ಪಂಜು ಕಾವ್ಯಧಾರೆ

ಮಂಗ ಮತ್ತು ಬೆಕ್ಕುಗಳು

ಇಬ್ಬರ ಜಗಳದಿ
ಯಾರಿಗೆ ಲಾಭವು
ಬನ್ನಿರಿ ನಾವು ತಿಳಿಯೋಣ
ನೀತಿಯ ಸಾರುವ
ಕಥೆಯನು ಕೇಳಿ
ಜೀವನ ಸುಂದರಗೊಳಿಸೋಣ||

ಸುಂದರವಾದ ಊರಿನಲಿ
ಬೆಕ್ಕುಗಳೆರಡು ಜೊತೆಯಲ್ಲಿ
ಆಡುತಲಿದ್ದವು ಅಲೆಯುತಲಿದ್ದವು
ಬದುಕುತಲಿದ್ದವು ಸಂತಸದಿ||

ಹಸಿವನು ನೀಗಲು ಒಂದುದಿನ
ಬೆಕ್ಕುಗಳಿಗೆ ಅದು ಸುದಿನ
ಪ್ರತಿಮನೆಯಲ್ಲೂ ಬೆಣ್ಣೆಕದ್ದವು
ಮರದಡಿ ಬಂದು ಸೇರಿದವು||

ಬೆಣ್ಣೆಯ ಆಸೆ ಹೆಚ್ಚಾಯ್ತು
ಇಬ್ಬರ ಜಗಳವು ಶುರುವಾಯ್ತು
ನನಗೂ ಜಾಸ್ತಿ ನಿನಗೂ ಜಾಸ್ತಿ
ಬೆಣ್ಣೆಯು ಗೆಳೆತನ ಕೆಡಿಸಿತ್ತು||

ಮರದಲಿ ಕುಳಿತಿರೊ ಮಂಗಣ್ಣ
ನೋಡುತಲಿದ್ದನು ಜಗಳವನ್ನ
ಉಪಾಯ ಹೂಡಿ ಮರದಿಂದಿಳಿದು
ಬೆಣ್ಣೆಯ ಹಂಚುವ ಮಾತಾಡಿತ್ತು||

ತನ್ನಿರಿ ಒಂದು ತಕ್ಕಡಿಯ
ಮಾಡುವೆ ಬೆಣ್ಣೆ ಹಂಚಿಕೆಯ
ಮಂಗನ ಮಾತನು ನಂಬಿದ ಗೆಳೆಯರು
ತಂದವು ತಕ್ಕಡಿ ಜೊತೆಗೂಡಿ||

ತೂಗಿದ ಬೆಣ್ಣೆಯ ಮಂಗಣ್ಣ
ಹೆಚ್ಚಿನ ಬೆಣ್ಣೆಯ ನುಂಗಣ್ಣ
ಆ ಕಡೆ ಜಾಸ್ತಿ ಈ ಕಡೆ ಕಡಿಮೆ
ಬೆಣ್ಣೆಯ ನುಂಗಿದ ಮಂಗಣ್ಣ||

ಮರವನು ಏರಿದ ಮಂಗಣ್ಣ
ಪೆದ್ದ ಗೆಳೆಯರ ನೋಡಣ್ಣ
ಇಬ್ಬರ ಜಗಳದಿ ಯಾರಿಗೋ ಲಾಭ
ಈ ಕಥೆ ನೀತಿಯ ತಿಳಿಯಣ್ಣ||

-ವೆಂಕಟೇಶ ಚಾಗಿ, ಲಿಂಗಸುಗೂರ

 

 

 

 


ಹುಲ್ಲಾಗು
———

ಕಡಿದ ಕೊಂಡಿಯ ಕೂಡಿಸಿ
ಬದುಕಿನೊಂದಿಗೆ ಮತ್ತೆ ಬೆಸೆಯಲು
ಏನು ಬೇಕು ?
ಒಂದು ಹುಲ್ಲು ಕಡ್ಡಿ- ಸಾಕು!

ಒಣಗಿದಂತಿದ್ದರೂ ಹನಿ
ಹನಿ ನೀರಿಗೆ ಎದೆ ಚಿಗುರಿ
ಹಸಿರಾಗದೇ
ಒಯ್ಯದೇ ಅದು ಗಿರಿಯ ತುದಿಗೆ
ಗಿರಿಧಾರಿಯ ಪದತಲಕೆ ?

ತಾರದೇ ಅದು ಯಮುನೆಗೆ-
ತೀರದ ಕರೆಗೆ

ಹುಲ್ಲಾಗು ಹುಲ್ಲಾಗು !

****

ಹೋಲಿಕೆ?

ಯಾವುದಕ್ಕೂ
ನಿನ್ನ ಹೋಲಿಸಲಾರೆ

ಹೋಲಿಕೆ ಮನಸಿಗೆ ಬರ
ಬರುತ್ತಿದ್ದಂತೆ
ಅದರಿಂದ ನೀನೆಷ್ಟು ವಿಭಿನ್ನ
ವಿಶಿಷ್ಟ ಎಂಬ ವಿವರಗಳೂ
ಎದ್ದೆದ್ದು ಬಂದು ಗಂಟಲು
ಕಟ್ಟುತ್ತದೆ

ಹೋಲಿಕೆಯೇ ಇಲ್ಲ ಎಂಬುದೂ
ವ್ಯರ್ಥ ಕಸರತ್ತು
ಮಾತು ಮೈಲಿಗೆ

ಮೌನ ಪೂಜನ
ಒಲವಿಗೆ

-ಗೋವಿಂದ ಹೆಗಡೆ

 

 

 

 


ಬದುಕಿನ ವಾಸ್ತವ ಸ್ಥಳದಿಂದ
ನೆಮ್ಮದಿಯನ್ನು ಹುಡುಕಿಕೊಂಡು ಮತ್ತೊಂದು ಸ್ಥಳಕ್ಕೆ ಸಾಗುವುದು
ಒಂದು ಪ್ರಯಾಣವೇ

ಬೆಂಗಳೂರಿನ ಟ್ರಾಫಿಕ್ ಯುದ್ಧದಲ್ಲಿ ಗೆದ್ದು
ಹಾಸನ್ ಎಂಬ ಹಾಸಿಗೆಯಂತಹ ರಾಷ್ಟ್ರೀಯ ಹೆದ್ದಾರಿ ಮುಗಿಸಿ
ಶಿಲ್ಪ ಕಲೆಯ ಬೇಲೂರು ಬಿಟ್ಟ ಮೇಲೆ
ಮೂಡಿಗೆರೆ ಮರೆತು
ಕೊಟ್ಟಿಗೆಹಾರ ಎಂಬ ಕನಸಿನ ಕೋಟೆ ದಾಟಿದರೆ
ಸಿಗುವ ಚಾರ್ಮಾಡಿ ಘಾಟ್ಟ್ ಪ್ರಕೃತಿ ತಾಯಿ ಮಾಡುವ ಮಾಯೆಯೆ ಮನಸ್ಸಿಗೆ ಔಷದ

ಪಯಣದಲಿ ನಿಂತ ಜಾಗದಲ್ಲಿ ಕಾಣುವ ಮನುಜರ ಬದುಕುಗಳು
ಕಾಣದ ಕತ್ತಲಿಗೆ ಬೆಳಕು ಚೆಲ್ಲುವ ಬೈಕ್ ನ ವಿದ್ಯುತ್ ದ್ವೀಪಗಳು
ಪ್ರಕೃತಿಯನ್ನು ತೊಳೆಯುತ್ತಿರುವ ಮಂಜಿನ ಹನಿಗಳು
ನೆನಪಾಗುವ ನೋವುಗಳು
ಮುಂಬರುವ ಸಂತೋಷದ ತಿರುವುಗಳು
ಬದುಕನ್ನು ಬದಲಾಯಿಸುವ ನಿಲ್ದಾಣಗಳು
ನಾಳೆ ಎಂಬ ಭರವಸೆ
ನಿನ್ನೆ ಎಂಬ ನಿರಾಶೆ
ಕತ್ತಲನು ಓಡಿಸಲು ಪ್ರಯತ್ನಿಸುವ ಚಂದ್ರನ ಬಿಂಬಗಳು

ಚುಮು ಚುಮು ಚಳಿಯಲ್ಲಿ
ರಸ್ತೆ ಪಕ್ಕದಲ್ಲಿ ಲಾಭವನ್ನು ನಿರೀಕ್ಷಿಸದೆ ಸೇವೆ ಮಾಡುವ ವ್ಯಾಪಾರಸ್ಥರು
ಎನ್ನೂ ಸಿಗದ ಪ್ರಪಂಚದಲ್ಲಿ ಎಲ್ಲಾ ಸಿಗುತ್ತದೆ ಎಂದು ನಂಬಿಸುವ ನಂಬಿಕೆ
ಯಾರು ಸಿಗದ ಸಮಾಜದಲ್ಲಿ ನಾನು ನಿನ್ನ ಜೊತೆ ಎಂಬ ಗಾಳಿ ನೀರು ಪ್ರಕೃತಿ

ನೆಮ್ಮದಿಯನ್ನು ಹುಡುಕುತ್ತಾ ಹೋದರೆ
ಕೊನೆಗೆ ನೆಮ್ಮದಿ ನಮ್ಮನ್ನು ಎಲ್ಲಿಗೋ ಕರೆದುಕೊಂಡು ಹೋಗಿ ನಿಲ್ಲಿಸುತದೆ

ನೆಮ್ಮದಿ ಸಿಗುವ ಸಮಯದಲ್ಲಿ
ಬೇಡ ಎಂಬುದು ಬೇಕು ಎನ್ನಿಸುವುದು
ಬೇಕು ಎನ್ನುವುದು ಬೇಡ ಎನ್ನಿಸುವುದು
ಈ ಮನಸ್ಸಿನ ಗುದ್ದಾಟದಲಿ ಮತ್ತೆ ಮರು ಜಾಗಕ್ಕೆ ಓಡಿ ಬಂದು ನಿಲುತ್ತೇವೆ

ಮತ್ತೆ ನೆಮ್ಮದಿಯನ್ನು ಹುಡುಕುವ ನೆಪದಲ್ಲಿ ಮತ್ತೊಂದು ಪಯಣ
ಮತ್ತೆ ಮರು ಸ್ಥಳ
ಇದೆ ಮಾನವನ ನಿಜವಾದ ಬದುಕು

ಎಷ್ಟೇ ಇದ್ದರೂ ಏನೇ ಇದ್ದರೂ
ಮಾನವನಿಗೆ ಕಣ್ಣೀರಿನ ಕೊರತೆಯಿಲ್ಲ
ನೋವಿನ ಪುಸ್ತಕದ ಪುಟಗಳಿಗೆ ಕೊನೆಯಿಲ್ಲ
ಸಂತೋಷದ ತಿರುವುಗಳು ಬರುವುದಿಲ್ಲ

ಆಯಸ್ಸು ಇರುವಷ್ಟು ದಿನ ಮನುಜರ ಬದುಕು
ಆಯಸ್ಸು ಮೀರಿದರೆ ಬರಿ ನೆನಪು
ನಂಬಿದವರಿಗೆ ಮರೆಯಲಾಗದ ದುಃಖ
ಅಷ್ಟೇ
ಕೊನೆಗೆ ಲೈಪು ಇಷ್ಟೇನೆ

-ದಿವಾಕರ್

 

 

 

 


ಜೀವನ

ಮಿಡಿವ ಜೀವವಿರಲು
ಏತಕೆ ನೋವಿನಳಲು…
ಸಿಡಿವ ಗಾಯವಿರಲು
ಹೇಗೆ ತಾನೇ ಸಾಧ್ಯ ಸಹಿಸಲು…
ಕಲಿಯ ಬೇಕು ನಗಲು ನೋವಿನಲೂ,
ಇವೇ ಜೀವನ ಪಾಠಗಳು..
***
ಪಾಠ
ನೋವು ನಲಿವಿನ ಆಟಗಳು
ನಮ್ಮ ಜೀವನ ಪಾಠಗಳು..
ಕಷ್ಟದಲ್ಲಿ ಜಗ್ಗದಿರಿ,
ನೋವಿನಲ್ಲಿ ಕುಗ್ಗದಿರಿ,
ಸಮ ಭಾವ, ಸಮ ತಾಪ
ನೀಡೋಣ ಸಂತಾಪ..

-ಪ್ರೇಮ್

 

 

 

 


“ಅವಲೋಕನ”

ಮದ್ವೆಯಾಗಿ
ಇಂದಿಗೆ ಇಪ್ಪತ್ತೈದು ವರ್ಷ
ರಜತ ಮಹೋತ್ಸವದ ಸಂಭ್ರಮ!

ಅತಿಥಿಗಳು ವಿಶ್ ಹೇಳಿ
ಪಾರ್ಟಿ ಮಾಡಿ ಹೊರಟು ಹೋದರು
ಆಮೇಲೆ ಉಳಿದಿದ್ದು ನಾವಿಬ್ಬರೇ

ಕ್ಯಾಂಡಲ್ ದೀಪದ ಮಂದ ಪ್ರಕಾಶದಲ್ಲಿ
ನನ್ನ ಮುಖ ಅವಳಿಗೆ, ಅವಳ ಮುಖ ನನಗೆ
ದೃಷ್ಟಿ ಮಬ್ಬಾಗಿಸಿಕೊಂಡ ಕನ್ನಡಕದ ಮುಖಾಂತರ ಅಸ್ಪಷ್ಟವಾಗಿ ಅರಳಿ
ಜೊತೆಗೆ ಜೊತೆಜೊತೆಯಾಗಿ
ಸಾಗಿ ಬಂದ ದಾರಿಯು ಚಿತ್ರಗಳು
ಹಿಂದೆ ಹಿಂದೆ ಹೆಜ್ಜೆ ಹಾಕುತ್ತಿದ್ದವು

ವೃದ್ಧ್ಯಾಪದ ಹಳೆ ಮನೆಯ ಬಾಗಿಲಿಗೆ
ಕಟ್ಟಿದ ತೋರಣದ ಎಲೆಗಳು ಉದರಿ ಬಿದ್ದ ಕಳೆದ ಹೋದ ಕ್ಷಣಗಳಂತೆ
ನೆರೆತ ಕೂದಲು ಉದರಿ ನೆತ್ತಿ ಬೋಳಾದಂತೆ
ಅನುಭವದ ಪಾಠಗಳು

ಬರುವಾಗ ನೀನೇನು ತಂದಿರುವೆ?
ಹೋಗುವಾಗ ಏನು ತಗೆದುಕೊಂಡು ಹೋಗುವೆ?
ಯೋಚಿಸಿದರೆ ಜಗವೇ ಶೂನ್ಯ!
ಇದ್ದಷ್ಟು ದಿನ ಹೇಗೋ ನಾನು ನಿನಗೆ,
ನೀನು ನನಗೆ ಜೊತೆಯಾದೇವು
ನನ್ನಂಥ ಮನುಷ್ಯನ ಜತೆ ಜೀವನ ಜಗ್ಗಿದ್ದಕ್ಕೆ
ನಿನಗೆ ತುಂಬ ಹೃದಯದ
ಥ್ಯಾಂಕ್ಸ್ ಹೇಳಬೇಕು ಅಂದೆ;
ಇಲ್ಲ ಇಲ್ಲ ನನ್ನನ್ನು ಇಷ್ಟು ದಿನಾ ಸಹಿಸಿಕೊಂಡಿದ್ದಕ್ಕೆ ನಾನೇ ನಿಮಗೆ
ಥ್ಯಾಂಕ್ಸ್ ಹೇಳಬೇಕೆಂದಳು

ಎಷ್ಟರ ಮಟ್ಟಿಗೆ ನಾವು ನಮ್ಮ ಜೀವನ ಯಶಸ್ವಿಯಾಗಿಸಿದ್ದೇವೆ ಲೆಕ್ಕಹಾಕಬೇಕು
ಅದ್ಹೇಗೆ? ಅವಳ ಪ್ರಶ್ನೆಗೆ-
ಸುಖ-ದುಃಖ, ಸರಸ-ವಿರಸ
ಒಂದೂ ಬಿಡದೆ ಪ್ರತಿ ಕ್ಷಣವೂ
ಕುಳಿತು ಲೆಕ್ಕ ಹಾಕಬೇಕು,
ಯಾವದರ ತೂಕ ಜಾಸ್ತಿನೋ
ಅದರ ಮೇಲೆ ನಮ್ಮ ಬದುಕಿನ
ಫಲಿತಾಂಶ ! ತತ್ವಜ್ಙಾನಿಯಂತೆ ಹೇಳಿದೆ,
ಅದಕ್ಕವಳು ವ್ಯಂಗ್ಯವಾಗಿ ನಕ್ಕಾಗಲೇ
ನನ್ನ ಲೆಕ್ಕಾಚಾರ ತಪ್ಪಾಗಿದೆ ಎಂದು ಸುಮ್ಮನಾದೆ.

ಸುಖ – ದುಃಖ, ಸರಸ-ವಿರಸ,
ನೋವು-ನಲಿವು, ಜನನ-ಮರಣ ಎಲ್ಲ ಇದ್ದಾಗಲೇ ಜೀವನ ಪರಿಪೂರ್ಣ
ಎಂದ್ಹೇಳಿದ ಅವಳ ಮಾತಿನ ಮುಂದೆ
ನಾನು ಮೂಗ ಬಸವನಾದೆ

ಅದೇ ಕ್ಷಣ ಅವಳ ಸಿಟ್ಟು ಸೆಡವು ಅಸಹನೆಯ ನಡುವಿನ ತ್ಯಾಗ,
ಬಲಿದಾನ, ಹೊಂದಾಣಿಕೆಗಳು ನೆನಪಾಗಿ
ಹೌದು ಅವಳ ಈ ಗುಣಗಳೇ
ಯಶಸ್ಸಿನ ಗುಟ್ಟು ಅನಿಸಿತು

ಜೀವನ ಪಯಣ ಇನ್ನೂ ಬಾಕಿ ಇದೆ;
ಯಾವದಾದರು ತಿರುವು ಪಡೆಯ ಬಹುದು,
ನೀನದಕ್ಕೆ ಮಾನಸಿಕವಾಗಿ ಸಿದ್ದಳಾದಂತಿದೆ
ಕೆನ್ನೆಗೊಂದು ಮೃದುವಾದ ಮುತ್ತಿಟ್ಟು
ಹೌದು ಆಗಲೇಬೇಕಲ್ಲ ಎಂದು ಹೇಳುವಾಗ
ಮಾತಡದೆ ಉಳಿದ ಮಾತುಗಳು ಅಶ್ರುಧಾರೆಯಾಗಿ ಪರಸ್ಪರ
ಬಿಗಿದುಕೊಂಡಿದ್ದ ಕೈಬೆರಳಗ‌ಳು
ಪ್ರೀತಿಯಿಂದ ಮಾತಾಡುತ್ತಿದ್ದವು

ಅಷ್ಟರಲ್ಲಿ ನಮ್ಮ ನಡುವೆ ಉರಿಯುತ್ತಿದ್ದ ಕ್ಯಾಂಡಲದೀಪ ಆರಿ ಕತ್ತಲಾವರಿಸಿತು
ಇನ್ನೊಂದು ಹಚ್ಚುವುದಕ್ಕೆ
ಸಮಯ ಅವಕಾಶಗಳೆರಡೂ ಇರಲಿಲ್ಲ
ನನ್ನೊಳಗೆ ಅವಳೇ ಬೆಳಕಾಗಿರುವಾಗ
ಬೇರೆ ಬೆಳಕಿನ ಅಗತ್ಯವಾದರು ಏನು?
– ಅಶ್ಫಾಕ್ ಪೀರಜಾದೆ


ಪ್ರೇಮಾಂತರಂಗ

ಉಸಿರೇ ಓ ಉಸಿರೇ
ನನ್ನುಸಿರು ನಿನ್ನುಸಿರಲಿ
ನಿನ್ನುಸಿರು ನನ್ನುಸಿರಲಿ ಸೇರಿದಾಗ
ನನ್ನೆದೆ ತಾಳದಲಿ
ನುಡಿಯುತಿದೆ ಅರುಣರಾಗ..!

ಹೃದಯಾಂತರದಲ್ಲಿ ಚಿಟಪಟಚಿಟಪಟ
ಸುರಿಯುತಿರಲು ಸ್ವಾತಿಯ ಮಳೆ
ನಮ್ಮಿಬ್ಬರ ಭಾವಗಳು ಒಂದಾಗಿ
ಹರಿಯಿತು ಪ್ರೇಮಗಂಗಾ ಹೊಳೆ..!

ಅಂತರಂಗದ ದನಿಯಾಗಿ ಸುಖದ ಸುಪ್ಪತ್ತಿಗೆಯಲಿ
ತೇಲುತಿದ್ದವು ನಮ್ಮ ತನುಮನ
ಶಬ್ದಗಳಿಲ್ಲದೆ ಮೌನರಾಗದಲ್ಲಿ
ಹಾಡುತಿದ್ದೆವು ಮಧುರಗಾನ
ಅಬ್ಬಬ್ಬಾ ಮರತ್ಹೋಗಿತ್ತೇನೊ
ನಮ್ಮಿಬ್ಬರಲ್ಲಿ ಬಹಿರಂಗದ ಪರಿಜ್ಞಾನ..!

ಸಂತೆಯಲ್ಲೂ ನಿಂತೆವು ನಾವು
ಒಬ್ಬರೊಬ್ಬರ ಮುಖನೋಡುತ
ನಮ್ಮ ಹುಚ್ಚತನ ನೋಡಿ
ಜನ ಬೆಚ್ಚಿ ಬೆರಗಾಗುತ
ಹಾಗೆ ಮರೆಯಾಗುತ್ತಿದ್ದರು
ಒಬ್ಬರಿಗೊಬ್ಬರು ಹುಬ್ಬೇರಿಸುತ..!

ಯಾವ ಮಾಟ ಮಂತ್ರ ಇಲ್ಲದೆ ಮಾಯವಾಗುತ್ತಿದ್ದೆವು ನಾವು
ಪ್ರೇಮಛಾಯೆ ಮೈಸೋಕಿದಾಗ
ನೂರುಬಾರಿ ಬೆತ್ತದಿ ಹೊಡೆದು
ಕಾದ ಕಬ್ಬಿಣದಿ ಬರೆ ಎಳೆದರೂ
ನಮಗಾಗುತ್ತಿರಲಿಲ್ಲಾ ಯಾವುದೇ ನೋವು.!

-ಬೆಳಗಾವಿರಂಗಾ


ನನ್ನವಳು …. !!

ನನ್ನವಳು
ಗುಳಿಕೆನ್ನೆಯ ಮೊಗದವಳು
ನಕ್ಕಾಗ ಹೂ ಬಿರಿಯುವುದು
ಚಂದ್ರ – ತಾರೆ ಮಿನುಗುವುದು ..!!

ತೊಂಡೆ ಹಣ್ಣಿನಂತ ತುಟಿಯು
ಸೆಳೆ ಮಿಂಚಿನಂತ ಕಣ್ಣು
ಕಾಮನ ಬಿಲ್ಲಿನಂತ ಕುಡಿಹುಬ್ಬು ..!!

ಮಲ್ಲಿಗೆಯ ಮುಡಿಯವಳು
ಹಂಸ ಹೆಜ್ಜೆಯ ನಡಿಗೆಯವಳು
ಗಲ್ಲ ಮೇಲೆ ಬಟ್ಟಿಟ್ಟ
ವೈಯ್ಯಾರ ಬೆಡಗಿನವಳು ..!!

ಮುಸ್ಸಂಜೆಯಲ್ಲಿ ಸಿಂಗಾರಗೊಂಡು
ಮಡಿಯಲ್ಲಿ ದೀಪವ ಹಚ್ಚಿ
ಮನೆಯ ಬೆಳಗುವಳು ..!!

ಹೊತ್ತಾರ ದುಡಿದು ಮಕ್ಕಳ ಆಡಿಸಿ
ಬಡಿಸುವಳು ಬಿಸಿ ಬಿಸಿಯ
ಉಪ್ಸಾರು ಮುದ್ದೆಯ ..!!

ಮುಂಜೆರಗಲ್ಲಿ ದೀಪವಾರಿಸಿ
ಊರ ಮಲಗಿಸಿ
ಸುಳಿಯುವಳು ಬಳಿಯಲ್ಲಿ
ನನ್ನಾಕೇ … ಮಲಗಾಕೇ… !!

ಮುಂಜಾನೆಯೆದ್ದು ನೀರಿಟ್ಟು ಮನೆಮುಂದ
ಚಿಕ್ಕೆಯ ಹಾಕಿ ಚಿತ್ತಾರ ಬಿಡಿಸಿ
ತುಳಸಿಯ ಮುಂದ ಸುತ್ತಾಕೇ ..!!

ಪತಿಯ ಹಿತ ಬಯಸುವಳು
ಮುತ್ತೈದೆಯಂತ ಗೃಹ ಲಕ್ಷ್ಮಿ ಇದ್ದಾಗ
ಸುಖ ಶಾಂತಿ ಸಮೃದ್ಧಿ ತುಂಬಿ
ಮನೆ ಒಕ್ಕಲಾಗುವುದು ..!!

ಆದಿತ್ಯಾ ಮೈಸೂರು

 

 

 

 


ಒಂಟಿ ಮಾನವೀಯತೆಯ ಬಿಕ್ಕು

ಕೆಲವೇ ಗಂಟೆಗಳ ಹಿಂದಷ್ಟೇ
ಅಲ್ಲಿ ಮತೀಯ ಗಲಭೆ ಉಂಟಾಗಿತ್ತು
ಕೆಲವು ಅಮಾಯಕರ ರುಂಡಗಳನ್ನು
ನಿರ್ದಯವಾಗಿ ಚೆಂಡಾಡಲಾಗಿತ್ತು
ಭೂಮಿತಾಯಿಯ ಹಸಿರು ಗರ್ಭದ ಮೇಲೆ
ನೆತ್ತರ ಓಕುಳಿಯಾಡಲಾಗಿತ್ತು

ತನ್ನ ಮೈ ಮೇಲಾದ ಮೈಲಿಗೆ ಯನ್ನು
ಬೇಗ ಬಂದು ತೊಳೆಯೆಂದು
ಭೂತಾಯಿ ಮಳೆರಾಯನಲ್ಲಿ ಪ್ರಾರ್ಥಿಸುತ್ತಿದ್ದಳು
ಇದ್ಯಾವುದರ ಪರಿವೇ ಇಲ್ಲದೇ
ಚೆಲ್ಲಿದ್ದ ನೆತ್ತರಿನ ಮೇಲೆ ನೊಣಗಳು
ಕೂತು, ಎದ್ದು ಹಾರಾಡುತ್ತಿದ್ದವು
ಬಿದ್ದ ಹೆಣಗಳ ಮಾಂಸ ಸವಿಯಲು
ಮೇಲೆ ರಣಹದ್ದುಗಳು ಹೊಂಚು ಹಾಕುತ್ತಿದ್ದವು

ಅದೇ ವೇಳೆಗೆ ದೂರದ ಮಸೀದಿಯಿಂದ
ನಮಾಜಿನ ಕೂಗು ಮೊಳಗತೊಡಗಿತು
ಇತ್ತ ದೇವಸ್ಥಾನದಿಂದ ಮಂಗಳವಾದ್ಯಗಳ
ಸದ್ದು ಕೇಳಿಸತೊಡಗಿತು
ಯಾರೂ ಗಮನಿಸುವವರು ಇಲ್ಲದೇ
ದೂರದಲ್ಲೆಲ್ಲೋ ಒಂಟಿಯಾಗಿ ನಿಂತ
ಮಾನವೀಯತೆ
ಸದ್ದು ಮಾಡದೇ ಬಿಕ್ಕಳಿಸುತ್ತಿತ್ತು.
-ಲಕ್ಷ್ಮಿಕಾಂತ ಮಿರಜಕರ

 

 

 

 


ನಡೆಯುವ ನಡೆದಷ್ಟೂ ದಾರಿ ತೋರುವ ಬದುಕೆ ನಿನಗೆ ಶರಣು
ಕಾಲಿಲ್ಲದಿದ್ದರೂ ಎರಡು ಹೆಜ್ಜೆಗೊಂದಿಷ್ಟು ಉತ್ಸಾಹ ತುಂಬುವ ಬದುಕೆ ನಿನಗೆ ಶರಣು..

ಯಾರದ್ದೋ ಮನೆಯ ಕತ್ತಲಿಗೆ ಮರುಗುತ್ತಲೆ ನಿನ್ನ ಗೂಡು ಮರೆಯುವ
ಖಾಲಿ ಬೊಗಸೆಯಲಿ ತುಂಬಿ ಕೊಡಲು ನಿಂತಿರುವ ನಿನಗೆ ಶರಣು

ಕಲ್ಲು ಮುಳ್ಳುಗಳ ದಾರಿ ನೋಡಿ ದೂರಕ್ಕೆ ಕೈ ಹಿಡಿದು ನಡೆಸಿದ
ಬಿಸಿಲು ಮಳೆಗೆ ಚಪ್ಪರವಾಗಿ ನಿಲ್ಲೆಂದು ಕಲಿಸಿದ ಬದುಕೆ ನಿನಗೆ ಶರಣು

ಹುಲ್ಲು ಕಡ್ಡಿಯಲಿ ಗೂಡುಕಟ್ಟಿ ಬೆಚ್ಚಗಿಟ್ಟು ತುತ್ತು ಹಾಕಿ ರೆಕ್ಕೆಬಲಿಸಿದ
ಮೋಡ ಮಳೆ ದಾಟಿ ಹಾರುವುದು ಹೀಗೆ ಎಂದು ಹಾರಿ ತೋರಿದ ಜೀವವೇ ನಿನಗೆ ಶರಣು

ಗದ್ದಲದ ಸಂತೆಯಲಿ ಶಾಂತ ದ್ವನಿಗೆ ಬೆಲೆ ಇದೆಯೆಂದು ತೋರಿಸಿದ
ಸುಡುವ ಬೆಂಕಿಗೂ ಅಂತ್ಯವಿದೆ ಸ್ವಾಮಿ ಎಂದ ಬದುಕೆ ನಿನಗೆ ಶರಣು..

-ಸೂಗೂರೇಶ ಹಿರೇಮಠ

 

 

 

 

 


ಬತ್ತಳಿಕೆ

ಯುದ್ಧ ಮಾಡಲೇಬೇಕೆಂಬ ಬಯಕೆ ನನ್ನ ಆವರಿಸಿರೆ;
ಆಸರೆಗೆ ಮನಸಿದುವೇ ನಿನ್ನ ಬಯಸಿತ್ತು!
ಶಸ್ತ್ರಗಳ ಅಭ್ಯಾಸ ದೇಹ ದಂಡಿಸುತಿರೆ;
ನೀ ಕೊಟ್ಟ ಬತ್ತಳಿಕೆಯು ಶಾಂತಿ ಬೇಡುತಲಿತ್ತು!!

ಅನಿವಾರ್ಯವಾಗಿತ್ತು ರಕ್ತದೋಕುಳಿಯು, ದೇಶದುದ್ಧಾರಕೆ;
ರಣಕಹಳೆ ಮೊಳಗಿದೊಡೆ, ಮೊಗದಿ ಮುಗುಳುನಗೆ!
ಮನಸಿದುವೇ ಮರುಗಿತ್ತು, ಕತ್ತಿಯನು ಸೆಳೆವಾಗ;
ಕಂಬನಿಯು ಮೌನದಲಿತ್ತು, ಸಾಧಿಸುತ್ತಲೇ ತನ್ನ ಹಗೆ!!

ಚೀತ್ಕಾರ ಮಾಡುವುದೇ ಭಾವಗಳು..?, ದೇಹ ಕಾಯುತಲಿತ್ತು;
ನೀ ಕೊಟ್ಟ ಬತ್ತಳಿಕೆ ಕಾತರಿಸುತಿತ್ತು, ನಿನ್ನ ಸಾವಿಗೇ..!
ಕೇಳುವುದಕ್ಕೆ ಏನೊಂದೂ ಉಳಿದಿರಲಿಲ್ಲ, ರೋಸಿದ್ದ ಮನಕಾಗ;
ದೃಢದೀ ನೀ ಬಂದು ಪೋಣಿಸಿದೆ, ಬಾಣಗಳ ಬತ್ತಳಿಕೆಗೇ..!!

ಸಿದ್ಧವಿರಲಿಲ್ಲ ನಾನಾಗ ನಿನ್ನಾಯು ಕ್ಷೀಣಿಸಲು;
ಸರದಿಯಲೇ ಸೆಳೆದೊಗೆದೆ, ಬತ್ತಳಿಕೆಯು ಶಸ್ತ್ರಗಳ.!
ಕ್ಷಮಿಸದಿರು ಎಂದೆಂದೂ, ನಾನಾಗಿಹೆನು ಈಗ ಹುಲು,
ಕೊರಗಬೇಕು ನಾನೀಗ, ಎಣಿಸುತ್ತಲೇ ದಿನಗಳ, ಹೆಕ್ಕುತಲಿ ನಿನ್ನ ನೆನಪುಗಳ.!!

-ಶ್ರೀಸುತ (ಸುದರ್ಶನ್.ಜೆ)

 

 

 

 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x