ಪಂಜು ಕಾವ್ಯಧಾರೆ

"ಬಡತನ ಬಂದಿದೆ"

ಬೆಳೆದು ನಿಂತಿರುವ ಪೈರು
ಸೊರಗುತ್ತಿದೆ, ನೀರಿಲ್ಲದೇ
ಇಲ್ಲಿ ಮಳೆಗೆ ಬಡತನ ಬಂದಿದೆ !

ಎರಡು ಹೃದಯಗಳಲ್ಲಿ 
ಅರಳಿದ ಪ್ರೀತಿಯು
ವೈಮನಸ್ಸಿನ ತಾಪಕ್ಕೆ 
ಬೇರೆ-ಬೇರೆ ಆಗಿವೆ
ಇಲ್ಲಿ ಪ್ರೀತಿಗೆ ಬಡತನ ಬಂದಿದೆ !

ದಣಿವರಿಯದ ದೇಹಕ್ಕೆ ದಣಿವಾಗಿ
ಹಾಸಿಗೆ ಹಿಡಿದು ಮಲಗಿದೆ 
ಇಲ್ಲಿ ಆರೋಗ್ಯಕ್ಕೆ ಬಡತನ ಬಂದಿದೆ !

ವೈದ್ಯನಲ್ಲಿ ಕಾಯಿಲೆಗೆ ಅಸ್ತ್ರವಿದೆ
ಆ ಅಸ್ತ್ರ ಪಡೆಯಲು ಇಲ್ಲಿ
ಬಡವನ ಜೇಬಿಗೆ ಬಡತನ ಬಂದಿದೆ !

ನನ್ನೊಳಗೂ ಕೆಚ್ಚದೆಯ ಕಿಚ್ಚಿದೆ
ಹೊತ್ತಿಸಿಬೇಕೆಂದರೇ..
ಮನಸ್ಸು ಕಣ್ಣೀರಲ್ಲಿ ಮುಳುಗಿ ಹೋಗಿದೆ 
ಇಲ್ಲಿ ಉದ್ಯೋಗಕ್ಕೆ ಬಡತನ ಬಂದಿದೆ !

ನಿಮ್ಮಲ್ಲಿಯೂ ಅದೇಷ್ಟೋ ಆಸೆಗಳಿವೆ
ಅವೆಲ್ಲವನ್ನು ಇಡೇರಿಸುವ ಹಾದಿ ಉದ್ದಕ್ಕೂ
ಕನಸುಗಳೆಂಬ ಮೈಲುಗಲ್ಲುಗಳಿವೆ
ಇಲ್ಲಿ ಸಮಯ ಸಾಧಕನಿಗೆ ಬಡತನ ಬಂದಿದೆ !

****

ನೀ ದೂರವಾಗುವ ಆ ಕ್ಷಣಕ್ಕೆ
ಮುಡುಗಟ್ಟಿತ್ತು ಮೌನ
ಕಣ್ಣ ಇಬ್ಬಿನಿ ಕರಗಿತ್ತು 
ನೋವಿನ ಅಲೆಗಳ ಮಧ್ಯ
ಪ್ರೀತಿ ಅಲೆಮಾರಿಯಾಗಿತ್ತು…!!

ನೀ ದೂರವಾಗುವ ಆ ಕ್ಷಣಕ್ಕೆ
ಮಂದಹಾಸದಿ ಅರಳಿದ ಪ್ರೀತಿ
ಮಸಣದ ಹಾದಿ ಹಿಡಿದಿತ್ತು..!!

ನೀ ದೂರವಾಗುವ ಆ ಕ್ಷಣಕ್ಕೆ
ಚೈತ್ರದ ಚಿಗುರೆಲೆಯಲ್ಲೂ
ಹಸಿರಿನ ಚೈತನ್ಯವಿರಲಿಲ್ಲ..!!

ನೀ ದೂರವಾಗುವ ಆ ಕ್ಷಣಕ್ಕೆ
ನನ್ನೆದಲ್ಲಿನ ನಂಬಿಕೆಗಳೆಲ್ಲವು
ಆತ್ಮಹತ್ಯೆ ಮಾಡಿಕೊಂಡಿದ್ದವು..!!

ನೀ ದೂರವಾಗುವ ಆ ಕ್ಷಣಕ್ಕೆ
ಹೃದಯದೊಲವಿನ ಪ್ರೀತಿ
ಕಣ್ಣೀರಿನ ಕೂಡಿ ಹರಿಸಿತ್ತು..!!

ನೀ ದೂರವಾಗುವ ಆ ಕ್ಷಣಕ್ಕೆ
ಮನಸ್ಸಿನ ಆಸೆಗಳಿಗೆಲ್ಲಾ
ನಿರಾಸೆಯ ಕಾರ್ಮೊಡ ಕವಿದಿತ್ತು..!!

ನೀ ದೂರವಾಗುವ ಆ ಕ್ಷಣಕ್ಕೆ
ನನಸಾಗಬೇಕಿದ ಕನಸುಗಳೆಲ್ಲವು
ನಿರಾಶ್ರಿತವಾಗಿ ಮಲಗಿದ್ದವು..!!

ನೀ ದೂರವಾಗುವ ಆ ಕ್ಷಣ
ಸಿಹಿಯಾದ ನೆನಪುಗಳೆಲ್ಲವು
ಕಹಿ ಅನುಭವ ನೀಡುತ್ತಿದ್ದವು…!!

ನೀ ದೂರವಾಗುವ ಆ ಕ್ಷಣಕ್ಕೆ
ನನೆದೆಯ ಭೂಮಿಯಲ್ಲಿ 
ಭೂಕಂಪನದ ಭಯವಾಗಿತ್ತು..!!

ನೀ ದೂರವಾಗುವ ಆ ಕ್ಷಣಕ್ಕೆ
ನನ್ನ ಪ್ರೀತಿ ದೋಣಿಗೆ
ನಾವಿಕನೇ ಇಲ್ಲದಂತಾಗಿತ್ತು..!!

ನೀ ದೂರವಾಗುವ ಆ ಕ್ಷಣಕ್ಕೆ 
ಬದುಕು ಬೇಸರದಿ ಬೇಸತ್ತು 
ಪ್ರಕೃತಿ ಮಡಿಲಲ್ಲಿ ಲೀನವಾಗಿತ್ತು..!!

– ಶಿವು ನಾಗಲಿಂಗಯ್ಯನಮಠ.

shivu-nagalingayyanamata

 

 

 

 


 

ಗೆಳತಿಗೆ

ಯಾರು ಸೆಳೆದರು ನಿನ್ನ ಮನವನು ಗೆಳತಿ ಹೇಳೆ
ಹಿಂದಿನಂತಿಲ್ಲ ನೀನು. ನಿನ್ನ ಮನವಿದೆ ಎಲ್ಲೊ
ಮುಖದಿ ನಗು ಮರೆಯಾಗಿ ಚಿಂತೆ ತಾಂಡವವಾಡಿದೆ
ಸರಿಸು ನೀ ಪರದೆಯನು. ಎಲ್ಲ ನಿಚ್ಚಳವಾಗಲಿ.

  ಕನಸು ಕಾಣಲು ಬೇಕು. ಹೊಂಗನಸುಗಳೆ ಸೊಗಸು
  ಅದುವೆ ಮೈಮನಗಳನು ಅರಳಿಸುವ ಹೊಸ ಬೆಳಕು
  ಆಸೆ ಮನದಲಿ ನೂರು ದೊಡ್ಡಾಲದಂತಿಳಿದು
  ಸುತ್ತೆಲ್ಲ ಹಬ್ಬಿಹುದು ಬೇರೆ ಬೆಳೆಯಲು ಬಿಡದೆ

ಆಸೆ ಕನಸುಗಳೆಂದೂ ನಮ್ಮ ನಡೆಸುವ ಬೆಳಕು
ಆ ಬೆಳಕಿನಲೆ ನಾವು ಗುರಿಯ ಮುಟ್ಟಲು ಬೇಕು
ಹಿಂದೆ ನಡೆದುದ ಮರೆತು ಮುಂದಿನೊಳಿತಿಗೆ ದಾರಿ
ಇಂದೆ ನಿರ್ಮಿಸುವ ನಾವು. ಕೈ ನೀಡು ಶುಭ ಕೋರಿ

  ಬಯಸು ಎಲ್ಲರಿಗೊಳಿತು. ಆ ಸುಖದಿ ನೀ ಸುಖಿಸು
  ಮೈಮನ ಹಗುರಾಗಿಸು, ಕನಸುಗಳ ನನಸಾಗಿಸು.

-ಮಾ.ವೆಂ.ಶ್ರೀನಾಥ.

sreenath-m-v

 

 

 

 


 

ನಿನ್ನದೇನಲ್ಲಾ

ಕಡಲೊಡಲಿನಲ್ಲಿ ಬೆರಗಾಗಿ ರವಿಯ ಕೆಂಗಿರಣವನ್ನು 
ಕಣ್ಣು ತುಂಬಿ ನಿನ್ನ ಮರೆಯಬೇಕೆಂದೆ.
ಮೋಡ ಕವಿದು ರವಿ  ತಂಪಿನಲ್ಲಿ 
ನಿನ್ನ ಚಿತ್ತಾರವೇ ಆವರಿಸಿತು…!

ಕಡಲ ಅಲೆಗಳು ಎದೆಗಪ್ಪಳಿಸಿದಾಗ  
ನಿನ್ನೊಂದಿನ ನೆನಪುಗಳು ತಲ್ಲಣ
ಕದ್ದುಬಿಡು ಗೆಳತಿ ನಿನ್ನೆಲ್ಲಾ ನೆನಪುಗಳನ್ನು 
ತುಸು ಹೊತ್ತಾದರು ಮೌನಿಯಾಗಿರುವೇ..!

ಮೂರು ಮಾಸದ ಹಂಗಿನಿಂದ ಕೂಡಿಟ್ಟ
ಕನಸುಗಳು ಬೇಡ.
ಕೊನೆಯ ಗಳಿಗೆಯಲ್ಲಿರುವೇ 
ಇಂದಾದರೂ ಕೈ ಬಿಟ್ಟು ಬಿಡು
ನಿನ್ನ ನೆನಪುಗಳಿಂದ ಕಣ್ಣು ಮುಚ್ಚಿ
ಪ್ರೀತಿಯ ದೀವಿಗೆಯಲ್ಲಿ ಲೀನವಾಗುವೇ…!

ಕನಸುಗಳನ್ನು ಗಿರಿವಿಗಿಟ್ಟು ಆ
ಒಂದಿರುಲಿನ ನಶೆಯಲ್ಲಿ  ಹಕ್ಕಿಯಂತಾರುತಿದೆ ಮನ
ಎದುರು ಬರಬೇಡ ಗೆಳತಿ
ಆ ನಿನ್ನ ಒಲುಮೆ ಹೃದಯದಲ್ಲಿ
ಹೆಪ್ಪುಗಟ್ಟೆದೆ…!

ಕಂಡು ಕೇಳರಿಯದ ನೋವಿನ ಕವಿತೆ 
ಗೋಳು ಕೇಳುವರಾರು.?
ಕಲ್ಲು ಹೃದಯದ ಚೆಲುವೆಯೇ 
ನೀ ಬರೆಯಲು ನೆಪ ಮಾತ್ರ. 
ಈ ಕವಿತೆ ನಿನ್ನದೇನಲ್ಲಾ …!

ಪಿ ಕೆ…? ನವಲಗುಂದ

praveenkumar-honnakudari

 

 

 

 


 

ಪ್ರೀತಿ ಬಟ್ಟಲು

ಪ್ರೀತಿ ಬಟ್ಟಲಲಿ ನೆನಪುಗಳ ಹಂಚಿಕುಡಿದ ಕೈಗಳು ನೆಮ್ಮದಿಗಾಗಿ ತಡಕಾಡಿದವು
ರಸ್ತೆ ಬದಿಯಲಿ ಒಣಬೇರಿನ ರೆಂಬೆಯಲಿ ತುಣುಕು ನೆಮ್ಮದಿಗಾಗಿ ತಡಕಾಡಿದವು

ಹೂ ಬನದಲಿ ಮಕರಂಧ ಹೀರಿ ಮೈಸೋತ ಕೈಗಳು
ಹುತ್ತದ ಬಳ್ಳಿಯಲಿ ಒಡಲ ಸವಿಗಾಗಿ ತಡಕಾಡಿದವು

ಫಲವತ್ತಾದ ಪೈರನು ಬೆಳೆದು ರಾಶಿಯಾದ ಕೈಗಳು 
ಒಣ ಭೂಮಿಯಲಿ ಕನಸು ಕಾಳಿಗಾಗಿ ತಡಕಾಡಿದವು

ಹೆಗಲ ಮೇಲೆ ನೊಗ ಹೊತ್ತು ಬದುಕು ಬಸೆದ ಕೈಗಳು
ನಂಬಿಕೆಯಿಟ್ಟ ಬೀದಿಯಲಿ ತುಸು ಪ್ರೀತಿಗಾಗಿ ತಡಕಾಡಿದವು

ಬೆಳಕ ನಿಟ್ಟುಸಿರಲಿ ಅದ್ಭುತ ಗೂಡು ನೇಯ್ದ ಕೈಗಳು
ಇರುಳ ಚಕ್ಕಡಿಯಲಿ ನಿದ್ರಿಸಲು ತುಂಡು ನೆಲೆಗಾಗಿ ತಡಕಾಡಿದವು

ಬೆಟ್ಟದ ಅಂಚಿಗೆ ಕನಸುಗಳ ನೇತುಹಾಕಿ ಮುಗಿಲಲ ಕುಕ್ಕುವ ಕೈಗಳು
ಗಿರಿ ವನದ ಬಂಜೆ ನೆಲದಲಿ ಕರುಳ ಕುಟುಕಿಗಾಗಿ ತಡಕಾಡಿದವು
ಕಿರಸೂರ ಗಿರಿಯಪ್ಪ

giriyappa

 

 

 

 


 

ಹಾಗೆಲ್ಲಾ ಎಲ್ಲೆಂದರಲ್ಲಿ ಮುಖ ತೂರಿಸಬೇಡ
ಮೊದಲೇ ವಿಕಾರ ರೂಪಿ ನೀನು
ಅಂತರಾಳದಿಂದ
***
ನಿಮ್ಮೋಳಗೆ ರೆಕ್ಕೆಗಳಿದ್ದರೆ
ಹಕ್ಕಿಯಂತೆ ಹಾರುವ ನಿಮ್ಮ ಕನಸು 
ಖಂಡಿತ ಸಾಕಾರಗೊಳ್ಳುತ್ತದೆ
***
ಆಕರ್ಷನೆ ಹುಟ್ಟಿ ಸಾಯುವಂಥದ್ದು 
ಪ್ರೀತಿ ದೇದೀಪ್ಯಮಾನ ಪ್ರಭೆ
***
ಸರಾಗವಾಗಿ ನೆತ್ತರು ಹರಿದ 
ದಾರಿಯುದ್ದಕ್ಕೂ ಕ್ರಮಿಸಬಲ್ಲವರು
ತೇಲುವ ಹೆಣದೆದೆಗಳ ಮೇಲೆ ಕಾಲಿಟ್ಟು 
ಮುಂದೆ ಸಾಗುತ್ತಾರೆ
***
ತನ್ನಲ್ಲಿ ಎಲ್ಲರ ನೋವುಗಳನ್ನಿಟ್ಟುಕೊಂಡು 
ಕೂಡ ಕಾವ್ಯ ಮೌನದಲ್ಲಿಯೇ ಪ್ರತಿಭಟಿಸುತ್ತದೆ
***
ದೋಷವಿರುವ ಪ್ರತಿಯೊಂದು ಓರ್ವರೂ ಅದನ್ನು ನಿವಾರಿಸಿಕೊಳ್ಳಲು ನೀಗಿಸಿಕೊಳ್ಳಲು ಸದಾ ಚಡಪಡಿಸುತ್ತಲೇ ಇರುತ್ತಾರೆ ಈ ಹಾದಿಯಲ್ಲೇ ಅವರು ಕಾರಣಗಳನ್ನು ಅರ್ಥ ಮಾಡಿಕೊಳ್ಳುವುದು
***
ಕಾರಣಗಳು ಸದಾ ತೆರೆದುಕೊಂಡೆ ಇರುತ್ತವೆ
ಅವುಗಳ ಬಾಯಿಗೆ ಬೀಗ ಹಾಕಬೇಕಾದರೆ
ನಾವು ಕರ್ಮವನ್ನು ಸರಿಯಾಗಿ ಪಾಲಿಸಬೇಕು
***
ನಿಮಗೆ ನಾಚಿಕೆ ಇಲ್ಲ ಎನ್ನುವುದನ್ನು ನಿರೂಪಿಸುವುದಾದರೆ ಉಟ್ಟ ಬಟ್ಟೆಬಟ್ಟೆಗಳನ್ನು ಕಳಚಿ ಬೆತ್ತಲಾಗುವುದನ್ನು ತೊರೆದು ನಿಮ್ಮ ನಗ್ನತೆಗಳನ್ನೊಮ್ಮೆ ಜೋರಾಗಿ ಕೂಗಿ ಹೇಳಿ
***
ಹಾರಗಳೇ ನಿಮಗೆ ಖುಷಿ ಕೊಡುವುದಾದರೆ 
ನೀವು ಶವವಾಗುವುದನ್ನು ಜಗತ್ತು ಕಾಯುತ್ತಿರುತ್ತದೆ 
***
ನೀವು ಎಷ್ಟೇ ಒಳ್ಳೆಯವರಾಗಿದ್ದರೂ 
ಕೆಟ್ಟ ಕೆಲಸಗಳು ನಿಮ್ಮಿಂದಲೂ 
ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಜರುಗೆ ಜರುಗುತ್ತವೆ
***
ಜಾತಿಯ ಬಂಡೆ ಕಲ್ಲಿಗೆ ತಲೆ ಚಚ್ಚಿಕೊಂಡರೆ 
ರಕ್ತ ಬರದೆ ತಲೆ ಹೋಳಾಗುತ್ತದೆ 
***
ನೀವು ಚಿಟ್ಟೆಗಳಾದರೆ 
ಹೂವು ಅರಳುವುದನ್ನು ನೋಡಬಹುದು
***
ಹೃದಯದಲ್ಲಿ ಬದುಕಿರುವವರ ಗೋರಿಗಳನ್ನು ಕಟ್ಟಿಕೊಂಡು ಅವರೊಡನೆ ನಾವೂ ಬದುಕುವುದು ಎಂದರೆ
ನೀವು ಸ್ಮಶಾನದಲ್ಲಿ ಜೀವಿಸಿದಂತೆ
***
ನಿಮ್ಮ ನಂಬಿಕೆಗಳು ನಿಮ್ಮೊಬ್ಬರವೇ ಆಗಿರದೆ 
ಎಲ್ಲರವೂ ಆಗಿದ್ದರೆ ನೀವು ಸಾರ್ವಕಾಲಿಕರಾಗುತ್ತೀರಿ
ಹಾಗೆಯೇ ಕವಿತೆಗಳೂ ಕೂಡ
***
ಪ್ರಶಸ್ತಿಗಳು ಕಿರಿಟಗಳೇ ಆದರೂ 
ಅವು ಬಂಗಾರ ಅಥವಾ ಮುಳ್ಳಿನವೋ 
ಎಂಬುದು ಬಹು ಮುಖ್ಯ
***

-ಕೃಷ್ಣ ಶ್ರೀಕಾಂತ ದೇವಾಂಗಮಠ

krishna-devangamath

 

 

 

 


 

ಇದೆಂಥ ತಳಮಳ
ಕಣ ಕಣದಿ ನೀ ಬೆರೆತಿರಲು, ಮನ ಮನದಿ ನೀ ನೆನಪಿರಲು

ಎಂದೋ ಆದ ಆ ಮಳೆಯ ಹನಿಯು
ಮಣ್ಣಿನ ಮಳೆಯ ಗುಣದ ಬೆರೆತ ವಾಸನೆಯು
ಕಣ್ಣು ಮುಚ್ಚಿ  ಅನುಭವಿಸಿದ ರೆಪ್ಪೆಯು
ರೆಪ್ಪೆಯ ಜೋಡಣೆಯ ಅನುಭವಿಸಿದ ಮನವು

ಮಿರ ಮಿರ ಮಿಂಚಿನ ಕಣ್ಣಿನ ಹೊಳಪು
ತಬ್ಬಿಕೊಂಡು ತಬ್ಬಿಬ್ಬಾದ ಎದೆಯದ ಬಡಿತು  
ಗರ ಗರ ತಿರುಗಿದ ತಲೆಯ ನೆನಪು
ಬಿಸಿಯಾದ  ಉಸಿರಿನ ಉಸಿರಿಗೆ  ಬೆರೆತು 

ಕಲರವ ತುಂಬಿದ ಪರಿಪೂರ್ಣ ಹೃದಯದ
ಝುಳು ಝುಳು ನಾದದ ಸುಗಮದ ಸಂಗೀತದ
ಬರ ಬರ ತುಂಬಿದ ಸಂತೋಷದ ಕಣ್ಣೀರು
ಮರ ಮರ ಮರುಗಿದ, ದುಃಖದ ಕೆನ್ನೀರು

ಇದೆಂಥ ತಳಮಳ
ಕಣ ಕಣದಿ ನೀ ಬೆರೆತಿರಲು, ಮನ ಮನದಿ ನೀ ನೆನಪಿರಲು
*****

ನನ್ನನ್ನು ನಾನೇ   ಹುಡುಕುವ ಆಸೆ ನಿನ್ನಲಿ
ಪ್ರತಿ ಕ್ಷಣವೂ ನಿನ್ನೇ  ನೋಡುವ ಬಯಕೆ ನನ್ನಲಿ

ನಿನ್ನದೇ ಬಿಂಬ ಎಂದು ಕನ್ನಲಿ
ಬೆರೆತಿರವೇ ನೀನು ನನ್ನ ಉಸಿರಲಿ
ಕಾರ್ಮೋಡ ಕವಿದಿದೆ ಹೃದಯದಲಿ
ಕಾಣದೆ ಇರದೇ ನೀನು ಎದುರಲಿ

ಮುದ್ದು ಮನಸಲಿ ಸಿಹಿಯಾದ ಕಚಗುಳಿ
ಗೊತ್ತಿಲ್ಲ ಯಾಕೆ ಮನ ಚಡಪಡಿಸುವುದು ನಿನ್ನ ಸನೀಹಕೆ
ಸೇಳೆದುಕೊ ನನ್ನ ನಿನ್ನ ತೋಳಲಿ
ತೋಳನ್ನೆ ಹೊತ್ಕೊಂಡು  ಬೆಚ್ಚಗೆ ಮಲಗುವ ಆಸೆ  ಏತಕೆ

ನಿನ್ನ ಬಿಂಬವೇ ಕಣ್ಣು ತುಂಬಿ ಕೊಂಡಿದೆ
ನನ್ನ ಎದೆ  ಬಡಿತವೇ ಈಗ ನಿನ್ನ ಹೆಸರಲ್ಲಿದೆ
ನಿನ್ನ ಲಾಲನೆ ಪಾಲನೆಗೆ ಮನ ಸೋತಿದೆ
ಕ್ಷಣ ಕ್ಷಣವೂ ನಿನ್ನ ನೆನಪೇ ಕಾಡುತಿದೆ

ನನ್ನನ್ನು ನಾನೇ   ಹುಡುಕುವ ಆಸೆ ನಿನ್ನಲಿ
ಪ್ರತಿ ಕ್ಷಣವೂ ನಿನ್ನೇ  ನೋಡುವ ಬಯಕೆ ನನ್ನಲಿ

ರಂಜಿತ್ ಪಿ. ಕೋಲ್ಕರ್​

ranjit-p-kolkar

 

 

 

 


 

ಅಂದಿದ್ದೆ,

ಇನ್ನೂ ಹಣವ ಬಿಡಬೇಕೆಂದಿದ್ದೆ .
ಯಾರಿಲ್ಲದ ನೋಡಿ 
ಅಜ್ಜಿಯ ಮಸಾಲೆಡಬ್ಬಿಯಲಿ 
ಅವಿತಿದ್ದ ಎಂಟಾಣೆ ಕದ್ದಿದ್ದೆ.

ಹೆಣವ 
ನೋಡಬಾರದೆಂದಿದ್ದೆ  .
ಕಣ್ಮುಂದೆ ಸತ್ತ ಅಜ್ಜನ 
ಕಣ್ಪಿಳಿಕಿಸದೆ ನೋಡಿದ್ದೆ .

ಇಂದಾದರು 
ಹೊಟ್ಟೆ ತುಂಬ ಉಣಬೇಕು ಎಂದುಕೊಂಡಿದ್ದೆ .
ಉಪವಾಸ – 
ದೇವರು ಕೊಟ್ಟ ಅನಿಯಮಿತ 
ಬಂಫರ್ ಉಡುಗೊರೆ ಎಂದು ಡೇಗು ಬಿಟ್ಟಿದ್ದೆ .

ಅನುದಿನವು ,
ನಗುನಗುತಿರಬೇಕೆಂದು ಕೇಳಿಸಿಕೊಂಡಿದ್ದೆ.
ದಿನರಾತ್ರಿ ,
ಅಪ್ಪನ ನೆನೆಸಿ 
ಅವ್ವ ಅಳುವುದ ನೋಡಿ ಕಣ್ಣೀರೊರೆಸಿದ್ದೆ.

ಬೆಳಗಿನ 
ಬಡತನ ಕಂಡು ಬೆವರಿದ್ದೆ .
ಕನಸಿನ ಸಿರಿತನ 
ಕಂಡು ನಿದ್ರೆಗೆ ದೂರವಾಗಿದ್ದೆ .

ನನಗೆ 
ಮರೆವಿನ ಕಾಯಿಲೆಯಿದೆ ಎಂದು 
ಸಂತೋಷಪಟ್ಟಿದ್ದೆ .
ಕಾಡುವ ನೆನಪುಗಳು 
ಭಾಸವಾದಾಗ ಸೋತು ಶರಣಾಗಿದ್ದೆ.

ಮೌನವಾಗಬೇಕೆಂದಿದ್ದೆ .
ತೊದಲಾಡುವವರ 
ಕಂಡು ತೊದಲಾಡಿದೆ .

-ಬಿ.ಎಲ್.ಆನಂದ ಆರ್ಯ

anand-arya

 

 

 

 


 

ವರುಷದಿಂ ವರುಷಕೆ 
ಮಳೆ ಕಡಿಮೆಯಾಗುತಿರೆ
ದಿವಸದಿಂ ದಿವಸಕೆ
ಇಳೆ ಒಣಗಿ ಬಾಯ್ಬಿಟ್ಟು ಗೋಳಿಡುತಿರೆ

ಹಸಿರುಟ್ಟ ಗಿರಿವನಗಳಂ ಕಡಿದು
ಬೃಹದಾಕಾರದ ಕಟ್ಟಡಗಳಂ ಕಟ್ಟಿ
ಬಣ್ಣ ಬಣ್ಣದ ಬಟ್ಟೆಗಳನ್ ತೊಡಿಸಿದೊಡೆ
ನೀ ಮಾಡಿಟ್ಟಿಹ ಮದ್ದು-ಗುಂಡುಗಳನುಂಡು
ಬದುಕಲಾದಿತೆ ಹೇಳು !?

ಬರಿದಾದ ಕಾಡುಮೇಡುಗಳತೊರೆದು
ಬಯಲಿಗೆ ಬಂದ ಪ್ರಾಣಿ ಪಕ್ಷಿಗಳು ಗೀಳಿಡುತಿರೆ…..ದಕ್ಕೀತೆ ಜಯ ?
ಇನ್ನಾದರೂ ಮರಗಿಡಗಳನುಳಿಸಿ  ನಿಸರ್ಗವನುಳಿಸು….

ಕಿವಿಮಾತಲ್ಲವೋ ಮೂಢ ಇದು ಕೊನೆಮಾತು.

-ನಗೆಮಲ್ಲಿಗೆ

anupama s gowda

 

 

 

 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x