ಚುಟುಕಗಳು
ಚಿಕ್ಕ ಚುಕ್ಕೆಗಳಿಟ್ಟು ಎಳೆಗಳೆಳೆದು
ಬರೆದಿದ್ದಾಳೆ ರಂಗೋಲಿ ಚಡಪಡಿಸುತ್ತಾಳೆ
ಮರಳು ಮಾಡುವ ಬಣ್ಣಗಳೊಳಗೆ
ಬಿಡಿಸಿಕೊಳ್ಳಲಾಗದ ಬಂಧಿ
****
ಹೊಸದರೆಡೆಗೆ ಪಯಣವೆಂದರೆ
ಹಳೆಯದು ಸಲ್ಲದೆಂದಲ್ಲ
ಹಳೆಯದ ಒಟ್ಟಿಗಿಟ್ಟುಕೊಂಡೇ
ಹೊಸತರೆಡೆ ಸಾಗುವದು
****
ನಡೆದಿದ್ದಾಳೆ ಅವಳು ಎಲ್ಲಿಗೋ
ಅವಳಿಗೇ ಗೊತ್ತಿಲ್ಲ ಮಾತಲ್ಲೇ
ಎದೆಬಗೆವವರ ಹೊತ್ತು ಹೊತ್ತಿಗೆ ನೆತ್ತಿಕುಟ್ಟಿ
ಕರ್ತವ್ಯ ನೆನಪಿಸುವವರನ್ನೆಲ್ಲ ಹಿಂದಕ್ಕೆ ಬಿಟ್ಟು
****
ನಿತ್ಯ ಕಾಯುವ ಕಾಯಕವಾಗಿತ್ತವಳಿಗೆ
ಅವನ ದಾರಿ ಬರಲೇ ಇಲ್ಲ ಅವ
ಈಗವಳಿಗೆ ಅವನ ಬರುವಿಕೆಗಿಂತ
ಕಾಯುವಿಕೆಯೇ ಹೆಚ್ಚು ಹಿತ
-ಪ್ರೇಮ
ಮತ್ತೆ ಬರಲಿ ಮಧುರತೆ
ಮಧುರ ಯುಗ ಮರೆಯಾಯ್ತು
ಅಬ್ಬರವು ಮೊದಲಾಯ್ತು
ಎಂದು ಬರುವುದೊ ಮತ್ತೆ
ಮರೆಯಾದ ಮಧುರತೆಯು
ಅರ್ಥವಿಲ್ಲದ ಹಾಡು
ಲಯವೆ ಇಲ್ಲದ ಕುಣಿತ
ತೇಪೆ ಹಾಕಿದ ಹಾಗೆ
ಪದ ಪಲ್ಲವಿ ಚರಣ
ಜನತೆ ಬಯಸುವುದೆಂದು
ಜನಪ್ರಿಯತೆ ಇದೆಯೆಂದು
ಹೇಳಿಕೊಳ್ಳುತ ಇವರು
ಅಶ್ಲೀಲ ತುರುಕುವರು
ತಪ್ಪನ್ನೆ ಸರಿಯೆಂದು
ತಮಗಾರು ಸಮರೆಂದು
ಎದೆಯುಬ್ಬಿ ಬೀಗುವರು
ಏನೂ ಗೊತ್ತಿರದವರು
ಬಯಸುವುದು ಮಧುರ ಮನ
ಮಧುರ ಗೀತೆಗಳನ್ನ
ಓ ಕವಿಯೆ ಹಾಡಿಬಿಡು
ಇಂಪು ಕಂಪಿನ ಹಾಡು
ಜನಪ್ರಿಯತೆ ಕ್ಷಣಕಾಲ
ಮಾಧುರ್ಯ ಚಿರಕಾಲ
ನಮ್ಮ ಮುಂದಿದೆ ಸಾಕ್ಷಿ
ಹಳೆಯ ಹಾಡುಗಳು
ಭಾವ ಲಯ ಸಂಗಮಕೆ
ತಾಳ ಮೇಳದ ಬೆಸುಗೆ
ಸುಶ್ರಾವ್ಯ ಸಿರಿ ಕಂಠ
ಜೊತೆಗಿರಲಿ ಗಾಯಕಗೆ
ಬೇಗ ಅಬ್ಬರ ಮುಗಿದು
ಮಧುರ ಮಂಜುಳ ಗೀತೆ
ಕಿವಿಗೆ ಕೇಳಲಿ ಬೇಗ
ಹೃದಯ ಬಾಗಿಲು ತೆರೆದು
-ಮಾ.ವೆಂ.ಶ್ರೀನಾಥ
ಹೀಗೆರಡು ಕವಿತೆಗಳು
ಗ್ರಹಣದ ದಿನ
ರಾಹು ನುಂಗುವನಂತೆ ಚಂದ್ರನ
ಅವತ್ತು ಯಾರೂ ಬರಬಾರದು ಹೊರಗೆ
ಅದರಲ್ಲೂ ಬಸುರಿ ಬಾಣಂತಿಯರು
ಬಿಡುವವರೆಗೂ ಗ್ರಹಣ
ನಿಷಿದ್ಧ ಆಹಾರ ಸೇವನೆ!
ಹಸಿವು ರಣರಣ.
ಅಪ್ಪಣೆ ಕೊಡುತ್ತಿದ್ದಾರೆ ಅರಿತವರೆಂದುಕೊಂಡ
ಆ
ಸಾಮಿಗಳು:
ನಾಳೆಯ ಪ್ರಳಯದ ಬಗ್ಗೆ
ಧಾರಿಣಿಯ ಅಳಿವಿನ ಬಗ್ಗೆ
ಮಾತನಾಡುತ್ತಿದ್ದಾರೆ.
ಕಾಪಾಡಬೇಕಿದೆ:
ಈಗ ಈ ರಣಹದ್ದುಗಳಿಂದ
ಜನರನ್ನುಮೊದಲು
ನನ್ನ ಚಂದ್ರಾಮನನ್ನು!
2.
ಯಾರೋ ನೆಟ್ಟ ಮರ
ನೆರಳಲ್ಲಿ ಕೂತವರು ಮಾತ್ರ ನಾವು
ಯಾರೋ ಕಟ್ಟಿಸಿದ ಕೆರೆ
ಬಾಯಾರಿ ನೀರು ಕುಡಿದವರು ಮಾತ್ರ ನಾವು
ಯಾರೋ ಬೆಳೆದ ಬತ್ತ
ಅನ್ನ ಮಾಡಿ ಉಂಡವರು ಮಾತ್ರ ನಾವು
ಕೊಟ್ಟವರಿಗೆನ ಕೊಟ್ಟೆವು ಪ್ರತಿಫಲವಾಗಿ
ಉಂಡಮನೆಗೆ ದ್ರೋಹ ಬಗೆವ ನೀಚತನದ ಹೊರತಾಗಿ
-ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಸೈನಿಕ
ಸುಳಿಗಾಳಿಯಲ್ಲಿ ಸೂಸುತ್ತಿದೆ
ನಿನ್ನ ಸುಳಿವು ನನ್ನ ಬಳಿ.
ಸುಮವು ನಾಚಿ ರಂಗೇರುತಿದೆ
ನಿನ್ನ ನಗುವ ನೆನಸಿ.
ಸಂಗೀತ ಹಾಡುತಿದೆ
ನಿನ್ನ ಕೈ ಹಿಡಿಯಲು ಬಳೆಗಳು.
ತುದಿಗಾಲಲ್ಲಿ ನಿಂತಿವೆ ನನ್ನೀ ಪಾದಗಳು
ಕಾಲ್ಗೆಜ್ಜೆಯ ಧರಿಸಿ.
ದಿನ-ದಿನವು ಜನಿಸಿ ಬರುತಿದೆ
ನಿನ್ನಾಯು ನನ್ನ ಹಣೆಯಲಿ.
ಗೊತ್ತು ಇದೆಲ್ಲಾ ಸ್ಥಿರವಲ್ಲ
ಮಲ್ಲಿಗೆ ಹೂ ಮೂಡಿಸುವ ನಲ್ಲನೆ.
ನೀಡು ನನ್ನ ಒಡಲಿಗೆ ಒಂದು ಕುಡಿ
ನನ್ನ ನೀ ತೊರೆಯುವ ಮುನ್ನ
ಇದೇ ಈ ನಿನ್ನ ಸಾಧ್ವಿಯ ಒಳನುಡಿ.
*****
ಗುಣ
ಸಾಧನೆಯೆಂಬ ಭೂಗರ್ಭದಲ್ಲಿ
ಬಿತ್ತಿದ ವಜ್ರಕವಚದ ಬೀಜಗಳು
ಮೊಳಕೆಯೊಡಿಯುವ ಸಮಯ ಸಿಡಿಲು ಬಡಿದು
ಗರ್ಭದಲ್ಲೇ ಕಮರಿಹೋದವೆನೋ ಎಂಬುದರಲ್ಲಿ
ತುಂತುರು ಹನಿಗಳು ಉಸಿರಿರುವ ತುಸು ಬೀಜಗಳು
ಭೂಗರ್ಭ ಸೀಳಿಬಂದು
ತಮ್ಮ ನಿಲುವನ್ನು ತೋರಿಸಲು ಸಹಕರಿಸಿದ
ಹನಿಗಳಿಗೆ ಬೀಜ ಹೇಳಿತು
ಹೇಗೆ ತೀರಿಸಲಿ ನಿನ್ನ ಋಣವ
ಆಗ ಹನಿ ಉಸಿರಿತು
“ಇದು ನನ್ನ ಅದು ನಿನ್ನ ಸಿಡಿಲಿನ ಗುಣ
ಇದರಲ್ಲಿ ಋಣದ ಮಾತೆಂತು”
-ಅರುಣಾ ಬಿ.
ಪ್ರೀತಿ: ಭಾವವೋ? ಅಭಾವವೋ?
ಕಾಣದೆರಡು ಭಾವಗಳು ಬೆರೆತೊಡೆ ಪ್ರೀತಿಯುಂಟಾಗುವುದಂತೆ,
ಬತ್ತಿಹೋಗಿಹ ಭುವಿಗೆ ವರುಣನ ಮಿಲನವಿತ್ತರೆ, ಪ್ರೀತಿಯುಂಟಾಗುವುದಂತೆ;
ಭಾವರಹಿತ ತಾಯಿಯೊಮ್ಮೆ ಹಸಿದ ಹಸುಳೆಯ ನೋಡಿದೊಡೆ ಪ್ರೀತಿಯುಂಟಾಗುವುದಂತೆ,
ಕೊಟ್ಟುಬಿಡಿ ನನಗೀಗ ಶುದ್ಧ ಸ್ಪಷ್ಟತೆಯ, ಮೇಲಿನಲಿ ಯಾವುದು ಪ್ರೀತಿಯ ಅರ್ಥ!!
ಹುಡುಗ ಹುಡುಗಿಯೊಡನೆ ಸ್ನೇಹದಿಂದಿದ್ದರೆ, ಸಮಾಜದ ಕಣ್ಣಲ್ಲಿ ಇವರು ಕಳಂಕಿತರು,
ಹೇಳಿಬಿಡಿ ನನಗೀಗ, ಅವರಿಬ್ಬರ ಭಾವ ಕಳಂಕಿತವೋ ಅಥವಾ ಸಮಾಜದ ಕಣ್ಣು ಕಳಂಕಿತವೋ?
ಆಗಾಗ ಅನಿಸುವುದು, ಕಳಂಕವೂ ಸಹ ಪ್ರೀತಿಯ ಇನ್ನೊಂದು ಮುಖವಾಡವೆಂದು,
ಕೊಟ್ಟುಬಿಡಿ ನನಗೀಗ ಶುದ್ಧ ಸ್ಪಷ್ಟತೆಯ, ಪ್ರೀತಿಯು – ಪಾದದಡಿಯ ಕೆಂಡವೋ? ಸ್ನೇಹದೊಡಬೆರೆತ ಸಂಜೀವಿನಿಯೋ?
ಮಾಗಿದ ಮಾವು ಅಳಿಲಿಗೆ ಕಚ್ಚಲು ಪ್ರೀತಿಪೂರಕ: ಇದು ಅಳಿಲಿನ ತಪ್ಪೋ ಅಥವಾ ಮಾಗಿದ ಮಾವಿನ ತಪ್ಪೋ?
ಅಂತೆಯೇ ಅಳುವ ಕನ್ದನ ಕಂಡೊಡೆ ಮನಸು ಚುರ್ರುಕ್ಕೆನ್ನುವುದು;
ನಮ್ಮಲ್ಲೆಲ್ಲೋ ಬಿತ್ತಿದ ಭಾವನೆ , ಎದುರಿನವರಲ್ಲೂ ಬಿತ್ತಿದರೆ ಪ್ರೀತಿದಾಯಕ,
ಕೊಟ್ಟುಬಿಡಿ ನನಗೀಗ ಶುದ್ಧ ಸ್ಪಷ್ಟತೆಯ, ಮಾವು ಕಂಡೊಡನೆ ಅಳಿಲಲಿ; ಅಳುವ ಕಂದನ ಕಂಡೊಡನೆ ಮನಸಲಿ
ಮೂಡಿಹ ಭಾವನೆಯ ಗುಚ್ಚವೇ ಪ್ರೀತಿಯಾ ಅಥವಾ ಕೇವಲ ವಿಲಿಂಗಗಳು ವರಿಸಿದೊಡೆ ಪ್ರೀತಿಯಾ?
ಇದೆ ಇನ್ನು ನನ್ನಲ್ಲಿ ನೂರಾರು ಪ್ರಶ್ನೆಗಳು, ಉತ್ತರವ ಕಾಣದಿರೆ ನಿರ್ವಾಣದಂಥ ನಿಗೂಢ ನಿಂದೆಗಳು!!
ಅನುಭವವ ಹೇಳಲೊಲ್ಲೆ, ಎನ್ನುತಲೇ ಮುಗಿಸಿಹೆನು ಈ ನನ್ನ ಪದ್ಯವನ್ನು,
ಕೊಡಬೇಡಿ ನನಗೇನು ಉತ್ತರಗಳ ಓದಿದೊಡೆ;
ಮರೀಬೇಡಿ ಉತ್ತರವ, ಪ್ರೀತಿಯ ಭಾವ ಅಭಾವವೆನಿಸಿದೊಡೆ!!
-ಸುದರ್ಶನ್.ಜಾಲೀಹಾಳ್
ಅಭಿಮನ್ಯೂ
ನೆಲಸಮ ಮಾಡಲಾಗಿದೆ ಅವರ
ಗುಡಿಸಲುಗಳನು ರಸ್ತೆ ನಿರ್ಮಿಸಲೆಂದು
ಕದಲುತ್ತಿಲ್ಲ ಅವರು ನೆಲಬಿಟ್ಟು
ತಮ್ಮ ಜುಗ್ಗಿಗಳು ಮುರಿದ ಮೇಲೂ
ಜೇನುಗೂಡಿಂದ ಜೇನೆಲ್ಲ ದೋಚಿಕೊಂಡರೂ
ಜೇನ್ನೋಣ ಗೂಡು ತೊರೆಯದಂತೆ
ಕುಳಿತ್ತಿದ್ದಾರೆ ತಮ್ಮ ಉಧ್ವಸ್ತ ಮನೆ-
ಮಾರುಗಳ ಮಗ್ಗುಲಿಗೆ ತಾವೂ ಉಧ್ವಸ್ತರಾಗಿ
ಮಳೆಬಂದರೆ ತಗಡಿನಾಸರೆ ಪಡೆದು
ಸುತ್ತಿಕೊಳ್ಳುತ್ತಾರೆ ತಲೆಗೆ ಪ್ಲಾಸ್ಟಿಕ್
ಒಲೆಹೊತ್ತದಿದ್ದರೂ ಚಿಂತೆಯಿಲ್ಲ
ಅದೇನು ಹೊಸದಲ್ಲ ಅವರಿಗೆ
ಎಲ್ಲೋ ಕಳೆದುಹೋದ
ಅಭಿಮನ್ಯೂವಿನ ಸಂತಾನಗಳಿವರು
ಗರ್ಭದಲ್ಲಿಯೇ ಕಲಿತಿರುತ್ತಾರೆ
ಹಸಿವಿನ ಚಕ್ರ ಭೇದಿಸುವುದನು
ಮುಗಿಲನು ಛಾವಣಿಯಾಗಿಸುವುದನು
ಆದರೆ.. ಯಾವತ್ತು ಎಲ್ಲಿ ಯಾವ
ಚಕ್ರವ್ಯೂಹದಲ್ಲಿ ಸಿಲುಕಿ ಇವರು
ವಿವಶರಾಗುತ್ತಾರೋ..?
ಯಾವ ಹುನ್ನಾರಕೆ ಸಿಕ್ಕು
ಸಾಯುತ್ತಾರೋ..?
ಎಂಬುದು ಇವರಿಗೂ ತಿಳಿದಿಲ್ಲ
ಹಿಂದಿ ಮೂಲ : ಅಂಜನಾ ವರ್ಮಾ
ಕನ್ನಡಕ್ಕೆ : ಗಿರೀಶ ಚಂದ್ರಕಾಂತ ಜಕಾಪುರೆ
ರಾತ್ರಿಯ ತಣ್ಣನೆಯ ತನುವಿನಲಿ
ರಾತ್ರಿಯ ತಣ್ಣನೆಯ ತನುವಿನಲಿ
ಮಲಗಿರೆ ಲೋಕವು ಮಡಿಲಿನಲಿ
ನಿನ್ನಯ ಧ್ವನಿಯು ಬಳಿಯಲೆ ಬಂದು
ಸಣ್ಣನೆ ಕೊರಳಿನ ಸ್ವರದಲ್ಲಿ
ಕೊಳಲಿನ ಒಡಲಿನ ನಾದದಲಿ
ನಿದ್ದೆಯ ಕದ್ದಿದೆ ನನ್ನನೆ ಗೆದ್ದಿದೆ
ಹೃದಯದ ಒಲವಿನ ಮಹಲಿನಲಿ
ವಿರಹದ ಘಳಿಗೆಯು ಸರಿದಿರಲು
ವೀಣೆಯ ಸ್ವರವದು ಹೊಮ್ಮಿರಲು
ಬಾನಿನ ತುಂಬಾ ತಾರೆಗಳಂದರ
ಒಲುಮೆಯ ಕಡಲದು ತುಂಬಿರಲು
ನಿನ್ನಯ ಗೆಜ್ಜೆಯ ಘಲಿರಿನ ನಾದದಿ
ನವರಸಗಳ ಅಭಿಷೇಕವಲ್ಲಿ ನಡೆದಿರಲು
ಕನಸಿನ ಕುಟಿರವು ನಲಿದದೆ ನಲ್ಲೆ
ಪ್ರಕೃತಿ ಚೆಲುವಿದು ಕುಣಿದಿರಲು
ಹಸುರಿನ ಕರಿಪಿದು ಚಿಮ್ಮಿರಲು
ಬಗೆಬಗೆ ಹೂವಿನ ಚೆಲುವಿನಲಿ
ಹೊಮ್ಮಿದೆ ನಿನ್ನಯ ಮುಗುಳುನಗೆ
ಚಿಲಿಪಿಲಿ ಧ್ವನಿಯಲಿ ಹಾರುವ ಹಕ್ಕಿಯಲಿ
ಸಂತಸ ಚಿಮ್ಮಲಿ ಹಾಡಿನಲಿ, ನಿನ್ನೋಲವಿನಲಿ;
ಹೃದಯದ ಒಲವಿನ ಮಹಲಿನಲಿ
ಎಲ್ಲೆಯೇ ಇರಲಿ ಯಾಗೆಯೇ ಇರಲಿ
ನೆನಪಿನಲುಳಿಯಲಿ ಪ್ರತಿ ಕ್ಷಣವು
ಕನಸನು ಕಟ್ಟಿ ಕಾಯುತಲಿರುವೆ
ದಾಂಪತ್ಯದ ಶುಭ ಘಳಿಗೆಯನು
ಮಿಲನದ ಸಂಭ್ರಮದಾಚರಣೆಯನು
ಬೆರೆಸುತ ಉಸಿರ ಕಲೆಸುತ ಹೆಸರ
ಕಾಯುತಲಿರುವೆ ನಾ ಇಲ್ಲೆ
ಹೃದಯದ ಒಲವಿನ ಮಹಲಿನಲಿ…
-ಸಿದ್ದುಯಾದವ್ ಚಿರಿಬಿ…,
ಪ್ರೀತಿಯ ಮೆರವಣಿಗೆ
ನೂರಾರು ಕನಸುಗಳ ಮೌನ ಮೆರವಣಿಗೆ.
ಬಚ್ಚಿಟ ಭಾವನೆಗಳ ಚಿಗುರೊಡೆಯುವ ಸಂಭ್ರಮ.
ಏಕಾಂತವೇ ಆವರಿಸಿದೆ ನನ್ನೊಳಗೆ. ಇರಬಹುದೇನೊ ಇದುವೇ
ಪ್ರೀತಿ..?
ಅವಳಚ್ಚಿದ ಕಿಚ್ಚಲ್ಲಿ ಅರೆಬರೆ ಬೆಂದು
ನಿಟ್ಟುಸಿರು ಬಿಡುವುದರೊಳಗೆ.
"ಸ್ವಾತಿ" ಮಳೆ ಹನಿಗಳಲ್ಲಿ ಅವಳುಸಿರು
ತಾಗಿ ರೋಮಾಂಚನ ಎನಿಸುತ್ತಿದೆ.
ಇರಬಹುದೇನೊ ಇದುವೇ
ಪ್ರೀತಿ..?
ಹೃದಯದ ಫಲವತ್ತತೆಗೆ ಎಸೆದ ಒಲುಮೆಯ
ಬೀಜವೊಂದು ಮೊಳಕೆವಡೆಯುತ್ತಿದೆ
ನೂತನ ಲೋಕ ಬೇಡುತೀರುವ ಮನಕ್ಕೆ
ಆಸರೆ ಬೇಕೆನಿಸುತ್ತೀದೆ
ಇರಬಹುದೇನೊ ಇದುವೇ
ಪ್ರೀತಿ…?
ಜಾರಿ ಬಿದ್ದಂತಾಯಿತು
ಪ್ರೀತಿಯ ಕಾನನದೊಳಗೆ
ಕಾಣದೂರನು ಕಾಣುವ ತವಕ.
ಬರೆಯುವ ಪದಗಳೇಲ್ಲಾ ಭರವಸೆಯ
ಮಾತಾಯಿತು.
ಇರಬಹುದೇನೊ ಇದುವೆ
ಪ್ರೀತಿ…?
-ಪಿ ಕೆ… ನವಲಗುಂದ