ಕಾವ್ಯಧಾರೆ

ಪಂಜು ಕಾವ್ಯಧಾರೆ

ಪಯಣ 
ನಿರರ್ಥಕ ಹಾದಿಯಲ್ಲಿ
ಅರ್ಥಹೀನ ಹಗಳಿರುಳುಗಳ
ಸೆಳುವಲ್ಲಿ ಯಾನ
ಹೊರಟ ದೋಣಿಯ ಪಯಣಿಗ

ತಲುಪಬೇಕೆನ್ನುವ ಗಮ್ಯ
ಇಲ್ಲದಂತೆನಿಸಿ ಬಿಟ್ಟ
ಗಾಳಿಯ ದಿಕ್ಕಿಗೆ
ಹೊಮ್ಮುವ ಅಲೆಗಳ ನಾಟ್ಯದೊಟ್ಟಿಗೆ
ಸಾಗುವ ಹುಚ್ಚು ಪಯಣಿಗ

ಬದುಕಿನ ನಾವೆ ಕಾಲದ
ಶರಧಿಯಲ್ಲಿ ಅಂಡಲೆಯುತಲೇ ಇದೆ
ಇಲ್ಲಿ ಸುಳ್ಳುಗಳನ್ನೇ ಸತ್ಯವೆಂದುಕೊಂಡ
ಸಹಯಾತ್ರಿಕರ ಹಿಂಡೇ ಇದೆ
ಸ್ವತಃ ವಂಚಿಸುತ್ತಾ ಸಾತ್ವಿಕತೆಯ
ಭೋದಿಸುವ ತಂಡೋಪ ತಂಡವೇ ಇದೆ

ಕಾಲದ ಸಾಗರ ಮಾತ್ರ
ತನ್ನೊಡಲೊಳಗೆ ಎಲ್ಲವನ್ನೂ ಹುದುಗಿಸಿಕೊಳ್ಳುತ್ತ
ಉಕ್ಕೇರುತ್ತಲೇ ಇದೆ ತಲೆತಲಾಂತರಗಳಿಂದ
ಹಲವು ಬಾರಿ ಒಡಲೊಳಗಿನ
ಕಿಚ್ಚನ್ನೆಲ್ಲ ಸುನಾಮಿಯಂತೆ ಹೊರಹಾಕಿ
ತನ್ನ ತಲ್ಲಣಗಳ ತೋರುತ್ತ ಹಗುರಾಗುತ್ತಾ

-ಪ್ರವೀಣಕುಮಾರ್ ಗೋಣಿ

 

 

 

 


ನಾ ಸುರಿಯುವ ಮಳೆಯಾಗಬೇಕಿತ್ತು

ಜಿನುಗುವ ಹನಿ ಕನವರಿಸುವ ಸಾಲು
ನೆನೆದು ಆಡುವ ಅವಳ ಇಷ್ಟಗಳ ಸೊಬಗು
ಮೂಡಿಸಿತು ಹೊಸ ಆಸೆಗಳ ಸೊಗಸು
ನಾ ಸುರಿಯುವ ಮಳೆಯಾಗಬೇಕಿತ್ತು

ಶುರುವಾಗುವ ಚಿಟಪಟ್ ಸೋನೆ ಸದ್ದಿಗೆ
ಬೆರಗುಗಣ್ಣ ಹೊರನೋಟ ಹಾಯಿಸಿ
ನುಣುಪಾದ ಪಾದಗಳ ಇಟ್ಟು ಮೆಲ್ಲಗೆ
ಸದ್ದಿಲ್ಲದೇ ಕಳ್ಳ ಹೆಜ್ಜೆ ನಿಂತ ನೀರ ಸೋಕಿ
ಭೂರಮೆ ಘಮ್ಮೆಂದು ಮೈ ಜುಮ್ಮೆನಿಸಿ
ವಯ್ಯಾರ ಹರಡಿ ಶೃಂಗಾರ ಹವಾಮಾನವು
ಮನ ಬಿಚ್ಚಿ ನಲಿಯುವ ಈ ಸುಂದರಿಗಾಗಿ
ನಾ ತುಂತುರು ಮಳೆಯಾಗಬೇಕಿತ್ತು

ಕೈ ಚಾಚಿ ಬೊಗಸೆಯಲ್ಲಿ ಹನಿಗಳ ಹಿಡಿದು
ಮುದ್ದಿಸಿ ದೂಡುವಾಗ ರಂಗಾದ ಪುಳಕ
ಎಲ್ಲೆ ಮೀರಿ ಜಾರಿ ಹೋದರು ಹೋದಿತು
ರೇಷ್ಮೆ ತ್ವಚೆಯ ಲಾವಣ್ಯವಳು ಕೋಮಲ
ಸ್ಪೂರ್ತಿಯಿಂದ ವಾತಾವರಣ ತಂಪಾಗಿ
ಕಂಗೊಳಿಸಿತು ಅಂದ ತುಂಬಿಕೊಂಡು
ನಗುತ್ತಾ ಹಾರಿ ಕುಣಿಯುವ ಸಡಗರಕ್ಕಾಗಿ
ನಾ ಬಳುಕುವ ಮಳೆಯಾಗಬೇಕಿತ್ತು

ಬಿಡದೇ ಹಣಿಯುವ ಹನಿ ಹನಿಯಾಗಿ
ಪುಟಿದೇಳುವ ಉತ್ಸಾಹದ ಕುರುಹಾಗಿ
ತೋಯಿಸಿದಂತೆ ಸ್ವಾತಿ ಮುತ್ತಿನ ಮತ್ತಲ್ಲಿ
ಮಿಂಚಿನ ಸಂಚಾರ ಎದೆ ಬಡಿತದಲ್ಲಿ
ನನ್ನ ಪ್ರೀತಿಯದು ಮುಗಿಲಿನ ಮಿಗಿಲು
ಮಳೆ ಮರುಳಾಗುವ ನಗೆಯ ಕೋಲ್ಮಿಂಚು
ಜಿಗಿದಾಡುವ ಅವಳು ಹರುಷದ ಹೊನಲು
ನಾನವಳ ಖುಷಿಯ ಮಳೆಯಾಗಬೇಕಿತ್ತು

ಬಸವರಾಜ ಕಾಸೆ


ಕೆಂಪು ಬೀದಿಯವಳು

ಗರ್ಭದಲಿ ಜೀವ
ಇಟ್ಟುಕೊಂಡು
ನರಳುವ ಜಯಾಮಾನ
ಅವಳದಲ್ಲ ..!!
ಏನಿದ್ದರು ಲೆಕ್ಕ
ಚುಕ್ತ, ಸೆರಗು
ಮತ್ತೆ ಹೆಗಲೇರಿ
ಜೇಬಿಗೆ ಕೈ ಬಿಸಿ ತಾಗುವಾಗ ..!

ಅಳುವುದಿಲ್ಲ ಕಣ್ಣೀರಿಗೂ
ಅಭ್ಯಾಸವಾಗಿದೆ ….
ದಿನ ನಿತ್ಯ ನೆತ್ತರಿನ
ಅತ್ತರಲಿ ಮುದುಡಿದ ಗುಲಾಬಿಯ ಕಂಡು ..!
ಅವಳ ನೋವು
ಬಲ್ಲವರು ಮಂಚ
ಮತ್ತು ಮನದ ನಡುವೆ
ವ್ಯತ್ಯಾಸ ಹುಡುಕುತ್ತಿದ್ದರು .!

ಆದರೆ,
ಅರ್ಥ ಮಾಡಿಕೊಂಡವರಾರಿಲ್ಲ
ಕೊಂಡು ಕೊಂಡಾಡಿದವರೆ …….
ಉಂಡವರಿಗೆ ಅರಿವಾಗಲಿಲ್ಲ
ಬೆಂದ ಜೀವದ ಬಾಳ ಹಾದಿಯ ಯಾತನೆ ..!
ಮುಳ್ಳುಗಳೂ
ನಾಚಿಕೊಳ್ಳುತ್ತವೆ
ಅವಳ ಕಾಲುಗಳಿಗೆ
ತಾಗಿಕೊಂಡಾಗ

ಚುಚ್ಚಿದ ನೋವಿಂಗಿಂತ
ನುಂಗಿದ ನೋವೆ
ಮಿಗಿಲಾದಾಗ ಹೌದು
ನುಂಗಿದ ನೋವೆ ಮಿಗಿಲಾದಾಗ..!!

ಗಣೇಶ್ ಅದ್ಯಪಾಡಿ

 

 

 

 

 


ಪ್ರೀತಿ ತಬ್ಬಿದ ದಿನ

ಅಂದು ನೀ ಬಂದ ದಿನ
ಈ ಹೃದಯದಿ ಸಿಹಿ ಸ್ಪಂದನ
ಮಾತುಗಳ ಮೌನ ಮರಮರ
ಕಣ್ಣಸನ್ನೆಯಲಿ ಪ್ರೇಮಾಂಕುರ

ಇದೇನಾತು ಹೇಗಾತು ಏನಿದು
ಅಂದುಕೊಳ್ಳುವ ಮುನ್ನ ಹೃದಯ
ಒಲವ ಮುನ್ನುಡಿ ಬರೆದಾಗಿತ್ತು
ಮನಸುಗಳ ಮಧುರ ಮಿಲನವಾಗಿತ್ತು

ದಿನದ ನಿಮಿಷಗಳಿಗಿಲ್ಲ ಪುರಷೊತ್ತು
ಸದಾ ಅವನದೆ ಕನವರಿಕೆಯ ಗಮ್ಮತ್ತು
ಕನಸುಗಳೆಲ್ಲ ಅವನಾಸೆಯ ಹೊತ್ತು
ಅವನಿಂದ ಪ್ರೀತಿಸಲ್ಪಡುತ್ತಿರುವೆ ಎಂಬುದೆ ಸಕತ್ತು

ಪುಟ್ಟ ಹೃದಯದ ಚಿಪ್ಪಿನಲಿ
ಅನುರಾಗದ ಅನುಬಂಧದಲಿ
ಪ್ರೀತಿಯ ಸುಧೆಯ ಹರಿಸಿದನು
ಎದೆಯ ತುಂಬ ಹೂಬಾಣವಾದವನು

ಅಂದು ಅವನಿಲ್ಲದಾಗ ಹೇಗೋ ಇದ್ದೆ
ಇಂದು ಅವನಿಲ್ಲದೆ ನಿಲ್ಲಲಾರದೀ ಜೀವ
ಬಾಳಿಗೆ ಬಯಕೆ ತುಂಬಿದ ಭಾವ
ಅಮೃತದ ಘಳಿಗೆ ನೀ ಬಂದ ಜಾವ

ವರುಷ ಸಂದಿತು ಸಖನೆ ಈ ದಿನ
ನಮ್ಮಿಬ್ಬರ ರಮ್ಯಸೋಪಾನಕೆ ಸುದಿನ
ಎರಡೂವರೆ” ಪ್ರೀತಿ”ಯಕ್ಕರದಿ ಅಕ್ಷಯದಿನ
ಮತ್ತೆ ನೆನೆಯುವ ಸಾಂಗತ್ಯದ ಶುಭದಿನ

ಮರೆಯದೆ ಗುಲಾಬಿಯಲಿ ರಂಗಾಗೋಣ
ಸಿಹಿಜೇನ ಮುತ್ತುಗಳ ಹೊಳೆಯಾಗೋಣ
ಬದುಕಿನ ರಸನಿಮಿಷಗಳ ಸವಿಯೋಣ
ಅಂದಿನ ನೆನಪನ್ನು ಸವಿಯಾಗಿಸೋಣ

ಜಯಶ್ರೀ ಭ. ಭಂಡಾರಿ.

 

 

 

 

 


ಬಯಲು ಸೀಮೆಯ ಕೊಕ್ಕರೆಗಳ ಸಂಭಾಷಣೆ

ಇಲ್ಲ.ಇಲ್ಲ..ಇಲ್ಲಿ ಎಲ್ಲವೂ ಇಲ್ಲ..
ಬಲ್ಲವರು ಬಲ್ಲಿರಾ ಮತ್ತೆ ಬದುಕುವ ಆಸೆ

ಹೇ ಗೆಳೆಯನೇ ಬಯಲು ಸೀಮೆ
ಬಡ ಬಾಗೇಪಲ್ಲಿ ಗಡಿ ಭಾಗದಲ್ಲಿದ್ದೇವೆ ನಾವಿಬ್ಬರು.
ಇಲ್ಲಿ ಮಿಡತೆಗಳಿರುವ ಗದ್ದೆಗಳಿಲ್ಲ,
ಮರಿಕಪ್ಪೆಗಳ ಜಿಗಿತವೂ ಕಾಣ್ತಿಲ್ಲ. !
ಉಣ್ಣಿ ಇರುವ ಕುರಿ ಮರಿಗಳ ಕುಣಿದಾಟವೂ ಇಲ್ಲ.
ತೆನೆಗಳ ತುಂಬಿದ ತೋಯ್ದಾಟವೂ ಇಲ್ಲ.

ಮರಿಮೀನುಗಳ ಮಹಾ ಸಮ್ಮೇಳನಾ
ವೇದಿಕೆಗಳು ಸ್ತಬ್ಧಗೊಂಡಿವೆ.
ಗವೆಗಳ ಗೊಡವೆಗಳು ಮಣ್ಣುಪಾಲಾಗಿವೆ..!
ಏಡಿಗಳ ಕೋಡುಗಳು ಮುರಿಬಿದ್ದಿವೆ,
ಜೇಸಿಬಿ ಕೋಡಿನಾರ್ಭಟ ಮುಂದುವರೆದಿದೆ.
ಹರಿಯುವ ಕೋಡಿ ಉರಿಯುವ ಧರೆಗೆ ಹೆದರಿದೆ.

ಕಾಣೆಗಳು ಪಸೆಯೂ ಇಲ್ಲ,
ರೈತಮಿತ್ರನ ಕಸಿಯೂ ಇಲ್ಲ.
ಕೆಸರಿನ ಕಮಲಗಳಿಲ್ಲ.!
ಮೊಸರಿನ ಮಡಿಕೆಯೂ ಇಲ್ಲ.
ಜಿನುಗುವ ಚಿಲುಮೆಗಳಿಲ್ಲ.
ಜೀಕುವ ಒಲುಮೆಗಳಿಲ್ಲ.

ನಾಳಿನ ಚಿಂತೆ ಚಿತೆಯಷ್ಟೆ ನಿಶ್ಚಿತ
ಇಂದಿನ ಕಂತೆ ಕೊರಗಿನಲ್ಲೆ ಅಂತ್ಯ!
ಮುಗ್ಗರಿಸಿದೆ ನೊಗೆಯಾಟ ಖುಷಿಯಿಲ್ಲದೆ
ಕಂಗಾಲಾಗಿರುವ ಸುಗ್ಗಿ ಕಾಣದ ಅನ್ನದಾತ.

ಹೀಗಿರುವಾಗ…….
ನಮಗೆಲ್ಲಿ ಹುಳಹುಪ್ಪಟದ ರಸದೌತಣ
ಮದುವೆ ಮೀನಿನ ಮಹಾಪ್ರಸಾದ…!
ನಾಲಗೆಯ ರುಚಿಗ್ರಹಿಕರು ಸಾಯುತ್ತಿದ್ದಾರೆ
ನಾವೆಲ್ಲರು ಸೇರುವ ಪಳಯುಳಿಕೆ ಪಟ್ಟಿಗೆ.!!
ನರಸಿಂಹಮೂರ್ತಿ ಎಂ.ಎಲ್

 

 

 

 


ಪಾರ್ಕಿಂಗ್ ಲಾಟ್ ಖಾಲಿ ಬಣಗುಡುತ್ತಿದೆ
ಚಾಲಕ ಯಾವುದೋ ಪರವಶತೆಯಲ್ಲಿ….

ಕಾರಿನ ಕಣ್ಣುಗಳು ಉರಿಗೆಂಪು ಜ್ವಾಲೆ
ಉಗುಳುತ್ತಿವೆ….
ನಿಂತು ತುಸು ಸುಮ್ಮನೇ ನೇತ್ಯಾತ್ಮಕ
ಕಲ್ಪನೆಗಳ ಗುಡಿಸಿ ಚೆಲ್ಲಿ ಉಸಿರೆಳೆಯಲೆಳೆಸುತ್ತದೆ….
ಪೆಟ್ರೋಲಿನ ಕಮಟು ವಾಸನೆ ….
ರಕ್ತ ಬಸಿಯುವ ಬಿಸಿಬಿಸಿ ಹಬೆ..
ಕಾರಿನ ತುಂಬ…

ನನ್ನದೆನ್ನುವ ಗಮ್ಯದಿರುವಿಕೆಯ
ಅಲ್ಲಗಳೆಯುತ್ತ ಕೊಂಕು ನಗೆ…
ಬೀರುತ್ತಾನೆ ಸ್ಟೇರಿಂಗ್ ಹಿಡಿದವನು…
ನೀನೊಂದು ಗಾಡಿ…. ನಿನಗೆ ಹೀಗೆಲ್ಲಾ
ಅನಿಸುವುದು ವಿಚಿತ್ರ ಎನ್ನುತ್ತಾನೆ…

ಒಮ್ಮೊಮ್ಮೆ ಅವನ ಸ್ಪರ್ಶ ಹಿತವೆನಿಸುತ್ತದೆ…
ಸ್ಪರ್ಶದ ಶುಷ್ಕತೆ ಅರಿವಿಗೆ ಬಂದಾಗ
ಕಣ್ಣುಗಳು ಇನ್ನಷ್ಟು ಉರಿಗಣ್ಣಾಗುತ್ತವೆ….
ಕಡುಗೆಂಪು ತೊಟ್ಟುಗಳು ಹಾದಿಯುದ್ದಕ್ಕೂ
ತುಳುಕುತ್ತವೆ….
ನನ್ನದೇ ಪಾದದಡಿ ನಲುಗಿದ
ಗರಿಕೆಯ ಮೇಲೂ…

ಇವನನ್ನು ತೊರೆದರೆ….
ಹೀಗೆಲ್ಲಾ ಯಾವುದೇ ಕಾರಣಕ್ಕೂ
ಅನಿಸಬಾರದಂತೆ….
ಅವ ಹೇಳಿದ್ದಾನೆ…
ಅನಿಸಿಯೇ ಬಿಟ್ಟರೆ….
ನಾ ತಿರುಗಿ ಅವನನ್ನೆಂದೂ ಕೇಳಲಿಲ್ಲ
ಈಗ ಅನಿಸಿಬಿಟ್ಟಿದೆ…
ಅವನಲ್ಲಿ ಹೇಳಿಯೂ ಇಲ್ಲ…

ಗೊತ್ತು….
ಅವನದ್ಯಾವಾಗಲೂ ಒಂದೇ ರಾಗ…
ಮತ್ತು…..
ಸೋಗುಡುವುದು ನನಗೆ ಚಟವಾಗಿಬಿಟ್ಟಿದೆ…
-ಆಶಾ ಜಗದೀಶ್

 

 

 

 


“ಒಡಲ ನುಡಿ”
ಪ್ರೀತಿ ಕಾಣದ ಹೃದಯಕ್ಕೆ
ಸಿಕ್ಕೇ ನೀನು.
ಸಿಕ್ಕ ಸಂತಸದಿ
ಕುಣಿದೆ.
ನನಗರಿವಿಲ್ಲದೇ ಹೃದಯದೊಳ್
ಮಾತನಾಡಿದೆ.
ಪ್ರತಿಕ್ಷಣವೂ ನಿನಗಾಗಿ
ತವಕಿಸಿದೆ.
ಪ್ರತಿ ದಿನವು ನಿನಗಾಗಿ
ದಾರಿ ಹುಡುಕಿದೆ.
ಮಧುರ ಮಾತಿಗಾಗಿ
ಚಡಪಡಿಸಿದೆ.
ನೂರೆಂಟು ಆಸೆ ಹೊತ್ತು
ಗೂಡು ಕಟ್ಟಿದೆ.
ಪ್ರತಿ ಕನಸು ನಿನದಾಗಲೆ0ದು
ದೇವರಲಿ ಬೇಡಿದೆ.
ನನ್ನೊಳಗೆ ಅಡಗಿರುವ
ಭಾವನಾ ಲಹರಿಯನು
ಕಾಗದದಿ ಗೀಚಿದೆ.
ಹೃದಯದ ಬರಹ ನೀಡಲು
ಹಾದಿಲಿ ಕಾದೆ
ನಿನ್ನ ಕಾಣದೆ ಕಂಗಲಾಗಿ
ಸದಾ ಜಪಿಸುತಿವೆ
ಒಡಲ ನುಡಿಗಳು.
-ಚೌಡ್ಲಾಪುರ ಸೂರಿ


ನಗು ಅರಳಿಸು

ನವಮಾಸಗಳು ತೂಗಿ ತೂಗಿ
ಲಾಲಿ ಹಾಡಿ ಗರ್ಭದೊಳಗೆ
ಮಲಗು ಕಂದ ಮಲಗು
ಕಾಯಕದ ಕೈಲಾಸಕೆ ದಾರಿ ನೂರು
ಕಲ್ಲ ನೆತ್ತಿಗೆ ಬಡಿದು ಚೂರು ಚೂರು
ಒಳಗೆ ನಿನ್ನ ಭಾರ ಹೊರಗೆ ಕಲ್ಲು ಭಾರ

ಒಂದೊಂದು ಸುತ್ತಿಗೆ ಏಟಿಗೂ
ಬೆಚ್ಚಿ ಒದೆಯುವ ನಿನ್ನ
ಒಡಲ ಸವರುವ ಅಭಯ

ಮಲಗು ಕಂದ ಮಲಗು
ಸುತ್ತಿಗೆ ಸದ್ದು ಲಾಲಿ ನಿನಗೆ
ಗರ್ಭ ಜಲದಿ ಈಜಿ ಈಜಿ
ಬೆಚ್ಚಗೆ ಮುದುರಿ ಮಲಗಿ
ಕನಸ ಕಾಣು ಚಂದ್ರ ಸಿಗುವನು

ಅಮ್ಮ ನುಡಿವ ಮಾತು ಸುಳ್ಳು
ಎಂದು ಜಗವ ನೋಡಲೆಂದು
ನನ್ನ ದಣಿಸಿ ಕಾಡಿ ಸಾವ ಮನೆ
ಹೊಕ್ಕಿಸಿ ಬಂದು ಬಿಟ್ಟೆ ಮಡಿಲಿಗೆ

ಈಗ ನೋಡು ಮಡಿಲ ಬದಲು
ಬೆನ್ನ ಹಿಂದೆ ಬಿಗಿದು ಕಟ್ಟಿ ನಿನ್ನ
ಸುತ್ತಿಗೆ ಏಟು ಜೋರು ಬೀಸಿ
ಕಲ್ಲ ಪುಡಿಯ ಮಾಡುವೆ
ಬೆವರು ಹರಿಸಿ ಹರಿಸಿ

ಬಡಾ ಬಡಾ ಏಟು
ಬಿದ್ದರಷ್ಟೆ ಕಲ್ಲಿಗೆ
ನಿನಗುಂಟು ಎದೆ
ಹಾಲ ದೀವಿಗೆ

ಸಾವಿರ ಉಳಿ ಪೆಟ್ಟು ಮೂರ್ತಿಗೆ
ನಗು ಅರಳಿಸು ಸುತ್ತಿಗೆ ಸದ್ದಿಗೆ
***

ಪುರುಷ ಪ್ರಕೃತಿ

ನೀನಿರುವ ತನಕವೂ
ನಾನು ಹೇಗಿದ್ದೆ
ನನ್ನದೇನಿತ್ತು ಅಲ್ಲಿ
ನೀನು ಮಾನ್ಯ
ನಾನೋ ಶೂನ್ಯ
ಎಲ್ಲವೂ ನಿನ್ನದೇ
ನೀ ಕೊಟ್ಟ ಉಸಿರು
ಮಿಸುಕಾಡುವ ಬಸಿರು

ನೀನು ಫುರುಷ
ಲೋಕೋದ್ಧಾರಣ
ನಾನು ಪ್ರಕೃತಿ
ಪಾದ ಧೂಳಿನ ಕಣ

ಎದೆಯೊಳಗಿನ ಪಲುಕು
ಮಿಣ ಮಿಣ ಮಿಣುಕು
ಕನಸೊಳಗಿನ ಬಿಂಬಕೂ
ನಿನ್ನದೇ ತಳಕು ಬಳಕೂ
ಒಡಲುರಿಯು ಉಕ್ಕದ ಕಡಲು

ನೀನಿಲ್ಲದ ನಾನೇ
ನಾನು ನಿರ್ಲಿಪ್ತೆ
ಬದುಕು ತಾದ್ಯತ್ಮ
ಎಲ್ಲಿಹನೊ ಪರಮಾತ್ಮ

ಅದೆಷ್ಟು ನಿರ್ದಯಿ
ಭಾವಗಳ ಕೊಲ್ಲುವ ದುರ್ವಿಧಿ
ಮನಸ್ಸಿನ್ನು ಶವ
ಸಂಸ್ಕಾರವಾಗ ಬೇಕಷ್ಟೆ
ಅಗ್ನಿ ಸ್ಪರ್ಶವೋ
ಮಣ್ಣಿಗಿಡುವೆಯೋ
ನಿನ್ನದೇ ಆಯ್ಕೆ
ಮುಗಿಯಿತಿನ್ನು

ನೆರಳು ಮಾತ್ರ ನಾನು
ಬಿಳಲುಗಳ ಜಾಳು
ನಿರ್ಜೀವ ಮನಸ್ಸು
ಸೂತಕದ ಕರೀ ಛಾಯೆ
ಮೋಹದ ಮಾಯೆ

ಮನವನು ಮುಚ್ಚಿದೆ
ವಿವಿಷ್ಣತೆಯ ಪೊರೆ
ಹರಿಯಲಾರದ ಹೊರೆ

ಇನ್ನೂ ಅದೆಷ್ಟು ದಿನ
ಈ ಚಿತೆಯ ಕಾವು
ಪುಟಿದೆದ್ದು ನಿಲ್ಲ ಬೇಕು
ಕೊಟ್ಟದ್ದನ್ನೆಲ್ಲ ಹೀರುವ

ಪಾರದರ್ಶಕವಾಗಲೇ ಬೇಕೆ ?
ಪಡೆದದ್ದನ್ನೆಲ್ಲ
ಹಿಂತಿರುಗಿಸುವ
ದರ್ಪಣವಾಗಲಾರೆನೇ.
***
-ಎನ್. ಶೈಲಜಾ ಹಾಸನ,

 

 

 

 


ಎಲ್ಲೋ ಕಳೆದೋದೆ ನಾನೀಗ, ನೀ ನಗುವಾಗ
ಪ್ರೀತಿ ಶುರುವಾಗೋದೇ ಹೀಗಾ
ಕನಸೆಲ್ಲ ನಿಜವಾದಂತೀಗ, ನೀ ಕಂಡಾಗ
ಪ್ರೀತಿಲ್ ಹೀಗಾಗೋದ್ ಸಹಜಾನ.

ಮುದ್ದಾದ ಆ ಮೊಗಕೆ, ಸರಿಸಾಟಿ ಯಾರಿಲ್ಲ
ನಿನ್ನಂದ ಹೊಗಳೋಕೆ ಪದಮಾಲೆ ಸಾಲಲ್ಲ
ಸನಿಹಾ ನೀನಿರುವ, ಕ್ಷಣವೆಲ್ಲ ಖುಷಿಗಾಲ

ನೀನಾಡೋ ಪ್ರತಿ ಮಾತು ಕವಿತೆ
ಕೇಳುತ ನಾ ನನ್ನನ್ನೇ ಮರೆತೆ
ಗೊತ್ತಿರದೆ ನನಗೀಗ ನಾನಿನ್ನಲ್ಲೇ ಕಳೆದೋದೆ

ನಿನ್ನೊಡನೆ ಹೊಸ ಕನಸು ಹೆಣೆದೆ
ನನ್ನೋಳು ನೀನೆಂದು ಕುಣಿದೆ
ನಿನ್ನ ಗುಂಗಲ್ಲೇನೇ ನಾ, ಪ್ರೀತಿಲ್ ಮುಳುಗೋದೆ

ಆಡೊ ಮಾತೆಲ್ಲ ತೊದಲು
ಹೀಗಾಗುತಿರಲಿಲ್ಲ ಮೊದಲು
ಏಕೋ ಈ ಥರಾ ಭೀತಿ ನನ್ನಲಿ
ಮನಸ ಮಾತ ಹೊರ ತರಲು

ಲೋಕ ಮರೆಸಿದ್ದು ನೀನಾ
ಪೂರಾ ನಿಂದೇನೆ ಧ್ಯಾನ
ಹೇಳಲಷ್ಟಿದೆ ಮಾತು ಸಾವಿರ
ನಿನ್ನ ಮುಂದೆ ಬರಿ ಮೌನ

ನಿನ್ನಿಂದ ಬಚ್ಚಿಟ್ಟ, ಗುಟ್ಟೇಲ್ಲ ನಿಂದೇನೆ
ಆ ಮಾತು ಹಾಡಾಗಿ, ಹೊಗಳೋದು ನಿನ್ನನ್ನೆ
ನನಗಾಗಿ ನೀನೆಂಬ, ಸುಳ್ಳಲ್ಲೂ ಖುಷಿ ನನಗೆ

ಜೊತೆಯಲ್ಲಿ ಬರಿ ನೀನೀರೆ ಸಾಕು
ನಿನ್ನ ಮಾತಿಗೆ ನಾ ಹೂಂ ಗುಡಬೇಕು
ನೋವು ನಲಿವು ಏನಿರಲಿ, ನೀ ಜೊತೆಗಿರಬೇಕು

ನಿನ್ನ ಕಿರುನಗೆ ಖುಷಿಯ ಬೆಳಕು
ಹೃದಯಕೆ ನಿನ್ನ ನೆನಪೇ ಮೆಲುಕು
ದೇವರು ನನಗೆ ಕಳಿಸಿದ ಹುಡುಗಿ ನೀನೇ ಇರಬೇಕು

ನನ್ನ ತುಂಬೆಲ್ಲ ನೀನು
ಮರೆತೆ ನನ್ನ ಹೆಸರೇನು?
ಎಲ್ಲೇ ಹೋದರು ನೀನೇ ಜ್ಞಾಪಕ
ನೀನೇನೆ ನನ್ನ ಉಸಿರಿನ್ನು

ಹೂವು ನಗುವಂತೆ ಮಳೆಗೆ
ಖುಷಿಯೇನೊ ನೀ ಕಂಡ ಘಳಿಗೆ
ಎಲ್ಲ ಹೇಳಿಯೂ ಬಾಕಿಯಾಗಿದೆ
ಒಂದು ಮಾತು ನನ್ನೊಳಗೆ

ಎದೆಯಲ್ಲಿ ಪ್ರತಿ ಬಡಿತ, ಕೂಗೋದು ನಿನ್ನನ್ನೆ
ನಾನಂತು ಕೈಬೊಂಬೆ, ಕುಣಿಸೋಳು ನೀ ತಾನೆ
ನನ್ನ ಪ್ರತಿ ಜನುಮ, ನಿನಗಾಗಿ ಬರೆದಿಡಲ

ಪಿಸುಮಾತು ಆಹಾ ಸಂಗೀತ
ನಸುನಾಚಲು ನೀ ಚಂದ್ರ ಸೋತ
ನಾನಿನ್ನು ನೋಡಿಲ್ಲ ಯಾರು ಚಂದ ನಿನಗಿಂತ

ಮನಸೇಳೋದು ನೀ ಬೇಕಂತ
ಕನಸಲ್ಲಿ ನೀ ನನಗೆ ಸ್ವಂತ
ಕೂಗಿ ಹೇಳಲ ನನ್ನ ಮುದ್ದು ಜೀವ ನೀನಂತ.

– ಅಮಿತ್ ಭಟ್

 

 

 

 

 


ಪ್ರೀ(ಭೀ)ತಿ.

ಉಸಿರುಗಟ್ಟಿದಂತಿದ್ದ
ಬದುಕಿನಲ್ಲಿ
ಚಿಗುರೊಡೆಯುವಂತೆ
ಮಾಡಿತ್ತು ಅವಳ
ಪ್ರೀತಿ-
ಯಾರ ವಕ್ರದೃಷ್ಟಿ
ಬಿತ್ತೋ ನಮ್ಮ ಮೇಲೆ!
ಚಿವುಟಿ ಹಾಕಿ
ಕೊಲ್ಲುತ್ತಿದೆ
ನಿತ್ಯವೂ ಮನೆಮಾಡಿ
ಮನದಲ್ಲಿ
ಭೀತಿ.

ಬಳಕೆ

ಬದಿಗಿಟ್ಟು ಮನಸಿನ
ನೂರಾರು ಯೋಚನೆ
ಕಟ್ಟಿಸಿದೆ ನಾನೊಂದು
ಮನೆಯನ್ನ
ಬದಿಗಿಟ್ಟ ನನ್ನ
ಯೋಚನೆಗಳಿಂದ
ಕಟ್ಟಿದಳು ನನ್ನಾಕೆ
ಪ್ರೇಮ
ಕವನವನ್ನ!

ಭಾವನೆ ಇಲ್ಲದಾ ಮೇಲೆ.

ಪದಪುಂಜವಿದ್ದರೇನು,
ಸುಲಲಿತ ಭಾಷೆಯಾದರೇನು
ವಾಕ್ಯ ವ್ಯಾಕರಣವಿದ್ದರೇನು?
ಭಾವನೆ ಇಲ್ಲದಾ ಮೇಲೆ
ಶುದ್ದ ಕವನವಾದೀತೇನು!

ಹಾರೈಕೆ.

ಚಲಿಸದ ಕಾಲದ
ನದಿಯಲ್ಲಿ
ನಿನ್ನ -ನನ್ನ
ಪ್ರೇಮದ ದೋಣಿ
ಎಡೆಬಿಡದೆ ಸಾಗಲಿ
ಪ್ರೀತಿಗೆ ಅಂತ್ಯವಿಲ್ಲ
ಎಂಬುದನು
ಮತ್ತೊಮ್ಮೆ ಅದು
ಈ ಜಗಕೆ ಸಾರಲಿ!

ವಾಸ್ತವ.

ನಿನ್ನೆಯಂತೆ ಇಂದು
ನಾನಿರುವುದಿಲ್ಲ –
ಅದ್ಯಾವ ನಂಬಿಕೆಯ
ಮೇಲೆ ಒಪ್ಪಿ ಆಕೆ
ಸತಿಯಾದಳೋ?!
ನನಗಿಂದೂ ಅರ್ಥವೇ
ಆಗಿಲ್ಲ!

ನಲ್ಲೆಗೆ ಸ್ವಾಗತ.

ಅಲ್ಲಿ ಇಲ್ಲಿ ಓಡುವ
ನನ್ನ ಚಂಚಲ
ಮನಸನು ನೀ
ನಿನ್ನಲ್ಲೇ
ಏಕಾಗ್ರವಾಗುವಂತೆ
ಮಾಡಿದೆಯಲ್ಲೇ …
ಹಾಂ!ಆಗಲೇ
ನಾನೂ ನೀನೇ
ನನ್ನ ನಲ್ಲೆಯೆಂಬುದನು
ಒಪ್ಪಿಕೊಂಡೆನಲ್ಲೆ!

ಶೂನ್ಯ.

ಪಲ್ಲವಿಯೇ
ಇರದೆ
ಚರಣವಿರಬಹುದು
ಚರಣಗಳೇ
ಇರದೆ
ಪಲ್ಲವಿಯೊಂದೇ
ಹಾಡಾಗಬಹುದು
ಜಗದ ಚಿಂತೆಯಲ್ಲಿ
ಪ್ರೀತಿ ಇರದೇ
ಹೋದರೆ ಎಲ್ಲವೂ
ಶೂನ್ಯವೇ ಆಗುವುದು!

ಬೇಡಿಕೆ.

ನಿಲ್ಲದು ಬಾಳ
ಪಯಣ
ಒಪ್ಪದು ಒಮ್ಮೆ
ಮರಣ
ಆಗುತಿಹುದು ವ್ಯರ್ಥ
ಕಾಲಹರಣ
ಗೆಳತಿ
ಬೇಗ ಶುರು ಮಾಡು
ನಿನ್ನ
ಪ್ರೇಮದ ಪಾರಾಯಣ!

ಪ್ರೇ(ಹೋ)ಮ.

ಲಜ್ಜೆ ಬಿಟ್ಟು ನೀ
ಹೆಜ್ಜೆ ಇಟ್ಟು ಸಜ್ಜಾಗಿ
ಬಂದ ಘಳಿಗೆಯಲ್ಲಿ
ಕುಡಿಯೊಡೆಯಿತು
ಪ್ರೇಮ …
ಅಂದಿನಿಂದಲೇ
ಶುರುವಾಯ್ತು
ಎದೆಯಲ್ಲಿ
ವಿರಹದಾ ಹೋಮ!

–ಬಿ.ರಾಮಪ್ರಸಾದ ಭಟ್.


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *