ಅಪ್ಪ
ಅಪ್ಪಾ
ಅದೊಂದು ದಿನ ನೀ ಹೇಳಿದೆ
ಕಣ್ಣುಗಳನ್ನು ಪಿಳ ಪಿಳನೆ ಬಿಟ್ಟು
ನಿನ್ನನ್ನೇ ನೋಡುತ್ತಿದ್ದಾ ಈ ಪುಟ್ಟ ಜೀವಕ್ಕೆ,
ಮಗಳೇ ನೀ ನನ್ನ ಮಾತ ನಡೆಸುವೆಯ?
ನಿನ್ನ ಬದುಕಿನ ಪರಪಂಚದಲ್ಲಿ ಕಾಣಿಸುತ್ತಿದ್ದ
ಆ ನಿನ್ನ ಆಚಾರಗಳು, ವಿಚಾರಗಳು, ಮಮತೆಯದನಿಯಾಳಗಳು…
ಹೀಗೆ.. ನಿನ್ನಪರೂಪದ ಸಂಗತಿಗಳ
ಅರ್ಥೈಸಲಾಗದೆ,
ನಿನ್ನೊಲುಮೆಯ ಪ್ರೀತಿಸಾಗರದಲಿ
ಮಿಂದೇಳುತ್ತಿದ್ದ ನನಗೆ
ನೀನೇ ವಿಸ್ಮಯ
ಬೇರೊಂದ ಬಯಸದೆ ನಾ ಉಲಿದೆ
ನೀ ಹೇಳುವ ಮಾತನ್ನೊಂದನ್ನೂ ನಾ ತೆಗೆಯಲಾರೆ.
ಅಪ್ಪಾ
ನನ್ನಿಂದ ನೀ ದೂರಾದ ಇಷ್ಟು ವರುಷಗಳೂ
ನಡೆದೇ ನಡೆದೇ ಬಸವಳಿದರೂ ನಡೆದೆ,
ನಿನ್ನ ಮಾತುಗಳಲ್ಲೊಂದನ್ನೂ ತೆಗೆಯದೇ ನಡೆದೆ..
ಬೆಂಕಿಯಲ್ಲಿ ಬೆಂದರೂ
ಹಸಿ ಮಣ್ಣಾಗಿಯೆ ಉಳಿದೆ.
ಅಪ್ಪಾ
ಒಂದೊಂದು ದಿನವು
ಬಳಿ ಕೂರಿಸಿಕೊಂಡು
ನನ್ನ ಪುಟ್ಟ ಪುಟ್ಟ ಕಣ್ಣುಗಳಲ್ಲಿ
ಬಣ್ಣ ಬಣ್ಣದ ಕನಸುಗಳನ್ನು
ಚಿತ್ರಿಸುತ್ತಾ ಹೋದೆಯಲ್ಲವೆ,
ಅದಕ್ಕಾಗಿ ನೀ ತಂದ ಸರಂಜಾಮು…
ಇಂದಿರಾಗಾಂಧಿಯವರ ದಿಟ್ಟತನ,
ವಾಜಪೇಯಿಯವರ ಆದರ್ಶ ಚಿಂತನ,
ದಾನಶೀಲ ಕರ್ಣನ ಜೀವನ ಕಥನ,
ಕಾದಂಬರಿ ಕಾರ್ತಿ ತ್ರಿವೇಣಿಯವರ
ಸ್ತ್ರೀ ಸಂವೇದನಾ ಭಾವನಾ.
ಅಜ್ಜಿಯವರು ನನಗಾಗಿ ವಡವೆ ಆಭರಣಗಳ
ಮಾತನ್ನಾಡುವಾಗ
ನೀನೆನ್ನಾ ಕರೆದೊಯ್ದು,
ಸರಳತೆ, ಉನ್ನತ ಆಲೋಚನೆಗಳನ್ನೊಳಗೊಂಡ
ಆದರ್ಶ ಜೀವನ ಸಾಕಾರಿಸಿಕೋ ಎನ್ನುತ್ತಾ
ತಕ್ಕ ನಿದರ್ಶನಗಳೊಂದಿಗೆ ಮನ ತುಂಬಿಸಿದ್ದು,
ಇಂದಿಗೂ ಸ್ಪಷ್ಟ ದರ್ಶನ.
ಆದರೆ ಅಪ್ಪಾ
ಸರಳತೆ, ಆಚಾರವನ್ನೊಳಗೊಂಡ ವಿಚಾರ,
ದಯೆ, ಅನುಕಂಪ, ಕರುಣೆ ಕಕ್ಕುಲತೆ ತುಂಬಿದ್ದ
ನಿನ್ನ ಜೀವನವೇ
ನನಗೆ ದಾರಿದೀಪ ದರ್ಪಣ.
ನಿನ್ನಬಳಿ ಸಹಾಯ ಕೋರಿ ಬರುತಿದ್ದ ಜನರನ್ನು,
ವಿಚಾರಿಸಿ ಸಂತೈಸಿ ಒಮ್ಮೊಮ್ಮೆ ಗದರಿಸಿ
ಸಹಾಯ ನೀಡಿ ಕಾಫಿ, ಟೀ, ಊಟ ಮಾಡಿಸಿ
ಕಳುಹಿಸುತ್ತಿದ್ದ ಆ ನಿನ್ನ ವೈಖರಿ
ನನಗೊಂದು ಪುಟ್ಟ ದರ್ಬಾರನ್ನೇ ನೋಡಿದಾ ಪರಿ.
ಅಪ್ಪಾ
ನನ್ನ ಪುಟ್ಟ ಕೈಗಳ ಬಿಗಿಯಾಗಿ ಹಿಡಿದು
ಎಲ್ಲಿಯೂ ಬಿಡದೆ
ಲೋಕದ ವಿಸ್ಮಯವನ್ನೆಲ್ಲಾ ತೋರುತ್ತಾ ನಡೆದಾ ನೀನು
ಅದೊಂದು ದಿನ, ಬಾರದ ಲೋಕಕ್ಕೆ ಹೋಗುವಾಗ
ನನ್ನ ಕೈಗಳ ಬಲವಂತದೆ ಬಿಟ್ಟು ತೊರೆದು
ಒಂದೇ ಒಂದು ಮಾತನ್ನೂ ಆಡದೆ
ಹೊರಟೇ ಹೋದೆಯಲ್ಲ.
ನಿನಗೆ ಗೊತ್ತಾ
ನಿನ್ನ ಚಿತ್ರವನ್ನು ತನ್ನ ಪಟಲಗಳ ಮೇಲೆ ಚಿತ್ರಿಸಿಕೊಂಡು,
ಅಂದು ನಿನ್ನ ಅರಸುತ್ತಾ ಹೊರಟ ಈ ಕಣ್ಣುಗಳು
ಇನ್ನೂ ಜತನ ಮಾಡಿಕೊಂಡಿವೆ…
ಅದೆಷ್ಟೋ ದಿನಗಳ ಧಾರಾಕಾರದ ಕಣ್ಣೀರಿಗೂ,
ಒಂದಿಷ್ಟು ಮಾಸದ ನಿನ್ನ ರಂಗಿನಾ ಚಿತ್ರವನ್ನು,
ಮತ್ತು
ಮುಂದೊಂದು ದಿನ ನಿನ್ನ ಕಾಣುವೆನೆಂಬ
ಮತಿಹೀನ ಹುಚ್ಚನ್ನೂ…
ಅಪ್ಪಾ
ಸಾವಿನ ಹಾದಿಯಲ್ಲಿಯೂ
ನೀ ನನ್ನ ಬಗ್ಗೆ ಹೆಮ್ಮೆಯ ಮಾತನಾಡಿದ್ದು,
ನನಗೆ ಬದುಕ ನಾವೇ ತೇಲಿಸಲು
ನೆರವಾದ ಸಂಜೀವಿನಿ.
ಎಷ್ಟೇ ಜನುಮಗಳು ಬಂದರೂ
ನೀನೆ ನನಗೆ ಅಪ್ಪನಾಗು ಎಂದೆನ್ನ ಕೋರಿಕೆ
ಆದರೇ
ಈ ಜನುಮದಂತೆ ಬಲುಬೇಗ ನನ್ನನ್ನಗಲಿ
ಮತ್ತೆ ಮೋಸಪಡಿಸದಿರೆಂದು ಬೇಡಿಕೆ.
ಆಪ್ಪಾ
ಕೊನೆಗೊಂದು ಮಾತು
ಒಂದಂಷ್ಟು ಮದುವೆಗಳು, ನೂರಾರು ಮನೆಗೆ ಬೆಳಕು,
ಹೀಗೆ ನೀ ಮಾಡಿಟ್ಟ
ಪುಣ್ಯದ ಪುದುವಟ್ಟಿನ ಗಂಟಿನಿಂದ,
ನಿರಂತರವಾಗಿ ಬರುತ್ತಿರುವ ಬಡ್ಡಿಯಿಂದಲೇ
ನಮ್ಮ ಜೀವನ
ಅಂದಿಗೂ, ಇಂದಿಗೂ, ಮುಂದಿಗೂ…
-ಪೌರ್ಣಿಮೆ.
ಅದೇನು ನಿನ್ನ ಮೋಡಿ…
ಎಲ್ಲಿಂದಲೊ ಬಂದೆ ಸುಗಂಧ ತಂದೆ
ಪರಿಮಳದಲಿ ಪದವಾಗಿ ಪಲ್ಲವಿಯಾದೆ
ಭ್ರಮರದ ಗಾನದಲಿ ಲೀನವಾದೆ
ನಿನ್ನ ಸಾಂಗತ್ಯದ ನಾದದಲಿ ನಿನಾದವಾದೆ
ನಿನ್ನದೆ ನೆನಪುಗಳ ಸಂತೆಯಲಿ ತೇಲುತಿರುವೆ
ಒಲವ ಅಂಬಾರಿಯಲಿ ಅನುರಕ್ತಳಾಗಿರುವೆ
ನೀನಿಲ್ಲದಾಗ ಹೇಗೆಗೋ ಇದ್ದವಳು
ನೀ ಬಂದಮೇಲೆ ಬದುಕೆ ಬದಲಾದವಳು
ಈ ಪ್ರೀತಿಗೆ ನಿನ್ನ ರೀತಿಗೆ
ಅದ್ಯಾವ ಹೆಸರಿಸಲಿ ಮೋಹನನೆ
ಅರಮನೆ ಬೇಕಿಲ್ಲ ಅನುರಾಗ ಸಾಕಲ್ಲ
ಅರಸ ನೀನಾಗಬೇಕಿಲ್ಲ ಅಂಬಾರಿ ತರಬೇಕಿಲ್ಲ
ನೀ ಬಂದ ಗಳಿಗೆ ರಸಗಳಿಗೆ
ಬಾಳಬಾನಿನಲಿ ಚಂದಿರ ನೀನಾಗಿ
ಬೆಳದಿಂಗಳಲಿ ಅರಳುವೆ ರಾತ್ರಿರಾಣಿ ನಾನಾಗಿ
ಕೋಮಲ ಮನಸಿದು ಹುಸಿಯಲ್ಲ
ನೀನಿಲ್ಲದೆ ಈ ಹೃದಯ ಹಸಿಯಲ್ಲ
ನಿನ್ನಜೊತೆ ಕನಸುಗಳ ಹೆಣೆದಿರುವೆ ನಲ್ಲ
ಮೇನಕೆ ನಾನಲ್ಲ ಅಂಬಾರಿಯ ಆಸೆಯಿಲ್ಲ
ಜಾಲಿಯಾಗಿ ಜತೆಯಾಗಿ ಜತನವಾಗಿ ಸಾಗೋಣ
ಬಾಳದಾರಿಯಲಿ ಎಲ್ಲಮೀರಿ
ಎಲ್ಲೆಮೀರಿ ಬೆಳೆಯೋಣ
-ಜಯಶ್ರೀ ಭ.ಭಂಡಾರಿ.
ಹೇಳಿ ಹೋಗು ಚೆಲುವೆ…
ಹೇಳಿ ಹೋಗು ರನ್ನ
ನನ್ನ ಮರೆಯುವ ಮುನ್ನ
ಮನಸ್ಸಿನ ತೊಟ್ಟಿಲಲಿ ಚಿನ್ನ
ಬಂಧಿ ಮಾಡಿಕೊಂಡಿರುವೆ ನಿನ್ನ
ನನ್ನ ಜೀವನದ ಪಯಣಕೆ
ಜೋಡಿ ಆಗುವೆ ಅಂದು ತಿಳಿದಿದ್ದೆ
ಮದ್ಯದಂಗಡಿ ದಾರಿಯಲಿ
ಬಿಟ್ಟು ಹಿಂತಿರುಗದೇ ನಡೆದಿರುವೆ
ಕನಸು ಕಂಡಿರಲಿಲ್ಲ ನಾನು
ನನ್ನ ಮನಸ್ಸ ಗೆಲ್ಲುವೆಎಂದು
ಪ್ರೀತಿಲೋಕಕೆ ಸ್ವಾಗತಿಸಿ
ಕಾಣದೆ ಮಾಯ ವಾದೆಯಾ
ಮರಳಿಬಾ ಜೀವದ ಒಲವೇ
ನಿನ್ನ ನೆನೆದು ಕೊರಗುತಿದೆ ಮನವೇ
ಎಷ್ಷು ಹೇಳಿದರೂ ಕೇಳುತ್ತಿಲ್ಲ
ಹದಿಹರೆಯದ ಹದಿನೆಂಟರ ವಯಸು
-ಅಕ್ಷಯಕುಮಾರ ಜೋಶಿ (ಅಕ್ಷು)
*ಸುಮಧುರ ಭೇಟಿ*
ದೇವಸ್ಥಾನದಲಿ ಭೇಟಿಯಾದ ಸುಮಧುರ
ನಿನ್ನ ನೆನಪು ಇನ್ನೂ ಕಣ್ಣಂಚಲಿದೆ
ಕಿರುನಗೆಯ ಸೂಸಿ ನೀನಾಡಿದ
ಮಾತು ಇನ್ನೂ ಮನದಲಿ ಹಸಿಯಾಗಿದೆ
ಮೊದಲ ಬಾರಿ ನೋಡಿದಾಗಲೇ
ಮನವ ಸೆಳೆದೆ ಹುಡುಗಿ
ನಿನ್ನ ಕೇಶರಾಶಿಗಳು ನನ್ನ ಸ್ಪರ್ಶಿಸಿದಾಗ
ನನ್ನೆದೆಯೊಳಗೆ ಒಲವೆಂಬ ಚಿಗುರು ಹುಟ್ಟಿತು
ಎದೆಯ ತಳಮಳ ಆರಂಭವಾಗಿದೆ
ಎಲ್ಲಿ ನೋಡಿದಲ್ಲಿ ನೀನೆ ಕಾಣುತಿರುವೆ
ನಿನ್ನ ನೆನಪು ಸುರುಳಿಯಾಗಿ ಕಣ್ಮುಂದೆ
ಬರುತಿದೆ ಪದೇಪದೇ ಕಾಡುತಿದೆ
ಆ ಮುಂಗುರುಳ ಸರಿಸುವ ಭಂಗಿಯನು
ನೋಡುತ ಎದೆಯೊಳಗೆ ಏನೋ ಚಡಪಡಿಕೆ
ಕಣ್ಣುಬ್ಬು ಹಾರಿಸುತ ನೋಡುವ ನೋಟವ
ನೋಡುತ ಕಳೆದ್ಹೋದೆ ನಾ
ಸಿಹಿಯಾದ ಮಾತ ಕೇಳುವ
ಬಯಕೆಯಲಿ ಕರ್ಣಗಳು ಕಾದಿವೆ ಬೆಡಗಿ
ಪಟಪಟನೆ ಸಿಡಿವ ಮುತ್ತಂತ ಮಾತುಗಳನು
ಮೌನವಾಗಿ ಆಲಿಸಲು ತವಕಿಸಿದೆ ನನ್ನ ಮನಸು
-ಶಿವಕುಮಾರ ಕರನಂದಿ
ಆಕಾಶ
ಅಳತೆಗೆ ನಿಲುಕದ ನೀಲಿದಂಬುದಿಯಂತಹ ನಕ್ಷತ್ರದಾಗರ
ಅರಳುವಿಕೆಯೆ ಎನ್ನ ಅರ್ಥ ಸಂಕುಚಿತವಿಲ್ಲ ಪರಿಮಿತಿಯೂ ಇಲ್ಲ!
ಅಂತರೀಕ್ಷೆಯೂ ನಾನು, ನಿನ್ನಂತರಾಳದಂತೆ ಶೂನ್ಯವೂ ನಾನೇ
ಅಂತರದ ಅಳುಕಿಲ್ಲ , ಹತ್ತಿರ ಬಲು ಹತ್ತಿರ ಮಿತಿಯಿಲ್ಲದ ದೂರ.!!
ಕಲ್ಲೆಸೆದರೂ, ಕಸವೆಸದರೂ ಕಂಕುಲಲ್ಲಿ ಕಟ್ಟಿಕೊಳ್ಳುವೆ,
ಕನುಸಗಳ ಸವಾರಿಗೆ ಅಶ್ವವೇರಿ ಬಾ..ಸನ್ಮಾರ್ಗಕೆ ..!
ಕಲ್ಲುಮುಳ್ಳಿನ ದಾರಿ ತೊರೆದು, ಇಚ್ಛಾ ಮಾರ್ಗವರಿಸಿ.
ಕೈಹಿಡಿದು ತೋರಿಸುವೆ ಸಾಕೆನಿಸುವಷ್ಟು ದೂರ ಕ್ರಮಿಸುತಾ..!!
ಬೇಧವಿಲ್ಲ ನನಗೆ ನನ್ನುದರದಲ್ಲಿ ತೇಲಾಡುವ ಶ್ರೇಷ್ಟ ನಕ್ಷತ್ರಗಳಿವೆ.
ಭಾವವಿರುವ ಹುಳ ಬುದ್ಧಿಬಿಡಲಿಲ್ಲ ಹೊಳಸು ಮಾಡುತಾ ..!
ಭೂಮಿಯ ಮೇಲೆ ತಾನೇ ಅಗ್ನಿಗಾಹುತಿಯಾಗಿ ಸುಡಗಾಡು ಸೇರುತ್ತಾ,
ಭಸ್ಮ ಮಾಡಿ ಕಲ್ಮಶ ತುಂಬಿಸಿದ, ನಿಷ್ಕಲ್ಮಶ ಸುಂದರ ಧರಣಿಯ ಉಂಗುರದಲ್ಲಿ.!
ನನಗ್ಯಾರು ಸಾಟಿಯಿಲ್ಲ, ನನಗ್ಯಾವ ಸಾವು ಇಲ್ಲ, ನನಗೆ ಗರ್ವವೂ ಇಲ್ಲ.
ಗ್ಯಾಲ್ಯಾಕ್ಸಿಗಳಿಹವು, ನಕ್ಷತ್ರ ಧೂಮಕೇತುಗಳ ಸಂಚಾರವೂ ಇದೆ.
ಗಗನ ಎಂದು ಹೆಣ್ಣಿನ, ಆಕಾಶ್ ಎನ್ನುತ ಗಂಡಿನ ಸ್ಥಾನ ಕೊಟ್ಟರೂ..!
ನಾನು ಶೂನ್ಯ ! ನಾನು ಅನಂತ.! ನೀನಾಗುವೆಯಾ ನನ್ನಂತೆ..!.?
-ನರಸಿಂಹಮೂರ್ತಿ ಎಂ.ಎಲ್
ಆತ್ಮ ಸಖಿಗೆ …
ನನಗಾಗಿ ಅವತರಿಸಿದೆ ನೀ
ದೇವತೆಯಂತೆ ಈ ಬುವಿಯಲಿ
ಪೂಜಿಸುವೆನು ನಿನ್ನ ಓ ನಲ್ಲೆ !
ಪ್ರೇಮದಾ ಪುಷ್ಪಗಳಲಿ
ನನ್ನ ಚಿತ್ತಪಟಲದ ಮೇಲೆ
ಚಿತ್ತಾರ ಬಿಡಿಸಿದವಳು ನೀನು
ಸೂಜಿಗಲ್ಲಿನಂತೆ ಸೆಳೆದ ನಿನ್ನ
ಅರಸಿ ಬಂದವನು ನಾನು
ಸ್ವರ್ಗ ಧರೆಗಿಳಿದಂತೆ ನಲ್ಲೆ
ನಿನ್ನ ಸನಿಹ ಎನಗಿರಲು
ವಿರಹವೆಲ್ಲಿದೆ ? ಮಧು ಮೈತ್ರಿಯ
ಸವಿಯ ನೀ ಉಣಿಸುತಿರಲು
ಬರಸೆಳೆದು ನಾ ಮೆಲ್ಲ ನುಡಿದೆ
ಸವಿ ಮಾತುಗಳ ಕಿವಿಯಲಿ
ಕಂಡೆ ಸಂಜೆ ಸೂರ್ಯನ ರಂಗು
ನಾಚಿ ನೀರಾದ ನಿನ್ನ ಮೊಗದಲಿ
ಕಾಲವೆಂಬ ಕಡಲ ಮೇಲೆ
ಸಾಗುವಾ ಜೊತೆ ಜೊತೆಯಲಿ
ಗುರಿ ಸೇರುವ ಪಯಣವಿದು
ಪ್ರೀತಿ ಹಾಯಿ ದೋಣಿಯಲಿ
ಓ ನನ್ನ ಆತ್ಮ ಸಖಿಯೇ!
ನೀನಲ್ಲವೇ ನನ್ನ ಜೀವದುಸಿರು?
ನೀ ದೂರಾದ ಮರುಕ್ಷಣವೇ
ನಿಲ್ಲಲಿ ನನ್ನ ದೇಹದಿ ಉಸಿರು
– ಆದಿತ್ಯಾ ಮೈಸೂರು
ಹುಚ್ಚು ಮನಸ್ಸು
ಈ
ಹುಚ್ಚು
ಮನಸ್ಸಿಗೆ
ಬೇರೆ
ಕೆಲಸವಿಲ್ಲೇನು..!?
ಮತ್ತೆ
ಮತ್ತೆ
ಬಗೆದು
ನೆನಪಿಸಿದೆ
ಅವಳ
ನೆನಪುಗಳನ್ನು..||
ಪೆದ್ದು ಮನಸು
ನಿನ್ನ
ಮರೆಯಲೇಬೇಕು
ಎನ್ನುವ
ಛಲದಲಿ
ಮತ್ತೆ
ಮತ್ತೆ
ನೆನಪಿಸಿದೆ
ಈ
ಪೆದ್ದು
ಮನಸು..|
ಕವನ
ನಿನಗೆ
ನನ್ನ
ನೆನಪಾದರೆ
ಓದಿಬಿಡು
ನನ್ನ
ಕವನಗಳನ್ನು ..
ನಿನ್ನ
ನೆನಪಿನಂಗಳದಿ
ಮೂಡಿದಂತ
ಬರಹ ಕಂಡ
ಮಾತುಗಳನ್ನು..||
ಮತ್ತದೇ ಮೌನ
ಹೃದಯಗಳ
ಬೆಸುಗೆಯ
ನಡುವೆ
ಕಣ್ಣುಗಳು
ಮಾತನಾಡಿದವು
ಮನಸುಗಳು
ಒಂದಾದವು..
ಮತ್ತದೇ
ಮೌನ..
ಕಾಲವೆಂಬುದು
ಸರಿದು
ಮಾತುಗಳು
ಮುರಿದು,
ಮತ್ತದೇ ದೂರ
ಮತ್ತದೇ ದೂರ..||
-ವೆಂಕಟೇಶ ಚಾಗಿ
ಸಾಗರ
ಜಗತ್ತಿನ ನೀರೆಲ್ಲವನು ತನ್ನಲಿರಿಸಿಕೊಂಡಿರುವೆ,
ಏಳು ಬೇರೆ ಬೇರೆ ಹೆಸರ ಕಟ್ಟಿಕೊಂಡಿರುವೆ.
ಗಗನದ ರಂಗಿನಾಟವ ಪ್ರತಿಬಿಂಬಿಸುವೆ,
ಖಂಡಗಳ ಒಂದೊಂದಾಗಿ ಜೋಡಿಸುವೆ
ಜಲ ಸಾರಿಗೆಗೆ ನಾನೇ ಮೂಲ,
ಜಲ ಸಂಪತ್ತಿಗೂ ನಾನೇ ಜಾಲ,
ಮಲಿನಗೊಳಿಸಿ ಮುಗಿಸದಿರಿ ನನ್ನ ಕಾಲ,
ನೆನಪಿಡಿ, ಜಲವಿಲ್ಲದೆ ಬದುಕೇ ಇಲ್ಲ!
ಹಲ ಜೀವಿಗಳಿಗೆ ನಾನಲ್ಲವೆ ಆಸರೆ?
ಕೆಲ ಮಾನವರೆ ಬತ್ತಿಸದಿರಿ ಕೊಳ-ಕೆರೆ!
ನನ್ನಿಂದಲೆ ಭೂ ತಾಯಿಗೆ ನೀಲಿ ಸೀರೆ,
ಕೊಳ್ಳಲಾರಿರಿ ನೀವ್ ಸಾಗರವ ಕಾಸಿರೆ?
ರಕ್ಷಿಸಿರಿ ನೆಲ,ಬೆಳೆ, ಮರ ಜಲವ,
ಸುರಿಯದಿರಿ ತರತರ ರಾಸಾಯನಿಕವ!
ತುರುಕದಿರಿ ನನ್ನೊಡಲಿಗೆ ನಿಮ್ಮಯ ಕಸವ,
ಬದುಕಿರಿ ಹಾಯಾಗಿ ಶುಚಿಯಾಗಿರಿಸಿ ಪರಿಸರವ.
@ಪ್ರೇಮ್//
ನಿದ್ರಿಸುವ ಹೊತ್ತಿನಲಿ
ಆಡಿದೆವು ಆಟವ
ಪದವನು ಹಾಡುತ
ಎದೆಹಾಲ ಕುಡಿಸೀನಿ.
ಮಲಗೆಂದು ಆಯಾಗಿ
ಉಯ್ಯಾಲೆ ತೂಗೀನಿ.
ಕೇಳೊ ಓ ಚಂದಮಾಮ
ನನ ಕಂದನ ಅಂದ
ನಿನಗಿಂತ ಬಲು ಚಂದ.
ನಿದ್ರಿಸುವ ಹೊತ್ತಿನಲಿ
ಕದ್ದು ನೋಡ ಬಂದೆಯಾ.?
ಹಠದೂಡದೆ ಕೇಳುತಲಿ
ನಾ ಹಾಡೊ ಜೋಗುಳವ
ನೀ ಸೂಸೊ ತಂಪಿನಲಿ
ಮಲಗಿರಲು ನನ ಕಂದ
ತುಸುಮೆಲ್ಲ ನೀ ಬೀಸು ಗಾಳಿಯೆ
-ನಾಗಭೂಷಣ ಬಿ ಕೆ