ತಂಪ ಸೂಸುವ ತುಂಟ ಚಂದ್ರಮ,
ಚದುರಿ ಹೋದನು ಚಹರೆ ಮರೆತು..
ಚಿಲುಮೆ ಒಲುಮೆಯ ಗಾಳಿ ಬೀಸಿ,
ಚಂದ್ರ ವಾಚುತ ನಕ್ಕನು..!
ಅಬಲೆ ಮಣಿ ನಿನ್ನ ನೋಟಕೆ ,
ರಸಿಕನಾದೆನು ಭಯವ ಮರೆತು..
ಕನಸಕಂಡೆನು ಇಂದು ನಾನು,
ಹೊಸಲೋಕಕೆ ಪಯಣ ಕಲಿತು..!
ಅರಿಯಲಾಗದ ಅರಿವಿನನುಭವ,
ಅರಿತೆ ನಾನು ಒಲವಿನಿಂದ..
ಅಮಲು ನೀಡುವ ದಿವ್ಯಔಷಧಿ..
ಪ್ರೀತಿ ಎನ್ನುವುದ..!
ಹರಿದು ಹೋಗದ ಜಾಲವಿದು,
ಕರಗಿ ಹೋಗದ ಅರಗಿದು..
ಹರಿದು ಕರಗಿ ಹೋಯಿತೆಂದರೆ,
ಹ್ರದಯ ಉರಿಯದೆ ಇರುವುದೇ?!!
****
ಪ್ರತಿಫಲಿಸುವ ಹ್ರದಯದ,
ಮಿಡಿತವ ಸೂಸಲು..
ಕಂಗೊಳಿಸುವ ನಯನಕ್ಕಿಂತ,
ಹಿರಿದಾರಿ ಬೇಡ..!!
– ಗೌತಮೀಪುತ್ರ ಸುರೇಂದ್ರ ಗೌಡ ಗೋಳಿಹೊಳೆ.
ಬದುಕು….???
ಭಾವದ ಬಂಧಿಯಾಗುವುದಕ್ಕಿಂತ
ಅದರ ಆಚೆ
ನಿಂತು ನೋಡುವುದು
ಮೇಲು!
ನೆನಪುಗಳ ಕನವರಿಕೆಕ್ಕಿಂತ
ನೆನಪುಗಳಿಂದ ದೂರ
ಉಳಿದು ಬದುಕುವುದು
ಮೇಲು!
ಆಸೆಗಳ ಹಿಂದೆ ಹೋಗುವುದಕ್ಕಿಂತ
ಆಸೆಗಳ ಬಿಟ್ಟು
ಮುಂದೆ ಸಾಗುವುದೇ
ಮೇಲು!
ಇವೆಲ್ಲ ಮನಸ್ಸಿನ
ಬಯಕೆಗಳು ಇವುಗಳಿಂದ
ದೂರದ ಹಾದಿ ಹಿಡಿಯಲು
ಸಾಧ್ಯವೇ………..???
****
ನೆನಪು ….
ನಾನು ಕಟ್ಟಿದ
ಆ ಮಣ್ಣಿನ ಅರಮನೆಯು
ಎಷ್ಟು ಚೆಂದ .
ಅದರ ಎದುರು
ನಾವೇ ಆಡಿದ ಆ
ಬಾಲ್ಯದ ಮದುವೆ ನೆನಪಾಗಿ ಕಾಡುತ್ತದೆ,
ಎಷ್ಟು ಅಂದವಾದ ಮದುವೆ
ಅದು ನಾನೇ ಕಟ್ಟಿದ
ಅರಮನೆಯ ಮುಂದೆ ಎಲ್ಲಾ ಸ್ನೇಹಿತರು!
ಎಲ್ಲೋ ಬಿಟ್ಟ ಗಿಡದ
ಎಲೆ ಹೂ ಕಿತ್ತು ತಂದು
ನಮಗೆ ಆಶಿ೯ವಾದಿಸಿದರು.
ನಿಜ ಹೇಳುವೆ ಆ
ಮದುವೆಯಷ್ಟು ಖುಷಿ
ವಾಸ್ತವದ ಮದುವೆ ನೀಡುವುದಿಲ್ಲ?
ಆದರೆ ಈಗ ನೀನು
ಪಕ್ಕದಲ್ಲಿ ಕಾಣುತ್ತಿಲ್ಲ
ನಿನ್ನ ನಿರೀಕ್ಷೆಯಲ್ಲಿ ಕಾದಿರುವೆ ನಾನು………..!!!
ದಾಮಿನಿ. ಎಂ.ಜಿ.ಆರ್.
ಮೂಕನಾದೆ ನಾನು….!
ಆ..ಆ..ಆ..ಆ..ಆ..ಆ..
ಮೂಕನಾದೆ ನಾನು! ಮೂಕನಾಗಿ
ಮೌನವಾಯಿತು ನನ್ನ ಮಾತು!!ಪ!!
ಆಡಿದ ಮಾತು,
ಸುಳ್ಳಾಗಿ ಹೋಯಿತು
ಮಾತಿಗೆ ಮೌಲೄ,
ಇಲ್ಲವಂತಾಯಿತು……!!೧!!
ಮಾತಿನಿಂದ ಬಂಧ-ಸಂಬಂಧ
ಒಡೆದುಹೋಯಿತು,
ಚೀರಿ ಕೂಗಿ ನುಡಿದ ಮಾತು
ಮಾತಲ್ಲವಾಯಿತು,
ಅಕ್ಕ ಪಕ್ಕದವರ ಮಾತೆ ನಿಜವಾಯಿತು……..!!೨!!
ಮಾತು ಆಡಿದರೆ ಏನೆಲ್ಲ!
ಮೂಕನಂತಿದ್ದರೆ ಏನೂ…. ಇಲ್ಲ!
ಅಂತಹ ಮಾತು ಅಥ೯ಮಾಡಿಕೊಳ್ಳಲಿಲ್ಲ
ನಾವು-ನೀವೆಲ್ಲಾ…..!!೩!!
ನುಡಿದ ಮಾತು ಅಥ೯ಹೀನವಾಗಿ
ಮಾತಾಡದೆ ಸುಮ್ಮನಿರುವ ಮಾತು
ಭಾವನೆ ಆಸೆ ಕನಸುಗಳು
ಮುದುಡಿಹೋಗಿವೆ…..!!೪!!
ನಾವಾಡುವ ಮಾತು
ಇನ್ನೊಬ್ಬರಿಗೆ ನೋವಾಗಬಾರದು!
ಆ ಮಾತು ಹಿತವಾಗಿರಬೇಕು
ಮಾತು ಮಾತಾಗಿ, ಮಾತಲ್ಲಿ ಮೌನವಾದಾಗ….!!೫!!
****
ಅಮ್ಮನ ಪ್ರೀತಿ…..!
ಮನಸಲಿ ನನಸಿನ ಕನಸು ಬಿತ್ತಿ
ಕೈಬೆರಳು ಹಿಡಿದು ಆಡಿಸಿದಿ ಎತ್ತಿ
ಲಾಲನೆ ಪಾಲನೆ ಪೋಷಣೆ ಮಾಡುತ
ಬೆಳೆಸಿದೆ ನೀ ಅಮ್ಮ ……!!೧!!
ಪ್ರತಿಯೊಂದು ಹೆಜ್ಜೆ ತಪ್ಪಿದಾಗ
ಓಡಿ ಬಂದು ನೀ ಅಪ್ಪಿದಾಗ
ತಾಯಿ ಮಗುವಿನ ಸಂಬಂಧ
ಅದುವೇ ಮಮತೆಯ ಅನುಬಂಧ…. !!೨!!
ಕರುಣೆಯ ಕಡಲನು ಒಡಲಲಿ ಧರಿಸಿ
ನನಗೆ ಮಾತೖಭಾಷೆಯ ಪಾಠ ಕಲಿಸಿ
ನನ್ನ ಮೊದಲ ತೊದಲ ಮಾತು
ನಿನ್ನ ಹೆಸರೇ ಅಮ್ಮ….. !!೩!!
ನುಡಿ ನಡೆಯಲ್ಲಿ ಸಂಸ್ಕಾರ ಕಲಿಸಿ
ಸಂಸ್ಕೖತಿ ಸದ್ವಿಚಾರಗಳ ಬೀಜವ ಬಿತ್ತಿಸಿ
ಚಿಲುಮೆಯ ಜಾಣ್ಮೆಯಿಂದ ನೀ ಬೆಳೆಸಿ
ದಾರಿ ತೋರಿಸಿದಿ ನೀ ಅಮ್ಮ ….!!೪!!
ಕಷ್ಟದಲ್ಲಿ ಧೈಯ೯ ತುಂಬಿ
ಹೆಜ್ಜೆ ಹೆಜ್ಜೆಗೂ ಉತ್ಸಾಹದ ಗುರಿ ತುಂಬಿ
ಸೋಲು ಗೆಲುವುಗಳ ದಿಕ್ಸೂಚಿ ತೋರಿಸಿ
ಜೀವನದುದ್ದಕ್ಕೂ ಬದುಕುವ ಪಾಠ ಕಲಿಸಿದ ನೀ ಅಮ್ಮ …..!!೫!!
ಜ್ಞಾನದ ನುಡಿಯ ನೀ ನೀಡಿ
ಕೋಟಿ ದೇವತೆಗಳಿಗೆ ಸಮಾನ
ನನ್ನ ಮೊದಲ ಗುರು ನೀ ಅಮ್ಮ
ಹೇಗೆ ಅಪಿ೯ಸಲಿ ನಿನಗೆ ಕೖತಜ್ಞತೆ ಅಮ್ಮ…….!!೬!!
-ಡಾ. ಶಿವಕುಮಾರ ಎಸ್.ಮಾದಗುಂಡಿ
ನೆನಪಿಗೆ ಬೆಲೆಬಂದಿದೆ..
ಮೊನ್ನೆಯಷ್ಟೆ ಕಂಡಿದ್ದು..
ಮನದ ಛಾವಣಿಯ ತೂತಿನಲ್ಲಿ
ಬೆಳಕೊಂದು ಇಣುಕುತ್ತಿತ್ತು!
ತಡಮಾಡಲಿಲ್ಲಾ..
ಇದ್ದಬದ್ದ ಹಳೇ ನೆನಪುಗಳನ್ನೆಲ್ಲಾ
ಮಾರಿ ಚಿಲ್ಲಾರೆ ಸೇರಿಸಿಟ್ಟಿದ್ದೇನೆ!
ಆಶ್ಚರ್ಯಪಡಬೇಕಿಲ್ಲಾ..!
ಉಳಿದೆಲ್ಲಾ ಸುಳ್ಳು ನಾನುನೀನು ಮಾತ್ರ
ಸತ್ಯ ಅಂದವಳು ಯಾಕೋ ಸುಳ್ಳಾಗಿದ್ದಾಳೆ!
ಹೃದಯಕ್ಕೆ ಸುರಿದ ತಣ್ಣೀರಿನ ಜೊತೆ
ನನ್ನ ಕಣ್ಣೀರು ಸೇರಿ ಬೆಚ್ಚಗಾಗಿಸಿವೆ!
ಒಂದಿಷ್ಟು ಈ ದರಬೇಷಿ ನೆನಪುಗಳು!
ನಿಜಕ್ಕೂ ಅವಕ್ಕೂ ಬೆಲೆ ಬಂದಿದೆ
ಸಮಯದ ಜೊತೆಗೆ
ಛಾವಣಿ ಮುಚ್ಚಬೇಕಿದೆ ಬೆಚ್ಚಗಾಗಿರಲು!
ಮುಗಿದ ಶಹರದ ಸಂತೆಯ ನೀರವ ಮೌನದಲ್ಲಿ
ಉಸಿರಾಡುವ ಕಸಕಡ್ಡಿಗೂ ಗುಬ್ಬಿಗಳಿಂದ
ಒಳ್ಳೆಯ ಬೆಲೆ ಬಂದಿದೆಯಂತೆ!
ನನ್ನ ಹಳೇ ನೆನಪುಗಳಂತೆ!
-ರೋಹಿತ್ ಶೆಟ್ಟಿ ಮೇಲಾರಿಕಲ್ಲ್
ಹಿಂದಿ ಮೂಲ: ಗುಲ್ಜಾರರ ಕವಿತೆ " ಮೇರಾ ಕುಛ್ ಸಾಮಾನ್ "
ನನ್ನದೆನ್ನುವ ಏನೋ
ನಿನ್ನತ್ರ ಉಳಿದಿದೆ
ಜಿಟಿ ಜಿಟಿ ಮಳೆಯಲಿ
ನೆಂದು ಹಸಿಯಾಗಿ
ಚಡಪಡಿಸಿದ
ಏನೋ ಉಳಿದಿದೆ
ಬೆರಳು ಮಸಿಯಿಂದ
ಹಸಿಯಾಗುವವರೆಗೂ
ಕಿವುಚಿ ಬರೆದ ಆ
ಹಾಳೆಯಲ್ಲಿ ರಾತ್ರಿಯನ್ನೇ
ಮುಚ್ಚಿಟ್ಟಿದ್ದೆ
ಆ ರಾತ್ರಿ ಅಳಿಸಿಬಿಡು
ನಿನ್ನತ್ರ ಇಟ್ಟಿದ್ದನ್ನು
ಕೊಟ್ಟುಬಿಡು
ನನ್ನದೆನ್ನುವ ಏನೋ
ನಿನ್ನತ್ರ ಉಳಿದಿದೆ
ಕೊಟ್ಟುಬಿಡು
ಮರದ ಬುಡದ
ಮುದ್ದಾಟದ ವೇಳೆ
ಅಕ್ಷತೆಯ ಹಾಗೆ ಸುರಿದ
ಆ ಸೋತ ಎಲೆಗಳ
ಶಬ್ದ ಗುಯ್ ಗುಡುತ್ತಿದೆ
ಆ ಮರವ ಕಡಿಸಿಬಿಡು
ನಿನ್ನತ್ರ ಇಟ್ಟಿದ್ದನ್ನು
ಕೊಟ್ಟುಬಿಡು
ನನ್ನದೆನ್ನುವ ಏನೋ
ನಿನ್ನತ್ರ ಉಳಿದಿದೆ
ಕೊಟ್ಟುಬಿಡು
ಒಂಟಿ ಛತ್ರಿಯ ಕೆಳಗೆ
ಎರಡು ನೆಂದ ದೇಹ
ಅರ್ಧ್ ಹಸಿ ಅರ್ಧ್ ಬಿಸಿ
ಆ ಹಾಸಿಗೆಯ ಪಕ್ಕಕ್ಕೆ
ಪೂರ್ತಿ ನೆಂದ ಮನವ
ಹಾಸಿಟ್ಟಿದ್ದೆ, ಆ ಹಾಸಿಗೆಯ
ಮಡಿಚಿಟ್ಟುಬಿಡು
ನಿನ್ನತ್ರ ಇಟ್ಟಿದ್ದನ್ನು
ಕೊಟ್ಟುಬಿಡು
ನನ್ನದೆನ್ನುವ ಏನೋ
ನಿನ್ನತ್ರ ಉಳಿದಿದೆ
ಕೊಟ್ಟುಬಿಡು
ಅಷ್ಟೊಂದು ರಾತ್ರಿಗಳ
ನೆನಪಿನ ಮರ್ಮರ
ಮನ ಕಿವುಡಾಗಿದೆ
ಸುಳ್ಳು ಬೊಗಳೆ ಮಾತಿನ
ಒರಟ ಚಾಮರದ ಗಾಳಿ
ಸಾಕಾಗಿದೆ.
ಆ ಸಲ್ಲಾಪವ ಹುಗಿದುಬಿಡು
ನಿನ್ನತ್ರ ಇಟ್ಟಿದ್ದನ್ನು
ಕೊಟ್ಟುಬಿಡು
*****
ನನ್ನವನೆಂಬ ಗುರುತು
ಈ ಕ್ಷಣ ಸ್ತಬ್ದ, ಜೀವ ಮಾತ್ರ ಉಳಿದಿದೆ
ನಿನ್ನ ತುಟಿಯ ಮೇಲೆ ನೀ ನನ್ನವನೆಂಬ ಗುರುತು ಹಾಗೇ ಇದೆ
ನಸುಕಿನ ಮಾರಿಗೆ ಏರಿದ ಬಣ್ಣ ಬೆಳಗಿನದಾದರೇನು?
ಮುಳುಗುತ್ತಿರುವ ಉನ್ಮಾದಗಳಲಿ ಇನ್ನೂ ಜೀವವಿದೆ
ನಿನ್ನ ತುಟಿಯ ಮೇಲೆ ನೀ ನನ್ನವನೆಂಬ ಗುರುತು ಹಾಗೇ ಇದೆ
ಹೀಗೇ ನನ್ನಿಂದಗಲಿ ನಿನ್ನ ನೀನೇ ಆರಾಧಿಸಬೇಡ
ನಿನ್ನ ಕೈಯಿಂದಲೇ ಘಟಿಸಬೇಕಾದ ಕೊಲೆಯೊಂದು ಉಳಿದಿದೆ
ನಿನ್ನ ತುಟಿಯ ಮೇಲೆ ನೀ ನನ್ನವನೆಂಬ ಗುರುತು ಹಾಗೇ ಇದೆ
ಅರಳುತ್ತಿರುವ ಹೂಗಳ ನಡುಗುವಿಕೆ ಬರೀ ನೆಪವಷ್ಟೇ
ನಂದಿ ಹೋಗುತ್ತಿರುವ ಬೆಂಕಿಗೆ ಧಗಿಸುವಾಸೆ ಇನ್ನೂ ಇದೆ
ನಿನ್ನ ತುಟಿಯ ಮೇಲೆ ನೀ ನನ್ನವನೆಂಬ ಗುರುತು ಹಾಗೇ ಇದೆ
ಕಣ್ಣಾಲೆಯ ತೇವಕ್ಕೆ ಕಾಡಿಗೆ ಅಳಸಿ ಹೋದರೇನು
ಇನ್ನೂ ಅಂಗೈ ಮೇಲಿನ ಕಡು ಬಣ್ಣ ಸ್ಪಷ್ಟವಾಗಿದೆ
-ಮಾಧವ ಕುಲಕರ್ಣಿ, ಪುಣೆ
ಸುಂದರ ನಾಳೆ
ಬಾನೆಲ್ಲಾ ಒಮ್ಮೆ ಕಪ್ಪನೆ ಮುಖಮಾಡಿ ಗಂಟಿಕ್ಕಿಕೊಂಡು
ಆರ್ಭಟಿಸಿ ಗುಡುಗಲು
ಹೆದರಿ ಆ ಸೂರ್ಯ
ಇಂದಿಗೆ ಮುಗಿಯಿತು ನನ್ನ ಕಾರ್ಯ,
ಎಂದು ಬರ್ರನೆ ಬೀಸುವ ಗಾಳಿಗೆ
ಸಿಕ್ಕಿ, ಹುಚ್ಚೆದ್ದು ಓಡುವ ಮೋಡದ ಮರೆಯಲಿ
ಅವಿತು ಕುಳಿತಿರುವಾಗ ಹೀಗೆ
ಸಿಡಿಲಿನಂತ ವಾದ್ಯಗಳೊಂದಿಗೆ ಬಂದು
ಪಳಪಳನೆ ಹೊಳೆವ ಬೆಳಕನ್ನು ತಂದು
ಛಾಯಾಚಿತ್ರಗಾರನಂತೆ
ಸೆರೆಹಿಡಿಯುತ್ತಿರುವ ಜಗತ್ತಿನ ಚಿತ್ರವ
ಛಾಯಾಚಿತ್ರಣ ಮುಗಿಯಿತೆಂಬತೆ
ಲೋಕವನೆಲ್ಲ ಗಮನಿಸಿದಾತ
ಹರಸಿ ಸುರಿಸಿದ ಮಳೆ
ಸಂತಸದಿ ಹಿಗ್ಗಿತು ಇಳೆ
ಸಂಪಾಯಿತು ಹಸಿರಿನ ಕಳೆ
ತೊಳೆದೋಯ್ತು ಲೋಕದ ಕೊಳೆ
ಬರಲಿವೆ ಸುಂದರ ನಾಳೆ.
ಎಲ್ಲೆಡೆ ಪಸರಿಸಿತು ಮಣ್ಣಿನ ವಾಸನೆ
ಸೂರ್ಯನಿಗೂ ಅರಿವಾಯ್ತು ಇದರ ಸೂಚನೆ
ಮೀರಿತು ಆತನ ಸಹನೆ
ಮೈತೊಳೆದು ನಿಂತಿದ್ದ ಭೂಮಿಯ ನೋಡುವ ತವಕದಿ
ಆಚೆಗೆ ಜಿಗಿದ ಚಂಗನೆ
ಸಂತಸವ ಹೊರಚೆಲ್ಲಿದ ಕಿರಣಗಳಾಗಿ
"ಸೂರ್ಯನಂದುಕೊಂಡ ಲೋಕವೆಲ್ಲ ನೋಡುತಿದೆ ನನ್ನನೆ"
ನಾಚಿ ಕೆಂಪಾಗಿ ಸೇರಿದ ಪಶ್ಚಿಮದ ತನ್ನ ಮನೆ
ಗಮನಿಸುತಿದ್ದ ಮೂಕ ಪ್ರೇಕ್ಷಕನಂತೆ
ಕವಿ ಸುಮ್ಮನೆ…
– ಆದರ್ಶ ಜಯಣ್ಣ
ಬರದ ನಕಾಶೆ
ಬಯಲು ಸೀಮೆಯಲಿ ಉರಿಬಿಸಿಲು ಹಾಸಿದೆ
ಬಿರಿದ ನೆಲದ ಒಡಲಾಳ ಬಾಯ್ತೆರೆದು
ರೈತನ ಎದೆಗೆ ಬರದ ಬರೆ ಹಾಕಿದೆ
ತೀರದ ಸಾಲಕ್ಕೆ ರೈತರ ಆತ್ಮಹತ್ಯೆ ನಡದಿದೆ
ಕಡುಬೇಸಿಗೆಯಲಿ ಕೊಡ ನೀರು ಸಿಗದೆ
ಕೃಷ್ಣೆ- ತುಂಗೆ ಜನರ ಜೀವನಾಡಿಗಳು ಬತ್ತಿವೆ
ಕೆರೆ- ಬಾವಿ,ಹಳ್ಳ- ಕೊಳ್ಳಗಳು ಒಣಗಿ ಹೋಗಿವೆ
ವರುಣನ ಹನಿ ಹನಿಗಾಗಿ ಜೀವರಾಶಿಗಳು
ಜೀವಜಲಕ್ಕಾಗಿ ನಂಜೇರಿ ಕಣ್ಬಿಟ್ಟು ನಿಂತಿವೆ
ಮುನಿದ ಮಳೆರಾಯ ತಂದ ಕ್ಷಾಮಗಾಲ
ಕೊಟ್ಟಿಗೆಯಲ್ಲಿ ಕಟ್ಟಿದ ರಾಸುಗಳು
ಆರ್ಭಟಿಸುತ್ತಾ ಏದುಸಿರು ಬಿಟ್ಟಿವೆ
ಕಡಲ ತೀರದಲಿ ಜಲಚರಗಳು ತೇಲಾಡುತ್ತಿವೆ
ಹಸಿಬಾಣತಿ ಎದೆಹಾಲು ಬತ್ತಿ
ಹುಟ್ಟಿದ ಹಸುಗುಸು ಚಿರ ನಿದ್ರೆಗೆಜಾರಿದೆ
ಬರದ ಬಾದೆಗೆ ತತ್ತರಿಸಿದ ಜಾನುವಾರುಗಳು
ಕಸಾಯಿಖಾನೆಯ ಹಸಿವು ಹಿಂಗಿಸಿವೆ
ಪೃಥ್ವಿಯ ಮಡಿಲಿಂದ ಲಾವಾರಸ ಚಿಮ್ಮಿ
ಅನ್ನದಾತನ ಬದುಕು ಬೂದಿಯಾಗಿದೆ
ಸ್ಮಶಾನದಲ್ಲೂ ಉಳಲು ಜಾಗವಿಲ್ಲದೆ
ಬದುಕು ಕೈಲಾಸದತ್ತ ಗುಳೆ ಹೊರಟಿದೆ
ಕಾನನ ಹಸಿರುಡುಗೆ ಕಳಚಿ ಬಿಸಿಲು ಚೆಲ್ಲಿದೆ
ಕಾಡಿನಿಂದ ನಾಡಿಗೆ ಕಾಳ್ಗೀಚ್ಚು ಹೊತ್ತಿಕೊಂಡು
ಬಯಲಂಗಳದಲಿ ಬಿಸಿಲ್ಗುದುರೆ ಓಡುತಿದೆ
ಬಿರಿದ ಎದೆಯಲಿ ಬರದ ನಕಾಶೆ ಬಿಡಿಸಿದೆ
-ಮಹಾದೇವ ಎಸ್,ಪಾಟೀಲ. ರಾಯಚೂರು.
ಪ್ರೀತಿಯ ಭರವಸೆ.
ನಾ ಹೇಳ ಬಯಸುವ ಮಾತುಗಳು ಮೂರು
ನಿನಗೆ ಬಂದಿಹವೂ ಹತ್ತಾರು
ಕಾಣದ ಕನಸಿವೆ ನೂರಾರು
ಹೇಳದೆ ಉಳಿದಿವೆ ಸಾವಿರಾರು.
ಮನಸ್ಸೇ ಪ್ರೀತಿಯ ತೇರು
ಮನಸಿಟ್ಟು ನೀ ಅದನ್ನು ಏರು
ಹುಚ್ಚು ಕಲ್ಪನೆಗಳನ್ನು ಗಾಳಿಗೆ ತೂರು
ನೀ ಬಂದು ನನ್ನ ಸೇರು.
ಹೃದಯ ಬಂಡಿಗೆ ನೀ ಜಾರು
ಆಗಲಿ ಬಿಡಲಿ ಪ್ರೀತಿ ಬಲು ಜೋರು
ಇಬ್ಬರೂ ಮಾಡೋಣ ಪ್ರೇಮದ ಕಾರುಬಾರು
ಹೂಡು ಸಂಸಾರ ನೌಕೆಯ ಪರಿವಾರು.
-ನಾಗಪ್ಪ.ಕೆ.ಮಾದರ
ಕನಸುಗಾರನ ಭಾವಗಳು
ಸಾವಿರ ಮುತ್ತಿಡುವ
ಆಸೆಯ
ದೂರ ಸರಿಸುವೆಯಾ?
ಒಂದೆ ಮುತ್ತಲ್ಲಿ
ಹೇಗೆ ಹೇಳಲಿ ನನ್ನ
ಸಾವಿರ ಆಸೆಯಾ…?
ಕನಸೆನೋ ಕಂಡಿದ್ದಾಯ್ತು
ಎದ್ದೇಳದೆ ಉಳಿದರೆ ಕನಸೂ ಉಳಿದಿತು
ಕಣ್ಬಿಟ್ಟರೆ ಕನಸಿನ ಜೊತೆ ನೀನೂ ಇಲ್ಲಿಲ್ಲ.
ಇನ್ನೆಷ್ಟು ಹೇಳಿಬಿಡು ಈ ದೂರ ಸಾಕೆನಿಸಲಿಲ್ಲವೆ ನಿನಗೂ
ನನಗೂ ಇಲ್ಲಿ ಏಕಾಂತ ಸಂಕಟ..
ಕಾರಣವೆನಿದೆ ಹೇಳು ಈ ಕಣ್ಣಮುಚ್ಚಾಲೆಗೆ
ಕಣ್ಬಿಟ್ಟು ಅದೆಷ್ಟೊ ದಿನಗಳಾಯ್ತು ಕಾಣಿಸಲೆ ಇಲ್ಲ ಕೊನೆಗೆ..
ಸಂಜೆಯಲೆದಾಟದಿ ಏಕಾಂಗಿಯ ಹೊಯ್ದಾಟ ನನ್ನದು
ಬಂದು ಹೋಗುವ ನೆನಪಿನಲೆಯಾಟ ನಿನ್ನದು..
ಬಂದು ಬಿಡು ಖಾಲಿ ತೊಳಿಗೆ ಭರ್ತಿ ಮಾಡುವ ಕನಸೊಂದು ಜನಿಸಿದೆ..
ಮುತ್ತಿಟ್ಟ ಹಣೆ ಖಾಲಿಯಾಗಿರಿಸದೆ ಬೊಟ್ಟೊಂದು ಇಡಬೇಕೆನಿಸಿದೆ…!
– ಸೂಗೂರೇಶ ಹಿರೇಮಠ
ಬಿಟ್ಟೇನೆಂದರೆ
~~~~~~~~~~
ತನ್ನೆದೆಯ ತಾನೇ ಕುಕ್ಕಿ
ನೆತ್ತರು ಹನಿಸಿ
ನೆಕ್ಕಿ ನೆಕ್ಕಿ ಗಾಯ ಮಾಯ
ಬಿಡದೆ ವ್ರಣವಾಗಿ
ಹಸಿಹಸಿಯಾಗಿ ತೆರೆತೆರೆದು
ತೋಡಿ ತೋರಿ ಬರೆದು ಹಾಡಿ
ಸುಖಿಸುವ ಈ ವೃತ್ತಿಗೆ
ವೃತ್ತ ಗತಿಗೆ ಎಲ್ಲಿ ಕೊನೆ
ಬಿಟ್ಟೇನೆಂದರೆ ಬಿಡದ
ಈ ಬೇತಾಳನನ್ನು
ಮರದ ಕೊಂಬೆಗೇ ಮತ್ತೆ ಮತ್ತೆ
ನೇತು ಬಡಿದು ಬಾಯ್ತುಂಬ
'ಹಾಳಾಗು, ಸಾಯಿ'ಎಂದು ಶಪಿಸಿ
ಬಂದರೂ
ಹೇಗೋ ಬಂದು ಬೆನ್ನು
ಹತ್ತುತ್ತಾನೆ
ಹೆಗಲೇರುತ್ತಾನೆ
ಸಾವಿರದ ಭೂತಕ್ಕೆ ಹೆಗಲು
ಕೊಟ್ಟು
ಮಾ ನಿಷಾದ ಶೋಕಕ್ಕೆ
ಹೊಸ ಕೊನೆಯ ಹುಡುಕುತ್ತ
ಅಲೆದಲೆದು
ಸೋಲುವ ಸಿಂದಬಾದ್
ನಾನೇ !
****
ಕಳೆದ ಗುರುತು
ಅಂದು ಬರೆದ ಸಾಲು-
" ಗೆಜ್ಜೆ ಕಾಲ್ಗಳು ಮನೆಯ
ಒಳ ಹೊರಗೆ ಸುಳಿದಿರುವಾಗ
ಹೆಜ್ಜೆಗುರುತುಗಳನ್ನೇಕೆ
ಕಾಪಿಡಬೇಕು ?!"
ಈಗ-
ಅಣಕಿಸುವ ಮೌನ
ಹೊಸ್ತಿಲಲ್ಲಿ ಹುಲ್ಲು
ಅಂಗಳದಲ್ಲಿ ಮರಳು
ತುಂಬಿ
ತಡವುತ್ತಿರುವೆ
ಹೆಳವ ಬೆರಳುಗಳಲ್ಲಿ-
ಹೆಜ್ಜೆ ಗುರುತುಗಳೆಲ್ಲಿ…
•• ಗೋವಿಂದ ಹೆಗಡೆ
"ನಿರಂತರ"
ಹರುಷ ತಾಳುತ
ಪುಲಕಗೊಳ್ಳುತ
ಅರಳಿ ನಿಂತಿದೆ ಹೂಮನ
ಸರಸವಾಡುತ
ವಿರಸದೂಡುತ
ಸಮರಸದಲಿದೆ ಜೀವನ
ಸುಖದ ನೆನಪಿನ
ಮಧುರ ಚೇತನ
ತುಂಬಿ ಬರುತಿದೆ ದಿನ ದಿನ
ಇಂದು ನಾಳಿನ
ಕಾರ್ಯ ಕಾರಣ
ಎಂಬ ಚಿಂತೆಯೆ ಪ್ರತಿಕ್ಷಣ
ನಿತ್ಯ ನೂತನ
ಭಾವ ಸ್ಪಂದನ
ಹೊಸತು ಹೊಸೆಯಲಿ ಕಲ್ಪನ
ಆರು ಋತುಗಳು
ಕೂಡಿಕೊಂಡಿರೆ
ಭೂಮಿ ಸುತ್ತಿದೆ ಸೂರ್ಯನ
*****
"ಬೇಡವೇ"
ಹೊಟ್ಟೆ ತುಂಬಲು ಬಟ್ಟೆ ಹೊದೆಯಲು
ನೆರಳಿನಾಶ್ರಯ ಪಡೆಯೆ ಜೀವ ದುಡಿವುದು
ನಾನು ನನ್ನದು ಮೊದಲು ಬರುವುದು
ತೃಪ್ತಿ ಬಳಿಕವೆ ಬೇರೆ ಯೋಚನೆ ಸುಳಿವುದು
ಹೊಟ್ಟೆ ತುಂಬಿದ ಬಟ್ಟೆ ಹೊದ್ದಿಹ
ನೆರಳು ಸಿಕ್ಕಿಹ ಬಳಿಕವೇನಿದೆ?
ಆಸೆಯೊಂದಿದೆ ಅದುವೆ ಮುಂದಿದೆ
ಅದುವೆ ಹಿಂದಿದೆ ಅದುವೆ ವ್ಯಾಪಕವಾಗಿದೆ
ಮೊದಲೆ ಆಸೆಗೆ ಕೊನೆಯೆ ಆಸೆಗೆ
ತೃಪ್ತಿ ಎನ್ನುವುದಿದೆಯೆ ಅದಕೆ?
ಹೆಣ್ಣಿನಾಸೆಯು ಮಣ್ಣಿನಾಸೆಯು
ಹೊನ್ನಿನಾಸೆಯು ಜೊತೆ ಜೊತೆಗಿದೆ
ಆಸೆ ಹಿಂಗಿದ ಬಳಿಕವಾದರೂ, ಮನ-
ಶಾಂತಿ ನೀಡುವ ಕಾವ್ಯವಾರಿಗೂ ಬೇಡವೆ?
-ಮಾ.ವೆಂ.ಶ್ರೀನಾಥ
Dear Madhav,
Your poetry is awesome. Keep posting more.