ಪಂಜು ಕಾವ್ಯಧಾರೆ


ನಿನ್ನ ಮಾತುಗಳು ಬೇಡುತ್ತಿರುವಾಗ ಬಲಿ
ನನ್ನೆದೆಯ ನೋವನ್ನು ಯಾರಲ್ಲಿ ಹೇಳಿಕೊಳ್ಳಲಿ?

ಮಾತಿಗೂ ಮೊದಲು ಕೋಪವೇ ಹೆಡೆ ಬಿಚ್ಚಿ ನಿಲ್ಲುತ್ತಿರುವಾಗ
ಪಾತಾಳ ಗರುಡದ ಮಂತ್ರ ಕೋಲನ್ನು ಹುಡುಕುತ್ತ ಎಲ್ಲಿ ಹೋಗಲಿ?

ಪ್ರೀತಿಯ ಹೂದೋಟದಲ್ಲಿ ಝಳಪಿಸುವ ಕತ್ತಿ ನರ್ತಿಸುವಾಗ
ಸಾಣೆ ಹಿಡಿಯುವವರನ್ನು ಎಷ್ಟೆಂದು ಹುಡುಕಿ ಗಡಿಪಾರು ಮಾಡಲಿ?

ಮನದ ಗರ್ಭಗುಡಿಯಲ್ಲಿ ನಂದಾದೀಪವೇ ಹೊತ್ತಿ ಪ್ರಜ್ವಲಿಸುವಾಗ
ತಣ್ಣಿರು ಸುರಿದು ಬೆಂಕಿ ನಂದಿಸುವವರನ್ನು ಹುಡುಕುತ್ತ ಎಲ್ಲಿ ಹೋಗಲಿ?

ಹೃದಯದಲ್ಲಿ ಪ್ರತಿಷ್ಟಾಪಿಸಿ ಮೂರ್ತಿ ತನ್ನನ್ನೇ ಭಗ್ನಗೊಳಿಸಿಕೊಳ್ಳುವಾಗ
ಮುಕ್ಕಾಗದಂತೆ ಗರ್ಭಗುಡಿಯನ್ನು ಕಾವಲು ಕಾಯುವ ಕೆಲಸವನ್ನು ಯಾರಿಗೆ ವಹಿಸಲಿ?

ನನ್ನದೇ ಪ್ರತಿಬಿಂಬ ನನ್ನನ್ನೇ ಮೂದಲಿಸಿ ಅಣಕಿಸುತ್ತಿರುವಾಗ 
ಹಂಗಿಸುವ ಮೂರು ಮುಖದ ಜಗಕೆ ಹೇಗೆ ಮುಖ ತೋರಿಸಲಿ?

ನನ್ನ ಆತ್ಮಸಾಕ್ಷಿಯೇ ನನ್ನೊಳಗನ್ನು ತಿವಿದು ಹಣಿಯುತ್ತಿರುವಾಗ
ಬೊಗಸೆಯಲ್ಲಿ ಜೀವದೃವ್ಯವ ಹಿಡಿದು ಅನಾಮಿಕಳಾಗಿ ಹೇಗೆ ಪಯಣಿಸಲಿ?

ಚಾಚಿದ ತೋಳನ್ನು ಹಿಂದೆಗೆದುಕೊಂಡು ನೀನು ಮುಖ ತಿರುವುವಾಗ
ನೀನಿಲ್ಲದೆ ಹೆಜ್ಜೆ ಮುಂದಿಡುವ ಸಾದ್ಯತೆಯನ್ನಾದರೂ ನಾನು ಹೇಗೆ ಯೋಚಿಸಲಿ?

‘ಸಿರಿ’ಯ ಎದೆಯ ಗೂಡಲ್ಲಿ ಪ್ರೀತಿಯ ನಂದಾದೀಪ ಮಿನುಗುತ್ತಿರುವಾಗ
ನಿನ್ನ ಪ್ರೀತಿ ಪ್ರಾಣವಾಯುವಾಗಿ, ಜೀವ ಸೆಲೆಯಾಗುವುದನು ಬಯಸದೇ ನಾನು ಹೇಗಿರಲಿ?
-ಸಿರಿ

Shreedevi Keremane

 

 

 

 


ಅವನ  ಕೈಯಾಟದಲ್ಲಿ 
ನೀ  ಇರದೇ ಈ  ಜಗದೊಳಗೆ 
ತಿರುಲುಂಟೆ   ಜೀವಿಗಳ  ಜೀವನಕೆ 
ನೀ  ಮೀಟುವ  ಅಸ್ತಿತ್ವದ  ವೀಣೆಗೆ 
ಹೊಮ್ಮುವ  ಗಾನವಲ್ಲವೇ  ಎಲ್ಲರಾ  ಬದುಕು ?

ಗೋಚರಿಸಲಾರೆ  ಕಣ್ಣಿಗೆ ಎನ್ನುವುದ  ಹೊರತು  ಎಲ್ಲಿ 
ಇಲ್ಲ  ನಿನ್ನ  ಇರುವಿನ  ಅಮೃತದ  ಸ್ಪರ್ಶ ?
ಬೆಳಕ  ಸೆಳಕಲ್ಲಿ  ಕಾವಳದ  ಮಡುವಲ್ಲಿ ಅನುಕ್ಷಣದ ಒಡಲಲ್ಲಿ  ಇನ್ನಿಲ್ಲದಂತೆ ಆವರಿಸಿರುವೆಯಲ್ಲವೇ ?

ಸಂಕಟದಲ್ಲೂ  ಸಂಗಾತಿ  ನೀ  ಎನಗೆ 
ಸಂತಸದಲ್ಲೂ   ಸಹಚಾರಿ  ನೀ  ಎನಗೆ 
ನಿನ್ನ  ತೊರೆದು  ಇನ್ನಾರು  ಆದಾರು  ನನಗೆ 
ಮುನ್ನ  ಪೊರೆದು  ನಡೆಸುವ  ನಿನ್ನ 
ವಾತ್ಸಲ್ಯದಾ  ಎದುರು  ನಾ  ಬಲು  ಕೇವಲನೋ ?

– ಪ್ರವೀಣಕುಮಾರ್  ಗೋಣಿ

Praveen Goni

 

 

 

 


   ನಿರಂತರ!

ಮೇಲೇರುವವರು
ಕೆಳಗೆಬಿದ್ದವರ
ಮೇಲಕ್ಕೆತ್ತದೆ
ಅವರನೇ ಮಾಡಿ
ಮೆಟ್ಟಿಲು
ಹತ್ತುವರು
ಮೇಲೆ! ಮೇಲೆ!
ಬಿದ್ದವರು ಮೇಲೇಳಲು
ಕೊಡದೆ ಅವಕಾಶ
ಮತ್ತೆ ಮತ್ತೆ 
ತುಳಿಯುವರು
ತುಳಿಯಲೆಂದೇ
ಸಾಲುಗಟ್ಟಿ ನಿಂತವರು!
ಅಶಕ್ತರ
ಎಡವುವವರ
ಬಾಗಿರುವವರ
ನಿಂತವರ
ತುಳಿ ತುಳಿದು
ಹತ್ತುವರು
ಇನ್ನೂ
ಮೇಲೆ! ಮೇಲೆ!
ಹೆಚ್ಚಿಸಿಕೊಳ್ಳವರು
ಅಂತರ
ನಿರಂತರ!
-ಕೆ ಟಿ ಸೋಮಶೇಖರ ಹೊಳಲ್ಕೆರೆ.


ಸಮುದ್ರದ ಅಲೆಯಲಿ ಹೂವು ಒಂದು
ತೇಲುತ ಬರುತಿತ್ತು.
ಹಾಲಿನ ನೊರೆಯ ತೆರೆಯಲಿ ಸಿಕ್ಕಿ
ಕುಣಿಯುತ ಬರುತಿತ್ತು.

ಜಲಚರ ಬಳಗದಿ ತಾನೊಂದಾಗಿ
ನಲಿಯುತ ಬರುತಿತ್ತು.
ರಭಸದ ತೆರೆಗೆ ನಡುಗಿ
ಹೆದರಿ ಬರುತಿತ್ತು.

ಕಂಪನು ಸೂಸುತ ಸಮುದ್ರದಿ
ತಂಪನ್ನು ಹರಡಿತ್ತು.
ಲವಣದ ನೀರಿಗೆ ಕೊಂಚ
ಪರಿಮಳವ ನೀಡಿತ್ತು.

ನೀರಲ್ಲಿ ಕೊಚ್ಚಿಹೋಗುವನೆಂಬ
ಭಯಕ್ಕೆ ಬೇಗನೆ ಬರುತಿತ್ತು.
ಬೇಗನೆ ದಡವನ್ನು ಸೇರುವ 
ಆತುರ ಅದಕ್ಕೆ ಇತ್ತು.

ಸಂಜೆಯಾಗುತಲಿ ದಡದ ತುಂಬಾ
ಜನಸಾಗರವೇ ನೆರೆದಿತ್ತು.
ದಡವನು ತಲುಪಿದ ಹೂವು
ಯಾರದೋ ಕಾಲಡಿಯಾಗಿತ್ತು.

-ಪ್ರವೀಣ ಕಾಗಾಲ.ಕುಮಟಾ.

praveen-kagal

 

 

 

 


ಅಲೆಮಾರಿಯ ಹಾದಿಯೊಳಗೆ……
ಯಾವ ಅಪರಿಚಿತ ಹಾದಿಯಲಿ ಅಡ್ಡಾಡಿದೆ?
ನಡೆದಷ್ಟೂ ಸಾಗದ ಪಯಣ
ಕಲ್ಲು ಮುಳ್ಳುಗಳ ಸಹಯಾನ
ಮುಂದೆ ಹೋಗಿ ತಲುಪಿದವರು ಕಾಯಲಿಲ್ಲ ನಮ್ಮ ಬರುವಿಕೆಗೆ
ಹಿಂದೆ ಬಿದ್ದು ಕುಂಟುತ್ತಾ ಬರುತ್ತಿರುವವರೂ ಕಾಯುವುದಿಲ್ಲ ನಾವು ನಿಲ್ಲಲೆಂದು
ಜೊತೆಗಿದ್ದವರಿಗೊ ಸೋಲಿಸಿ ನಮ್ಮನ್ನು
ಗುರಿ ಸೇರಿಬಿಡುವ ದಾವಂತ…
ಸಿಕ್ಕವಳು ತೆಕ್ಕೆಗೆ ಬಂದಾಳೆಂಬ  ಆಸೆಯೊಳಗೇ
ಶ್ರೀರಾಮಚಂದ್ರನ ಪೋಸು
ಕಂಡ ಗಂಡಸರೆಲ್ಲ ಹಾದರಕೆ ಕರೆದಾರೆಂಬ 
ಕನವರಿಕೆಯಲಿ
ಗಂಡಸು ಹೆಂಗಸು
ಎಲ್ಲರೂ ಒಳಗೊಂದ ನೆನೆಯುತ್ತ
ಹೊರಗೊಂದ ಒರೆಯುತ್ತ
ನಡೆಯುತ್ತಿರುವಾಗಲೇ ಸೂರ್ಯ  ಸತ್ತು 
ಕತ್ತಲಾಯಿತು
ಬೆತ್ತಲಾದ ಜಗದೊಳಗೆಲ್ಲರೂ ಕಪ್ಪು ಚುಕ್ಕಿಗಳಾಗಿ
ಅಲ್ಲಲ್ಲೇ ಗುಡಾರಗಳ ಹೂಡಿ
ರಾತ್ರಿಯಡುಗೆಗೆ ಒಲೆ ಹೂಡಲು
ಮೂರು ಕಲ್ಲುಗಳ ಹುಡುಕ ತೊಡಗಿದರು

ಹೇಗೆ?
ಯಾವ ಕಾರಣವೂ ಇಲ್ಲದೆ ಪ್ರೀತಿಸುವುದು ಹೇಗೆ
ಯಾವ ಕಾರಣವೂ ಇಲ್ಲದೆ ದ್ವೇಷಿಸುವುದು ಹೇಗೆ
ಯಾವ ಮಾತುಗಳೂ ಶಬುದಗಳಾಗದ
ತಣ್ಣನೆಯ ಮೌನವ  ಇಲ್ಲವಾಗಿಸುವುದು ಹೇಗೆ
ಯಾವ  ಆಯುಧಗಳೂ ಇಲ್ಲದೆಯೇ
ಎದುರಾಳಿಯನ್ನು ಮಣಿಸುವುದು ಹೇಗೆ
ಮೇಲಿನೆರಡು ಅತಿರೇಕಗಳ ನಡುವೆಯೇ
ಬದುಕ ಪ್ರೀತಿಸುವುದಾದರೂ ಹೇಗೆ
ಬೇಸಿಗೆಯ ಮಳೆಯ ನಂಬಿ ಬೀಜ ಬಿತ್ತುವುದು ಹೇಗೆ
ಸುರಿವ ಜಡಿಮಳೆಯೊಳಗೆ ತೇವಗೊಂಡ ಕನಸುಗಳ  ಒಣಗಿಸುವುದು ಹೇಗೆ
ಇಷ್ಟು ಪ್ರಶ್ನೆಗಳ ಹೊತ್ತೂ
ಕವಿತೆ ಬರೆಯದಿರುವುದಾದರೂ ಹೇಗೆ?
-ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

Madhusudan Nair

 

 

 

 

 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x