ಪಂಜು ಕಾವ್ಯಧಾರೆ


ತುಂಡು ಬಟ್ಟೆಯ ಮಾನ….. 
ನಡೆದು ಹೋಗಲು ಅವಳು ಹಾದಿಯಲಿ 
ಹಸಿದ ಮೊಸಳೆಗಳಂತೆ ನಿಂತು 
ಕಾಯುವರು ಚುಡಾಯಿಸಲು …… 
ಸೂಜಿಯ ಕಣ್ಣೋಟಗಳಿಂದ ಕೊಲ್ಲುವರು 
ಅವಳ ಉಡುಗೆಯ ಅಂಚು ಪಾಪ!! ಗಾಳಿಗೆ ಹಾರಲು…. 
ಸಣ್ಣ ಬಟ್ಟೆ ತೊಡಲೇ ಬೇಕಿಲ್ಲವಳು 
ಕ್ಷಣ ಕ್ಷಣ ಒಳಒಳಗೆ ಸಾಯಲು ,
ಕಾಲು ಭೂಮಿಗೆ ಸೋಕಿದರೆ ಸಾಕು,
ಸಿದ್ಧವಾಗಿವೆ ಸಮಾಜ, ಕಟ್ಟುನಿಟ್ಟು, ಲಿಂಗ ತಾರತಮ್ಯ ಗಳು 
ಅವಳ ಇರಿಯಲು…. 
ತುಂಡು ಬಟ್ಟೆ ತೊಟ್ಟ ಮಾತ್ರಕ್ಕೆ ಹೆಣ್ಣು 
ಪರವಾನಗಿ ನೀಡಿದಂತೆಯೇ ಮುಟ್ಟಲು??????
ಹೌದೆನ್ನುವವರೇ ಹೇಳಿ ಹಾಯುವಿರಾ ನೀವು 
ತಾಯಿ ಉಣಬಡಿಸುವಾಗ ಅವಳ ಸೆರಗು ಕೊಂಚ ಜಾರಲು????
ಹೆಣ್ಣು ವಸ್ತುವಲ್ಲ ಜೀವವಿರುವವಳೇ ……. 
ತಾಯಿ, ಅಕ್ಕ, ತಂಗಿ, ಮಡದಿ ಮಾತ್ರವಲ್ಲ 
"ಅವಳು" ಎನ್ನುವ ಪ್ರತೀ ಹೆಣ್ಣು ಉಸಿರಾಡುವವಳೇ ……. 
ತುಂಡು ಬಟ್ಟೆಗೆ ಮಾನದ ಬೆಲೆ ಕಟ್ಟುವವರೇ 
ಮಾನವೀಯತೆಗೆ ವಸ್ತ್ರದ ಅಳತೆಯ ಪರದೆ ಹಾಕಿ ಮಾಡದಿರಿ ಮರೆ …… 
   —ಶೀತಲ್ 

sheethal vansaraj

 

 

 

 


ಮಾತಾಡಲೇಬೇಕು, ಆದರೆ ಏನು?

ಇಂತಹ ದಿನಗಳಲ್ಲಿ ನಾವು ಮಾತಾಡಲೇಬೇಕು
ಆದರೆ ಏನನ್ನು?

ಗತದ ಮಹಿಮೆ ಕೊಂಡಾಡುವ
ಸತ್ಯದ ರುಂಡ ಚೆಂಡಾಡುವ
ಭಂಡತನದ ಪರಮಾವಧಿಯ ಲೋಕವೊಂದು ಸೃಷ್ಠಿಯಾಗುತ್ತಿರುವ
ಇಂತಹ ದಿನಗಳಲ್ಲಿ ನಾವು ಮಾತಾಡಲೇ ಬೇಕು!

ಆದರೆ ಏನನ್ನು?
ಪುರಾಣಪುಣ್ಯ ಕತೆಗಳೇ ಇತಿಹಾಸಗಳಾಗಿ ವಿಜೃಂಬಿಸುವ ಹೊತ್ತಲ್ಲಿ
ಸುಳ್ಳುಗಳೇ ಸತ್ಯಕ್ಕಿಂತ ಸದೃಡವಾಗಿ ನಿಲ್ಲುವ, 
ಅಮಾಯಕರನ್ನು ಮೋಸಗೊಳಿಸುವ
ಗಿಡುಗಗಳೆಲ್ಲ ಪಾರಿವಾಳಗಳಂತೆ ರೆಕ್ಕೆಬಡಿದು ಮೋಸಗೊಳಿಸುವ
ಇಂತಹ ದಿನಗಳಲ್ಲಿ ನಾವು ಮಾತಾಡಲೇಬೇಕು,
ಆದರೆ ಏನು?

ನಾಡಿನ ದಾರಿಗಳು ನಮಗೆ ಮುಚ್ಚಿಕೊಳ್ಳುತ್ತಿರುವಾಗ
ಕರೆಯುವ ಕಾಡಿನ ದಾರಿಗಳನ್ನೇ
ಆಯ್ದುಕೊಳ್ಳಬೇಕೆ? 
ಚಟಪಟ ಸಿಡಿಯುವ ಚಿತೆಯ ಬೆಂಕಿ
ಉರಿಸುತ್ತಿದೆ ನನ್ನಾತ್ಮವ
ಇಲ್ಲಿ ಇರಲಾಗದೆ ಅಲ್ಲಿ ತೆರಳಲಾಗದೆ
ಬೇರುಬಿಟ್ಟ ಬಿಳಲುಗಳ ಕಿತ್ತೆಸೆಯುತ್ತ ಕಳೆದ ಕಾಲದ
ನೆನಪಿನ ನೆರಳುಗಳ ದಾಟುತ್ತ
ಕೇಳಿಕೊಳ್ಳುತ್ತಿದ್ದೇನೆ: ಮಾತಾಡುವುದೇ ಆದಲ್ಲಿ
ಮಾತಾಡಬೇಕು,
ಆದರೆ ಏನನ್ನು?
-ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

Madhusudan Nair

 

 

 

 ಮಿಲನ
=====

ಭೂಮಿ ಬಾನು ಮಿಲನಕೆ
ಮಳೆಯ ಸಿಂಚನದುಡುಗೊರೆ
ಗಾಳಿ ಗಂಧದಾ  ಬಂಧಕೆ
ಒಲವು ತಾನೇ ಆಸರೆ

ನದಿ ಸಾಗರ ಬೆರೆಯಲು 
ಸೆಳೆತ ತಾನೇ ಕಾರಣ
ಕತ್ತಲು ಬೆಳಕಾಗಲು
ರವಿಯಲ್ಲವೇ ಪ್ರೇರಣ

ಶಶಿ ತಾರೆಯರ ಗೆಳೆತನವು 
ನೀರವ ರಾತ್ರಿಯ ಸ್ಪೂರ್ತಿಯು
ಇಬ್ಬನಿಯೊಳು ಕಿರಣ ತೂರಿ
ಸಪ್ತ ವರ್ಣದಾರತಿಯು

ನಲ್ಲಿ ನಲ್ಲೆಯರ ಮಿಲನವು
ನಾಳಿನುಳಿವಿಗೆ ಚೇತನ
ಹರೆಯದಮಲ ಪ್ರಣಯಕಾಂಕ್ಷಿಗೆ
ಸುಗಮ ಹಾದಿಯು ಈ ಮಿಲನ

ಮಿಲನ ತಂದ ಆನಂದವು
ಸಂತೃಪ್ತಿಯ ಆಗರ 
ಚಲನ ಬಯಸದ ತನುವ
ಈ ಸ್ಪಂದನವೇ ಸುಮಧುರ

ಅಮುಭಾವಜೀವಿ

amu

 

 

 

 


ಜಲಕಲಾ
ಕಿಲ ಕಿಲ ನಲಿವ ಜಲ
ಕಲಕಲ ಹರಿವ ಜಲ

ಜಲಕ್ಕಿಲ್ಲಾ ಯಾವ ಕುಲ
ಜಲಕ್ಕಿಲ್ಲಾ ನಿಲ್ಲೋ ನೆಲ
ಜಲಕ್ಕಿಲ್ಲಾ ದೈವಬಲ
ಜಲಕ್ಕಿಲ್ಲಾ ಪುಣ್ಯ ಫಲ ||ಪ||

ನೆಲದ ಚರಾಚರಗಳಿಗೆ ಚಿನ್ಮಯಿ ಈ ನಿರ್ಜಲ
ನೇಸರನ ಕಿರಣಕೆ ಥಳಥಳ ಹೊಳೆವ ನಿರ್ಮಲ
ಭೂರಮೆಯ ಬಿಗಿದಪ್ಪಿಯ ಹಾಲ್ಗಡಲ ಸಂಕುಲ
ಬಾಯಾರಿದ ಜೀವಿಗಳಿಗೆ ಪನ್ನೀರಾಗೋ ಛಲ ||ಚ||

ಕಿಲ ಕಿಲ ನಲಿವ ಜಲ
ಕಲಕಲ ಹರಿವ ಜಲ

ಜಲಕ್ಕಿಲ್ಲಾ ಯಾವ ಕುಲ
ಜಲಕ್ಕಿಲ್ಲಾ ನಿಲ್ಲೋ ನೆಲ
ಜಲಕ್ಕಿಲ್ಲಾ ದೈವಬಲ
ಜಲಕ್ಕಿಲ್ಲಾ ಪುಣ್ಯ ಫಲ ||ಪ||
ಕಿಲ ಕಿಲ ನಲಿವ ಜಲ
ಕಲಕಲ ಹರಿವ ಜಲ

ಜಲಕ್ಕಿಲ್ಲಾ ಯಾವ ಕುಲ
ಜಲಕ್ಕಿಲ್ಲಾ ನಿಲ್ಲೋ ನೆಲ
ಜಲಕ್ಕಿಲ್ಲಾ ದೈವಬಲ
ಜಲಕ್ಕಿಲ್ಲಾ ಪುಣ್ಯ ಫಲ ||ಪ||

ಕಿಲ ಕಿಲ ನಲಿವ ಜಲ
ಕಲಕಲ ಹರಿವ ಜಲ

ಜಲಕ್ಕಿಲ್ಲಾ ಯಾವ ಕುಲ
ಜಲಕ್ಕಿಲ್ಲಾ ನಿಲ್ಲೋ ನೆಲ
ಜಲಕ್ಕಿಲ್ಲಾ ದೈವಬಲ
ಜಲಕ್ಕಿಲ್ಲಾ ಪುಣ್ಯ ಫಲ ||ಪ||

ಹೇ ಜಲ… ನೀನರಿವ ದಾರಿ ಚಂಚಲ
ಓ ಜಲ… ನೀನಿರುವ ಊರು ಸುಜಲ
ಹ್ಞಾ ಜಲ… ನೀನೆರೆವ ನಾಡು ಕೋಮಲ
ತಾ ಜಲ… ನಿನ್ನರಿವ ಮನಕೆ ಸುಫಲ

ಕಿಲ ಕಿಲ ನಲಿವ ಜಲ
ಕಲಕಲ ಹರಿವ ಜಲ

ಜಲಕ್ಕಿಲ್ಲಾ ಯಾವ ಕುಲ
ಜಲಕ್ಕಿಲ್ಲಾ ನಿಲ್ಲೋ ನೆಲ
ಜಲಕ್ಕಿಲ್ಲಾ ದೈವಬಲ
ಜಲಕ್ಕಿಲ್ಲಾ ಪುಣ್ಯ ಫಲ ||ಪ||

ಯುಗಯುಗಾಂತರಗಳ  ಕನ್ನಡಿಗರಿಗೆ ಕಾವೇರಿ ಜೀವ ಜಲ
ತಲೆತಲಾಂತರಗಳ ತಲೆಕಾಯೋ ತಾಯಿ ಕಪಿಲ
ಜಲ ನೀ ಸರ್ವ ಜಲುಮಕೂ ಪರ್ವ ನದಿನಿಧಿಯೆ ಸಕಲ
ಝರಿ ತೊರೆ ಕೆರೆಯ ಜಲಕ್ ಜಲ, ಜುಳು ಜುಳು ಜುಮ್ಮೆನ್ನೋ ಜಲ ||ಚ||

ಕಿಲ ಕಿಲ ನಲಿವ ಜಲ
ಕಲಕಲ ಹರಿವ ಜಲ ||ಪ||

-ಪರಮ್

param

 

 

 

 


 ಅವಳು, ಮುದುಡಿದ ಮೊಗ್ಗಿನ ತರಹದವಳು!
ಸಂಜೆಯ ಚಂದ್ರನ ತಂಪಿಗೆ ಸೋಲದೆ,
ಹನಿ ಹನಿಯಾಗುವ ಮಂಜಿಗೆ ಕರಗದೆ,
ನಸುಕಿನ ಸೂರ್ಯನ ಕಿರಣವು ಸೋಕಲು,
ಮೈದೊಡವಿ ಎದ್ದು ಅರಳಿ ಹೂವಾಗುವಳು…

ಅವಳು, ಯೋಧನ ಹೃದಯದ ಪ್ರೀತಿಯಂತವಳು!
ನಿತ್ಯವು ಸುತ್ತಲೂ ಗುಂಡಿನ ಮೊರೆತ,
ಸಮರದ ಸಮಯದಿ ಎದೆ ಏರಿಳಿತ,
ನೆನೆಸಿದ ಕ್ಷಣದಲಿ ಮನಸ್ಸಿನ ಭಾರವ,
ದೂರಮಾಡುತ ತುಟಿಯಂಚಿನಲಿ ನಸುನಗುವಾಗುವಳು…

ಅವಳು, ಪುಟ್ಟಮಗುವಿನಂತವಳು!
ನಕ್ಕರೆ ನಗುತ ಅತ್ತರೆ ಅಳುತ,
ಕಣ್ಣಿನ ಸನ್ನೆಯ ಕೋಪವ ಅರಿಯುತ,
ಮನಸ್ಸಿನ ಮುನಿಸನು ಹೊರತೋರಿಸದೆ,
ಹಾಗೋಹೀಗೋ ಮನದಿನಿಯನನ್ನು ಮುದ್ದಾಡುವವಳು…

ಅವಳು, ದೂರದ ಬೆಟ್ಟದ ಚಿತ್ರದಂತವಳು!
ನೋಡುವ ಕಣ್ಣಿಗೆ ಮುದನೀಡುತಲಿ,
ಸೌಂದರ್ಯಕ್ಕೆ ಇನ್ನೊಂದು ಹೆಸರಾಗುತಲಿ,
ತನ್ನಯ ದುಃಖವ ಹೊರತೋರಿಸದೆ,
ನಗುನಗುತಲಿ ಜಗ ನಗೆಗಡಲಾಗಿಸುವವಳು…

ಅವಳು, ನೀರಲಿ ತೇಲುವ ನೀರ್ಗಲ್ಲಂತವಳು!
ಮುತ್ತಿನ ಬಣ್ಣದಿ ಮಿರಿಮಿರಿ ಮಿಂಚುತ,
ನೀರಿನ ಹೊಡೆತಕೆ ಗಾಳಿಯ ರಭಸಕೆ,
ಕರಗದೆ ಸೊರಗದೆ ಧೃಡವಾಗಿದ್ದು,
ನನ್ನಯ ಕಣ್ಣಿನ ಶಾಖಕೆ ಕರಗಿ, ನನ್ನಲಿ ನೀರಾಗಿ ಸೇರುವವಳು…

ಅವಳು, ನನ್ನವಳು ನನ್ನವಳು!
ಕಾಡಿಸಿ ಪೀಡಿಸಿ ಮುದ್ದಿಸಿ ಚುಂಬಿಸಿ,
ನನ್ನೊಳಗಿಂದು ನಾನಾಗಿರುವಳು,
ಹೆಸರಲ್ಲೇನಿದೆ ಹೇಳಲಾರೆನು,
ಉಸಿರಲಿ ಉಸಿರಾಗಿರುವವಳವಳು…
ಅವಳು ನನ್ನವಳು…

-ನಾನಲ್ಲ

mahantesh-karikatte

 

 

 

 

 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x