ಕರೆದೊಡನೆ ಬಂದುದ ಕಂಡು
ಯಾಮಾರಿದೆಯಾ..
ನಾ ಕಂದಮ್ಮನಲ್ಲ
ಕಣ್ಣ ದಿಟ್ಟಿಸಿ ನೋಡು
ಕ್ರೂರ ದೈತ್ಯನು ನಾನು
ಎಷ್ಟೋ ತ್ವಚೆಯ ಸೀಳಿ ಹಸಿ
ರಕುತವ ಕುಡಿದ ಹಲ್ಲಿನ ಮಸಿ
ಕಂಡು ಕರಳು ನಡುಗುತಿದೆಯಾ…
ಕಂದನೆಂದ್ ಯಾಮಾರಿದೆಯಾ..!
ಅಂದೊಮ್ಮೆ ನೆನಪಿದೆಯಾ
ಕತ್ತನು ಮುತ್ತಿಡಲು ಬಂದದು
ಸರಸವಲ್ಲವದು ನೆತ್ತರಾಸೆ
ತುಟಿಯ ತಾಕಲು ಉಸಿರ ಸೋಕುತ
ಪಕ್ಕ ಸುಳಿದದು ರಕುತದಾಸೆ
ನಂಬಿ ಕೆಟ್ಟೆ ನೀ ಪಾಪದ್ಹೆಣ್ಣೆ
ಓಡಿ ಹೋದರೂ ಬಿಡೆನು ನಾನು
ಶರಣು ಎಂದರೆ ಬಿಡುವೆನೇನು..?
ಚೂಪು ಕಂಗಳ ನೋಟಗಾತಿ
ಹಾಗೆ ನೋಡದಿರು
ತಲೆ ಸುತ್ತುವಂತಿದೆ..
ಶಕುತಿ ಹೀರುವ ಮಾಟಗಾತಿ
ಕೊಂಚ ದೂರವಿರು
ಬಲೆ ಬೀಸಿದಂತಿದೆ..
ಬೆಚ್ಚಿ ಬೀಳಿಸೋ ಗಾತ್ರ ನೋಡಿ
ಚುಚ್ಚು ನಗುವಿನ ಮೋಡಿ ಮಾಡಿ
ನನ್ನ ಕೊಲ್ಲಲು ನಿನ್ನ ನೀಡುವ
ಶಾಂತದರಸಿಯೇ ಯಾರೇ ನೀ
ನಿನ್ನ ಹೆಸರಾ ಜನನಿ
ಕರೆಯದಿರಲೂ ಬರುವುದ ಕಂಡು
ಆಟಾಡಿದೆಯಾ…
ನನ್ನ ಬಳಿ ಆಟಾಡಿದೆಯಾ…
-ವಿನೋದ್ ಕುಮಾರ್
ನಿನ್ನ ಹೊರತಿನ್ಯಾರು ಎನಗೆ ?
ಮತ್ತೆ ಮತ್ತೆ ಬಯಸಿದ
ಬಯಕೆಗೆ ಬೆಂಕಿಯದು
ಬೀಳುತಿರಲು ಕಟ್ಟಿದ್ದ
ಕನಸಿನಾ ಗೋಪುರ ಉರುಳುರುಳಿ
ನೆಲಸಮವಾಗುತಿರಲು ನಿನ್ನ
ಹೊರತಿನ್ಯಾರೆದುರು ಧೀನನಾಗಲೋ ?
ಅಕ್ಷರಶಃ ಒರೆದು ನೋಡುತಿರುವೆ
ಅಡಿಗಡಿಗೆ ನನ್ನ ಬಿಡದಂತೆ ಪರೀಕ್ಷೆಗೆ
ಒಡ್ಡುತಿರುವೆ ಹಠ ಹಿಡಿದವನಂತೆ
ನರಳಿಕೆಯನೆಲ್ಲ ಹಲ್ಲುಕಚ್ಚಿ ಸಹಿಸಿಕೊಳ್ಳುತಲೆ
ಇರುವೆ ಈ ಪರಿಯ ವೇದನೆಯ
ಧಾರೆಯ ಹೇಗೆ ನಾ ಸಹಿಸಿಕೊಳ್ಳಲೊ ?
ಕನಸದು ನನಸಾಗಿ ಎದುರಾಗಿ
ನಿನ್ನ ಪ್ರಾರ್ಥನೆಯ ಸಾಫಲ್ಯದ
ಕುರುಹಾಗಿ ಕಂಗೊಲಿಸುವುದೆಂದು
ಮೈಯೆಲ್ಲಾ ಕಣ್ಣಾಗಿಸಿಕೊಂಡು ಕಾಯುವುದೇ
ಆಯ್ತು ಮೊರೆಯ ಕೇಳದೆ ಮೂಕ ನೀನಾದರೆ
ಇನ್ಯಾರೆದುರು ದೈನ್ಯ ನಾನಾಗಲೋ ?
ನೀರಿಕ್ಷೆಯ ಬೃಹದಾಕಾರದ ಹೆಮ್ಮರಕ್ಕೆ
ನಿರಂತರ ನಿರಾಸೆಯ ಸಿಡಿಲೆ ಬಡಿಯುತ್ತಿರಲು
ಒಡಲೊಳಗೆ ವೇದನೆಯ ಸೆಳಕುಗಳೇ
ಅಳಿವಿರದಂತೆ ಕನಲುತಿರಲು ಬದುಕ
ಬೆಳಗುವ ನೀನೆ ಸಿಗದನ್ತಾಗಲು
ಅನಾಥನಾಗಿ ಅದೆಲ್ಲಿ ನಿನ್ನ ನಾ ಹುಡುಕಲೋ ?
– ಪ್ರವೀಣಕುಮಾರ್ ಗೋಣಿ
ಬೆತ್ತಲಾಗುವುದೆಂದರೆ….
ಅದು
ಹಂಚಿಕೊಳ್ಳವುದಲ್ಲ
ಮಿಂಚು
ಬಳ್ಳಿಯ ಸಹ ಸಮ್ಮತ,
ದೇಹದೊಲುಮೆಯ ನಾತ…
ಕತ್ತಲೆ ಬೆಳಕಿನ ಹಂಗಿಲ್ಲದ
ಮೌನ ವೃತ…!
ಅದು ಮಾತಲ್ಲ…
ಪಿಸುಮಾತು.
ಅವನು ಕೊಟ್ಟಿದ್ದು
ಅವಳು ಪಡೆದಿದ್ದು…
ಒಲವಿನ ವಿಲೇವಾರಿಗೆ
ಲೆಕ್ಕವನ್ನೇ ಮರೆಸುವ
ಜೀವಾಮೃತ…!
ಬೆತ್ತಲಾಗುವುದೆಂದರೆ
ಬಟ್ಟೆಯ ಕಳಚುವುದಲ್ಲ…
ದೇಹ ಮನಸುಗಳ
ಮಡಚಿಟ್ಟುಕೊಂಡು
ಪ್ರೇಮಗಂಗೆಯ ಸುಳಿಯಲಿ
ಸುಳಿದಿರುಗುವದು…!
-ಬಿ ಚಂದ್ರಶೇಖರ ಮಾಡಲಗೇರಿ.
ನಾ ಹೂವ ಮಾರುವವಳು
ಜೊತೆಗೆ ಕನಸುಗಳು ಸಹ
ನಾ ಕಟ್ಟಿಟ್ಟ ಮಾಲೆಗಳು ಎಲ್ಲಿಗಾದರೇನು!??
ಮಂದಿರಕ್ಕೋ ಮದುವೆಗೋ ಮಸಣಕ್ಕೋ?
ಭೇದವಿಲ್ಲ ಭಾವವಿಲ್ಲ,, ಬರಿ ಭವಣೆಗಳೆ ಎಲ್ಲಾ
ನಾ ಸುತ್ತಿಟ್ಟ ಹೂಗಳಿಗೆ ಸಿಹಿ ಮುತ್ತುಗಳೆಷ್ಟು!!
ಸುತ್ತುತ್ತಿದ್ದ ಕೈಗಳು ಬತ್ತಿದ್ದವಷ್ಟೆ
ನಾ ಕಟ್ಟಿಟ್ಟ ಹೂಗಳೆಲ್ಲ ಯಾರ್ಯಾರ
ಕನಸುಗಳಲ್ಲಿ ಭಾಗಿಯಾದವು;
ನನ್ನ ಕನಸುಗಳು ಅವು ಹಾಗೇನೆ ನನ್ನ ಹಾಗೆ
ಭಾಗವಾದವು ಭಗ್ನವಾಗಿ ಬತ್ತಿಹೋದವು
ಅದೊಂದು ತೀರ ನಾನೊಂದು ತೀರ
ಅದೇ ರಾತ್ರಿ ಅದೇ ಹರಿದ ಗೋಣಿಚೀಲ
ಭುಗಿಲೆದ್ದವು ನಾಳಿಗಾಗಿ ಮತ್ತೆ ಕನಸುಗಳು
ಬುಟ್ಟಿಯಲ್ಲಿದ್ದ ನಾಳೆಯ ಹೂವ ಮೊಗ್ಗಿನಂತೆ
ಕನಸಿಗೆ ಬೆಲೆಕಟ್ಟಬೇಕೆ!??
-ರೋಹಿತ್ ಶೆಟ್ಟಿ ಮೆಲಾರಿಕಲ್ಲ
ಮನದ ಮೌನ
ಏಕೋ ಏನೋ ಮನೆಯು ಇಂದು ಮೌನ ತಳೆದಿದೆ
ಬೇಸರಿಸಿ ಸೋತ ಮನಕೆ ಮಾತು ಹೊರಳದೇ
ಪ್ರೀತಿ ಪ್ರೇಮ ಆಸೆ ಬಯಕೆ ದೂರ ತೆರಳಿದೆ
ಹೇಗೋ ಏನೋ ಏಕೆ ಹೀಗೆ ಎಂದು ಅರುಹದೇ
ಕೂಡಿ ಕಳೆದ ಘಳಿಗೆ ನಿನಗೆ ನೆನಪು ಬಾರದೆ?
ಪ್ರೀತಿ ಬೆರೆತ ನಾಲ್ಕು ಮಾತ ಮನವು ಬೇಡಿದೆ
ಒಮ್ಮೆ ನಕ್ಕು ನೀನು ನಗೆಯ ತೋರ ಬಾರದೆ
ಬಂದು ಬಳಿಗೆ ಅಪ್ಪು ನನ್ನ ಮುನಿಸ ತೋರದೆ
ನೀನೇ ಜೀವ ನೀನೇ ಭಾವ ನನ್ನ ಬಾಳಿಗೆ
ನೀನೇ ಇರದೆ ನನ್ನಲೀಗ ಏನು ಉಳಿದಿದೆ
ನಿನ್ನ ಹೊರತು ಸ್ವರವೇ ಇಲ್ಲ ನನ್ನ ಕೊರಳಿಗೆ
ನೊಂದ ಮನವು ಬೆಂದು ಇಂದು ಕೂಗಿ ಕರೆದಿದೆ
ಮನದ ತುಂಬ ನಿನ್ನ ಬಿಂಬ ತುಂಬಿ ತುಳುಕಿದೆ
ಕಣ್ಣಂಚಿನ ನೀರ ಹನಿಯು ಕೂಡ ಅದನೆ ಹೇಳಿದೆ
ಹಗುರವಾಗಿ ಒಮ್ಮೆ ನೀನು ನೋಡ ಬಾರದೆ
ಸುಮ್ಮನೇಕೆ ಮೌನವಾದೆ ಏನು ಅರಿಯದೆ?
-ನಂದೀಶ್ ಕುಮಾರ್ ಮಂಡ್ಯ
ಪಕ್ಷಗಳು ಹಲವಾರು
ಜನರ ಸಮಸ್ಯೆಗಳು ಸಾವಿರಾರು
ಪಕ್ಷದಿಂದ ಪಕ್ಷಕ್ಕೆ ರಾಜಕಾರಣಿಗಳ ಹಾರಾಟ
ಮೂಲಭೂತ ಸೌಕರ್ಯಗಳಿಲ್ಲದೆ ಜನರ ಪರದಾಟ
ಅಂದು ಆ ಪಕ್ಷ
ಇಂದು ಈ ಪಕ್ಷ
ಯಾವ ಪಕ್ಷ ಬಂದರೇನು?
ಪ್ರಜೆಗಳ ಕಡೆಗಿಲ್ಲ ಲಕ್ಷ್ಯ
ಮತದಾರರು ಬೇಕು ಬಂದಾಗ ಚುನಾವಣೆ
ಅನಂತರ ಬೇಕಿಲ್ಲ ಮತದಾರರ ಬವಣೆ
ಪ್ರಮಾಣ ವಚನಕ್ಕಾಗಿ ರೈತರ ಮೇಲೆ ಆಣೆ
ಅಧಿಕಾರಕ್ಕೆ ಬಂದಾಗಿಲ್ಲ ರೈತರ ಹೊಣೆ
-ಜನಾರ್ಧನ ಎಂ.ಮೊಗೇರ