ಹನಿ-ಹನಿ
(೧)
ಪೋನು
ಪೋನು
ಇಲ್ಲದೇ
ಬದುಕದ ನಾನು,
ನನಗೆ ನಾನೇ
ಮಾಡಿಕೊಂಡ
ಬೋನು..!
(೨)
ಮಿಸ್
ನಾವೇ
ಲೇಟಾದರೂ
ಬಸ್ಸಿಗೆ
ಹಿಡಿ ಶಾಪ,
ಮೇಲೊಂದು
ಮಾತು
ಬಸ್ಸು,
ಜಸ್ಟ್..!
(೩)
ದಾರಿ
ಅರಿತು
ಹೋದರೆ
ಬದುಕಿನ
ದಾರಿ
ರಹದಾರಿ,
ಇಲ್ಲದಿದ್ದರೆ
ಸೇರಬೇಕಾದೀತು
ಬೇಗನೆ
ಗೋರಿ..!
(೪)
ಚಂಚಲ
ಮುದುಕನಾದರೂ
ಮನಸೇಕೋ
ಚಂಚಲ,
ಮುದುಕನಾದರೂ
ಮನಸೇಕೋ
ಚಂಚಲ;
ಕಾರಣ
ಚಂಚಲಾ..||
(೫)ಆತಂಕ
ಎಲ್ಲಾ
ಮಕ್ಕಳಿಗೂ
ಒಂದೇ
ಆತಂಕ,
ಕಡಿಮೆ
ಬರದಿರಲಿ
ಅಂಕ..||
(೬)
ಬದುಕು
ಬದುಕು
ಯಾರೋ
ಬರೆದಿಟ್ಟ
ಕಾದಂಬರಿ
ಅಲ್ಲ;
ನಮ್ಮ
ನೈಜ
ಘಟನೆಗಳ
ಡಾಕ್ಯುಮೆಂಟರಿ..|
(೭)
ಇರಲಿ
ಗುಡಿಯೊಳಗೆ
ದೇವರು
ಇರಲಿ
ಇಲ್ಲದಿರಲಿ;
ಇರಲಿ
ಎಲ್ಲರ
ಮನದಲ್ಲಿರಲಿ..||
(೭)
ಬಲಿ
ಅವಳ
ಕಣ್ಣಿನ ನೋಟಕೆ
ನಾನಾದೆ
ಬಲಿ;
ಚಿಂತೆಯಿಲ್ಲ
ಅವಳ
ಹೃದಯ ಸಾಮ್ರಾಜ್ಯಕ್ಕೆ
ನಾನೇ
ಬಾಹುಬಲಿ..||
(೮)
ತಪ್ಪು
ಪೂಜೆ
ಮಾಡುವುದು
ತಪ್ಪೇಕೆ.?
ಅರಳಿ, ಬೇವು, ಬನ್ನಿಗೆ..
ಉಸಿರು
ಕೊಡುವರು ಇವರೇ,
ನೆನದ ಮೇಲಿನ
ಮಂದಿಗೆ..||
-ವೆಂಕಟೇಶ ಚಾಗಿ
" ಹರಟೆ ಹಕ್ಕಿ "
ಏನಯ್ಯಾ ಭೂಪಾ ?
ಏನೋ ಬರೀತಾ ಕುಂತಿದೀ!
ಕವಿತೆಯೋ ? ಕಾವ್ಯವೋ ?
ನಾಟಕದ ದೃಶ್ಯವೋ ?
ಅಥವಾ,
ಕಾದಂಬರಿಯ ತುಣುಕೋ ?
ಶಿಂಷಾ ವಾರ್ತೆಯ ಓದುವ
ಹಪಹಪಿಯೋ ?
ಇದೇನು !
ಸುಮ್ಮನಿರುವೆನಯ್ಯಾ ?
ಮಾತಿಲ್ಲವೇ ?
ಮಾತು ಬರುವುದಿಲ್ಲವೇ ?
ಮೂಕನೇ, ಕಿವುಡನೇ ?
ಕುಂಟನೇ, ಕುರುಡನೇ ?
ಥೂ ….
ಅವಿವೇಕಿ !
ನಿನ್ನ ಜೊತೆ ಮಾತನಾಡುವುದು ವ್ಯರ್ಥ!
ಆಹ್ಹಾ!
ಧ್ಯಾನದಲ್ಲಿ ಇದೀಯಾ ?
ಮನಸ್ಸು ಏಕಾಗ್ರತೆಯಲ್ಲಿರುವುದೇ ?
ಇಲ್ಲವಲ್ಲ!
ಸತ್ತ ಹೆಣದಂತೆ ಸ್ಪರ್ಶವೂ
ಇಲ್ಲವಲ್ಲ!
ಹೇ ಹೊಸಕವಿ,
ಮಾತನಾಡು
ಮೌನ ಮಂಜೆಬ್ಬಿಸಿ
ಕೌತಕವಾಗಿದೆ ಇಲ್ಲಿ !
ಮೊನ್ನೇ,
ತಟತಟನೇ ಮಳೆ ಹೂಯ್ದ ಹಾಗೆ
ಮಾತನಾಡಿದ
ನುಣುಪು ಮಾತುಗಳು
ಯಾಕೀಗಾ ಮೌನವಾದವು ?
ಮಾತಿನ ಮಲ್ಲ ನೀನು,
ಇಂದೇಕೆ
ಸದ್ದಿಲ್ಲದೇ ಕುಂತಿರುವೇ ?
ಬೇಸರ ನನಗೆ,
ಕಾವ್ಯವ ಹೊರೆಯ ಹೊತ್ತು
ತಿರುಗಲು !
ನೋಡಬಾರದೆ !
ಹಾ..ಹಾ !
ಹರಟೆಹಕ್ಕಿಯ ಬಳಗವೆಲ್ಲಾ
ಬಂದಿರುವೆಹು !
ಬಾ ….
ಕಾಡ ಸುತ್ತಿ , ಮರವನ್ಹತ್ತಿ
ಬರೋಣ !
ಬಾರಯ್ಯ ಪುಣ್ಯಾತ್ಮ ಬಾ !
ಥೂ ……
ಇವನಿಗೆ ದಯ್ಯ ಮೆಟ್ಟಿರುವಾಗಿದೆ,
ನಡೆ…..ನಡೆ….!
ಎಂದು .
ಹರಟೆಹಕ್ಕಿಗಳು
ಧ್ಯಾನಮಂದಿರದಿಂದ
ಹಾರಿಹೋದವು !
ಅವೆಕ್ಕೆಲ್ಲಾ ಕೊಟ್ಟ
ಉತ್ತರವಿಷ್ಟೇ !
…ಗೊತ್ತಿಲ್ಲ…ತಿಳಿದಿಲ್ಲ !
ಹರಟೆ ಮಾಡಲು
ಬಂದ ಹಕ್ಕಿಗಳಿಗೆ,
ನಾವು ಏನ್ಹೇಳಿದರೂ
ತಪ್ಪು, ಸುಳ್ಳು
ಹೀಗೆ ವಾಗ್ವಾದ!
ವಾದ -ವಿವಾದ
ಕೋರ್ಟು -ಕಛೇರಿ !
ಅವಕ್ಕೆ,
ಉತ್ತರವಿಷ್ಟೇ ಗೊತ್ತಿಲ್ಲ !
-ಕೀರ್ತಿ..ಪಿ
ನೀನಿಲ್ಲದ ಆ ಕ್ಷಣಗಳು
ಮನಸ್ಸು ನಿನ್ನಲಿ
ಒಲವು ನಿನ್ನಲಿ
ನಾನಿಲ್ಲಿರುವುದು ಸುಮ್ಮನೆ
ಹೃದಯದಲಿ ನೀನೇ
ಕನಸಲಿಯೂ ನೀನೆ
ಭ್ರಮೆಯೆನೂ ಅಲ್ಲಾ ನಾನೀರುವುದೆ ನಿನ್ನಲಿ
ಮಾಡುವ ಕೆಲಸದಲಿ ನೀನೆ
ನೋಡುವ ನೋಟದಲಿ ನೀನೆ
ಕಾಲ್ಗೆಜ್ಜೆಯ ನಾದದಲಿ ನೀನೇ
ಮೌನವಾಗಿ ಬಿಕ್ಕಿರುವೆ ಗೊತ್ತೆ
ಅಶ್ರುಧಾರೆಯಲಿ ನಿನ್ನದೆ ನೆನಪು
ಏಳುವ ಶುಭಬೆಳಗಿನಲಿ ನಿನ್ನದೆ ಚಿತ್ತಾರ
ಅರಳಿದ ಹೂಗಳಲಿ ನಿನ್ನದೆ ಘಮಲು
ಪೂಜೆಯ ನಮನಗಳಲಿ ನಿನ್ನದೆ
ಧ್ಯಾನ
ಹಸಿರಹಾಸಿನ ಮೇಲೆ ನೀನೆ ಬಂದಂತೆ
ಹೂನಗೆಯ ಚಲ್ಲಿ ಮೋಹಕನಗೆ
ನಕ್ಕಂತೆ
ಉಸಿರಬಿಸಿಯಲಿ ನಿನ್ನದೆ ಪರಿಮಳ ಸುರಿದಂತೆ
ನಿಂತರೂ ಕುಂತರೂ ನನ್ನಲಿ ನಾನಿಲ್ಲ
ಸೊಗಸಿಲ್ಲ ಸೊಗಡಿಲ್ಲ ನನ್ನ ನಾ
ಮರೆತಿಹೆನಲ್ಲ
ಎಲ್ಲಿಹೆ ನನ್ನ ನಲ್ಲ ಬಂದುಬಿಡೊ ನಿನ್ನವಳಿಗೆ ನೀನೆ ಎಲ್ಲ.
-ಜಯಶ್ರೀ ಭ.ಭಂಡಾರಿ.
ಆತ್ಮಾದಾ ಬೆಳಕು
ಕರಿಮೋಡದರಮನೆಯ
ಹೊನ್ನ ಹೊಸ್ತಿಲ ಮೇಲೆ
ಬೆಳ್ಮುಗಿಲು ಮುದದಿಂದ
ರಂಗೋಲಿಯಿಡುತಿಹುದು !
ಸ್ವರ್ಗದಾ ನದಿಯೊಂದು
ಭರದಲ್ಲಿ ಧರೆಗಿಳಿದು
ಇಳೆಯ ಕೊಳೆ ತೊಳೆಯುತ್ತ
ಬೆಳಕ ಹರಿಸಿಹುದು !
ಭರವಸೆಯ ಪರಿಮಳವ
ಹೊತ್ತು ತಿರುಗುವ ಗಾಳಿ
ಎಲ್ಲೆಡೆಯೂ ಕಂಪಿನಾ
ಬೆಳಕ ಹರಡಿಹುದು !
ಸಾಗರನ ಎದೆಯಲ್ಲಿ
ನರ್ತಿಸುವ ಅಲೆಗಳಲಿ
ಆಗಸದ ತಾರೆಗಳ
ಮಿಂಚು ಇಳಿದಿಹುದು !
ಮೊದಲ ಮಳೆ ಘಮದಿಂದ
ಚಿಗುರೆಲೆಯ ಒಗರಿಂದ
ಹೊಸ ಹೂವ ನಗೆಯಿಂದ
ಜಗವು ಬೆಳಗಿಹುದು !
ಕಣ್ಣ ಚುಂಬಿಸೊ ಬೆಳಕೆ,
ಹೃದಯವರಳಿಸೊ ಬೆಳಕೆ,
ಸಕಲ ಜೀವಾತ್ಮವನು
ನೀ ಬೆಳಗು ಬೆಳಕೆ !!
-ಶ್ರೀವಲ್ಲಿ ಮಂಜುನಾಥ್,
ಸತ್ಯ ಅಂದರೇನು ?
ಅಲ್ಲಿ ನಡೆದದ್ದೇ ಸತ್ಯವೇ ?
ನಾನು ಕಂಡಿದ್ದೇ ಸತ್ಯವೇ ?
ನನ್ನಂತೆ ಅವರಿಗೆ ಅದು ಕಾಣಲಿಲ್ಲವಲ್ಲ ?
ಅವರಿಗೆ ಕಂಡಿದ್ದೇ ಸತ್ಯವೇ ?
ಬಲವಾದ ಸಾಕ್ಷಿ ಇದ್ದುದೇ ಸತ್ಯವೇ ?
ಸಾಕ್ಷಿ ಇಲ್ಲದಿದ್ದರೆ ಅದು ಸತ್ಯವೇ ಅಲ್ಲವೇ ?
ಸಾಕ್ಷಿ ಹೇಳಿದ್ದವರು ಸತ್ಯವನ್ನೇ ಹೇಳಿದ್ದರೇ ?
ಸುಮ್ಮನಿದ್ದವರು ಅದು ಸತ್ಯ ಎಂದು ಒಪ್ಪಿಕೊಂಡಿದ್ದರೇ ?
ಜೋರಾಗಿ ಕೂಗಿ ದಪ್ಪ ದನಿಯಲ್ಲಿ ಹೇಳಿದ್ದು ಸತ್ಯವೇ ?
ದೊಡ್ಡ ಅಧಿಕಾರದಲ್ಲಿದ್ದವರು ಹೇಳಿದ್ದು ಸತ್ಯವೇ ?
ದುಡ್ಡಿದ್ದವರು ಭಂಡತನದಿಂದ ಹೇಳಿದ್ದು ಸತ್ಯವೇ ?
ಅಮಾಯಕರು, ಮುಗ್ಧರು ಬಲವಿಲ್ಲದವರು
ಹೇಳುವುದು ಯಾವಾಗಲೂ ಸತ್ಯವಲ್ಲ ಅಲ್ಲವೇ ?
-ಶ್ರೀಮತಿ ವೃಂದಾ ಸಂಗಮ