ಕಾವ್ಯಧಾರೆ

ಪಂಜು ಕಾವ್ಯಧಾರೆ

ನಿರುತ್ತರ
ನನ್ನೊಳಗೆ ಕಾಡುವ ತುಮುಲಗಳಿಗೆ
ಅಂಕುಶವಿಟ್ಟು, ಹೊರ ನಡೆಯುವ
ವೇಳೆ, ಯಾರದೋ ನಿರ್ದಯೆಯಿಂದ
ಮುಳ್ಳಿನ ಹಾಸಿಗೆಯ ಮೇಲೆ 
ಪವಡಿಸಿದ ಅನುಭವ; 
ನಡುಗುಡ್ಡೆಯಲ್ಲಿ ಜೀವ ಸೆರೆಯಿಟ್ಟು,
ನನ್ನ ಹೊಸಕಿ, ಬಿಸುಡಿದ್ದಾರೆ.
ಅಶೀಲ ಕಲ್ಮಶ ಒಳ ಹೊಕ್ಕಿದೆ.

ರಸ್ತೆಯುದ್ದಕ್ಕೂ ಪ್ರತಿಭಟನಾಕಾರರು.
ಗೂಟದ ಕಾರುಗಳು ನುಸುಳುತ್ತಿವೆ ನಾನಿರುವೆಡೆ.
ಆರಕ್ಷಕರು, ಈರಕ್ಷಕರು ಒಂದಾಗಿದ್ದಾರೆ.
ಪ್ರಭಾವಳಿಯಂತೆ ನಿಂತಂತಿದೆ ಬೆನ್ನ ಹಿಂದೆ.

ನತದೃಷ್ಟೆಯೆಂದರೆ ನಾನೇ ಇರಬೇಕು.
ಅನಾಮಧೇಯಳಾಗಿ ಜನರ ಬಾಯಲ್ಲಿ
ಹರಿದಾಡುತ್ತಿದೆ ವಿಕೃತ ಕೃತ್ಯ.
ಬದುಕುವಾಸೆಗೆ ಬೆಲೆಕೊಟ್ಟು,
ಕಾಡುವ ಆ ರಾತ್ರಿಯ ಕರಿ ಛಾಯೆಯಿಂದ
ಬೇರ್ಪಟ್ಟು, ಬೆಳಗುವುದೆಂದೋ ಬದುಕು..?

ಸಂದೀಪ ಫಡ್ಕೆ, ಮುಂಡಾಜೆ

 

 

 

 


ನ್ಯಾಯ ದೊಗಲೆ ಇಲ್ಲ

ಬಡತನವು ಸೋಕದಂತೆ
ಕಣ್ಣಲ್ಲಿ ನೀರು ಬಾರದಂತೆ
ಪ್ರೀತಿಯಿಂದ ಬೆಳೆಸಿದರು
ನನ್ನ ಜನ್ಮದಾತರು

ಸಾಲ ಮೂಲ ಮಾಡಿಕೊಂಡು
ನನಗೆ ವಿದ್ಯೆ ಕೊಟ್ಟರು
ಕನಸಿಗೊಂದು ಏಣಿಕೊಟ್ಟು
ಮೇಲೆ ಹತ್ತು ಎಂದರು

ಬೆಳೆದಂತೆ ಮನೆಯ
ಕಷ್ಟನೀಗಬೇಕು ಅನಿಸಿತು
ಹಾಗಾಗಿ ಓದೊ ಛಲಕೆ
ಇನ್ನಷ್ಟು ಪುಷ್ಠಿ ಬಂದಿತು

ಅಮ್ಮನಿಗೆ ಗಾಡಿತೆಗಿಸಿ
ಕೊಡುವ ಆಸೆ ಬಂದಿತು
ಅವಳ ಹಿಂದೆ ಕುಳಿತು
ಊರು ಸುತ್ತಬೇಕು ಅನಿಸಿತು

ಹಾಗೆ ನಡೆದು ಬರುವಾಗ
ನಗುವು ಉಕ್ಕಿ ಬಂದಿತು
ಕನಸು ನನಸು ಆಗಲಿದೆ
ಎಂದು ಮನಸು ನುಡಿಯಿತು

ಮನೆಗೆ ಬೇಗ ಸೇರಬೇಕು
ಸ್ವಲ್ಪ ಸುಸ್ತು ಎನಿಸಿತು
ಓದೊ ದಾಹದಿಂದ ಮೈಲು ದೂರ
ದಾರಿಯು ಕಿರಿದಾಗೆ ಕಂಡಿತು

ದಾರಿ ಮಧ್ಯೆ ನಾಲ್ಕು ಜನ
ಅಡ್ಡಗಟ್ಡಿ ನಿಂತರು
ಪರಿಚಯಸ್ಥರೆನೊ ಎನಿಸುವಷ್ಟರಲ್ಲಿ
ಎಲ್ಲ ನಡೆದು ಹೋಯಿತು

ಮುತ್ತಿಕೊಂಡು ಜಿಗಣೆಯಂತೆ
ಬಿಡದೆ ರಕ್ತ ಹೀರಿದರು
ಪ್ರಾಣಪಕ್ಷಿ ಹಾರೊವರೆಗೂ
ನಿಂತು ದೂರ ಸರಿದರು

ಜೀವದಿಂದ ದೂರ ಸರಿದು
ನನ್ನನ್ನೆ ನಾನು ನೋಡಿದೆ
ಮರುಕ ಹುಟ್ಟಿ ಬಂತು
ಕೆಟ್ಟ ಸಾವು ಬಂದ ಪಾಡಿಗೆ

ಟಿವಿ ಪೇಪರ್ ಪೊಲೀಸ್  ಅಂತ
ಎಲ್ಲ ನಮ್ಮ ಮನೆಗೆ ಬಂದರು
ನೂರು ಪ್ರಶ್ನೆ ಕೇಳಿ ತಂದೆ
ತಾಯಿಯ. ಇಂಚಿಂಚಾಗಿ ಕೊಂದರು

ಬದುಕಿ ಬಂದು ತಂದೆ-ತಾಯಿಯ
ಕಣ್ಣೀರು ಒರೆಸಬೇಕು ಎನಿಸಿತು
ಸಾಧ್ಯವಾಗದಿದ್ದಕ್ಜೆ ನನ್ನ
ಆತ್ಮವು ನನ್ನೊಳಗೆ ಕೊರಗಿತು

ಲೆಕ್ಕವಿರದಷ್ಟು  ಸಹೋದರ
ಸಹೋದರಿಯರು ಜೊತೆಯಾದರು
ನ್ಯಾಯಕ್ಕಾಗಿ ಬಿಟ್ಟು ಬಿಡದೆ
ಹೋರಾಟ ಮಾಡಿದರು

ನ್ಯಾಯ ಸಿಗಲೆ ಇಲ್ಲ ನೋಡಿ ವರುಷಗಳೆ ಸಂದರು
ನನ್ನ ಆತ್ಮಕ್ಕೆ ಶಾಂತಿಯಿಲ್ಲ
ಕಣ್ಣುತೆರೆಯಬೇಕು ನ್ಯಾಯದೇವರು

ಪವಿತ್ರ ಆಚಾರ್ಯ

 

 

 

 


ಸ್ವರಚಿತ ಹಾಯ್ಕುಗಳು!
"""""""""""""""""""""
ಕನವರಿಕೆ
ತಲೆ ಬುಡವಿಲ್ಲದ
ಬಡಬಡಿಕೆ
~~~~~~~~~
'ಪ್ರಾರ್ಥಿಸಿ ಒಮ್ಮೆ
ನಂಬಿದ ದೇವರನು'
ವೈದ್ಯನ ಷರಾ
~~~~~~~~~
ಐದು ಬೆರಳು
ಸಮವಿಲ್ಲದಿದ್ದರೂ
ಮುಷ್ಠಿಗೆ ಬಲ
~~~~~~~~~
ದೈವ ನಂಬಿಕೆ
ಸಂಪೂರ್ಣ ವೈಯಕ್ತಿಕ
ಒತ್ತಾಯ ಸಲ್ಲ
~~~~~~~~~
ಬರೆಹಗಾರ
ಓದುಗನೂ ಆದರೆ
ಅರ್ಥಗರ್ಭಿತ
~~~~~~~~~
ಧ್ವನಿವರ್ಧಕ
ಭಾಷಣಕಾರನಿಗೆ
ಆತ್ಮೀಯ ಸಖ
~~~~~~~~~
ವಿಧಾನ ಸಭೆ
ನಿದ್ರೆ ಬಾರದವಗೆ
ಮೆದು ಹಾಸಿಗೆ
———–
ನಿದ್ರಾಹೀನನೂ
ಅಸೆಂಬ್ಲಿ ಹಾಲಿನಲಿ
ಗೊರಕೆ ಪ್ರಿಯ
~~~~~~~~~
ಪ್ರಭಾವಿ ವ್ಯಕ್ತಿ
ಸಂಪರ್ಕ ಇಲ್ಲದವ
ನಿಜ ಬಡವ
~~~~~~~~~
ಹಸಿವು ತೃಷೆ
ಇರದಿಲ್ಲದಿದ್ದರೆ
ಬದುಕು ಶೂನ್ಯ
~~~~~~~~~
ಗುಡಿಯ ಘಂಟೆ
ದೇವರ ಕರೆಯುವ
ವ್ಯರ್ಥ ಸಾಧನ
~~~~~~~~~
ಪ್ರಯತ್ನ ಮೀರಿ
ಘಟಿಸುವುದೆಲ್ಲವೂ
ಹಣೆ ಬರೆಹ
~~~~~~~~~
ಸಂತಾನ ಹೀನ
ದಂಪತಿಗಳ ಬಾಳು
ಕೊನೆಯ ಕೊಂಡಿ
~~~~~~~~~
ವಿಧವೆ ಪಟ್ಟ
ಅಗಲಿದ ಗಂಡನ
ಚಿರ ಕಾಣಿಕೆ
~~~~~~~
ವಿಶ್ವದಲ್ಲಿಯೇ
ದಪ್ಪ ಚರ್ಮದ ಪ್ರಾಣಿ
ರಾಜಕಾರಣಿ
~~~~~~~~~
ಕಾವಿ ತೊಟ್ಟರೂ
ಕಾಮ ಬಯಸುವವ
ಕಚ್ಚೆ ಹರುಕ
~~~~~~~~~
ಸಿಟ್ಟು ಸೆಡವು
ಅತಿಯಾದವನಿಗೆ
ಕಷ್ಟ ಕೋಟಲೆ
~~~~~~~~~
ಕಾಲನ ಕರೆ
ತಿಳಿಯುವುದಿದ್ದರೆ
ಬದುಕು ಶೂನ್ಯ
~~~~~~~~~
ಸತ್ಯವ ನಂಬಿ
ಬಾಳುವವನ ಗೋಳು
ದೀರ್ಘಕಾಲಿಕ
~~~~~~~~~
ಸುಖ ಸಂಪತ್ತು
ಹೇರಳವಾಗಿದ್ದರೂ
ಆಯುಷ್ಯ ಮುಖ್ಯ
~~~~~~~~~
ಸೃಷ್ಟಿಕರ್ತನು
ಬ್ರಹ್ಮಾಂಡ ರೂಪಿಸಿದ
ಅಭಿಯಂತರ
~~~~~~~~~
ಹಲ್ಲಿಲ್ಲದವ
ಕಡಲೆ ಕಾಳಿಗಾಗಿ
ಆಸೆಪಡುವ
~~~~~~~~~
ಹತ್ತಿದ ಏಣಿ
ಮರೆಯುವ ಮಾನವ
ದುಷ್ಟ ದಾನವ
~~~~~~~~~
ಒಗ್ಗಟ್ಟಿನಲ್ಲಿ
ಬಲ ಇರದಿದ್ದರೆ
ವಿಭಿನ್ನಮತ
~~~~~~~~~
ಸತಿಯ ಮಾತು
ಕೇಳುವ ಪತಿರಾಯ
ಚಾಣಕ್ಯಮತಿ
~~~~~~~~~
ಸ್ವಂತ ಮಕ್ಕಳ
ಕಾಳಜಿ ಮಾಡದವ
ಕೋಲೇ ಬಸವ
~~~~~~~~~
ಸ್ವಂತ ದುಡಿಮೆ
ಕೈಗೊಳ್ಳುವ ಸತಿಗೆ
ಪತಿ 'ತಾತ್ಸಾರ'
~~~~~~~~
ಶ್ರಾವಣ ಮಾಸ
ಮುಂದಿನ ಹಬ್ಬಗಳ
ಆರಂಭ ಸೂಚಿ
~~~~~~~~~
ಕೂಲಿ ಸಿಗದ
ಕಾರ್ಮಿಕನಂತೆ,ಖಾಲಿ
ಜೇನಿನ ಗೂಡು
~~~~~~~~~
ಹಳ್ಳಿಯವರ
ಒಳ್ಳೆಯತನ, ಮುಗ್ಧ
ಸ್ವಭಾವದಲ್ಲಿ
~~~~~~~~~
ಜನಪ್ರಿಯರ
ಅಭಿಮಾನೀ ಬಳಗ
ಪರಾವಲಂಬಿ
~~~~~~~~~
ಪರಿಶ್ರಮದ
ಪ್ರಾಮಾಣಿಕ ದುಡಿಮೆ
ನೆಮ್ಮದಿ ಕೇಂದ್ರ
~~~~~~~~~
ಕೋಟ್ಯಧಿಪತಿ
ಆದರೂ, ಮನೆಯಲ್ಲಿ
ಸತಿ ವಿಧೇಯ
~~~~~~~~~
ಅನ್ನಭಾಗ್ಯದ
ಮೌಲ್ಯವ ಬಲ್ಲವನು
ಹೆಂಡಗುಡುಕ
~~~~~~~~~
>ಹೊರಾ.ಪರಮೇಶ್ ಹೊಡೇನೂರು

 

 

 

 


ಆಕಾಶ ಮುಟ್ಟುವ ಗುಂಬಜ್ ಕಂಡೊಡನೆ,
ಗೋಪುರದ ತುದಿಯ
ಏಸುಕ್ರಿಸ್ತನ ಶಿಲುಬೆಯ ಕಂಡೊಡನೆ
ನಾನೊಬ್ಬ ಹಿಂದುವಾಗಿಯೂ
ನನ್ನ ಕಣ್ರೆಪ್ಪೆ ತಾನಾಗೆ ಮುಚ್ಚುತ್ತದೆ, 
ಒಂದೆರಡು ಕ್ಷಣದಲ್ಲಿ ತೆರೆಯುತ್ತದೆ.

ಗುಡಿಯೊಳಗಿನ ಗಂಟೆಯ ಸದ್ದಲ್ಲಿ
ಓಂಕಾರ ಹುಡುಕುತ್ತೇನೆ,
ಚರ್ಚಿನ ಗಂಟೆಯ ಸದ್ದಲ್ಲು,
ಅಲ್ಲಾಹುವಿ ನಮಾಜಿನಲ್ಲು.

ಅಲ್ಯಾರದ್ದೋ ರಕ್ತ ಹರಿಯುವಾಗ,
ಸುಮ್ಮನೆ ನೋಡುತ್ತೇನೆ,
ನಿಮ್ಮಂತೆಯೆ ನಾನಲ್ಲಿ
ಒಂದೇ ರಕ್ತ ಒಂದೇ ಮುಜಕುಲವೆನ್ನದೆ,
ಕೆಂಪಿನ ಕಣಕಣದಲ್ಲಿ ಧರ್ಮಹುಡುಕಿ ಸೋಲುತ್ತೇನೆ,
ನನ್ನ ಹೃದಯದೊಳಗಿನ ಮಾನವೀಯತೆಯ ಕೈಯ್ಯಿಂದ
ಕೆನ್ನೆಗೆರೆಡು ಬಾರಿಸಿಕೊಂಡು ಹಿಂತಿರುಗುತ್ತೇನೆ.

ಕ್ರಿಶ್ಚಿಯನ್ನನ ಸೋಕಿದ ಗಾಳಿ
ನೇರ ನನ್ನ ಎದೆಯೊಳಗಿಳಿಯುತ್ತದೆ,
ಹಿಂದುವಿನ ಬಿಸಿಯುಸಿರು,
ಮುಸಲ್ಮಾನೆನ್ನದೇ ಪ್ರತಿ ದಿನವು ಹಾದುಹೋಗುವಾಗಲೇ
ಧರ್ಮವೆಂದರೆ ಏನೆಂದು ನಾ ತಿಳಿಯುತ್ತೇನೆ….

ನಾಗರಾಜ ಕಡಲು ಉಪ್ಪುಂದ

 

 

 

 


                
ಆಹೋರಾತ್ರಿ                                   
ಆಹೋ ರಾತ್ರಿಯ    
ಆತ್ಮೀಯ ಮನ್ಮಥರೇ 
ಪ್ರೀತಿಯ ಬಣ್ಣ ತಿರುಗುವ ರತಿಕಾಮರೇ
ನೆನಪಾಗಿ ಕಾಡುತಿದೆ ಮನಧಾರೆಯ ಮೌನದಪ್ಪುಗೆ 
ಬಿಸಿಯೂಸಿರ ಆಲಿಂಘನದ ಅರಿವಿಲ್ಲದ ಅಜ್ಞಾನ ;
ಸೋನೆ ಸುರಿವ ಬೆಳದಿಂಗಳ ರಾತ್ರಿಯ 
ಚಲ್ಲಾಟ ಶೃಂಗಾರದ ಸಲ್ಲಾಪ 
ಬೆಳಕು ಹರಿದಂತೆ ಅಷ್ಟೇ ನಿಗೂಡ
ಬೆಚ್ಚನೆಯ ಹಚ್ಚ ಹಸುರಿನ ಸ್ವರ್ಶ
ರಾತ್ರಿಯೆಲ್ಲ ಚುಂಬಿಸಿದಷ್ಷು ಉಕ್ಕಿ
ಹರಿಯುವ ಮುತ್ತಿನ ಹೊನಲುಧಾರೆ
ಬೆಳಕಿನಲ್ಲಿ ಮರೆಯಾಗುವದು ಅಗಂತುಕ
ಅಪರಿಚಿತ ಮುಖವಿಲ್ಲದ ಮುಖ;
ಗರ್ಭದಲ್ಲಿಯೇ ಅಂಕುರಿಸಿ ಗುಡಿಕಟ್ಟಿದ ಚಂದ್ರ 
ಅನಾಥವಾಗಿಯೇ ಹೇಳ ಹೆಸರಿಲ್ಲದೆ ಗಟ್ಟಿಯಾಗಿ 
ಪಿಂಡವಾಗಿದ್ದಾನೆ; 
ದೇವದಾಸಿಯೆಂಬ ಪಟ್ಟ ಹೊತ್ತ ನನಗೆ 
ಯಾವ ನೈತಿಕ ದರ್ಶನವಿಲ್ಲ
ಸರದಿಯ ಪ್ರಕಾರ ವಿಟರನ್ನು 
ದರ್ಶಿಸಿ ಸ್ವರ್ಶಿಸುವುದೇ ನಿತ್ಯ ಕಾಯಕ ನನಗೆ 
ಕಾಮುಕರ ಕಣ್ಣಲ್ಲಿ ಉಲ್ಲಾಸದ ಗೊಂಬೆ 
ಬೀದಿ ಹೋಕರಿಗೆ ಸಂತೆಯ ಸೂಳೆ 
ಜಗತ್ತಿಗೆ ಜಾಹೀರಾದ ನಾನು ಮಾಯೆಯಲ್ಲ ನಿಜ
ಬಯಲಲ್ಲಿ ಬಯಲಾದ ಪ್ರಾತ್ಯಕ್ಷಿಕೆ ನಾನು 
ಕಾಮ ಭೋಗಕ್ಕೆ ಮಿಗಿಲಾದ ನನಗೆ 
ಕೆಟ್ ಮಿಲ್ಲೆಟ್ ಲೈಂಗಿಕ ರಾಜಕಾರಣ ಬೋಧಿಸುತ್ತಿದ್ದಾಳೆ.
-ಸಂತೋಷ್ ಟಿ ದೇವನಹಳ್ಳಿ

 

 

 

 


ತಂಗಾಳಿಯೆ ಬೀಸು ಬಾ
ಓ ತಂಗಾಳಿಯೆ
ಬೀಸುಬಾ…
    
ಸುಡುವ 
ವಿಶ್ವಕಂಗಳ
ಹಸಿವ
ನೋವ 
ಒರೆಸಲು ಬಾ

ಎದೆಗಳ 
ಕಿತ್ತು ತಿನ್ನುವ
ಕಪ್ಪು ಮುಸಕ 
ದ್ವೇಷವ
ಮರೆಸು ಬಾ

ಜೀವ ಸೆಲೆಯೊಳಗೆ
ಸವಿ ಭಾವನೆಯ
ತಂಪ ನೆರೆಯಲು ಬಾ

ಅನಂತ ಜಗದ
ಒಡಲ 
ಹಸಿರು ಚೇತನಕೆ
ಚಿಲುಮೆಯಾಗಿ 
ಚಿಮ್ಮುತ್ತ ಬಾ 

ಬೇಸಿಗೆ ಎದೆಯ 
ಓಲವ 
ಬೇಗೆಯ 
ತಣಿಸಲುಬಾ..

ಓ ತಂಗಾಳಿಯೆ
ಬೀಸುಬಾ…

ರಾಜಕೀಯ 
ಒಳಸಂಚು
ಸುಳಿ ತರಂಗಗಳ 
ಬಿಡಸಲು ಬಾ..

ನಲುಗುತ್ತಿರುವ
ಮಾನವೀಯತೆ
ಉಳಿಸಿ
ವಿಶ್ವ ಜೀವಿಗೆ
ಸಮಾನ ಪ್ರೀತಿಯ
ಹರಿಸಲು
ಬಾ..ಬಾ. 
-ಸಿಪಿಲೆನಂದಿನಿ

 

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಪಂಜು ಕಾವ್ಯಧಾರೆ

  1. ನಿರುತ್ತರ,ಆಹೋರಾತ್ರಿ,ಮತ್ತು ಹಾಯ್ಕುಗಳು ಪರ್ವಾಗಿಲ್ಲ.

Leave a Reply

Your email address will not be published. Required fields are marked *