ಶಾಂತಿಗೀತೆ
ಮುಗಿಲು..
ಕೆಂಡಕಾರುವ ಅಗ್ನಿಪಾತ್ರೆ
ನೆಲ..
ಕಿಚ್ಚು ಎಬ್ಬಿಸುವ ಒತ್ತಲು
ಗಾಳಿ..
ಕೊಳ್ಳಿಹೊತ್ತಿಸುವ ಕಟುಕ
ಮಳೆ..
ಬಾರದೆ ಕಾಡುವ ಇನಿಯ
ನಾನು..
ನೆಲವಾಗಬೇಕು ಮಲೆನಾಡ ಕಾಡಂತೆ
ಮುಗಿಲಾಗಬೇಕು ಹುಣ್ಣಿಮೆ ಇರುಳಂತೆ
ನಾನು..
ಗಾಳಿಯಾಗಬೇಕು.. ಬೆಂದೊಡಲ ತಣಿಸಬೇಕು
ಮಳೆಯಾಗಬೇಕು.. ನದಿಯಾಗಿ ಹರಿಯಬೇಕು
ನಾನು..
ಹಕ್ಕಿಯಾಗಬೇಕು.. ಗಡಿಗಳಾಚೆ ಹಾರಬೇಕು
ಮದ್ದುಗುಂಡು ಬರುವ ದಾರಿಹಾಯ್ದು ಆಚೆ
ಹೋಗಿ ಶಾಂತಿ ಸಾರಿ ಬರಬೇಕು
ಸರಹದ್ದಿನಗುಂಟ ಮುಳ್ಳಿನ ಬೇಲಿ
ನಿಬಿಡ ಸರಳುಗಳ ಪಂಜರ ಹೇಗೆ ಹಾರಲಿ?
ಬೇಡ.. ಬೇಡ..
ಈ ಜೀವಾವಧಿ ಶಿಕ್ಷೆ.. ನೀಡಬೇಡ..
ಅಮ್ಮ ಕೈಯೊಳಗಿನ ಚಿಮ್ಮಟಿಗೆಯ ಎಸೆದು
ನೀನಾದರೂ ಹೇಳು
ಅತ್ತಿಗೆ ಒಲೆಯ ಮೇಲಿನ ಹೆಂಚಿಳಿಸಿ
ನೀನಾದರೂ ಹೇಳು
ಈ ಮನೆ.. ಓಣಿ.. ಊರು..
ನಾಡು.. ಎಲ್ಲವೂ ಹೀಗೇಕೆಂದು?
ಅದೇಕೆ ಅಪ್ಪ ಚಿಕ್ಕಪ್ಪ ಬೆತ್ತಗಳಿಡಿದು
ಎದುರುಬದುರಾಗಿದ್ದಾರೆ
ಹೀಗಿರುವಾಗ ನಾನು ಹೇಗೆ
ನೆಲವಾಗಲಿ..? ಮುಗಿಲಾಗಲಿ..?
ಗಾಳಿ.. ಮಳೆಯಾಗಲಿ..?
ಹಕ್ಕಿಯಾಗಿ ಸರಹದ್ದುಗಳ ಮುರಿದು
ದೇವದಾರುಗಳ ಟೊಂಗೆಯ ಮೇಲೆ
ಕುಳಿತು ಶಾಂತಿ ಗೀತೆ ಹಾಡಲಿ..?
-ಗಿರೀಶ ಚಂದ್ರಕಾಂತ ಜಕಾಪುರೆ
*ಅಮ್ಮ ಐ ಲವ್ ಯೂ ಮಾ*
ನಾ ಕಂಡ ದೇವರು ನೀ
ನಾ ಕಂಡ ಗುರುವು ನೀ
ನಾ ಕಂಡ ದೈವವು ನೀ
ಅಮ್ಮ ಐ ಲವ್ ಯೂ ಮಾ…!
ನಾ ಕಂಡ ಜನ್ಮದಾತೇಯು ನೀ
ನಾ ಕಂಡ ಶಾಂತಿದಾತೇಯು ನೀ
ನಾ ಕಂಡ ಸತ್ಯದಾತೇಯು ನೀ
ಅಮ್ಮ ಐ ಲವ್ ಯೂ ಮಾ…!
ನಾ ಕಂಡ ಕರುಣಾ ಮಾತೇಯು ನೀ
ನಾ ಕಂಡ ಅನ್ನದಾತೇಯು ನೀ
ನಾ ಕಂಡ ಶ್ರಮಜೀವಿಯು ನೀ
ಅಮ್ಮ ಐ ಲವ್ ಯೂ ಮಾ…!
ನಾ ಕಂಡ ಬಾಳಿನ ಬೆಳಕು ನೀ
ನಾ ಕಂಡ ನಲಿವಿನ ಮಂತ್ರದಂಡವು ನೀ
ನಾ ಕಂಡ ಧನಿಯದ ಯಂತ್ರವು ನೀ
ಅಮ್ಮ ಐ ಲವ್ ಯೂ ಮಾ…!
ನಾ ಕಂಡ ನೋವು ಮರೆಸುವ ಮಂತ್ರವಾದಿಯೂ ನೀ
ನಾ ಕಂಡ ಭಾರ ಹೊರುವ ಭೂ ತಾಯಿಯೂ ನೀ
ನಾ ಕಂಡ ಸಂಬಳವಿಲ್ಲದ ಕಾರ್ಮಿಕಳು ನೀ
ಅಮ್ಮ ಐ ಲವ್ ಯೂ ಮಾ…!
ನಾ ಕಂಡ ಸಹನಾ ಮೂರ್ತಿಯೂ ನೀ
ನಾ ಕಂಡ ಕಲ್ಮಶವಿಲ್ಲದ ಹೃದಯೂ ನೀ
ನಾ ಕಂಡ ಸೌಂದರ್ಯವತಿಯೂ ನೀ
ಅಮ್ಮ ಐ ಲವ್ ಯೂ ಮಾ…!
ನನ್ನ ಮೊದಲ ತೋದಲ ನುಡಿಯೂ ನೀ
ಈ ಮಗ್ದ ಜೀವದ ಜೀವಾಳ ನೀ
ನಿನ್ನನ್ನು ಪಡೆದ ನಾನೇ ಧನ್ಯ
ನಿನ್ನ ಋಣ ತೀರಿಸಲು ಇರುವುದಾದರೇ
ಮರು ಜನ್ಮ ನೀನೇ ಆಗಲಿ ನನಮ್ಮ
ಓ ಜನ್ಮದಾತೆಯೇ ನಿಮಗೊಂದು
ನನ್ನ ಸಲಾಂ… ಸಲಾಂ….!!
ಅಮ್ಮ ಐ ಲವ್ ಯೂ ಮಾ…!
*ಜಗದೀಶ ದೊಡ್ಡಮನಿ*
ಅಸುನೀಗಬೇಡ ಅನ್ನದಾತ
ಕೋಟಿ ಜನರ ಹಸಿವು ನೀಗಲೆಂದು
ಮೇಟಿ ಹಿಡಿದೆ ಜಗವು ಬದುಕಲೆಂದು
ಚಳಿಗಾಳಿಗೆ ಮೈಯನಿರಿಸಿ
ಭೂತಾಯಿಗೆ ಬೆವರ ಸುರಿಸಿ
ಫಸಲು ಬೆಳೆಯ ಕಾಯಕ ಯೋಗಿ
ಬದುಕುತ್ತಿರುವೆನೀ ಎಂತಹ ತ್ಯಾಗಿ
ಲಾಭದಾಸೆಗೆ ಕಳಪೆ ಬೀಜಕೊಟ್ಟರು
ಅನ್ನಬೆಳೆವ ನಿನ್ನಾಸೆಗೆ ಕೊಳ್ಳಿ ಇಟ್ಟರು
ಬಿತ್ತಿದ ಬೀಜ ಮೊಳಕೆಯೊಡೆಯಲಿಲ್ಲ
ಕಲಬೆರಕೆಯ ಗೊಬ್ಬರ ಕಸುವು ನೀಡಲಿಲ್ಲ
ಮುಗಿಲೆತ್ತರ ಬೆಳೆದ ಬಿ.ಟಿ.ಹತ್ತಿ
ಬಸಿರಾಗಲಿಲ್ಲ, ಕಾಯೊಡೆದು ಅರಳಲಿಲ್ಲ
ಭತ್ತ, ರಾಗಿ, ಜೋಳ ಬೆಳೆದು ನೆಮ್ಮದಿಯಲ್ಲಿದ್ದೆ
ಕುಲಾಂತರಿ ತಳಿಗಳಿಂದ ಸಂಕಷ್ಟಕ್ಕೆ ಬಿದ್ದೆ
ಹೊಲದಲ್ಲಿ ಕೀಟಬಾಧೆ, ಊರಲ್ಲಿ ಸಾಲಬಾಧೆ
ಬೆಳೆದ ಬೆಳಗಳಿಗೆ ನೂರೊಂದು ರೋಗ
ಬೆಲೆ ಸಿಗದೇ ಚಿಂತೆಯಲ್ಲಿ ಮನೋರೋಗ
ಪರಿಹಾರ ಕೇಳಿದರೆ ಬರೀ ಹಾರಿಕೆಯ ಉತ್ತರ
ಬರಗಾಲದ ಬರೆಯಿಂದ ಬದುಕು ತತ್ತರ
ಜಗವು ಬೆಲ್ಲ-ಸಕ್ಕರೆ ಸವಿಯಲೆಂದು
ಕಬ್ಬು ಬೆಳೆದೆ ಬಲು ಹಿಗ್ಗಿನಿಂದ
ಆದರೆ . . . ಬೆಳೆದು ನಿಂತ ರಸದ ಕಬ್ಬು
ಕೊಯ್ಯಲಿಲ್ಲ, ಕಾರ್ಖಾನೆಗೆ ಒಯ್ಯಲಿಲ್ಲ
ಸಾಲದ ಗಾಣದಲಿ ಸಿಕ್ಕು ಸಿಪ್ಪೆಯಾದೆ
ಮುಂದಿನ ದಾರಿಕಾಣದೇ ಸಪ್ಪೆಯಾದೆ
ಕಾರ್ಖಾನೆಗಳೆಲ್ಲಾ ಬಹುತೇಕ ಇವರವೇ
ಹಾಗಾಗಿ ಪರಿಹಾರ ಸೂತ್ರಗಳು ಅವರವೇ
ಮರೆಯಲ್ಲಿ ನಿನ್ನ ಚಿವುಟಿ ಅಳಿಸುವರು
ಎಲ್ಲರೆದುರು ತೊಟ್ಟಿಲ ತೂಗಿ ನಟಿಸುವರು
ಅನ್ನದಾತ ಸಾಯುತ್ತಿರುವ ಇಂದು ಹಸಿವಿನಿಂದಲ್ಲ
ಅಸಹಾಯಕತೆಯಿಂದ, ಈ ಹಾಳು ವ್ಯವಸ್ಥೆಯಿಂದ
ಚಿನ್ನಬೆಳೆವ ಗಣಿಗಾರಿಕೆಗಿಂತ
ಅನ್ನಬೆಳೆವ ನಿನ್ನ ಹೊಣೆಗಾರಿಕೆ ದೊಡ್ಡದು
ಓಡುವ ಮೋಡಗಳು ಇನ್ನೆಷ್ಟು ದಿನ ಓಡಿಯಾವು
ನಿಂತು ನಾಲ್ಕು ಹನಿಯ ಚೆಲ್ಲಿ ತಂಪು ಮಾಡಿಯಾವು
ಅನ್ನದಾತ ನೀನಿಲ್ಲದೇ ಲೋಕ ಬದುಕೀತು ಹೇಗೆ ?
ಅಸುನೀಗಬೇಡ, ಭರವಸೆಯ ಕಳೆದುಕೊಳ್ಳಬೇಡ
ನಿನ್ನ ನಂಬಿದ ಕುಟುಂಬ, ಜಗವ ಅನಾಥವಾಗಿಸಬೇಡ
-ಸಿ.ಮ.ಗುರುಬಸವರಾಜ, ಇಟ್ಟಿಗಿ.
" ಹೊಲೆಗಾರ ನಾ "
ಶಿಲೆಯಲ್ಲಾ, ಕಲೆಯಲ್ಲಾ !
ಭವಬಂಧುವಲ್ಲ, ಅಲೆಯಸೆಲೆಯಲ್ಲ!
ಪಾಪವಿಲ್ಲ, ಪುಣ್ಯವಿಲ್ಲ,
ವೇದಗೋಷ್ಠಿಯ ವೇದಭಟ್ಟ ನಾನಲ್ಲ !
ಜಡಧರಿಯಲ್ಲ, ಶಂಖುಚಕ್ರವಿಲ್ಲ!
ಹಾವಿನಮಾಲೆಯಲ್ಲ, ಶ್ಮಶಾನಧಾರಿಯೂ ನನ್ನಲ್ಲಾ !
ಡಮರೂ, ಟಮಟೆಯ ಮೂರ್ತನೂ ನಾನಲ್ಲಾ !
ಆದಿಯಲ್ಲ, ಅಂತ್ಯವೂ ನನ್ನಲ್ಲ !
ಪುರಾಣದ ಹಂಗಿಲ್ಲಾ,
ವಿಭೂತಿಯ ಭವಭಯವಿಲ್ಲ!
ಕಾಶಿಯಲ್ಲೂ ನಾನಿಲ್ಲ,
ಹಿಮಾ-ಭುವದಲ್ಲೂ ನಾನಿಲ್ಲ!
ತಲೆಯಿಲ್ಲ, ಬಲೆಯಿಲ್ಲ,
ಶಿರವರವವ, ಹೊತ್ತುವ ನಾನಲ್ಲ!
ಗಂಗೆಯಲ್ಲ, ಶಿವೆಯಲ್ಲ,
ಹೊಲೆಯ ಒಲಿಯುವ,
ದಿಟ್ಟ ಶಿವ ನಾನು ನಾನು !
ಶಿವ ನಾನು !
ಕಾವಿಯುಟ್ಟವನ್ನಲ್ಲ, ಕಾಯಿಮುಟ್ಟವನ್ನಲ್ಲ,
ಜಾತಿ, ಧರ್ಮ, ಕುಲ ನೆಲವಿಲ್ಲ!
ಗುಡಿಯಲ್ಲ, ಮಡಿಯಲ್ಲ, ನಿಮ್ಮೆಲ್ಲರಾ
ಶಿವ ನಾನಲ್ಲ !
ಕರ್ಮದಪಶು ನಾನು,
ಕಾಯಕದ ನೆಲೆ ನಾನು !!
ಸರ್ವರ ಸರ್ವತಾ ಭವ ನಾನು,
ವಿಶ್ವದ ಭವಭೂತ ನಾನು,
ವಿಶ್ವದ ನಿರಾಕರ ನಾನು !
ಹೊಲೆಯ ಒಲಿಯುವ ,
ಹೊಲೆಗಾರ ನಾನು !
ಆ ಶಿವ ನಾನು ,.
ಶಿವ ನಾನು !
-ಬೆನಾಕೀ ತುಮಕೂರು
ಭೂಮಿ ತೂಗುವ ಹಕ್ಕಿ
ಈ ಬೆಳ್ಳಾನೆ ಬೆಳಗಿನಲ್ಲಿ
ಮುಂಬಾಗಿಲ ಅಂಗಳದಲ್ಲಿ
ಎಳೆ ಬಿಸಿಲೊಳಗೆ ಬಾಲ ಕುಣಿಸುತ್ತಾ
ಭೂಮಿಯನ್ನೇ ತೂಗುತ್ತಿದೆಯಲ್ಲಾ
ಎಲಾ! ಪುಟಾಣಿ ಚುರುಕು ಹಕ್ಕಿ
ಯಾರಿಟ್ಟರೋ ಹೆಸರು?
ಭೂಮಿ ತೂಗುವ ಹಕ್ಕಿ.
ಮೇಲಕ್ಕೊಮ್ಮೆ ಕೆಳಕ್ಕೊಮ್ಮೆ
ತೂಗಿದಷ್ಟೂ ತೂಗಿದಷ್ಟೂ
ಮೇಲಕ್ಕೂ ಏರುವುದಿಲ್ಲ;ಕೆಳಕ್ಕೂ
ಇಳಿಯುವುದಿಲ್ಲ.
ಸಮತೋಲನದ ಸಮಭಾರವಂತೂ
ಸಧ್ಯಕ್ಕೆ ಸಾಧ್ಯವೇ ಇಲ್ಲವಾ..?
ಅತ್ತೊಮ್ಮೆ ಇತ್ತೊಮ್ಮೆ ಮುಗಿಯದ
ಶತಪಥ.
ಪಾತಾಳಕ್ಕಿಳಿದ ಇಲ್ಲಿಯ ದು:ಖ
ಮುಗಿಲು ಮುಟ್ಟಿರುವಾಗ ಅಲ್ಲಿಯ ರೋದನ
ಕ್ಷಣಕ್ಕೊಮ್ಮೆ ಹತೋಟಿ ತಪ್ಪುವ ಬದುಕ ಸಂತೆಯ
ಭಾರ ವಹಿವಾಟಿನ ನಡುವೆ ಪುಕ್ಕದ ಅಳತೆಗೋಲು
ಹಿಡಿತಕ್ಕೆ ದಕ್ಕುವುದಿಲ್ಲ.
ಹಠಕಟ್ಟಿ ಉಸಿರೊತ್ತಿ
ಬಿರುಸಿನಲ್ಲಿ ಒಯ್ದಷ್ಟೇ
ರಭಸದಲ್ಲಿ ರಪಕ್ಕನೆ ಪ್ರತಿಭಾರಿ
ನೆಲಕ್ಕಾತು ಹೋಗುವ ವಿಫಲ ಪ್ರಯತ್ನ
ನೋಡುತ್ತಾ ನಿಂತ ನೆಲವೂ ನೆಟ್ಟ ಆಗಸವೂ
ಅರೆಗಳಿಗೆ ಕಂಪಿಸಿಕೊಂಡರೂ..
ಹಕ್ಕಿ ಬಾಲ ಕುಣಿಸುತ್ತಲೇ ಇದೆ
ಜಗದ ಭಾರವನ್ನೆಲ್ಲಾ ಹೆಕ್ಕಿ ಹೆಕ್ಕಿ
ಪುಕ್ಕದಲ್ಲಿಟ್ಟು ತೂಗುತ್ತಲೇ ಇದೆ
ನಿರುಕಿಸುತ್ತಾ ನಿಂತ ಅಂಗಳದೆದೆ
ಈ ಗಳಿಗೆಯಲ್ಲಾದರೂ ಹಗುರಗೊಳ್ಳುತ್ತಿದೆ.
ದಕ್ಕಿದ ನಿರಾಳತೆಗೆ
ಅತ್ತ ಇತ್ತ ನುಲಿಯುತ್ತಾ
ಪುರ್ರನೆ ಹಾರಿದೆ ಹಕ್ಕಿ
ತೂಗಿಕೊಳುವ ಕಾತರತೆಯಲ್ಲಿ
ಮತ್ತೆ ರಚ್ಚೆ ಹಿಡಿದಿದೆ ಭೂಮಿ.
– ಸ್ಮಿತಾ ಅಮೃತರಾಜ್. ಸಂಪಾಜೆ
ಕನಸಿನ ರಾಣಿ
ಮನದಲ್ಲಿ ಕಾಡುವ ನಿನ್ನಯ
ಉಳಿದ ನೆನಪುಗಳ ಸರಮಾಲೆ
ಬಂದು ಹೋಗುವ ಹಾಗೆ ನೀಡುತ್ತಿವೆ
ನಿನ್ನಯ ಸೌಂದರ್ಯದ ಸಂಗತಿಗಳು
ಯಾವ ಒಂದು ರೂಪವು ಸಹ
ಪಡೆದುಕೊಳ್ಳುತ್ತಿಲ್ಲ ನನ್ನಯ ಬದುಕಲಿ
ಆದರೂ ನನಗೆ ಗೊತ್ತು ನಿನ್ನಯ
ಪ್ರೀತಿಯ ನುಡಿ ಮುತ್ತುಗಳು ಪ್ರತಿಧ್ವನಿಸುತ್ತಿವೆ
ಕನಸುಗಳ ರಾಶಿಯಲ್ಲಿ ನಿನ್ನಯ
ಪ್ರೇಮದ ಚಂದಿರ ಬೆಳದಿಂಗಳು ಚಿಮ್ಮುಸುತ್ತಿರುವೆ
ಜೀವದ ಒಡತಿಯಾದರೂ ಸಹ ನಿನ್ನಯ
ಮಾರ್ದನಿ ಮೂಡುವ ಹಾಗೆ ಹಂಬಲಿಸುತ್ತಿರುವೆ
ಮನಸ್ಸಿನಲ್ಲಿ ಮೂಡುವ ನಿನ್ನಯ ರೂಪಕ್ಕೆ
ಒಂದು ನೆಲೆ ಎಂಬುದನ್ನು ಸೃಷ್ಟಿಸುತ್ತಲಿರುವೆ
ಖಂಡಿತ ಹೇಳುವೆ ಗೆಳತಿಯೇ ನೀನೇ
ನನ್ನ ಹೃದಯ ಅಂತರಾಳದ ಗೌಡತಿ ಎಂದೂ!
ಸಾರಿ ಸಾರಿ ಹೇಳುವೆ ನನ್ನಯ
ಮನದರಸಿ ನೀನೇ ಚಲುವೆ
-ನಾಗಪ್ಪ.ಕೆ.ಮಾದರ
-: ಭಾವ ದುಂದುಭಿ :-
ಮೂಖವಾಗಿದ್ದ ಮನಸು
ನಿನ್ನ ನಗು ತಾಕುತ್ತಲೇ
ರೆಕ್ಕೆ ಬಿಚ್ಚಿದ ಹಕ್ಕಿಯಂತಾಗಿ ಭಾವನೆಗಳ
ಆಗಸದಲ್ಲಿ ವಿಹರಿಸಲು ಅಣಿಯಾಗುತ್ತದೆ.
ಸಾಕಿನ್ನೆಂದು ಕೈಚೆಲ್ಲಿ ಹೋಗಿದ್ದ ಉಲ್ಲಾಸ
ನಿನ್ನ ನಗುವ ಮೂಸುತ್ತಲೇ ಮನಸಿನ ಮೂಲೆಯಿಂದ
ಮೆಲ್ಲಗೆ ಸೆಲೆಯುಕ್ಕಲಾರಂಭಿಸುತ್ತದೆ ಕೊರಕಲಿನ
ಕಿಂಡಿಯಿಂದ ಹರಿದುಬರುವ ನೀರ ಸೆಲೆಯಂತೆ.
ಮೊಗೆದಷ್ಟು ಬತ್ತದ ನಿನ್ನೊಲವ
ಒರತೆಯದು ನಿತ್ಯ ಬಿಕ್ಕಳಿಸುವ
ಮನಸಿಗೆ ಹೊಸ ಜೀವನೋತ್ಸಾಹವ
ಹೊಮ್ಮಿಸುವ ಅಮೃತಧಾರೆಯಂತಹುದು.
ಜಗದ ಲೆಕ್ಕದಲ್ಲಿ ಬಡವನೆನಿಸಿದ್ದರು
ಭಾವಾಂತರಂಗದ ಭಾವದೋಕುಳಿಯಲಿ
ಸಿರಿವಂತಿಕೆಗೇನು ಕೊರೆಯಿಲ್ಲ ನಿನ್ನೊಟ್ಟಿಗೆ
ಬೆಸೆದ ಹೃದಯದ ಕಿಮ್ಮತ್ತೇನು ಕಡಿಮೆಯಲ್ಲ.
-ಪ್ರವೀಣಕುಮಾರ್. ಗೋಣಿ