ಪಂಜು ಕಾವ್ಯಧಾರೆ

ಅಕ್ಕನ ವಿಭೂತಿ

ರತ್ನದ ಸಂಕೋಲೆ ತೊರೆದು
ಜಂಗಮರ ಜೋಳಿಗೆ ಹಿಡಿದು
ಅಪರಮಿತಕತ್ತಲೊಳಗೆ
ಬೆತ್ತಲೆಯಾಗಿ
ಊರೂರು ಅಲೆದು 
ಕಲ್ಯಾಣದ ಕಾಂತಾರದ ಖನಿಗೆ
ಬಾಗಿದಾಗ 
ಮೈ ಮುತ್ತಿದ
ಆ ಕೇಶಲಂಕಾರಕ್ಕೆ
ಶರಣೆಂದರೆ ಸಾಕೆ….?

ಜೋಳಿಗೆಯಲಿ ಜೋತಾಡಿದ
ಅನಲದ ಉಂಡೆಯಾಕಾರದ
ಮುಖವಾಡ
ಒಂದೊಂದು ರೀತಿಹವು
ಅಂಗದ ಲಿಂಗಕ್ಕೆ ಕೈ ತೆತ್ತಾಗ
ದಕ್ಕಿದ್ದು ಅವರಿಗೆ ಬೂದಿ
ಅದು ಬರೀ ಬೂದಿಯೇ!
ಅಲ್ಲ
ಗಂಡರನ್ನು ಭಸ್ಮ ಮಾಡುವ 
ಭಂಡಾರದ ಭಕ್ತಿಯ ವಿಭೂತಿ
ಹಣೆ ತಟ್ಟಿ ಮನ ಮುಟ್ಟಿ
ಮಡಿಮಡಿಯಾಗಿ ಎಡೆ ಎಲೆಯಲ್ಲಿ
ಉರುಳಾಡಿದರು ?
ಮುಕ್ತಿಗದು ಬಹು ಆಳ ಉಂಟು
ಇವರಿಗೆ ಭಂಡರೆಂದರೆ ಸಾಕೆ….?

ಪರಿಪರಿಯಾರಿ ಪರ ದೈವದ 
ಗವಿಯೊಳಗೆ ಬೇಡುವೆನು
ಅಪರೂಪದ 
ಆಕಾರ ನಿರಾಕಾರ ನಿರ್ಗುಣ
ಚೆಲುವಂಗೆನೊಲಿದು
ಸಾವಿಲ್ಲದ ಕೇಡಿಲ್ಲದ
ಭವವಿಲ್ಲದ ಭಯವಿಲ್ಲ
ಶರಣಂಗೆ ನಾನೊಲಿದೆನವ್ವ

-ಮಲ್ಲಮ್ಮ ಯಾಟಗಲ್ ದೇವದುರ್ಗ

mallamma-yatagal

 

 

 

 

 


ಗಜ಼ಲ್

ಮೋಡಗಳೆಲ್ಲ ಕರಗಿಹೋಗಿ ಮುಗಿಲೀಗ ಕೆಂಡ-ಕುಲುಮೆ
ಕನಸುಗಳೆಲ್ಲ  ಆವಿಯಾಗಿ ಮನಸೀಗ ಕೆಂಡ-ಕುಲುಮೆ

ಯಾವ ಏಟು ಎಲ್ಲಿ ತಾಕಿತೋ ಪ್ರತಿಮೆಯೀಗ ಭಗ್ನ
ಒಡೆದ ಚೂರುಗಳ ಚೂರಿಯಿರಿದು ಒಡಲೀಗ ಕೆಂಡ-ಕುಲುಮೆ

ದಾರಿಯ ತರಗೆಲೆ ಜೊತೆ ಹೂಗಳನೂ ಗುಡಿಸಿಯೊಟ್ಟಿ
ಬೆಂಕಿ ಹಚ್ಚಿದ್ದಾರೆ ಅಯ್ಯೋ ಎದೆಯೀಗ ಕೆಂಡ-ಕುಲುಮೆ

ಪತ್ರಿಕೆಗಳ ಪುಟಪುಟವೂ ಬಣ್ಣದ ನೀರ್ಗುಳ್ಳೆ
ನಿಜದ ಗಂಗೆಗೇ ಬೆಂಕಿ ಬಿದ್ದು ನೆರಳೀಗ ಕೆಂಡ-ಕುಲುಮೆ

ಲೋಕ ಕೊಟ್ಟುದೇನು ‘ವಿಶು’ ಬೊಗಸೆಗೆ ದಕ್ಕಿದ್ದೇನು
ಮರಳ ಹಾಸಿಗೆ ಮಾಯವಾಗಿ ಬದುಕೀಗ ಕೆಂಡ- ಕುಲುಮೆ

•ಗೋವಿಂದ ಹೆಗಡೆ

govind-hegade

 

 

 

 

 


ಒಡೆದ ಕನ್ನಡಿ
ನೀರವ ಕತ್ತಲ ರಾತ್ರಿಯೊಳಗೆ
ಗೋರಿಯೊಳಗೊಣ ಶವದಂತೆ
ಹೂವ ಕಾಣದ ದುಂಬಿಯಂತೆ
ಎನ್ನ ಮನದ ಪ್ರೀತಿಯಾಗಿದೆ

ತಿರುಗಿ ನೋಡದೆ ಒದ್ದು ಹೋದೆಯಲ್ಲೆ
ಗುಟುಕ ಜೀವ ಉಳಿಸಿದೆಯಲ್ಲೆ
ನಡು ರಸ್ತೆಯಲಿ ನರಳಿ ಒದ್ದಾಡುವಂತಾಯಿತಲ್ಲೇ
ಕರುಣೆಯ ನೋಟ ಬೀರದೆ ಹೊರಟಿಹೆಯಲ್ಲೇ

ಮಾತಿನರಮನೆಯಲ್ಲಿ ತೇಲುವಂತೆ ಮಾಡಿದ್ದೆ ಅಂದು
ಮೌನದ ಕೋಟೆಯಲ್ಲಿ ಬಂಧಿಯಾಗಿಸಿದೆ ಇಂದು
ನೋವಿನ ಅಲೆಗಳ ತರಂಗಗಳು
ಎದೆಯ ತುಂಬ ರಿಂಗಣಿಸುತಿವೆ

ಸವಿ ಮಾತನಾಡುತ ಪ್ರೀತಿ ಮಾಡಿದೆ
ಬೆನ್ನ ಹಿಂದೆ ಚೂರಿ ಹಾಕಿದೆ
ನಂಬಿಕೆ ದ್ರೋಹ ಮಾಡಿದೆ
ಮನಸೆಂಬ ಕನ್ನಡಿಯ ಚೂರು ಮಾಡಿದೆ

ಒಡೆದು ಹೋದ ಕನ್ನಡಿಯ  ಬಿರುಕುಗಳು
ಕೂಡಿಸಲಾಗುವುದೆ ಹೇಳೆ ಗೆಳತಿ
ಪ್ರೀತಿಯ ಸೌಧ ಮುರಿದು ಬಿದ್ದಿದೆ
ಅವಶೇಷಗಳಡಿ ಮನವು ಅನಾಥವಾಗಿ ಬಿದ್ದಿದೆ

-ಶಿವಕುಮಾರ ಕರನಂದಿ

shivakumar-karanandi

 

 

 

 

 


ದೀಪಾವಳಿ

ದೀಪಾಲಂಕಾರವಾಗಬೇಕಿದೆ 
ಈ  ಆತ್ಮಕ್ಕೆ ಒಳಿತಿನ 
ದೀಪಾರಾಧನೆಯಾಗಬೇಕಿದೆ 
ನಿತ್ಯ  ಕತ್ತಲಿನ  ಕೊಳಕಿನಲ್ಲಿ 
ನೊಂದಮನಕ್ಕೆ ಸಬಲತೆಯ 
ದೀಪಾರತಿ ಸಿದ್ಧವಾಗಿದೆ 
ಅಷ್ಟ ದೀಪಗಳು 
ಅಷ್ಟ ಗುಣಗಳಾಗಿ ಬೆಳಗಿ 
ದುಷ್ಟ ಕಪ್ಪು  ಇಂದು
ಉನ್ಮೂಲನವಾಗಬೇಕಿದೆ 
ಕೀರುತಲೇ ಇರಲಿ ಸಹಿಸದವರು 
ಕೀರ್ತಿಯ  ಪಥದಲ್ಲಿ 
ದೀಪೋತ್ಸವ  ನಡೆದಿದೆ 
ಚಿದ್ರೂಪರ ಪರಿರೂಪವಾಗಿ  
ದೀಪಾಲೆಕಂಬ  ನಿಂತಿದೆ 
ಚಂಚಲ ಚಿತ್ತದಿ  
ನೆಮ್ಮದಿಯು ದೀಪ್ತವಾಗಿದೆ 
ನನ್ನೊಳಗಿನ  ದೀಪಿಕೆ 
ದೀಪಮಾಲೆ  ಹಚ್ಚಿದೆ 
ಬಾಳ ಪಥದಿ  ದೀಪಾವಳಿ  ಬಂದಿದೆ 
ಸದ್ವಿಚಾರ ಸನ್ನಡತೆ  ದೀಪಿಸಲಿ 
ದೀಪಕ ನಾನಾಗಿ ಉರಿಯುವೆ 
ಸಂಭ್ರಮದ ಬೆಳಕು ಹರಡಲಿ 
ಸದ್ಭಕ್ತಿ ಕುಣಿಯಲಿ  ಮನದಿ 
ದೀಪವರ್ತಿ ಬೂದಿಯಾದರೂ 
ದೀಪೋತ್ಸವ ನಡೆಯುತ್ತಿರಲಿ

-ಜಹಾನ್ ಆರಾ

jahanara-hussain

 

 

 

 

 


ಧರೆ

ಸೋಜಿಗವಿದು ಈ ಧರೆ
ಬಲು ದೊಡ್ಡದಿದರಂತರಂಗ
ಕಪ್ಪು ಬಿಳುಪಿನೊಳಗೆ ಕುದಿ
ಮೌನ ಚಿಪ್ಪಿನೊಳಗೆ ನಿಧಿ
ಕಪ್ಪು ಕೆಂಪು ಉಪ್ಪು ಸಿಹಿ ಉದಧಿ
ಅಪ್ಪಿಕೊಂಡಿವೆ ಬಳಸಿ ಇಳೆ

ಗಿರಿ ಶಿಖರ ಮರಳುಗಾಡು ದಟ್ಟ ಕಾನನ
ಹಿಮಟೋಪಿ ಹಿಮನದಿ ಅಗ್ನಿ ಪರ್ವತ
ಗರ್ಭದೊಳಗೆ ನಿಗೂಢ ಅಂಡ ಪಿಂಡ
ಬ್ರಹ್ಮಾಂಡದೊಳಗಿದು ಅಚ್ಚರಿ
ಜೀವನ್ಮರಣಗಳ ವೈಖರಿ
ಜೀವಿಗಳ ಬದುಕಿನ ರೀತಿ !

ನಡುಗುತ್ತದೆ ಸಿಡಿಯುತ್ತದೆ ಬಿರಿಯುತ್ತದೆ
ಸಮತೋಲನಕ್ಕಾಗಿ
ಪಡೆಯುತ್ತದೆ ಬಿಸಿಲು ಮಳೆ ಗಾಳಿ
ಜೀವ ಸಂಕುಲದ ಹಿತಕ್ಕಾಗಿ
ಅಲ್ಲಿ ರಾತ್ರಿ ಇಲ್ಲಿ ಹಗಲು
ನೆರಳು ಬೆಳಕಿನ ಬುಗುರಿಯಾಟ

ಮುಕ್ಕಾಲು ನೀರು ಒಕ್ಕಾಲು ನೆಲ
ಜೀವ ಜಾಲದ ನೆಲೆ
ಪಳೆಯುಳಿಕೆಗಳಿಗೂ ಬೆಲೆ
ಹೆಚ್ಚುತ್ತಿದೆ ಮಾನವನ ದಾಹ
ಕ(ಕೊ)ರಗುತ್ತಿದೆ ಧರೆಯ ಒಡಲು
ಕಾದಿದೆ ಕೇಡು
ಬರಿದಾದರೆ ಹಸಿರು
ನಿಲ್ಲುವುದು ಉಸಿರು!
-ಸೋಮಲಿಂಗ ಬೇಡರ ಆಳೂರ

somaling-bedar

 

 

 

 

 


ಅಪ್ಪ

ಬಾಲ್ಯದ ನಿಸಗ೯ದ ಮಡಿಲಲಿ
ಕೂಸು ಮರಿಯನು ಮಾಡುತ  
ಪ್ರೀತಿಯ ಊಟ ಉಣಬಡಿಸಿತ
ಜೀವನದಲಿ ಖುಷಿ ಹಂಚುತ ಬೆಳೆಸಿಹನು

ಮನೆಯ ಹಿಂದೆಡೆ ಆಗಸದೆತ್ತರ ಬೆಳೆದ 
ಮರದಲ್ಲಿನ ಹಣ್ಣುಗಳನ ಕಿತ್ತು ಕೊಟ್ಟವನು
ನಸುಕಿನಲಿ ಹಾಲು ಹಾಕುತ 
ಟಪಾಲು ಹಂಚುತ ಬಡತನದಲಿ ಸ್ವಂತಿಕೆ ಮರೆದವನು

ಊರಿನ ಕೆರೆಯಲಿಬೆನ್ನ ಮೇಲೆ ಹೊತ್ತು  
ಈಜುತ ನನಗೂ ಈಜಲೂ ಕಲಿಸಿದವನು
ನಸುಕಿನಲಿ ಹಾಲು ಹಾಕಲು ಕರೆದೊಯ್ದು 
ಕತ್ತಲಿನ ಭಯವ ಹೊಡೆದೊಡಿಸಿಹನು

ನಮ್ಮೂರ ಅಜ್ಜನ ಜಾತ್ರೆಯಲಿ  
ಜನರ ಮಧ್ಯೆ  ಹಟ ಮಾಡಿದಾಗ  
ಹೆಗಲ ಮೇಲೆ ಕೂರಿಸಿಕೊಂಡು 
ನಾನು ಖುಷಿಪಡುವಾಗ 
ತಾನೂ ಸಂತಸ ಪಟ್ಟವನು 
 
ಮೋಸ ವಂಚನೆಯನು ಅರಿಯದೆ
ಇರುವುದರಲ್ಲಿಯೇ ಬದುಕು ಕಟ್ಟಿಕೊಂಡು  
ಬದುಕುವ ಛಲದ ಛಲಗಾರ 
ನನ್ನಪ್ಪನ ಜೀವನವೇ ಎನಗೆ ದೊಡ್ಡಪಾಠ 

ಪ್ರೀತಿಯ ಅಪ್ಪ ನಿನಗ್ಯಾರು ಸಾಟಿ ಈ ಜಗದೊಳಗೆ….
-ಅಕ್ಷಯಕುಮಾರಜೋಶಿ(ಅಕ್ಷು)

akshay-joshi

 

 

 

 

 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
sudhakarbyatroy
sudhakarbyatroy
6 years ago

I have shared your poem about appa.. FYI

sudhakarbyatroy
sudhakarbyatroy
6 years ago

Dear Akshu,

I have shared your poem on appa in my wall….FYI

Anatha Ramesh
6 years ago

ಮಲ್ಲಮ್ಮ ಯಾಟಗಲ್ ದೇವದುರ್ಗರ ಕವಿತೆ ಮತ್ತು ಗೋವಿಂದ ಹೆಗಡೆಯವರ ಗಜಲ್ ಮುದ ಕೊಟ್ಟಿತು. ಹಾಗೆಯೇ ಉಳಿದ ಕವಿತೆಗಳೂ ಸುಂದರ.

3
0
Would love your thoughts, please comment.x
()
x