ಹಾಯ್ಕುಗಳು..
*
ಸೀತೆಯ ಅಶ್ರು
ಲಂಕೆಯ ತೊಳೆಯಿತು
ಪಾವನಗಂಗೆ
*
ರಾತ್ರಿ ಚಂದಿರ
ಶರಧಿಗೆ ಧುಮುಕಿ
ಈಜು ಕಲಿತ
*
ಲಾಸ್ಯವಾಡಿದೆ
ನಂಜು ನುಂಗಿದವನ
ವದನ; ತೃಪ್ತಿ
*
ಮೂರು ಮೊಳದ
ಸೀರೆಯುಟ್ಟವಳೀಗ
ಹಾಯ್ಕು ಕನ್ನಿಕೆ!
*
ಮೆತ್ತೆ ಸಿಕ್ಕಿದ
ಜಗಳಕ್ಕೆ ನಿಂತಿಹ
ಸಿಟ್ಟಿಗೋ ಹಬ್ಬ!
*
ಮೂರು ಸಾಲಿನ
ಪಲ್ಕುಗಳಿಗೆ ಕವಿ
ಹಾಯ್ಕು ಎಂದನು
*
ಎದೆಗೆ ಬಿದ್ದ
ಅಕ್ಷರ ನಡೆಸಿದೆ-
ನ್ನ ತಗ್ಗಿ ಬಗ್ಗಿ
*
ಹಸಿದ ಹೊಟ್ಟೆ
ಸೇರಿತು ಕದ್ದುತಿಂದ
ಬ್ರೆಡ್ಡು; ಸಾರ್ಥಕ
*
ಅತ್ಯಾಚಾರಿಗೆ
ಅನ್ನೂ ಹದಿನಾರರ
ಎಳಪೆ; ತೀರ್ಪು!
*
ಮಾನಹಾನಿಗೆ
ಮಾವನಾದ ಕಾರಣ
ಮದುವೆ ಶಿಕ್ಷೆ!
*
ಸಿಟ್ಟು ಆರಂಭ
ಶೂರ ನೆಚ್ಚಿಕೊಂಡು ನಾ
ನಾದೆ ಒಬ್ಬಂಟಿ!
… ಸಿದ್ದು ಕುಳೇನೂರು
ವಿರಾಮವೊಂದು ಇಡೋಣ!
ಇದ್ದಾಗ ಇರದಂತೆ
ಇಲ್ಲದಾಗ ಇಲ್ಲೇ ಇದ್ದಂತೆ
ಕಡು ಬೇಸಿಗೆ ಕಳೆದ ಮೇಲೂ ಕಾಡುವ ಧಗೆಯಂತೆ
ತೀರಿಹೋದ ಚಳಿಗಾಲಕೂ ಕಂಬಳಿಯೊಂದ ಕೋರಿದಂತೆ
ಮುಗಿದರೂ ಮಳೆ ನಿಲ್ಲದೆ ಮಾಡಿನಿಂದುದುರುವ ಹನಿಗಳಂತೆ
ಇದ್ದವಳೆ ಹಾಗೇ ಇದ್ದು ಬಿಡು
ನೆಲೆಸ ಬರಬೇಡ
ನಕ್ಕ ಹಾಗೆ ಬುದ್ದ ನಾವು ನಗಲಾಗುವುದಿಲ್ಲ
ಹಾಗೆ ನಕ್ಕರೂ ನಾವೇನು ಬುದ್ದರಾಗಿ ಬಿಡುವುದಿಲ್ಲ
ಕಳೆದುಕೊಂಡ ಕನಸುಗಳಿಗೆ ಸುಂಕ
ತೆತ್ತವರ್ಯಾರೆಂಬ ಜಿಜ್ಞಾಸೆ ಬೇಡ
ನರಕದಲ್ಲಿ ನಿಂತು ಸ್ವರ್ಗವನೇಕೆ ಹುಡುಕೋಣ?
ಇಷ್ಟಾದರು ಉಳಿದುಹೋದೆಮ್ಮ ಹಂಬಲಗಳಿಗೆ
ಅರ್ಥ ಹೇಳಲಾಗದ ಹಮ್ಮುಗಳಿಗೆ
ವಿರಾಮವೊಂದ ಇಡೋಣ.
***
ಅರ್ಥರಹಿತ
ನೇರಮಾತುಗಳು ಯಾರಿಗೂ ಖುಶಿಕೊಡಲಾರವು
ಸರಳಕವಿತೆಗಳು ವಿಮರ್ಶಕರ ಮನ್ನಣೆಗೆ ಪಾತ್ರವಾಗವು
ಆಡಿದ ಮಾತು ಕೊಂಕಿರದೆ ತಲುಪಬೇಕು
ಗುರಿಯಿಟ್ಟು ಹೊಡೆದ ಗುಂಡಿನ ಹಾಗೆ,
ಬರೆದ ಕವಿತೆ ಅರ್ಥವಾಗಿಬಿಡಬೇಕು
ಕ್ಲೀಷೆಗಳಿರದಂತೆ ಅನಿಸಿದ್ದ ಹೇಳಿಬಿಡಬೇಕು.
ಬರೆಯಲಾಗದೆ ಹೋದರೆ ಹೀಗೆ
ಶಬುದಗಳು ವ್ಯರ್ಥವಾಗಿ
ಬದುಕಿರುವುದೇ
ಅರ್ಥಹೀನವಾಗಿಬಿಡುವ ಭಯವಿದೆ
-ಕು.ಸ.ಮಧುಸೂದನರಂಗೇನಹಳ್ಳಿ
*ಗಜಲ್*
ಒತ್ತುವ ತಾಲೀಮು ಮಾಡಬೇಡ ಹೊಲದ ಬದುವಿಗೆ ಮಾತು ಬರಬಹುದು
ವಿಷವ ಹರಡಿಕೊಂಡು ಬಲವಂತದಿ ಪ್ರಸವಿಸುವ ಮಣ್ಣಿಗೆ ಮಾತು ಬರಬಹುದು
ಸೀಳು ಕಾಣಬಾರದೆಂದು ಮೆತ್ತನೆಯ ತುಟಿಗೆ ಸುಂದರ ಬಣ್ಣ ಬಳಿಯಬೇಡ
ದರ್ಗಾ ಹೋಗಿ ದೇವಾಲಯವಾದ ಕಲ್ಲಿಗೆ ಕಾಲಕಾಲಕೆ ಮಾತು ಬರಬಹುದು
ತನ್ನೊಳಗಿನ ರಾಕ್ಷಸತ್ವ ಅಳಿಯದ ರಾಮನ ಬಿಲ್ಲು ಎತ್ತುವ ಸಾಹಸ ಬೇಡ
ಕಪಟ ಚಕಮಕಿಯಿಂದ ಹೊರಟ ಬಂದೂಕಿನ ಗುಂಡಿಗೆ ಮಾತು ಬರಬಹುದು
ಕಬಂಧ ಬಾಹುಗಳೊಳಗೆ ಮುಳುಗಿ ರಸಸವಿದ ಗಳಿಗೆ ಮತ್ತೆ ನೆನೆಯಬೇಡ
ಹಸಿವಿಗಾಗಿ ದೇಹವ ಮಾರಿಕೊಂಡ ಹಾಸಿದ ಬಿಸ್ತಾರಕೆ ಮಾತು ಬರಬಹುದು
ಮಂಪರಿಗೆ ಜಾರಿದರೆ ಮಾತುಗಳು ಪರದಾ ಕಟ್ಟಿಬಿಡುತ್ತವೆ ನಂಬಬೇಡ
ಮತಾಂಧರು 'ದಾಸ'ನ ಜೋಳಿಗೆಗೆ ಹಾಕಿದ ಜಾತಿಗೆ ಮಾತು ಬರಬಹುದು
*ರಮೇಶ ಗಬ್ಬೂರ್*
ಕಲಾಂ ನಮನ
ಭಾರತಮಾತೆಯ ಕೀರ್ತಿ ಕಳಸ
ನಾಡು ನಮಿಸಿದ ಪಾವನಾತ್ಮ
ಜನಾಭಿಮಾನದ ಕೇಂದ್ರ ಬಿಂದು
ಎಲ್ಲರ ಗೆಲ್ದ ಅಜಾತಶತ್ರು
ನೂರು ಸಂತರ ಮೀರ್ದ ನಗುವು
ಜಗದ ಏಳ್ಗೆಯ ಜ್ಞಾತ ನಿಲುವು
ಮಾನವತ್ವವ ತೋರ್ದ ಗುರುವು
ಜ್ಞಾನ ಪಡೆದ ಶ್ರೇಷ್ಟ ಗೆಲುವು
ಮೇರು ಶಿಖರವನೇರ್ದ ತಾಳ್ಮೆ
ಮನುಜ ಪಥಕೆ ತುಡಿದ ಒಲುಮೆ
ಕೇಡ ಬಗೆಯದ ದಿವ್ಯ ದೃಷ್ಟಿ
ದೇಶ ಪಡೆದ ಪುಣ್ಯ ಸೃಷ್ಟಿ
ಸರಳ ಬಾಳ್ವೆಯ ಸಾಹುಕಾರ
ಕ್ಷಿಪಣಿ ತಂತ್ರದ ನೇತಾರ
ಎಲ್ಲರೊಲುಮೆಯ ನಿಜ ಹರಿಕಾರ
ಸಂಸ್ಕೃತಿಯ ಬೆಸೆದ ನೇಕಾರ
-ನಂದೀಶ್ ಕುಮಾರ್ ಮಂಡ್ಯ
ಪ್ರತೀಕ್ಷೆ
ಕನಸುಗಳ ರಾಶಿಯ ಶಿಖರ ಅಗೆದು
ಹಂಬಲದಿ ನನಸುಗಳ ಲೋಹ ತೆಗೆದು
ಬಿಕರಿ ಮಾಡುವ ಕಾತರದ ನಯನ
ನಿರಾಶೆಯಲಿ ನಿಸ್ತೇಜವಾಯಿತೇ?ವದನ
ಥಳ ಥಳ ಹೊಳೆವ ಹೊಸ ಕಳಶವಿಟ್ಟು
ರಂಗು ರಂಗಿನ ಒಡವೆ,ವಸ್ತ್ತ್ರಗಳತೊಟ್ಟು
ಕಿಂದರಿಜೋಗಿಯ ನೆನಪ ತೆರೆದ ನಯನ
ಮಸುಕಲಿ ಕಳಾಹೀನವಾಯಿತೇ?ವದನ
ಬೇಕುಗಳ ಪೂರೈಸೊ ಜೋಳಿಗೆ ಹೊತ್ತು
ಆಡುವ ಮಾತುಗಳ ಸವಿಯ ಗಮ್ಮತ್ತು
ಆಸೆಗಳ ಸರಣಿ ಬಿತ್ತುವ ನಯನ
ಬೇಗೆಯಲಿ ಬೆಂದು ಇಂಗಿತೇ? ವದನ
ಬಣ್ಣ ಬಣ್ಣದ ಚಿತ್ರಗಳ ಮೂಡಿಸಿ
ಹೊಸ ಹೊಸ ಭಾವಗಳ ಸರಣಿ ಪೊಣಿಸಿ
ಮನಗಳಲಿ ತೃಶೆಯ ಹುಟ್ಟಿಸೊ ನಯನ
ಕಾರ್ಮೋಡಕೆ ಕಪ್ಪಾಯಿತೇ? ವದನ
ಮೋಡಗಳ ಅಂಚಿನ ಬೆಳಕಿನ ಕಿರಣ
ಪ್ರತಿಫಲಿಸುವುದೆ ಹೊಸಬೆಳಕ ಹೂರಣ
ಕಾಂತಿಯ ತೋರಣ ಕಟ್ಟುವ ನಯನ
ಮತ್ತೆ ಮಂದಹಾಸ ಬೀರಲಿ ವದನ
-ಮಂಜು ಹೆಗಡೆ
ತಬ್ಬಲಿಯ ಬೇಡಿಕೆ
ನವಮಾಸ ಹೊತ್ತೆ ಬೆಚ್ಚನೆಯ ಗೂಡಲ್ಲಿ
ಮತ್ತೆ ತಳ್ಳಿದೆಯೆಕೆ ಈ ಗುಡಿಯಾ ಬಾಗಿಲಲಿ
ಮೇಲಿರುವನೊಬ್ಬ ಕಾಯುವನು ಎಂದು
ನಿಮ್ಮ ತಪ್ಪಿಗೆ ಬಲಿಯಾದೆ ನಾನಿಂದು
ನೀನೇನು ದೇವಕಿಯಲ್ಲ ಸೆರೆಮನೆಯಲ್ಲು ಇಲ್ಲ
ಯಾವ ಯಶೋದೆಯು ನಮ್ಮನ್ನು ಸಾಕುವುದಿಲ್ಲ
ಅಮ್ಮ ಎಂಬ ಎರಡಕ್ಷರಕೆ ಅರ್ಥವೇನು ಹೇಳು
ನನಗಂತು ಗೊತ್ತಿಲ್ಲ ನಿನಗೆ ತಿಳಿಯುದೇನು
ಬಿಸಿಲಲ್ಲಿ ಬಾಡುವುದಿಲ್ಲ ಮಳೆಯಲ್ಲಿ ನೆನೆಯುವುದಿಲ್ಲ
ಚಳಿಯಲ್ಲಿ ನಡುಗುವುದಿಲ್ಲ ಬೀದಿಗೆ ಬಿದ್ದ ಮೇಲೆ
ನೋವು ನಲಿವುಗಳಿಲ್ಲ ಹಸಿವು ನೀರಡಿಕೆಯಿಲ್ಲ
ಮೇಲಿರುವವನ ಆಟವಲ್ಲ ನಿಮ್ಮಗಳ ಲೀಲೆ
ನೀ ಕುಂತಿಯಾಗಿ ಬಾಳು ಸಾಗಿಸಬಹುದು
ನಾ ಕರ್ಣನಾದರೂ ನಿನಗೆ ಕನಿಕರ ಬಾರದು
ಹಿಂತಿರುಗಿ ಬಂದೊಮ್ಮೆ ನೋಡು ನಮ್ಮ ಪರಿಸ್ಥಿತಿಯ
ಆಗಲಾದರೂ ನಿನಗೆ ತಪ್ಪಿನ ಅರಿವಾಗಬಹುದು
– ಶಶಿ ಭಟ್
Very nice gajal ramesh …