ದಾವಾಗ್ನಿ
ಸೊರಗಿದೆದೆಯ ಇಳಿಬಿದ್ದ
ಮಾಂಸದ ಮುದ್ದೆಗಳಂತೆ
ಗತ ವೈಭವದ ಪ್ರೀತಿ
ಬೆರಳು ಬೆಚ್ಚಗಿನ
ಬಯಕೆಗಳು ತಣ್ಣಗಾಗಿ
ಚಿರ ನಿದ್ರೆಗೆ ಜಾರಿವೆ
ಕಾವು ಕಳೆದಕೊಂಡ ಕಾಯ
ಪಡೆದ, ಕಳೆದುಕೊಂಡದ್ದರ
ಕುರಿತು ಲೆಕ್ಕಾಚಾರ ನಡೆಸಿದೆ
ಸೋತ ಕಂಗಳ ಕಣ್ಣೀರು
ಮೈಮೇಲಿನ ಗೀರು
ಗಾಯದ ಗುರ್ತುಗಳು
ಎದುರಿಟ್ಟುಕೊಂಡು
ಪಂಚನಾಮೆಗೆ ತೊಡಗಿದೆ
ಭಗ್ನಾವಶೇಷವಾದ
ಹೃದಯ ಕುಲುಮೆಯಲೀಗ
ಬರೀ ಪ್ರತಿಕಾರದ
ದಾವಾಗ್ನಿ ಬೇಯುತಿದೆ.
***
ಅಂತರ
ಸೂರ‍್ಯನಿಗೆ ಕಣ್ಣಿಲ್ಲ
ದೇಹವೆಲ್ಲ ದೃಷ್ಟಿ !
ನದಿಗೆ ಕಾಲಿಲ್ಲ
ಶರವೇಗದ ಶಕ್ತಿ !
ಗಾಳಿಗೆ ರೆಕ್ಕೆಗಳಿಲ್ಲ
ಹಾರುವ ಯುಕ್ತಿ !
ಆಕಾಶಕೆ ಕಂಬಗಳಿಲ್ಲ
ಜಗಕೆಲ್ಲ ಚಪ್ಪರ !
ಭುವಿಗೆ ಮನೆಯಿಲ್ಲ
ಜೀವಿಗಳಿಗೆಲ್ಲ ಆಸರೆ !
ಕತ್ತಲೆಗೆ ಬೆಳಕಿಲ್ಲ
ನಕ್ಷತ್ರ ಸಿಂಗಾರ !
ಮರಕೆ ನೆರಳಿಲ್ಲ
ನಮಗೆಲ್ಲ ತಂಪು !
ಮನುಷ್ಯನಿಗೇನೂ ಇಲ್ಲ
ಮೈತುಂಬ ಅಹಂಕಾರ !
– ಅಶ್ಫಾಕ್ ಪೀರಜಾದೆ
ಜಲದ ಸಾವು
ತೆರೆದ ಬಾವಿಯೊಳಗಣ,
ಸ್ಫುರಿವ ನೀರ ರುಚಿಯ ತಂಪು!..
ಭುವಿಗೆ ಒತ್ತಿ ಇಟ್ಟ ಕೊಳಪೆ,
ಬಲು ದಿನ ಬಿಡಲಿಲ್ಲ?!
ಆಕೆಯ ಒನಪು!..
ಮಡಕೆ ಕೊಡಪಾನಗಳಿಡಿದು,
ತುಂಬಿ ಹೊತ್ತರು!..
ಹಾದಿ ಬೀದಿಯಲಿ ವಸ್ತ್ರಗಳ ಒಸಕಿ,
ಎರಡು, ಮೂರು, ನಾಕು ಗಾಲಿಗಳ,
ಮಜ್ಜನದ ಆಟಕೆ ಮುಳುಗಿಸಿದರು!..
ಅಪ್ಪನ, ಅಜ್ಜನ, ಅವನ, ಇವನ
ಎಲ್ಲರ ಎತ್ತು, ಕತ್ತೆ, ಕುರಿ, ಕುದುರೆ,
ಪಾತ್ರೆ ಪಡಗಗಳ ಸುರಿದು ಬೆಳಗಿದರು!?.
ಇಳೆಯೊಳಗೆ ಹೊಳೆಯುಟ್ಟಿ,
ಹಾದಿ ಬೀದಿಯಲಿ, ಬಚ್ಚಲಲಿ
ಉಕ್ಕಿ ಕಾಲಕಸವಾದಳೇ ಗಂಗೆ?!..
ರೈತನ ಹೊಟ್ಟೆಯಲಿ ಇತಿ ಮಿತಿ
ತೊರೆದು, ರಾತ್ರೋರಾತ್ರಿ ಚೀರುತ್ತಾ?..
ಉಕ್ಕಿ ಹರಿದದ್ದುಂಟು!..
ಈಗ ಅವಳ ಗೋಳ ಆಲಿಸೋರ್ಯಾರು!.
ಒಡಲು ಬರಿದಾಗುತ್ತಿದೆ!?
ಎಲ್ಲೆಲ್ಲೂ ಸದಾ ಭೋರ್ಗರೆವ ಸದ್ದು!!
ನಿದ್ದೆಕದ್ದ ಹಗಲು ರಾತ್ರಿಗಳ,
ಶಾಪವೆಷ್ಟೋ?. ಕಿವಿಗಡಚಿಕ್ಕುತಿದೆ..
ಭೂಮಿ ನಡುಗುತಿದೆ, ಆರ್ತನಾದಕೆ
ಕಿವಿಗೊಡಲೊಲ್ಲರು!?
ಜಲದ ಕಣ್ಣು ಬತ್ತಿದೆ..
ವರ್ಷಧಾರೆಗೆ ಮುನಿಸು,
ಅಂತರಂಗದೊಳು ತಂಪಿಲ್ಲ..
ಜಲಕೆ ಸಾವು ಬರಲೂಬಹುದು!!
ಎಚ್ಚರ!!
ಗಂಟುಮೂಟೆ ಕಟ್ಟಬೇಕಾದೀತು!!
ಇಲ್ಲಿಂದಲೇ, ಮತ್ತೆ ನೆಲೆಯ್ಹುಡುಕಿ..
ಬದುಕು ಜಟಕಾ ಬಂಡಿ!?
ಬಡ ಬಡಾಯಿಸುತ್ತಾ!
ನೋವಲ್ಲಿಯೇ ಸಾವಿಗಾಗಿ,
ತಾವ ಹುಡುಕುತ್ತಾ!!?.
– ರಾಜೀವಸಖ(ಮಾಂತೇಶ್ ಬಂಜೇನಹಳ್ಳಿ)
ಬಸವನಾರೆಂಬೆ
ಬಸವನಾರೆಂಬೆ……..
ಹೊಸ ವಿಚಾರಧಾರೆಗಳ
ಹೆದ್ದಾರಿಯ ಸಾಮಾನ್ಯರಿಗೆ ತೆರೆದಾತನು..
ಅಸಲಿನಲಿ ಉಸಿರುಗಟ್ಟಿ, ಅದನೇ ಮೆಟ್ಟಿ
ವಿಶಾಲತೆಯನು ಮೆರೆಯುತಾ
ಮನ- ಮನಗಳ ಮುಟ್ಟಿತಟ್ಟಿದ ವಿಭೂತಿಪುರುಷನು…
ಪರಸ್ಥಳದ ಅವ್ಯಕ್ತವನು
ಕರಸ್ಥಳದಲಿ ನೆಲೆಗೊಳಿಸಿ
ಭಕ್ತಿಯ ಹಾದಿಯನು ಸುವ್ಯಕ್ತಗೊಳಿಸಿದವನು..
ದೇಹವೇ ದೇಗುಲ ಶಿರವೇ ಹೊನ್ನಕಳಶವೆಂದ
ವಿಶ್ವವ್ಯಾಪಿ ಆತ್ಮಲಿಂಗ ಸ್ವರೂಪಿ ಇವನಯ್ಯಾ..
ಊರ ಹೊರಗಿರುವವರನಲ್ಲ !
ಹೊಲಸು ಮುಕ್ಕುವ ಒಳಗಿರುವವರನೆಲ್ಲ
ಖಂಡಿಸಿ ದೂರ ಅಟ್ಟಿದ ಧೀರನಿವನು….
ಇವನಾರವನೆಂದು ಭೇದವೆಣಿಸದೇ…
ತನ್ನವರೆಂದು ಸಂಗನ ಶರಣರನೆಲ್ಲಾ
ಬಾಚಿ ತಬ್ಬಿಕೊಂಡ ವಿಶ್ವಪ್ರೇಮಿಯು…
ಶರಣರಿಗಿಂತ ಕಿರಿಯ, ರಾಜತೇಜವಿನೀತನು
ಆ ಲೋಕ ಈ ಲೋಕ ಮೂಲೋಕವಿಲ್ಲ !
ಸತ್ಯವ ನುಡಿವೆಡೆಯೇ ಸಗ್ಗವೆಂದಾತನು
ಕಳುವ ಕೊಲುವ ಹುಸಿವ
ಹಳಿವ ಅಸಹ್ಯಿಸುವ ಬಣ್ಣಿಸದಿರುವ…
ಶುದ್ಧಾಂತರಂಗದ ಸತ್ಪಥವ ತೋರಿದಾತನು…..
ಅನ್ನದಗುಳ ಸೀರೆಎಳೆಯ ,ಹೊನ್ನಿನೆರೆಯಲಿ
ಕಳುವ ತೋರಿದಡೆ ಒರೆಗೆ ಶಿರವನೊಡ್ಡುವೆನೆಂದ
ನಿಸ್ವಾರ್ಥಿ ಭಕ್ತಿ ಭಂಡಾರಿಯು
ಎಲವೋ ಎಂಬುದು ಬಿಡಿರಿ,
ಅಯ್ಯಾ ಎಂಬುದನ್ನೇ ಉಲಿರಿ
ಮುತ್ತು ಪೋಣಿಸಿದಂತೆ ನುಡಿಯಿರೆಂದಾತನು
ಮೃದುನುಡಿಗಳಲಿ ಲಿಂಗವನು ಒಲಿಸಿಕೊಂಡಾತನು…
ನುಡಿದಂತೆ ನಡೆದೊಡೆ,ಕಡೆಯಿದೇ ಜನ್ಮ
ನಿಷ್ಠೆಯಿಂ ದುಡಿದೊಡೆ ಕಾಯಕದೊಳು
ಕಟ್ಟಿಹುದು ಏಣಿ ಕೈಲಾಸಕೆ
ಬಡತನವನು ಓಡಿಸಿರೋ
ಉತ್ತಮರ ಒಡನಾಡಿರೆಂದು ಜಗಕೆ ಸಾರಿದವನು…
ಪುರಾಣ ವೇದಾಗಮಗಳ ಮಥಿಸಿ
ಓರಟೆಯ ಪುಂಡರ ಗೋಷ್ಠಿಗಳ ಕೆಡಿಸಿ
ಆಡುನುಡಿಯ ಗದ್ದುಗೆಗೆ ಅಡಿಗಲ್ಲನಿರಿಸಿ….
ಕನ್ನಡನುಡಿ ಮೆರೆಸಿ ವಚನಕ್ಕೆ ವಿಶ್ವಮಾನ್ಯತೆ ತಂದಾತನು
ಇಂತಪ್ಪ ಶರಣರ ನಡೆ ದಾರಿದೀಪ
ಹೊತ್ತಿಸಿ ಬೆಳಗಲಿ ನಮ್ಮೆದೆಯಲಿ ಸೈಪ
ಸರ್ವಸುಖಿ ಸಕಲಸಮತೆ ಕಲ್ಯಾಣರಾಜ್ಯ
ಮೈದೆಗೆಯಲಿ ಕರುನಾಡಲಿ ಮತ್ತೆ ಶರಣಸಂಸ್ಕೃತಿ
-ಚಂದ್ರೇಗೌಡ ನಾರಮ್ನಳ್ಳಿ
ಮಾತು ಮೌನವಾದಾಗ
ಮುಗಿಲ ಮಂದಿರದಲ್ಲಿ
ತಂಗದಿರನ ಗರಗರ
ಗಂಧವಹದ ಗಮ್ಮತ್ತಿನಲ್ಲಿ
ಮನಸು ಚೇತೋಹಾರಿ
ಗಂಧದ ಕಂಪು ಹರಡಿತಿಲ್ಲಿ
ಮಾತು ಮೌನವಾದಾಗ
ಉಪಾಹಾರದ ಉಪಾಸನೆಯಲ್ಲಿ
ಅನಿಸಿದಷ್ಟು ಅನುಕಲ್ಪನೆ
ಅನುಪಮದ ಅನುಕರ್ಷದಲ್ಲಿ
ನಗುವನುವಿನ ನಗಾರಿ
ಅನಿತ್ಯ ಪುಟಿಯೊಡೆಯಿತಲ್ಲಿ
ಮಾತು ಮೌನವಾದಾಗ
ತಾರೆಯ ನೋಡುತ
ಗಣತಿಗೆ ಬಾರದ
ಗೋಜಲಿನಲ್ಲಿ
ಕಲ್ಪನೆಯ ಕವಾಟ ತೆರೆದು
ಕವನದ ಕಲ್ಯಾಣ ಮೂಡಿತಲ್ಲಿ
ಮಾತು ಮೌನವಾದಾಗ
-ಕ.ಲ.ರಘು.
ಗಜಲ್
ಹಳೆಯದೆಲ್ಲ ಅಳಿಸಿ ಬಿಡು ಹೊಸ ಕಥೆ ಬರೆಯೋಣ
ಹೊಸ ರೀತಿ ಹೊಸ ಪ್ರೀತಿ ಹೊಸ ವ್ಯಥೆ ಬರೆಯೋಣ
ನೀನು ಬರದಿರುವ ಸಿಟ್ಟಿಲ್ಲ ಯಾವ ಬೇಜಾರೂ ಇಲ್ಲ
ಮುನಿಸಿಕೊಳ್ಳದೇ ಪ್ರೀತಿಸಿ ಹೊಸ ಕಥೆ ಬರೆಯೋಣ
ಬಲು ಕ್ಲೀಷೆಯಾಗಿದೆ ತಾಳ್ಮೆ, ಸಹನೆ, ತ್ಯಾಗದ ಮಾತು
ಅವಳಿಗೆಂದು ಜೀವ ತೇದು ಹೊಸ ಕಥೆ ಬರೆಯೋಣ
ಅದೇಕೆ ಹುಟ್ಟಬಾರದು ಸೀತೆಗೆ ರಾವಣನಲಿ ಪ್ರೀತಿ?
ರಾಮನನ್ನು ಅಗ್ನಿಗೆ ನೂಕಿ ಹೊಸ ಕಥೆ ಬರೆಯೋಣ
ಸಾಕಿನ್ನು ಅವಳ ಮೋಸ ವಂಚನೆ ಕಪಟಗಳ ಮಾತು
ಕಟುಕರ ಸಹವಾಸ ಬಿಟ್ಟು ಹೊಸ ಕಥೆ ಬರೆಯೋಣ
ಯಾವ ಗುರುವೂ ಕೇಳ ಬಾರದು ಶಿಷ್ಯನ ಹೆಬ್ಬೆರಳು
ಅಭಿಮನ್ಯುವಿಗೆ ಖಡ್ಗವಿತ್ತು ಹೊಸ ಕಥೆ ಬರೆಯೋಣ
ಬಿಟ್ಟುಬಿಡು ಮಂದಿರ ಮಸೀದಿ ಚರ್ಚುಗಳ ಮಾತು
ತಂಪಿನಿರುಳಲಿ ಸಾಕಿ ಶರಾಬುಗಳ ಕಥೆ ಬರೆಯೋಣ
ಶೂನ್ಯ ಸಿಂಹಾಸನ ಎಂಬುದೂ ಮೋಹವೆ ‘ಅಲ್ಲಮ’
ಅಕ್ಕಳಿಗೆ ಅಧಿಕಾರ ನೀಡಿ ಹೊಸ ಕಥೆ ಬರೆಯೋಣ
– ‘ಅಲ್ಲಮ’ ಗಿರೀಶ ಜಕಾಪುರೆ
ಕಲ್ಲು ಮರಿಗೆ
ಇಹದ ಬದುಕಿನ ಚಿಂತೆಬೊಂತೆಗಳ
ಹೊತ್ತು ಬಿಸುಟಲಾಗದೇ ಬಸವಳಿದು
ಉನ್ಮಲೀತ ಬೆಂತರರಂತೆ ಹೊರಟ ಮಂದಿಯ ನಡುವೆ
ಆ ಮರಿಗೆ..
ನೀರು ತುಂಬಿದಾಗಲೆಲ್ಲಾ ಹಿಗ್ಗು ಹೆಚ್ಚುವ
ಕಲ್ಲ ಮರಿಗೆಗೆ ನೋವು ಕಾಡುವುದಿಲ್ಲ. ಮಂದಿಯ ನಡಿಗೆ ನಿಲ್ಲುವುದಿಲ್ಲ.
ಅದೆಷ್ಟು ಜನ ಕೈತೊಳೆದುಕೊಂಡರು,
ಮಿಂದು ಹೋದವರೆಷ್ಟು?
ಜಗದ ಜಂಜಡಗಳ ತಿರುಗಣೆಯಲ್ಲಿ ತಿರುಗುತ್ತ.
ಹಿಂದೂ ಮುಂದಾಡುವ ದೇಹಗಳು
ಮುಸುರೆ ಉಜ್ಜುವ ಕೈಗಳು,
ಗೊಬ್ಬರ ಮೆತ್ತಿದ ಕಾಲುಗಳು
ರಕ್ತ ತೊಟ್ಟಿಕ್ಕುವ ಹರಿತ ಚಾಕು ಚೂರಿಗಳು
ಗಂಟೆ ಜಾಗಟೆ ಹಿಡಿದ ಕೈಗಳು, ಹದುಳಿಗನ ಕೈಗಳು
ಮೇಲಿಂದ ಮೇಲೆ ಶುಭ್ರಗೊಂಡವು.
ನೀರು ತುಂಬಿದಂತೆಲ್ಲಾ ಬಸಿದು
ಬಸಿಬಸಿದು ಎರೆದುಕೊಳ್ಳುವವರ ಕಂಡಷ್ಟು
ಮರಿಗೆಗೆ ಒಂದೇ ವ್ಯಾಮೋಹ
ದಿಟ್ಟಿಗೆ ಬಿದ್ದ ಜಂತುವನ್ನು ಬಿಡದೆ
ಉದರದೊಳಗೆ ಒಳಗೊಳ್ಳುತ್ತ
ಮೊಗೆದಷ್ಟು ಬಸಿದಷ್ಟೂ ಸಲೀಲ ತುಂಬಿಕೊಳ್ಳುತ್ತ
ಬರಿದುಮಾಡ ಹೊರಟವರ ಹರಸಿ ಕಳಿಸಬೇಕು
ತಾಯ್ತನದ ಹಿರಿಮೆ ಕಣ್ಣಲ್ಲಿ ತುಳುಕಿಸುವುದೆಂದರೆ ಇದೇ
ಎಷ್ಟೆಷ್ಟೋ ಪರ್ವತಗಳ ದಾಟಿ ಹರಿವ ಜಲವ ಹೊತ್ತು
ಹಸಿರ ವನ ರಾಶಿಯ ಸುತ್ತ
ಮೆತ್ತಗೆ ಮುತ್ತಿದ ಮತ್ತಿನ ಮುತ್ತು
ಹೊಮ್ಮಿಸಿದ ಒಳಬೆಳಗು ಒಳಗೊಳ್ಳುತ್ತ ಪಂಕ ಮೆತ್ತಿದ
ಮಂದಿಯ ಬೆಳಗುತ್ತ ಮತ್ತೆ ಪಂಕ ತುಂಬಿಕೊಳ್ಳುತ್ತ
ತನ್ನೊಳಗಣ ತಳತಳ ಹೊಳೆವ ಬಣ್ಣ ಹೊತ್ತ
ತಿಕ್ಕಿ ತೀಡಿ ಉಜ್ಜಿಟ್ಟ ಹಿತ್ತಾಳೆಯ ಹಂಡೆಯಾಗಬೇಕು
*****
ಇಂದು ನಿನ್ನೆಯಂತಿಲ್ಲ.
ಗೆಳೆಯ ರಹೀಮನ ಮನೆಯಲ್ಲಿ
ಕುಟ್ಟಿದ ಮೆಹಂದಿಗೆ ಹಪಾಹಪಿಸಿ
ಕಾಡಿ ಬೇಡಿ ಇಸಿದುಕೊಳ್ಳುತ್ತಿದ್ದೆ.
ಕೈಬಣ್ಣ ಕೆಂಪಗಾದಷ್ಟು
ಗುಲಾಬಿ ಅರಳುತ್ತಿತ್ತು ಮನದಲ್ಲಿ.
ಪತ್ರ ಹೊತ್ತು ತರುವ ಇಸೂಬಸಾಬ್
ಬಂದಾಗಲೆಲ್ಲಾ ಚಾ ಕುಡಿದೇ ಹೋಗುತ್ತಿದ್ದ..
ಅಂಗಳದ ತುಂಬೆಲ್ಲಾ ಅತ್ತರಿನ ಪರಿಮಳ ಬಿಟ್ಟು.
ರಮಜಾನ್ ದಿನದ ಸಿರ್‍ಕುರಮಾ
ಘಮಘಮಲು ನಮ್ಮನೆಯಲ್ಲೂ
ತುಂಬಿಕೊಳ್ಳುತ್ತಿತ್ತು.
ಬಂಡಿಹಬ್ಬದ ಬೆಂಡು ಬತ್ತಾಸು, ಕಜ್ಜಾಯಗಳೆಲ್ಲ
ಅವರ ತಿಂಡಿಡಬ್ಬ ತುಂಬಿಕೊಳ್ಳುತ್ತಿತ್ತು.
ದೊಡ್ಡವರಾದೆವು ನೋಡಿ
ಮನೆ ಜೋಪಡಿಗಳಿಲ್ಲ ಈಗ
ಬರಿಯ ಬಂಗೆಲೆಗಳೆದ್ದಿವೆ.
ಮನೆಮುಂದಿನ ಗಿಡಮರಗಳಲ್ಲಿ
ಹೆಣಗಳು ನೇತಾಡುತ್ತಿವೆ
ಹಿತ್ತಲ ಕೆರೆಯಲ್ಲಿ ಕೊಳೆತ ಶವದ
ವಾಸನೆಗೆ ನೈದಿಲೆಗಳು ಕಮರಿವೆ.
ನಿತ್ಯ ಹುಟ್ಟುವ ಸೂರ್ಯ ಇಂದು
ಪೂರ್ವಕ್ಕೆ ಏಳುತ್ತಾನೆ
ಆಂಜನೇಯನಿಗೆ ಅಡ್ಡ ಬಿದ್ದರೆ
ಆಯಸ್ಸು ಮಿಗುತ್ತದೆ.
ಅಮ್ಮ ಚಿಕ್ಕಂದಿನಲ್ಲಿ ಹೇಳಿದ್ದು
ಸುಳ್ಳಾಗುತ್ತಿದೆ- ಬತ್ತಿ ಬೆಳಗಲು ಹೋದವ ಹೆಣವಾದದ್ದು ಕೇಳಿ.
ಗಂಟೆ ಜಾಗಟೆ, ಜಾ ನಮಾಜ್ ಎಲ್ಲೆಂದರಲ್ಲಿ
ಉರಿದು ಹೋದವು. ಕೆಂಡ ಇಂಗಳವಾದವು
ಆ ಕೈಗಳೆಲ್ಲ ಈಗ ಕತ್ತಿ ತಲವಾರಗಳನ್ನೆ ತೊಟ್ಟಿವೆ.
ರಹೀಮನ ಮನೆಯ ಸಿರಕುರಮಾ
ನಮ್ಮನೆಯ ಬೆಂಡು ಬತ್ತಾಸು ಪರಸ್ಪರ
ಮಾತು ಬಿಟ್ಟಿವೆ, ತಪಶೀಲು ಜಾರಿಯಾಗಿದೆ.
[ ಹೊನ್ನಾವರದಲ್ಲಿ ಪರೇಶ ಮೆಸ್ತ ಸಾವಿನ ಹಿನ್ನೆಲೆಯಲ್ಲಿ ಬರೆದಿದ್ದು]
****
ರೆಪ್ಪೆ ಮುಚ್ಚಿದ ಮೇಲೆ
ಬೆಂಕಿ ಘೀಳಿಟ್ಟಿತು. ಮುಚ್ಚಿದ ರೆಪ್ಪೆಗಳಲ್ಲೇ
ಅಡಗಿತು ಬಿಕ್ಕಳಿಕೆ
ಸದ್ದಿಲ್ಲದ ಚೀತ್ಕಾರ ರಾತ್ರಿ ನೀರವತೆಯ ನಡುವೆ
ಉಕ್ಕಿದ್ದು ಅನ್ಯರ ನೋಯಿಸಲಲ್ಲ.
ತಾನೇ ಬೇಯಲು, ಕೈಯಾರೆ ಅಟ್ಟಿದ
ಅನಲ ಕುಡಿ ಒಳಗೊಳಗೆ ಭುಗಿಲೆದ್ದು
ನವೆದ ಕರುಳ ತಂತುಗಳು
ಸೋಕಬಾರದು ಈ ಜ್ವಾಲೆ
ನೆರಳು ಕೂಡಾ ಆಚೆ ತೀರ
ಯಾವ ಬಣ್ಣದ ಮೋಹ
ಹಂಸ ಗಮನ ಮಾಯಾ ಸರೋವರ
ಆ ತೀರದ ಬಯಕೆ
ಸೆಳೆದೊಯ್ಯಲಿ ಬಿಡು ಅನ್ಯರ
ತಡೆಗಿಲ್ಲಿ ಗೋಡೆಗಳಿಲ್ಲ, ಬಲೆಗಳಿಲ್ಲ
ಬೆಂದ ಹೃದಯದ ತುಣುಕ ಬಿಟ್ಟು.
ಉರಿಬಿದ್ದ ಎದೆಯ ನೋವಿಗೆ ಹೊರಟ
ದ್ವೇಷಕ್ಕೆ ತುಟಿಮೀರಿ ಬಂದ ನುಡಿಗೆ ಹಳಹಳಿಕೆ
ಎಲ್ಲರಂತಾಗುವುದೇ?
ಎದೆಗಿಳಿದ ಭರ್ಚಿ ತೆಗೆದರೂ
ಅಲ್ಲೆ ಬಿಟ್ಟರೂ ನೋವು ಸಾಯುವುದಿಲ್ಲ
ಬಯಸಿದ್ದೆಲ್ಲ ಸಿಕ್ಕ ಭ್ರಮೆಯ ಸೊಗಸು
ಅಂಗೈಗೇರಿದ ಸಂತಸದುಂಡೆ
ಪುಡಿಗಟ್ಟಿದ ಹತಾಶೆ.
ಮೊದಲಬಾರಿ ಸೋತ
ನರಕದ ಸಂಭ್ರಮ
ಈ ತೀರ ಆ ತೀರ ಮಾತುಬಿಟ್ಟ
ತರುವಾಯ ರೆಪ್ಪೆ ಮುಚ್ಚಿದ ಕಣ್ಣುಗಳು
ಹುಡುಕಬಹುದು ಕಳೆದುಕೊಂಡ ನೀಲಿ ದಿನಗಳ
-ನಾಗರೇಖಾ ಗಾಂವಕರ
ಬಾರೋ ಗೋವಿಂದ
ಇಂದು ಬರುವೆಯಾ ತಂದೆ ಶ್ರೀಹರಿಯೆ ಗೋವಿಂದ
ಎಂದು ಕಾಯುತಲಿರುವೆ ಮುಖತೋರೋ ಮುಕುಂದ
ಅಂದ ಕಣ್ತುಂಬಿಕೊಳಲು ಕಾತರಿಸಿರುವೆ
ನಂದಗೋಪಾಲ ನಿನ್ನ ಲೀಲೆ ಪಾಡಿರುವೆ
ಕಂದನಂದದಿ ನಲಿದೊಲಿದು ಬಾರಯ್ಯ
ಚಂದದಾಟವನಾಡಿ ನಗುತ ಎನ್ನೆಡೆಗೆ
ಇಂಗದ ಯಾತನೆ ಎಂದಿಗೆ ಮುಗಿವುದೋ
ಭಂಗದ ಜೀವನ ಎತ್ತಣ ನಡೆವುದೋ
ರಂಗ ನಿನ್ನಂದವ ಕಾಣದೆ ಎನಗೆ ಜಗದ
ಸಂಗದೊಳಿನಿತು ಸೊಗಸಿಲ್ಲ ಸುಖವಿಲ್ಲ
-ನಂದೀಶ್
ಚಿಟ್ಟಾಣಿ
ರಂಗದಂತರಂಗವೇ ಎದ್ದು ಮೊರೆದಂತೆ
ಕಡಲಲೆಯೇ ಕಾಲ್ತಳೆದು ಕುಣಿದಂತೆ
ಅಲ್ಲಿ ರಂಗಸ್ಥಳದಲ್ಲಿ – ಚಿಟ್ಟಾಣಿ !
ಕೌರವನೇ
ದುಷ್ಟಬುದ್ಧಿಯೇ ಕೀಚಕನೇ ಭಸ್ಮಾಸುರನೇ
ಅದು ವೀರವೇ ರೌದ್ರವೇ ಶೃಂಗಾರ
ಭೀಭತ್ಸವೇ ಹೆಸರೇಕೆ ಬೇಕು ರಸಕೆ
ಮೈಯ ಕಣ ಕಣದಲ್ಲು ಕುಣಿತ ಅಭಿನಯ
ವೇಷ ಕಣ್ಕಟ್ಟಲ್ಲ ಪಾತ್ರವೇ ತಾನಾಗಿ
ತೊಟ್ಟಾಗ ಕಳಚಿದಾಗ ಫಲ ತುಂಬಿ-
ದ ತರುವಿನಂತೆ ಬಾಗಿದ ವಿನಯವಾಗಿ
ಸರಿದರಿ ನೇಪಥ್ಯಕ್ಕೆ ; ಕರೆ ಬಂದಂತೆ ಬೇರೆ
ರಂಗದ್ದು : ಹೆಜ್ಜೆ ಗುರುತುಗಳೇ ಹೇಳಿ
ಕಾಣುವುದು ಕಾಣಿಸುವುದು ಹೇಗೆ ನಿಮ್ಮ
ತೋರಿಸಿದಂತೆ ನೇಸರನ ಹಚ್ಚಿ ಹಿಲಾಲು !
( ಇತ್ತೀಚೆಗೆ ಮರೆಯಾದ ಯಕ್ಷ ಶಿಖರ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ನೆನಪಿನಲ್ಲಿ)
* ಗೋವಿಂದ ಹೆಗಡೆ
ತಬ್ಬಲಿ ಮನದ ಮಾತು
ಅಪ್ಪ ನೀನೆಲ್ಲಿ ಅಮ್ಮ ನೀನೆಲ್ಲಿ
ಕರುಳ ಕುಡಿಯು ನಾನಿಲ್ಲಿ
ಮಾಡಲೇನೂ ತೋಚದಿಲ್ಲಿ
ನಿಮ್ಮೊಲವಿಲ್ಲದ ಬದುಕಿನಲ್ಲಿ.
ಕಾಲನ ಕರೆಗೆ ಓಗೊಟ್ಟಿರೇಕೆ
ಕಂದನ ಕರೆ ಕೇಳದಾಯಿತೇಕೆ
ಮಣ್ಣಲ್ಲಿ ಮಣ್ಣಾಗಿ ಹೋದೀರೇಕೆ
ಕಂದನ ತಬ್ಬಲಿ ಮಾಡಿದಿರೇಕೆ
ಇರಲಿ ಸಹಿಸಬೇಕು ಬಂದುದ ಹೀಗೆ
ತಡೆಯಲೆಂತು ವಿಧಿಯಾಟವೇ ಹಾಗೆ
ನಿಮ್ಮೊಲವ ನೆನಪ ಬಲವೇ ನನಗೆ
ಆಧಾರ ಸ್ತಂಭವು ಎಂದೂ ಬದುಕಿಗೆ.
ಬೆಳೆಸಿರುವೆ ಅಮ್ಮಾ ನೋವರಿವಾಗದಂತೆ
ಮುನ್ನಡೆಸಿದೆ ಅಪ್ಪಾ ಬದುಕು ತಿಳಿಯುವಂತೆ
ಕಸುವಿದೆ ಛಲವಿದೆ ನಿಮ್ಮೊಲವ ಬಲವಿದೆ
ಹೇಡಿಯಂತಿರಲಾರೆ ಕನಸ ನನಸಾಗಿಸದೆ.
ಬುವಿ ಮಡಿಲಲಿ ಸೇರಿ ಹಸಿರಾಗಿ ಬಂದು
ನೆರಳಾಗಿ ಇರುವಿರಲ್ಲ ಮರವಾಗಿ ಬೆಳೆದು
ತಿಳಿವೆನಿದು ಪ್ರೀತಿಯ ಶುಭಹಾರೈಕೆಯೆಂದು
ಬದುಕುವೆ ಒಲವ ಫಲಗಳ ಸವಿ ಸವಿದು.
-ಅನ್ನಪೂರ್ಣಾ ಬೆಜಪ್ಪೆ
ಹೂವು ಹೂವಿಗೂ ನಲುಮೆಯ ಬಣ್ಣ
ನಲಿದು ನಲಿದು ಇಟ್ಟವ ನೀನು!
ಹೂಮನಕೆ ಒಲುಮೆಯ ಬಣ್ಣ
ಉಲಿದು ಉಲಿದು ಕೊಟ್ಟವ ನೀನು!
ಆಗಸಕೆ ನೀಲಿಯ ಬಣ್ಣ
ಈ ಭುವಿಗೆ ಹಸಿರಿನ ಬಣ್ಣ!
ಬಣ್ಣವೂಡಿದವ ಮೊದಲಿಗ ನೀನು
ಬಣ್ಣ ಆಡಿದವ ಮೊದಲಿಗ ನೀನು!
ತಾರೆಗಳಿಗೆ ಹೊಳಪಿನ ಬಣ್ಣ !
ಮೋಡಗಳಿಗೆ ಮಸುಕಿನ ಬಣ್ಣ!
ಕಣ್ಣುಗಳಿಗೆ ಕನಸಿನ ಬಣ್ಣ!
ಬಣ್ಣದೊಡೆಯ ಮನದೊಡೆಯ ನೀನು!
ನೋವಿಗೊಂದು ನಗುವಿನ ಬಣ್ಣ!
ಸಾವಿಗೊಂದು ಅಳುವಿನ ಬಣ್ಣ!
ಎದೆಯ ಗಾಯಕೆ ಮರೆವಿನ ಬಣ್ಣ!
ಮಾಯೆಯೊಳು ಬಣ್ಣ ನೋಡುವವ ನೀನು!
ಎದೆಯ ಕುದಿಗೆ ಮೌನದ ಬಣ್ಣ!
ಸೊಗದ ಕ್ಷಣಕೆ ಮಾತಿನ ಬಣ್ಣ!
ಜಗವ ತುಂಬಿ ವಿಸ್ಮಯ ಬಣ್ಣ!
ಶ್ರೀ ಹರಿ ನಿನ್ನ ಕಣ್ಬೆಳಕೇ ಬಣ್ಣ!
-ಹಟ್ಟಿ ಸಾವಿತ್ರಿ ಪ್ರಭಾಕರ ಗೌಡ
ಮೋಕ್ಷ ಮಾರ್ಗ
“ಮೋಕ್ಷವೆಂದರೆ ದುಃಖ ಲೇಶವೂ ಇಲ್ಲದ
ನಿತ್ಯ ನಿರತೀಶಯ ಆನಂದ” ಎಂದು ಓದಿದ ಮೇಲೆ
ಮೋಕ್ಷ ಮಾರ್ಗದಲ್ಲಿ ಪ್ರವೃತ್ತನಾಗುವುದೆಂದು ತೀರ್ಮಾನಿಸಿ;
`ಚಂಚಲ’ ಮನಸ್ಸನ್ನು `ನಿಶ್ಚಲ’ ಮಾಡಿ
`ಭೋಗ’ದಿಂದ ಯೋಗದೆಡೆ ಸಾಗುವ ಎಂದು,
ಕಾಮ-ಕ್ರೋಧ;
ಮೋಹ-ಲೋಭ;
ಮದ-ಮತ್ಸರ
ಗಳನ್ನು ನಿಯಂತ್ರಿಸಿ,
ಗೋ-ಬ್ರಾಹ್ಮಣ ಸಂರಕ್ಷಣೆ;
ನಮಸ್ಕಾರ ಪ್ರದಕ್ಷಿಣೆ;
ಶ್ರಾದ್ಧ ಪಕ್ಷ ಆಚರಣೆ
ಮಾಡುತ್ತಾ,
ಹಾಡು-ಪೂಜೆ-ಭಜನೆ;
ಗುರುವಾರಕ್ಕೊಮ್ಮೆ ಗುರು ಆರಾಧನೆ;
ಮಾಡುವುದೆಂದು ನಿರ್ಧರಿಸಿ,
ಚಿನ್ಮಯನಂತೆ ತನ್ಮಯನಾಗಿ;
ಸದಾ ದೇವರನ್ನು ಭಜಿಸಿ;
ನೇಮ-ನಿತ್ಯ ಪಾಲಿಸಿ;
ಧಾನ-ಧರ್ಮ ನೀಗಿಸಿ;
ಬೆಳ್ಳುಳ್ಳಿ ಈರುಳ್ಳಿ ತ್ಜಜಿಸಿ…..
ಅಷ್ಟರಲ್ಲೇ ಇವಳು ಸಾಯುಂಕಲದ ಅಲ್ಪೋಪಹಾರಕ್ಕೆಂದು
ಬಿಸಿ ಬಿಸಿ ಕಾಂದಭಜಿ ಹಾಗೂ ಚಹಾ ತಂದು
ನನ್ನನ್ನು ಕೇಳದೆ ಟಿವಿ ಆನ್ ಮಾಡಿದಾಗ
“ಜಿಂದಗಿ ಏಕ್ ಸಫರ್ ಹೈ ಸುಹಾನಾs …….
ಬರುತ್ತಾ ಇತ್ತು
ಕಿಶೋರ್ ಕುಮಾರ್ ನ ಹಾಡಿನ ಬ್ಯಾಗ್ರೌಂಡಿನಲ್ಲಿ
ಬಿಸಿ ಬಿಸಿ ಚಹಾದ ಜೊತೆ ಕಾಂದಭಜಿಯ ರುಚಿ ಸವಿಯುತ್ತಾ….
ಯಾವದೆ ಉಪವಾಸ ವನವಾಸವಿಲ್ಲದೆ ಅನುಭವಿಸುತ್ತಿರುವ ಈ ಮೋಕ್ಷ
ಕಾಣದ ಆ ಮೋಕ್ಷಕ್ಕೆ ಕಿಚ್ಚು ಹಚ್ಚೆಂದ……
ಮೋಕ್ಷ ಮಾರ್ಗದ ತೀರ್ಮಾನ ಸಧ್ಯಕ್ಕೆ ಪೋಸ್ಟ್ ಪೋನ್ !!
-ಸತ್ಯಬೋಧ ಬಾ ರಾಯಚೂರ
ಪರಿಸ್ಥಿತಿ
ಉಸಿರಾಡುವ ಗಾಳಿಯನ್ನು ಸಹ
ಸ್ವಚ್ಛವಾಗಿಸದ ಕಲ್ಮಶ ಬದುಕು ಶೂನ್ಯ
ಎಲ್ಲೆಲ್ಲೂ ಒಳಸಂಚುಗಳ ಪಿತೂರಿ ಸೈನ್ಯ
ಬೇತಾಳನಂತೆ ಬೆನ್ನು ಹತ್ತಿದ ಮೌನ
ಗಂಭೀರವಾಗಿ ನಿಂತಿರುವ ರಾಡಿಗಳ ಮಲಿನ
ಉತ್ಸಾಹದ ಉಲ್ಲೇಖಕ್ಕೆ ಬರಡು ಜಾತ್ರೆಗಳು
ಭರವಸೆಗಳಲ್ಲೆ ಕಾಲ ಕಳೆಯುವ ಆ ಮುಗಿಲ ಸನ್ನೆಗಳು.
ಗರಡಿಯ ಅಂಗ ಸಾಧನೆಯ ಸಮಷ್ಟಿಗಳು
ವಿಚಿತ್ರ ಬಗೆಯ ಪರಸ್ಪರ ಹಗೆಗಳು
ನೊಂದರು ಹಠವಿಲ್ಲದ ಅಲೆಮಾರಿಗಳು
ಜಗದ ಕಪಿ ಮುಷ್ಟಿಗೆ ಸಿಲುಕಿದ
ಸಮಷ್ಟಿ ಹೀಗಿರುವಾಗ,
ನಮ್ಮ ನೆಲೆಯೆ ನಮಗೆ ನೆನಪಿಲ್ಲ
ಸಂದ ಕಾಲದ ಅರಿವಿಲ್ಲ
ಬರಿ ಕೂಳಿನ ಕಾಳಗದಲ್ಲೆ
ಗೇಣು ಬಟ್ಟೆಗಳಲ್ಲೆ
ಇದು ನನ್ನದು ಅದು ನಿನ್ನದು ಎಂದು
ಭೂಮಿಗೆ ಗೆರೆ ಎಳೆಯುವುದರಲ್ಲೆ
ಕಚ್ಚಾಡುತ್ತಿದ್ದೇವೆ
ಮುಂದೆ ಹೋದರೆ ಹಿಂದೆ ಕಾಲೆಳೆವ
ಬದುಕಿದರೆ ಕಣ್ಣಲ್ಲಿ ನೋಡದ
ಕೆಟ್ಟರೆ ಕೈಯಲ್ಲಿ ಹಿಡಿಯದ
ಸಂದಿಗ್ಧ ಪರಿಸ್ಥಿತಿ ಎದುರಾಗಿದೆ.*
– ಸಂತೋಷ ಟಿ ದೇವನಹಳ್ಳಿ
*ಅವನು ದೇವರಲ್ಲ*
ಇನ್ನೆಷ್ಟು ಕಾಣಬೇಕು
ಕೊಲೆ ಸುಲಿಗೆ ಅತ್ಯಾಚಾರ
ಧಾರಾವಾಹಿಗಳ
ಸಂಚಿಕೆಯಂತೆ
ದಿನದ ಮೂರು ಹೊತ್ತು
ನೂರು ಬಾರಿ
ಕೌತುಕದ ಕಥೆಯಂತೆ
ಹುಟ್ಟಿಕೊಳ್ಳುವ ಸುದ್ದಿ ಸಂತೆ
ಮತ್ತೆ ಮತ್ತೆ ನೋವ ಗೆರೆ
ಹಣೆಯ ತುಂಬಾ
ಉದುರುವ ನಾಲ್ಕು ಹನಿ
ಕಣ್ಣಾಲಿಗಳಿಂದ
ಅವು ಬಿಸಿಯೆ,
ಬೇಗ ಆರುವುದು
ಪ್ರತಿಭಟಿಸೊ ಶಕ್ತಿ
ಸೋತು ನಿಂತಿದೆಯೆ?
ಬೆಲೆ ಇಲ್ಲದೆ
ಸೊರಗಿ ಹೋಗಿರಬಹುದೇ?
ಬರೇ ಮೂಗವೇದನೆ
ಕಾಣದು,ಕೇಳದು
ದೊರೆಗಳಿಗೆ
ಧ್ಯಾನಸಕ್ತರಾಗಿರಬೇಕು
ವೋಟಿನ ಮಂತ್ರದಲಿ
ತೀರದ ದಾಹವ ಹೊಂದಿ
ಬೋಧಿ ವೃಕ್ಷವಿಲ್ಲ
ಜ್ಞಾನೋದಯಕೆ
‘ರಾಜ’ಕಾರಣ
ಮುಗಿಯದು ಬಿಡಿ
ಸರ್ಕಾರ-ಕಾನೂನು
ಬಿಟ್ಟು ಬಿಡಿ ಸಾಕು
ಅಲ್ಲಾ, ದೇವರುಗಳೆಲ್ಲಿ?
ಅನ್ಯಾಯ,ಅಧರ್ಮಕೆ
ಅವತಾರವೆತ್ತವೇ?
ಪಂಚಾಮೃತದಲೇ ತೃಪ್ತಿ,
ಕೋಳಿ ಕುರಿಗಳ ಆಸೆ
ದರ್ಬಾರು ಗುಡಿಯಲ್ಲಿ
ದೇವರಿಗೂ ರಾಜಕಾರಣ
ಮೆತ್ತಿರಬಹುದೇ?
ಮೈಯ್ಯಾಳಿಕೆ ಆಗಿದೆಯೇ?
ದೇವರಿದ್ದಾನೆ!
ಎಲ್ಲವ ನೋಡುತ
ನಾಲ್ಕು ಗೋಡೆಯೊಳಗೆ
ದೀಪ,ಧೂಪಗಳ ನಡುವೆ
ಅಭಿಷೇಕಕೆ ಅಣಿಯಾಗಿ
-ಮಂಜು ಹೆಗಡೆ
ತ್ಯಾಗ
ತುಂಬಿ ತುಳುಕುತಿದೆ ಮನುಜನ ತುಂಬ
ತಾನು ತನ್ನದು ಎಂಬ ಸ್ವಾರ್ಥ
ತನ್ನದೊಂದಲ್ಲದೇ ಪರರದೂ ತನ್ನದೇ
ಎಂಬ ದುರಾಸೆಯ ಸ್ವಾರ್ಥ
ತ್ಯಾಗ ಅಮರ ಪ್ರೀತಿ ಮಧುರ
ಎಂಬ ಮಾತು ನಡೆ ಅಪರೂಪ
ಪನ್ನಾದಾಯಿ ಎಂಬ ದಾಸಿ
ಈ ಅಪರೂಪದ ಪ್ರತಿರೂಪ
ಇದ್ದಳೊಬ್ಬ ದಾಸಿ ನಿಷ್ಟೆಯಿಂದ
ಸೇವೆ ಗೈಯ್ಯುತ ರಾಣಾಸಾಂಗಾನ ಆಸ್ಥಾನದಲಿ
ಹಿತಶತ್ರುಗಳಿಂದ ಬಂದಿತ್ತು ಕುತ್ತು ರಾಜಹಸುಳೆ ಉದಯಸಿಂಗನಿಗೆ
ತಿಳಿದ ದಾಸಿ ಮರುಗಿದಳ್ನೋವಿನಲಿ
ರಕ್ಷಿಸಲೇ ಬೇಕೆಂದು ಪಣತೊಟ್ಟ ದಾಸಿ
ಬದಲಾಯಿಸಿದಳು ಕಂದಮ್ಮರ ಮಲಗಿದಲ್ಲಿ
ಕಾಪಾಡಲು ಆ ಅರಸಕುವರನ
ತುಂಬಿ ಕಳಿಸಿದಳು ವ್ಯಾಪಾರದ ಬುಟ್ಟಿಯಲಿ
ಹೆತ್ತಕರುಳಿನ ಜೀವ ದುಷ್ಟರ ಸ್ವಾರ್ಥಕೆ ಬಲಿಯಾಗಿ
ಹೆತ್ತವಳ ಸಂಕಟ ತಾಳಲಾರದೇ
ಕಣ್ಣೀರ ಧಾರೆಯಾಗಿ
ಹರಿದರೂ ಸಹಿಸಿ ತುಟಿ ಕಚ್ಚಿ ನೋವ ನುಂಗಿ
ಕಾಪಾಡಿದಳಾಕೆ ರಾಜಕಂದನ
ನಿಸ್ವಾರ್ಥ ದಾಸಿಯಾಗಿ
ದುರುಳರಿಗೆ ಬಲಿಯಿತ್ತು ಕರುಳಬಳ್ಳಿ ಚಂದನನ
ಕಾಪಾಡಿದಳು ಉತ್ತಮ ರಾಜ್ಯವ
ತ್ಯಾಗದ ಬೆಲೆ ಅರಿಯದ ಮನುಜ
ತಿಳಿಯಲೇ ಬೇಕು ಪನ್ನಾದಾಯಿಯ ಮಹತ್ವವ
****
ನೀನಲ್ಲವೇ ಗೆಳೆಯ ನೀನಲ್ಲವೇ
ನಡುರಾತ್ರಿಯಲಿ ಬಂದು
ಬರಸೆಳೆದು ಬಿಗಿದಪ್ಪಿ
ಗಲ್ಲಕೊಂದು ಮುತ್ತನಿತ್ತು
ಮುದ್ದಿನಿಂದ ರಮಿಸಿದವ
ನೀನಲ್ಲವೇ ಗೆಳೆಯ ನೀನಲ್ಲವೇ..
ಗಾಢನಿದ್ದೇಲಿದ್ದ ಮನಕೆ
ಮಿಲನ ಮಹೋತ್ಸವದ ಬಯಕೆ
ಚುಂಬಿಸಿ ಬಣ್ಣಿಸಿ ಸರಸಕೂಟದಿ
ಕರಗಿ ನೀರಾಗಿಸಿದ ಜೀವ
ನೀನಲ್ಲವೇ ಗೆಳೆಯ ನೀನಲ್ಲವೇ..
ಮತ್ತೇರಿಸುವ ಮುತ್ತನಿತ್ತು
ಜಿಹ್ವೆಯೊಳಗಣ ಸಾರವ ಹೀರಿ
ಉಸಿರೊಳಗೆ ಉಸಿರ ಬೆರೆಸಿ
ಕಪೋಲ ರಂಗೇರಿಸಿದ ರಸಿಕ
ನೀನಲ್ಲವೇ ಗೆಳೆಯ ನೀನಲ್ಲವೇ
ಬಂಗಾರದೊಡವೆ ತೊಡಿಸಿ
ಸಿಂಗಾರದೂಟ ಉಣಿಸಿ
ಶೃಂಗಾರದಾಟದಲಿ
ಕಚಗುಳಿ ಇಟ್ಟು ನಗಿಸಿದವ
ನೀನಲ್ಲವೇ ಗೆಳೆಯ ನೀನಲ್ಲವೇ..
ಬಾಳೆಂಬ ತೋಟದಲಿ
ಉಯ್ಯಾಲೆ ಆಡುತ್ತ
ಕನಸಿನ ಮಹಲಲಿ
ಜೋಗುಳವ ಹಾಡಿದವ
ನೀನಲ್ಲವೇ ಗೆಳೆಯ ನೀನಲ್ಲವೇ..
-ನಾವೆ
ನಾಗವೇಣಿ ವೆಂ ಹೆಗಡೆ ಹೆಗ್ಗರ್ಸಿಮನೆ
ಬೆಳೆಗೆ ಬೇಲಿಯೇ ಶತ್ರುವಾದಾಗ.
ಬೆವರ ಹನಿಗಳು ಬೇಲಿಯ ದಾಹ ನಿಂಗಿಸಲು ಸಾಹಸ ಪಡುತ್ತಿವೆ.
ಫಸಲನ್ನು ಕಾಯಬೇಕಾದ ಬೇಲಿ
ಅದರ ಬುಡವನ್ನೇ ಬಲಿ ಕೋರುತ್ತಿದೆ.!
ಇಲಿ,ಹೆಗ್ಗಣಗಳನ್ನು ತಡೆಯಲೆಂದು ಬೇಲಿ ಸುತ್ತಿದರೆ,
ಅವುಗಳ ಸೇವೆಯನ್ನೇ ನೆಚ್ಚಿಕೊಂಡು,
ಕುಚ್ಚಿನೊಳಗೆ ನೊಗೆಯನ್ನು ಸಿಕ್ಕಿಸಿಬಿಟ್ಟಿತು
ಕಾಯುವ ಅಂಚಿನ ಹೊಸತೊಡುಗೆ ತೊಟ್ಟು!!
ಬೇಲಿಯ ಬೊಗಳು ಹೊರಗಿನವರ ಮೆರುಗುಗಾಗಿ,
ಕೊರಗಿದವರನ್ನು ಬಿಳಲು ಕೊರೆದು ಒಳಗೆ ತಳ್ಳಿ ಬಿಕ್ಕುವಂತೆ ಮಾಡಿದೆ.
ಮೋಸದ ಹೊಳಪನ್ನು ಬೆಳಕೆಂದು ತೋರಿ, ಭಾವುಕತೆಯನ್ನು ಬಳಸಿ.!!
ಬೇಲಿಗೆ ವಿಸ್ತರಿಸಲು ಬಲು ಉತ್ಸುಕ,
ಹೊಲವ ಮಾರಿಯಾದರೂ ಗೆಲುವು ಪಡೆಯಬೇಕು,
ಬೆಳೆಯ ನಡುವೆ ಬರೀ ಗೋರಿಗಳ ನಿರ್ಮಿಸಿ.
ಕಟ್ಟುವವನಿಗಿಂತ ಕದಡುವವನ ಸಹವಾಸದಿಂದ.!!
ಬೇಲಿಯ ನಂಬಿದ ಬಡ ಪೈರು ಸೊರಗಿ ಮರುಗುತ್ತಿದೆ.
ಪಸೆಯನು ಬಯಸಿ ಬೇರು ಸುಟ್ಟಿದರೂ ಪಯಣ ಬೆಳೆಸಿದೆ.
ಸೆಂಟಿನ ಗಮ್ಮತ್ತು ಗೆದ್ದಿದೆ ಮಣ್ಣಿನ ಫಲವತ್ತಿನ ಮುಂದೆ
ಬೆವರ ಹನಿಗೆ ಕಣ್ಣೀರು ಜೊತೆಯಾಗಿಸಿದರು ಬೇಲಿಯ ಜೊತೆಗೂಡಿದವರು.!!
ಬೇಲಿಯ ಬಹು ಪರಾಕ್ ಇನ್ನೆಷ್ಟು ದಿನ
ಮಣ್ಣಿಂದ ಹುಟ್ಟಿದ ತುತ್ತು ತಿನ್ನಲೇ ಬೇಕು ,
ಬದಲಾಯಿಸುವ ಕಾಂಚಣದ ರೂಪವಲ್ಲ,
ಕೂತ ಆಸನವನ್ನಂತೂ ಅಲ್ಲವೇ ಅಲ್ಲ. !!
-ನರಸಿಂಹಮೂರ್ತಿ ಎಂ.ಎಲ್
ಅಲ್ಲಮಪ್ರಭು ವಚನೋದ್ಯಾನ ಪ್ರವೇಶ
ಕಬ್ಬಿಣದ ಕಡಲೆಯಂತಿದ್ದ ಅಲ್ಲಮನ ವಚನಗಳು
ಸುಲಿದ ಬಾಳೆಯ ಹಣ್ಣಿನಂತಾಯ್ತು
ಓಂಕಾರ ಮೂರ್ತಿಯವರ ಸುಭಗ ವ್ಯಾಖ್ಯೆಗೆ ಸಿಲುಕಿ.
ಯೋಗ ಶಾಸ್ತ್ರಗಳ ಹಿನ್ನೆಲೆ ಜೊತೆಗೆ ಆಧುನಿಕ ವಿಜ್ಞಾನ
ವಿಷಯಗಳು ಮೇಳೈಸಿ ಪುಷ್ಟಿಗೊಂಡಿತು ಅರ್ಥ.
ಬೆಡಗು ಬೆರಗುಗಳೆಲ್ಲ ದಿನಗಳೆದಂತೆ ನಿಚ್ಚಳವಾಯ್ತು.
ಅಚಲ ಬಂಡೆಯ ಹಾಗೆ ಅಲ್ಲಮನ ಧೀರ ನಿಲುವು
ಅವನೇನೆ ನುಡಿದರೂ ಗುರಿಯೆಡೆಗೆ ಬಿಟ್ಟ ಬಾಣದ ಹಾಗೆ
ಮರ್ಮ ಭೇದಕ, ನೇರ, ದಿಟ್ಟ, ದ್ವಂದ್ವ ರಹಿತ ಅದ್ವೈತದುಕ್ತಿ.
ಅನ್ಯರ ಹೊಗಳಿಕೆ, ತೆಗಳಿಕೆ ಅವನಿಗೆ ಸೂತಕದ ಮಾತು
ಇದ್ದುದನು ಇದ್ದಂತೆ ಹಲವು ಉಪಮೆ ದೃಷ್ಟಾಂತಗಳ ಮೂಲಕವೆ
ತಾ ಕಂಡ ನಿರಾಳ ನಿರೀಶ್ವರ ಗುಹೇಶ್ವರನ ಬಟ್ಟ ಬಯಲಲ್ಲಿಟ್ಟು
ಬೆಳಕಿನೊಳಗಣ ಬೆಳಕ ಜಗದ ಜನರಿಗೆ ತೋರಿಸುವ ಕೈಮರ ಅಲ್ಲಮ
ಸ್ಥಾವರದಲ್ಲಳಿಯದೆ ನಿಜದ ನಿಜದೆಡೆ ನಡೆದ ನಿಜಶರಣ ಜಂಗಮ.
-ಮಾ.ವೆಂ.ಶ್ರೀನಾಥ
ಮಂಕು
ಅದೇಕೋ…
ವದನ ಕಪ್ಪಿಟ್ಟ ಅಮಾವಾಸ್ಯೆ,
ಅದೋ…ಲೊಚಗುಡುವೆ
ಎಲ್ಲಿಹೋಯಿತು ಹಾಲಿನಂಥ ನಗೆ!
ಕರಗಿದ್ದ ಚಂದಿರನ
ನಾನೇ ಶಪಿಸಿದೆನೇ..?ಕರೆದಾಗ ಬಾರದಿರೆ,
ಮತ್ತೆಂದೂ ನಗದಿರಲು!
ಯಾರಮೇಲಿನ ಕ್ರೋಧ..
ಏಕೀ…. ದುಗುಡ?
ವಿಷವಿಕ್ಕಿದರೂ ಸದ್ರಸ ವನುಣಿಸಬಾರದೇ?
ಸಿರಿಧನವು ತೃಣಮಾತ್ರ
ಅದರಿಂದ ನಿನ್ನಳೆವುದೇ…ಛೇ..!
ಬಿಡುಬೇಸರ,ಸಜ್ಜನಿಕೆಗಿಂಥ ಮಿಗಿಲಿಹುದೇ?
ಆಸೆಗಿಲ್ಲವೋ ಶಕ್ತಿ..ತೃಪ್ತಿಗಿಹುದು
ಸೇಡಿನಿಂ, ಹಿರಿತನವು ಪ್ರೀತಿಅಹುದು
ಸಹಕಾರ -ಸಹಬಾಳ್ವೆ ಜಾಣತನವು
-ಯಶಸ್ವಿನಿ ಪುರಂದರ್.
ಓ ಹೌದಾ , ಚಂದದ ‘ಫ್ಯಾಮಿಲಿ’ ನಿಮ್ಮದು
ಭಾರೀ ಚಂದ ಬಂದಿದೆ ಪಟ
ನೀವು ನಿಮ್ಹೆಂಡ್ತಿ ಮಗು
ಇರಲಿ ಸಂತೋಷ ನೂರ್ಕಾಲ ಬಾಳಿ
‘ಫ್ಯಾಮಿಲಿ’ಯೊಂದಿಗೆ ಖುಷಿ ಖುಷಿಯಾಗಿರಿ
ಏನಂದಿರಿ, ನನ್ನ ‘ಫ್ಯಾಮಿಲಿ’ ಪಟವೇ ?
ಕ್ಷಮಿಸಿ, ನನ್ನೊಂದಿಗೆ ನನ್ನ ಕುಟುಂಬದ ಪಟವಿದೆ !!
ಏನಂದಿರಿ, ಹಾಗಂದ್ರೆ ಒಂದೇ ಅರ್ಥವೆಂದೇ !? ಕ್ಷಮಿಸಿ
ಒಂದ್ನಿಮಿಷ ತಡೀರಿ ತೋರಿಸುವೆ.
ನೋಡಿ ಇದು ನಮ್ಮ ಕುಟುಂಬದ ಪಟ
ಇದು ನನ್ನ ತಂದೆ-ತಾಯಿ ಅಜ್ಜ-ಅಜ್ಜಿ,
ಏನಂದಿರಿ ? ಹಾ ಹೌದು ಹಿರಿಯರಿದ್ರೆ ಪುಸ್ತಕ ಭಂಡಾರವಿದ್ದಂತೆ
ದಾರಿ ತಪ್ಪಲು ಬಿಡೋದೇ ಇಲ್ಲ !!
ಇದು ನಾನು, ನನ್ಹೆಂಡ್ತಿ, ನಮ್ಮಕ್ಳು,
ಹಾ ಹೌದು ಇದು ತಮ್ಮ, ಅವನ್ಹೆಂಡ್ತಿ ಅವನ ಮಕ್ಳು
ಪಕ್ಕದಲ್ಲಿರೋದು ತಂಗಿ ಬಾವ
ಹೂಂ ಹೌದು ಮದ್ವೇ ಆಗಿದೆ !!
ಆದ್ರೂ ಏನಂತೆ, ನಾವೇನು ಅವ್ರಿಗೆ ಮಾರಿದ್ದಲ್ಲ ಅಲ್ವ ?ಹ್ಹ ಹ್ಹ ಹ್ಹ
ತಂಗಿ ಮನೇಲಿದ್ರೆ ದಿನವೂ ಹಬ್ಬ .
ಹೋ ಇದುವಾ, ಅದೆಲ್ಲ ಕುಟುಂಬದ ಮಕ್ಕಳೇ
ಇದು ದೊಡ್ಡಪ್ಪನ ಮಕ್ಕಳು
ಇದು ಚಿಕ್ಕಪ್ಪನದ್ದು, ಇದು ಅತ್ತೆಯ ಮಕ್ಕಳು
ಹೂಂ ನಮ್ಮ ಹತ್ತಿರದಲ್ಲೇ ಇರೋದು
ಮನೆಗಳು, ಮನಸ್ಸುಗಳು.
ಹಾ ಹಣೆಗೆ ಬೊಟ್ಟು ಇಟ್ಟ ಮಕ್ಕಳಾ ?
ಹೂಂ ಇವರೂ ಕುಟುಂಬಿಕರೇ
ಶಿವಪ್ಪಜ್ಜನ ಮೊಮ್ಮಕ್ಕಳು
ಇದು ನೋಡಿ ನಮ್ಮ ಟಿಂಟು ನಾಯಿ
ಮೊನ್ನೆ ಇದರ ತಾಯಿ ತೀರಿ ಹೋಯಿತು
ಅವತ್ತೆಲ್ಲ ಯಾರಿಗೂ ಊಟ ಸೇರಿಲ್ಲ.
ಇವೆರೆಡು ಬೆಕ್ಕು ಮನೆತುಂಬಾ ಓಡಾಡಿಕೊಂಡೇ ಇರುತ್ತೆ ಹ್ಹ ಹ್ಹ
ಈ ಬದಿಯಲ್ಲೊಂದು ಬಾಲ ಕಾಣಿಸ್ತಿದಿಯಲ್ಲ
ಮೊನ್ನೆ ಹುಟ್ಟಿದ ಆಡಿನ ಮರಿಯದ್ದು
ಪಟ ಕ್ಲಿಕ್ಕಿಸುವಾಗ ಓಡಿಹೋಯಿತು
ಹೋ ಕ್ಷಮಿಸಿ ಸುಸ್ತಾಯಿತಾ ?
ನಮ್ಮ ಕುಟುಂಬ ಸ್ವಲೂಪ ದೊಡ್ಡದು
ಸರಿ ಇನ್ನೊಮ್ಮೆ ಸಿಗುವೆ
ಮನೆಗೆ ನೆಂಟರು ಬಂದಿದ್ದಾರಂತೆ
ಹೋಗಿಲ್ಲಾಂದ್ರೆ ಅಜ್ಜ ಬೊಬ್ಬೆ ಹೊಡಿತಾರೆ ಹ್ಹ ಹ್ಹ
ಬರ್ತೀನಿ
~ಬಾಪು ಅಮ್ಮೆಂಬಳ