ಹೋಗಬಾರದಿತ್ತು!
ಆತ್ಮೀಯ ಸ್ನೇಹಿತ
ರೂಮ ಪಾರ್ಟನರ್
ಧೀಢರನೆದ್ದು
ಹೊರಟೇ ಹೋದ
ಏನನ್ನು ಹೇಳದೆ ಕೇಳದೆ
ಎಲ್ಲಿ ಕಳೆದು ಹೋದನೋ ಗೊತ್ತಿಲ್ಲ
ಆಕಾಶಕ್ಕೆ ಹಾರಿದನೋ,
ಭೂಮಿಯೊಳಕ್ಕೆ ಹೂತು ಹೋದನೋ,
ಕಾಡಿಗೆ ಹೋದನೋ,
ಸುಡಗಾಡಕ್ಕೆ ಹೋದನೋ ಗೊತ್ತಿಲ್ಲ
ಹೋಗಿದಂತೂ ನಿಜ ನಮ್ಮನ್ನು ಬಿಟ್ಟು
ಈ ಖೋಲೆ ಬಿಟ್ಟು ಇನ್ನೆಲ್ಲಿಗೋ
ಅವನಿಗೆ ಅದೇನಾಯಿತೋ
ಯಾಕಾದರು ಮನಸು ಬದಲಿಸಿದನೋ
ಇನ್ನೂ ಇರುತ್ತೇನೆಂದವನು
ಸಡ್ಡನ್ನಾಗಿ ಎದ್ದು ಹೋಗೇ ಬಿಟ್ಟ
ದೈವಾಧೀನನಾದನೆಂದೋ
ಸ್ವರ್ಗವಾಸಿಯಾದನೆಂದೋ
ಜನ ಹೇಳುತ್ತಿದ್ದಾರೆ ನಂಬಲಾಗುತ್ತಿಲ್ಲ
ಆತ್ಮೀಯರು ಅಳುತ್ತಿದ್ದಾರೆ
ಆಗದವರು ನಗುತ್ತಿದ್ದಾರೆ
ಹೋಗುವದೇ ಆಗಿದ್ದರೆ ಅಟ್ಲಿಸ್ಟ
ಒಂದು ಮಾತು ಹೇಳಬಹುದಿತ್ತು
ಹೇಳಿ ಹೋಗಬೇಕಿತ್ತು ಕಾರಣ
ಅನಾಥಪ್ರಜ್ಙೆ ಮೂಡಿಸಿ ಹೀಗೇ
ರೂಮಿನ ಗೋಡೆಗಳ ತುಂಬ
ಅಳಕಿಸಲಾರದ ನೆನಪುಗಳು ಗೀಚಿ
ರೂಮಿಗೆ ಕೊಟ್ಟ ಡಿಪಾಜಿಟ್ ಹಣ ಕೂಡ
ಹಿಂದಿರುಗಿ ಪಡೆಯದೆ
ಬರಬೆತ್ತಲಾಗಿ, ಬರಗೈಯಲಿ
ಚಪ್ಪಲಿನೂ ಇಲ್ಲೇ ಬಿಟ್ಟು
ಹೀಗೆ ಹೊರಟು ಹೋಗಬಾರದಿತ್ತು
ನಮ್ಮನ್ನೆಲ್ಲ ಮರೆತು
ಮುಗಿಯದ ವೇದನೆ ಕೊಟ್ಟು ಹೀಗೆ
ಒಮ್ಮಿದೊಮ್ಮೆಲೇ
ಹೋಗಬಾರದಿತ್ತು! ಹೋಗಬಾರದಿತ್ತು!!
– ಅಶ್ಫಾಕ್ ಪೀರಜಾದೆ
ಅಡುಗೆ ಮನೆಯಲ್ಲಿ….
ಅಡುಗೆ ಮನೆಯೇ ಇದು….
ಇಲ್ಲಿ…..
ಏನು ತಾನೇ
ನಡೆಯುವುದಿಲ್ಲ ಹೇಳಿ…..
ಉಪ್ಪು ಹುಳಿ ಖಾರ
ಸಮ ಪ್ರಮಾಣದಲಿ ಬೆರೆಸುವ ಜಾಣ್ಮೆ
ಕಲೆಯಾಗಬೇಕು
ರಸಾಯನದ ಮೂಲ ತತ್ವಗಳು
ರಾಸಾಯನಕ್ಕೂ ಬರಬೇಕು
ರುಚಿ ಶುಚಿಯೆಂಬ ಪೂರ್ವ ಪಾಠ ಕಲಿತು
ತಾನು ಪಕ್ವವಾಗದೆ
ಪಕ್ವಾನ್ನ ತಯಾರಾಗದು
ತಾನು ಉರಿಯದೆ
ಉರಿ ತಾಗದು
ಅಪ್ಪನಿಗೆ ಹುಳಿಯೆಂದರೆ ಪಾಷಾಣ
ಮಗನಿಗದು ಪಂಚಪ್ರಾಣ
ಮಗಳಿಗೆ ಖಾರವೆಂದರೆ ಆಗುವುದಿಲ್ಲ
ಅಜ್ಜಿ ತಾತರಿಗೆ ಉಪ್ಪು ಕೊಡುವಂತಿಲ್ಲ
ಸಿಹಿಯೆಂದರೆ ಎಲ್ಲರ ಕಣ್ಣೂ ಊರಗಲ
ಯಾವುದೂ ಅತಿಯಾಗಬಾರದೆನ್ನುವ
ಅರಿವು ಮಾಡಿ ಬಡಿಸುವ ಕೈಗಳಿಗೆ
ಸಾಸಿವೆ ಸಿಡಿಯುತ್ತದೆಂದು
ಪುಟಿಯುವಂತಿಲ್ಲ
ಒಲೆ ಮೇಲಿನ ಕುಕ್ಕರಿನಂತೆ
ರಣಕಹಳೆಯೂದುವಂತಿಲ್ಲ
ಕುದಿಯುವ ಸಾರಿನಂತೆ
ನೊರೆ ಹಾಲಿನಂತೆ
ಉಕ್ಕುವಂತಿಲ್ಲ
ಬೆಂದು ಹದವಾಗಬೇಕು
ಟೀ ಯಂತೆ….. ಕುದ್ದು
ನಿಧಾನ ಬಣ್ಣ ರುಚಿ ಘಮ
ಬಿಟ್ಟುಕೊಳ್ಳುತ್ತಾ ಸವಿಯಾಗಬೇಕು
ಅಥವಾ….
ಫ್ರೀಜರಿನೊಳಗೆ ತಂಪಾಗುತ್ತಾ
ಘನೀಭವಿಸಿ ಕಲ್ಲಾಗಬೇಕು….
ಇಲ್ಲಾ… ಸ್ವಂತದ ಆಕಾರವಿಲ್ಲದೆ
ಹಲಬಗೆಯ ಆಶಯಗಳ ಸಾಕಾರವಾಗುತ್ತಾ
ಭೇಶ್ ಎನ್ನಿಸಿಕೊಳ್ಳಬೇಕು…
ಏನಾಗುವುದಿಲ್ಲ ಹೇಳಿ
ಅಡುಗೆ ಮನೆಯಲ್ಲಿ….
ರಕ್ತ ಮಾಂಸದ ದೇಹ
ಯಂತ್ರವಾಗುವುದೂ ಇಲ್ಲಿಯೇ….
ಮೂರ್ತದ ವಸ್ತು
ಶಕ್ತಿ ಮೀರಿ
ಶಾಖ ಹೀರಿ
ಅಮೂರ್ತದ ಉಗಿಯಾಗಿ
ಹೊಗೆಯಾಗುವುದೂ
ಇಲ್ಲಿಯೇ….
ರೂಪ ಬದಲಾದರೂ
ಏನಾದರೊಂದು
ಆಗಿ
ಉಳಿಯುವುದು
ಉಳಿದಿರುವುದೂ
ಸಹ….
ಶಕ್ತಿಯ
ನಿತ್ಯತೆಯ ನಿಯಮ….
-ಆಶಾಜಗದೀಶ್
ಪಡುವಣದ ಪರ್ವ
ಸಂಧ್ಯೆಯ ಗಗನದಿ ಬಣ್ಣದ ಬೆಡಗಿನ
ತೇಲು ಮೋಡಗಳ ಚಿತ್ತಾರ;
ಮೊರೆತದ ಕಡಲಲಿ ವರ್ಣದ ಅಲೆಗಳ ಅಬ್ಬರ.
ಬಾನು-ಕಡಲುಗಳ ಮಿಲನದ ಪಥದಲಿ
ರವಿಯಾಗಮನವೇ ಈ ಚೆಲುವು;
ಮೇಘ ಸಮೂಹಕೂ ಬಣ್ಣದ ಪೋಷಣೆ
ಕಿತ್ತಳೆ ಕೆಂಪು ಅರಿಶಿಣವು.
ಬಣ್ಣದ ತೇರಿನ ಮೊರೆತದ ಸಾಗರ
ಸೂರ್ಯನ ಸ್ಪರ್ಶಕೆ ಬಿರುಸಾಗಿ,
ರವಿಯನೇ ತನ್ನೊಳು ಐಕ್ಯಗೊಳಿಸಿದೆ
ಹೋಲುವ ಲಾವಾರಸವಾಗಿ.
ಪಡುವನದೊಳಗಡೆ ಕಾಮನ ಹುಣ್ಣಿಮೆ
ಹೃದಯದ ನಯನಕೆ ಮೋಹಕವು;
ಬಾನಿನೊಡಲಲೆ ವರ್ಣ ವಿಭಜನೆ
ಬಾನೇ ಗಾಜಿನ ಪಟ್ಟಕವು.
-ಶ್ರೀಕಲಾ ಹೆಗಡೆ
ಹರಾಜಿಗಿವೆ, ಬೇಕಾಗಿದ್ದಾರೆ !
ಹರಾಜಿಗಿವೆ
ಇಂದೋ ನಾಳೆ ಇಲ್ಲವಾಗಿಬಿಡುವ
ಇಂದು ಇದ್ದು ಇಲ್ಲದಂತಿರುವ
ವೃದ್ದಾಶ್ರಮಗಳ ಬಾಗಿಲ ಶೂನ್ಯ ದಿಕ್ಕ ನೋಡುತ್ತಿರುವ ಮುದಿ ಜೀವಗಳು
ಬೇಕಾಗಿದ್ದಾರೆ
ಅವನ್ನು ಅಪ್ಪುವ ತಡರುವ ಕೈಗಳು
ನಗಿಸುವ ಸಾಂತ್ವನಿಸುವ ಪ್ರೀತಿಸುವ ಮಿಗಿಲಾಗಿ ಸಮಯ ನೀಡುವ ಮುಕ್ತಿಗಳು
ಹರಾಜಿಗಿವೆ
ರೋಡಿನಂಚಲ್ಲಿ ನಿಂತು ದಿಟ್ಟಿಸುವ
ಮನೆಯಲ್ಲಿದ್ದು ದಿಕ್ಕಪಾಲಾಗಿರುವ
ಸುಖ ಥೈಲಿಗಳ ಕಾದು ಕುಳಿತ ಹಸಿ ಹಸಿ ಎಳೆ ಮೈಗಳು
ಬೇಕಾಗಿದ್ದಾರೆ
ಸುಖದ ಉತ್ತುಂಗಕ್ಕೆ ಕರೆದೊಯ್ಯುವ ನರ ಕುದುರೆಗಳು
ಮೈ ತೆವಲ ತೀರಿಸಿಕೊಳ್ಳುವ ಕುಬೇರರುಗಳು
ಹರಾಜಿಗಿವೆ
ಸಿಗ್ನಳುಗಳಲ್ಲಿ ಉಸ್ಸೆಂದು ಉಸಿರು ಬಿಡುವ ಗಾಡಿಗಳ ಮಧ್ಯೆ ಉಸಿರುಬಿಡುತ್ತಾ
ಎಳೆ ಕೈಗಳಲ್ಲಿ ಪೇಪರು ವಾಚು ಹೂಗಳ ನಗು ಚೆಲ್ಲುತ್ತಾ
ಚೂರು ನೋಟುಗಳಿಗೆ ನಿಮ್ಮ ಕಾರಿನ ಕಿಟಕಿಗಿಣುಕುವ ದೈನ್ಯ ಕಣ್ಣುಗಳು
ಬೇಕಾಗಿದ್ದಾರೆ
ಅವುಗಳಿಗೆ ನಗು ಚೆಲ್ಲುವ
ಚೂರು ನೋಟು ಹಂಚಿ ಅವುಗಳ ಕನಸು ಕೊಳ್ಳುವ ನಿಜ ಗಿರಾಕಿಗಳು
ಹರಾಜಿಗಿವೆ
ಫೈಲು ಪ್ರೊಫೈಲುಗಳ ಹೊತ್ತ ಆಸೆ ಕನಸುಗಳ ಹೊತ್ತ
ನಿರ್ದಯಿ ಇಂಟರ್ವ್ಯೂ ಗಳ ನಿರ್ದಯಿ ಆಡಿಶನ್ನುಗಳ
ಹಾದಿ ತುಳಿದು ಕಂಗಾಲಾಗಿ ಆಕಾಶ ದಿಟ್ಟಿಸುವ ಡಿಗ್ರಿಗಳು ನಟನೆಗಳು
ಬೇಕಾಗಿದ್ದಾರೆ
ಖಾಲಿ ಜೇಬುಗಳಿಗೆ ಕೆಲಸ ಕೊಡುವ
ಖಾಲಿ ಕಣ್ಣುಗಳಿಗೆ ಕನಸ ಬಿತ್ತುವ ಪ್ರೊಡಕ್ಷನ್ ಹೌಸುಗಳು ಬಂಡವಾಳಶಾಹಿ ದಾಹಗಳು
ಹರಾಜಿಗಿವೆ
ಯುವ ಪದವೇ ಕಳೆದುಹೋದ
ಮಗ ಸೊಸೆ ಮಗಳು ಅಳಿಯ ರೆಲ್ಲ ನಗರಗಳಿಗೆ ಸೆಟ್ಟಲಾದ
ಮಕ್ಕಳ ಹಾದಿ ಹಬ್ಬಗಳ ಹಾದಿ ಹುಟ್ಟು ಸಾವುಗಳ ಸರದಿ ಕಾಯ್ದು ನಿಂತ ಊರುಗಳು
ಬೇಕಾಗಿದ್ದಾರೆ
ನೆಲಕ್ಕೆ ನೇಗಿಲು ತಾಗಿಸುವ
ಮಣ್ಣಿಗೆ ಮಕ್ಕಳಾಗುವ ಊರ ಬಾಗಿಲಿಗೆ ಮಾವಿನೆಲೆ ಹಚ್ಚುವ ಭರವಸೆಗಳು
ಹರಾಜಿಗಿವೆ
ರೋಗಗಳಿಗೂ ರೋಸಿಹೋಗುವ ಔಷಧಿಗಳಿಗೂ ನೆಮ್ಮದಿಭಂಗ ತರುವ
ಆಸ್ಪತ್ರೆಯ ವಾರ್ಡುಗಳ ಬೆಡ್ಡುಗಳಿಗೆ ಬೇಕರಿಯ ಬ್ರೆಡ್ ಗಳಿಗೆ ನಿತ್ಯ ಹಚ್ಚಿಕೊಂಡಿರುವ
ಶೂನ್ಯ ಕಣ್ಣುಗಳಲ್ಲಿ ಉಪ್ಪು ಕಣ್ಣೀರು ಸುರಿಸಿ ಸಾವಿರಾದಿ ಜನರನ್ನು ಇಂದೋ ನಾಳೆ ಅನಾಥವಾಗಿಸುವರು
ಬೇಕಾಗಿದ್ದರೆ
ನಾಳೆಯು ಅವರ ಕಣ್ಣುಗಳಿಗೆ ಸುರ್ಯೋದಯವಿದೆ ಎನ್ನುವ
ಬೆಡ್ಡು ಬ್ರೆಡ್ ಗಳಿಗೆ ಕೋನೆಹಾಡುವ ಚರಮಗೀತೆ ಹಾಡುವ ಜೀವಗಾಯಕರುಗಳು
-ಜಯರಾಮಾಚಾರಿ
ಗಜಲ
ಚಳಿ ನೆನಪು ಮತ್ತು ಅವಳು
ಸೌಂದರ್ಯೋಪಾಸನೆ ಎಂದರೆ ಕಾಯುವುದು ಅದು ಸುಡುತ್ತದೆ
ಸುಟ್ಟುಕೊಳ್ಳುವುದು ಎಂದರೆ ತಹತಹಿಸುವುದು ಅದು ಬದುಕಿಸುತ್ತದೆ
ಮಾಗಿಯ ಚಳಿಗೆ ನಿನ್ನ ನೆನಪುಗಳು ಸದಾ ಬೆಚ್ಚನೆ ಟೀ ಹಾಗೆ
ಒಂದೊಂದು ಗುಟುಕು ಒಮ್ಮೊಮ್ಮೆಯೂ ನಿನ್ನನ್ನು ಧ್ಯೇನಿಸುತ್ತದೆ
ಮೈ ಸುಲಿವ ರಕ್ಕಸ ಚಳಿ ಈ ಕಾಲದ ಒಂಟಿ ಆಟದಲ್ಲಿ
ಪೊರೆ ಕಳಚಿಟ್ಟು ಬೆಂಕಿಯ ಕಾವಿಗಾಗಿ ನಿನ್ನನ್ನು ಸೇರಲು ತವಕಿಸುತ್ತದೆ
ಕಾವು ಬೇಕಿರುವ ಮೊಟ್ಟೆಯ ಹಾಗೆ ಮಡಚಿದ ನನ್ನ ದೇಹ
ನಿನ್ನ ಧ್ವನಿಗೆ ಒಂದು ಸ್ಪರ್ಶಕ್ಕೆ ಮೂಗ್ಗರಳಿ ಹೂವಾಗುತ್ತದೆ
ನಿನ್ನ ತಪಸ್ಸಿನಲ್ಲಿ ಚಳಿ ನೆನಪುಗಳ ಜೊತೆ ಬೆಚ್ಚಗಾಗುವುದು
ಕೃಷ್ಣ ಮಾತ್ರ ಅವಳ ಸನಿಹಕ್ಕಾಗಿ ಕಾದು ಮಳೆಗಾಲ ಸುರಿಯುತ್ತದೆ
-ಕೃಷ್ಣ ಶ್ರೀಕಾಂತ ದೇವಾಂಗಮಠ
ಗೋಡೆಯಲ್ಲ
ಹಾಸಿ ಮಲಗಿದ ನೆಲವೂ
ಅಲ್ಲ ನಾನು
ಒದ್ದರೂ ಗುದ್ದಿದರೂ
ಅಲುಗದೇ ಬಿದ್ದಿರಲು
ಹರಿದ ಹನಿಗಳಿಗೆ
ಲೆಕ್ಕವಿಟ್ಟಿಲ್ಲ ಪುರುಸೊತ್ತೆಲ್ಲಿ?
ಒಳಗಿಂಗಿದ್ದು
ವ್ಯರ್ಥಹೋಗಲಿಲ್ಲ ನನಪುಣ್ಯ
ಹಳೆಯ ಹೆಜ್ಜೆಗುರುತುಗಳ
ಬಿಡದೆ ತೊಳೆದಿದೆ
ನಾನು ಅಜ್ಜಿಯಾಗಲಿಲ್ಲ
ಅಮ್ಮನೂ ಅಲ್ಲ
ನನಗೂ ಎರೆದಿದ್ದಾರೆ
ಅತ್ತೆಯಂತೆ ಅಕ್ಕನಂತೆ
ಸಹಿಸುವದ ಬಲ್ಲೆ
ಒಲ್ಲೆ ನಾನು
ಹಳಿವಿರೆಂಬ ಹಳಹಳವಿಲ್ಲ
ಹೊಡೆದರೆ ನೆಲಕಚ್ಚುವೆನೇ ?
ಮುಂದಲೆಯೂ ಗಟ್ಟಿ
ಕಿತ್ತುಬರದು ಹಿಡಿಗೂದಲು
ಹೆಡಮುರಿ ಕಟ್ಟುವಷ್ಟು
ಬಿದ್ದೆದ್ದು ಬಲಗೊಂಡಮೈ
ಹಿಸುಕಿದರೆ ಕೈ ಹೊಸಕಬೇಕು
ಸುತ್ತುಗಟ್ಟಿದ ಕೋಟೆ
ಬಿಟ್ಟುಹೋದ ಬಿರುಕು
ತೂರಿಬಿದ್ದಿದೆ
ಯಾವವ್ವೆ ಹಚ್ಚಿದ
ಬೆಳಕಿನ ತುಣುಕೋ
ಮಿಣುಮಿಣುಕು
ಒಳಗೀಗ ಸೀತೆಸಾವಿತ್ರಿಯರಿಲ್ಲ
ಅವರ ಪರಿಮಳವೂ ಇಲ್ಲ
ಸುಡುವೊಡಲ
ಕೂಸುಕಂದಮ್ಮಗಳ
ಎದೆಯಾಳ ದನಿ
ಹಕ್ಕುಗಳ ಕನಸಕಟ್ಟಿಕೊಂಡು
ಬರೀ ನಾನಿದ್ದೇನೆ
-ಪ್ರೇಮಾ ಟಿ ಎಮ್ ಆರ್
“ಬೆಂಬಿಡದ ಶನಿ”
ಬಯಕೆಯೆಂಬುದು ಇಂದು
ಬೆಂಬಿಡದ ಶನಿ…
ಮತ್ತಷ್ಟು ಮಗದಷ್ಟು,
ಅಲ್ಲಷ್ಟು ಇಲ್ಲಿಷ್ಟು
ಎಲ್ಲೆಲ್ಲೂ ಬೇಕೆನಗೆ..ಬರಿ ನನಗೆ….
ಕೂಡಿಟ್ಟ ಬೊಕ್ಕಸವ ಆಸೆಯಲಿ ಹುದುಗಿ,
ಬೊಕ್ಕವಾಗುವ ವರೆಗೆ ಬಯಕೆ ಬರಿ ಬಯಕೆ …..
ತಿನ್ನದೆ ನೀಡದೆ ತಡವರಿಸಿ
ನಶ್ವರದ ಬದುಕಿನಲಿ ಈಶ್ವರ ತಾನೆಂದು…
ಕೂಡಿಟ್ಟು ಕೂಡಿಟ್ಟು ಕೊನೆಗೊಂದು ದಿನ,
ಹುದುಗಿ ಹೋಗಿರುವುದು ಜೀವನ…
ಕೊನೆಗಾಲದಿ ಯಾರಿಲ್ಲ,
ಮಣ್ಣಲ್ಲಿ ಮಣ್ಣಾಗಲು ..
ಮಣ್ಣಲ್ಲೇ ಬಾಯ್ಮುಚ್ಚಲು,
ಅಲ್ಲಿಬರುವವರ್ಯಾರಿಲ್ಲ…
ಮುಚ್ಚಿಟ್ಟ ಬಚ್ಚಿಟ್ಟ,
ಹಣ ಹೊರದು ಹೆಣವ..
ನಾಲ್ವರಿಗೂ ಬೇಕಿಲ್ಲ
ಎಂದಾಗ ಮಾನವ ….
ಬಿಟ್ಟಿರಲು ಸರಿ ನೋಡು
ಸಿರಿತನದ ಮದವ..
ಕೊನೆಗಾಣಿಸು ಒಮ್ಮೆ
ಬೆಂಬಿಡದ ತನವ….
-ಗಾಯತ್ರಿ ಭಟ್
Chennagide kavite Asha -smitha