ಪಂಜು ಕಾವ್ಯಧಾರೆ

ಮೌನಿ,
ಗಿಜಿಗಿಡುವಂತೆ ಜನ ಸುತ್ತಲೆಲ್ಲರಿದ್ದರೂ
ನಾ ನನ್ನೊಳು ಮಾತ್ರ ಮೌನಿ,
ನನಗೆ ನಾನೇ ಮಿತ್ರ ನಾನೇ ಶತ್ರು
ಏರಿಳಿತಗಳಲ್ಲೆಲ್ಲಾ ನನ್ನದು ಒಂದೇ ವೇಗ
ಏರಿಗೆ ಕುಗ್ಗೇನು ಇಳಿವಿಗೆ ಹಿಗ್ಗೇನು
ಜಾರಿದರೂ ಅಷ್ಟೇ ನೇಪಥ್ಯಕ್ಕೆ ಸರಿದರೂ ಅಷ್ಟೇ,,
ಒಂಟಿ ದಾರಿಯಲಿ ನನಗೆ ನಾನೇ ಜಂಟಿ 
ಒಬ್ಬೊಬ್ಬನೇ ಮಾತನಾಡಿಕೊಳ್ಳುತ್ತೇನೆ
ಅಳುತ್ತೇನೆ, ನಗುತ್ತೇನೆ ಒಮ್ಮಮ್ಮೆ 
ದು:ಖದಲಿ ಬಿಕ್ಕಿ ಬಿಕ್ಕಿ ಅಳುತ್ತೇನೆ,
ಗೊತ್ತು !
ಈ ಜನರೆಲ್ಲ ನನ್ನ ಹಿಂದೆ ಆಡಿಕೊಳ್ಳುವರೆಂದು,
ಹುಚ್ಚುಡುಗನೆಂದು ಲೊಚಗುಟ್ಟುವರೆಂದು,
ಹರಿದ ಪ್ಯಾಂಟಿಗೆ ದಾರ ಕಟ್ಟಿ ಗೇಲಿ ಮಾಡುವರೆಂದು,
ಕಲ್ಲು ಹೊಡೆದು ಕೇಕೆ ಹಾಕಿ ನಗುವರೆಂದು,
ಹಿಂದೆ ಎಂದೋ ಒಮ್ಮೆ ನಾ ನೋಡಿದ ಹುಚ್ಚನೂ ಹೀಗೆ ಇದ್ದ!
ಮೊದಲೆಲ್ಲ ಸುಂದರವಾಗಿದ್ದ ; ಸಾಹುಕಾರನಾಗಿದ್ದ
ಎಲ್ಲ ಕಳೆದುಹೋದ ದಿನದೀ ಮಾತು ಮುಗಿಸಿ ಹೂತು ಹೋದ 
ಮೌನದಲ್ಲೇ ಹುಚ್ಚನಾದ;
ನಾನೋ ತೀರ ಬಡವ ಸ್ಪುರದ್ರೂಪಿ ಮನುಜ
ಮುಂದೊಮ್ಮೆ ನಾನೂ ಸುಂದರವಾಗೇನು, ಸಾಹುಕಾರನಾಗೇನು
ಈಗ ನಕ್ಕವರೆಲ್ಲ ಆಗ ಮೆಚ್ಚಲೂ ಬಹುದಲ್ಲ 
ಸಾಕು ಈಗ ಇದುವೇ ಎಲ್ಲ,,,
*ಸಿದ್ದರಾಮ ತಳವಾರ

shidram talawar

 

 

 

 


ಕಾಳಿಗೆ-ಹಸಿವು

ಎಷ್ಟೋ ಮನೆಬಾಗಿಲಗಳ
ತಟ್ಟಿ, ಕಾಡಿಬೇಡಿ ಹೆಕ್ಕಿತಂದ.
ಅಕ್ಕಿ ಕಾಳುಗಳು… 
ಗುಡಿಸಲಿನ ಎಸರಿನಲಿ.
ಬೇಗಬೇಗನೆ ಬೇಯುತ್ತಿದ್ದವು …!
ಯಾಕೋ ಗೊತ್ತಿಲ್ಲ …?
ಇರಬಹುದು..!?
ಸೀರೆಯ ಸೆರಗೊಳಗೆ ಆರ್ದ
ಬೆಂದಿರಬೇಕೋ…?
ಇಲ್ಲಾ..
ಹೊಟ್ಟೆಯೋತ್ತಿ ಕಣ್ಣೀರ
ಕಾರುತ್ತ ಕುಳಿತ ಮಕ್ಕಳ
ಒಡಲ ಹಸಿವು.
ಅಕ್ಕಿಕಾಳಿಗು ತಿಳಿದಿದ್ದಿರಬೇಕು..!?

*ರೋಹಿತ್ ಶೆಟ್ಟಿ ಮೇಲಾರಿಕಲ್ಲ್*

rohith-shetty

 

 

 

 


ಕಿಟಕಿಯಿಂದ ಜಿಗಿಯಬಹುದೇ…..!?

ನಾನೀಗಲೂ ಬಸ್ಸಿಗೆ ಹತ್ತಿದೊಡನೆ
ಕಿಟಕಿ ಬದಿಯ ಜಾಗ ಹುಡುಕಿ ದೊಪ್ಪನೆ ಕೂರುತ್ತೇನೆ
ಚಿಕ್ಕ ಹುಡುಗಿಯಂತೆ…..
ಮನಸ್ಸು ಮಗುವಾಗಲು ಇರುವ ಸಂದರ್ಭಗಳನ್ನು ಬಿಡದ ಜಾಣೆಯಂತೆ.
ನಿಜವಾಗಿಯು ಚಿಕ್ಕವಳಲ್ಲದ ಕಾರಣ
ಕೈ ಹೊರಗಿಡಬೇಡ, ತಲೆ ಒಳಗೆ ಹಾಕು ಅದೂ ..ಇದೂ..
ಕಾಳಜಿಯ ಮಾತುಗಳಿಲ್ಲವಷ್ಟೆ.

ಬಸ್ಸು  ಹೊರಡುತ್ತಿದೆ 
ಕಿಟಕಿ ಇನ್ನೂ ಅಪ್ಯಾಯಮಾನವಾಗುತ್ತಿದೆ
ಮರ ಗಿಡ, ಗಗನವೆಲ್ಲಾ ಹಿಂದೋಡುತ್ತಿದೆ
ಎಂತಹ ವಿಸ್ಮಯ ಜಗತ್ತು ಕಣ್ಣೊಳಗೆ

ಇಷ್ಟಗಲ ಕಿಟಕಿಯಲಿ ಎಷ್ಟೊಂದು ವಿಶಾಲ ಲೋಕ
ಯೋಚಿಸುತ್ತೇನೆ…
ಮನಸ್ಸಿನ ಬಿಡುವಿನ ನಡುವೆ
ಕಿಟಕಿಯೇ ಇಲ್ಲದಿದ್ದರೆ ಏನಾಗುತ್ತಿತ್ತು?

ಜಗದಗಲ ವ್ಯಾಪಿಸಿರುವ ಆಕಾಶವೇ
ಇಷ್ಟಗಲ ಕಿಟಕಿಯೊಳಗೆ ನಾಗಾಲೋಟದಿಂದ ಹಿಂದಕ್ಕೋಡುತ್ತಿದೆ
ಕಾಲ ಇನ್ನೂ ಶರವೇಗದಲ್ಲಿ
ಅಟ್ಟಿಸಿಕೊಂಡು ಬರುತ್ತಿದೆ!
ಈ ಭಾವ ಪ್ರಪಂಚದ ಕುಂಚಕ್ಕೆ ಅದ್ದಿಕೊಳ್ಳಲು
ಕಿಟಕಿಯ ಸಹಾಯ ಎಷ್ಟಿಲ್ಲ?
ಕಿಟಕಿಯ ವಿಸ್ಮಯಕ್ಕೆ ಆತುಕೊಂಡ ಇಂದು ನಿನ್ನೆಯದಲ್ಲದ ಮನಸ್ಸು ;
ಹಿಂದಕ್ಕೋಡುತ್ತಿರುವ ಗಿಡಮರಗಳನ್ನು
ನಿಜವೆಂದೇ ನಂಬಿದ ದಿನಗಳಿಂದಲೂ…

ಕಿಟಕಿಗೆ ತಲೆಯಾನಿಸಿ ಸುಮ್ಮನೆ ಪವಡಿಸೋಣವೆಂದರೆ
ಜಗತ್ತು ಬಿಡುತ್ತಿಲ್ಲ ನೋಡಿ!
ಕೌತುಕದ ಕಿಟಕಿಯೊಳಗಿಂದ
ಸೌಂದರ್ಯ ಖನಿಯ ಉಪಾಸನೆ ಬೇರೆ

ಮನಸ್ಸಿನ ಕನಸು ಮಗುಮ್ಮಾಗಿ ಓಡುವ
ಕಿಟಕಿ ಹಿಂದಿನ ನಮ್ಮಗಳ ಬದುಕಿನ
ನಾಳೆಗಳ ನಿಲ್ದಾಣಕ್ಕಿಳಿಯಲು ನಮಗೆ
ಕಿಟಕಿಯಿಂದ ಬಿಡುಗಡೆ ಬೇಕಾಗಿಲ್ಲ
ಕಿಟಕಿಯೊಳಗಡೆಯೆ ಬಿಡುಗಡೆ ಬೇಕಾಗಿದೆ! !
                                                       
ಸಂಗೀತ ರವಿರಾಜ್

Sangeetha

 

 

 

 

 



       
ಕೊಡ ಮಾರುವ ಹುಡುಗಿ.

ಇವಳು ಹೊಸ ಕೊಡಗಳನ್ನು ಮಾರುವ ಹುಡುಗಿ,
ತನ್ನ ಬೆನ್ನು ಬಾಗಿಸಿಕೊಂಡು ಭುಜಕ್ಕೆ ಬಿದಿರಿನ
ಕಟ್ಟಿಗೆಗೆ ಖಾಲಿ ಕೊಡಗಳನ್ನು ನೇತುಹಾಕಿಕೊಂಡು
ನಸುಹೊತ್ತಿನಲ್ಲೆ ಮಾರಾಟಕ್ಕೆ ಹೊರಡುತ್ತಾಳೆ.

ಇವಳು ಶಿಕ್ಷಣದಿಂದ ವಂಚಿತಳು ಆದರೆ ಕೂಡುತ್ತಾಳೆ,
ಕಳೆಯುತ್ತಾಳೆ, ಗುಣಿಸುತ್ತಾಳೆ, ಭಾಗಿಸುತ್ತಾಳೆ ತಾನುಕೂಡ
ತನ್ನ ಬದುಕಿನ ಭಾಗವಾಗುತ್ತಾಳೆ, ಇದು ವಂಚಿತರು
ಆ ಕ್ಷಣಕ್ಕೆ ಹೊಂದಿಕೊಳ್ಳಬೇಕಾದ ಸ್ಥಿತಿ ಅವಳದು.

ಇಲ್ಲಿ ಬಡತನದ ಹಂಗಿನ ಅರಮನೆಯಿದೆ ಬದುಕಬೇಕಾದ
ಹೊಟ್ಟೆ ಚೀಲದ ಖಾಲಿ ಪಾತ್ರೆಯಿದೆ, ಅವಳ ಹರಿದ
ಬಟ್ಟೆಗಳಲ್ಲಿ ಬಣ್ಣ-ಬಣ್ಣಗಳ ಡಾವಿಂಚಿಯ ಚಿತ್ತಾರಗಳಿವೆ,
ಈ ದೇಶದ ಬಡತನದ ಬಹುದೊಡ್ಡ ಪಾತ್ರವಿದೆ.

ಇವಳು ಸುತ್ತಿಬರದ ಸ್ಥಳವಿಲ್ಲ ಕೂಗಿ-ಕೂಗಿ
ಗಂಟಲು ಸದ್ದು ಎಂದು ಮಾಸುವುದಿಲ್ಲ, ಈಗೀಗ
ಮಾರಿ ನೋಡಿ ವ್ಯಾಪಾರ ಮಾಡುವವರು ಯಾರು
ಇಲ್ಲ ಈ ದೇಶದಲ್ಲಿ ಅತ್ಯಾಚಾರಿಗಳಿಗೆ ಬರವಿಲ್ಲ,
ದೇವರು ಇದ್ದರೇ ಅವರನ್ನು ಅವನೇ ಬಲ್ಲ.

ಕಾಲಿಗೆ ಚಪ್ಪಲಿಯಿಲ್ಲ ಸುಡುಬಿಸಿಲಿಗೆ ಸವಾಲು
ಹಾಕುತ್ತಾಳೆ, ನೋಡುವವರ ನೋಡಿ ಮತ್ತೆ-ಮತ್ತೆ
ಖಾಲಿ ಕೊಡಗಳ ಸದ್ದಿನಿಂದ ಕೂಗುತ್ತಾಳೆ, ಕಾಕ್ರೀಟು
ನಾಡಿನ ಕಟ್ಟಡಗಳ ನೋಡಿ ತನ್ನ ಕನಸುಗಳನ್ನು ಅತಿ
ಎತ್ತರಕ್ಕೆ ಒಣಗು ಹಾಕುತ್ತಾಳೆ.

ಆದರೆ..
ಅವಳ ಹೊಸ ಖಾಲಿ ಕೊಡಗಳ ಹಾಗೆ ಅವಳ
ಕನಸುಗಳು ಖಾಲಿಯಾಗಿಲ್ಲ, ಅವಳಲ್ಲಿ ಭರವಸೆಯಿದೆ
ಬದುಕು ಸಾಗಿಸುವ ನಾಳೆಗಳ ಛಲವಿದೆ.

-ರಮೇಶ ಬಾಲಿ 

ramesh-bali

 

 

 

 

 



ಕನ್ನಡವ್ವಳ ಆತಂಕ

ಹೊರಟೆ…
ಗಾಳಿ ವಿಹಾರಕ್ಕೆ
ಕನ್ನಡವ್ವ ನನ್ನ ಮುಂದೆಯೇ ಹೋಗುತ್ತಿದ್ದಳು
ಮೊಳ ಮಲ್ಲಿಗೆ ಮುಡಿದು.
ಅವಳ ಎರಡೆಜ್ಜೆ ಮುಂದೆ,
ಪ್ಯಾಂಟು ಟೀಶರ್ಟ್ ತೊಟ್ಟ ಇಂಗ್ಲೀಷ್ ಬೆಡಗಿ.

ಶುಭೋದಯ ಅಂದೆ
ನನ್ನವ್ವ ತಿರುಗಿ ನಲ್ಬೆಳಗು ಅಂದಳು
ಟಸ್ಸು ಪುಸ್ಸು ತಿರುಗಲೇ ಇಲ್ಲ.
ಅವಳ ಮಟ್ಟಿಗೆ ಅವಳ ನಡಿಗೆ.

ಕನ್ನಡಮ್ಮನ ಸೀರೆ ಅಲ್ಲಲ್ಲಿ ಹರಿದು
ನಾಲ್ಕಾಣೆ ಚಂದ್ರ ಇಣುಕುತ್ತಿದ್ದ..
ಅಮ್ಮ ಯಾಕೀ ಪಾಡು ಅಂದೆ
ಇಗ ಮಗ,ನನ್ನ ಸವತಿಯಿಂದ ನನಗೆಲ್ಲಿ ಉಳಿಗಾಲ
ಎಂದು ಇಂಗ್ಲೀಷ್ ಬೆಡಗಿಯತ್ತ ಕೈ ಸೋರಿಸಿದಳು.

ಕನ್ನಡವ್ವಳ ಮೈ ಪೂರ ಯಾರೋ ಹೊಡೆದ ಬರೆ
ಸೊಣಕಲ ಮೈ 
ಆರೈಕೆ ಇಲ್ಲದೆ ಸೊರಗಿದ ದೇಹ
ಸವಕಲು ಮೋರೆ.

ಅಮ್ಮಳ ಕೈ ಹಿಡಿದು ಕಣ್ಣೀರಾಕಿದೆ
ಅವಳ ಹಾಡು ಪಾಡು ನೋಡಿ
ಅಮ್ಮ ಬಾ ಮನೆಗೆ ಹೋಗೋಣ ಅಂದೆ
ಕನ್ನಡ ನೆಲವೇ ನನ್ನ ಸೂರು ಕಂದ
'ಅಮ್ಮ' ಅಂದರೆ ನಾನಲ್ಲಿರುವೆ.
ನಿಮ್ಮಂತ ಕವಿಗಳ ಮನಸ್ಸೇ ನನ್ನರಮನೆ.
ಅವಳ ಪಾದಕ್ಕೆ ಎರಗಿ ನಮಸ್ಕರಿಸಿ ಹೊರಡಲು ಅನುವಾದೆ.

ನಿಲ್ಲು ಕಂದ,
ನನ್ನ ನೆಲದಲ್ಲಿ 
ಈ ಬೆಡಗಿಯ ಸಂತಾನ ಹೆಚ್ಚುವುದು
ನನಗೇ ಸುತಾರಮ್ ಇಷ್ಟವಿಲ್ಲ
ಮೊದಲು ಓಡಿಸಿ ಈ ನೆಲ ಬಿಟ್ಟು.
ಅವಳಿಗಿರುವ ಬೆಲೆ ಗೌರವ ನನಗಿಲ್ಲ
ನಾ ಬಂದರೆ ಕನ್ನಡಿಗರ ನಾಲಗೆ ಮೇಲೆ.
ಎಷ್ಟಂತ ಸಹಿಸಿಕೊಳ್ಳಲಿ
ಅನ್ನ ನೀರು ಬಿಟ್ಟು ಕಡ್ಡಿಯಾಗಿದ್ದೇನೆ
ಎಲ್ಲೆಲ್ಲೂ ಆ ನನ್ನ ಸವತಿಯದೇ ದರ್ಬಾರು !
ವೈಯಾರ ಬಿನ್ನಾಣ.

ಇಗೇ ಆದರೆ 
ನಾನೊಂದು ದಿನ ಸತ್ತೇ ಹೋಗುತ್ತೇನೆ.!
ನನ್ನ ಜೊತೆ ಕವಿ ಕುಲ 
ನೆಲ ಜಲ ಸಂಸ್ಕೃತಿ ಎಲ್ಲವೂ ಸರ್ವನಾಶ ಶತಸಿದ್ಧ.
ಎಚ್ಚೆತ್ತು ಕೊಳ್ಳಲು ಹೇಳು ಕಂದ.
ನೀವೆಲ್ಲಾ ಅನಾಥವಾಗುತ್ತೀರಿ.
ಪಾಶ್ಚ್ಯಾತಿಕರಣ ನಿಮ್ಮನ್ನು ನುಂಗುವುದು ಬೇಡ.
ಈ ನೆಲದ ಮೇಲೆ ಸವತಿಯರ ಹೆಜ್ಜೆ ಗುರುತು
ಉಸಿರಾಡುವುದು ಬೇಡ.
ಎಂದು ಕಣ್ಣೀರಾಕುತ್ತ…
ಕಣ್ಮರೆಯಾಗಿದ್ದಳು
ನನ್ನ ಕಣ್ಣೊಳಗೆ ಜಿನುಗುವ ಕಣ್ಣೀರ
ಒರೆಸಿಕೊಂಡು ಕಣ್ಣ ಬಿಡುವುದರೊಳಗೆ.

ಬಿದಲೋಟಿ ರಂಗನಾಥ್

Ranganath B

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Tirupati Bhangi
Tirupati Bhangi
7 years ago

ella kavitegalu tumba channagive "mouni" kavite manavnnu avarisitu

1
0
Would love your thoughts, please comment.x
()
x