೧. ಕೂರೂಪಿ…….
ದಾನ ಪಡೆದೆ ಜೀವವ,
ನನ್ನ ಶಿಲ್ಪಿ ನಾನಲ್ಲ…
ಕರಿ ಬೆಕ್ಕೆಂದು ತಳ್ಳದಿರಿ,
ನಾ ನಡೆದ ಹಾದಿ ಅಪಶಕುನವಲ್ಲ…
ವರ್ಣವಿರಬೊಹುದೇನೋ ಕಡುಗಪ್ಪು,
ಕರಿ ಬಂಡೆಯಂತೆ ನನ್ನ ಮನಸಿಲ್ಲ….
ತೊಗಲ ಬಣ್ಣ ಕಪ್ಪಾದ ಮಾತ್ರಕ್ಕೆ ,
ನಾ ಬರೆದ ಪದಗಳು ಕವನಗಳಾಗಲಿಲ್ಲ…
ನನ್ನ ಭಾವನೆಗಳಿಗೂ ಮಳೆಬಿಲ್ಲಿನ ರಂಗಿದೆ,
ಹಾಲ್ಗೆನ್ನೆಯವಳ/ವನ ಪದ್ಯದ ಮರೆಯಲ್ಲಿ ನಿಮಗದು ಕಾಣಲಿಲ್ಲ…
ಗೀಚಿದಷ್ಟೂ ಕುಳಿತಿದೆ ಮೂಲೆಯಲ್ಲಿ ಸಾಲುಗಳೆಲ್ಲವು,
ರೂಪವಂತರ ಹಸಿ ಕಾಳುಗಳೂ ನಿಮಗೆ ಬೆಂದಂತೆ,ನಾ ಬರೆದುದಕ್ಕೆ ಮಾತ್ರ ಪಕ್ವತೆಯಿಲ್ಲ…
ಸಹಿಸುವೆ ಇಂದೂ ಎಂದೂ ಕೊನೆವರೆಗೂ,
ಎಲ್ಲಾ ಬಣ್ಣಗಳ ನುಂಗುವ ಕಪ್ಪು ನಾ….
ಅಂದಕ್ಕೆ ಮಾತ್ರ ಬೆಲೆ ಕಟ್ಟುವವರೇ,
ನೀವೇ ಅಳೆದು ಹೆಸರಿಟ್ಟ ಕುರೂಪಿ ನಾ……
೨….ನನ್ನಾಸೆ…..
ನಿನ್ನೊಂದಿಗೆ ಬಾನೆತ್ತರಕ್ಕೆ ಹಾರಬೇಕೆಂದಿದ್ದೆ,
ರೆಕ್ಕೆ ಸಿಕ್ಕರೂ ಯಾಕೋ ಭಯ ಜಿಗಿಯಲು…
ನಿನ್ನ ಅಪ್ಪಿ ಮುದ್ದಾಡಬೇಕೆಂದಿದ್ದೆ,
ಪ್ರೀತಿಯ ಬುಗ್ಗೆ ಇದ್ದರೂ ಎಲ್ಲಾ ಮರೀಚಿಕೆ ಯಂತಾಗಿ ಕಾಡಿದೆ ಬಟ್ಟ ಬಯಲು….
ನೀ ಧೃವ ತಾರೆ , ನಿನ್ನನ್ನೇ ಹಿಂಬಾಲಿಸಬೇಕೆಂದಿದ್ದೆ,
ಆದೇರೇಕೊ ತಡೆದಿದೆ ಕಾರ್ಮೋಡದ ಕಗ್ಗತ್ತಲು…
ಸಮಯದ ಮುಳ್ಳುಗಳ ಬೇಲಿ ದಾಟಿ ಕಹಳೆಯೂದುವ ನಿನ್ನ ಕಲರವ ಕೇಳಬಯಸಿದ್ದೆ,
ಪರಿಸ್ಥಿತಿಗಳ ಸಂಕೋಲೆಯನ್ನಾಗಲಿಲ್ಲ ಬಿಡಿಸಲು….
ನಾನಿಲ್ಲದೆ ನೀನಿರಬಲ್ಲೆ ಅದೇನೋ ನಿಜ
ನೀನಿಲ್ಲದೆ ನಾನಿದ್ದರೆ ಅದು ಬರೀ ಜೀವಂತ ಶವ…..
ಪುಣ್ಯವಂತರು, ನಿನ್ನ ಬಣ್ಣಿಸಿ ನಲಿವರು…
ಭಾಗ್ಯವಂತರು, ನಿನ್ನ ಸೇವೆಗಯ್ಯುವವರು…
ಧನ್ಯರು ನಿನ್ನ ನುಡಿವವರು…..
ಜ್ಞಾನಿಗಳು ನಿನ್ನ ತಲೆಯಲಿಟ್ಟು ಮೆರೆಸುವರು…
ಹಾರೈಸುವೆ ನಾ, ಬೆಳೆಯುತ್ತಿರು ಎಂದೂ ನೀ ಬಾಡದೆ,
ನಿನ್ನ ತೇರ ಎಳೆಯುತ್ತಿರಲಿ ಕನ್ನಡಿಗರು ಎಂದೂ ಕುಗ್ಗದೆ….
-ಶೀತಲ್
ದೇವರಿಗೂ ಬೊಜ್ಜು
ಈಗೀಗ ದಲಿತರಿಗೂ
ಸಾವಿಗೂ ಅನೂಹ್ಯ, ಅನ್ಯೋನ್ಯ ಸಂಬಂಧ.
ಮಕ್ಕಳೇ ದೇವರು, ಹೆಣ್ಣುಮಕ್ಕಳೇ ದೇವತೆಗಳು
ಎನ್ನುವ ಮಹಾನ್ ರಾಷ್ಟ್ರದಲ್ಲಿ
ಓಣಿಗೊಂದಂದರಂತೆ ಮುಕ್ಕೋಟಿ ದೇವರುಗಳ ಪ್ರತಿಷ್ಟಾಪನೆ
ಆದರೇನೂ ಪ್ರಯೋಜನ?
ಅಮಾಯಕ ದಲಿತ ಮುಗ್ಧ ಕಂದಮ್ಮಗಳ, ಸ್ತ್ರೀ ಗಳ
ಜೀವಂತ ದಹನ
ಆ ದೇವರುಗಳ ಕಣ್ಣಿಗೆ ಕಾಣಿಸುತ್ತಲೇ ಇಲ್ಲ.
ದೇವಾಲಯಗಳ ಗಂಟೆಸದ್ದಿಗೆ
ಪೂಜಾರಿಗಳ ಕಪಟ ಮಂತ್ರಘೋಷಗಳಿಗೆ
ಮಸೀದಿಯ ನಮಾಜಿನ ಕೂಗಿಗೆ
ಪಾದ್ರಿಗಳ ಒಣ ಉಪದೇಶಗಳಿಗೆ
ಎಲ್ಲ ದೇವರುಗಳ ಕಿವಿ ಪೂರ್ತಿ ಕಿವುಡು
ಆರತಿ,ಧೂಪ,ಕರ್ಪೂರ, ಮೇಣದ ಬತ್ತಿಗಳ ಹೊಗೆ ಅತಿಯಾಗಿ ಎಲ್ಲ
ದೇವರುಗಳ ಕಣ್ಣು ಮಂಜು ಮಂಜು,ಪಾಪ!
ಬಂಗಾರದಿಂದ ಕಳಸ ಸಿಂಗರಿಸಿಕೊಂಡು
ವಜ್ರವೈಢೂರ್ಯ ಹೇಮನಿರ್ಮಿತ
ಆಭರಣಗಳ ಧರಿಸಿಕೊಂಡ
ಎಲ್ಲ ದೇವರುಗಳಿಗೆ ಈಗಾಗಲೇ ಅತಿ ಮೈಭಾರ.
ಉಳ್ಳವರ ಗುಡಿ,ಮಸೀದಿ, ಇಗರ್ಜಿಗಳೆಂಬ
ಬಂಗಾರದ ಪಂಜರಗಳಲ್ಲಿ
ಬಂಧಿಯಾಗಿರುವ ದೇವರುಗಳಿಗೆ
ಕಾಲು ಎತ್ತಿ ಇಡಲು ಆಗದಷ್ಟು
ಚಿನ್ನದ ಬೊಜ್ಜು!
ಹಾಗಾಗಿ ದಲಿತರನ್ನು ದೇವಸ್ಥಾನದೊಳಗೆ
ದೇವರುಗಳು ಕರೆಸಿಕೊಳ್ಳುತ್ತಿಲ್ಲ.
ದಲಿತರಿಗೆ ಬಹಿಷ್ಕಾರ ಹಾಕುತ್ತಿದ್ದರೂ
ಗಮನಿಸದ ದೇವರುಗಳು
ಢೊಂಗಿ ಭಕ್ತರಿಟ್ಟಿರುವ ನೈವೇದ್ಯವನ್ನೂ
ತಿನ್ನುವುದರಲ್ಲಿಯೇ ಸದಾ ಮಗ್ನ.
-ಲಕ್ಷ್ಮಿಕಾಂತ ಮಿರಜಕರ
ನನ್ನವಳು
ನನ್ನೆದೆಯ ನವಿರಾದ ಭಾವವಾಗಿ
ಹಸಿರ ಚಿಗುರು ಲತೆಯಾಗಿ ಬಾ
ಹರಿಯುವ ನದಿಯಂತೆ ಬಾ
ಬಾ ಬಾ ನನ್ನೆದೆಗೆ ಬಾ ನನ್ನವಳಾಗಿ ಬಾ.
ಬತ್ತಿದ ನನ್ನೆದೆಯ ಅಂಗಳಕೆ ಚಿತ್ತಾರವಾಗಿ ಬಾ
ನೋವುಂಡ ನನ್ನೆದೆಗೆ ಸುಖ ನೀಡುವ ಸಖಿಯಾಗಿ ಬಾ
ವಾತ್ಸಲ್ಯ ತೋರುವ ಮಾತೆಯಾಗಿ ಬಾ
ಬಾ ಬಾ ನನ್ನೆದೆಗೆ ಬಾ ನನ್ನವಳಾಗಿ ಬಾ
ನನ್ನ ಮುದ್ದಿನರಸಿಯಾಗಿ ಬಾ
ಸದಾ ಬೆಳಕನೀಡುವ ಜ್ಯೋತಿಯಾಗಿ ಬಾ
ನನ್ನ ಕಂಗಳಲ್ಲಿ ಮಿಂಚಾಗಿ ಬಾ
ಬಾ ಬಾ ನನ್ನೆದೆಗೆ ಬಾ ನನ್ನವಳಾಗಿ ಬಾ
ಸುಂದರ ಸುತನ ಹೇರುವ ಮಡದಿಯಾಗಿ ಬಾ
ಪ್ರೀತಿಯ ಆಸರೆ ನೀಡಿ ಬಲ ನೀಡು ಬಾ
ಅವಳಾಕ್ರಮಿಸಿಕೊಂಡ ಸಿರಿ ಮನವೀಗ ಅರ್ಥವಿಲ್ಲದಂತಾಗಿದೆ.
ಬಾ ನನ್ನ ತೋಳ್ಸೆರೆಗೆ ನೀಡು ಬಾ ನವೀನ ಅರ್ಥವಾ ಪ್ರೀತಿಗೆ.
ಹೊಸತೊಂದು ಕನಸಿನ ಕನವರಿಕೆಯಲ್ಲಿ
ನನ್ನ ಮನ ಬೆಳಗುವ ನೀ ಅದೆಲ್ಲಿ ಅಡಗಿದ್ದರೂ
ಬಾ ಓಡೋಡಿ ಬಾ ನಿನ್ನದೇ ನಿರೀಕ್ಷೆಯಲ್ಲಿ ಕಾದಿರುವೆ.
-ಲಕ್ಷ್ಮೀಬಾಯಿ ಪಾಟೀಲ್
ಅವಳ ನೆನಪು
ತಿಳಿದರೂ ತಿಳಿಯಲಾದೆನೂ
ನಿನ್ನ ದೂರವ ಸಹಿಸಲಾರೆನೂ
ಕ್ಷಣವೂ ನೆಪಕೆ ಬಂದು ಹೋಗು
ನಿನ್ನ ಮೊಗವ ತೋರಿ ಹೋಗು||೧||
ನಿನ್ನ ಒಲವೇ ಸ್ಪೂರ್ತಿ ಚಿಲುಮೆ
ಬದುಕು ಬಂಡಿಯ ನಡೆಸಲು
ಹಳೆಯ ಕ್ಷಣಗಳು ಮರಳಿ ಬೇಕು
ಕಳೆದ ದಾರಿಯ ನೆನೆಯಲು||೨||
ಮನವೇ ನೀನು ಏಕೆ ಹೀಗೆ
ಎದುರು ಇದ್ದರು ಇಲ್ಲದ್ಹಂಗೆ
ಕನಸುಗಳಿಗೆ ಜೀವ ತುಂಬು
ಒಲವ ಸುಧೆಯ ಚೆಲ್ಲುವವು||೩||
ಮರಳಿ ಬಾ ಎನ್ನ ಮನವೇ
ದೂರ ಸಾಗದೇ ಎಲ್ಲಿಯೂ
ಕಾಣುತಿರುವೆ ನಿನ್ನ ಕನಸೇ
ನನ್ನ ಬೊಗಸೆ ಕಣ್ಣಲ್ಲಿಯೂ.||೪||
-ಅನಿಲ್ ಕುಲಕರ್ಣಿ
ಅನುಮಾನವೆಂಬ ಭಯಾನಕ
ಬೇನೆಗೆ ಮದ್ದು ಇದೆಯೇ?
ಪ್ರತ್ಯಕ್ಷವಲ್ಲದ ಊಹೆಯ
ಜಾಡು ಹಿಡಿದು
ಕಠೋರ ಬಂಧನದ
ಬಲೆಗೆ ಸಿಲುಕಿತ್ತು
ಕೇಳಬಾರದ್ದು ಕೇಳಿ.
ಅನುಮಾನವೆಂಬ ಭಯಾನಕ
ಬೇನೆಗೆ ಮದ್ದು ಇದೆಯೇ?
ತಿಳಿದಂತೆ ತಡೆಯದೇ
ಕೇಳುತ್ತ ಹುಚ್ಚನಂತೆ
ಯಾರದೋ ಕೆಲಸಕ್ಕೆ
ಬಾರದ ವಿಷಯದ ಕುರಿತು.
ಅನುಮಾನವೆಂಬ ಭಯಾನಕ
ಬೇನೆಗೆ ಮದ್ದು ಇದೆಯೇ?
ಕಂಡು ಕೇಳಲರಿಯದೇ
ಗುನುಗಿತ್ತು ಅನುಮಾನದಿಂದ
ಯಾರದೋ ಬಿಕಾರಿ
ಮಾತು ಕೇಳಿ.
ಅನುಮಾನವೆಂಬ ಭಯಾನಕ
ಬೇನೆಗೆ ಮದ್ದು ಇದೆಯೇ?
ಪ್ರತ್ಯಕ್ಷ ಕಂಡು
ಗಾಬರಿಯಾಗಿತ್ತು
ತನ್ನ ಮುಖಕ್ಕೆ ತಾನೇ
ಹೊಡೆದುಕೊಳ್ಳುವ ಹಾಗೆ…..!
-ಪಾಲಾಕ್ಷ. ಬ.ತಿಪ್ಪಳ್ಳಿ
Nannavalu kavana sogasagi mudibandide