ಪಂಜು ಕಾವ್ಯಧಾರೆ

ಮುಂಜಾನೆ ಮುಂಬಾಗಿಲು
ಗುಡಿಸಿ  ಸಾರಿಸಿ ರಂಗೋಲಿ ಬರೆದು
ತುಟಿಮೇಲೆ ನಗು
ಹೊದ್ದುಕೊಳ್ಳಬೇಕು
ಬೈಯ್ಯುವವರ ಮುಂದೆ ಬಿಲ್ಲಾಗಬೇಕು
ಮೊಗ್ಗುಮೈಯ್ಯಲ್ಲಿ
ಮನೆತುಂಬ ತಿರುಗಬೇಕು
ಹೊಗಳಿದರೆ ಹೂವಾಗಬೇಕು
ಹಕ್ಕಲ್ಲ ಎಸೆದ ರೊಟ್ಟಿಯ ಚೂರು
       ಕತ್ತಲ ಕೊನೆದೀಪ
       ಆರುವತನಕ
       ತಾನಾಗಿದ್ದುಕೊಂಡು
       ನಾನೆಂಬುವರಿಗೆಲ್ಲ ಹೂಂಗುಟ್ಟು
       ಅಳಬೇಕೆಂದುಕೊಳ್ಳುತ್ತಲೇ ನಕ್ಕು
       ನಗುವಲ್ಲೂ ಕಣ್ಕೊನೆಯುಕ್ಕಿ
       ಕತ್ತಲ ಕೊನೆಯಾಟಕ್ಕೂ ಹಾಸಿಕೊಂಡು
       ತುಟಿಕಚ್ಚಿ ಬಿಕ್ಕಳಿಕೆ ನುಂಗಿ
       ತೂಕಡಿಸುತ್ತ ಕಳೆದ
       ಕಾಲುಂಗುರಕ್ಕೆ ತಡಕುವ ಭೂಮಿ
ಕನಸೂ ಅವಳದಲ್ಲ
ಕನವರಿಸಬೇಕು ನಾಳೆಗಾಗಿ
ಬೆಳಕ ಸ್ವಾಗತಿಸಲು
ಒಪ್ಪಗೊಳ್ಳಬೇಕು
ಕುಂಕುಮಬೊಟ್ಟು ದುಂಡಗೆ
ಸೊನ್ನೆಯಾಗೇ ಇರಬೇಕು
ಸೂರ್ಯನಹಾಗೆ
ತಂಪಾಗಿರಬೇಕವಳು
ಚಂದ್ರನಹಾಗೆ
          ಒದ್ದೆಗೂದಲು ತೊಟ್ಟಕ್ಕುತ್ತದೆ
          ಟವಲ್ಲು ಸುತ್ತಬೇಕು
          ಒಳಗೂ ಒರೆಸಬೇಕು ಬಟ್ಟೆಯಿಲ್ಲ
          ಇದ್ದರೂ ಹೀರಿಕೊಳ್ಳುವದಿಲ್ಲ
          ಹಸಿಹಸಿ
-ಪ್ರೇಮಾ ಟಿ ಎಮ್ ಆರ್

prema

 

 

 

 


 

*ಅಗಲಿಕೆಯ ನೋವು*

ಶಾಯಿರಿ ನುಡಿದ 
ಶಾರೀರ ಶರೀರವಿಂದು
ನಮ್ಮನಗಲಿದೆ ಬರದೆ ಮತ್ತೆಂದು
ಹೃದಯ ಭಾರವಾಗಿದೆ
ನೆನಪು ಗಾಢವಾಗಿದೆ. 
ಈ ಅಗಲಿಕೆ ನೋವು ತಂದಿದೆ

ಶಾಯಿರಿಯ ಮೊನಚಿನಲ್ಲಿ
ಆಹಾ! ಎನಿಸುವ ಉಧ್ಗಾರದಲ್ಲಿ
ಸಂಭ್ರಮಿಸಿದ ಜೀವ  ಈಗಿಲ್ಲ 
ಹೊಸತನದ  ಅಭಿವ್ಯಕ್ತಿಯಲ್ಲಿ
ರಸಿಕನೆದೆಯ ರಂಜಿಸುವಲ್ಲಿ
ಶಾಯಿರಿಯ ಶರೀರ ಅಗಲಿತಲ್ಲ

itagi-eeranna

 

 

 

 

 

ಸಾಹಿತ್ಯದ ಹೊಸ ಪ್ರಕಾರ
ಪದಗಳ ಲಾಲಿತ್ಯ ಶೃಂಗಾರ 
ಕನ್ನಡತಿಗೆ ಮುಕುಟದಂತಿತ್ತು
ಕೇಳುಗನೆದೆಗಿತ್ತು ಸ್ಪರ್ಶ 
ತಂದಿತ್ತು ಅವನಲ್ಲಿ ಹರ್ಷ 
ಯುವಭಾವಕೆ ಅವರೇ ಆದರ್ಶ 

ಇಈ ಇನ್ನು ನೆನಪು ಮಾತ್ರ 
ಗೆದ್ದಿತು ಸಾವಿನ ಸೂತ್ರ 
ಅಜರಾಮರ  ಅವರ ಪಾತ್ರ 
ತಲ್ಲಣಿಸದೇ ಪವಡಿಸಲಿ ಅವರಾತ್ಮ 
ಶಾಂತಿಯ ಪಡೆದು ವಿರಮಿಸಲಿ 
ಮತ್ತೆ ಬರಲಿ ಮತ್ತೊಂದು ಹೊಸತಿನಲಿ 

(ಹಿರಿಯ ಸಾಹಿತಿ ಶಾಯಿರಿ ಮಾಂತ್ರಿಕ ಇಟಗಿ ಈರಣ್ಣ  ಅವರ  ಆತ್ಮಕ್ಕೆ ಶಾಂತಿ ಕೋರುತ್ತಾ…)

*ಅಮುಭಾವಜೀವಿ*

amu

 

 

 

 


 

ನಡೆಸು ನೀನು
ಎದೆಬೊಗಸೆಯನು ಚಾಚಿ
ಕಾದು ಕುಳಿತಿರುವೆ
ತುಂಬ ಬಾರದೆ ಬೇಗ
         ಭಾವಬಿಂದು  ।

ಕಾದೆ ಇರುವೆನು ನಾನು
ಕಣ್ಣು ತೆರೆಯೋ ನೀನು
ತುಂಬಲಾರನೆ ಬೊಗಸೆ
         ಬಂದು-ಇಂದು ।

ಹನಿಸು ಪ್ರೀತಿಯ ಬಿಂದು
ಸುರಿಸು ಕೆಂಡದ ಮಳೆಯ
ಸೂತ್ರ ನಿನದೇ ದೊರೆ
            ಪಾತ್ರ ನಾನು ।

ಸೊನ್ನೆ ಸೊನ್ನೆಯ ಸೇರಿ
ಸೊನ್ನೆಯಾಗದ ಹಾಗೆ
ತುಂಬು ಏನನೂ ಜೊತೆಗೆ
             ಇದ್ದು ನೀನು ।

ಸುಡುಕೆಂಡ ಮಧುಭಾಂಡ
ಯಾವುದನ್ನೂ ಕೊಡು
ಖಾಲಿ ಬೊಗಸೆಯನೊಲ್ಲೆ
           ಒಲ್ಲೆ ನಾನು ।

ಉಣುವೆ ಏನನೂ ಸರಿಯೆ
ಕೊಡುಗೆ ನಿನದೇ ದೊರೆ
ಜೊತೆಗಿದ್ದು ಕೈಬಿಡದೆ
              ನಡೆಸು ನೀನು ।   

• ಡಾ. ಗೋವಿಂದ ಹೆಗಡೆ 

govind-hegadegs

 

 

 

 


 

ನಕ್ಷತ್ರದ ಬೆಳಕಲ್ಲಿ … ೧

ನನ್ನ ಕಥೆಯಲ್ಲಿ ಆ ನಿನ್ನ ಹೆಸರಿರದಿದ್ದರೆ   
ಆರಂಭ ನಿಲುಕುತ್ತೆ ಕೊನೆಯಂತೂ ನಿಲುಕುವುದಿಲ್ಲ … 

ಕೇಶದ ಕತ್ತಲಲ್ಲಿ ಪ್ರವಾಸಿಗನೊಬ್ಬ ಕರಗಿದಾಗ 
ನಿಜ ಅಪವಾದ ಹೊರುವುದು ಕಳೆದಂತೂ ಹೋಗುವುದಿಲ್ಲ …. 

ನಗುನಗುತ್ತ್ತಾಯುವ ಹೃದಯದ ಚೂರುಗಳನ್ನೇಕೆ ನಾ ಆಯಬಾರದು?  
ಪ್ರತಿಯೊಬ್ಬರ ಅದೃಷ್ಟದಲ್ಲಿ ಇನಾಮು ಅಂತೂ ಬರೆದಿರುವುದಿಲ್ಲ… 

ಜಾರುತ್ತಿರುವ ಹನಿ ನಿಂತು ಹೇಳಿತು ಕಣ್ಣುಗಳಿಗೆ 
ಮಧುವಿಂದ ಕರಗಿದ್ರೆ ಅದು ಮಧುಪಾತ್ರೆಯಂತೂ ಅನಿಸುವುದಿಲ್ಲ….  

ದಿಬ್ಬಣ ಹೊತ್ತ ಹಡಗು ಮುಳುಗಿದೆ ಹಗಲುಗಳೊಂದಿಗೆ 
ಆದರೆ ದಂಡೆಗಳ ಮೇಲೆ ಕುಳಿತು ತೋಡಿಕೊಳ್ಳಲೂ ದುಃಖ ಬರುವುದಿಲ್ಲ 
-ಎಂಎಂಶೇಕ್ ಯಾದಗಿರಿ   

(ಪ್ರಖ್ಯಾತ ಸಿನೆಮಾ ನಾಯಕಿ ಮೀನಾಕುಮಾರಿ 
ರಚಿಸಿದ ಕವನ ಕನ್ನಡಕ್ಕೆ ತರುವ   ಚಿಕ್ಕ ಪ್ರಯತ್ನ)  


     

  ಸಮತೆಯ ಗಾಳಿ ಬೀಸಬೇಕಿದೆ
ಕ್ರೌರ್ಯವೇ…
ನೀನೇಕೆ ಇಷ್ಟು ಕ್ರೂರಿ?
ಶಾಂತಿ ಮಣ್ಣಿನ ಆಳದಲ್ಲೆಲ್ಲಾ 
ನಿನ್ನ ಭಯಾನಕ ಬೀಜಗಳನ್ನು ಹರಡಿ
ಕ್ರೌರ್ಯದ ಫಲಗಳನ್ನೆ ಬಿಡುವ
ನಿನ್ನ ದುಷ್ಟತನಕ್ಕೆ ಕೊನೆಯೇ ಇಲ್ಲವೇ?

ಶಾಂತಿಯೇ…
ನಿನ್ನ ಬೀಜ ಬಿತ್ತಿದ ಮಹಾತ್ಮರು
ನಡೆದಾಡಿದ ಭೂಮಿಯಲ್ಲಿ
ಮದ್ದುಗುಂಡುಗಳ ಬೆಳೆಯುತ್ತಿದ್ದಾರೆ
ರಕ್ತದೋಕುಳಿ ಹರಿಸುತ್ತಿದ್ದಾರೆ
ನಿನ್ನ ಮಹಿಮೆಯನ್ನು ಎತ್ತಿ ತೋರಿಸಿದ
ಮಣ್ಣಿನಲ್ಲೇ ಹೀಗಾದರೆ ಹೇಗೆ?
ಹೂಗಳ ಹೊಸಕಿ ಬೆಳೆಸಿರುವ
ಭಯದ ಮುಳ್ಳುಗಳ ಕಿತ್ತೊಗೆದು
ಎಲ್ಲರ ಎದೆಗಳಲ್ಲಿ ನೆಲೆಸು ಬೇಗ.

ಸಮಾನತೆಯೇ…
ಎಲ್ಲಿರುವೆ ಮಾತೆ ನೀನು?
ಅಸಮಾನತೆ ಯ ವಿಷಚಕ್ರಗಳೇ
ಎಲ್ಲ ಹಾದಿಗಳಲ್ಲಿ ನಿರ್ಭಯವಾಗಿ ಉರುಳುತ್ತಿವೆ
ಅಸ್ಪೃಶ್ಯತೆಯ ವಿಷಗಾಳಿಯೇ
ದೇಶದಲ್ಲೆಡೆ ಹರಡಿಕೊಂಡಿದೆ
ಬಾ ಎಲ್ಲರ ಮನದಂಗಳದಲ್ಲಿ
ಸಮತೆಯ ಹೂಗಳ ಅರಳಿಸು.

ಮೌನವೇ…
ನಿನ್ನ ಸಂಗ ಬೇಕೆನಗೆ ಈಗ..
ಮಾತಿನ ಬೆಲೆ ತಿಳಿಯದೇ
ಬೀಡುಬೀಸಾಗಿ ಮಾತಾಡಿ ಸಂಬಂಧಗಳ
ನಡುವೆ ಅಶಾಂತಿಯ ಪ್ರಕ್ಷುಬ್ಧ ವಾತಾವರಣ
ಸೃಷ್ಟಿಸುತ್ತಿರುವ ವಾಚಾಳಿಗಳ ಎದೆಗಳಲ್ಲಿ ನೆಲೆಸು
ಅವರಿಗೆ ನಿನ್ನ ಸಾಂಗತ್ಯದ ರುಚಿ ತೋರಿಸು.
-ಲಕ್ಷ್ಮಿಕಾಂತ_ಮಿರಜಕರ_ಶಿಗ್ಗಾಂವ.

laxmikant-mirajakar

 

 

 

 


 

ಗಾಂಧಿ ಒಂದು ಪ್ರತಿಮೆಯಲ್ಲ

ಆ ಕೋಲು
ಕೋಲಾಟದ ಕೋಲಲ್ಲ
ಸದ್ದುಮಾಡದೆಯೇ
ಮಲಗಿದ್ದವರನ್ನು
ಬಡಿದೆಬ್ಬಿಸಿ;
ಕೆಂಪುಜನರನ್ನು 
ಹೊಡೆದೋಡಿಸಿತು.

ದುಂಡನೆಯ ಕನ್ನಡಕ
ಬಳಲಿ ಬೆಂಡಾಗಿ
ಗುಳೆಬಿದ್ದಿದ್ದ
ನಿಸ್ತೇಜ ಕಣ್ಣುಗಳಿಗೆ
ಸುಲೋಚನವಾಗಿತ್ತು,

ಬಿಳಿಯ ತುಂಡು ಪಂಚೆ
ಹರಿದು ಹಂಚಿಹೋಗಿದ್ದ
ಅಭಿಮಾನದ ಭಾವವನ್ನು
ಒಂದುಮಾಡಿ;
ಸ್ವಾತಂತ್ರದ
ಕನಸನ್ನು ಎಲ್ಲರಲ್ಲಿಯೂ
ಬಿತ್ತಿತ್ತು.
***
ಶಾಂತಿಧೂತ ಬರುತಿದ್ದಾನೆ
ಹಿಂಸೆಯೇ ತುಂಬಿರುವಾಗ
ಅಸ್ಮಿತೆಯ ಪಟಿಸುತ್ತಾ.
ಕೊನೆಗೆ ತುಪಾಕಿಯ
ಗುಂಡು ತಾಗುವಾಗಲೂ 
ಅಶೋಕದವನದಲ್ಲಿ
ಚಿರನಿದ್ರೆಗೆ ಜಾರಿರುವಾಗಲೂ.
****
ತುಪಾಕಿಯ ಬಗ್ಗೆಯೂ ಮಾತು
ತುಪಾಕಿಯ ಕಾರಣ 
ತುಪಾಕಿಗೇ ತಿಳಿದದ್ದು
ಮಿಕ್ಕೆಲ್ಲವೂ ಅಂತೆ ಕಂತೆ. ಅಸ್ಪಷ್ಟ
    
ಇಂದು ನೆನಪಷ್ಟೇ 
ಆ ಮಹಾತ್ಮನದು ಒಂದುವಾದ,
ಗುಂಡಿಕ್ಕಿದವರದೂ ಒಂದುವಾದ
ಮುಂದೆ ಪ್ರತಿ ಊರಿನನಲ್ಲಿಯೂ 
ಇಬ್ಬರ ಪ್ರತಿಮೆಗಳೂ ಬರಬಹುದು.!?
****
ಬಯಸಿದ್ದೆಲ್ಲ ಬೇಡಲು,
ಸ್ವಾರ್ಥದ ಬೇಳೆ ಬೇಯಿಸಲು.
ಪ್ರತಿಭಟೆನೆ ಮಾಡುತ್ತಾ 
ತಮ್ಮೊಳಗಿನ ತಮ್ಮನ್ನೇ ಮರೆತು,
ನಾಯಕರಾಗಲು,
ಎಲ್ಲದಕ್ಕೂ ಒಬ್ಬೊಬ್ಬರ ಫೋಟೋ
ಚೌಕಟ್ಟುಕೂಡಿಸಿ
ಗೋಡೆಗೆ ನೇತುಹಾಕಿ
ಗಂದಧಕಡ್ಡಿ ಬೆಳಗಿ, 
ತಮ್ಮ ವ್ಯವಹಾರ ತಮಗೆ
ದೇಶದಲ್ಲಿ ಇಂದು ಮಾರಲು ಏನಿದೆ?

ನಿಮಗೆ ಬಿಟ್ಟಿದ್ದು
ಕೊಂಡುಕೊಳ್ಳುವ
ಸ್ವಾತಂತ್ರ್ಯವಿರುವುದೇ?

ನಮ್ಮ ತಿಮ್ಮ ಹೇಳುತಿದ್ದ
ಸ್ವಲ್ಪ ತಡೆಯಿರಿ :
ಯಾವ ಕಡೆ ಮೆಜಾರಿಟಿ ಇರುವುದೋ
ನೋಡಿ ಹೇಳುತ್ತೇನೆ.
***
ಗಾಂಧಿ ಒಂದು ಪ್ರತಿಮೆಯಲ್ಲ
ಬದುಕಿನ ಸತ್ಯದ ಅಂತಃಸತ್ವ
***
-ಎಂ.ಶ್ರೀಕಾಂತ ತಾಮ್ರಪರ್ಣಿ, ಹೊಸಪೇಟೆ 



 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Suresh Rajamane
Suresh Rajamane
7 years ago

ಕವಿತೆಗಳು ಒಂದಕ್ಕಿಂತ ಒಂದು

ಚಂದ

ಓದಲು ಮನಸಿಗಾನಂದ….

1
0
Would love your thoughts, please comment.x
()
x