ಗಝಲ್…
ಹುಡುಕುತ್ತಾ ಹೊರಟ ನನಗೆ ಕಳೆದುಕೊಂಡಷ್ಟು ಸಿಕ್ಕಿತು ಸಖಾ..
ಬಯಸುತ್ತಾ ಹೊರಟ ನನಗೆ ಬಯಸಲಾರದಷ್ಟು ದಕ್ಕಿತು ಸಖಾ…
ನಿನ್ನ ಗುಟ್ಟುಗಳೆಲ್ಲಾ ನನ್ನ ಪಿಸುದ್ವನಿಯಲಿ ರಟ್ಟಾದವು…
ಮೆರೆದು ತುಳುಕಿದ ಒಂದೆರಡು ಹನಿ ಜೀವದ ಕೊನೆ ಹೊಕ್ಕಿತು ಸಖಾ…
ನಿನ್ನ ಬಾಹುವಿನ ಮುದ ಬಂಧಿಸಿದೆ ಬಿಡದೆ ನನ್ನ ತಾರುಣ್ಯ…
ತಾಜಮಹಲಿನ ಗೋರಿ ಇದ ಬಯಸಿ ಬಿಕ್ಕಿತು ಸಖಾ…
ಯಮುನೆಯಲ್ಲಾ ಬಸಿದು ತಂದೆ ಬೊಗಸೆಯಲಿ ನನ್ನ ಕಣ್ಣ ಭಾವಕ್ಕೆ…
ನನ್ನೆದೆಯ ಗಂಧ ನಿನ್ನ ಹುಮ್ಮಸ್ಸಿನ ಹೂಂ ಗುಟ್ಟುವಿಕೆಗೆ ಸೊಕ್ಕಿತು ಸಖಾ…
ಬಡಿದ ಬಾಗಿಲು ತೆರೆಯಲಿಲ್ಲ ಮರಳಿ ಬಂದವು ಶಬ್ದಗಳು..
ನಿನ್ನ ಬಿಸಿಯುಸಿರು ತಾಕಿದ ಕಿವಿಗಳಿಗೆ ಅರ್ಥಗಳ ಗೇಯತೆ ಮಿಕ್ಕಿತು ಸಖಾ….
…..ಬೀ
ಬಸಿರು….
ಆಗಾಗ ನಾನು
ಬಸಿರು ಕಟ್ಟಿಕೊಳ್ಳುತ್ತೇನೆ;
ಈ ನನ್ನ ಪುಟ್ಟ ಒಡಲಲ್ಲಿ
ಬೆಟ್ಟದಂತಹ ಕನಸುಗಳ
ಬೆಚ್ಚನೆ ಕಾಪಿಟ್ಟುಕೊಳ್ಳುತ್ತೇನೆ…
ಬೀಜ ಮೊಳಕೆಯಾಗುತ್ತಾ,
ಸಸಿಯಾಗುತ್ತಾ,
ಹೂ-ಕಾಯಿಯಾಗುತ್ತಾ,
ಇಂಚಿಂಚೇ ಬೆಳೆಯುತ್ತಾ,
ನನ್ನಂತರಂಗವೂ ಹಿಗ್ಗುತ್ತಾ,
ಹೇಳಿಕೊಳ್ಳಲಾಗದ ತುಡಿತ…,
ಒಳಗೊಳಗೇ ಹಿತಕರ ನೋವು…
ಇನ್ನೂ ಹಿಡಿದಿಟ್ಟುಕೊಳ್ಳಲಾಗದೆ
ಒಂದು ಜೀವಂತ ಗಳಿಗೆಯಲಿ
ಹುಳುವು ಚಿಟ್ಟೆಯಾಗಿ
ಬಾನಿಗೆ ಚಿಮ್ಮಿ
ಬಸಿರು ಹಸಿರಾಗುತ್ತದೆ…
ಒಡಲ ಕಾವು ಇಳಿದು
ಮತ್ತೆ ಹೊಸ ಬಸಿರಿಗೆ
ಸಿದ್ಧನಾಗುತ್ತೇನೆ..
ಎದೆಯ ನೋವುಗಳೆಲ್ಲವ
ಬಯಲಿಗೆ ತೂರಿ
ನಾನು ಕನಸುಗಳನ್ನೇ ಬೆಳೆಯುತ್ತೇನೆ
ಅವುಗಳನ್ನೇ ಉಸಿರಾಡುತ್ತೇನೆ…
-ಸಚಿನ್ ಅಂಕೋಲ…
ಅವಳು
ಬಿಕೋ ಎನ್ನುತ್ತದೆ ಮನೆ
ಅವಳಿಲ್ಲದೊಡೆ
ಸ್ಮಶಾನವದು ಬೇರೆಲ್ಲೂ ಇಲ್ಲಾ
ಇಲ್ಲೇ ಎನಿಸುತ್ತದೆ ನರಕ!
ಅವಳು ಮೌನಿಯಾದೊಡೆ
ನಮಗೆ ಬಾಯಿಲ್ಲ
ಅವಳಿಲ್ಲದೆ ಎನೂ ಇಲ್ಲ
ಲಾಲನೆ ಪಾಲನೆ ಪೋಷಣೆ…
ಖುಷಿಯಿದ್ದಾಗ ತಿಳಿಯದು
ಅವಶ್ಯಕತೆ ಅನಿವಾರ್ಯತೆ…
ಅವಳೋಮ್ಮೆ ಮಲಗಲಿ
ಜ್ವರವೆಂದು, ತಲೆನೋವೆಂದು!
ತಿಳಿಯುವುದಾಗ ಅವಳ ಕಾರ್ಯಕ್ಷಮತೆ….
ಮಧುರ ಮಾತುಗಳು
ಮನೆ ಸೇರಿದೊಡನೆ ಊಟೋಪಚಾರ
ಮನೆಯ ಮೂಲೆ ಮೂಲೆ
ಅವಳದ್ದೇ ಕಾರುಬಾರು..
ಗಂಡಸರದ್ದೇನಿದೆ
ಕೆಲವರದ್ದು ಬರೀ ಕಾರು- ಬಾರು ..
ನೋವೆಂದು ಅಳಳು
ಸುಸ್ತೆಂದು ಮಲಗಳು
ಅವಳಿಗಾಗಿ ಎಂದೆಂದೂ..
ಬೇಸರ ಬರುವುದವಳಿಗೆ ಇಂದು
ಮಗ ಸೋತಾಗ..
ಗಂಡ ಸುಸ್ತೆಂದಾಗ…
ಅವಳಿಗಾಗಿ ಎನಿಲ್ಲ
ಪರಿವಾರವೇ ಎಲ್ಲಾ….
ಹೊಸ ರುಚಿ,ಮಡಿಲ ಪ್ರೀತಿ
ಸಂಸಾರ – ಸಾಗರ
ಅವಳಿಗದೋ ಸ್ವರ್ಗ..
ಮನಸ್ಪೂರ್ತಿ ಒಮ್ಮೆಯಾದರು ಪ್ರೀತಿಸಿ
ಅವಳಿಗದೇ ವೈಭೋಗ…
ಬೇರೆ ಯಾರಲ್ಲ ಅವಳು
ಅಮ್ಮ…..
ಪ್ರತಿಯೊಂದು ಮನೆಯ,
ಪ್ರೀತಿಯ ಅಮ್ಮ….
-ಗಾಯತ್ರಿ ಭಟ್
ನೇಪಥ್ಯ
ಹುಳಿ ಮಜ್ಜಿಗೆ ಬೆರೆಸಿದ ಬದನೆ ಗೊಜ್ಜು ,
ನಿಂಬೆ ರಸ ಪಾಕದ ಹಲಸಿನ ಬೀಜದ ಚಟ್ನಿ,
ನೀರು ಸೌತೆಯ ಪಚ್ಚಡಿ,
ಮಾವಿನಕಾಯಿಯ ಪೊಜ್ಜಿ,
ಗಂಜಿಗೆ ನೆಂಚಿಕೊಳ್ಳುವ
ನೀರೂರಿಸುವ ಖಾರ ಖಾದ್ಯಗಳಿಗೆಲ್ಲಾ
ಜೀವ ತುಂಬಿದೊಗ್ಗರಣೆ
ಒಂದು ಹಂತದಲ್ಲಿ…
ಸಂತೆಯಲ್ಲಿ ಬಿಕರಿಗಿಟ್ಟ ಕನಸು!
ನುಣ್ಣಗಿನ ಪುಟ್ಟ ಸಾಸಿವೆಯ ಸಿಡಿತ
ಎಸಳು ಬೆಳ್ಳುಳ್ಳಿಯ ಘಮ ಬೆರೆತ
ದಿಟ, ಸ್ಫುಟ ಪಚ್ಚೆ ಕರಿಬೇವಿನೆಸಳ ಸಂಗಮದೆಣ್ಣೆ
ಹೆಚ್ಚಿಸಿದ ರುಚಿಯ ಭಾರವ ಹೊತ್ತು
ತುರ್ತಿನ ದಾರಿಯಲ್ಲಿ ಹೊರಟವರಿಗೆಲ್ಲಾ
ಗಮ್ಯ ತಿಳಿಯಲೇ ಇಲ್ಲ !
ಊಟವೇ ಬೇಡವೆಂದವರೂ
ಒಗ್ಗರಣೆಯ ಘಮಕ್ಕೆ ದಡಕ್ಕನೇ ಊಟಕ್ಕೆದ್ದು
ಅಪ್ಪಿ ತಪ್ಪಿ ನಡುವಲ್ಲಿ ಸಿಕ್ಕ
ಬೆಳ್ಳುಳ್ಳಿಯನ್ನೋ, ಬೇವಿನೆಸಳನ್ನೋ
ನಿರ್ದಾಕ್ಷಿಣ್ಯವಾಗಿ ಪಕ್ಕಕ್ಕಿಟ್ಟಾಗ
ಸಿಡಿಯುವ ಸಾಸಿವೆಯು ಒಂದು ಕ್ಷಣ
ನಿರುತ್ತರವಾಗಿ ಬಿಡುತ್ತದೆ ಇವರ ಮುಂದೆ!
ಉರಿಗೆ ಸಿಕ್ಕ ನಂತರವೇ ಸಿಡಿಯುವ ಸಾಸಿವೆಗೂ
ಈ ಪರಿಯ ಧ್ಯಾನ ಎಲ್ಲಿಂದ ಬಂತು?
ಅಚ್ಚರಿ ನನಗೆ.
ತಾತ, ಮುತ್ತಾತರಿಂದ ಹಿಡಿದು
ನಮ್ಮ ಪೂರ್ವಿಕರೆಲ್ಲಾ ಮಾಡಿದ ಪೂರ್ವಾಗ್ರಹಪೀಡಿತ
ಜಾಣ್ಮೆಯ ಕೆಲಸ ಇದು!
ಈಗ ಮೊಮ್ಮಗನಾದಿಯಾಗಿ ಬೆಳೆದರು
ರುಚಿ ನೀಡಿ ಅವಿತ ಒಗ್ಗರಣೆ
ಒಂದಿನಿತು ಬೇಸರಿಸಲಿಲ್ಲ
ಬದಲಿಗೆ ತನ್ನ ಬೆಲೆ ನೆಲೆಯ
ತಾನೇ ಭದ್ರಪಡಿಸಿಕೊಂಡಿದೆ…
ಒಗ್ಗರಣೆಗೆ ಕೃತಜ್ಞತೆ ಸೂಚಿಸದೆ
ಕೃತಘ್ನರಾದವರು
ಚೆಟಿಕೆ ಸಾಸಿವೆಯ ಮುಂದೆ
ಇನ್ನು ಕುಬ್ಜರು ಅಷ್ಟೇ…!
-ಸಂಗೀತ ರವಿ ರಾಜ್
ಡೊಂಕು ಮನಸಿನ ನಾಯಕರು
ಡೊಂಕು ಮನಸಿನ ನಾಯಕರೆ
ನೀವೇನುಪಕಾರವ ಮಾಡಿದಿರಿ
ಬರಗಾಲವಿರೆ ಅಲ್ಲಿಗೆ ಹೋಗಿ
ಆಶ್ವಾಸನೆ ನೀಡುವಿರಿ
ಬಡವರ ಶ್ವಾಸ ಕಟ್ಟಿಸಿ ನೀವು
ಹಣವನು ಏಸು ಎಣಿಸುವಿರಿ||
ಡೊಂಕು ಮನಸಿನ ನಾಯಕರೆ
ನೀವೇನುಪಕಾರವ ಮಾಡಿದಿರಿ
ಪರಿಸರ ಅಸಮತೋಲನದಿ
ಅತಿಮಳೆಯಾಗಿರೆ
ಅಂತರಿಕ್ಷದಿಂ ವೀಕ್ಷಿಸುವಿರಿ
ಭೂಮಿಗೆ ಪಾದವ ಸೋಕಿಸದೆ
ವರದಿಯ ನೀವು ನೀಡುವಿರಿ||
ಡೊಂಕು ಮನಸಿನ ನಾಯಕರೆ
ನೀವೇನುಪಕಾರವ ಮಾಡಿದಿರಿ
ಹಣ ಹೆಂಡ ನೀಡುತ ನೀವು
ಮತವನು ಯಾಚನೆ ಮಾಡುವಿರಿ
ಮತದಾರರ ಕಣ್ಣಿಗೆ ಬೆಣ್ಣೆಯ ತೋರುತ
ಮೂಗಿಗೆ ತುಪ್ಪವ ಮೆತ್ತುವಿರಿ||
ಡೊಂಕು ಮನಸಿನ ನಾಯಕರೆ
ನೀವೇನುಪಕಾರವ ಮಾಡಿದಿರಿ
ಹೆಣ್ಣಿನ ಶೋಷಣೆ ನಡೆಯುತಲಿರೆ
ಜಾತಿಯ ಲೆಕ್ಕ ಮಾಡುವಿರಿ
ಹಸು ಕಂದನ ಮೇಲಿನ ಕರುಣೆಯ
ತೊರೆದು ಕ್ರೂರರ ಬೆನ್ನಿಗೆ ನಿಲ್ಲುವಿರಿ||
ಕುಡಿಯಲು ನೀರು ಯಾಚಿಸಲು
ಬೆತ್ತದ ರುಚಿಯ ತೋರಿಸುವಿರಿ
ಬೆಳೆಗೆ ತಕ್ಕ ಬೆಲೆಯನು ಕೋರಲು
ಗುಂಡನು ಎದೆಗೆ ಹೊಡೆಯುವಿರಿ||
ಮತದಾರ ಆಗದೆ ಬದಲು
ನಾಡಿಗೆ ಆಗದು ಎಂದಿಗೆ ಒಳಿತು
ಗೊಡ್ಡು ಆಸೆಗೆ ಬೀಳದೆ ಹಾಕಿರಿ
ಮತವನು ಮನದಿಂ ಬಲಿತು||
ಡೊಂಕು ಮನಸಿನ ನಾಯಕರೆ
ನೀವೇನುಪಕಾರವ ಮಾಡಿದಿರಿ
–ವರದೇಂದ್ರ ಕೆ
ಹನಿಗವನಗಳು
ರಾಯಚೂರು
ನಮ್ಮೂರು – ಬಿಸಿಲೂರು
ಕಲೆಗೆ – ಕೊರತೆಯಿಲ್ಲದೂರು,
ಯಾವ ದಿಕ್ಕಿನಡೆ ಸಾಗಿದರು
ದೊರಕುವರು ಸಾವಿರಾರು ಕಲಾವಿದರು
ಹೆಣ್ಣು
ಜಗಕೆ ಹೆಣ್ಣು, ಮಾದರಿಯ ಕಣ್ಣು
ಅವಳಿಗೆ ಕೈ ಮುಗಿಯೋ ನೀ ಇನ್ನೂ,
ಅವಮಾನಿಸಬೇಡ – ಅವಳನ್ನು
ಎಲ್ಲರ ಗೌರವಿಸುವಳು ಹೆಣ್ಣು
ಅವ್ವ
ಮಂದಿರ – ಗಿಂದಿರ ಯಾಕಣ್ಣ
ಮನೆಯೊಳಗೆ – ಅವ್ವ ಇದ್ದಾಳಣ್ಣ ,
ಅವಳಿಗೆ ಶಿರಬಾಗಿ – ಕರಮುಗಿಯಣ್ಣ
ಅವಳಂತ ಪ್ರತ್ಯಕ್ಷ ದೇವರಿಲ್ಲಣ್ಣ
ಬಯಕೆಗಳು
ನೂರಾರು ಬಯಕೆಗಳು
ಮನುಜನಿಗೆ – ಎಂದೆಂದು,
ಅವುಗಳನು – ಈಡೇರಿಸಬೇಕು
ಮನುಜ – ಒಂದೊಂದು
-ಮಂಜುನಾಥ ಗುತ್ತೇದಾರ
ಸೆರಗು ಬೀಸಿಕೊಂಡು
ಹೊರಟಿದ್ದೆ ನಾನು
ಈ ಸೆರಗು ಯಾರು
ಕೊಟ್ಟಿದ್ದು ನನಗೆ
ಅಮ್ಮನಿಗೆ ಅಜ್ಜಿಗೆ
ಕಣ್ಮುಂದೆ ಎಷ್ಟೊಂದು
ಸುಂದರ ಬನ
ನನ್ನ ಕನಸಿನ ಹಾಗೆ
ನೋಡೇ ಬಿಡೋಣವೆನ್ನತ್ತಲೇ
ಒಳಹೊಕ್ಕೆ
ಬಣ್ಣಬಣ್ಣದ ಹೂವುಗಳು
ಅರೆಬಿರಿದ ಮೊಗ್ಗುಗಳು
ಸೆರಗ ತುಂಬಾ
ಅರಳಿಕೊಂಡವು
ಹೂವುಗಳ ಹೀಚುಗಳ
ಅರೆಬಿರಿದ ಮೊಗ್ಗುಗಳ
ಅವುಚಿಕೊಂಡೇ
ಈಚೆ ಬರಬೇಕು
ಮುಳ್ಳು ಸಿಕ್ಕಿಕೊಂಡಿವೆ ಸೆರಗಿಗೆ
ಎಲ್ಲಿದ್ದವು ಮೊನೆ ಮಡಚಿಕೊಂಡು
ಸೆರಗು ಹರಿಯಬಾರದು
ಗೀರಬಾರದು ಮೊಗ್ಗುಗಳು
ನೋಯಕೂಡದು ಹೂ
ಹೆಣಗುತ್ತೇನೆ ಬಿಡಿಸಿಕೊಳ್ಳಲು
ಯುಗಯುಗವು ಕಳೆದಿದೆ
ಅರೇ ಇಲ್ಲೇ ನಿಂತಿದ್ದಾರೆ
ಅತ್ತೆ ಅಕ್ಕ ಅಮ್ಮ ಅಜ್ಜಿ
ನನ್ನದೇ ಸಾಲಿನಲ್ಲಿ ಮಿಸುಕದೇ
ಯಾಕೆ ನಗುತ್ತಿದ್ದಾರೆ
ನನ್ನ ನೋಡಿ?
-ಪ್ರೇಮಾ ಟಿ ಎಮ್ ಆರ್
ಹೂ ಅರಳಿ
ಕಲ್ಲು ಬಂಡೆಗಳ
ಕಡಿದಾದ ವನದಲ್ಲಿ
ತುಸು ಮಣ್ಣಿನಸಿಯಲ್ಲಿ
ಅರಳಿ ನಗಿಸಿದೆ ಸಸಿಯು
ಚೆಲುವಾದ ಹೂವನ್ನು..||
ಚೆಲುವ ಸವಿಯಲು ಅತ್ತ
ಚಿಟ್ಟೆ ದುಂಬಿಗಳ ಚಿತ್ತ
ಕಷ್ಟಗಳು ಕರಗಿದವು
ಸಸಿ ಮನದ ಮನೆಯೊಳಗೆ
ಹೂ ಕೊಡುವ ಖುಷಿಯೊಳಗೆ..|
ಚಿಗುರೊಡೆಯುವ ಮುಂಚೆ
ಎಳ್ಳಷ್ಟು ಸುಖವಿಲ್ಲ
ಹನಿ ಮಳೆಯ ಪಸೆಯೊಳಗೆ
ಚಿಗುರಿತು ಬದುಕಂದು
ಅರಳಿ ನಕ್ಕಿದೆ ಹೂವಿಂದು..||
ಒಂಟಿತನ ಜೊತೆಗಂಟಿದರೂ
ಮಳೆ ಬಿಸಿಲೆ ಸ್ನೇಹಿತರು
ಬೆಳೆವ ಛಲ ಸಾಕಾಯ್ತು
ಈ ಬದುಕು ಹಸಿರಾಯ್ತು
ದುಂಬಿಗಳು ನೂರಾರು ಇಂದು ಮುಂದು..||
ಯಾರಿಲ್ಲ ಎನಗಿಲ್ಲ
ಎನ್ನುತಲಿ ಮಡಿದಿದ್ದರೆ
ತಲೆಯೆತ್ತಿ ಜಗವನ್ನು
ನೋಡಿ ನಗುವಾಸೆ
ಅಂದೆ ಕೊನೆಯಾಗುತ್ತಿತ್ತೆ..||
***
ಅಮ್ಮಾ ಎಂದರೆ ನನಗೆ
ಆಕಾಶದ ಮನಸ್ಸು
ಸಾಗರದ ಪ್ರೀತಿ
ನೀ ಬಯಸುವ ಕನಸು
ಈ ಮಗುವಿಗೆ ಮೀಸಲು
ಬರಿ ಅಮ್ಮಾ ಎಂದರೆ ನಿನಗೆ
ತೃಪ್ತಿ ಇಲ್ಲ ನನಗೆ..||
ನಿನ್ನ ಆ ಕರುಣೆಗೆ
ನಾನೆಂದಿಗೂ ಚಿರರುಣಿ
ನಾನಾಡುವ ಈ ಮಾತು
ನೀ ಕೊಟ್ಟ ವರದಾನ
ನೀನೆ ಎಲ್ಲಾ ಅಂದರೂ ತಪ್ಪಿಲ್ಲ
ಬರಿ ಅಮ್ಮಾ ಎಂದರೆ ನಿನಗೆ
ತೃಪ್ತಿ ಇಲ್ಲ ನನಗೆ..||
ಕೋಟಿ ದೇವರನೆಂದು
ನಾ ಕಾಣೆ ಎಂದೆಂದೂ
ಕಾಣದಿಹ ದೇವರನು
ಪೂಜಿಸಲೇಕೆ ನಾನಿನ್ನು
ಆ ಕೋಟಿ ದೇವರಿಗೆ
ಮೂಲವೆ ನೀನು
ಬರಿ ಅಮ್ಮಾ ಎಂದರೆ ನಿನಗೆ
ತೃಪ್ತಿ ಇಲ್ಲ ನನಗೆ..||
ಹಸಿವಿದ್ದರೂ ಕಸುವಿನಲಿ
ಸಾಕಿದೆ ನೀನಂದು
ನೀ ಕೊಡುವಾ ಪ್ರೀತಿಗೆ
ಬರಗಾಲ ಬರದೆಂದು
ಈ ಜಗವೇ ಎದುರಾಗಲಿ
ನಿನ ಹರಕೆ ನನಗಿರಲಿ
ಬರಿ ಅಮ್ಮಾ ಎಂದರೆ ನಿನಗೆ
ತೃಪ್ತಿ ಇಲ್ಲ ನನಗೆ..||
-ವೆಂಕಟೇಶ ಚಾಗಿ
ಗಜ಼ಲ್
ಚಡಪಡಿಸುತ್ತಲೇ ಇದೆ ಹೃದಯವೇಕೆ ತಿಳಿಯದು
ಏನೋ ಬೇಕಾಗಿದೆ ಏನೆಂದೆ ಮನಕೆ ತಿಳಿಯದು
ಈ ಸುಂದರ ಕ್ಷಣದಲ್ಲು ಹೇಗೆ ಸಪ್ಪಗಿದೆ ಜೀವ
ಯಾವ ಮುಳ್ಳು ಕುತ್ತುತಿದೆ ಒಳಗನದಕೆ ತಿಳಿಯದು
ಹೂಚೆಲುವೆ ತುಟಿ ತೆರೆದಿದ್ದಾಳೆ ಸ್ತಬ್ಧ ಚಿಟ್ಟೆಗೆ
ಒಲವಹಾಡೂ ಸೆಳೆಯದ ವಿವಶತೆ ಬೇಕೆ ತಿಳಿಯದು
ನಡುರಾತ್ರಿಯಲೆದ್ದವರೆಲ್ಲ ಬುದ್ಧರಾದರೇನು
ಲೋಕ ಬೆಳಗುವ ಪ್ರೀತಿಗೆಂಥ ಅರಕೆ ತಿಳಿಯದು
ಇಲ್ಲಿ ಯಾವುದೂ ಸರಳರೇಖೆಯಲ್ಲಿಲ್ಲ ‘ವಿಶು’
ಉರುಟು ದಾರಿಯಲ್ಲಿ ತೊಳಲೆ ಬದುಕೆ ತಿಳಿಯದು
-ಗೋವಿಂದ ಹೆಗಡೆ
ಒಂದೇ ಒಂದು ನುಡಿ
ಜ್ಞಾನ ತಪ್ಪಿ ಆಡಿದ
ಒಂದೇ ಒಂದು ನುಡಿ
ನಾನು ಬೇರೆ ನೀನು ಬೇರೆ
ಎಂದು ಅಡ್ಡ ಗೋಡೆ ಎತ್ತಿ ನಿಲ್ಲುಸುತ್ತಿದೆ.
ಪ್ರೀತಿ ತುಂಬಿದ ಮಾತಿಗೆ
ಹರ್ಷ ತುಂಬಿದ ಕ್ರಿಯೆಗೆ
ಮನದಾಳದಲ್ಲಿ ಸ್ನೇಹಕೆ
ತಂಪನ್ನೆರೆಯುವ ತಾಕತ್ತಿದೆ
ಬನ್ನಿ ಸುಜ್ಞಾನಿಗಳೆ
ಹಂಬಲದ ಜಲವ ನೇಹದ ಬಲವ
ಎದೆಗವಚಿಕೊಳ್ಳಲು ಅಮೃತದ
ಸವಿ ಜೇನು ಸುರಿಸೋಣ
ಭರವಸೆಯ ರಸ ಬೆರೆಸೋಣ
ನಂಬಿಕೆಯ ದೀಪ ಉರಿಸೋಣ
ಏಕಾಂತದ ಹಾದಿ ತೊರೆದು
ಒಲವ ಭಾವದನು ಮೆರೆದು
ಹೋದಲೆಲ್ಲ ಸವಿ ನಾಲಿಗೆ ಹೊತ್ತು ತಿರುಗೋಣ
ಜೀವ ನದಿಯಲಿ ಸಿಕ್ಕವರಿಗೆಲ್ಲ ಖುಷಿಯ ಹಂಚೋಣ
ಭುವಿಯಲಿ ಸ್ವರ್ಗ ಸೃಷ್ಟಿಸೋಣ
ದೇವ ಮಾನವರಾಗಿ ನಲಿಯುತ ಬಾಳೋಣ
ಜಯಶ್ರೀ.ಜೆ. ಅಬ್ಬಿಗೇರಿ
ಹಾದಿಬದಿಯ ಮನೆ
ಅವು ಸಂತರ ಆತ್ಮಗಳು
ಸದಾ ಎಲ್ಲರಿಂದ ದೂರದಾಚೆ
ಸ್ವ-ಸಂತೃಪ್ತಿಯ ತಾಣಗಳಲ್ಲೆ ವಾಸ.
ನಕ್ಷತ್ರದಂತೆ ಹೊಳೆವ ಆತ್ಮಗಳಿವೆ
ಸಂಗಾತಿಗಳೇ ಇಲ್ಲದ ಸ್ವರ್ಗದಲಿ
ಪ್ರತ್ಯೇಕತೆಯ ನೆಲೆಯಲ್ಲೇ ಬದುಕುತ್ತವೆ.
ಹೆದ್ದಾರಿಗಳೆಂದು ಹಾದು ಹೋಗದ
ದಾರಿಗೆ ಬೆಳಕು ತೋರಿದ ಆದ್ಯರ ಆತ್ಮಗಳೂ ಇವೆ.
ಆದರೆ ಬದುಕಬಿಡಿ ನನಗೆ ಹಾದಿಬದಿಯ ಮನೆಯಲ್ಲಿ
ಜನರಿಗೆ ಗೆಳೆಯನಾಗಿ.
ಹಾದಿ ಬದಿಯ ಮನೆಯಲ್ಲೇ ನನಗೆ ಬದುಕ ಬಿಡಿ
ಎಲ್ಲಿ ಜನರ ದಂಡು ಸದಾ ಸಂಚರಿಸುವಲ್ಲಿ
ಅವರು ಸಜ್ಜನರೂ ಮತ್ತವರು ದುರ್ಜನರೂ
ಸದ್ಗುಣ ದುರ್ಗುಣಗಳ ಹೊತ್ತ ನನ್ನಂತೆ
ಅದಕ್ಕೆ ನಾನೆಂದು ಟೀಕಾಕಾರನ ಆಸನವೇರುವುದಿಲ್ಲ.
ವ್ಯಂಗ್ಯದ ಈಟಿ ಎಸೆಯುವುದಿಲ್ಲ.
ಬದುಕ ಬಿಡಿ ನನ್ನ ಹಾದಿಬದಿಯ ಮನೆಯಲ್ಲಿ
ಮತ್ತು ಜನರಿಗೆ ಗೆಳೆಯನಾಗಿ.
ಹಾದಿಬದಿಯ ನನ್ನ ಮನೆಯಿಂದಲೇ ದಿಟ್ಟಿಸುತ್ತೇನೆ
ಬದುಕಿನ ಹೆದ್ದಾರಿಯ ಬದಿಯಲ್ಲಿದ್ದರನ್ನು
ಕೆಲವರು ಉತ್ಕಟಾಕಾಂಕ್ಷೆಗಳ ಹೊತ್ತವರು
ಕಷ್ಟಕೋಟಲೆಗೆ ಬಸವಳಿದು ನೊಂದವರು
ಅವರ ನಗು ಅಳುವಿಗೆ ನಾನು ಬೆನ್ನು ತಿರುಗಿಸುವುದಿಲ್ಲ
ಅವೆರಡು ಬದುಕಿನ ಅನಂತ ಯೋಜನೆಯ ಭಾಗಗಳು
ಬದುಕ ಬಿಡಿ ನನ್ನ ಹಾದಿಬದಿಯ ಮನೆಯಲ್ಲಿ
ಮತ್ತು ಜನರಿಗೆ ಗೆಳೆಯನಾಗಿ.
ಮುಂದೆ ಹಳ್ಳಕೊಳ್ಳಗಳ ಕಾಡ ಬಯಲಿನ ಹುಲ್ಲುಗಾವಲಿದೆ
ಎರಲಾಗದೆತ್ತರದ ಪರ್ವತಗಳು ಇವೆ.
ಅದು ನನಗೆ ಗೊತ್ತಿದೆ.
ಈ ದಾರಿ ಧೀರ್ಘ ಮಧ್ಯಾಹ್ನದ ಉದ್ದಕ್ಕೂ
ಮತ್ತೂ ಮುಂದೆ ರಾತ್ರಿಯವರೆಗೂ ಹಬ್ಬಿದೆ.
ಆದರೂ ಸಂತಸವಿದೆ ಆ ಪ್ರಯಾಣಿಕರ ಹರ್ಷದೊಂದಿಗೆ
ನೋಯುತ್ತೇನೆ ಅಪರಿಚಿತರ ನರಳುವಿಕೆಗೆ
ಹಾದಿಬದಿಯ ಮನೆಯಲ್ಲಿದ್ದು ಏಕಾಂಗಿ ಮನುಷ್ಯನಂತಿರಲು ನನಗಾಗದು.
ಅದಕ್ಕೆ ಬದುಕ ಬಿಡಿ ಹಾದಿಬದಿಯ ನನ್ನ ಮನೆಯಲ್ಲಿ
ಅಲ್ಲಿ ಜನರ ದಂಡೇ ಸಾಗಿ ಬರುವುದು
ಅವರು ಸಜ್ಜನರು, ದುರ್ಜನರು, ಅಶಕ್ತರು, ಸಶಕ್ತರು
ಜಾಣರು, ಮೂರ್ಖರು -ಪಕ್ಕಾ ನನ್ನಂತೆ
ಹಾಗಾಗಿ ಟೀಕಾಕಾರನ ಆಸನವೇರಿ ನಾನೇಕೆ ಕಟಕಿಯ ಕಿಡಿ ಸಿಡಿಸಲಿ?
ಬದುಕ ಬಿಡಿ ನನ್ನ ಹಾದಿಬದಿಯ ನನ್ನ ಮನೆಯಲ್ಲಿ
ಮತ್ತು ಜನರಿಗೆ ಗೆಳೆಯನಾಗಿ
ಮೂಲ ; ಇಂಗ್ಲೀಷ -Sam Walter Foss
ಅನುವಾದ: ನಾಗರೇಖಾ ಗಾಂವಕರ
***
ನಾನು ಆ ಹೆಂಗಸಲ್ಲ
ನಾನು ಆ ಹೆಂಗಸಲ್ಲ
ನಿನಗೆ ಶೂ, ಸಾಕ್ಸಗಳ ಮಾರುವ ಅವಳಲ್ಲ,
ನೆನಪಿಸಿಕೋ ನನ್ನ,ನೀನು ತಂಗಾಳಿಯಂತೆ
ಸ್ವೇಚ್ಛೆಯಿಂದ ವಿಹರಿಸುತ್ತಿರುವಾಗ
ನಿನ್ನ ಕಲ್ಲಿನ ಗೋಡೆಗಳ ನಡುವೆ ನಿನ್ನಿಂದ ಹುದುಗಿಸಲ್ಪಟ್ಟವಳು ನಾನು.
ಗೊತ್ತಿಲ್ಲ ನಿನಗೆ, ನನ್ನ ದನಿಯ ನಿನ್ನ ಕಲ್ಲಿನ ಗೋಡೆಗಳು
ಅದುಮಿಡಲಾರವೆಂದು.
ನಾನು ಅವಳೇ,ನಿನ್ನ ರೂಢಿ ಸಂಪ್ರದಾಯಗಳ
ಸಂಕೋಲೆಯಲ್ಲಿ ಪುಡಿಪುಡಿಯಾದವಳು.
ಗೊತ್ತಿಲ್ಲ ನಿನಗೆ,
ಬೆಳಕು ಕತ್ತಲೆಯೊಳಗೆ ಬಂಧಿಯಾಗದೆಂದು.
ನೆನಪಿಸಿಕೋ ನನ್ನ,
ನೀನ್ಯಾರ ತೊಡೆಯಿಂದ ಹೂವನ್ನು ಕಿತ್ತು
ಮುಳ್ಳನ್ನೂ, ಕೆಂಡವನ್ನೂ ನೆಟ್ಟೆಯೋ ಅವಳೇ ನಾನು.
ಗೊತ್ತಿಲ್ಲ ನಿನಗೆ,
ಆ ಸರಪಳಿಯಿಂದ ನನ್ನ ಪರಿಮಳದ ಉಸಿರುಗಟ್ಟಿಸಲಾಗದೆಂದು.
ಪರಿಶುಧ್ದತೆಯ ಹೆಸರಿನಲ್ಲಿ
ನನ್ನನ್ನು ಕೊಂಡುಕೊಂಡ ಇಲ್ಲ ಮಾರಿದ
ಅದೇ ಹೆಣ್ಣು ನಾನು.
ಗೊತ್ತಿಲ್ಲ ನಿನಗೆ
ನಾನು ಮುಳುಗುತ್ತಿರುವಾಗಲೂ
ನೀರ ಮೇಲೆ ನಡೆಯಬಲ್ಲೆನೆಂದು
ನಾನು ಅವಳೇ, ನಿನ್ನ ಹೊರೆಯಿಂದ ಮುಕ್ತನಾಗಲು
ಮದುವೆಯ ಬಂಧನಕ್ಕೆ ನೂಕಲ್ಪಟ್ಟವಳು
ತಿಳಿದಿಲ್ಲ ನಿನಗೆ,
ಸಂಪ್ರದಾಯದಿಂದಲೇ ಕಟ್ಟಲ್ಪಟ್ಟ ಮನಸ್ಸುಗಳಿರುವ
ದೇಶವೆಂದಿಗೂ ಉದಾರವಾಗಲಾರದೆಂದು.
ನನ್ನ ಪ್ರಾತಿವೃತ್ಯ, ನನ್ನ ತಾಯ್ತನ,ನಿಷ್ಠೆ ಎಲ್ಲ
ನಾನು ಸರಕಂತೆ ನಿನ್ನಿಂದ ಮಾರಲ್ಪಟ್ಟವಳು.
ಆದರೀಗ, ನನಗೆ ಹೂವಂತೆ ಅರಳುವ ಕಾಲ.
ಅರೆಬೆತ್ತಲಾಗಿ ಶೂ, ಸಾಕ್ಸಗಳ ಮಾರುತ್ತಿರುವ
ಆ ಹೆಂಗಸಲ್ಲ ನಾನು
ಅಲ್ಲ. ನಾನು ಆ ಹೆಂಗಸಲ್ಲ.
ಮೂಲ ; ಕಿಶ್ವರ್ ನಹೀದ್
ಅನುವಾದ: ನಾಗರೇಖಾ ಗಾಂವಕರ
ಪಯಣ….
ಜೀವ ಆಗಷ್ಟೇ ಬಂದಿತ್ತು, ಕೇಳಿತ್ತು ನಿಧಾನವಾದ ನನ್ನದೇ ಎದೆ ಬಡಿತ..
ಎಲ್ಲೋ ಒಳಗಿದ್ದೆ ನಾನು ತಿಳಿಯದ ವಿಳಾಸದಲ್ಲಿ…
ಸುರಕ್ಷಿತ ಅನ್ನಿಸ ತೊಡಗಿತ್ತು ಆ ಹೊಸ ಮನೆ,
ಇರುವೆಯಷ್ಟಿದ್ದ ನಾ ಬೆಳೆಯುತ್ತಿದ್ದೆ ಆ ಸೊಗಸಾದ ಅಂಗಳದಲ್ಲಿ….
ಆಗಾಗ ಯಾರೋ ಸವರುತಿದ್ದರು ನನ್ನ,
ಮತ್ತೊಂದು ಕೈ ಯ ಬಿಸಿಯೂ ತಟ್ಟುತಿತ್ತು ಕೆಲವೊಮ್ಮೆ…
ಪ್ರೀತಿಯ ಬಗ್ಗೆ ಮಾತನಾಡುತ್ತಿದ್ದರು ಇಬ್ಬರು,
ನನ್ನ ಬಗ್ಗೆಯೂ ಹೇಳಿದಂತೆ ಭಾಸವಾಗುತ್ತಿತ್ತು ಒಮ್ಮೊಮ್ಮೆ…
ನಡುವೊಮ್ಮೆ ಸವರುತಿದ್ದ ಕೈ ಹೇಳಿತ್ತು,
ನಾನೇ ನಿನ್ನಮ್ಮ ಎಂದು…
ಆಗಲೇ ಜೊತೆಗಿನ ಕೈ ಹೇಳಿತ್ತು,
ನಾ ನಿನ್ನ ಅಪ್ಪನೆಂದು…
ಕಾದಂತೆ ನನಗಾಗಿ ಇಬ್ಬರೂ ಪ್ರೀತಿಸುತ್ತಿದ್ದರು ನನ್ನ,
ಕಥೆ ಹೇಳಿ ಮಲಗಿಸುತಿದ್ದರು ನನ್ನ,
ಎಲ್ಲೋ ಒಮ್ಮೆಮ್ಮೆ ಅಲುಗಾಡಿದಾಗ ಅಪ್ಪುತಿದ್ದರು ನನ್ನ…
ಅದೇನೋ ಇದ್ದಕಿದ್ದಂತೆ ಅಮ್ಮ ನನ್ನ ಬಿಗಿದಪ್ಪಿ ದೇವರಿಗೆ ನೋ ಬೇಡುತಿದ್ದಳು,
ಅವಳ ಎದೆ ಬಡಿತಕ್ಕೇನೋ ಬೇರೆಯೇ ಸದ್ದಿತ್ತು ಅಂದು….
ಬೇರೆಯೇನೋ ನನ್ನ ಸವರಲಾರಂಭಿಸಿತು ,
ನಂತರ ಹೇಳಿದ್ದು ನಾನು ಹೆಣ್ಣೆಂದು….
ಆಗಲೇ ಕೇಳಿದ್ದು ಎಂದೂ ಕೇಳದ ನನ್ನಮ್ಮನ ಆಕ್ರಂಧನ,
ಹಿಂದೆಯೇ ಬರಲಾರಂಭಿಸಿತು ಇದುವರೆಗೂ ಕೇಳದ ಸದ್ದೊಂದು…
ಹೀಯಾಳಿಸಿ ಅವಳ ಬಯ್ಯುತ್ತಿ ದ್ದರು
ಹೊರಲಾರೆಯ ಈಗಲಾದರೂ ಗಂಡೆಂದು…
ಗೊಳಾಡಿದಳು, ಬೇಡಿದಳು ನನ್ನಮ್ಮ
ಗೋಗರೆದಳು ಬದುಕಿಸಲು ನನ್ನ ,
ಈ ವರೆಗೂ ಹೊತ್ತ ಕನಸ , ಉಸಿರಾಡುತ್ತಿದ್ದ ಅವಳ ಮಗುವ….
ಕರುಣೆ ,ಕನಿಕರವಿಲ್ಲದೆ ಅವಳಿಂದ ಬೇರ್ಪಡಿಸಿದರೆನ್ನ,
ಕಿತ್ತರು ಕರುಳ ಬಳ್ಳಿಯ ಪರಿಗಣಿಸದೆ ಮಾನವೀಯತೆಯನ್ನ,
ಮುಗಿಸಿದೆ ನಾನಾಗ ಈ ನನ್ನ ಸಣ್ಣ ಹುಟ್ಟು ಸಾವಿನ ಪಯಣ ವ…..
(ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಈ ಕವನ)
-ಶೀತಲ್
ಗಾಯತ್ರಿ ಭಟ್ ಅವರೆ ಅಮ್ಮನಿಗೆ ಸರಿಸಾಟಿ ಯಾರೂ ಇಲ್ಲ. ಅಶಳು ಕ್ಷಣಹೊತ್ತು ದಣಿವು ಎಂದು ಕುಳಿತರೆ, ಮನೆ ಫಸಲು ಕೊಡದ ಮಾಮರವಾದಂತೆಯೇ ಸರಿ.
ವೆಂಕಟೇಶ ಚಾಗಿ ಅವರೆ ಅಮ್ಮ ಎಂದರೆ ಖಂಡಿತ ಸಾಲದು.ಅದೊಂದು ಪ್ರೇಮದ ಕಡಲು ಅಮೃತದ ಒಡಲು.ಸದಾ ಮಕ್ಕಳ ಬಗೆಗೆ ಚಿಂತಿಸೊ 24×7 ತೆರೆದ ಹೃದಯದ ಲವ್ ಬ್ಯಾಂಕ್.
ಮಂಜುನಾಥ ಹನಿಗವನಗಳು ಸೂಪರ್….
ನಾನು ಬರೆದ ಲೇಖನ, “ಮಳೆಬಿಲ್ಲು” ಪುಸ್ತಕ ಕುರಿತು ಪುಸ್ತಕಾವಲೋಕನ ಲೇಖನ ಪ್ರಕಟಿಸಿದ ಪತ್ರಿಕೆಯ ಸಂಪಾದಕರಿಗೆ
ಹಾಗೂ ಪಂಜು ಬಳಗಕ್ಕೆ ಧನ್ಯವಾದಗಳು