ಪಂಜು ಕಾವ್ಯಧಾರೆ

ಪಾಣೀಗ್ರಹಣ
ಎಲ್ಲೂ ಅವಳಿಗೊಂದು ಹೊಚ್ಚ ಹೊಸ
ಸವಿಯಿರುವ ವರ ಸಿಗುತ್ತಿಲ್ಲ
ದೇವಾನುದೇವತೆಗಳ ವರಗಳ ಸ್ಟಾಕ್
ಖಾಲಿಯಾಗಿದೆ……

ಹಣ್ಣು ರುಚಿಕಟ್ಟನ್ನು ಕಳೆದುಕೊಳ್ಳುತ್ತಾ
ರಾಶಿ ಬಿದ್ದಿರುವ ವಸಂತಗಳ ಎಣಿಸುತ್ತಿದೆ
ಮತ್ತೊಂದು ವಸಂತಕ್ಕೆ ಕಾದಿರುವ ಬೂರಗ
ಸತ್ತಂತೆ ನಿಂತಿದೆ ತಪೋನಿರತತೆಯಲ್ಲಿ

ವಸಂತ ಕಟ್ಟಲು ಬೇಕಿರುವ ಮತ್ತೆರೆಡು
ಜತೆ ಕೈಗಳು ಇಲ್ಲೆ ಎಲ್ಲೋ ಅಡಗಿರಬಹುದೆಂದು
ಉಳಿ ಸುತ್ತಿಗೆ ತೆಗೆದು ಕಟೆಕಟೆದು
ನೋಡುತ್ತಿದ್ದಾಳೆ  ನಿರರ್ಥಕವಾಗಿ

ಮನದ ಮಾದರಿ ಮಸಕಾಗುತ್ತಿರುವ
ಹೊತ್ತಲ್ಲಿ ಅದು ತನ್ನದೇ ಚಿತ್ರ !
ನಿರಾಶೆಯ ಮಡುವು ಸಂತೋಷದ ಚಿಲುಮೆ
ಒಟ್ಟೊಟ್ಟಿಗೆ ಕಣ್ಣಿ ಕಿತ್ತಂತೆ ಅವಳಿಗೆ

ಅವಳು ಅವಳೊಂದಿಗೇ
ಪಾಣೀಗ್ರಹಣಕ್ಕಿಳಿದಿದ್ದಾಳೆ……

-ಆಶಾಜಗದೀಶ್

asha-jagadish

 

 

 

 

 


 ಭುವಿಯ ಚಂದಿರ  
ಪ್ರಿಯ ಸಖಿ ಭುವಿ,
ಚಂದಿರನಿಗೆ …… 
ರವಿಯೂ ಬೆಚ್ಚುತ್ತಿದ್ದ ಒಮ್ಮೊಮ್ಮೆ,
ಅವರ ಈ ಸ್ನೇಹದ  ಪರಿಗೆ. 

ಕಾಣಸಿಗದಾಗ ವಸುಂಧರೆಯ,
ಮಳೆಗಾಲದಲ್ಲಿ……. 
ಬೆಳ್ಳಿಗೆರೆಯೊಂದಿಗೆ ಇಣುಕಿ ನೋಡಿ ನಗುತ್ತಿದ್ದ,
ಕಾರ್ಮೋಡ ಗಳ ಸರಿಸಿ ನಡುವಲ್ಲಿ….. 

ಅವನಿಗರಿವಿತ್ತು, ಮಳೆಬಿಲ್ಲನ್ನು ನೋಡಿ 
ಅವಳು ಮನಸೋತಾಗಲೂ …….. 
ಎಲ್ಲರನ್ನೂ ಮೀರಿ ಸೂರ್ಯ ಅವಳ 
ಬಾಳ ಬೆಳಕಾದಾಗಲೂ …….. 

ಭೂಮಿಯೂ ಜೊತೆಗಿದ್ದಳು ಶಶಿಯ ಬೇರ್ಪಡದೆ 
ಅವನು ತಂಗಾಳಿಯ ತೆಕ್ಕೆಗೆ ಸರಿದಾಗಲೂ ……. 
ಹೊಳೆವ  ತಾರೆಯರ 
ನೋಡಿ ನಸುನ ಕ್ಕಾಗಲೂ ……… 

ತಿಳಿನೀರಿನಂತಿತ್ತು ನಿಷ್ಕಲ್ಮಶವಾದ ಸ್ನೇಹ 
ನಡುವಲ್ಲಿ ಭೋರ್ಗರೆವ ಅಲೆಗಳ ಏರಿಳಿತಗಳಿದ್ದರೂ ಸಹ….. 

ರಹಸ್ಯಗಳಿಗೆ ಎಡೆಗೊಡದ ಸ್ನೇಹ ಅವರದು, 
ಭೂಮಿ ಅಹಂಕರಿಸಿದ್ದಳು …. 
ಪಾಪ!!  ಇದ್ದಳು ಅವಳಿಗರಿವಿಲ್ಲದೆಯೇ ಮುಂದು 
ಅವನಿಗೆಲ್ಲವಾಗುವವಳು …… 

"ಇವಳೇ  ನನ್ನ ಜೀವಸಖಿ ಧರೆ",
ಕೊನೆಗೊಮ್ಮೆ ಅವನಂದ ತೋರಿಸಿ "ಬೆಳದಿಂಗಳ"
ಸ್ಪಂದಿಸಲರಿಯದೆ ತಿಳಿನೀರು ಹೆಪ್ಪುಗಟ್ಟಿದ ಮಂಜಿನಂತಾಯಿತು 
ಭುವಿಯ ಮನದಂಗಳ …….. 
—ಶೀತಲ್ 

sheethal vansaraj

 

 

 

 


 

ಕೌದಿ ಮತ್ತು ಹಳೇಬೇರು 

ಬೆಳ್ಳಂಬೆಳಿಗ್ಗೆ ಚುಮುಚುಮು ಚಳಿಯಲ್ಲಿ
ಇವಳನ್ನೆ ಮೈತುಂಬಾ ಹೊದ್ದ  ಆಕೆ
ಎದುರಾಗುತ್ತಾಳೆ.
ಸುಕ್ಕುಗಟ್ಟಿದಚರ್ಮದ ಒಳಗೆ
ಎಲುಬಿನ ಸರಳುಗಳು
ಕಟಕಟನೆ ನಡೆಯುತ್ತವೆ.

ಚೂರುಚೂರೇ ಆರಿಸಿದ ಕತ್ತರಿಸಿ ಪೇರಿಸಿದ
ಒಂದರೊಳಗೊಂದಾದ
ಕೂಡಾಟ
ಊಹೆಗೂ ನಿಲುಕದಂತೆಒಗ್ಗಟ್ಟಿನ ಬಲ
ಬೆಚ್ಚಗಿನ ಹರವು ಹೆಚ್ಚಿಸಿ
ಹಾಡಾಗಿಸುತ್ತದೆ ಚಳಿಗೆ,
ವಿಸ್ಮಯ ಹುಟ್ಟಿಸುತ್ತವೆ
ಹಗಲು ಮತ್ತುರಾತ್ರಿ.

ಅವರಿಬ್ಬರ ಪಿಸುಮಾತುಗಳು
ಬೆಸೆದ ಹೃದಯ ಭಾವಗಳು
ಕುಲುಕಾಡಿದಷ್ಟು ಒಳಗೊಳಗೆ
ಆಕೆ ತಾನೆತಾ
ರೋಮಾಂಚನಗೊಳ್ಳುತ್ತಾಳೆ; ನೀರಾಗುತ್ತಾಳೆ.
ಮೈಮೇಲಿನ ಬಣ್ಣಬಣ್ಣದ ಚಿತ್ತಾರಗಳು ರೆಕ್ಕೆ
ಕಟ್ಟಿಕೊಂಡುಗಗನಕ್ಕೆರುತ್ತವೆ
.ತೃಪ್ತಿಯಉತ್ಕಟಉತ್ತುಂಗದಲ್ಲಿ
ಮೊನ್ನೆ ಮೊನ್ನೆ ಪಕ್ಕದ ಮನೆಯಲ್ಲಿ
ಹಸುಗೂಸಿಗೆ ನಾಮಕರಣ
ಇವಳ ಮಡಿಲಲ್ಲಿ ಬೆಚ್ಚಗೆ ಮಲಗಿದ್ದ
ಕಂದ ನಿರುಮ್ಮಳವಾಗಿತ್ತು.
ಹಳೆಯ ಬೇರಿಗೆ ಹಿಡಿದಿಟ್ಟುಕೊಳ್ಳುವ
ಸಾಮಥ್ರ್ಯ ಹೆಚ್ಚು. ದಿನಬೆಳಗಾದರೆ ಏರುತ್ತಿರುವ
ಚಳಿಯ ಚಂಡಮದ್ದಳೆಗೆ ಕಾವು ಕೊಡುವುದು
ಇವಳಿಗೆ ಚೆನ್ನಾಗಿಗೊತ್ತು
ಅವರಿಬ್ಬರೂ ಆಗಾಗ ಇವಳಿಗಾಗಿ
ಕಚ್ಚಾಡಿಕೊಳ್ಳುವುದು ಅಪ್ಪನಿಗೆಇಷ್ಟವಿಲ್ಲ
ಕೇಳಿದರೆ ಮಗನೆನ್ನುತ್ತಾನೆ.
“ಅಮ್ಮನ ಮಡಿಲು, ಅಮ್ಮನ ಮಡಿಲೇ”
ಅಪ್ಪ ಮುಗುಳ್ನಗುತ್ತನೆ.
-ನಾಗರೇಖಾಗಾಂವಕರ

nagarekha

 

 

 

 


 

" ಪ್ರೀತಿ ಪಯಣ "
ಇಳಿಸಂಜೆ ಹೊತ್ತಿನಲ್ಲಿ
ಸಾಗರದ ಮಧ್ಯದಲ್ಲಿ
ಒಬ್ಬಂಟಿಗನಾಗಿಯೇ
ಸಾಗುತ್ತಿದೇನೆ ಹುಡುಗಿ 
ನೀನಿರುವ ತೀರವನ್ನು
ಸೇರಲೇ ಬೇಕೆಂಬ ಆಸೆಯಾಗಿದೆ..!!

ಸಾಗರದ ಆಳವಂತೂ ನಾನರಿಯೇ
ಕೈಯಲ್ಲಿ ನೆನಪಿನ ಹುಟ್ಟು ಹಿಡಿದು
ಮನಸ್ಸಿನ ಹಡಗನ್ನು ಸಾಗಿಸುತ್ತಿರುವೆ
ನೀ ಸಿಗುವೆಯಂಬ ನಂಬಿಕೆ ನನ್ನದು…!!

ಮುಗಿಲೂ ಕಾಯುತ್ತಿದೆ ನೋಡು
ನಮ್ಮಿಬ್ಬರ ಮಿಲನಕ್ಕಾಗಿ….
ಭುವಿಗೆ ವಿದಾಯ ಹೇಳಬೇಕಿರುವ
ಸೂರ್ಯನು ಕೂಡಾ ಕಾಯುತ್ತಿದ್ದಾನೆ ನೋಡು
ನಿನ್ನ ನಾ ಸೇರುತ್ತೇನೆಂಬ ಭರವಸೆಯಲ್ಲಿ…!!

ಮತ್ತೇನು ಹೇಳಬೇಕಿದೆ ನಾನು
ನಿನ್ನ ಸೇರುವುದೊಂದೆ ಬಾಕಿ
ಬಾಕಿ ಉಳಿದ ಮಾತುಗಳನ್ನು 
ನಿನ್ನೊಟ್ಟಿಗೆ ಕೂತು ಹೇಳುವೆನು..!!

ಇನ್ನೂ ಎಷ್ಟು ಬರೆದರೇನು
ನಿನ್ನ ನೆನಪುಗಳು ಅಲ್ಲಿಗೂ
ನುಸುಳಿಕೊಂಡು ಬರುತ್ತವೆ
ಪೂರ್ಣಚಂದ್ರ ಬರುವ ಮುನ್ನ 
ನೀನಿರುವ ತೀರವನ್ನು ಸೇರುತ್ತೇನೆ..!!

-ಶಿವು ನಾಗಲಿಂಗಯ್ಯನಮಠ

shivu-nagalingayyanamata

 

 

 

 


ಕ್ಷಮಿಸಿಬಿಡು ಗೆಳತಿ

ಆಗ…
ಯುನಿಪಾರಂಗೆ ಹೋಂದಿಸಿದ ಬೈತಲೆಯ ಎರಡು ಜಡೆ
ಮಿಟುಕಿಸಿದ ಬಲಗಣ್ಸನ್ನೆ  
ಅವ್ವ ಸುಟ್ಟ ರೋಟ್ಟಿಯ ಕಮರು ವಾಸನೆಯಲ್ಲಿ 
ನಿನ್ನ ನೋಡಿ ತೇಲಿಹೋಗುತ್ತಿದ್ದೆ ತುಂಟ ಕಣ್ಗಳಲಿ…
ನನಗನಿಸಲೇ ಇಲ್ಲಾ ಇದೇ ಪ್ರೀತಿಯೆಂದು!!

ನಂತರ.. 
ಪುಸ್ತಕದೊಳು ಹುದುಗಿಟ್ಟ ಮುಗ್ದ ಮೊಗ,
ಮೊದಮೊದಲು ತೊಟ್ಟ ಲಂಗದಾವಣಿಯ
ಜೊತೆಗಿನ ಕಾಲ್ಗೆಜ್ಜೆಯ ಹೊಸ ಹೆಜ್ಜೆ 
ಕೊಚ್ಚೆಯ ಕೊಳದಿಂದೆದ್ದ. ತಾವರೆಯಂತೆ 
ತುಟಿಯಂಚಿನ,ಕಣ್ಣಂಚಲಿ ಮಿಂಚಿಮರೆಯಾದ 
ಕುಡಿನಗುವಿನಲ್ಲಿ ಎಲ್ಲಾ ಮರೆಯುತ್ತಿದ್ದೆ…   
ನನಗನಿಸಲೇ ಇಲ್ಲಾ!!!  ಇದೇ  ಪ್ರೀತಿಯೆಂದು!? 

ತದನಂತರ
ಕಟ್ಟೆಯೊಡೆದ ಯವ್ವನದ  ಬೀಬತ್ಸ ರಣಾಂಗಣದಲಿ  
ಕಣ್ಣಲ್ಲೆ ಕೆಣಕಿ ಯುದ್ದಕ್ಕೆ ಕರೆದು  ತಣ್ಣಗೆ ಹೋರಾಡುತ್ತಾ
ಕಣ್ಣಂಚಿನ ಬಾಣಕ್ಕೆ ಶಿರಭಾಗಿ ಶರಣಾದೆ!!   
ನನಗನಿಸಲೇ ಇಲ್ಲಾ!?  ಇದೇ ಪ್ರೀತಿಯೆಂದು!? 

ಆಮೇಲೆ…
ದೀನಾಲು ಮಾಗಿಯ. ಚಂದಿರ ಹಠಹಿಡಿಯುತ್ತಿದ್ದ 
ರಚ್ಚೆಹಿಡಿದು ಕೇಳುತ್ತಿದ್ದ!  ಯಾರಾಕೆ ಶ್ರಂಗಾರಿಯೆಂದು!?  
ನಿರಾಭರಣ ಸುಂದರಿ ಎನ್ನುತ್ತಿದ್ದೆ   ಆವಾಗೆಲ್ಲಾ 
ಕೊನೇಭಾರಿ  ಎಂಬಂತೆ ಕತ್ತು ಹಿಗ್ಗಿಸಿ ನೋಡುತ್ತಿದ್ದೆ.
ನನಗನಿಸಲೇ ಇಲ್ಲಾ!!  ಇದೇ ಪ್ರೀತಿಯೆಂದು!?  

ಕೊನೆಯದಾಗಿ…
ಹೌದು!! ನಾನೊಂದಿಷ್ಟು  ಗೆರೆದಾಟಿ ನಿಲ್ಲಬೇಕಿತ್ತು 
ನೆನಪುಗಳ ಪ್ರವಾಹ ದಡತೋಯ್ಯತ್ತಿರುವಾಗ. 
ಹಾಗೆ ಸುಮ್ಮನೆ ನಗುತ್ತಿರುವಾಗ   
ಅವಳು ನಿಂತುನೋಡುವ   ಭಾಗಿಲಿಗೆ ತೋರಣ ಬಿಗಿದಾಗ
ಅವಳ ಬೀದಿಯಲ್ಲಿ ಜನ ಸೇರಿದಾಗ  
ಕೊನೇಸಾರಿ ಕಣ್ಣಲ್ಲೇ ಅತ್ತಾಗ
ನನಗನಿಸಲೇ ಇಲ್ಲಾ!!  ಇದೇ ಪ್ರೀತಿಯೆಂದು!?
    
ಎಲ್ಲಾ ಮುಗಿದ ಮೇಲೆ…
ಕ್ಷಮಿಸಿಬಿಡು ಗೆಳತಿ  
ಕನಸುಗಳ ಶವಕ್ಕೆ ಬೆಂಕಿ ಹಚ್ಚಿಯಾಗಿದೆ
ನೆನಪುಗಳ  ಗಂಟುಮೂಟೆ ಮಾಳಿಗೆ ನೋಡುತ್ತಿವೆ
ಇಂದು ಹದಿನಾಲ್ಕನೆಯ ತಾರೀಕು…
-ರೋಹಿತ್ ಶೆಟ್ಟಿ ಮೇಲಾರಿಕಲ್ಲ್

rohith-shetty

 

 

 

 


 

ಕವಿತೆಯಲ್ಲ ಭಾವ 

ದೂರ ಉಳಿದುಬಿಡಬೇಕೆಂದುಕೊಳ್ಳುತ್ತೇನೆ ನಿನ್ನಿಂದ 
ಮಾತಿಲ್ಲದೆ ಕತೆಯಿಲ್ಲದೆ ಮೌನಗತಿಯಾಗಬೇಕು 
ನಿನ್ನ ಕೈ ಚಾಚುವ ಅಳತೆಯಲ್ಲಿ ಸುಮ್ಮನೆ ಮಲಗಿ 
ವಿರಹ ವೇದನೆ ನೀಡಬೇಕೆಂದುಕೊಳ್ಳುತ್ತೇನೆ 
ದಿನವೂ ಒಂದೇ ತಟ್ಟೆಯಲ್ಲಿ ತಿನ್ನುವಾಗ ಇಂದು 
ಬೇರೆ ಬೇರೆ  ತಟ್ಟೆಗಳ ತೆಗೆದು ಮುಂದಿಟ್ಟು 
ನನ್ನಷ್ಟಕ್ಕೆ ನಾ ಬಡಿಸಿಕೊಂಡು ತಿನ್ನಬೇಕೆಂದುಕೊಳ್ಳುತ್ತೇನೆ 
ಬೆಳಗೆದ್ದು ನಿನ್ನೆಡೆಗೆ ತಿರುಗಿಯೂ ನೋಡದೆ  
ನಾ ನನ್ನ ಕಾರ್ಯಕ್ಕೆ ಹೊರಟುಬಿಡಬೇಕೆಂದುಕೊಳ್ಳುತ್ತೇನೆ
ಸಂಜೆ ನಿನ್ನ ಬರುವಿಕೆಗಾಗಿ ಕಾಯದೆ  ನನ್ನಷ್ಟಕ್ಕೆ ನಾ ಉಂಡು ಮಲಗಬೇಕೆಂದುಕೊಳ್ಳುತ್ತೇನೆ
ಯಾವುದು ಸಾಧ್ಯವಿದೆ ಗೆಳೆಯ ಇವುಗಳಲ್ಲಿ
ನಿನ್ನೆದೆ ಬಡಿತದ ಜೋಗುಳವಿಲ್ಲದೆ ನಿದ್ರಿಸಬಲ್ಲೆನಾ ನಾನು
ಒಂದೆ ತಟ್ಟೆಯಲ್ಲಿ ಕುಳಿತು ಸಾಕೆಂದು ನಾ ಮೇಲೆಳುವಾಗ ನೀ ದುರುಗುಟ್ಟಿ ಕೊನೆಗೊಂದು ತುತ್ತಿಡದೆ ಹೋದರೆ ತುಂಬುವುದೆ ನನ್ನಸಿದ ಹೊಟ್ಟೆ
ನೀ ತಡವಾಗಿ ಬಂದಾಗ ಹುಸಿಮುನಿಸು ತೋರಿ ಊದಿದ ನನ್ನ ಕೆನ್ನೆಗಳು ನಿನ್ನ ಬಿಸಿಯುಸಿರ ತಾಕದೆ ಸುಮ್ಮನಾಗುವವೆ, 
ಮುಂಜಾವಿನೊಳು ನಿದ್ರೆಯಾರದ ನನ್ನ ಕಣ್ಣುಗಳು ನಿನ್ನ ನೋಡದೆ ದಿನ ಕಳೆಯಬಲ್ಲವೇ..

*****

ನಿರೀಕ್ಷೆ 

ಪ್ರತಿ ಋತುವು ಹತ್ತಿರ ಬಂದತ್ತೆಲ್ಲಾ 
ಅವಳೊಳಗೊಂದು ಉದ್ವೇಗ
ನಂಬಿಕೆಯ ಬೀಜ ಸಣ್ಣ
ಮೊಳಕೆಯೊಡೆದಂತ ಭಾವ..
ಸಣ್ಣ ಸಣ್ಣ ಬದಲಾವಣೆಗೂ 
ಖುಷಿ ಗೊಳ್ಳುತ್ತಾಳೆ
ಎದೆಯೊಳಗೆಲ್ಲೋ ಉರಿಯಂತೆ
ಇರಬಹುದೇನೋ ಶುಭ ಸೂಚವೆಂಬಂತೆ
ಉದ್ವೇಗದಿಂದ ಊಟ ಸೇರಲೊಲ್ಲದು
ಅವಳೆಂದುಕೊಳ್ಳುತ್ತಾಳೆ ಇದು ಶುಭ ಲಕ್ಷಣ
ದಿನಗಳೆಯಿತು ಇನ್ನು ಋತು ಕಳೆದಿಲ್ಲ
ಅವಳೊಳಗೆ ಹೆಚ್ಚಾದ ಆವೇಗ
ಆ ಖುಷಿಯಲ್ಲಿ ಭವಳಿ ಬಂದಂತೆನಿಸುತ್ತದೆ
ಹುಚ್ಚೆಂದಂತೆ ಕುಳಿಯುವುದವಳ ಮನ
ಇದುವೂ ಶುಭ ಸೂಚನೆ
ರಾತ್ರಿ ಮಲಗುವ ಮುನ್ನ 
ಕುಲಾವಿಯ ಕನಸ ಹೆಣೆಯುತ್ತಾ
ಮಲಗುತ್ತಾಳೆ ಸಿಹಿ ನಿದ್ದೆಯನರಸಿ…
ಬೆಳಗೇಳುವಾಗ ಸೊಂಟದಲ್ಲೆಲ್ಲೋ 
ಕತ್ತರಿಯಾಡಿಸಿದ ಅನುಭವ
ಸುಂದರ ಕನಸು ಭಂಗವಾಗುತ್ತದೆ
ಮತ್ತೆ ಕಾಯುತ್ತಾ ಕುಳಿತುಕೊಳ್ಳುತ್ತಾಳೆ
ಮುಂದಿನ ಋತು ನಿಲ್ಲುವ ಸೂಚನೆಗಾಗಿ…

-ಲಾವಣ್ಯ ಸಿದ್ದೇಶ್ವರ್ 

Abhi Sarike

 

 

 

 


 

ಗಜಲ್  

ಮಣ್ಣಲ್ಲಿ ಮಣ್ಣಾಗಲು ಕಾದಿದೆ ಕಾಯ ಅದಕ್ಕೆ ಉಸಿರೊಳಗೆ ಉಸಿರಾಡುತ್ತಿರುವೆ
ದಿನಗಳು ಎಣಿಸುತ್ತಿರುವೆ ಅನುದಿನವು ಸಂಬಂಧಗಳು ಸಡಿಲ ಆದರೂ ಉಸಿರಾಡುತ್ತಿರುವೆ

ನಯವಂಚಕರು ಮಾಡಿದ ನೋವುಗಳು ಮನೆ ಮಾಡಿವೆ ಹೃದಯದಲ್ಲಿ
ಶಮಾ ಕರಗುತ್ತಿದೆ ಡೋಲಿ ಸಿದ್ಧವಾಗಿದೆ ಆದರೂ ಉಸಿರಾಡುತ್ತಿರುವೆ

ಕ್ಷಣ ಕ್ಷಣವೂ ಹೆಚ್ಚಾಗಿದೆ ಯಮನ ಹೆಜ್ಜೆಯ ಸದ್ದು ನನ್ನತ್ತ
ಜೋಳಿಗೆ ಹಿಡಿದು ನಡೆಯುವಾಗ ದರ್ದ್ ಕಾಣುತ್ತವೆ ಆದರೂ ಉಸಿರಾಡುತ್ತಿರುವೆ

ನನ್ನ ನಶೀಬ್‍ನಲ್ಲಿ ಇನ್ನಿಲ್ಲ ಸುಖದ ದಿನಗಳು ಮಸಣ ಕರೆಯುತಿದೆ
ರೋಸಿ ಹೋಗಿದೆ ಜೀವ ಸಾಕಾಗಿದೆ ಜೀವನ ಆದರೂ ಉಸಿರಾಡುತ್ತಿರುವೆ

“ಬೆಂಗಾಲಿ”ಯ ಹಮ್‍ದರ್ದ್‍ಗೆ ಮುಲಾಮು ಹಚ್ಚದಷ್ಟು ದೊಡ್ಡ ಘಾಸಿ
ಸಹಾಯ ಹಸ್ತಗಳು ಮುದುರಿಕೊಂಡಿವೆ ಆದರೂ ಬಯಲ ತುಂಬ ಉಸಿರಾಡುತ್ತಿರುವೆ

ಈರಣ್ಣ ಬೆಂಗಾಲಿ

earanna-bengali

 

 

 

 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x