ಕಂಗೊಳಿಸೋ ಕಣ್ಣಲಿ ಮೂಡಿಸುದೆ ಮುಗುಳ್ನಗೆಯನ್ನ
ಬಂಧಿಯಾಗಲು ಕಾಯುತಿರುವೆ ಚಿನ್ನ ನನ್ನ ಚಿನ್ನ
ಕಣ್ಣಂಚಿನ ನೋಟದಲಿ ಸೆರೆ ಹಿಡಿರುವೆ ನನ್ನ
ಮನ ಮೋಹಿಸುವ ನಿನ್ನ ಪಿಸು ಮಾತುಗಳೆ ಚೆನ್ನ
ನೀ ತಿರುಗೆ ನೋಡುವ ಆ ನೋಟ ಬಹು ರೋಮಾಂಚನ
ಕಂಗೊಳಿಸೋ ಕಣ್ಣಲಿ ಮೂಡಿಸುದೆ ಮುಗುಳ್ನಗೆಯನ್ನ
ಸದಾ ನಿನ್ನ ನೋಡುವ ಆಸೆ ಮುಚ್ಚದೆ ಕಣ್ಣ ರೆಪ್ಪೆಯನ್ನ
ಸವಿಯಲು ಕಾತುರ ನಿನ್ನ ತುಟಿ ಅಂಚಿನ ಸಿಹಿ ಜೇನನ್ನ
ಸೆರೆ ಹಿಡಿದು ಬಂಧಿಸು ನಿನ್ನ ಮನಸಲಿ ನನ್ನ
ಬಂಧಿಯಾಗಲು ಕಾಯುತಿರುವೆ ಚಿನ್ನ ನನ್ನ ಚಿನ್ನ
ಬತ್ತಿದ ನನ್ನ ಎದೆಯೊಳು ಬಿಕ್ಕಳಿಸುತ್ತಿರುವೆ ಮನ
ಸಾವಿರ ಕೋಟಿ ನಕ್ಷತ್ರಗಳಿದ್ದರು ಗಗನ
ಚಂದ್ರನಿಲ್ಲದ ರಾತ್ರಿಯ ಸೊಬಗು ಚಂದನ?
ಕಂಗೊಳಿಸೋ ಕಣ್ಣಲಿ ಮೂಡಿಸುದೆ ಮುಗುಳ್ನಗೆಯನ್ನ
ಬಂಧಿಯಾಗಲು ಕಾಯುತಿರುವೆ ಚಿನ್ನ ನನ್ನ ಚಿನ್ನ
*****
ಸೆರೆಸಿಕ್ಕಿ ಮನ ಬಿಚ್ಚಿ ಬರೆದೆ ಈ ಕವನ
ನಾ ನಿನ್ನ ಕಂಡಾಗಲೇ ಹೃದಯ ಜಾರಿದ್ದು
ಮನಸು ಮಗುವಾಗಿದ್ದು, ನಿನ್ನನ್ನೆ ಬೇಡಿದ್ದು
ಕಣ್ಣಲ್ಲಿ ಕಣ್ಣಿಟ್ಟು ಕಂಗೊಳಿಸೋ ಆ ನಯನಗಳು
ಏನೋ ಪಡೆಯಲು ಹಂಬಲಿಸೋ ಆ ತುಟಿಗಳು
ಮೃದು ಭಾಷೆಯಲ್ಲಿ ಸನೀಹ ಕರೆಯುವ ಕೈ ಬೆರೆಳುಗಳು
ಮಾತಿಗೆ ಮಾತು, ಕೈಗೆ ಕೈ, ನೋಟಕೆ ನೋಟ,
ಉಸಿರಿಗೆ ಉಸಿರು, ಹೆಜ್ಜೆಗೆ ಹೆಜ್ಜೆ ಬೆರೆತ ನೆನಪುಗಳು
ಮನದಲಿ ಮನೆ ಮಾಡಿ, ಮುಗುಳ್ನಗೆ ಮೂಡಿಸಿದೆ ಮೊಗದಲಿ
ನಿನ್ನ ನೆನಪನ್ನು ಕಾಗದದ ಮೇಲೆ ಚೆಲ್ಲ ಹೊರಟಲು
ಅಕ್ಷರಗಳು ಪದವಾಗದೆ ಪ್ರತಿಭಟಿಸಿದ್ದು
ನಿನ್ನ ನೆನೆದು ಮರುಗಿದಾಗಲೇ
ನನ್ನೆದೆ ನಿನ್ನ ಹೆಗಲು ಬಯಸಿದ್ದು
ಸನೀಹದ ಸೆಳೆತಕೆ ಸೋತಿದೆ ಮನ
ಮೂಡುತಿದೆ ಕಂಗೊಳಿಸೋ ಹೊಸ ಬಂಧನ
ತಳಮಳದ ಎದೆಬಡಿತಕೆ ಬಂಧಿಯಾದೆ ನಾ
ಬಿಸಿ ಉಸಿರಲಿ ಪಿಸುಗುಡುವ ತುಸು ಮಾತಿಗೆ ನಾ
ಸೆರೆಸಿಕ್ಕಿ ಮನ ಬಿಚ್ಚಿ ಬರೆದೆ ಈ ಕವನ
*****
-ರಂಜಿತ್ ಪಿ. ಕೋಲ್ಕರ್
"ಗೋರಿಯ ನಿಟ್ಟುಸಿರು"
ಕಾಡುತ್ತಿರುವ ನೆನಪುಗಳಿಗೆ ತುಸು ವಿರಾಮ ಬೇಕಿದೆ..!
ಬರಿ ನಿನ್ನ ಭ್ರಾಂತಿಯಲ್ಲಿ ಜೀವನ ಕುಗ್ಗಿಹೋಗುತ್ತಿದೆ..!
ಕತ್ತಲೆ ಕೋಣೆಯಲ್ಲಿ ಬಿಕ್ಕಿ ಅತ್ತರು ಕೇಳುವರು ಇಲ್ಲದಂತಾಗಿದೆ..!
ಕುಡಿ ಆಡಿದ ಗಳಿಗೆ ನೆನೆದು ಹೃದಯ ಮರು ಹುಟ್ಟು ಪಡೆಯುತ್ತಲೆ ಸಾಯುತ್ತಿದೆ..!
ನಮ್ಮಿಬ್ಬರ ಪ್ರೀತಿಯ ಜ್ವಾಲಾಮುಖಿಯಲ್ಲಿ
ಧರೆ ಹತ್ತಿ ಉರಿಯುತ್ತಿದೆ..!
ಮೌನದರಮನೆಯ ರಾಣಿಯಾಗಿ ನೋವುನ್ನು ಉಡುಗೊರೆಯನ್ನಾಗಿ ನೀಡಿದೆ..!
ಅರಿಯದೆ ಮಾಡಿದ ತಪ್ಪಿಗೆ ಪ್ರತಿ ಕ್ಷಣವು ಉಸಿರು ನಿಂತಂತೆ ಆಗುತ್ತಿದೆ..!
ನಿನ್ನ ನೆನಪು ನಿಶ್ಶಬ್ದ ಗೋರಿಯಂತಾಗಿ ನನ್ನೆದೆಯಲ್ಲಿ ಕುಳಿತಿದೆ..!
ಪಿ ಕೆ…? ನವಲಗುಂದ
ಇಲ್ಲೊಂದು ಬಯಲಾಟ.ನಿರ್ದರಿತವಾಗಿದೆ!
ನಿಗದಿಯಾಗಿತ್ತು.. ನಗದು ಸಹ. ಜೊತೆಗೆ
'ವೇಷಗಳ ಹಂಚಿಕೆ': ಭ್ರಷ್ಟರದ್ದೇ ಹಿಮ್ಮೇಳ!
ನಿಮ್ಮಗಳದ್ದು ಮುಮ್ಮೇಳ!!
ಇರಲಿ ಬಿಡಿ ನನಗೊಂದು ಕೋಡಂಗಿ!
ವಿಷಯವೊಂದು ನೆನಪಿರಲಿ
ಹಿಮ್ಮೇಳಿಗರು ಕುಣಿಸಿದಂತೆ ಕುಣಿಯಬೇಕು
ಅದು ಕಡ್ಡಾಯ! ಇಲ್ಲಾ ರಂಗಸ್ಥಳ ಬಿಟ್ಟು
ಹೊರನೆಡೆಯಲೇಬೇಕು!ಇದು ಅನಿವಾರ್ಯ
"ಪ್ರಸಂಗ"ವು ಅವರದ್ದೇ!
ಅದೇನು ಮಹ:ಸಂವಿಧಾನವೇ ಅವರದ್ದಾಗಿರುವಾಗ!
ಕಾಲಮಿತಿಯಲ್ಲವೀ ಬಯಲಾಟ.
ಅವರು ನಿಲ್ಲಿಸಿದಂತೆ..ನೀವು ನಿಲ್ಲಬೇಕು
ಆಡಿಸಿದಂತೆಯೇ ಆಡಬೇಕು, ಕುಣಿಯಬೇಕು.
ಕುಪ್ಪಳಿಸಬೇಕು. ತಲೆತಿರುಗಿಬಿದ್ದು ಸಾಯಲೇಬೇಕು
ಅವರ್ಯಾರು "ಜವಾಬ್ದಾರರಲ್ಲಾ" ..
ನಾನು ಸಹ !! ನಾನು? ಕೋಡಂಗಿಯಷ್ಟೆ!
-ರೋಹಿತ್ ಶೆಟ್ಟಿ ಮೇಲಾರಿಕಲ್ಲ್
೧.ಹೆಜ್ಜೆಗಳಿಗೆ ಒಂದು ಮನವಿ
ಒಂದು ಕೇಂದ್ರ ಬಿಂದು
ಅದರ ಸುತ್ತಲೂ ವೃತ್ತಗಳು
ಆ ವೃತ್ತಗಳ ಸುತ್ತುವ ಪಾದಗಳು
ಹತ್ತಿರ ಬರುತ್ತವೆ ಸುತ್ತಾಡಿ ಸುತ್ತಾಡಿ
ಸುಸ್ತಾಗಿ ಸಾಕಾಗಿ ಹೊರಟು ಹೋಗುತ್ತವೆ.
ವೃತ್ತವನು ಸುತ್ತಿದರೆ ಪಯಣ ಮುಗಿಯುವುದಿಲ್ಲ
ಅದೇ ಜಾಗದಲ್ಲಿ ಸುತ್ತುತ್ತಲೇ ಗಿರಕಿ ಹೊಡೆಯುವಂತಾಗಿ
ಬೇಸರ ಬರುವುದಂತೂ ನಿಜ
ಈ ಲೋಕ ಬಹು ವಿಶಾಲ, ಉದ್ದಗಲ, ವಿಸ್ತಾರ
ಪಾದಗಳಲ್ಲಿ ಶಕ್ತಿ ಇರುವವರೆಗೂ ನಡೆಯಬಹುದು
ಹೆಜ್ಜೆ ಇಟ್ಟರೆ ಹಾದಿ ಆದೀತು ಅದೇ ರೂಢಿ
ಒಬ್ಬರ ಹಿಂದೊಬ್ಬರು ಬಂದು ದಾರಿ ಸವೆದು
ಹೊಸ ಹಾದಿಯ ಹುಡುಕಿಕೊಂಡು
ನೂತನ ಜಗತ್ತುಗಳನ್ನು ಅನ್ವೇಷಿಸುತ್ತ
ಲೋಕ ಲೋಕಾಂತರಗಳನ್ನು ದರ್ಶಿಸುತ್ತಾ
ಅನಂತದೆಡೆಗೆ ಮುಖ ಮಾಡಿ
ಕೊನೆಯಿರದ ಪಯಣಕ್ಕೆ
ಲಗ್ಗೆ ಹಾಕೋಣ
ಬನ್ನಿ
ಅದಕ್ಕೀಗಲೆ ಮನಸ್ಸು ಮಾಡೋಣ.
೨.ಒಂದು ಮನಸಿನ ಹಲವು ಭಾವ
ಮೌನದಲಿ ಮಾತುಗಳು ಮೂಕವಾಗುವುದಿಲ್ಲ
ಭಾವಗಳು ಮೂಕವಾದರೆ ಮಾತ್ರ ಮಾತು ಮೂಕ
ಶಬ್ದದಲಿ ನಿಶ್ಯಬ್ಧ ಮೂಲೆಯಲ್ಲಡಗುವುದು
ನಿಶ್ಯಬ್ಧದಲಿ ಶಬ್ದ ಎಂತು ಕೇಳೀತು
ಎಲ್ಲೊ ದೂರದಿ ಹಕ್ಕಿ ಹಾಡು ಹಾಡುತಲಿಹುದು
ಹರುಷದಲೊ ದುಃಖದಲೊ ನಮಗೆಂತು ತಿಳಿಯುವುದು
ಅಲ್ಲಿ ದೂರದ ಮಸೀದಿಯಲಿ ಮೋಜನ್
ಧ್ಯಾನ ಸಮಯಕೆ ಜನರ ಕೂಗಿ ಎಚ್ಚರಿಸುತಿಹನು
ಪಾದ್ರಿ ಚರ್ಚಿನಲಿ ಬೈಬಲ್ಲನೋದುತಿಹ
ಗುಡಿಯೊಳಗೆ ಪೂಜಾರಿ ಮಂತ್ರ ಗುನುಗುತಿಹ
ಕಾಣದಿಹ ದೇವರನು ಎಲ್ಲ ಪೂಜಿಸುತಿಹರು
ಹೃದಯದಲಿಹ ಪ್ರೀತಿಯನು ಮರೆತು ಜನರು
ನೋಡು ನೋಡದೊ ಮೋಡ ಆಗಸದಿ ತೇಲಿಹುದು
ಮಳೆಯ ಹನಿಗಳ ಹೊತ್ತು ಓಡುತಿಹುದು
ದೈವ ನಿಯಾಮಕದಂತೆ ಬೀಳುವುದು ಇಳೆಗೆ ಮಳೆ
ಯಾರ ಅಪ್ಪಣೆಯಿರದೆ ಕೊಳೆ ತೊಳೆದು ಬೆಳೆಸುವುದು ಬೆಳೆ
ಒಮ್ಮೆ ಪ್ರೀತಿಯಲಿ ಹತ್ತಿರಾದವರೇಕೆ
ಹಗೆತನವ ಸಾಧಿಸುತ ಸರಿಯುವರು ದೂರ
ಬದಲಾಗುವವರು ಜನರೇ ಹೊರತು ಕಾಲವಲ್ಲ
ಗೋಸುಂಬೆಯೊಲು ಕ್ಷಣಕೊಮ್ಮೆ ಬಣ್ಣ ಬದಲಿಸುವುದು ಸರಿಯಲ್ಲ.
– ಮಾ.ವೆಂ.ಶ್ರೀನಾಥ
*ಜಗದ ಬದಲಾವಣೆ*
ಅದೆಷ್ಟು ಪುಟಗಳನ್ನು ಕವಿ ತುಂಬಿಸಿದ
ಹತಾಶೆ, ನೋವು, ನಲಿವುಗಳನ್ನು
ಕವಿತೆಯಾಗಿಸಿ, ಪ್ರಕಟಿಸಿದ
ಎಲ್ಲವೂ ಕಸದೊಂದಿಗೆ ವಿಲೀನವಾದವು !
ಕಸದಿಂದಲೇ ರಸ ತೆಗೆಯುವ
ಪ್ರಯತ್ನವನ್ನೂ ಮಾಡಿದ
ಪ್ರಯತ್ನದಲ್ಲಿ ಸೋತುಹೋದ
ಮತ್ತೆ ಕವಿಯ ಭಾವನೆಗಳ ಜೊತೆಗೆ
ಸಮಾಜದ ತಲ್ಲಣಗಳು ಸೇರಿಕೊಂಡವು !
ಒಂದೆಡೆ ಅತ್ಯಾಚಾರವಾಯಿತು
ಇನ್ನೂಂದೆಡೆ ದರೋಡೆಯಾಯಿತು
ಮತ್ತೊಂದೆಡೆ ಕೋಮುಗಲಭೆಯೂ
ಪದೇ ಪದೇ ನಡೆಯತ್ತಲೇ ಇತ್ತು !
ಎಲ್ಲವನ್ನು ಮೂಕ ಮನಸ್ಸು ನೋಡಿ
ಕವಿತೆಯಲ್ಲಿ ಜಾಗೃತಿ ಮೂಡಿಸುತ್ತಲೇ ಇತ್ತು
ಓದುಗನೂ ಓದಿ, ಹೊಗಳಿ ಸುಮ್ಮನೆ ಇರುತ್ತಿದ್ದ !
ಮಗದೊಮ್ಮೆ ಕವಿಯ ಭಾವ ಅಳುತ್ತಿತ್ತು
ಅದೆಷ್ಟು ಜಾಗೃತಿ ಮೂಡಿಸಿದರೂ
ಜಗದಲಿ ನಡೆಯುವುದು ನಡೆಯುತ್ತಲೇ ಇದೆ
ಯಾರು ಬದಲಾದರು ಯಾರು ಬರಲಾಗಲಿಲ್ಲ
ಎಂಬುದೊಂದು ವಿಪರ್ಯಾಸ ಇಲ್ಲಿ !
ಧೃತಿಗೆಡದ ಕವಿ ಮತ್ತೆ
ಲೇಖನಿಗೆ ಮೊರೆಹೋಗಿ
ಮತ್ತೊಂದು ಕವಿತೆ ರಚಿಸಿದನು
ಸಮಾಜದ ತುಂಬೆಲ್ಲಾ ಹಾಡಿದನು
ಜಾಗೃತಿಯನ್ನು ಕೈಗೊಂಡನು !
ಸಮಾಜದ ತುಂಬೆಲ್ಲಾ ಹಾಡಿಗೆ
ಚಪ್ಪಾಳೆ ಸುರಿಮಳೆಗಳನ್ನು ನೋಡಿದನು
ಹೊಗಳಿಕೆಯ ಜೇನು ಸವಿದನು
ಹೊಟ್ಟೆಗೆ ಬಟ್ಟೆಗೆ ದುಡ್ಡು ಸಿಕ್ಕಿತ್ತು
ವಿನಃ ಅಲ್ಲೂ ಯಾರು ಬದಲಾಗಲಿಲ್ಲ!
ಬದಲಾಗದ ಜಗವನ್ನು ಬದಲಿಸಲು
ಕವಿಯು ಅನಾದಿ ಕಾಲದ
ಇತಿಹಾಸವನ್ನೊಮ್ಮೆ ತೆರದು ಓದಿ
ಅರ್ಥೈಸಿಕೊಂಡು, ಮತ್ತೆ
ಕಥೆಯೊಂದನ್ನು ರಚಿಸಿ ಹೇಳಹೊರಟ !
ಕೇಳುವ ಕಿವಿಗಳು ಇದ್ದವು ಅಷ್ಟೇ
ಅರ್ಥೈಸಿಕೊಳ್ಳುವ ಮನಸ್ಸಿರಲಿಲ್ಲ
ಅಲ್ಲೂ ಯಾರು ಬದಲಾಗಲಿಲ್ಲ
ಕವಿಯ ಉದ್ದೇಶ ಮತ್ತೆ ಸೋತಿತ್ತು
ಕವಿ ಎದೆಗುಂದಲಿಲ್ಲ, ಪ್ರಯತ್ನ ಬಿಡಲಿಲ್ಲ !!
ಮತ್ತೆ ಕವಿಯ ಭಾವ ಅಳುತ್ತಿತ್ತು
ಅದೆಷ್ಟೋ ಪುಟಗಳನ್ನು ಬರೆದ
ಕವಿತೆಗಳು ಕಸವ ಸೇರಿದವು
ಕವಿ ಮಾತ್ರ ಬರೆಯುತ್ತಲೇ ಇದ್ದ
ಸಮಾಜ ಇಂದಲ್ಲಾ ನಾಳೆ
ಬದಲಾಗಬಹುದೆಂಬ ಭರವಸೆಯಿಂದ !!
– ಶಿವು ನಾಗಲಿಂಗಯ್ಯನಮಠ
ಯಾರೋ ಬೀಸಿದ ಬಲೆಗೆ ಬಲಿಯಾಯಿತೆ ಜೀವಾ
ಕಾಣದ ಕೈಗಳ ಸ್ಪರ್ಶಕೆ ಅರಳುವ ಮುನ್ನವೇ ಬಾಡಿತೆ ಹೂವಾ
ಭಾವನೆಗಳ ಹೊಂಬಣ್ಣಕೆ ಬೆಲೆಯಿಲ್ಲ
ವಂಚನೆಯ ಬಣ್ಣಗಳಿಗೆ ಕೊನೆಯಿಲ್ಲ
ಯಾರದೋ ತಪ್ಪಿಗೆ ನಲುಗುತಿದೆ ಹೃದಯಾ
ನಾ ಏನೆಂದು ಶಪಿಸಲಿ ಆ ವಿಧಿಯಾ
ಸರಿ ತಪ್ಪು ಯಾವುದೆಂದು ತಿಳಿಯದೇ ಹೋಯಿತೆ
ಕಣ್ಣೀರು ಹನಿ ಹನಿಯಾಗಿ ಭೂಮಿಯ ಸೇರಿತೆ
ಸಂತೋಷದ ಮನಸು ಮೌನವ ತಾಳಿತೆ
ಈ ಪ್ರೀತಿ ಹೀಗೆಕೆ ಮೋಸವ ಮಾಡಿತೆ
-ಜನಾರ್ಧನ ಎಂ.ಮೊಗೇರ
ಹೇಳಿಕೊಳ್ಳುವುದಿಲ್ಲವೋ ಆತ ಎಲ್ಲರ ಸಂತೋಷವನ್ನು ಬಯಸುವವನಾಗಿರುತ್ತಾನೆ
*****
ಸುಳ್ಳುಗಳು ನಮ್ಮಲ್ಲಿ ಕೊಂಚ ಭಯವನ್ನು
ಸತ್ಯ ನಮ್ಮಲ್ಲಿ ಒಂದು ಚೇತನವನ್ನು ಸದಾ ಅಹ್ವಾನಿಸುತ್ತಿರುತ್ತವೆ
*****
ಮಾತು ಪ್ರಾಣಿ ಪಕ್ಷಿಗಳನ್ನು ಮಾತನಾಡಿಸಲು ಉಪಯೋಗವಾದರೆ
ಅಥವಾ ಸಾಧ್ಯವಾದರೆ ಮಾತು ಕೂಡ ಕೃತಿಯಾಗಬಲ್ಲದು
*****
ಸೋಮಾರಿತನ ಸದಾ ನಿಮ್ಮನ್ನು ಲವಲವಿಕೆಯಿಂದ ಇರಲು ಬಿಟ್ಟರೆ ನೀವು ಸೋಮಾರಿಗಳಾಗಿರುವುದಕ್ಕೆ ದುಃಖ ಪಡಬೇಕಿಲ್ಲ
*****
ನಾವು ಮಾತನಾಡುವ ಮಾತು ನಮ್ಮ ಮನಸ್ಸಿಗೆ ಕಸಿವಿಸಿ ಉಂಟುಮಾಡುವುದಾದರೆ ಆ ಮಾತಿನಲ್ಲಿ ಖಂಡಿತ
ದೋಷವಿದೆ ಎಂದೆ ಅರ್ಥ
*****
ಕಣ್ಣೀರ ಎದೆಯೊಳಗೆ ತೂರಿದ ಮೊನಚಾದ
ಬಾಣಗಳಿಗೆ ನೆತ್ತರು ಅಂಟುವುದೇ ಇಲ್ಲ
*****
ಗಜಗಾತ್ರದೆನ್ನ ಕಾಲ್ತುಳಿತಕೆ ಮಡಿದು
ಇಹಪರಗಳೊಳು ಬೆರೆತು ಹೋದವರೆ
ಅಪ್ರತಿಮ ಬಲ ಪ್ರವೀಣರೇ
ಆಸಂಖ್ಯ ರಾಶಿ ಸಂಘ ಜೀವಿಗಳೇ
ಪಾಪಿಯ ಕ್ಷಮಿಸಿಬಿಡಿ
*****
ತೊಟ್ಟಿಕ್ಕುವ ನೀರ ಹನಿಗಳನ್ನ ಹಿಡಿದಿಟ್ಟುಕೊ
ಎದೆಯಲ್ಲಿ ಸಾಗರ ಪ್ರವಹಿಸಬಹುದು
*****
ಮೊದಲು ಅಡಿ ಇಡು
ಎಡವುವುದು ಸಾಮಾನ್ಯ
ನಂತರ ನಡೆ ಅನಂತದವರೆಗೆ ನಿನ್ನದೇ ದಾರಿ
*****
ಕೃಷ್ಣ ಶ್ರೀಕಾಂತ ದೇವಾಂಗಮಠ
ಗಜಲ
ಕಣ್ಣ ಕಾಂತಿಯಲ್ಲಿ ಕನಸುಗಳು ನಗುತಿವೆ ನಿನ್ನ ಹುಡುಕಲು
ದಾರಿ ತುಂಬ ಸಾಲು ದೀಪ ಹಚ್ಚಿರುವೆ ನಿನ್ನ ಹುಡುಕಲು
ಬೆನ್ನ ಹಿಂದೆ ನಗುವ ಕನ್ನಡಿಗೂ ಸಾವಿರ ಕನಸುಗಳಿವೆ
ನನಸಾಗಿಸಲು ನರಳಿದ ಗಘಳಿಗೆಗಳೂ ಕಾದಿವೆ ನಿನ್ನ ಹುಡುಕಲು
ಮೂರು ಗಂಟಿನ ಬಂಧವಿರಲಿ ಬಿಡು ಚಿಂತೆಯಿಲ್ಲ
ನೂರು ನಂಟುಗಳ ಬಂಧನ ಬಿಡಿಸೆಂದು ಬಿಕ್ಕಿ ಹೊರಟಿರುವೆ ನಿನ್ನ ಹುಡುಕಲು
ಅಳುವ ಹೃದಯಕ್ಕೆ ಅಂತರಂಗವೇ ಸಮಾಧಾನಿಸುವುದು
ಎದೆಯ ಭಾರಕ್ಕೆ ಬೀಗ ಜಡಿದು ಬಂದಿರುವೆ ನಿನ್ನ ಹುಡುಕಲು
ಮಾತನಾಡುವ ತುಟಿಗಳಿಗೆ ಮೌನವ್ರತದ ದೀಕ್ಷೆ ಕೊಟ್ಟು
ಸ್ನೇಹಳ ಹೆಜ್ಜೆಗಳು ರಂಗೋಲಿಯಾಗಿ ಸಾಗುತಿವೆ ನಿನ್ನ ಹುಡುಕಲು.
–ಸ್ನೇಹಲತಾ, ಎಸ್, ಗೌನಳ್ಳಿ
ಕವಿತೆ
ಕಡಲಿನಂಗಳದಲ್ಲಿ
ಬಿಡಿಸಿಟ್ಟ ಹೊತ್ತಿಗೆ
ಗಾಳಿಯಲೆಗಳು ಒಂದೊಂದಾಗಿ
ಪುಟ ತಿರುವುತ್ತಿವೆ
ವಿಶಾಲ ಆಗಸ ಮೇಲೆ
ಉದ್ದಗಲ ಹರಡಿದ ಭುವಿ
ಮೌನದೆದೆಯಲಿ ನವಿರು
ಕಾವ್ಯ ಸ್ಪಂದನ
ಓಡುವ ಮೇಘ
ಭೋರ್ಗರೆವ ತೆರೆಗಳ ಮಧ್ಯೆ
ನಿರಂತರ ನಡೆವ
ಹೃದ್ಯ ಸಂವಾದ
ಕತ್ತಲಾಗುತಿದೆ ಹಗಲು ಸಾಯುತ್ತಿದೆ
ಸಾಗರಕೆ ಸೊಕ್ಕಿ ಮೆರೆವ ಅಬ್ಬರ
ಬೆಳದಿಂಗಳ ಮಳೆ ಸುರಿದು
ಎಲ್ಲೆಲ್ಲೂ ಕ್ಷೀರ ಧಾರೆ
ಮಲ್ಲಿಗೆಯ ಮೊಗ್ಗರಳಿ
ಬೆಸೆದು ದಾರದ ಜೊತೆಗೆ
ತಿಳಿನಗೆಯ ಆಳದಲಿ
ಗಾಢ ಗಂಧ
ನೋಡುತಿದೆ ನಕ್ಷತ್ರ ಮೌನದಲಿ
ತಿರುಗುತಿವೆ ಗ್ರಹ ಪಥದಿ
ಹೊತ್ತಿಗೆಯ ಹಾಳೆಯಲಿ
ಕಾಲಚಕ್ರದ ಕವಿತೆ
ಗಾಯತ್ರೀ ರಾಘವೇಂದ್ರ ಶಿರಸಿ