ಪಂಜು ಕಾವ್ಯಧಾರೆ

★ಸುತ್ತೋಣ ಬನ್ನಿ ಕರ್ನಾಟಕ★

ಬನ್ನಿರಿ ಗೆಳೆಯರೆ ನಾಡನು ಸುತ್ತಿ
ದಸರ ರಜೆಯನು ಕಳೆಯೋಣ||

ಸ್ವಚ್ಛ ನಗರ ಮೈಸೂರಿಗೆ ಹೋಗಿ
ದಸರೆಯ ವೈಭವ ನೋಡೋಣ||

ರಾಜಧಾನಿ ಬೆಂಗ್ಳೂರಿಗೆ ಹೋಗಿ
ಪ್ರೇಕ್ಷಣೀಯ ಸ್ಥಳ ಸುತ್ತೋಣ||

ಬಡವರ ಊಟಿ ಹಾಸನ ಜಿಲ್ಲೆಯ
ಬೇಲೂರು ಹಳೇಬೀಡು ನೋಡೋಣ||

ಬಿಸಿಲು ನಗರಿ ಬಳ್ಳಾರಿಗೆ ಹೋಗಿ
ಹಂಪಿಯ ಶಿಲ್ಪಗಳ ಸುತ್ತೋಣ||

ಬೆಳಕ ನೀಡುವ ರಾಯಚೂರಿನಲಿ
ಶಕ್ತಿನಗರವನು ನೋಡೋಣ||

ಬಾದಾಮಿ ಐಹೊಳೆ ಪಟ್ಟದ ಕಲ್ಲಿನ
ಕಲಾವೈಭವವ ಸವಿಯೋಣ||

ಬಂದರು ನಗರ ಮಂಗಳೂರಿನಲಿ
ಕಡಲಿನ ಆರ್ಭಟ ಅರಿಯೋಣ||

ಕರುನಾಡ ಕಾಶ್ಮೀರ ಕೊಡಗಲಿ ಸುತ್ತಿ
ಪರಿಸರ ವೈವಿಧ್ಯ ತಿಳಿಯೋಣ||

ಶಿವಮೊಗ್ಗದ ಜೋಗದ ಗುಂಡಿಯಲಿ
ಶರಾವತಿ ‌ಸೊಬಗನು ಸವಿಯೋಣ||

ಕೂಡಲ ಸಂಗಮ ಕ್ಷೇತ್ರಕೆ ಹೋಗಿ
ಬಸವೈಕ್ಯ ಸ್ಥಳವನು  ವೀಕ್ಷಿಸೋಣ||

ಚಿತ್ರದುರ್ಗದಲಿ ಕೋಟೆಯನೇರಿ
ಓಬವ್ವಳ ಕಥೆ ತಿಳಿಯೋಣ||

ಮಂಡ್ಯದ ಕನ್ನಂಬಾಡಿ ಕಟ್ಟೆಯಲಿ
ಕಾರಂಜಿಯ ಜೊತೆ ಕುಣಿಯೋಣ||

ಗುಮ್ಮಟ ನಗರಿ ವಿಜಯಪುರದಲಿ
ಗೋಳಗುಮ್ಮಟ ಹತ್ತಿ ಸುತ್ತೋಣ||

ಹುಬ್ಳಿ ಧಾರವಾಡ ಜೋಡಿ ನಗರದಿ
ವಿದ್ಯಾಸಂಸ್ಥೆಗಳ ತಿಳಿಯೋಣ||

ಎಷ್ಟೊಂದು ಪ್ರವಾಸಿ ಕ್ಷೇತ್ರ ಉಳಿದಿವೆ
ಬೇಸಿಗೆ ರಜೆಯಲೂ ಹೋಗೋಣ||
~~~~~~~~~~~~~~~~~
-ಹೊರಾ.ಪರಮೇಶ್ ಹೊಡೇನೂರು,

Paramesh Ho Ra

 

 

 

 


ಮಾತು-ಕಥೆ
ನಾಚುತಿಹೆ ನಾನೀಗ ನನಗೆ ಗೊತ್ತಿಲ್ಲದೆಯೇ…
ಮರೆಮಾಚುತಿಹೆ ನೆನಪುಗಳ, ತುಡಿಯುತಿಹ ಗೂಡಿನಲಿ !
ಹುಡುಕುತಿವೆ ಕಣ್ಗಳಿವು ,ಸಖಿಯ ಪಿಸುಮಾತುಗಳ..
ಕಣ್ಮುಚ್ಚಿ ಕಾದಿಹೆನು, ಹೆಕ್ಕುತಲಿ ನೆರಳುಗಳ !!

ಉಪಹಾರ ಸೇವನೆಗೆ ಬಂದಿತ್ತು ಉಪ್ಪಿಟ್ಟು…
ಸಂಕೋಚದಿಂದಲೇ ಸಂತೋಷ ತಂದಿತ್ತು, ಒದ್ದಾಡಿಸುವ ಬಿಕ್ಕಟ್ಟು !
ಕಂಗಳದು ನೆಟ್ಟಿತ್ತು, ನೈದಿಲೆಯ ಸ್ವಾಗತಕೆ..
ದೃಢವಾಗಿ ಮಾಡಿತ್ತು, ಮನಸದುವೆ ಹೊಸ ಹರಕೆ !!

ಹಾತೊರೆದ ಹೃದಯಕದು, ಹಾಲೆರದ ಹಾಗಿತ್ತು..
ಆಗಿರದ ಅನುಭವಕೆ, ಆರುಷಿಯು ತಗುಲಿತ್ತು !
ಬಡಿತಗಳ ಸದ್ದಿಗೆ, ಸುದ್ದಿಯದು ಹೊರಬಿತ್ತು..
ಮೆರವಣಿಗೆ ಸುಗ್ಗಿಗೆ , ಮನೆಗಳಿವು ಕಾದಿತ್ತು !!

ವಿರಹದಲಿ ಬಹು ಮರುಗಿ, ಕುರುಹುಗಳ ಕೂಡಿಸುತ..
ಬರಹದಲಿ ವದನದ ಭಾವಗಳ ವರ್ಣಿಸುತ !
ಮಗದೊಮ್ಮೆ ಕಾಯುತಿಹೆ, ನನ್ನವಳ ನೋಡಲು..
ಬರೆಯುತಿಹೆ ಕವಿತೆಗಳ, ನನ್ನವಳಿಗೆ ಬೀರಲು !!

-ಸುದರ್ಶನ್. ಜಾಲಿಹಾಳ್

sudarshan

 

 

 

 


ಗುಂಡು ಸೂಜಿ

ಚೂಪು ಮೂನೆ
ನಿನ್ನ ಕೊನೆ
ತಲೆ ಹಿಡಿದು ಚುಚ್ಚಿದಷ್ಟು
ಆಳಕ್ಕೆ ಇಳಿಯುತ್ತದೆ
ಸಹಿಸಿಕೊಂಡರೆ ಬೇನೆ.

ಇಷ್ಟುದ್ದ ಪುಟ್ಟ ದೇಹಕ್ಕೆ
ಗುಂಡಗಿನ,
ನುಣ್ಣಗಿನ ಬೋಳು ತಲೆ
ನೇವರಿಸೋಣ ಎಂದರೆ
ಜಾರೋ ಕೈ.
ಅಲ್ಲಲ್ಲಿ ಚುಚ್ಚಿಕೊಂಡು
ಅಂಟಿಸಿಕೊಂಡದ್ದು
ಮತ್ತೆ ಕಾಡುದು
ಚೂಪು ಮೂನೆಯಂತೆ 
ಕೊಂಚ ಜಾಸ್ತಿ.

ಮೆಲ್ಲ ಜಾಗ್ರತೆ,
ಕಳಚಿಬಿದ್ದ
ತುಕ್ಕು ಹಿಡಿದ ಹಳೆಯ ಸೂಜಿ
ಕಾಲ ಸಂಧಿಯ
ನಡೆವ ಮಂದಿಯ,
ಬೇಡವೆಂದರೂ ಚುಚ್ಚಬಹುದು
ಬಹುಶ ಹಾಗಾಗದಿರಲಿ ಎಂದು
ಅವರವರ ಚಪ್ಪಲಿ ಇರುದು,
ಆದರೂ ಕೊಂಚ ಜಾಗ್ರತೆ
ಸ್ವಂತ ಚಪ್ಪಲಿ ಇಲ್ಲದವರು.

ಸುಖೇಶ್ ಪೂಜಾರಿ

sukesh

 

 

 


ನೆಲದ ಹೆಗಲೂರಿದ ಗುರುತು

ಇಳಿಬಿದ್ದ ಮುಗಿಲು
ಎದಿಯಾಗ ಹೊಕ್ಹಂಗ 
ಗುಡಾರದ ಕಾಲುಗಳು ತಲೆಯ ನೇವರಸಿ
ಪಕ್ಕೆಲುಬಲಿ ಸೆಳೆತಗೊಂಡು ಉರುಳಿದಂತೆ

ಈ ಕತ್ತಲ ಸರಳ ಬಂದಿ ಹುಣ್ಣಿಗೆ
ಎಚ್ಚೆರಗೊಂಡ ಕಣ್ಣೆವೆಗಳಲಿ 
ಜಾಲಿಗಂಟಿದ ಜೋಳಿಗೆಗೆ
ಕರುಳುಣಿಸಿದ ಬೀದಿ ಬದಲಿಯಾದ ಸುದ್ದಿ!

ಎದೆಯಬ್ಬಿಸಿ ಬೆವರ ಕುಡಿದ ನೆಲ
ಒಡಲಿಗೆ ಕಪ್ಪು ¨ಟ್ಟೆ ಬಿಗಿಸಿಕೊಂಡು
ಕಣ್ಣೀರ ಕಡಲುರಿತದ ರೆಪ್ಪೆಗೆ
ಅಹವಾಲು ಹೊರಡಿಸಿದೆ
ಗುರುತಿನ ಸಾಕ್ಷಿಗಾಗಿ

ಬೇರಿನ್ಹಂಗ ಆಳ ಹೊಕ್ಕ ನೆನಪು
ಚಂದ್ರನ್ಹಂಗ ಇರುಳ ಕುಡಿದ ಕನಸು
ಬೀದಿ ಬದಿಯಲಿ ನೆಲೆಯೂರಿವೆ 
ಇರುಳ ಹಕ್ಕಿಯಾಗಿ

ಹೆಜ್ಜೆಗೆ ಗೆಜ್ಜೆ ಕಟ್ಟಿ 
ಕುಣಿದು ಕುಪ್ಪಳಿಸಿದ ತಮಟೆಗಳು
ಹಾಡಿಗೆ ಕಣ್ಣಾದ ಢಮರುಗದ ಕೋಲ್ಮಿಂಚುಗಳು
ಮೈಯೋಲೆಗಳಾಗಿ ಇಳಿಬಿದ್ದು 
ಉಯ್ಯಾಲೆಯಾದ ಬಿಸಿಯುಸಿರು
ಹೊರಳಾಡಿದವು
ನಿತ್ಯ ಚಕ್ರದ ಸುರುಳಿಯಲಿ

ತಲೆಮಾರುಗಳ ಕಾವುಂಡ ನೆಲೆ
ಹಲವು ಬುರುಡೆಗಳ ಜೀವ ಮಿಡಿತಕ್ಕೆ
ಶತಮಾನದ ಕಸೂತಿಯಾಗಿ
ವಂಶವೃಕ್ಷ ಚಿತ್ರಿಸಿ
ಹದವಾದ ಮಣ್ಣೊಳಗೆ 
ಬೆಸೆದುಕೊಂಡ ಬೀಜಗಳಾಗಿವೆ

ಸಾಲು ದೀಪದ ನಕ್ಷತ್ರಗಳ್ಹಂಗ
ನೆಲದ ಹೆಗಲೂರಿದ ಪುರಾವೆಗಳು 
ವಸಂತದ ಅಕ್ಕರೆಯಲಿ ನಿತ್ಯನೂತನದ ಘೋಷಗಳು
-ಕಿರಸೂರ ಗಿರಿಯಪ್ಪ

giriyappa

 

 

 

 


ಹೊಳ್ಳಿ  ಹೊಳ್ಳಿ  ಅವಳ  ಬಳ್ಳಿ 
ಅವಳ  ಕೋಪದ 
ಕಾವಳದಲ್ಲೊ  ಹೊಳೆಯುವ 
ಹವಳದ  ಹೊಳಪಿನ 
ಮಧುರ  ಅನುಭೂತಿಯಿದೆ.

ಅವಳ  ಸಿಡುಕು ದೂರಾಗಿಸಲು  
ಹುಚ್ಚು ಹುಚ್ಚಾಗಿ  ನಗಾಡಿ  
ಅವಳ ಮೊಗದಲ್ಲಿ  ಮಂದನಗೆಯ 
ಹೊಮ್ಮಿಸುವ  ಮೊಂಡತನದಲ್ಲೂ   
ಸಿಹಿ ಸೋಗಸೊಂದಿದೆ.

ಧೋ  ಅಂತಾ  ಹುಯ್ಯುವ 
ಮಳೆಯಂತೆ  ಅವಳಿಂದ 
ಹೊಮ್ಮುವ  ಮುನಿಸಿನ ಮಾತುಗಳಲ್ಲೂ  
ತಂಪೆರೆವ  ತುಂತುರು  ತಾಕಿದಂತಾಗುತ್ತದೆ.

ಬಿಗುವ  ತೊರೆಯಲೊಲ್ಲದ 
ಮನಸಲ್ಲಿಯೂ   ಸೋಲೊಪ್ಪದ ಬಿಂಕದಲ್ಲೂ   
ಹೃದಯದಿಂದ ಚಿಮ್ಮುವ  
ಒಲವ  ಬಚ್ಚಿಡುವ ಅವಳ  ಪರಿಯಲ್ಲೊಂದು  
ಬಣ್ಣಿಸಲಸಾಧ್ಯವಾದ ಮುದ ಒಂದಿದೆ.

– ಪ್ರವೀಣಕುಮಾರ್  ಗೋಣಿ

Praveen Goni

 

 

 

 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Mmshaik
Mmshaik
7 years ago

Uttam kavanagalu.shubhavagali

1
0
Would love your thoughts, please comment.x
()
x