ದಾನಾ ಮಾಂಝಿ
ಮೂಲ : ವಿಶ್ವನಾಥ ಪ್ರಸಾದ ತಿವಾರಿ
(ಅಧ್ಯಕ್ಷರು, ಕೇಂದ್ರ ಸಾಹಿತ್ಯ ಅಕಾಡೆಮಿ, ದಿಲ್ಲಿ)
ಬರೀ ದಾನಾ ಮಾಂಝಿಯದಲ್ಲ
ಈ ದೈನ್ಯತೆಯ ಕಥೆ..!
ಭ್ರಮೆಯಿರಲಿಲ್ಲ ‘ದಾನಾ’ನಿಗೆ
ಇರಲಿಲ್ಲ ಯಾರಿಂದಲೂ ಆಸೆ
ಇರಲಿಲ್ಲ ಯಾರ ಮೇಲೂ ಸಿಟ್ಟು
ಭಾವನೆಗಳಿದ್ದವು, ವೇದನೆಗಳಿದ್ದವು
ಸೋಲು ಇತ್ತು ಹಾಗೂ ಮೌನವೂ
ದಾನಾ ತನ್ನ ಹೆಂಡತಿ ‘ಅಮಂಗ’ಳ
ಹೆಣವನ್ನು ಚಾಪೆಯಲ್ಲಿ ಸುತ್ತುವಾಗ
ಭೂಮಿಯೂ ನಾಚಿ ನೀರು ನೀರಾಗಿ
ಭೂಮಿಗಿಳಿದಿತ್ತು ತಲೆತಗ್ಗಿಸಿತ್ತು
ಕಲ್ಲೂ ತನ್ನ ಕಲ್ಲೆದೆಯ ಮೇಲೆ
ಕಲ್ಲು ಹೊತ್ತುಕೊಂಡಿತ್ತು
ಅವಳ ನಿರ್ಜೀವ ದೇಹವನ್ನೆತ್ತಲು
ದಾನಾ ಬಾಗಿದ ಕ್ಷಣದಲ್ಲಿ
ಬಾಗಿದವು ಎದುರಿದ್ದ ಮರಗಳೂ
ಧಿಗಿಲುಗೊಂಡು ದಿಕ್ಕೇಡಿಯಾದವು
ಮುಗ್ಧ ಅಳಿಲುಗಳು
ಗುಬ್ಬಿಗಳೂ ಚಿಂವ್‍ಗುಟ್ಟುವುದನು
ಮರೆತು ಮೂಕಾದವು
ತುಂಬ ದಾರುಣವಾಗಿತ್ತು ದೃಶ್ಯ
ಬಾಗಿಲು, ಕಿಟಕಿ, ಮೇಜು
ಕುರ್ಚಿ, ಹೂಕುಂಡಗಳಿಗೂ
ಅವಾಕ್ಕಾಗಿದ್ದರೂ ಆಧುನಿಕರು
ಪಾಮರರು, ಪರಂಪರಾವಾದಿಗಳೂ
ಅಪ್ಪನ ಹೆಗಲ ಮೇಲೆ ಚಾಪೆಯಲ್ಲಿ
ಸುತ್ತಲ್ಪಟ್ಟಿದ್ದ ನಿರ್ಜೀವ ಅವ್ವ
ಮರಗಟ್ಟಿದ್ದ ಕಣ್ಣುಗಳಿಂದ ದಿಟ್ಟಿಸುತ್ತ
ಮಗಳು ನೆನೆದಳು ತನ್ನ
ಉದಾಸ, ನಿರಾಶ, ಹತಾಶ ಭವಿಷ್ಯ
ಸತ್ತುಹೋಗಿರಲಿಲ್ಲ ಭೂತ,
ಅವನ ಹೆಗಲೇರಿತ್ತು ವರ್ತಮಾನ
ಭವಿಷ್ಯ ಹರಿದಾಡುತ್ತಿತ್ತು ಕಾಲುಗಳಡಿ
ಗಾಯಗೊಂಡ ಹಾವಂತೆ
ಭಾರವಂತೂ ಇತ್ತು ಹೆಗಲ ಮೇಲೆ
ಆದರೂ ದಾನಾ ಕೃತಜ್ಞನಾಗಿದ್ದ
ತನ್ನವಳ ಸ್ಮøತಿಗಳಿಗೆ..!
ಇನ್ನೂ ಬಹಳ ದೂರವಿದೆ ಮೇಲಾಘರ್?
ದಾನಾನ ಸಂಕಲ್ಪ, ಅವನ ಪ್ರೀತಿ
ಅವನ ಕಾಲುಗಳಲ್ಲಿನ ಶಕ್ತಿಗಿಂತ
ದೂರವಿದೆಯೇ? ಇರಬಹುದು..!
ಗಗನ ಮಾರ್ಗವಾಗಿ ಹೋಗುತ್ತಿದ್ದ
ಪಾರ್ವತಿ ಶಿವನಿಗೆ –
‘ಹೇ ದೇವಾ, ನೀವೂ ಕೂಡ
ಹೀಗೇ ಅಲೆದಿರಬಹುದಲ್ಲವೆ
ನನ್ನ ಶವ ಹೊತ್ತು ತ್ರಿಲೋಕದಲ್ಲಿ?
ಹಣೆಗಣ್ಣ ತೆರೆದು ನೋಡಿ ಸ್ವಾಮಿ
ಭಾದ್ರಪದದ ಕಾರ್ಮೋಡಗಳು
ಬಂಧಿಸಿವೆ ಭೂಮಿಯನು
ದುಃಖ ಹೆಚ್ಚಾಗಿದೆ
ಮೃತ್ಯೂಲೋಕದಲ್ಲಿ..!
ಕನ್ನಡಕ್ಕೆ : ಗಿರೀಶ ಜಕಾಪುರೆ
(ಓರಿಸಾದ ಕಾಲಾಹಾಂಡಿಯ ನಿವಾಸಿ ದಾನಾ ಮಾಂಝಿ ತನ್ನ ಪತ್ನಿ ‘ಅಮಂಗ’ಳ ಚಿಕಿತ್ಸೆಗೆಂದು 60 ಕಿಮಿ ದೂರದ ಭವಾನಿ ಪಟ್ನಾ ಸರಕಾರಿ ಆಸ್ಪತ್ರೆಗೆ ತಲುಪಿದ. 24 ಅಗಸ್ಟ್ 2016 ಅಮಂಗ ತೀರಿಕೊಂಡಳು. ಹಣವಿಲ್ಲದ್ದರಿಂದ ದಾನಾನಿಂದ ಆಂಬುಲನ್ಸ್ ಹೊಂದಿಸಲು ಸಾಧ್ಯವಾಗಲಿಲ್ಲ. ಆತ ಚಾದರ್‍ನಲ್ಲಿ ಅವಳ ಶವವನ್ನು ಸುತ್ತಿಕೊಂಡು ಹೆಗಲ ಮೇಲೆ ಹೊತ್ತು ಕಾಲ್ನಡಿಗೆಯಿಂದ ಊರಿಗೆ ಹೊರಟ. ಅವನ ಹಿಂದೆ ಹನ್ನೆರಡು ವರ್ಷದ ಮಗಳ ಕಾಲೆಳೆಯುತ್ತ ಹೆಜ್ಜೆಹಾಕುತ್ತಿದ್ದಳು. 12 ಕಿಮಿಯ ನಡಿಗೆಯ ನಂತರ ಯಾರೋ ದಯಾಳು ಆಂಬುಲನ್ಸ್ ವ್ಯವಸ್ಥೆ ಮಾಡಿಸಿದರು)
ಹೊಳೆ
ಈ ಹೊಳೆ ಹೇಗೆ ಕಿಲಿಕಿಲಿಸುತ್ತದೆ
ಹರಿಯುತ್ತಿದೆ
ಯಾವ ಋಣವನ್ನೂ ಉಳಿಸದೇ
ಗೆರೆಗಳ ಬರೆಯದೇ ಅಡ್ಡಡ್ಡಕ್ಕೆ
ಹಾಯದೇ
ಬಳುಕಿಯೂ ಬಿರುಕಿರದ ಚಲನೆಯಲ್ಲಿ
ಯಾಕೆ ಅಲೆಯುತ್ತಿದ್ದೇನೆ
ನೋವಿನ ಖಾತೆ- ಕಿರ್ದಿಗಳ
ಚೂರೂ ಬಿಡದೇ ಎದೆಯಲ್ಲೇ
ಉಳಿಸಿ
ಚೌಕಟ್ಟುಗಳ ಕಟ್ಟಿ ಗಂಟಿಕ್ಕಿ
ಬಿಟ್ಟುಕೊಡದೇ ಗುಟ್ಟ ಬಿಚ್ಚದೇ
ಬಿಗಿದ ಬಿಕ್ಕುಗಳಲ್ಲಿ
ಕದ ತೆರೆಯದೇ
ಅಲೆಗಳಿಗೆ
ಅವಕಾಶಕ್ಕೆ
ಕಂಡ ಕಾಣದ ಬೇತಾಳಗಳ ಹಿಂದೆ
ಕೊನೆ ಮೊದಲಿರದೆ ಅಲೆದು
ಕೈಗೇ ಸಿಗದ ಗೀಳುಗಳ
ಹೆಡೆಮುರಿ ಕಟ್ಟಿ
ಗಡಿ ಗುರುತುಗಳೆಲ್ಲಿ
ಗಡೀಪಾರಿಗೆ
ಮರಳಿ ಮರಳುವ ಹೊನಲಿಗೆ
••ಗೋವಿಂದ ಹೆಗಡೆ
ಅವಳ ಚುಟುಕುಗಳು.
******************
ಅವಳ ಬಿಸಿಯಪ್ಪುಗೆ;
ಬದುಕಿ ಸಾಧಿಸುವ
ಛಲವ ಹುಟ್ಟಿಸಿತು
****************
ನನ್ನವಳ ನಗುವಿನಲ್ಲಿ
ವಸಂತ,
ಅವಳು ಹೇಳಿದಂತೆ
ಕೈ ಕಟ್ಟಿಕೊಂಡು
ಕೆಲಸ ಮಾಡುವ ಗುಮಾಸ್ತ.
*********************
ನನಗೆ ಬೇಸರ ವಾದಾಗಲೆಲ್ಲ
ಅವಳು ಗುನುಗುವ
ಸಾಹಿತ್ಯ ಸೊಗಡಿನ ಇಂಪಾದ ಹಾಡು
ನನ್ನಲ್ಲಿ ಹುಚ್ಚೆಬ್ಬಿಸುತ್ತದೆ
ಅರಸಿ ಗುಳೆ ಹೋಗಲು
ಹೊಸ ನಕ್ಷತ್ರಗಳ ಜಾಡು.
************
ನನ್ನವಳೆರಡು ಕಣ್ಣುಗಳು
ನನ್ನ ನಾ ನೋಡಿಕೊಳ್ಳಲು,
ತಿದ್ದಿ ತೀಡಿಕೊಳ್ಳಲು
ಸಹಾಯ ಮಾಡುವ
ಶುಭ್ರಕನ್ನಡಿ ಕೊಳಗಳು.
*****************
ನನ್ನ ಗಾಯಗೊಳಿಸಲು
ಯಾವ ಆಯುಧವು ಬೇಕಿಲ್ಲ
ಅವಳ ಮೌನವೊಂದೇ
ಸಾಕು…
******************
ಅವಳು ಬರುವ ಮುಂಚೆ
ನನ್ನ ಕಣ್ಣಲ್ಲಿ ದಣಿವಿತ್ತು
ರೆಪ್ಪೆ ಬಡಿಯಲಾರದಷ್ಟು ನೋವಿತ್ತು.
ನಗು ಮೊಗದಿ ಅವಳು ಬಂದ ರಭಸಕೆ
ಕಣ್ಣು ದಣಿವನ್ನು ಮರೆಮಾಚಿತು
ಕಣ್ಣಪಾಪೆಯಲಿ ನೋವು ಕರಗಿ
ಹೊಸ ಮಿಂಚಾಯಿತು.
~~~ಲಕ್ಷ್ಮಿಕಾಂತ ಮಿರಜಕರ.
ಉತ್ತರ
ಇಂದು
ಸೂತಕದ ಮನೆಯಲ್ಲಿದ್ದೇವೆ.
ನಾಲಗೆಗೆ ಎಲುಬಿಲ್ಲ
ಕಲ್ಪಿಸಿಕೊಂಡದ್ದೇ ‘ಅರ್ಥ’
ರೈತನ ಮುಖದಲ್ಲಿ
ಕಾಣುತ್ತಿರುವುದು
ಸಾವಲ್ಲ
ಬದುಕಿನ ಅಸ್ಮಿತೆ,
ಜಗದ ಹಣೆಬರಹ
ತಾನೆ ಉತ್ತಿ ಬಿತ್ತಿದ
ಹತ್ತಿ, ಎಳ್ಳು, ಅಕ್ಕಿ
ಮತ್ತೆಲ್ಲವೂ..
ಈಗ, ಶವದ ಯಾತ್ರೆಗೆ
ವರ್ಷದ ನೆನಪಿನ
ತಿಥಿಯ ಅಡುಗೆಗೆ
ಅದು
ಬಿಳಿ ಟೋಪಿಯವರು
ಕೊಟ್ಟ ಪರಿಹಾರ.
ಬಂದಿಷ್ಟು ರೊಕ್ಕ
ಸಾವಿನ ಲೆಕ್ಕ
ಸಾಲದ ಚುಕ್ತ
ಕಡತದ ಹಾಳೆಗಷ್ಟೇ ಯುಕ್ತ
ಮಿಕ್ಕೆಲ್ಲ ಆಶ್ವಾಸನೆಗೆ ಪ್ರಶಸ್ತ
‘ಜೀವಕ್ಕೆ ಬೆಲೆ ಕಟ್ಟಲು ಹೊರಟಿದ್ದಾರೆ
ಹೌದಪ್ಪಾಗಳು’
ಸ್ಥಿತಿ
ತಿರುಗಿ
ಪರಿಸ್ಥಿತಿಯಾದರೆ
ಹೀಗಿರುತ್ತಾರೆಯೇ?
ಪ್ರಶ್ನೆ.
****
ಯೋಗಿಯ ಆತ್ಮ ಕವಿತೆ
ತಿಳಿಯುವುದಿಲ್ಲ
ಟಿ.ಎಂ.ಶ್ರೀಕಾಂತ
ಮುಗಿಲ ಮೇಲೊಂದು
ಮನೆಯ ಮಾಡಿ
ಜೀವಿಸಬೇಕು
ನಾನು ನೀನು!!
******
ಕಡುಗತ್ತಲ ರಾತ್ರಿಯಲಿ
ಬೆಳಕಿನ ನಕ್ಷತ್ರಗಳ ಎಣಿಸುತ್ತ
ಬದುಕಬೇಕು
ನಾನು ನೀನು!!
******
ಬಾನಿಂದ ಬಿಳುವ
ಹನಿಗಳಲಿ ನೆನೆಯುತ
ಬದುಕನ್ನೇ ಮರೆಯಬೇಕು
ನಾನು ನೀನು!!
-ಗೂಳೂರು ಚಂದ್ರು
ನಕ್ಷತ್ರದ ಬೆಳಕಲ್ಲಿ —೨
ಚಂದ್ರನಲ್ಲದೆ
ಆಕಾಶವೂ ಒಂಟಿ
ದೊರೆತ ಹೃದಯವೊಂದು
ಎಲ್ಲೆಲ್ಲೋ ಒಂಟಿ
ಆಸೆ ಆರಿ
ನಕ್ಷತ್ರ ಮರೆಯಾಯ್ತು
ನಡುಗುತ್ತಾ
ಹೊಗೆಯಾಯ್ತು ಒಂಟಿ …
ಬದುಕೆಂದರೆ ಇದೆನೆಯೇ ???
ದೇಹ ಒಂಟಿ, ಜೀವ ಒಂಟಿ
ಸಂಗಾತಿಯೊಬ್ಬ ದೊರಕಿದರೂ
ಹಾದಿಯೆರಡು ಒಂಟಿ ….
ಕತ್ತಲು ಬೆಳಕಿನಾಟದಲಿ
ಮುದುರಿಕೊಳ್ಳುತ್ತಿರುವ
ಮನೆಯೊಂದು ಒಂಟಿ….
ಶತ ಶತ ಮಾನಗಳ
ನಿರೀಕ್ಷೆಗಾಗಿ
ಬಿಟ್ಟು ಹೋಗುವೆ
ಈ ಜಗತ್ತೇ ಒಂಟಿ ….
—ಎಂ ಎಂ ಶೇಕ್ ಯಾದಗಿರಿ
ಹನಿ ನೀರು.
ಪ್ರತಿದಿನ ಹನಿ ನೀರಿನಿಂದ
ನಮ್ಮ ಆಹಾರ
ಕುಡಿಯುವ ನೀರಿಗೆ
ಕಟ್ಟುವೆವು ನಾವು ಕರ
ಇಂದಲ್ಲ ನಾಳೆಗಾದರೂ
ಉಳಿಸಿ ಮರ
ಮಳೆ ನೀರೆ ನಮಗೆ
ಸಿಕ್ಕ ವರ
ನಿಸರ್ಗ ಉಳಿಸಿದರೆ ಮಾತ್ರ
ಬದುಕುವನು ನರ
ಎಲ್ಲೆಡೆ ಕಾಡುತ್ತಿದೆ
ನೀರಿನ ಹಾಹಾಕಾರ
ಪ್ರತಿ ಜೀವರಾಶಿಗೆ
ಜೀವಸೆಲೆ ನೀರು..!
-ನಾಗಪ್ಪ.ಕೆ.ಮಾದರ
"ಹೆಣ್ಣು….ಉತ್ತರಿಸಲಾಗದ ಪ್ರಶ್ನೆ"
ಹೆಣ್ಣು ನೀನೊಂದು ಮುಗ್ಧ ಮಗು
ನೀ ನೆಟ್ಟ ಹೂ ಕರುಣೆ
ಹಚ್ಚ ಹಸಿರೇ ನಿನ್ನುಸಿರು
ಧರೆ ಬೆಳಗಿದವಳು ನೀನಾಗಿ
ಧರೆಯೊಡತಿ ಎನಿಸಿಕೊಂಡವಳು ||೧||
ನಿನ್ನ ಹೃದಯಮಂದಿರದಲ್ಲಿ
ಪ್ರೇಮದಾ ತೊಟ್ಟಿಲು
ಅದರೊಳಗೆ ನಿನ್ನ ಕನಸಿನ ಕುಡಿಯು
ಅದು ಅಳುತ್ತಿತ್ತು , ನಿನ್ನ ನೋಡಿತಕ್ಷಣ
ಮನಬಿಚ್ಚಿ ನಗುತ್ತಿತ್ತು ||೨||
ನೀ ಬರೆದ ಪದದಲ್ಲಿ ಅಕ್ಷರಗಳು ನಾವು
ತಿದ್ದಿದೆ ತೀಡಿದೆ ಪರಿಪಕ್ವಗೊಳಿಸಿದೆ
ಮನ ಮನೆಯ ಮೊದಲು ಗುರುವು ನೀನಾದೆ
ಸತ್ಯ ಸಂಸ್ಕೃತಿಯ ಪಥದಿ ನಡೆಸಿ
ಸಂಸ್ಕಾರಿಯಾಗಿಸಿದೆ ||೩||
ಕತ್ತಲೆಯ ಪಯಣದಲಿ ಬೆಳಕ ಅರಸುತ್ತಾ
ಕಷ್ಟದ ಬುತ್ತಿ ಹೊತ್ತು ನಡೆದಿರುವೆ
ಹಣ್ಣಾಗಿ ಕಾಣುವ ಜನಕೆ
ಹೆಣ್ಣೆಂದು ತೋರಿಸಲು
ಒದ್ದಾಡುತ್ತಿರುವೆ ಯಾರಿಗೇಳದೇ ||೪||
ಲೋಕದ ಡೊಂಕಿಗೆ ಬಲಿಯಾಗಿ
ಗುಡುಗಿದ ಧೀರ ಮಹಿಳೆ ನೀ
ಇತಿಹಾಸದ ಪುಟತಿರುವಿ ನೋಡು ಒಮ್ಮೆ
ಯಾಕೀ ಮೌನ , ಕಚ್ಚೆ ಕಟ್ಟಿ ನಿಂತರೆ
ಈ ಲೋಕವೇ ಊನ ||೫||
ಮುಪ್ಪಾದಾಗ ಮೂಕಹಕ್ಕಿಯಂತೆ
ನಿನ್ನ ಬಾಳ ನೀನೇ ಕಟ್ಟಿಕೊಂಡೆ
ನಿನ್ನ ಕೂಗ ಕೇಳಲು ನಿನ್ನರಸದ ಮಗನಿಲ್ಲ
ನಿನ್ನೊಲವಲಿ ಬೆಳೆದ ಮಗಳೇ ನಿನಗಾಗುವಳು
ನಿನಗೆ ನೀನೇ ಆಧಾರ ||೬||
ಕರುನಾಡಿಗೆ ಕನ್ನಡಾಂಬೆ
ಭಾರತಕ್ಕೆ ಭಾರತಾಂಬೆ ಎಂಬಿದ್ದರೂ
ಹೆಣ್ಣಿಗೆಕಿಲ್ಲ ಉಚ್ಛಸ್ಥಾನ
ಹುಟ್ಟುವ ಮಗು ಗಂಡಿರಬೇಕು ಎಂಬ ವಾದ
ಹೆಣ್ಣು ಮಾತ್ರ ಉತ್ತರಿಸಲಾಗದ ಪ್ರಶ್ನೆ?||೭||
ನೀನಿಲ್ಲದೆ ಬದುಕಲಿ ಹೇಗೆ?
ಕ್ಷಣ ಕಾಲ ನಿಂತು ಬಿಡು
ಇಲ್ಲವೇ ನೀ ಮರಳಿ ಬಂದು ಬಿಡು
ಹೇಳದೆ ನೀ ಹೀಗೆ ಹೊರಡಬಹುದೇ
ತಿರುಗಿ ಇಲ್ಲಿ ಬಂದು ಬಿಡು ಓ ಪ್ರಾಣವೇ
ಕಂಗಳು ನಿನ್ನ ಹುಡುಕುತಿವೆ
ನಿನಗಾಗಿ ಬಾಹುಗಳು ಪರಿತಪಿಸಿವೆ
ನೀನಿಲ್ಲದೆ ಹೇಗೆ ಬದುಕಲಿ
ಬದುಕಲಿ ಹೇಗೆ ನೀನಿಲ್ಲದೆ?
ಮಾಡಿದ ಆಣೆ ಪ್ರಮಾಣಗಳೆಷ್ಟು
ಮುರಿದಾವೇ ಒಂದು ಕ್ಷಣದಲ್ಲಿ ಅವಷ್ಟೂ
ನೀನಲ್ಲ ಸುಳ್ಳುಗಾರ ನಾನದನ್ನು ಅರಿವೆ
ಕೊಂಚ ಸಿಟ್ಟುಗಾರನಾಗಿ ನಟಿಸುತಿರುವೆ
ನಿನ್ನ ಮುನಿಸ ನಾ ಕಳೆವೆ
ಅದ ಬಿಟ್ಟು ಎಲ್ಲಿ ಹೋಗುವೆ
ನೀನಿಲ್ಲದೆ ಬದುಕಲಿ ಹೇಗೆ
ಹೇಗೆ ಬದುಕಲಿ ನೀನಿಲ್ಲದೆ?
ಆ ಆಗಸ ಈ ಭೂಮಿ
ನೀನಿಲ್ಲದೆ ಖಾಲಿ ಅವೆಲ್ಲಾ
ಉಸಿರಿಂದ ಸಮಯದ ಸಾಲ ನೀ ಕೇಳು ಕೊಂಚ
ಹೀಗೆ ಎದ್ದು ಹೋಗೋದಲ್ಲ
ಕರೆದೊಯ್ಯಿ ಜೊತೆಗೆ ನಿನ್ನ
ನೀ ಹೋಗುವಲ್ಲಿಗೆ ನನ್ನ
ನೀನಿಲ್ಲದೆ ಬದುಕಲಿ ಹೇಗೆ
ಹೇಗೆ ಬದುಕಲಿ ನೀನಿಲ್ಲದೆ ?
-ಸ್ನೇಹಲತಾ ಗೌನಳ್ಳಿ
ಹೀಗೋಬ್ಬಳ ಕಥೆ
ಇಲ್ಲೊಬ್ಬಳಿದ್ದಾಳೆ ಅವಳು ವೈಸ್ಯಿಯಂತೆ ಬಂಜೆಯಂತೆ…!
ಮದವೇರಿ ತಿರಗುವರ ಹಾಸಿಗಿಗೆ
ದಿನವು ಮುತ್ತೈದೆ..!
ಊರಾಳುವರಿಗೂ ಸೈ
ಊರ ಗುಡಿಸುವವರಿಗೂ ಸೈ
ತಿರುಗುವ ಪುಡಾರಿಗಳಿಗಂತು
ಆಶ್ರಯದಾತೆ…!
ತಾಸಿಗಿಷ್ಷು ದಿನಕಿಷ್ಟು ಉಬ್ಬಿದೆದೆಯ ಮೇಲೆ ಹಬ್ಬವ ಮಾಡಲು..!
ಅಸಲಿ ಹಬ್ಬವ ಕಾಣದೆ ಎಷ್ಟೋ ವಸಂತಗಳಾದವಂತೆ..!
ಕದ ತಟ್ಟುತ್ತಿದ್ದಾರೆ ಒಂದಿನದ ಬಾಳಲ್ಲಿ
ಬೆಳಕನ್ನು ಚುಮ್ಮಿಸುಲು…!
ಇವಳೆಲ್ಲವ ಬಿಚ್ಚಿ ಬಣ್ಣದ ಮಾತುಗಳನ್ನಾಡಿ ಕತ್ತಲೆ ರಾತ್ರಿಯಲ್ಲಿ ಹುಣ್ಣಿಮೆ ಕಿರಣ ತೋರಿಸಲು..!
ವಲ್ಲದ ಮನಸ್ಸಿನಿಂದ ಅತ್ಯಾಚಾರವಾಗುತ್ತಿದೆ?
ನಾನು ಪಿರ್ಯಾದಿ ಕೊಡಬೇಕು..!
ಒಂದೊತ್ತಿನ ತುತ್ತಿನ ಚೀಲಕ್ಕಾಗಿ
ಇರುಳು ಹಗಲಾಗುತ್ತೀದೆ
ಆಡಿಕೊಳ್ಳುವರ ಮುಂದೆ
ಅಂಜುವಂತಾಗಿದೆ ಬದಕು..!
ಪಿ ಕೆ…?ನವಲಗುಂದ
ಏನ್ಚಂದವಿತ್ತು ಹಳ್ಳಿ ಬದುಕು
ಆಧುನಿಕತೆ ಎಲ್ಲಾನು ನುಂಗಿಬಿಡ್ತು
ಪ್ರತಿ ಅಂಗಳವು ಸಗಣಿ ಸಾರಿಸಿ
ಚಿತ್ತಾರದ ರಂಗೋಲಿಯರಳಿಸಿ
ಹಳ್ಳಿ ಸೊಗಡಿನ ಸಂಭ್ರಮ ಮೇಳೈಸಿ
ಒತ್ತಡವನ್ನೇ ಕಂಡಿರದ ಬದುಕು ಅದು
ಪ್ರತಿ ಹಬ್ಬಕ್ಕೂ ಸಂಭ್ರಮವಿತ್ತು
ಪ್ರತಿ ಸಂಬಂಧದಲ್ಲೂ ಬಾಂಧವ್ಯವನ್ನು
ನೋವಿಗೆ ತಕ್ಷಣ ಸ್ಪಂದಿಸುವ
ನಲಿವಿಗೆಲ್ಲರೂ ಬೆರೆಯುವ ಪ್ರೀತಿಯಿತ್ತು
ಸಹಕಾರವೇ ಹಳ್ಳಿ ಜೀವನ ಮಂತ್ರ
ಸಹಬಾಳ್ವೆಯೇ ಇಲ್ಲಿ ನೆಮ್ಮದಿಯ ಸೂತ್ರ
ಒಂಟಿತನಕೆ ಜಾಗವೇ ಇಲ್ಲ
ಗಟ್ಟಿ ಅನುಬಂಧದಾನಂದದ ಬದುಕು
ಆಧುನಿಕತೆಯ ಬಿರುಗಾಳಿಗೆ
ಬಿರುಕಾದವು ಬಂಧಗಳೆಲ್ಲಾ
ಸದಾ ತೆರೆದಿದ್ದ ಬಾಗಿಲುಗಳು
ಮುಚ್ಚಿಕೊಂಡವು ದಿನವೆಲ್ಲ
ಯಾರನು ಯಾರೂ ನಂಬದೆ
ಸಂಬಂಧವೆಲ್ಲಾ ಅಳಸಿದೆ
ಹಳ್ಳಿಯ ಸೊಗಡೆಲ್ಲಾ ಹೋಗಿ
ಆಧುನಿಕತೆ ಕೊಳೆತು ನಾರುತಿದೆ
-ಅಮುಭಾವಜೀವಿ
ಪಿ.ಕೆ.ನವಲಗುಂದ..ಸರ್
ಕವಿತೆಯ ವಸ್ತು ಚೆನ್ನಾಗಿದೆ..ಕಟ್ಟಿದ ರೀತಿಯೂ ಚೆನ್ನ
ಕೊನೆಯ ಸಾಲುಗಳು ಇನ್ನೂ ಗಟ್ಟಿಯಾಗಿ ಬರಬೇಕಿತ್ತು..ಎಂಎಂ ಶೇಕ್
ಮಿರಜ್ಕರ್
ಉತ್ತಮ ಕವಿತೆಯ ಹನಿಗಳು..
ಸತ್ತುಹೋಗಿರಲಿಲ್ಲ ಭೂತ,
ಅವನ ಹೆಗಲೇರಿತ್ತು ವರ್ತಮಾನ
ಭವಿಷ್ಯ ಹರಿದಾಡುತ್ತಿತ್ತು ಕಾಲುಗಳಡಿ
ಗಾಯಗೊಂಡ ಹಾವಂತೆ
ಪ್ರಬುದ್ಧ ಮನ ಮುಟ್ಟುವ ಸಾಲುಗಳು,