುವ ಹಸಿರ ಹುಡುಕಾಟ
ಹಾದಿ ಹೋದತ್ತ ದನಗಳ ಹಿಂಡು

ಕೊರಳ ಕಣ್ಣಿಯ ಬಿಚ್ಚಿ
ಬೆನ್ದಡವಿ ಕಳುಹಿಮಂದೆಯಲ್ಲೊಂದಾಗಿ
ಹೋ ಎಂದು ಕೂಗಿ ತಪ್ಪಿ ನಡೆಯದಂತೆ
ದಿಕ್ಕು ತೋರುತ್ತಿದ್ದ ದನಗಾಹಿ

ಹಸಿರ ಹುಡುಕಿ ಅಲ್ಲಲ್ಲೆ ದೂಡಿ
ಮನದಣಿಯೆ ಮೇಯಿಸುತ್ತಿದ್ದ
ಸೊಕ್ಕಿ ಕುಸ್ತಿಯಾಡುವ ಹೋರಿಗಳ
ಬೆತ್ತವಾಡಿಸಿ ಸಂತೈಸುವವ ಅವನೊಬ್ಬನೆ

ಜಿಗಿದೋಡಿ ಮೊಲೆಗೆ ಬಾಯಿಟ್ಟ ಕರು
ಪ್ರಸವದಲಿ ಒದ್ದಾಡುವ ಹಸು
ಆರೈಕೆಯಲಿ ಅಮ್ಮನಂತೆಯೆ
ನಿಡಿದುಸಿರ ಭಾಷೆಯೂ ಅವನಿಗರಿವು

ಸಂಜೆಯೊಳಗಡೆ ಹೊರಟು
ಮನೆಸೇರುವ ಗುಂಪು
ರಸ್ತೆಯುದ್ದಕ್ಕೂ ಶಿಸ್ತು ನಡಿಗೆ
ಅವ ಹಿಂದೆ ಹಿಂದೆ

ನಾಲ್ಕು ಕಾಲುಗಳ ಜೊತೆ
ಕೋಲೂರಿ ಮೂರುಕಾಲಿನವ
ನಿತ್ಯ ಸಂಚಾರ ಊರಿಂದ ಕಾಡಿನೆಡೆ
ವಸಂತಗಳ ನಡಿಗೆ

ಸೋತ ಹೆಜ್ಜೆಗಳ ಅವನು
ಕಾಣುತ್ತಿಲ್ಲ ಈಗೀಗ
ಬರುವಾಗಲೇ ಕಿವಿನಿಮಿರಿ ಆಲಿಸುತ್ತಿದ್ದ
ಅವನ ಕೂ ..ಧ್ವನಿ ಕೇಳುತ್ತಲೇ ಇಲ್ಲ

ಮೈಸವರಿ ತಟ್ಟಿ ಹೊರಡಿಸುವ ಕೈ ಕಾಣದು
ಕೋಲ ಸದ್ದಿಗೆ ನಡೆವ ಶಿಸ್ತೂ
ಕಳೆದು ಹೋದ ಕರುಗಳ ಜನ ಹುಡುಕುತ್ತಿದ್ದಾರೆ
ಕಾಯ್ದು ಅಕ್ಕರಿಸಿದವನ ದನಗಳೂ…

ಗಾಯತ್ರೀ ರಾಘವೇಂದ್ರ, ಶಿರಸಿ

 

 

 

 


ನಿನ್ನುಡಿಯ ಮುಕ್ಕಿವೆ
ಹೆಜ್ಜೆ ಮೂಡಿದ ದೂಳಿನ ಬೀದಿಗಳು ನಿನ್ನುಡಿಯ ಮುಕ್ಕಿವೆ
ಕರುಳು ಕುಕ್ಕುವ ಅಂಗಳಗಳು ನಿನ್ನುಡಿಯ ಮುಕ್ಕಿವೆ

ಬರಿ ಮಾತಿನ ಮೋಡಿಯ ಬಣ್ಣ ಬದಲಿಸುವ ಬಜಾರಿನಲಿ
ಮನ ಕೊರೆಯುವ ಗುಪ್ತ ನೋಟಗಳು ನಿನ್ನುಡಿಯ ಮುಕ್ಕಿವೆ

ಕಾಲುಗೆಜ್ಜೆಗಳು ಮಾತು ಕೇಳದ ಗುಂಗಲಿ ಮುನ್ನೆಡೆವಾಗ
ಪಾದಗಳ ಕೊರೆವ ಮನುಷ್ಯ ಬೂತಗಳು ನಿನ್ನುಡಿಯ ಮುಕ್ಕಿವೆ

ಕೊರಳ ಸುತ್ತಿದ ಮುತ್ತಿನೋಲೆಗಳ ಕುಹಕ ನಗೆಯೊಳಗೆ
ಹ್ರದಯ ಇರಿವ ವಿಷ ಬಟ್ಟಲುಗಳು ನಿನ್ನುಡಿಯ ಮುಕ್ಕಿವೆ

ಜಡೆಗೆ ಮುಡಿವ ಮಲ್ಲಿಗೆ ಘಮ ಕ್ಷಣಮಾತ್ರ ಉಳಿವಾಗ
ಪ್ರೀತಿ ಕೊಲ್ಲುವ ನೆರಳುಗಳು ನಿನ್ನುಡಿಯ ಮುಕ್ಕಿವೆ

ನಿನ್ನೆದೆಯ ಸುತ್ತಿದ ಕಿರಸೂರ ಬರವಸೆಗಳು ಹುಸಿಯಾಗಿರುವಾಗ
ಕನಸಿನ ಬಳ್ಳಿ ಕುಕ್ಕುವ ದಾರಿಗಳು ನಿನ್ನುಡಿಯ ಮುಕ್ಕಿವೆ
-ಕಿರಸೂರ ಗಿರಿಯಪ್ಪ

 

 

 

 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಯಲ್ಲಪ್ಪ ಎಮ್ ಮರ್ಚೇಡ್

ಗಜಲ್ ನಲ್ಲಿ ಶಿವಶಂಕರ್ ಕಡದಿನ್ನಿ ಅವರ ಪೋಟೊ ಬಂದಿಲ್ಲ, ಗಜಲ್ ಬರೆದಿದ್ದು ಶಿವಶಂಕರ್ ಕಡದಿನ್ನಿ ಅವರೆ, ಆದರೆ ಅವರ ಪಕಣ್ಣು ತಪ್ಪಿನಿಂದ ಹಾಗೆಯೇ ಪ್ರೀಂಟ್ ಆಗಿದೆ, ಸಂಪಾದಕರು ಇದನ್ನು ಗಮನಿಸಬೇಕು

1
0
Would love your thoughts, please comment.x
()
x