ಕಾವ್ಯಧಾರೆ

ಪಂಜು ಕಾವ್ಯಧಾರೆ

ಪಯಣದಂತ್ಯದೊಳಗೆ !!!

ಅಕಸ್ಮಾತ್ತಾಗಿ ನಾನೂ
ಏರಿ ಬಿಟ್ಟೆ ಈ ಬಸ್ಸು
ಅಯ್ಯೋ.. ಎಷ್ಟು ರಶ್ಶು!
ಮೊದಲೆ ಇಷ್ಟೊಂದು ಜನ
ತುಂಬಿ ತುಳುಕುತ್ತಾ ಇದ್ದಾರೆ ..!!

ಇಳಿಯೋಣವೇ …?? ಇದೇನಿದು.?
ಹೆದ್ದಾರಿಯಲಿ ಓಟ ಶುರುವಾಗಿ ಬಿಟ್ಟಿದೆ
ಬರೀ ಕತ್ತಲು ಬೆಳಕುಗಳಷ್ಟೆ….
ಯಾವುದೇ ಪರಿಧಿ ಗೋಚರಿಸುತ್ತಿಲ್ಲ
ಆದರೂ ನಡುವೆ ಗೋಡೆಯಿದೆಯಂತೆ.!

ಮಿಸುಕಾಡಿ ,ತಡಕಾಡಿ 
ಸರಿಸಿ ,ತುಳಿದು ಮುಂದೆ ಬಂದೆ…
ಹ ಹ್ಹ ಹ…ಇಲ್ಲಿಯೂ ಸೀಟುಗಳ
ಮೀಸಲಾತಿ ..ಆದರೆ ಕುಳಿತುಕೊಂಡವರು
ಯಾರ್ಯಾರೊ..!!!?

ಆದರೂ ಈ ರಶ್ಶಲ್ಲಿ ಏನೋ
ಸುಖವಿದೆ ,ಮನಕಾನಂದವಿದೆ
ಉಪ್ಪಿನಕಾಯಂತೆ ಒತ್ತಿ ಹೋಗಿರಲು
ಕಾಯಗಳು, ಲಿಂಗ ಭೇದ ಮರೆತಾಗ…
ಮೈಲಿಗೆ ಮಾರು ದೂರ ಹೋಗಿದೆ..!

ಕೆಲವರಿಗೆ ನೆಲೆ ಸಿಗುತ್ತಿದೆ 
ಮತ್ಯಾರೊ ಹೊಸ ನೆಲೆಗಾಗಿ ಹತ್ತುತ್ತಿದ್ದಾರೆ
ಎಲ್ಲರೂ ಘಳಿಗೆಗಳ ಜೊತೆಗಾರರಷ್ಟೇ..
ಜೊತೆಯಾಗುವವರು ಯಾವುದೋ
ಕದಪುಗಳನ್ನಾಲಿಂಗಿಸಿ ಮದನಿಕೆಯೊಡನೆ 
ಕದನವಾಡಿ ಬಂದಿರಬಹುದು…!

ದೀಪ ಉರಿಸಿ ಬಂದಿರಬಹುದು
ನಮಾಜು ಮುಗಿಸಿ ಬಂದಿರಬಹುದು
ಕ್ಯಾಂಡಲ್ ಬೆಳಗಿಸಿ ಬಂದಿರಬಹುದು
ಕತ್ತಿಯ ರಕ್ತ ಒರಸಿ ಬಂದಿರಬಹುದು, 
ಕಸವನರಸಿ ಬಂದಿರಬಹುದು ಆದರೂ 
ಭೇದವಿಲ್ಲ, ಇದೇ ಒಂದು ಖುಷಿಯೀಗ

ಅಬ್ಬಬ್ಬಾ..!! ಇಲ್ಲಿಯೂ ಮತ್ತದೇ 
ಮತಾಪುಗಳ ಭಯಂಕರ ಆರ್ಭಟ!
ಸ್ವಂತಿಕೆಯ ಟಂಕ ಕೆಳಗೆ ಬಿದ್ದಾಗ
ಯಾರದೋ ಕಾಲಡಿ ಸಿಲುಕಿದ
ಅವನ ಪಾಡು ಈಗ ಜೀನು ಹೊತ್ತ ಹಯವಾಗಿದೆ !!

ಬೆವರಿನ ಗಂಧವನು ತಿರಸ್ಕರಿಸಿ
ಮೇಲಿರಿದವ, ಬರೀ ವಾಸನೆಯ
ಮೊರೆ ಹೋದಾಗ ಮರೆತನವನಿದನ್ನು..
"ಪಯಣದಲಿ ಜೊತೆಗಿರುವುದು 
ಚಾಲಕ ನಿರ್ವಾಹಕರಿಬ್ಬರೇ , ಮುಗಿದಾಗ
ಇಳಿಯುವವರು ನಾವೆಂದು"

ಇದ ಮರೆತು ಹೊಸ ಹೊಸ 
ನಾಮದಲಿ ಗವಳ ಹುಟ್ಟಿಸಿ
ಬೆಂಕಿಯುಂಡೆಯಲಿ ಆಡುವ ಮೂಢರೇ
ತಿಳಿದುಕೊಳ್ಳಿ ಬಸ್ಸು ಸರಿಯಾಗಿದ್ದಲ್ಲಿ
ನಿಮ್ಮ ನೆಲೆಯನ್ನಾದರು ತಲುಪುವಿರಿ
ಎಡವಿ ಬಿದ್ದಲ್ಲಿ ಕೊನೆಯ ಗೊರ ಗೊರ
ನಿಮ್ಮ ಗಂಟಲಿಗಾಭರಣವಾಗುವುದು.!!!

#ಪ್ರೇಮಾತ್ಮ ಗಣೇಶ್ ಅದ್ಯಪಾಡಿ

ganesh-adyapady

 

 

 

 

 


೧      ಶತಾಯುಷಿ ಡಾ.ಆರ್.ರಾಮಣ್ಣ

ನೂರು ಶರದಗಳನ್ನು ಭೇಟಿ ಮಾಡಿಹ ಹಿರಿಯ
ಕೋಲಾರ ಜಿಲ್ಲೆಯ ಮಗ ಕನ್ನಡಿಗ ವೈದ್ಯ
ಬಡತನದ ಬೇಗೆಯಲಿ ಬೆಂದು ಬಂದಿಹ ಜೀವ
ಕಷ್ಟ ಕಾರ್ಪಣ್ಯಗಳನೆದುರಿಸಿ ಗೆದ್ದ ಭಾವ
ಕಿರಿ ವಯದಿ ಮನೆ ತೊರೆದು ವಸತಿ ನಿಲಯದಿ ನಿಂದು
ಶ್ರಮ ವಹಿಸಿ ಅಭ್ಯಸಿಸಿ ಎತ್ತರಕದಕ್ಕೇರಿದಿರಿ
ಬದುಕಿನಲಿ ನೀವು. ಪಡೆದ ಸಿರಿತನ ಮರೆತು
ಬಡ ಬಗ್ಗರಿಗೆ ಮರುಗಿ ಕೈಲಾದ ಸಹಾಯ ಮಾಡಿ
ಧನ್ಯತೆಯ ಪಡೆದಿರಿ. ವಿದ್ಯೆ ಬಾಳಿನ ಬೆಳಕೆಂದು
ಅರಿತು ಹಲವು ವಿದ್ಯಾ ಸಂಸ್ಥೆಗಳ ಪೋಷಿಸಿದಿರಿ.
ಗಟ್ಟಿ ಮುಟ್ಟಾದ ದೇಹ, ಗಂಭೀರ ನಡೆ, ಮಾತು.
ತೂಕ ತಪ್ಪದ ವ್ಯಕ್ತಿತ್ವಕ್ಕೆ ಮತ್ತೊಂದು ಹೆಸರು.
ಚುರುಕಾದ ಕಿವಿ ಕಣ್ಣು, ತುಂಬು ಜೀವನ ಪ್ರೀತಿ
ಮಾಗಿದ ಹಿರಿತನಕೆ ಸಾಕ್ಷಿ ಮನದಲಿಹ ತೃಪ್ತಿ

೨.   ಶೇಷ-ಲೀಲಾ

ಶೇಷಪ್ಪನವರಿಗೆ ಅರೆ ಕ್ಷಣವು ಬಿಡುವಿಲ್ಲ
ಕಾಯಕವೆ ಕೈಲಾಸ ಇವರ ಜೀವನ ಸೂತ್ರ
ಮಾತು: ಹಿತ-ಮಿತ; ಮೌನ: ಆಪ್ಯಾಯಮಾನ
ನೇತ್ರ ಶ್ರವಣಗಳು ಬಲು ಚುರುಕು. ನೀಳ ನಾಸಿಕ, ಗಲ್ಲ
ಚೂಪು ಮೊನಚು. ಸುಂದರ ಪುರುಷಾಕಾರ ತದ್ರೂಪು
ರಾಜಕುಮಾರ. ತುಂಬು ಸಂಸಾರದ ಹಿರಿತಲೆ.
ಅಜ್ಜನಿಗೆ ಪ್ರೀತಿಯ ಮಕ್ಕಳು ಮೊಮ್ಮಕ್ಕಳ ಗುಂಪು
ಹಿರಿದಾಗಿ ಬಾಳಬೇಕೆಂಬಾಸೆ ಸಹಜವಲೆ.
     
ಪ್ರೀತಿ ವಾತ್ಸಲ್ಯಗಳ ಪ್ರತಿ ಮೂರ್ತಿ ಈ ತಾಯಿ
ಜೀವ ಕಾರುಣ್ಯದಲಿ ಮಮತೆ ಮರುಕಗಳಲ್ಲಿ
ಬದುಕು  ಕಟ್ಟುವ ಸಹನೆ. ಕಷ್ಟ ಸುಖಗಳನುಂಡು
ತಾನು ತನ್ನದು ಮರೆತು ಮನೆ ಮಂದಿ ಏಳಿಗೆಗೆ
ದುಡಿದು ಬಾಗಿದ ಬೆನ್ನು. ಇಹದಲ್ಲೆ ಪರವರಸೊ
ಸಾತ್ವಿಕತೆ. ಭೂಮಿ ತೂಕದ ಹೆಣ್ಣು. ಹೆಸರು ಲೀಲಾ.
– ಮಾ.ವೆಂ.ಶ್ರೀನಾಥ

sreenath-m-v

 

 

 

 

 


  ಕಸ

  ಯಾರಮನೆಯಲ್ಲಿ
  ಬೀಳುವುದಿಲ್ಲ ಹೇಳಿ ಕಸ!
  ಬಿದ್ದಂತೆ ಗುಡಿಸಿ
  ಮಾಡುವರು ಕನ್ನಡಿ!
  ಕೆಲವರು
  ಗುಡಿಸಲೆಣಿಸುವರು
  ಮೀನ ಮೇಷ!
  ಗುಡಿಸಿದರಾಯ್ತೆಂಬ
  ತಾತ್ಸಾರ!
  ಆಮೇಲೆ ನಂತರ
  ಹೊತ್ತು ವಾಲಲಿ
  ಸಂಜೆಯಾಗಲಿ
  ದನಕರು
  ಓಡಾಟ ನಿಲ್ಲಲಿ!
  ಇಂದೇನು ಆಗಮಿಸರು
  ಅತಿಥಿ ಬಂಧು ಮಿತ್ರರು
  ಪ್ರೀತಿ ಪಾತ್ರರು
  ಬಹುಮಾನಿತರು!
  ಇಷ್ಟು ಬೇಗ ತೊರೆಯಬೇಕೆ
  ವಿಶ್ರಾಂತಿಯ ಆಸರೆ !
  ಎದ್ದೇಳಲು ಬೇಸರ
  ಎಲ್ಲಿದೆಯೋ ಪೊರಕೆ!
  ಇಹುದಲ್ಲ ಕಸ ಅಲ್ಪ!
  ಬೀಳಲಿ ಇನ್ನೂ ಸ್ವಲ್ಪ!
  ಎಷ್ಟು ಗುಡಿಸಿದರೂ
  ಬೀಳುತ್ತೆ ಮತ್ತೆ ಮತ್ತೆ!
  ಎದ್ದೇಳೋಣ ನಿಧಾನ
  ಗುಡಿಸೋಣ ಒಟ್ಟಿಗೆ!
  ಎತ್ತಿ ಹಾಕೋಣ ಒಮ್ಮೆಗೆ!
  ಎಣಿಸಿ ಗುಣಿಸಿ ಸಮಾಧಾನಿಸಿ
  ಮಾಡುವರು ಮನೆ ತಿಪ್ಪೆ!
  ಮನೆಯಂತೆ ಮನವನು…..
        
-ಕೆ ಟಿ ಸೋಮಶೇಖರ ಹೊಳಲ್ಕೆರೆ. 

somashekar-k-t

 

 

 

 

 


ತಾ ಕೈಯನು 

ತಾ ಕೈಯನು 
ತೊಡಿಸುವೆ ನಿನ್ನಿಷ್ಟದ್ದೆ ಬಳೆಯ..
ಬಳೆಯನ್ನಲಾರೆ ಇದಕೆ
ಸದಾ ನಾ ಕೈ ಹಿಡಿದಿರುವ ಬಂಧವಲ್ಲವೆ…??

ಬರಲಿ ಮತ್ತೆ ಮತ್ತೆ ಜಾತ್ರೆ
ಕೈ ಹಿಡಿದು ಸುಮ್ಮನೆ ಕಳೆದ್ಹೋಗಲು..
ಜಂಗುಳಿಯಲೂ ಕಿರುಬೆರಳ
ಸ್ಪರ್ಶವ ಗಟ್ಟಿಗೊಳಿಸಿ ಏಕಾಂತವನನುಭವಿಸಲು…
ಕಣ್ಣಾಲೆಗಳ ಒಳಗೆ ಕಂಡೂ ಕಾಣದ ಹನಿ ಖುಷಿಯ ಪಡೆಯಲು
ತಾ ಕೈಯನು…

ಓಲೆಗಳೆಡೆಗೆ ಕಣ್ಣಡಿಸುತ್ತಾ
ನನ್ನನ್ನೆ ದಿಟ್ಟಿಸುವ ನಿನ್ನ ಕಣ್ಣಕಂಡು ಕ್ಷಣ ರೋಮಾಂಚಿತನಾಗಿದ್ದೆ..!
ನನ್ನಿಷ್ಟವ ನಾ ಹೇಳಲ್ಹೇಗೆ?
ನಿನ್ನ ಮುಂಗುರುಳ ಬದಿಗೆ
ಓಲೆಯೂ ತೀರಾ ಸಣ್ಣ..!

ರಾಶಿ ಓಲೆಗಳ ನಡುವೆ ನಿನಿದ್ದರೂ
ಮತ್ತೆ ತಿಳಿಸುವ ಖಾತರ ನಿಂದು
ನನ್ನೆಲ್ಲಾ ಸೌಂದರ್ಯದ ಒಡೆಯ ನೀನೆಂದು..!

ನನ್ನಾತ್ಮದಾಳದಲೂ ನನ್ನ ತುಂಬು ಪ್ರೇಮ ನೀನೆಂದು ತಿಳಿಸುವ ದರ್ದು ನಂದು…!

ತಾ ಕೈಯನು
ಬೊಗಸೆ ಪ್ರೀತಿ
ಪ್ರಾಮಾಣಿಕವಾಗಿ ಕೊಡುವೆನು…!!

–ಸೂಗೂರಯ್ಯ ಹಿರೇಮಠ

sugurayya-hiremath

 

 

 

 

 


ಬೆಚ್ಚಗಿನ ಮನೆ
ಕೇವಲ ಭೂಪಟದಲ್ಲಿ ಮಾತ್ರ  ಸುಂದರವಾಗಿ  ಕಾಣುವುದು
ನಮ್ಮ ಭಾರತದ ಮುಕುಟ ಮಣಿ  ಕಾಶ್ಮೀರ.
ಅಲ್ಲಿ ಹೋಗಿ ಬಂದಾಗಿನಿಂದ  ಆಗಿರುವುದು
ಎನ್ನ ಹೃದಯ ಬರೀ ನೋವಿನ ಆಗರ. 

ಹಿಮಚ್ಛಾದಿತ ಸುಂದರ ಕಣಿವೆಯ ಸೊಬಗನ್ನು ಸವಿಯುತ್ತ
ಮೈಮರೆತು ಪಟ್ನಿ ಟಾಪಿನಲ್ಲಿ  ನಿಂತಾಗ  
ಕೇಳಿಸಿತೊಂದು ಹೃದಯ ಕರುಗುವಂಥ ದೀನ ಸ್ವರ.
‘ಅಮ್ಮಾ..ಅಮ್ಮಾಜಿ..ಇಸೇ  ಬಹುತ ಭೂಕ್ ಲಗೀ ಹೈ
ಕುಛ ಖಾನಾ ಹೈ ತೋ ದೇ ದೋ”

ಆ ಸ್ವರದ  ಬಂದತ್ತ ಹಿಂದಿರುಗಿ ನೋಡಿದಾಗ,
ಚೆಂಗುಲಾಬಿ ಕಪೋಲದ ಪುಟ್ಟ ಪೋರಿಯೊಂದು
ಕಟಕಟ ನಡಗುತ್ತಾ, ಹರಿದ ಕಂಬಳಿಯನು ಜಗ್ಗುತ್ತಾ
ಕೈಯಲ್ಲಿದ್ದ ಗೇಣುದ್ದದ ಮಗುವಿನ ಮೈ ಮುಚ್ಚಲು ಪರದಾಡುತ್ತಿದ್ದಳು. 

ಇಂಥ  ಭೀಕರ ಚಳಿಯಲ್ಲಿ ಈ ಕಂದನನ್ನೇಕೆ  ಹೊತ್ತು ತಂದಿರುವೆ? 
ಒಬ್ಬಳೇ ಅಲೆಯುವುದು ಒಳ್ಳೇದಲ್ಲ, ಹೀಗೆ ಬಿಕ್ಷೆ ಬೇಡುವುದೂ  ಸರಿಯಲ್ಲ, 
ನಿನ್ನಮ್ಮ ಹುಡುಕುತ್ತಿರಬಹುದು, ನಿನ್ನಪ್ಪಾಜಿ ಬೈಯ್ಯಬಹುದು
ಹೋಗು.. ಬೇಗ ಮನೆಗೆ ಹೋಗು ಎಂದಾಗ,

ಸುತ್ತಲೂ ಸತ್ತು ಬಿದ್ದವರ ರಾಶಿಯಲಿ
ನಮ್ಮವರೆಲ್ಲಿಹರೆಂದು ಹುಡುಕಲಿ ಅಮ್ಮಾಜಿ?
ಉಗ್ರರ ಗುಂಡುಗಳಿಗೆ, ಗುಂಡಿನುತ್ತರವ ನೀಡುತ್ತ  
ನನ್ನ ಕೂಗಿಗೂ  ಉತ್ತರಿಸದೆ, ಹಿಂತಿರುಗಿ ಸಹ  ನೋಡದೇ 
ಮುನ್ನುಗ್ಗುತ್ತಾ  ಹೊರಟೇ ಹೋದರು  ನನ್ನ ಬಾಬೂಜಿ..
 
ಈ ಪುಟ್ಟು ಕೂಸು ಯಾರದೋ  ನಾನರಿಯೆ 
ನಾನೂ ಒಬ್ಬಂಟಿ, ನನ್ನ ಜೀವ ಈಗ ಈ ತುಂಟಿ.
ಯಮರೂಪಿ ಹಿಮಪದರಗಳ ಆಲಿಂಗನದಲಿ ಇವಳನ್ನು ಹಾಗೇ ಹ್ಯಾಗೆ ಬಿಡಲಿ? 
ಆದರೆ ..ಅಮ್ಮನಿಗಾಗಿ ಅಳುತ್ತಿರುವವಳನ್ನು ನಾ  ಹ್ಯಾಗೆ ಸಂತೈಸಲಿ?

ಅವಳಿಗೆ ಉತ್ತರಿಸುವಷ್ಟು ಶಕ್ತಿ ನನ್ನಲ್ಲಿರಲಿಲ್ಲ, 
ಅವಳ ನೋವನೀಗಿಸುವುದು ನಮ್ಮಿಂದ ಸಾಧ್ಯವಿಲ್ಲ.
ಕೇವಲ ಒಂದೊಪ್ಪೊತ್ತು ಊಟ ನೀಡಿದೆ, 
ಅವಳ ನಿಸ್ವಾರ್ಥ ಗುಣಕ್ಕೆ ಸಲಾಮು ಹೊಡೆದೆ. 

ಚಿಗುರಬೇಕಾದ ವಯಸಿನಲಿ ಸಾವು- ನೋವುಗಳ ಮಣಭಾರ ಹೊತ್ತು
ಭಯದ ಕಾರ್ಮೋಡದ ಛಾಯೆಯಲಿ ಬಳಲುತ್ತ 
ಇಂಥ ಅದೆಷ್ಟೊ ಎಳೆ ಜೀವಿಗಳು ನಲಗುತ್ತಿರಬಹುದು?
ಪ್ರೀತಿ ಪ್ರೇಮದ ಸೆಲೆಯನ್ನು ಅರಸುತ್ತಿರಬಹುದು? 

ಈ ಮುಕುಟ ಮಣಿಗಾಗಿ  ಹೊಡೆದಾಡುವ,
ಪ್ರತಿಷ್ಠೆಯ ಮರಣ ಮೃದಂಗ ಬಾರಿಸುವ,
ರಕ್ತದೋಕುಳಿಯನು ಆಡುವ ದೇಶಗಳ 
ಭೀಷಣ ಯುದ್ಧ ಆದಷ್ಟು ಬೇಗ ಅಂತ್ಯಗೊಳ್ಳಲಿ. 
ಪ್ರತಿ ಮಗುವಿಗೂ  ಒಂದು ಬೆಚ್ಚಗಿನ ಮನೆ ಸಿಗಲಿ.                                                                                                                 

-ಸವಿತಾ ಇನಾಮದಾರ್      

savita-inamdar

 

 

 

 

 


ಅಮ್ಮ
ತೊದಲು ನಾಲಿಗೆಯಲಿ
ಅಮ್ಮನ ಮೊದಲ ಮಾತು
ತೆವಲು ನಡಿಗೆಯಲಿ 
ಅಮ್ಮನ ಹೆಜ್ಜೆ ಗುರುತು
ನಾ ಬಿದ್ದು ಎದ್ದಾಗ
ಎದ್ದು ಅತ್ತಾಗ
ಹೊರಬಂದ ಶಬ್ದ 
ಅಮ್ಮ
ಈಗಲೂ ಎಡವಿದ್ದೇನೆ,
 ಬಿದ್ದಿದ್ದೇನೆ 
ಅತ್ತಿದ್ದೇನೆ 
ಅಳುತ್ತಿದ್ದೇನೆ
ಒಮ್ಮೊಮ್ಮೆ ದಿಕ್ಕು ಕಾಣದೆ 
ದಾರಿ ತೋಚದೆ
ವಿಲವಿಲ ಎಂದು
ಒದ್ದಾಡುತ್ತೇನೆ.
ಆದರೆ ನನ್ನಮ್ಮನದು
ಮಾತ್ರ ಅದೇ ಹಾಡು
ನೀನು ಮಗು.
— ಉಮೇಶ ಮುಂಡಳ್ಳಿ


ಜೀವನದೂರಿನಲಿ
ಹದವಾದವಾದ ಮನದಲಿ
ಸಾವಿರ ಕನಸುಗಳ ಭಿತ್ತಿದೆ 
ಮುಳ್ಳಿನ ಗಿಡಗಳು ಹುಟ್ಟಿವೆ!
ಸದಾ ವಿಶ್ವಾಸವೆಂಬ ನೀರುಣಿಸುತ್ತಿರುವೆ
ಗುಲಾಬಿಯ ನಿರೀಕ್ಷೆಯಲ್ಲಿ…
       ನೆಡೆಯುತ್ತಿರುವೆ ನೀಲನಕ್ಷೆ ಇಲ್ಲದ ಕಾಲುದಾರಿಯಲಿ
       ಟಾರು ರಸ್ತೆಯನ್ನಾದರು ಸೇರುವ ತರಾತುರಿಯಲಿ….
ಎಲ್ಲ ಕೂಡಿ ಬದುಕುತ್ತಿದ್ದೇವೆ ಅಳು ನಗುವಿನಲ್ಲಿ
ಒಂದಿಂಚು ಜಾಗಕ್ಕಾಗಿ ನಿಮ್ಮೊಲುವೆಯ ಮನೆಯಲಿ…
      ಪಯಣಿಸುವೆ ಜೀವನದೂರ ನೌಕೆಯಲಿ
      ಸಮಯವೆನ್ನುವ ಉಬ್ಬರವಿಲಿತಗಳ ಕಡಲಿನಲಿ…
ನೆನಪುಗಳ ಕಟ್ಟೆ ಕಟ್ಟಿ ಕಣ್ಣಲಿ
ಜಾಗರೂಕನಾಗಿರುವೆ ಕಣ್ಹನಿ ತೇಲದಂತೆ ಕೆನ್ನೆಯಲಿ..
      ಬರೆಯುತ್ತಿರುವೆ ಬಿಳಿ ಹಾಳೆಯಲಿ
      ಬರಹಗಳೇ ಬಣ್ಣಗಳಾಗುವ ನಂಬಿಕೆಯಲಿ
ಈಗ ನಿಂತಿರುವೆ ಊರ ಹಾದಿಯಲಿ
ನನ್ನಮ್ಮನ ಕರೆಯಾಗಲಿಕ್ಕೆ ಅವಳ ಉಸಿರಿನಲಿ.
    ತೆರೆದಷ್ಟು ಪುಟವಿರುವ, ನೋಡಿದಷ್ಟು ಕಾಣುವ ಬದುಕ                     
   ಚಿತ್ರ ಪುಸ್ತಕಗಳು ಬರುತ್ತಲಿವೆ ಸರಣಿಯಲ್ಲಿ
-ಆದರ್ಶ ಜಯಣ್ಣ. ಬಿಲುಗುಂಜಿ

adarsh-j

 

 

 

 

 


ನನ್ನ ಭವ್ಯ ಭಾರತ 
ಸುಂದರ ಪ್ರಕೃತಿ
ಶುದ್ಧವಾದ ಗಾಳಿ
ಲಕ್ಷಾಂತರ ಜಲಪಾತಗಳು 
ಸಾವಿರಾರು ತರಹದ ಪ್ರಾಣಿ ಪಕ್ಷಿಗಳು 
ವಿಶಾಲವಾದ ಭೂಮಿ 
ಮಂಜು ಕವಿಯುವ ನೂರಾರು ಪ್ರದೇಶಗಳು 
ಇದು ಯಾವುದು ಹಣದಿಂದ ಖರೀದಿಸಿರುವ ಸಂಪನ್ಮೂಲಗಳು ಅಲ್ಲಾ 
ಆದರಿಂದ ಇವುಗಳು ಪ್ರತಿಯೊಬ್ಬರ ಕಣ್ಣಿಗೂ ಅಧ್ಬುತ 

ಮನುಷ್ಯ ಪ್ರತಿ ಹೆಜ್ಜೆಗೂ ಸಂಪಾದನೆ 
ತಾನು ತನ್ನವರು ತನ್ನ ಹೊಟ್ಟೆ 
ಎಂದು ಪ್ರತಿ ಕ್ಷಣ ದುಡಿನ ವ್ಯಾಮೋಹದಲಿ 
ಭಾರತದಲ್ಲಿ ಅನ್ಯಾಯ ಎಂಬ ತತ್ವವನ್ನು ಮೈಯಲ್ಲಿ   
ತುಂಬಿಕೊಂಡು 
ಗೋಂವಿದ ಎಂಬ ಭಕ್ತಿಯಲಿ ಮಾಡುವ ಪಾಪವನ್ನು ತೊಳೆದುಕೋಂಡು 
ಬಡವರ ರಕ್ತದಲ್ಲಿ ಸ್ನಾನ ಮಾಡುತ್ತಾ
ಮೆರಾ ಭಾರತ್ ಮಹಾನ್ ಎಂದು ವರ್ಷಕ್ಕೊಮ್ಮೆ ಜೋರಾಗಿ ಕೂಗುತ್ತಾ 
ಸ್ವಾರ್ಥ ಎಂಬ ಪಾದರಕ್ಷೆಯಲಿ ನ್ಯಾಯವನ್ನು ತುಳಿದು ಬದುಕುವ ಸಮಾಜದಲ್ಲಿ 
ಬಡವರ ಸ್ಥಿತಿ 
ಹಸಿದ ಹೊಟ್ಟೆ 
ಹರಿದ ಬಟ್ಟೆ 

ಆಗಂತ ಬಡವರು ಎನ್ನೂ ಕಮ್ಮಿ ಇಲ್ಲ 
ಸಾಲ ಮಾಡಿಯಾದರು ಸಾವುಕಾರನಿಗೆ ಸವಾಲು ಹಾಕುತ್ತಿದ್ದಾರೆ 
ಇದು ನಮ್ಮ ಭಾರತ 
ನನ್ನಗೆ ನನ್ನ ದೇಶ ಇಷ್ಟ 
ದೇಶದ ಜನರಲ್ಲಾ 
-ದಿವಾಕರ್ ಕೆ

divakar-k

 

 

 

 


ಏರುವ ಅಲೆಗಳ ನೂಕಿ
ಏರುವ ಅಲೆಗಳ ನೂಕಿ ಒಚಿಟಿ ಸಂತನ ದ್ಯಾನ ನೋಟ ಮೀರಿದೆ
ತೇಲುವ ನೊರೆಗಳ ಸಾಗಿ ಕನಸು ಕಟ್ಟುವ ಕ್ಷಣ ನೋಟ ಮೀರಿದೆ

ಹಾದಿಬದಿಗುಂಟ ಕರಿಜಾಲಿಗಳ ನಡುವೆ ಹೂಗಳ ಮೌನ
ಎದೆಯ ನೋವಿನ ನಡುವೆ ಪ್ರೀತಿಕಣ್ಣುಗಳತ್ತ ಮನಸ್ಸು ಜಾರಿದೆ

ಮುಸುಕಿನ ಮೋಡದ ಸುತ್ತ ಮಳೆಯ ಕಣ್ಣಿನ ಕಾಮನಬಿಲ್ಲು
ರಂಗು ರಂಗಿನ ಹಸಿರು ಹೃದಯದತ್ತ ನೆಲದ ಮನವು ಹರಿದಿದೆ

ಬೀಸುವ ಗಾಳಿಯಲಿ ತೇಲುವ ಬೆವರ ಹನಿಗಳು
ಗಟ್ಟಿ ಎದೆಗಾರಿಕೆಯ ತಪವ ಹಿಡಿದು ಎರೆಹುಳದ ದ್ಯಾನ ಸೆಳೆದಿದೆ

ಮೋಡಿ ಮಾಡುವ ಮೋಡದ ತಪವ ಅರಿಯಬೇಕಿದೆ ಗಿರಿ
ಚೈತ್ರದ ಜೋಳಿಗೆ ಕಟ್ಟಿ ನೆಲದ ಹೃದಯ ಹಿಗ್ಗಿಸುವ ಮನಸ್ಸು ಸೃಷ್ಠಿಯಾಗಬೇಕಿದೆ
ಕಿರಸೂರ ಗಿರಿಯಪ್ಪ

giriyappa

 

 

 

 

 


*ನೋಡಲ್ಹೆಂಗ ಹುಡುಗಿ ನಾ… ನಿನ್ನ*

ಮಲ್ಲಿಗಿಯಂತ ದೇಹಕ್ಕೆ
ನೀ ತೊಡಿಸಿಯಲ್ಲ ಅರೆ-ಬರೆ ಬಟ್ಟೆ
ನೋಡಲ್ಹೆಂಗ ಹುಡುಗಿ ನಾ!!

ಚಂಧೂಳ್ಳ ಮುಖಕೆ ಸಿಕ್ಕಿದ್ದೆಲ್ಲ
ಬಡಿದಿಯಲ್ಲ ಸುನಾ ಪೊಡರ್…
ನಿನ್ನ ನಿಜವಾದ ಅಂದವೆಲ್ಲಿ
ನೋಡಲ್ಹೆಂಗ ಹುಡುಗಿ ನಾ!!

ಹಣೆಮೇಲೆ ಕುಂಕುವಿಲ್ಲ
ಹಚ್ಚಿಯಾಲ್ಲ ಕಿತ್ತೊಗುವ ಸ್ಟಿಕ್ಕರ್  
ಕೈಯೊಳಗೆ ಬಳೆ ಇಲ್ಲ… 
ತಿರುಗಸ್ತಾಳ ಬರೀ ಕೈ
ಕಾಲೊಳಗೆ ಕಾಲು ಚೈನ್ ಇಲ್ಲ
ತಿರುಗಾಡುತ್ತಾಳೆ ಊರು ಬೀದಿಯಲ್ಲ
ನೋಡಲ್ಹೆಂಗ ಹುಡುಗಿ ನಾ!!

ಅಜ್ಜಿ ನಾನು ಸಂತೆಯೊಳಗೆ 
ಸುತ್ತಾಡುವಾಗ, ನೀ ಅರೆಬರೆ
ಹರಿದ ಅರ್ಧ ಜೀನ್ಸ್ ಬಟ್ಟೆ ತೊಟ್ಟು
ಎದುರಿಗೆ ಹಾದು ಹೋದೆಯಲ್ಲ,
ಅಜ್ಜಿ… ನಿನ್ನ ಕಂಡು, ಮೊಮ್ಮಗ
ಭೂಮಿ ಮೇಲೆ ಡೊಂಬರಾಟ
ಕುಣಿಯೊರು ಇನ್ನೀದರೆ ನೋಡಾಲ್ಲಿ
ನಿನ್ನ ಕಡೆಗೆ ಕೈ ಸನ್ನೆ ಮಾಡಿ ತೊರಿದಳು
ನೋಡಲ್ಹೆಂಗ ಹುಡುಗಿ ನಾ!!

ನಿನ್ನ ಅಂದ-ಚಂದಕೆ
ಲಂಗ-ದೌನಿ ಒಪ್ಪುವುದು…ಅಂದ
ಸೀರೆಯೂಟ್ಟರೆ ನೀ ಬಲು ಚಂದ
ಭಾರತೀಯ ನಾರಿಯಂತೆ…
ನೋಡಲ್ಹೆಂಗ ಹುಡುಗಿ ನಾ!!
-ಯಲ್ಲಪ್ಪ ಎಮ್ ಮರ್ಚೇಡ್

yallappa

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *