ಕಾವ್ಯಧಾರೆ

ಪಂಜು ಕಾವ್ಯಧಾರೆ

ಮೌಲ್ಯ   

ನೀ ಉಸಿರಾಡುವ ಗಾಳಿ ನಾ ,
ತಂಗಾಳಿಗೆ ನೀ ಕೊಡುವ ಮೌಲ್ಯ ನನಗಿಲ್ಲ…. 

ನಡೆದಾಡುವ ಹಾದಿ ನಾ,
ಮೆಟ್ಟಿಗೆ ನೀ ನೀಡುವ ಮೌಲ್ಯ ನನಗಿಲ್ಲ ….. 

ಬಾಯಾರಿದಾಗ ಕುಡಿವ ಜಲ ನಾ,
ಅದರ ನಡುವೆ ತೇಲಾಡುವ ಮಂಜುಗಡ್ಡೆಗಿರುವ ಮೌಲ್ಯ ನನಗಿಲ್ಲ… 

ದಣಿದಾಗ ಸುಡುಬಿಸಿಲಲ್ಲಿ ಆಶ್ರಯಿಸುವ ಮರ ನಾ,
ನೆರಳಿಗಿರುವ ಮೌಲ್ಯ ನನಗಿಲ್ಲ….. 

ಭಾವನೆಗಳನ್ನು ಬೆಸೆದು ಹರವಿ  ಕೊನೆಗೂ 
ಒಂದು ಕವನವಾಗುವೆ ನಾ,
ಅದ ಬರೆಯುವ ಹಾಳೆಗಿರುವ ಮೌಲ್ಯ ನನಗಿಲ್ಲ…. 
ಗೀಚುವ ಲೇಖನಿಗಿದೆ ಬೆಲೆ,
ಪಾಪ!!ಕೈಗಳಿಗೇ ಅಸ್ತಿತ್ವವಿಲ್ಲ …… 

– ಶೀತಲ್ 

sheethal vansaraj

 

 

 

 


 

 

*ನೀನಿತ್ತ ಕಾಣಿಕೆ*

ನೀನಿತ್ತ ಈ ಕಾಣಿಕೆಯ 
ಹೊತ್ತು ಬದುಕುತಲಿರುವೆ
ಹರೆಯದ ಕಣ್ಣಿಗೆ ಕವಿದ 
ಮಬ್ಬೀಗ ಕರಗುತಲಿದೆ

ಬೇಡವೆಂದರೂ ಹಿಂದೆ ಬಂದು
ನಿತ್ಯವೂ ನೀ ಕಾಡುತಲಿದ್ದೆ
ನಿನ್ನ ಪ್ರೀತಿಯದು ನಿಜವೆಂದು 
ನಂಬಿ ನಾ ಮೋಸಹೋದೆ

ಹೆತ್ತವರ ಎಲ್ಲ ಆಶೋತ್ತರಗಳ 
ಕೊಂದು ನಾ ನಿನ್ನ ಜೊತೆ ನಡೆದೆ 
ನಿನ್ನ ಮೋಸದ ಬಲೆಗೆ ಸಿಕ್ಕಿ 
ನಾನೀಗ ಅನಾಥವಾಗಿ ಹೋದೆ 

ದುಡಿದು ಸಾಕಬೇಕಾದವನು
ಬಾಳ ಬಂಧವ ಕಡಿದು ಹೋದೆ 
ನಿನ್ನ ಕಾಣಿಕೆಯ ಕಳೆದುಕೊಳ್ಳಲಾಗದೆ 
ಬೀದಿಯಲ್ಲಿ ಬಿದ್ದು ಬದುಕು ನರಳಿದೆ 

ನನ್ನಲಿನ್ನೂ ನೀ ಬರುವೆಯೆಂಬ
ನಿರೀಕ್ಷೆ ಜೀವಂತವಾಗಿದೆ
ಹುಟ್ಟಲಿರುವ ಕಂದ ಕಾಣಿಕೆಗೆ 
ನೀನೇ ನನಗೆ  ಸ್ವಂತ ಎಂದು ಹೇಳಬೇಕಿದೆ

ಎಲ್ಲಿದ್ದರೂ ನೀ ಬಾರೋ
ಈ ಸ್ಥಿತಿಯಲಿ ನನ್ನ ನೀ ಸೇರೋ 
ನಿನ್ನಾಸರೆ ನನಗೀಗ ಬೇಕು 
ನೀನಿತ್ತ ಕಾಣಿಕೆಯ ಹೊಣೆ ನೀ ಹೊರಬೇಕು 

*ಅಮುಭಾವಜೀವಿ*

amu

 

 

 

 


 

ಓ ಇನಿಯಾˌ ನೀ ಹೇಳಬೇಕೆ ಸಾರಿಸಾರಿ
ನಿನ್ನ ಪ್ರೇಮದ ಪರಿ….!
ಮಾತಿನ ಹಂಗು ನಮಗೇಕೆ
ಕಣ್ಣಭಾಷೆ ಸಾಲದೆ?!
ನಿನ್ನ ಕಣ್ಣೋಟವೆ ಕವಿಯಾಗಿ
ಕಣ್ರಪ್ಪಗಳೆ ಗರಿಯಾಗಿ
ಪ್ರೀತಿಯೆಂಬ ಅಕ್ಷಯ ಶಾಯಿಯೊಳು ಅದ್ದಿ ಅದ್ದಿ
ಬರೆಯುತಿದೆ ನನ್ನ ಮನಪುಟದ ಮೇಲೆ
ನಿನ್ನ ಆ ದಿವ್ಶಸ್ಪರ್ಶಕೆ ನನ್ನ ಮನದ ದೇಹದೊಳು
ಉಂಟಾಗುವ ರೋಮಾಂಚನದ ಅನುಭೂತಿಯ
ವರ್ಣಿಸಲು ಸಾಧ್ಶವೇ?!
ಮುದ್ರಣˌ  ಖ್ಯಾತಿˌಸಂಪತ್ತುಗಳಾಸೆಯ 
ಛಾಯೆಯೂ ಇಲ್ಲದ ನಿನ್ನ ಆ ನಿಷ್ಕಲ್ಮಶ ಪ್ರೇಮಕವಿತೆಗೆ
ನನ್ನ ಪ್ರೀತಿಯ ಸಂಗೀತದ ಧಾರೆಯೆರೆಯುವೆˌ
ನಾನೇ ದನಿಯಾಗುವೆ…
-ಸುಹಾಸಿನಿ ಕೆ.

suhasini-kalage

 

 

 

 


 

 "ಕುರ್ಚಿಯ ಬಾಳ್ಗತೆ"
ಕುರ್ಚಿಗಳು ನಾವು ಕುರ್ಚಿಗಳು
ನಮಗಾಗಿಯೇ ನಡೆದಿವೆ ಯುದ್ಧಗಳು
ಇಲ್ಲಿಂದಲೇ ಬೀಳುವುವು ಆದೇಶಗಳು

ನಾಲ್ಕು ದಿಕ್ಕುಗಳಂತೆ ನಮ್ಮ ಕಾಲುಗಳು
ಎಲ್ಲೆಡೆಯೂ ಬೀರಿದೆ ನಮ್ಮೀ ಪ್ರಭಾವ
ಒಂದು ದಿಕ್ಕು ಮುನಿಸಿಕೊಂಡರೂ ಕುಳಿತವನಿಗಿಲ್ಲ ಉಳಿಗಾಲ

ಹೊರುವೆವು ಗೌರವದ ಭಾರ
ಆಗಾಗ ಎರುಪೇರಾಗುವುದು ತೂಕ
ಒಡನೇ ಕುಕ್ಕರಿಸುವುದು ಮಣ ಭಾರ

ಅರ್ಹರು ಒಲಿಸಿಕೊಳ್ಳುವರೆನ್ನ
ಲಂಪಟರು ಕೊಂಡುಕೊಳ್ಳುವರು ನನ್ನ
ನನ್ನೀ ಗೋಳು ಕೇಳುವವರಾರು

ನನಗಾಗಿ ಬಡಿದಾಡುತ್ತಿದ್ದಾರೆ 
ನಾನಾಗಿರುವೆ ಇಲ್ಲಿ ಬಡಪಾಯಿ
ಹುಟ್ಟಲಾರೆ ಇನ್ನೊಮ್ಮೆ ಕುರ್ಚಿಯಾಗಿ
-ಚನ್ನಬಸಪ್ಪ ಶ ಉಪ್ಪಿನ


ಅಗ್ನಿಸಖನೇ, ಬಾ ಇಲ್ಲಿ ಬೀಸು ಒಮ್ಮೆ 
ಚಂದ್ರಮುಖಿಯೇ, ಇಲ್ಲಿ ನೋಡು ಒಮ್ಮೆ 

ಹಗಲು ರಾತ್ರಿಗಳ ರವಿ-ಚಂದ್ರರ ಸೌರಭನರ್ತನ 
ಸೃಷ್ಟಿ ವರ್ಣಿಸಲಾಗದ ಮಂದಾರಕೀರ್ತನ 

ನೋಡು, ಪೂರ್ಣಚಂದಿರನ ನಗುಮೊಗ 
ಮಾಮರವು ಸೆಳೆಯುತಿದೆ ಸುರಿಯಲು ಒಲವ-ಮೇಘ 

ಅಗ್ನಿಸಖನೇ, ಬೀಸು ತಂಪಾಗಿ 
ಕೋಗಿಲೆಯೇ, ಹಾಡು ಇಂಪಾಗಿ

ಅನುದಿನವು ನಡೆಯುತಿಹುದು ಅಂತರಂಗ ನಾಟಕ 
ನಿನ್ನ ಅಭಿನಯಕ್ಕಾಗಿ ತಾಳಿಹೆನು ಕೌತುಕ 

ಕಡಲತೀರದಿ ಕೂತು ಪರಿಶೀಲಿಸೋಣ ಬಾ ಅಲೆಗಳ 
ಹಾಗೆ ಇಳಿಸಂಜೆ ಮರಳಿಗೊರಗಿ ಎಣೆಸೋಣ ನಕ್ಷತ್ರಗಳ 

ತೂಗುಮಂಚದಿ ಕೂಡು ತೂಗುವೆ ಜಗವೆ ಕಾಣುವಂತೆ 
ಒಮ್ಮೆ ತಲೆಯೆತ್ತಿ ನೋಡು ಸಿಂಗರಿಸುವೆ ದರ್ಪಣ ನಾಚುವಂತೆ 
     
ಅಗ್ನಿಸಖನೇ, ಬಾ ಇಲ್ಲಿ ಬೀಸು ಒಮ್ಮೆ 
ಚಂದ್ರಮುಖಿಯೇ ನೋಡು ಇಲ್ಲಿ ಒಮ್ಮೆ 

ಬಿ.ಎಲ್.ಆನಂದ ಆರ್ಯ

anand-arya

 

 

 

 


 

ಗಜಲ್

 ಆ ದಿನವ ನಾ ಮರೆಯಲಾರೆ….!

ಹೊಸ ವರ್ಷದ ಆ ದಿನವ ಎಂದೆಂದಿಗು ನಾ ಮರೆಯಲಾರೆ
ನಶೆಯಸಂತೆಯಲಿ ಕಂಡ ಕನಸುಗಳು ನಾ ಮರೆಯಲಾರೆ

ಎಲ್ಲೆಂದರಲ್ಲಿ ಬರಿ ಮದಿರೆಯ ಮಾತುಗಳದೆ ಸದ್ದು
ಸಾಕಿ
ನಶೆ ಏರಿದ ಶಾಹಿಯ ಹೊಸ ಭಾಷ್ಯವು ನಾ ಮರೆಯಲಾರೆ

ಹೆಚ್ಚಾಯ್ತು ಏನೋ ನಶೆ ನಿನ್ನ ನೆನಪುಗಳ ಮಳೆಯಲಿ
ಮದಿರೆಯ ಸುರಿದು ಕುಣಿದಾಡಿದ ಆ ಕ್ಷಣವು ನಾ ಮರೆಯಲಾರೆ

ಆರಂಭಕ್ಕೂ ಮುನ್ನ ಹೇಳಿಬೀಡು ನಿನ್ನ ಮನದ ಮಾತು
ಪ್ರೀಯೆ ಹೃದಯದಿ  ನೀ ಮರೆತರು,  ನಶೆಯಲು ನಾ ಮರೆಯಲಾರೆ

ವಿರಾಮ ಇಡುತಿದ್ದೇನೆ ಸಾಕಿ ಮದಿರೆ ಇಲ್ಲದ ಈ ಸಮಯ
ಹರ್ಷದಿ  ಮೈಮರೆತ ಮಹಾದೇವ ಆ ದಿನಗಳು ನಾ ಮರೆಯಲಾರೆ.
               
-ಮಹಾದೇವ ಎಸ್,ಪಾಟೀಲ.  

mahadeva-s-patil

 

 

 

 


 

(ಅ)ಸಮಾನತೆ

ಎಲ್ಲಿದೆ..? ಸಮಾನತೆ
ಎಲ್ಲೆಡೆಯೂ ಹಬ್ಬಿದೆ
ಅಸಮಾನತೆಯ ಬೇರು..!!

ಮಾನವ ನೆಟ್ಟಿರುವ ಧರ್ಮ, 
ಜಾತಿ, ಪಂಥಗಳ 
ಬೇರಿನಾಳದಿ ಸಮಾನತೆ
ಹುದುಗಿ ಕಾಣದಾಗಿದೆ…!!

ಅಲ್ಲೊಂದು ಮಾತು
ಇಲ್ಲೊಂದು ಮಾತು
ಮಾತು ಮಾತಿಗೂ ಇಲ್ಲ 
ಸಮಾನತೆಯ ನೈಜತೆ ಗುಣ…!!

ಕಲಿಯುಗದ ಸುಂದರ ನರಕದಲ್ಲಿ 
ಬಡವ, ಧನಿಕನೆಂಬುವರು
ಭೀಕ್ಷುಕ, ಅಲೆಮಾರಿಯಂಬವರು
ಹೀಗೆ ತರಹ ತರಹದ ಹೆಸರಿನಲ್ಲಿ 
ಸಮಾನತೆ ಅಸ್ತಿತ್ವವೇ ನಶಿಸುತ್ತಿದೆ..!!

ನಮ್ಮೂಳಗಿನ ತಲ್ಲಣಗಳಿಂದ
ಮೇಲು ಕೀಳೆಂಬ ಬಲೆಯಲ್ಲಿ
ನಾವಿನ್ನೂ ಸಿಲುಕಿರುವುದರಿಂದ 
ಅಸಮಾನತೆಯ ಬೇರು 
ಜಗದ ತುಂಬೆಲ್ಲವು ಹಬ್ಬಿದೆ…!!

ಸಮಾನತೆ ಉಳಿದದ್ದಾದರೂ ಎಲ್ಲಿ
ಎಲ್ಲೆಡೆಯೂ ಅಸಮಾನತೆಯನ್ನೇ
ಗೆಲ್ಲಿಸುತ್ತಿರುವಾಗ ಸಮಾನತೆಗೆಲ್ಲಿದೆ ನೆಲೆ…!!

ಶಿವು_ನಾಗಲಿಂಗಯ್ಯನಮಠ

shivu-nagalingayyanamata

 

 

 

 

 


 


ಗುರು
ಧ್ರುವ ತಾರೆಯಂತೆ ದಿಕ್ಕನ್ನು ತೋರಿ 
ಘನವಾದ ಗುರುವಾಗು ಬಾರೋ 

ಬಿದ್ದಾಗ ಎದ್ದು ಗೆದ್ದಾಗ ಬಗ್ಗಿ ಮುನ್ನುಗ್ಗುವಂತೆ ಮಾಡೋ
ಹಂಚಿದರು ಉಳಿವಂತೆ ಮಿಂಚಂತೆ 
ಹೊಳೆವಂತ ಸಧ್ಭಾವ ಈಯುಬಾರೋ
ಸೊಂಪಾಗಿ ಮೈದಳೆದ ಸಂಪಿಗೆಯ 
ಸುಮದಂಥ  ಧೀ ಶಕ್ತಿ ಕರುಣಿಸೋ
ಕುಂಟುತ್ತ ತೆವಲುತ್ತ ನಿನ್ನನ್ನೇ ಸ್ಮರಿಸುತ್ತ
ಕೈವಲ್ಯ ಹೊಂದುವಂತೆ ಮಾಡೋ
ನಂದೆಲ್ಲ ನಿಂದಾಗಿ ನಿಂದೆಲ್ಲ ನಂದಾಗಿ
ಚಂದಾಗಿ ನಂದುವಂತೆ ಮಾಡೋ.

-ರೇವಣಸಿದ್ದ ವಿ. ಎಚ್.

revanasidda-v-h

 

 

 

 


 

ನಾನ್ಯಾರು…..?

ಮನೆಗಾಗಲಿಲ್ಲ
ಮನಕ್ಕಾಗಲಿಲ್ಲ
ಸ್ನೇಹಕ್ಕೆ ಭಾರ
ಪ್ರೀತಿಗೆ ದೂರ
ನೀನು ನೀವುಗಳಲ್ಲಿ
ತಾನು ತಾವುಗಳಲ್ಲಿ
ಅವರು ಇವರುಗಳಿದ್ದರೂ
ಮೂಡಿತು ಪ್ರಶ್ನೆ ನಾನ್ಯಾರು?

ಬಂದವರು ಬಂದಾಯಿತು
ಹೋದವರು ಹೋದಾಯಿತು
ಗಳಿಕೆಯ ಉಳಿಕೆಯಂತೂ ಗರಿಕೆ
ನನ್ನೊಳಗೆ ನನ್ನದೊಂದು ಹರಿಕೆ
ಇದ್ದದ್ದು ಇಲ್ಲದಂತೆ
ಇಲ್ಲದದ್ದು ಇದ್ದಂತೆ
ಇದ್ದು ಹೋಗುವವರು ನೂರು
ಇವರ ನಡುವೆ ನಾನ್ಯಾರು?

ಹಾಗಾಗಬಹುದಿತ್ತಲ್ಲ
ಹೀಗಾಗಬಹುದಿತ್ತಲ್ಲ
ಅಲ್ಲಿ ಹಾಗಂತೆ ಇಲ್ಲಿ ಹೀಗಂತೆ
ಬರೀ ಅಂತೆ ಕಂತೆಯ ಸಂತೆ
ಭಾವನೆಗಳು ಹರಾಜು,
ಮನಸುಗಳು ಗಲೀಜು
ನಾನು ನನ್ನದೆನ್ನುವರು,
ಹಾಗಾದರೆ ನಾನ್ಯಾರು ?

ಸಕಲರಿರುವುದೇ ಸೌಭಾಗ್ಯ,
ಸಕಾಲವಿರುವುದು ವೈರಾಗ್ಯ
ಭೋಗ್ಯಕ್ಕಾಯಿತು ಮನದ ಮನೆ
ಜೀವನವಂತು ಹಾಗೆ ಸುಮ್ಮನೆ
ಇರುವುದನ್ನು ಪಕ್ಕಕ್ಕೆ ಸರಿಸಿ
ಇಲ್ಲದಿರುವುದನ್ನು ತರಿಸಿ
ಯೋಗಿ ಭೋಗಿಯಾಗಿ ರೋಗಿಯಾಗುವರು,
ನನೊಳಗೊಂದು ಪ್ರಶ್ನೆ ನಾನ್ಯಾರು ?

-ಕ.ಲ.ರಘು

Raghu Ka. La.


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published.