ಆಡು ನವಿಲೇ
ಕನಸುಗಳ ಬಚ್ಚಿಟ್ಟು ಕಾಡದಿರು ಹೀಗೆ
ಬೆಚ್ಚುತ್ತ ನೋಡದಿರು ಎದೆಹೂವು ನಲುಗೆ ।।
ನೆನಪು ಬುತ್ತಿಯು ಚೆಲ್ಲಿ ಈಗ ಚೆಲ್ಲಾಪಿಲ್ಲಿ
ಕಿರಿಬೊಗಸೆಯಲ್ಲದನು ಮೊಗೆಯುವುದು ಹೇಗೆ ।।
ಜೊತೆ ಜೊತೆಗೆ ನಡೆವಲ್ಲಿ ಬೀಸಿ ಸುಂಟರಗಾಳಿ
ಮರೆಯಾದ ಹೆಜ್ಜೆಗಳು ಹೆಚ್ಚಿಸಿವೆ ಬೇಗೆ।।
ಎದೆಯಲ್ಲಿ ಎದೆ ಬೆರೆತು ಹಾಡು ಹೊಮ್ಮಿರುವಂದು
ಯಾವ ಗಂಟಲ ಗಾಣ ಒತ್ತಿದ್ದು ಹಾಗೆ ।।
ನುಡಿಸು ನೀ 'ಗೋವಿಂದ' ಕೊಳಲಿಗುಸಿರನ್ನೂಡಿ
ಕರಗಿ ಎದೆ ನವಿಲಾಡಿ ಬಿಚ್ಚುತ್ತ ಸೋಗೆ।।
****
ವಿರಹ
ಎಲ್ಲಿ ಹೋದ ಈ ನಲ್ಲ ತಾನು
ಯಾಕೆ ಇನ್ನು ಬಾರ
ಈಗ ಬರುವೆನೆಂದು ಹೋದವ
ಹೋದನೆಷ್ಟು ದೂರ
ಯಾವ ಕೋಮಲೆಯ ಕಣ್ಣ ನೋಟ
ಮನವ ಸೆಳೆಯಿತೇನು
ಯಾವ ಮಿಂಚಿನಬಳ್ಳಿ ಕಟ್ಟಿ
ಹಾಕಿದ್ದೀತು
ನನ್ನ ಮರೆತನೇನು
ತುಟಿತಂಬುಲ ತೊಡೆತಣಿಗೆಯೂಟ
ಸಾಲದಾಯ್ತೆ ಇವಗೆ
ಯಾವ ಅಕ್ಷಯದೂಟೆ
ಅರಸಿಹೋದನೋ
ಲೋಕಪೂರ್ತಿ ಇಷ್ಟೆ ಅಡುಗೆ
ಈ ಇಷ್ಟು ಸತ್ಯ ಅರಿಯನೇನು ಇವ
ಹೋದನೆಲ್ಲಿ ರಮಣ
ವಿರಹದೀಟಿ ನನ್ನ ಚುಚ್ಚಿ ಕೊಲ್ಲುತಿದೆ
ಬಾರದೇನು ಕರುಣ ?
ಬಾರನೇನು ರಮಣ?
****
ಹಾದಿ
ಹಾದಿ ತೆರೆಯುತ್ತಲೇ ಇದೆ
ಮೆಟ್ಟಿಲು ಮೆಟ್ಟಿಲುಗಳಾಗಿ
ಇಕ್ಕೆಲಗಳಲ್ಲಿ ಹಸಿರು ಹೂ ಚಿಟ್ಟೆ
ನಿಲ್ಲುವಂತಿಲ್ಲ ಮನ ಸೋತು
ಮೈಸೋತು
ಏರುದಾರಿಯಲಿ ಏರಲೇ ಬೇಕು
ಹಾಡು ಮುಗಿವವರೆಗೂ ಹಾದಿ
ತೆರೆದಿರುವ ನಂಬಿಕೆಯಲ್ಲಿ ಏರು
ಪಯಣ-'ನಂಬಿ ಕೆಟ್ಟವರಿಲ್ಲ ' ?
ಕೈಹಿಡಿದ ಪುಟ್ಟಿ ಮುಂದೆ
ಸಾಗಿದಂತೆಲ್ಲ ಬೆಳೆ ಬೆಳೆದು
ಮುಂದೊಂದು ಮೆಟ್ಟಿಲಲ್ಲಿ
ಪಾತ್ರ ಅದಲು ಬದಲು
ಅಮ್ಮನಿಗೆ ಪುಟ್ಟಿಯ ಹೆಗಲ ಆಸರೆ
ಅಲ್ಲಿಯವರೆಗೆ ಮುಂದೆ ಮೇಲೆ
ಎಲ್ಲೋ ಬೀಳುತ್ತಿರುವ ಇಷ್ಟು
ಬೆಳಕನ್ನೇ ನಂಬಿ ನೆಚ್ಚಿ
ಬಸಿಲೋ ಮಳೆಯೋ – ಹತ್ತುತ್ತಲೇ..
ನಾನ್ಯಃಪಂಥಾ ಃ ..
One step at a time…
✍???? ಡಾ. ಗೋವಿಂದ ಹೆಗಡೆ
ಕಿರು ನಗೆಯ ಕನ್ನೆ
ಕದ್ದು ಅದೇಕೆ ನೋಡುವೆ
ನಿನ್ನವ ನಾನಾದರೆ ?
ವಸುಂದರೆ ಭಯವದೇಕೆ
ನಾ ನಿನ್ನವ ನಾದರೆ !
ನಿನ್ನದನದಲಿ ಕಂಡೆನಾ
ನಾಚಿಕೆಯ ದ್ವಿಮುಖ
ಕೋರಿಕೆಯ ಹಿನ್ನೊಟ
ಯಾವುದೊ ಪರದಾಟ
ಕಿರು ನಗೆಯ ಕನ್ನೆ
ನಿನ್ನಗುವದನದಲಿ
ಕಂಡೆನಾ !!
ಹಸುಳೆಯ ಲತೆ
ವಸುಂದರೆಯ ಸಂಘ
ಚಂದನದ ಲೇಪನ
ಭಾನಿನ ತೇಜು
ಪೂಣಿ೯ಮೆಯ ಮಂಪು
ಒಡಲಾಳದ ಮಾತು
ಒಡನೆ ಬರುತಿದೆ -ನಿನ್ನ ಆಸ್ಥಿತ್ವ
ಬದಿಗೊತ್ತಿ ಕರೆಯಲೆ- ದುಗುಲವದು
ನನ್ನ ದವಳ- ದವಳದಲೂ
ನಿನ್ನ ಪಿಸುಮಾತು.
ಅದರಾಚೆ ಏನಾದರೂ
ನಾನಿದ್ದರೆ !
ಸೇರಲು ಬಯಸುತಿದ್ದೆ- ಪರಕಾಯವ
ಬಿಡು ಮರಿಚಿಕೆ !
ನನ್ನ ಕೋರಿಕೆ: ನೀ ನನ್ನಾಕೆ
ಅದೇಕೆ ಹಿಂಜರಿಕೆ?
ಸೇರಿಕೊ -!
ನನ್ನ ದೇಹದೋಳ್ಳಲ್ಲ .
ಪರಕಾದೊಳು
– ಮಹಿಬೂಬ ಜಮಾದಾರ
ಗಜಲ್
ಹಾದಿಹಾಸಿಗೆಯಲಿ ಮಲಗಿದವರು ನಾವು
ಜಗದಾಟದಲಿ ಆಟಿಕೆಯಾದವರು ನಾವು
ನಭ ನಮ್ಮ ಮನೆಯ ಚಾರಣವೆಂದವರು ನಾವು
ರವಿತೇಜ ಮನೆಯ ಬೆಳಕಿಂಡಿಯೆಂದವರು ನಾವು
ನಮ್ಮ ಪ್ರತಿಬಿಂಬವ ಕಂಬನಿಯಲಿ ಕಂಡವರು ನಾವು
ನಮ್ಮ ಹೆಸರ,ವಿಳಾಸವ ಹುಡುಕುತಿರುವವರು ನಾವು
ಯಾವ ಜಾತಿಗೂ ಜೊತೆಯಾಗದವರು ನಾವು
ಯಾವ ಗಣತಿಗೂ ದಾಖಲಾಗದವರು ನಾವು
ಕನಸ ಶ್ರೀಮಂತಿಕೆಗೆ ದೂರವಾದವರು ನಾವು
ಕತ್ತಲಬೆಳಕಿನಲಿ ಕಪ್ಪಾಗೇ ಉಳಿದವರು ನಾವು
ಒಪ್ಪತ್ತೇ ಉಂಡು ಬೀಗಿದವರು ನಾವು
ನಾಲ್ಕೆಜ್ಜೆ ಮಣ್ಣಿಗೆ ಮಣ್ಣಾದವರು ನಾವು
ಬಿ.ಎಲ್.ಆನಂದ
೧
ನೊರೆಯುಕ್ಕದ ಟೀಪಾತ್ರೆ
ಇನ್ನೂ ಬರದ ಪೇಪರ್ ತರುವ ಹುಡುಗ
ಮಾರುದ್ದವಿದ್ದರೂ ಬರದ
ಕ್ಯಾಷ್ ಕೌಂಟರಿನ ಸರದಿ
ವೇಗ..ವೇಗ..ವೇಗ…
ಒಮ್ಮೆಲೆ ಎಲ್ಲವೂ ಮುಗಿಸುವ ದಾಹ
ಉಸಿರಾಡಲು ಸಮಯದ ಕೊರತೆ
ದಿನಕ್ಕೆ ಇಪ್ಪತ್ತನಾಲ್ಕು ಗಂಟೆಯಷ್ಟೆ!!
ಇನ್ನೂ ಹೇಳಬಹುದಿತ್ತು
ಕ್ಷಮಿಸಿ ಸಮಯವಿಲ್ಲ.
ವೇಗ ..ವೇಗ..ವೇಗ..
೨
ಸಮಯಕ್ಕೆ ಎಚ್ಚರಾದ ಸೂರ್ಯ
ಗೂಡಿನಿಂದ ಹೊರ ಇಣುಕಿದ ಪಕ್ಷಿಗಳು
ಹರಿವ ನದಿ,ಚಲಿಸೋ ಮೋಡ
ಕ್ಷಣಕ್ಷಣವೂ ಆಸ್ವಾದಿಸುತ್ತ ಗೋಚರಿಸಿದ್ದು
ನಿಧಾನ..ನಿಧಾನ..ನಿಧಾನ…
ಗಡಿಯಾರದ ಹಂಗೆನಿತು ಇಲ್ಲ
ಇದ್ದಷ್ಟು, ಇರುವಷ್ಟು!
ಬುದ್ದಿಯಿರದ ಖಗ-ಮೃಗಗಳು
ಪ್ರಕೃತಿಯೊಡನೆ ಕಲೆತು
ಹೆಜ್ಜೆಮೇಲೊಂದು ಹೆಜ್ಜೆ
ನಿಧಾನ..ನಿಧಾನ..ನಿಧಾನ
ರಮೇಶ್ ನೆಲ್ಲಿಸರ
ಅನರ್ಥದ ಸಾಲುಗಳು…
ಅರ್ಥವಾಗದವಳ ಅನರ್ಥದ
ಸಾಲುಗಳ ಕವಿತೆಗಾಗಿ
ತಲೆಕೆರೆದು ನೆಡೆದಾಡುವಾಗಲೇ
ಕಾಲಿಗೂ ಮೆದುಳಿಗು ತಟ್ಟಿದ್ದು
ದಯಾನೀಯವಾಗಿದ್ದ
ಹಸಿದವರ ಸ್ಪರ್ಶ ಹಾಗು ದ್ವನಿಗಳು!
ನಾವೂ ಇದ್ದೇವಪ್ಪ ಎನ್ನುವುದಕ್ಕಿಂತ
ನಮ್ಮಕಡೆ ಸ್ವಲ್ಪನೋಡಿ ಸ್ವಾಮಿ
ಅಂದಿದ್ದಾಗಲೇ ಹೌದಲ್ಲವೇ!
ಅನ್ನಿಸಿದ್ದರೂ ಸೌಂದರ್ಯ ಅಕರ್ಷಣೆಯ
ಸಾಲುಗಳು ನೀನ್ಯಾವ ಸೀಮೆ ಕವಿಯೆಂದು ಒದ್ದೊಡಿದವು!
ಇದ್ದಬದ್ದ ಸಾಲುಗಳನ್ನೆಲ್ಲಾ
ಸೇರಿಸಿ ಹಣೆದ ಕವಿತೆಯೊಂದು
ನಾನು ಬಂಡಾಯ ಎಂದಾಗ!
ಚೀ ಥೂ ಅನ್ನೋರನ್ನ ಕಾರುಣ್ಯಕ್ಕೆ
ಒಳಪಡಿಸುವ ದೂರ್ತ ಪ್ರಯತ್ನ
ಅಂಬೊರ ಸಂಖ್ಯೆ ಹೆಚ್ಚಾಗಿತ್ತು!
ಅವರಿಗ್ಯಾಕೋ ಚಂದನೆಯ
ಹೊಟ್ಟೆಕಿಚ್ಚು ಎಂದವರು
ದೀನರಾದರು!
ಇವರೆಲ್ಲಾ ತಣ್ಣನೆಯ
ಈರ್ಷೆಯಿಂದ ಸೊಲ್ಲುವರು ಅನ್ನುವರು ಪ್ರೇಮಿಗಳಾದರು!
ಈ ಪಂಗಡದೊಳು ಕವಿ
ಮಾತುನಿಲ್ಲಿಸಿ ಮೌನಮುನಿಯಾದನು!
-ರೋಹಿತ್ ಶೆಟ್ಟಿ ಮೇಲಾರಿಕಲ್ಲ್
" ಪಕ್ಷಿ ಹೃದಯಸಂಗಮ "
ಹೇ .. ಬಾ ಇಲ್ಲಿ ,
ಇಲ್ಲಿಹುದು ಪಕ್ಷಿಯ ಚೈತ್ರಾಕ್ಷಿ!
ನೋಡಲ್ಲಿ ತೆಳದಿವುದು,
ರವಿಯ ಸುಷ್ಮಾಕಿರಣದ ಇಕ್ಷಾಕ್ಷಿ !
ತೊರೆ, ಬಾನ್ ಮುಗಿಲ್
ಮೊರೆವಂತೆ,
ಅಧೋ ,
ಹಕ್ಕಿಯ ಸುಗಾನ,
ಸವಿಯ ರಸಗಾನ!
ತಾರೆಯ ಮಡಿಲು ,
ಮಿಡಿಯುವ ಸಡಿಲು,
ಪುಟಪುಟನೇ :
ಮಿಡಿದವು ಬಾನ್ ಮುಗಿಲು !
ಹಾರುತ್ತಲಿವುದು ಹಕ್ಕಿ,
ಕೂಗುತ್ತಲಿರುವುದು ಪಿಕ್ಕಿ!
ಅಲ್ಲಿದೆ,
ಪಕ್ಷಿಯ ಹೃದಯಸಂಗಮ,
ಅಲ್ಲಿದೆ,
ಋಷಿಯಂದೆಯ ಸವಿಸುಮ !
ಬಾ ಇಲ್ಲಿ ,
ತೆರೆದಿದೆ ಜೀವೋತ್ಸವ !
ಬಾ ಇಲ್ಲಿ,
ನಿಂತಿದೆ ವಸಂತೋತ್ಸವ !
ಪಕ್ಷಿಯೆದೆಯೊಳ್ ಕವಿ ವಿಹಂಗಮ,
ಹಸಿರಕಳೆಯೊಲ್ ರವಿಹೃತಕ್ಷಿಯಾಗಮ !
ಅದೇ ಹಕ್ಕಿ,
ಅದೇ ಹಕ್ಕಿ ,
ಸಾಕ್ಷಾತ್ಕಾರದ ಬಾಯ್ತೆರೆದ ,
ಆತ್ಮದ ಹಕ್ಕಿ,
ಸಾಕ್ಷಿಯ ಹಕ್ಕಿ ,
ಕವಿಹೃದಯದ ಮನ ಚಕೋರದ,
ವಸಂತದ ಹಕ್ಕಿ !
-ಬೆನಾಕೀ ತುಮಕೂರು
ಕಾಲಕ್ಕೆಂತ ಕೆಲಸ
ಸುಮ್ಮನೇ ಉರುಳುತ್ತದೆ
ಗುಲಾಬಿಗಳನ್ನು ಅರಳಿಸುತ್ತದೆ ಹೇಗೋ
ಬಾಡಿಸುತ್ತದೆ ಕೂಡಾ
ಮೊಟ್ಟೆಯೊಂದು ಚಿಟ್ಟೆಯಾಗಿ ಹಾರುತ್ತದೆ
ಹಣ್ಣೆಲೆ ಉದುರಿ ಗೊಬ್ಬರವಾಗುತ್ತದೆ
ಜೀವವಿದ್ದುದಕ್ಕೆ ಸಾಕ್ಷಿಯಾಗಿ ಚಿಗುರು ಕೊಂಕಿ ಕೊನರುತ್ತದೆ
ತೀರುವವನ ಕೊನೆಯಾಸೆ ತೀರಿಸುವಂತೆ
ಭೂಮಿಯ ಅಂಚನ್ನು ತಾಕುತ್ತದೆ ಆಕಾಶದ ಅಂಚು
ಅಥವಾ ಹಾಗೆ ಭ್ರಮೆ ಹುಟ್ಟಿಸುತ್ತಿರಬಹುದು…
ತಮ್ಮ ಅಲೆದಾಟದಲ್ಲಿ ಸಕ್ಕರೆಯ ತುಣುಕೊಂದನ್ನು
ಕೊನೆಗೂ ಕಾಣದೆ ಪ್ರಕ್ಷುಬ್ಧಗಂಡ ಇರುವೆ ಸಾಲಂತೆ
ದಿಕ್ಕೆಟ್ಟ ಆಲೋಚನೆಗಳು
ಹುತ್ತಗಟ್ಟದೆ ಹುಡಿಯಾಗಿ ಉದುರಿ ಬಿದ್ದ
ಅಶಕ್ತ ಆಲೋಚನೆಗಳ ಖಾಸಗೀ ಧ್ಯಾಸವೊಂದರಲ್ಲಿ
ತಪ್ಪುಗಳ ಲೆಕ್ಕಕ್ಕೆ ಸಮಝಾಯಿಶಿ
ಬರೆದುಕೊಳ್ಳುತ್ತಾ ಕುಳಿತಿರುವಾಗ
ಹ್ಞಾವೊಂದು ಸುಳಿದಾಡಿತು, ಕಾಣಿಸಿಕೊಳ್ಳಲಿಲ್ಲ
ಹ್ಞಾವುಗಳಿಗೆ ದೊಡ್ಡದೊಂದು ಅವಕಾಶವಿರುತ್ತದೆ
ಅವು ಕಾಣಿಸಿಕೊಳ್ಳದೆಯೂ ಇರುವಿಕೆಯನ್ನು
ತೋರಿಕೊಳ್ಳಬಹುದು
ನಡಿಗೆಯಿಂದ… ಸರಪರ ಸದ್ದಿನಿಂದ….
ಹಿಸ್ಸ್….. ಗುಡುವಿಕೆಯಿಂದ….
ಒಮ್ಮೊಮ್ಮೆ ಯಾವೊಂದೂ ಇಲ್ಲದೆ ಮಾಯಾವಿ
ರಾಕ್ಷಸನ ಸಂಚಿನಂತೆಯೂ ಆವರಿಸಬಲ್ಲವು
ಶೂನ್ಯ ಜ್ಞಾನದ ಹೊತ್ತಲ್ಲಿ
ಕಣ್ಣಿವೆಗಳ ದಿಕ್ಕು ಬದಲಾಗದೆ ನೆಟ್ಟುಕೊಂಡಿರುವಾಗ
ಕೂದಲೂ ನೆರೆಯುವುದನ್ನು ತಪ್ಪಿಸಲಿಲ್ಲ
ಸುಕ್ಕುಗಟ್ಟಿದ ಚರ್ಮದ ಅಡಿ ಕರಗಿ ಹೋದ ಕೊಬ್ಬಿನ ಹಾಸಿಗೆ
ಹತ್ತಿಯ ಹಗುರ ಕಳೆದುಕೊಂಡ ಪಲ್ಲಂಗ
ಜೋತುಬಿದ್ದ ಚರ್ಮದ ತುಂಬಾ
ಅದೃಷ್ಟದ ಅದೆಷ್ಟೋ ರೇಖೆಗಳು
ಅಚ್ಚರಿಸುವಾಗಲೂ ಅನಿಸುವುದೊಂದೇ
ಕಾಲಕ್ಕೆಂತ ಕೆಲಸ
ಸುಮ್ಮನೇ ಉರುಳುತ್ತದೆ….
–ಆಶಾಜಗದೀಶ್
*ಹೆಣ್ಣಿಗೇನು ಬೇಕು !*
ಅವಳು ಗೃಹಿಣಿಯೇ
ಇರಬಹುದು,
ಮನೆಯ ಹೊರಗೂ ದುಡಿಯುತಿರಬಹುದು,
ಆದರೆ ದಿನವಿಡೀ ಕೆಲಸ
ಮಾಡುತ್ತಲಿರುತ್ತಾಳೆ;
ಬೇರೆಯವರ ಮಾತಿಗೆ
ಅವಳು ಹೂ'ಗುಟ್ಟಬಹುದು,
ಇದಿರಾಡಬಹುದು,
ಆಗಬೇಕಾದ ಕೆಲಸಕೆ
ನ್ಯಾಯ ಸಲ್ಲಿಸುತ್ತಾಳೆ ;
ಅವಳು ಮಿತವ್ಯಯಿ
ಆಗಿರಬಹುದು ಇಲ್ಲವೆ
ದುಂದುಗಾರಳಿರಬಹುದು,
ಮನುಷ್ಯ ಸಂಬಂಧದ
ಬೆಲೆಯ ಅರಿತಿರುತ್ತಾಳೆ ;
ನಿದಿರೆ ಬಾರದಿರುವಾಗ
ಅವಳೊಳಗಿರುವ ಪುಟ್ಟ
ಹುಡುಗಿ ಅಳುತ್ತಾಳೆ ;
ತಾಯ್ತಂದೆಯರ
ನೆನಪಾದಾಗ ಕಣ್
ತೇವವಾಗಿ, ಬಿಕ್ಕುತ್ತಾಳೆ;
ಬೇರೆಯವರಿಗೆ ಸಲಹೆ
ನೀಡುವಾಗ ದೊಡ್ಡ
ಅಕ್ಕನಂತಾಗುತ್ತಾಳೆ,
ಜೀವಮಾನವಿಡೀ
ಪತಿಯ ಸುಖ-ದುಃಖದಲಿ
ಸಹಚಾರಿಣಿಯಾಗಿರುತ್ತಾಳೆ;
ಹಸಿದು ಬಂದವರಿಗೆ ತುತ್ತ
ನೀಡುವಾಗ ಆಕೆ ಥೇಟ್
ಅಮ್ಮನೇ ಆಗುತ್ತಾಳೆ ;
ಅವಳು ಬೇರೆಯವರಿಂದ ಬಯಸುವುದು :
*ಅತಿ ಸಣ್ಣ ಗೌರವ,*
*ಮುರಿಯದ ನಂಬಿಕೆ,*
*ಬೊಗಸೆ ಪ್ರೀತಿ ಮತ್ತು*
*ಭರವಸೆಯ ಬೆಳಕು ಮಾತ್ರ !!*
ಶ್ರೀವಲ್ಲಿ ಮಂಜುನಾಥ
ಮೋಹಕ್ಕೆ ಮಾಯಕ್ಕೆ ಮುಗಿಮುಗಿದು
ಬಿದ್ದು
ಮೈಯೆಲ್ಲ ಮನಸೆಲ್ಲ ಉರಿದುರಿದು
ಬೆಂದು
ಸಖಿಗಾಗಿ ಹಗಲೆಲ್ಲ ಇರುಳೆಲ್ಲ ಕನವರಿಸಿ
ಖುದ್ದು
ಮುಂದಿದ್ದೂ ಮಾಡಿ ಚಿತ್ತದಲೆ ಮತ್ತಿನಲೆ
ಮುದ್ದು
ಹೆಕ್ಕಿಹೆಕ್ಕಿ ಕಸಿಕಸಿದು ಕುಡಿನೋಟ
ಕದ್ದು
ಎಲ್ಲವು ಹುಸಿ ಎಂದು ಅರಿವೊಂದಿಟ್ಟಿತು
ಗುದ್ದು
ಎದ್ದು ,ಬಿದ್ದು ,ಮತ್ತೊಮ್ಮೆ ಮಗದೊಮ್ಮೆ
ಬಿದ್ದೆದ್ದು
ಸೆಳೆಯುತಿತ್ತು ಸರಾಸಗಟವಾಗಿ ಅವಳ ನೆನಪು
ಬಿಡದೆ ಜಿದ್ದು.
-ಪ್ರಭುದೇವ ಹಿರೇಮಠ್
ಕತೆ ಹೊಡೆದಕಾಗದ
ನೆಲದಲಿ ಚೆಲ್ಲಾಡಿದ್ದ
ಕಾಗದದಹಾಳೆಗಳ
ಗುಡಿಸಲು ಹೊರಟು
ಕಿಟಕಿ ಸರಳುಗಳ ಮಧ್ಯೆ
ಅಬ್ಬರಿಸಿ ಬಂದ ಗಾಳಿಯು
ನನ್ನನ್ನೆ ತೂರಾಡಿಸಿತು
ಅಲ್ಲೊಂದು ಹೆಣದಂತೆಕವುಚಿದ್ದ
ಕಾಗದವುಜೀವಬಂದು
ಎದ್ದುಬಂದುಕಸತೆಗೆಯಲು
ಬಿಡದು
ಮಸುಕು ಅಕ್ಷರಗಳ ಮುಖವೆತ್ತಿ
ಅದುಕತೆಹೊಡೆಯಲು ಶುರುವಿಟ್ಟಿತು:
ಈ ಹಿಂದೆಯೊಂದುಆಟವಾಗಿತ್ತು
ನಾ ಹುಡುಗಿ ಅವಳು ಹುಡುಗನೆಂದು
ನನ್ನ ಮೇಲಿನ ಅವಳ ಆಳದ
ಭಾವನೆಯನ್ನು ನಾನೇ ಬರೆಯುವುದಂತೆ!
ಅಡ್ರಾಸ್‍ಇಲ್ಲದ ಅವಳಿಗಾಗಿ ನಾನು
ಹುಡುಕಾಡಿದ್ದು ನನ್ನೊಳಗೆ ಬಿಟ್ಟರೆ
ಹೊರಗಡೆಅಲ್ಲವೇಅಲ್ಲವಂತೆ!
ಮುಂದೆಥೇಟ್ ಅವಳಂತೆ ನನ್ನೆದೆಯಲ್ಲಿ
ಮೊಲೆ ಮೊಳೆದು ಪೃಷ್ಠಹಿಗ್ಗಿ ಹಣೆಗೆ
ಮುಂಗುರುಳು ಚಾಚಿತಂತೆ…
ಯೋಚಿಸತೊಡಗಿದ್ದೇನೆ ಈಗ
ನಾನು ಅವಳಾ… ಇಲ್ಲ ಅವನಾ?
ಕಾಗದದಕತೆರಿಯಲ್ಲಾ… ರೀಲಾ?
ಅಷ್ಟಾಗಿ ಕತೆಯಾರದ್ದೋ
ಕೃತಿಚೌರ್ಯವಲ್ಲ ಅಂದುಕೊಳ್ಳುವೆ!
-ಅಕ್ಷಯಕಾಂತಬೈಲು