"ಶಬ್ದಾರ್ಥ ಶಿಲ್ಪ"
ಕಾವ್ಯವೆನುವುದು ಒಂದು ಶಬ್ದಾರ್ಥ ಶಿಲ್ಪ
ಕವಿಯ ಕೈಯಲಿ ನುಡಿಗೆ ಕಾಯಕಲ್ಪ
ಸಾಹಿತ್ಯ ಸಂಸ್ಕೃತಿಯ ಶೃತಿನಾದ ಹಿಮ್ಮೇಳ
ಲಯಬದ್ದ ಪ್ರಾಸವಿಹ ರಸ ಭಾವಗಳ ಮೇಳ
ಸಕಲ ಕಲೆಗಳ ಮೂಲ ವೈವಿಧ್ಯತೆಯ ವರ್ಣಜಾಲ
ನವರಸಗಳು ಕೂಡಿ ಆದ ಪದ ವಾಕ್ಯಗಳ ಮೋಡಿ
ಜಗದ ಜನ ಜೀವನದ ನಲಿವು ನೋವಿನ ಕಥನ
ನಾಕ ನರಕದ ಸೃಷ್ಟಿ ವ್ಯಕ್ತಿ-ಸಮಷ್ಠಿಗೆ ಪುಷ್ಟಿ
ರವಿ ಕಾಣದೆಡೆಯಲ್ಲು ಕಂಡ ಕವಿಗಳ ಕಾಣ್ಕೆ
ರಸ-ವಿರಸಗಳ ನಡುವೆ ನವರಸದ ಪೂರೈಕೆ
ನಗುವ ಮಗುವಿನ ಹಾಗೆ ಮನಸೆಳೆವ ಚೆಲುವಿನ ಹಾಗೆ
ಚೆಲುವಿಕೆಯೆ ಮೈವೆತ್ತು ಬಂದ ಜೀವನದಿಯ ಹಾಗೆ
ಸೃಷ್ಟಿ ಸೊಬಗುಗಳೆಲ್ಲ ಮೇಳೈಸಿ ಮೂಡಿ ಬರುತಿರೆ ಕಾವ್ಯ
ರಸದೃಷ್ಟಿಗೊಲಿದ ರಸಿಕರಿಗೊಪ್ಪುವುದು ಸಂಭಾವ್ಯ
***
"ಮರಳಿ ಬೇಂದ್ರೆಯ ಊರಿಗೆ"
ಧಾರವಾಡದ ಕರಿ ಮಣ್ಣು
ಕಪ್ಪನೆಯ ಸಿರಿ ಹೊನ್ನು
ಅರಳೆ, ಜೋಳದ ರಾಶಿ
ಸಮೃದ್ಧ ಸ್ವದೇಶಿ
ಪಚ್ಚೆ ಹೊಲಗಳ ಬಯಲು
ಹಸಿರು ಮರಗಳ ಸಾಲು
ಮಳೆಬಂದರದೆ ಸೊಗಸು
ಬಿಸಿಲು ಬಲು ಬಿರಿಸು
ಇಲ್ಲಿ ಎಲ್ಲರೂ ಕವಿ
ನುಡಿ ಇಲ್ಲಿ ಜೇನ ಸವಿ
ಬಂದೆ ಸಾಧನಕೇರಿಗೆ
ಮರಳಿ ಬೇಂದೆಯ ಊರಿಗೆ.
-ಮಾ.ವೆಂ.ಶ್ರೀನಾಥ
ಗಜಲ್
ನನ್ನವಾಗಿದ ಎಷ್ಟೋ ಗಳಿಗೆಗಳು ಕಳೆದುಹೋದವು
ಅಹಲ್ಯೆಯಾಗಿ ಎಷ್ಟೋ ಶತಮಾನಗಳು ಕಳೆದುಹೋದವು
ನೀ ಕೊಟ್ಟ ಪುಸ್ತಕವನ್ನೇ ಓದುತ್ತಿದ್ದೆ ಅದರಲ್ಲಿದ್ದವು
ಕಂದುಗಟ್ಟಿದ ಗುಲಾಬಿಯ ಎಷ್ಟೋ ದಳಗಳು ಕಳೆದುಹೋದವು
ನವಿರು ಕಂಪೊಂದು ಹೊತ್ತು ತಂದಿತು ತಂಗಾಳಿ
ಸವೆದ ಪ್ರೀತಿಯ ಎಷ್ಟೋ ಹನಿಗಳು ಕಳೆದುಹೋದವು
ಆಗಸದುದ್ದಕ್ಕೂ ಕಣ್ಣಿಗೆ ಕಟ್ಟುವ ಹೊಂಗನಸುಗಳು
ಬಣ್ಣಕಟ್ಟದೆ ಯವ್ವನದ ಎಷ್ಟೋ ಋತುಗಳು ಕಳೆದುಹೋದವು
ರಾಜಿಯಾಗಿ ನಿಲ್ಲಿಸುವ ಹಾಗಿರಲಿಲ್ಲ ಆ ಕ್ಷಣಗಳನ್ನು
ಕಟ್ಟಿದ ಗಜಲ್ ಒಂದರ ಎಷ್ಟೋ ಪದಗಳು ಕಳೆದುಹೋದವು ..
-ಎಂ. ಎಂ . ಶೇಕ್ ಯಾದಗಿರಿ
ಮರಳಿ ನೋಡಿದಾಗ
ಮಾಸದ ನೆನಪುಗಳು ಮನದೊಳಗೆ ಹೊಳಪಾಗಿವೆ
ಆಡಿದ ಆಟ, ನೂಕಾಟ, ರೇಗಿಸೋ ಚಟ,
ಯಾವವೂ ಮರೆತಿಲ್ಲ ದಿಟ.
ಮತ್ತೆ ಮಕ್ಕಳಾಗಲು ಆಗದು ಆದರೂ ಮಕ್ಕಳಂತೆ
ಇರಲು ಬಯಸುವ ಮನಸಿಗೂ
ಮಕ್ಕಳಂತಿರಬೇಕೆಂಬ ಆಸೆಯಾಗುತಿದೆ
ಆಡೋಣ ಬನ್ನಿ ..
ಬರುವಾಗ ಮುರಿದ ಸೈಕಲ್ ಟೈರು, ತಿಂದು ಬೀಸಾಕಿದ
ಅಯಿಸ್ಕ್ರೀಮ್ ಕಡ್ಡಿ, ತೆಂಗಿನಗರಿಯ ಬಾರಕೋಲು
ಕಡ್ಡಿಪೆಟ್ಟಿಗೆಲ್ಲಿಟ್ಟ ಆ ಬೋರಂಗಿ,
ಓಲ್ವೋ ಬಸ್ ಓಡಿಸೋಣ ಜೊತೆಗೊಂದು ಇಟ್ಟಿಗೆ ತನ್ನಿ.
ಅಂದಿನ ಆಟದಲಿ ಪಾಠವೇ ಅಡಗಿತ್ತು
ಅದೂ ಬದುಕಿನ ಪಾಠಗಳೇ ಜಾಸ್ತಿ
ಮಣ್ಣಿನ ಪಾತ್ರೆಗಳ ಸೆಟ್ಟು ರಾಡಿಯೊಳಗೆ ಮಾಡಿದ ರೊಟ್ಟಿ
ಎಲೆಗೆ ತೂತು ಹಾಕಿ ಮಾಡಿದ ದೋಸೆ
ಮೆತ್ತೆಪಲ್ಲೆಯಾಗಿ ಚೊಗಚಿ ತಪ್ಪಲು
ಎಲ್ಲ ಅಂದ್ರೆ ಎಲ್ಲಾನೂ ಇತ್ತು.
ನಾನು ಕೆಲಸಕೆ ಹೋಗಿ ಬರುವೇ ನೀ ಆಪಿಸಿಗೆ ಹೋಗಿಬಾ
ಈ ಕೆಂಪು ಇಟ್ಟಿಗೆ ನಂದು
ಆ ಜಾತ್ರೆಯ ಟ್ರಕ್ಕು ನಿಂದು ಬರುವಾಗ
ಸಂತೆಯ ಜೊತೆಗೆ ವಿಷೇಶವಾದ ತಿನಿಸು ಬಜಿ,
ಬಿಳಿಬಿಸ್ಕಿಟ್ಟು, ಚುರುಮುರಿ,
ಎಲ್ಲಿದೆ ಇಂದು ಆ ಪರಿ ?
ಕಾಲ ಸರಿದುಹೋದರೂ ಕಳೆದ ಕ್ಷಣಗಳು
ಕಣ್ಣಮುಂದೆ ಕುಣಿದು ಸಂತಸಗೊಳಿಸುತ್ತವೆ
ಉಸುಕಿನಲಿ ಕಟ್ಟಿದ ಗುಬ್ಬಿಗೂಡು ಮನಕೆ ಬೆಚ್ಚನೆಯ
ನೆನಪನೊದಗೊಸಿ
ಮುಸುಕಿನಲಿ ಮಚ್ಚಿಕೊಂಡು ತಿಂದ ಅನುಭವ
ಮತ್ತೆ ಮತ್ತೆ ನೆನಪಾಗಿ
ಇಂದಿನ ಮಕ್ಕಳೊಳಗೆ ಮಕ್ಕಳಾಟವ
ಕಾಣಲು ಹೋದರೆ ಕಾಣದು
ಎಂಬ ನೋವನೇರಿ ಮತ್ತೆ ಮರಳುವೆ ಹಿಂದೆ…!!
-ಸುರೇಶ್.ಎಲ್.ರಾಜಮಾನೆ, ರನ್ನಬೆಳಗಲಿ..
ಕವಿತೆಯೆಂದರೆ
1
ಕವಿತೆಯೆಂದರೆ
ಚಂದ್ರನ ಮೇಲಿನ ಕಪ್ಪು ಕಲೆ
ನಿಶೆಯ ನಿದ್ದೆಗೆಡಿಸುವ ಉಷೆ
ಬಾನಿನ ಅಗಾಧತೆ ಭಾನುವಿನ ಪ್ರಖರತೆ
2
ಕವಿತೆಯೆಂದರೆ
ರಕ್ತದೊಳಗಣ ಕೆಂಪುಕಣ
ತಲೆಯೊಳಗಣ ಜ್ಞಾನಗಣ
ಕೈಯಲ್ಲಿಯ ಕಸಬರಿಗೆ
3
ಕವಿತೆಯೆಂದರೆ
ಭೋಗದ ಪ್ರತಿಫಲನ
ಮಿರುಗುವ ಮಕಮಲ್ಲಿನ ಹೊದಿಕೆ
ಧಗಧಗಿಸುವ ಕೆಂಡದ ಮೇಲಿನ ನಡಿಗೆ
4
ಕವಿತೆಯೆಂದರೆ
ಹುಲ್ಲಿನ ಬುಡದ ಬೇರಿನ ಕಂಪು
ಕೆಚ್ಚಲಿಗೆ ಬಾಯಿಟ್ಟ ಹಸುಗರುವಿನ ಹುಮ್ಮಸ್ಸು
ಹದಗೆಟ್ಟ ವಾಸ್ತವ್ಯದ ಹರಕು ಚಾಪೆ
5
ಕವಿತೆಯೆಂದರೆ
ವಾಚ್ಯ ಸೂಚ್ಯಗಳ ಸೂತಕ ಕೊಳೆ
ಕೀರ್ತಿಶೇಷರ ಕಸರತ್ತು ಖಾನೆ
ವಿದ್ವಾಂಸರ ಸರಕಿನ ವ್ಯಾಪಾರ
ಕವಿತೆಯೆಂದರೆ ಜೂಜು, ನಾಣ್ಯ, ವೈಯಾರಿ
ಕವಿತೆಯೆಂದರೆ ಮಗು, ದೈವ, ರಾಕ್ಷಸ
-ನಾಗರೇಖಾ ಗಾಂವಕರ
ನಾನು ಮತ್ತು ನಾನು!
ಸಾಕು ನಿನ್ನ ಸಹವಾಸ
ಆಗಸದ ಅಶ್ವಿನಿ ದೇವತೆಗಳು ತಥಾಸ್ತು ಎಂದರೆ?
ಹೊಸಿಲು ದಾಟಿಯೇ ಬಿಟ್ಟಳು
ಹಿಂದಿರುಗಿ ನೋಡದೆ
ಬೆನ್ನಿಗೆಲ್ಲಿಯ ಕಣ್ಣುಗಳು?
ಹೇಳಬೇಕಾದುದನೆಲ್ಲ ಅರುಚಿ ಕಿರುಚಿಯಾಗಿದೆ
ಒಳಗಿಳಿದು ನೆಲೆನಿಂತವಳು
ಹೊರಗಡಿಯಿಟ್ಟು ಮಲೆಯೇರಿ ಕುಂತಳು
ಕಟ್ಟಿಕೊಂಡ ಪುಟ್ಟಗೂಡಿನೊಳಗೀಗ
ಹಕ್ಕಿಗಳು ಬರುವುದಿಲ್ಲ
ಕಾಳು ಹೆಕ್ಕಿ ಹೋದವಕೆ ವಿಳಾಸ ತಿಳಿದರೂ
ಬರುವ ಇರಾದೆಯಿರದ ಮೇಲೆ
ಕರೆದರೂ ಬಂದಾವು ಹೇಗೆ
ಹೋದವಳಿಗ್ಯಾವ ಹಾದಿ ತೆರದಿದೆಯೋ
ಕಳಿಸಿಕೊಟ್ಟವನಿಗ್ಯಾವ ನರಕ ಕಾದಿದೆಯೊ
ಇನ್ನೆಷ್ಟು ವರುಷಗಳ ಬದುಕು
ಕಳೆದುಕೊಂಡವರಿಗೆಲ್ಲಿಯ ದಿಕ್ಕು
ಆಕಾಶದಷ್ಟೂ ನಕ್ಷತ್ರಗಳ ಗಂಟು ಮೂಟೆ ಕಟ್ಟಿ
ತಂದಿಟ್ಟು ಮೆರೆದ ಮನಸಿಗೀಗ
ಕತ್ತಲೆಯೊಂದೇ ಉಳಿದ ಸಂಗಾತಿ
ನಾಲ್ಕು ಗೋಡೆಗಳ ನಡುವೆ
ನಾನು
ಮತ್ತು
ನಾನು
ಮತ್ತು
ನನ್ನ ಮೌನ
ನನ್ನ ಹೆಗಲ ಮೇಲೆ
ನನ್ನದೇ ಹೆಣ!
-ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
' ಗುರುವಿನ ಸ್ವಗತ '
ನಾನು ಗೆದ್ದೇ..ಗೆಲ್ಲುವೆ!
25 ರ ನಂತರವೇ ಮದ್ವಿಯಾಗುವೆ.
ವರದಕ್ಷಿಣೆ ಕೇಳೋ ಹುಡುಗನ್ನ ತಿರಸ್ಕರಿಸುವೆ
ನೀವ್ ನೋಡ್ತಾ ಇರಿ. ಎಂದಾಕೆ……
ಎರಡೇ ವರ್ಷದಲಿ ಮದುವಿಯಾಗಿ,
ಮಗೂನ ಎತ್ಕೊಂಡ್ ಹೋಗೋದ್ ನೋಡೀದ್ರ..
ನಾ ಕಲಿಸಿದ ವಿದ್ಯೆ ಆಕೆಗೆ ಗೆಲ್ಲಲು ಮದ್ದಾಗದೆ
ಅವಳ ತಲೆಯಲಿ ಗೆದ್ದಲಾಗಿದೆ. ಎಂದೆನಿಸದೆ ಇರದು.
ನಾನ್ ಐಯೇಯೆಸ್ ಮಾಡುವೆ,
ಡಾಕ್ಟ್ರೋ, ಇಂಜನೀಯರ್ ಆಗುವೆ
ಕಾರಲ್ಲೇ ಬರೋದು, ಸಮಾಜ ಸೇವೆ ಮಾಡೋದು
ನೀವ್ ನೋಡ್ತಾ ಇರಿ, ಎಂದಾತ…
ಎರಡೇ ವರ್ಷದಲಿ ಓದನು ಬಿಟ್ಟು
ಕೂಲಿನಾಲೀ ಮಾಡ್ಕೊಂಡ್, ಹರ್ಕ್ ಅಂಗೀ ಹಾಕ್ಕಂಡ್
ನಾಚಿಕಿಯಿಂದ ಕಣ್ತಪ್ಪಿಸಿ ಅಡ್ಯಾಡೋದ್ ನೋಡೀದ್ರ…
ನಾ ಕಲಿಸಿದ ವಿದ್ಯೆ ಗೆಲ್ಲಲು ಮದ್ದಾಗದೆ
ಅವನ ತಲೆಯಲಿ ಇದ್ದಿಲಾಗಿದೆ. ಎಂದೆನಿಸದೆ ಇರದು.
ಇವ ನಿಮ್ಮ ಮಗಾ, ನನ್ನ ಶಿಷ್ಯ…
ದೊಡ್ಡ ವ್ಯೆಕ್ತಿಯಾಗ್ತಾನ, ನಾಡಿಗೆ ಬೇಕಾದವ ಆಗ್ತಾನ
ನಿಮ್ಮನ್ನ ಚಂದಾಗಿ ನೋಡ್ಕೋತಾನ.
ಕಲಿಯೋತನ ಸರಿಯಾಗಿ ಕಲಿಸ್ರಿ.
ಯಾವ್ದಕೂ ಕೊರತೀ ಮಾಡ್ಬೇಡಿ ಅಂತಂದು ಹೇಳಿದ್ದೆ.
ಅವ ಓದಿದ,ಉದ್ದಾರಾನೂ ಆದ.
ಹೆಂಡ್ತಿ ಕಟ್ಕೊಂಡ್ ಇವರಿಂದ ದೂರಾದ.
ಇವರ ಮುಖ ನೋಡ್ದಾಗೊಮ್ಮೆ
ನಾ ಕಲಿಸಿದ ವಿದ್ಯೆ ಇವರ ಬಡತನಕೆ ಮದ್ದಾಗದೆ
ಇವರನ್ನು ಜೋರಾಗಿ ಗುದ್ದಿದ ಗುದ್ದಾಗಿದೆ ಎಂದೆನಿಸದಿರದು.
ಏನಾಗ್ತಿದೆ ಇಲ್ಲಿ. ಫಲಕ್ಕಿಂತ ನಿಷ್ಫಲವೆ ಎಲ್ಲ
ಇಲ್ಲಿದ್ದಾಗ 'ಸಿದ್ದ'ರಾಗೇ ಇದ್ದವರು
ಹೊರಗೆ ಹೋಗುತಲಿ ಅಶುದ್ಧರಾಗ್ತಿದ್ದಾರೆ.
ದಾರಿ ತೋರ್ವರಿಲ್ಲ, ಚಟ ಕಲಿಸುವವರೆ ಎಲ್ಲ.
ಬಲನೀಡೋರಿಲ್ಲ, ದುರ್ಬಲಮಾಡೋರೆ ಎಲ್ಲ.
ದಾರಿಗೆ ಅಡ್ಡಲಾಗಿ, ಸಾಧನೆಗೆ ತೊಡರಾಗಿ
ಕೆಡವಿ ,ಕೊಡವಿಕೊಂಡೇಳದಂತೆ ತುಳಿವವರೆ ಎಲ್ಲ.
ಹಾಗಾಗಿ ನಾನೀಗ ಹೇಳೋದಿಲ್ಲ.
ಗುರಿ ತೋರೋದಿಲ್ಲ, ಹತ್ತಿರ ಕರೆಯೋದಿಲ್ಲ,
ಎತ್ತರಾಗೆಂದು ಹೇಳೋದಿಲ್ಲ. ಯಾಕಂದ್ರೆ ???
ನಾ ಕಲಿಸಿದ ವಿದ್ಯೆ, ಎದ್ದು ನಿಲ್ಲಲು,..
ಗೆದ್ದುಬರಲು ದಾರಿಯಾಗದಿದ್ದರೆ..
ನಾನೇಕೆ ಕಲಿಸಲಿ? ಅಲ್ವಾ….?ನೀವೇ ಹೇಳಿ
– ವನಪ್ರಿಯ (ಯಲ್ಲಪ್ಪ ಹಂದ್ರಾಳ)
ನೆಲದ ತುಟಿ
ಮೋಡದ ಕಣ್ಣೊಳಗೆ ಮಿಂಚು ಗರ್ಭಧರಿಸಿ ಮಣ್ಣಿಗೆ ಮುಕ್ಕಾಗದೆ ತಾಕಿದೆ
ಇರುಳ ಕೊರಳೊಳಗೆ ಮಿಂಚು ಕುರುಡಿಯಾಗದೆ ಸಾಗಬೇಕಿದೆ
ಮಣ್ಣ ದನಿಯೊಳಗೆ ಜೀವತಂತು ಮೀಟಿ ಬೆಳಕ ತುಟಿಗೆ ತಾಕಿದೆ
ಹಸಿರ ಬುಡದೊಳಗೆ ಮಣ್ಣು ಬಂಜೆಯಾಗದೆ ಸಾಗಬೇಕಿದೆ
ಮುಗಿಲ ಕಣ್ಣೊಳಗೆ ಚುಕ್ಕಿಗಳು ಇಳಿಬಿದ್ದು ಚಂದ್ರನ ತುಟಿಗೆ ತಾಕಿವೆ
ನಿಟ್ಟುಸಿರ ತೇವದೊಳಗೆ ಚಂದ್ರ ಮರಿಚಿಕೆಯಾಗದೆ ಸಾಗಬೇಕಿದೆ
ಕಡಲ ಕಣ್ಣೊಳಗೆ ಮುತ್ತುಗಳು ಬೆಸೆದು ಮರಳು ತುಟಿಗೆ ತಾಕಿದೆ
ಅಲೆಯ ರಭಸದೊಳಗೆ ಜೀವಗಳು ಕೊನೆಯಾಗದೆ ಸಾಗಬೇಕಿದೆ
ಕಣ್ಣೀರ ಹನಿಯೊಳಗೆ ಮಾತುಗಳು ಕರುಳ ತುಟಿಗೆ ತಾಕಿವೆ
ಒಡಲ ಒಳಗೊಳಗೆ ನೆನಪುಗಳು ಅರಳಿ ಮುಕ್ಕಾಗದೆ ಸಾಗಬೇಕಿದೆ
ನೆಲದ ನೆಲೆಯೊಳಗೆ ಗಿರಿ ಹೆಜ್ಜೆಗಳು ಪ್ರಶ್ನೆಗಳಾಗಿ ಕಾಲದ ತುಟಿಗೆ ತಾಕಿವೆ
ಮಣ್ಣ ಕರುಣೆಯೊಳಗೆ ಗೋರಿಯಾದ ಗುರುತುಗಳು ಮಾಯವಾಗದೆ ಸಾಗಬೇಕಿದೆ
-ಕಿರಸೂರ ಗಿರಿಯಪ್ಪ