ಡಿಸೆಂಬರ್ ಚಳಿ
ಡಿಸೆಂಬರ್ ಬಂತೆಂದರೆ ಸಾಕು ತುಟಿಗಳು ಒಣಗಿ
ಅವಳು ಕೊಡುತ್ತೇನೆಂದ ಮುತ್ತು
ಮತ್ತೆ ಮತ್ತೆ ನೆನೆಯುವಂತೆ ಮಾಡುತ್ತಿದೆ,
ಜಗದ ಋತು ಚಕ್ರಕೆ ತಲೆ ಬಾಗಿ
ಕೊರೆಯುವ ಚಳಿಯಲಿ
ಹೆಣ್ಣಿನ ಸೌಂದರ್ಯದ ವಕ್ರತೆ
ಗಂಡಿನ ಚಂಚಲತೆಯನು ಕೆಣಕುತ್ತಿದೆ.
ನಿರಾಶೆ
ಕತ್ತಲೆಯ ಕನಸುಗಳು ಸೋತಾಗ
ಹೋಗುತಿರುವ ದಾರಿ ಮೌನ ತಳೆದಾಗ
ಬಯಕೆಗಳ ಬಾಯಾರಿಕೆಗೆ ನಗುತಲಿದೆ ಮೌನ
ಕಾಣದ ತೀರಕೆ ಹೊರಟಿದೆ ಜೀವನ
ನಿಲ್ಲದ ತವಕ,ಕೊನೆಯಿಲ್ಲದ ಏಕಾಂತ
ನಿಸ್ವಾರ್ಥಿ
ಹೇ ಹಣತೆಯ ದೀಪ ನೀನೆಷ್ಟು ನಿಸ್ವಾರ್ಥಿ
ರಾತ್ರೀಲಿ ನಿನ್ನ ಬಿಟ್ಟರೆ ಗತಿಇಲ್ಲ
ನೀನಿರದೆ ಏನೂ ಕಾಣದು
ಹಗಲಲಿ ನಿನ್ನ ಕೇಳುವರಿಲ್ಲ
ನೀ ಇದ್ದರೂ ಅದು ಕಾಣದು
ಸ್ವರೂಪ್
ಹುಡುಕಾಟದ ಚಿಟ್ಟೆ
ಸದ್ದಿಲ್ಲದೇ ಗದ್ದಲವಿಲ್ಲದೆ
ಪಟಪಟನೆ ಬಡಿಯುತ
ಬಣ್ಣ ಬಣ್ಣದ ರೆಕ್ಕೆಯ
ಹೊರಟೆ ನೀನು ಎಲ್ಲಿಗೆ?
ಭುವಿಯಿಂದ ಬಾನಿಗೆ
ಬಾನಿಂದ ಮೆಲ್ಲಗೆ
ಹಂಗಿಲ್ಲದೆ ಸುಳಿವಿಲ್ಲದೆ
ಹುಡುಕುತಿರುವೆ ಯಾರಿಗೇ ???
ಸುತ್ತ ನೋಡೇ ಕಪ್ಪು ಬಿಳಪು
ಮದ್ಯೆ ಚುಕ್ಕಿ ಪಚ್ಚೆ ಬೆಳಕು
ಹೆಜ್ಜೆ ಗೆಜ್ಜೆ ಅಚ್ಚಿಲ್ಲದೆ
ಹಾರುತಿರುವೆ ಎಲ್ಲಿಗೆ ?
ಮೈಯ್ಯ ತುಂಬಾ ಕಣ್ಣು ಬಣ್ಣ
ಸೃಷ್ಟಿಗೊಂದು ಬೊಟ್ಟಿನಂತೆ
ಜಗವ ಮರೆಸಿ ದೂರ ಅರಸಿ
ಬೀಗಿ ಸಾಗಿ ಹೊರಟ ಚೆಲುವು
ಕೇಳೋ ಆಸೆ ಎದೆಯ ಒಳಗೆ
ಪಯಣ ಎಲ್ಲಿಗೆ ?
ಕಣ್ಣಿಗೊಂದು ಬಣ್ಣ
ಜಗದಿ ನೆಲೆಯ ಅರಸಿ ದೂರ
ನೂರು ನೋಟ ನಿನ್ನ ಮೆರೆಸಿ'
ಸೃಷ್ಟಿಗೊಂದು ಬೊಟ್ಟಿನಂತೆ
ಸಾಟಿ ಯಾರು ನನ್ನ ಚೆಂದಕೆ
ಎಂದು ಬಿಗೀ ಸಾಗುತಿರುವೆ ಎಲ್ಲಿಗೆ ?
-ಉಷಾಲತಾ
ಅತಂತ್ರ
ಎಷ್ಟು ಕಲಕಿದರೂ
ನೀರಲ್ಲಿ ಬೆರೆಯದ
ಎಣ್ಣೆಯಂತಾಗುತ್ತಿದ್ದೇನೆ…..
ಈ ಶಹರದ
ರಂಗು ರಂಗಿನಲ್ಲಿ
ಕಪ್ಪು ಬಿಳುಪು
ಹುಡುಕುತ್ತೇನೆ..!
ಒಂದು ಕೆಸರ ಕಮಲ,
ಮತ್ತೊಂದು ಕವಿತೆ,
ಸಂಜೆ ಮುಳುಗುವ
ಕೆಂಪು ನೇಸರ,
ಮೆಲ್ಲನೆ ದಡವ ಚುಂಬಿಸುವ
ಅಲೆಗಳು
ಇನ್ನೇನೇನನ್ನೋ ಹುಡುಕುತ್ತಲೇ
ಇದ್ದೇನೆ..!!
ಇವರೆಲ್ಲಾ ನಗುತ್ತಾರೆ,
ನನ್ನವಳು ಮೆಲ್ಲನೆ
ಕೈ ಹಿಡಿಯುತ್ತಾಳೆ
ಹಸಿವ ಮರೆತ
ನನ್ನೆಚ್ಚರಿಸಲು..
ಪ್ಲಾಸ್ಟಿಕ್ ತಟ್ಟೆಯ
ಊಟದಲ್ಲೂ
ಮತ್ತದೇ ಹುಡುಕಾಟ
ನನ್ನಮ್ಮಮಾಡಿದ
ಮೀನು ಪಳದಿಗಾಗಿ..!
ಎದ್ದು ನಡೆಯುತ್ತೇನೆ
ಉಣ್ಣಲಾರದ ಸ್ಥಿತಿಯಲ್ಲಿ..,
ನನ್ನವಳೂ ಹಿಂಬಾಲಿಸುತ್ತಾಳೆ
ಕೈ ತೊಳೆದುಕೊಳ್ಳುತ್ತಾ
ನನ್ನ ನೆರಳಂತೆಯೇ…..!!
— ಸಚಿನ್ ನಾಯ್ಕ , ಅಂಕೋಲಾ.
ಊರು ಬದಲಾಗಿದೆ ಗೆಳತಿ
ಊರು ಬದಲಾಗಿದೆ ಗೆಳತಿ
ಸೇತುವೆ ಕೆಳಗಡೆ ಕಣ್ಣೀರು
ವಾರ ವೃತಗಳಿಗೆ ಮೀನು ಬಿಟ್ಟ ಜನ
ನಡುಮನೆಯಲ್ಲಿ ಇಟ್ಟ ಅಕ್ವೇರಿಯಮ್
ಅಂಗಳಕ್ಕೆ ಹಾಕಿದ ಕಾಂಕ್ರೀಟು
ಬೊಂಬಾಯಿಯ ಅಣ್ಣ ತಂದ ವಾಸ್ತು ಗಿಡ
ಜಗಳಕ್ಕೆ ಬೆಳೆದ ಕಾಂಪೌಂಡು
ಜಾತ್ರೆಯಲ್ಲಿ ಕೊಂಡ ನಗುವ ಬುಧ್ಧ
ಅಜ್ಜಿ ಜೊತೆ ಸತ್ತ ಶೋಭಾನೆ ಹಾಡು
ಮದರಂಗಿ ಶಾಸ್ತ್ರಕ್ಕೆ ಅಮಲಿನ ಕುಣಿತ
ಮದುವೆ ಮನೆಯಲ್ಲಿ ತಟ್ಟೆ ಹಿಡಿದು ನಿಂತ ಬಿಕ್ಷುಕರು
ಮಾರಾಟವಾಗದೇ ಉಳಿದ ಬಾಳೆ ಎಲೆ
ಜೋಡು ರಸ್ತೆಯ ಹಣೆಗೆ ಶ್ರದ್ಧಾಂಜಲಿ ಫ್ಲೆಕ್ಸು
ಸತ್ತವರ ಮನೆಯಲ್ಲಿ RIP ಗಳ ರಾಶಿ
ಹೌದು ಊರು ಬದಲಾಗಿದೆ ಗೆಳತಿ
-ಭಾಸ್ಕರ್ ಬಂಗೇರ
ಮರೀಚಿಕೆ
ಬೊಗಸೆಯೊಳಗೆ ಹಿಡಿದಿಟ್ಟ
ನೀರ ಚ೦ದಿರ ಚಪ್ಪಟೆಯಾಗಿ
ಹರಿದು ಹೋದ ಸೋರುತ್ತಿರುವ
ನೆನಪುಗಳ ಹೆಕ್ಕಿ – ಹೆಕ್ಕಿ
ಪಡುವಣದ ಸುಳಿಗಾಳಿ
ಓಡುವ ಕತ್ತಲೂರಿನಲ್ಲಿ ಮರೆಯಾಗುತ್ತಿದೆ
ನಿನ್ನ ನೆರಳ ಹೊನಲು
ಕೆ೦ಡ ಹೊಳೆಯುವ ಕೆ೦ಪು
ಕ೦ಬಿ ಕಿಟಕಿಯ ಹಿ೦ದೆ
ನಾನು ತೊಳೆದ ಕೆ೦ಡ
ತುಸು ದೂರ ನಿ೦ತಿದ್ದೆನೆ
ಕೊರೆಯ ಪ್ರೇಮ ಚಳಿಯ ಜೋತೆಗೆ
ಅ೦ದೆ೦ದೋ ಓದಿದ ಕವನ
ಬಿಚ್ಚಿಟ್ಟ ಬೊಗಸೆಯೊಳಗೆ
ಹಲವು ಮೂರು ನಾಕಾಗಿವೆ
ಅವ್ವನ ಸಾವು, ಅನಾಥನಾದ ಅಳಿವು
ಅಳಿದುಳಿದ ನೆನಪುಗಳ ಕಾವು
ಮೇಲಿಗ…
ವಿರಹಗಳ ಬೇಗೆಲಿ೦ದು
ಬಾಡುವ ಅಳಿವು
ನಮ್ಮೂರ ಸುಳಿಯೊಳಗೆ
ಕದ್ದು ತಿ೦ದ ಎಟುಗಳಿಗೆ
ತಾತ್ಸಾರ, ದಿಕ್ಕಾರದ ಧೋರಗಳಿಗೆ
ಎದೆಗೊಟ್ಟು ನಿ೦ತು ಬ೦ದಿದ್ದೆನೆ
ಇ೦ದೆಕೋ.
ಕಾಣದ ಕತ್ತಲೆಯ ತು೦ಬ
ಮರೀಚಿಕೆಯ ನೆರಳ ಹಿಡಿದ ಓಟಕ್ಕೆ
ಸಾವು ಒತ್ತರಿಸಿ ದುತ್ತನೇ ಎದುರಾಗಿದೆ
-ಶಿವಕುಮಾರ್ ಸಿ.
ಮರಳ ಮೇಲೆ ಬರೆದರಲೆಯು ತೊಳೆವುದಿಲ್ಲವೇನು?
ಎಂದೆನಿಸಿ ಅಲೆಯ ಮೇಲೇ ಬರೆಯಲ್ಹೊರಟೆ ನಾನು
ಬರೆದು-ಮುಳುಗಿ, ಬರೆದು-ಮುಳುಗಿ
ಕಳೆದ್ಹೋದೆ ಕಳೆದ್ಹೋದೆ!
ಬದುಕಬೇಕು, ಬರೆಯಬೇಕು ಎಂದೀಜಿದೆನಲ್ಲ
ಮೀನಿಗೋ ನಾನೆ ಹಸಿವು ನನ್ನ ತಿಂದಿತಲ್ಲ!
ಉಗುಳಿ-ನುಂಗಿ, ಉಗುಳಿ-ನುಂಗಿ
ಕಳೆದ್ಹೋದೆ ಕಳೆದ್ಹೋದೆ!
ಮೀನೀಗ ಹಾರುತಿದೆ ಕಡಲ್ಹಕ್ಕಿಯ ಕಾಲಡಿಗೆ!
ಸತ್ತ ಮೀನ ಬಾಯ್ತೆರೆದು ಬಂದೆನಾಗ ಹೊರಗೆ
ಕಡಲೋ-ನೆಲವೋ, ಕಡಲೋ-ನೆಲವೋ
ಕಳೆದ್ಹೋದೆ ಕಳೆದ್ಹೋದೆ!
ಆಕಾಶದಿ ತೇಲುತಿರಲು, ತಲೆಯು ಕೆಳಗೆ ಕಾಲು ಮೇಲೆ
ಪ್ರಾಣವೂ ಪಕ್ಷಿಯಂತೆ ಹಾರುತಿಹುದು ನನ್ನಲ್ಲೇ
ಸಾವೋ-ಬದುಕೋ, ಸಾವೋ-ಬದುಕೋ
ಕಳೆದ್ಹೋದೆ ಕಳೆದ್ಹೋದೆ!
ಹುಲ್ಲಿನಾ ಕುತ್ತರಿಯದು, ಅದರ ಮೇಲೆ ನನ್ನ ದೇಹ
ನೀರು ಬೇಕು ಬಾಯಾರಿದೆ, ಉದರ ಮತ್ತು ಜಿಹ್ವ
ಓಟ-ನಡಿಗೆ, ಓಟ-ನಡಿಗೆ
ಕಳೆದ್ಹೋದೆ ಕಳೆದ್ಹೋದೆ!
ತೆರೆದ ಬಾವಿ ಪಕ್ಕದಲ್ಲಿ ನೀರು ಕುಡಿದು ಕುಳಿತೆ
ಅಲ್ಲೇ ಇದ್ದ ಮಣ್ಣ ಮೇಲೆ ಬರೆದೆನು ಈ ಕವಿತೆ
ಸರಿಯೋ-ತಪ್ಪೋ, ಸರಿಯೋ-ತಪ್ಪೋ
ಕಳೆದ್ಹೋದೆ ಕಳೆದ್ಹೋದೆ!
– ಯೋಚಿತ (ಪ್ರಜ್ವಲ್ ಕುಮಾರ್)
ಚುಟುಕಗಳು
೧. ಗೆದ್ದಲೆಂಜಲಿನಲಿ ಮಿಂದು ವಲ್ಮೀಕ ಪುಟ್ಟಿಹುದು
ವಲ್ಮೀಕದೊಳು ಗೆದ್ದಲ ಸಾಮ್ರಾಜ್ಯ ಪುಟ್ಟಿ
ಯಾರುಯಾರಿಂದಿಹರೋ ನಾನರಿಯೆ ನೀನರಿಯೆ
ದೈವಾಟವನರಿವೆ ಬಂದು ನಾನ್ ಹುಟ್ಟಿ ಹುಟ್ಟಿ
೨. ಇಲಿಬಿಲದಬಾಯ್ಕಾಣು ಸರ್ಪಕಿಂತ್ಹಿರಿದಿಹುದು
ಹರಿಣಗಳ ಕಾಡಲೇ ಹುಲಿಯ ಜೀವ
ಸ್ವರ್ಗದಾಪೇಕ್ಷೆ ಪ್ರಾಣಿಗಳೆಲ್ಲಕಿಹುದು
ನರಕದೋಳ್ ವಾಸಿಪನವ ಧರ್ಮ ದೇವ
೩. ನನ್ನವರು-ಪರರೆಂದು ಗುರುತೆಲ್ಲರಿಟ್ಟಿಹರು
ನೋಡಿ ಮುಖ-ಕಣ್-ಮೂಗು-ಗಲ್ಲ
ಮಡಿಕೆಯೋಳ್ ಅಸ್ತಿ-ಅವಶೇಷಗಳ್ ಅದು ಕಾಂಬು
ಸುಡುವ ಚಂಡಾಲನು ಮಾತ್ರ ಅದ ಗುರುತು ಬಲ್ಲ
೪. ಅಗೆದು ಉಗಿಪುದು ಗಾಣ ಕಬ್ಬಿನ ಜಲ್ಲೆಯನು
ಬರಿ ಅಟ್ಟೆ ಬೀಳುವುದು ಧರೆಗೆ ಉರುಳಿ
ಪೇಳುವರಾರಿಹರಿಲ್ಲಿ ಕಬ್ಬಿನಾ ರುಚಿಯನ್ನು
ಕಾಲ ಕಲ್ ಹೊರಟಿಪುದು ಉರುಳಿ ಉರುಳಿ
೫. ತಿಥಿಯೂಟ ಮೂಸಿದೊಡೆ ತಿರುಕನಿಗೆ ಸ್ವರ್ಗವದೇ
ತಮಟೆಯಾ ಸದ್ದಹುದು ಅದು ಚಂಡಾಲಗೇ
ಶವನಿಗೂ ಕಾಂಬು ಪರ ಹೊಟ್ಟೆ ತುಂಬುವ ಗುಣವಿಹುದು
ಚಪಲ ಬದುಕಿದವರಿಗದಿಹುದು ಆಡಿಸುವರು ಬರಿ ನಾಲಗೆ
-ಅನೂಪ್ ಗಣೇಶ್
*****
"ನಿರಾಶೆ" ಕವನದಲ್ಲಿ ಪದ ಬಳಕೆ ತುಂಬಾ ಇಷ್ಟವಾಯಿತು.
Dhanyavadagalu 🙂
"ಹುಡುಕಾಟದ ಚಿಟ್ಟೆ" ಕವನದಲ್ಲಿ ಚಿಟ್ಟೆ ಒಂದು ಹೂವಿಂದ ಇನ್ನೊಂದು ಹೂವಿಗೆ ಹೋಗುವ ಹಾಗೆ ನಾನು ನಿಮ್ಮ ಕವನದಲ್ಲಿ ಒಂದು ಪದ್ಯದಿಂದ ಇನ್ನೊಂದು ಪದ್ಯ ಓದುತ ಹೋದೆ, ಸುಂದರವಾಗಿತ್ತು 🙂
[…] ಕಳೆದ್ಹೋದೆ ಕಳೆದ್ಹೋದೆ! June 16, 2014October 21, 2014Prajwal Kumar Leave a comment ಜೂನ್ ೧೬ರ ಪಂಜು ಅಂತರ್ಜಾಲ ಪತ್ರಿಕೆಯಲ್ಲಿ https://www.panjumagazine.com/?p=7682 […]
[…] ಕಳೆದ್ಹೋದೆ ಕಳೆದ್ಹೋದೆ! Posted on June 16, 2014March 9, 2016 by admin ಜೂನ್ ೧೬ರ ಪಂಜು ಅಂತರ್ಜಾಲ ಪತ್ರಿಕೆಯಲ್ಲಿ https://www.panjumagazine.com/?p=7682 […]
[…] ಕಳೆದ್ಹೋದೆ ಕಳೆದ್ಹೋದೆ! Posted by ಪ್ರಜ್ವಲ್ ಕುಮಾರ್ | Monday, 16 June, 2014 | No Comments ಜೂನ್ ೧೬ರ ಪಂಜು ಅಂತರ್ಜಾಲ ಪತ್ರಿಕೆಯಲ್ಲಿ https://www.panjumagazine.com/?p=7682 […]