ಮುಖವಾಡ!
ನಮಗೆ,
ಹುಟ್ಟುತ್ತಲೆ ತೊಡಿಸುತ್ತಾರೆ
ಜಾತಿ ಧರ್ಮದ ಮುಖವಾಡ
ದೊಡ್ಡವರಾಗುತ್ತಲೆ ಮತ್ತೆ ನಾವೆ ತೊಡುತ್ತೇವೆ
ಬಣ್ಣ ಬಣ್ಣದ ಮುಖವಾಡ
ನಂಬಿದ ಹೆಂಡತಿಯ ಎದರು
ನಂಬದ ಗೆಳತಿಯೆದರೂ
ಪ್ರೀತಿಸುವ ಮಿತ್ರನ ಎದರು
ದ್ವೇಷಿಸುವ ಶತ್ರುಗಳೆದರೂ
ನಮ್ಮ ವೃತ್ತಿಗೊಂದರಂತೆ ಇದೆ ಮುಖವಾಡ
ಪ್ರವೃತ್ತಿಯಾಗಿ ಮತ್ತೆ ಬೇರೆ ಮುಖವಾಡ
ಸಾರ್ವಜನಿಕ ಬದುಕಿನಲ್ಲಿ
ಮುಖವಾಡಗಳದೆ ಮೇಲುಗೈ
ಮುಖವಾಡವಿಲ್ಲದೆ ಕ್ಷಣಹೊತ್ತು
ಬದುಕಲಾರೆವು ನಾವು
ನಾವು ಮುಖವಾಡ ಕಳಚುತ್ತಲೆ ಇಲ್ಲ
ಕನ್ನಡಿ ತೋರುವ ಮುಖ ನಮ್ಮದೆಂದು ನಂಬಿರುವೆವು ಎಲ್ಲ
ನಿಜವಾಗಿ ನಾವು ನಾವೇ ಅಲ್ಲ
ಯಾರು ಯಾರಿಗೊ ಏನೇನೊ ಎಲ್ಲ!
ಪ್ರಶಾಂತ ಎಮ್. ಕುನ್ನೂರ,
ಜೀವಕಳೆ
ಕಣ್ಣಿನ ರೆಪ್ಪೆಯ ಹಿಂದೆ
ಬಿಂಬವು ನಿನ್ನದಿದೆ
ಚೆಲ್ಲಿದ ಬೆಳಕಿನ ಕಿರಣ
ಸೆಳೆದಿದೆ ಎನ್ನಯೆದೆ
ಸಂಜೆಯ ಸುಳಿವನು ಅರಿತು
ಕಾಡುತಿದೆ ಕನಸುಗಳ
ಮಾತದು ಮೌನದಿ ಬೆರೆತು
ಅರಳಿಸಿದೆ ಭಾವಗಳ
ನಾಚಿದ ನಗುವನು ಕಂಡು
ಮೂಡಿತಿದೆ ಅನುರಾಗ
ಕಂಗಳ ಕಾಂತಿಗೆ ಕರಗಿ
ಹಾಡುತಿಹೆ ನವರಾಗ
ಮನಸಿನ ಮಾತನು ಕೇಳಿ
ನೆನಪಿಸಿದೆ ಸೋನೆಮಳೆ
ಒಲವಿನ ನಂಟಿಗೆ ಇನಿಯೆ
ತುಂಬುತಿದೆ ಜೀವಕಳೆ
-ಮಂಜು ಹೆಗಡೆ
ಅತ್ತಿದ್ದು ಸಾಕು ಅಮ್ಮ ನೀನಿನ್ನು
ನಾನಿರುವೆ ಒರೆಸಲು ಕಣ್ಣ ನೀರನ್ನು
ಹೆಣ್ಣಾಗಿ ಹುಟ್ಟಿ ನೀ ಪಟ್ಟ
ಪಾಡು ಬೇಡ ಬೇರಾರಿಗೂ
ಅಪ್ಪ ಎನ್ನುವ ಪಟ್ಟ ಹೊತ್ತವ
ದುಷ್ಟ ಬೇಡ ಬೇರಾರಿಗೂ
ನಿನ್ನ ಬಳಸುವಾಗಿದ್ದ ಕಾಳಜಿ
ನಮ್ಮಿಬ್ಬರ ಬದುಕಿಸುವಾಗ ಅವನಿಗಿಲ್ಲ
ಹೆಣ್ಣಾಗಿ ಬದುಕುವುದೇ ಕಷ್ಟವಿರುವಾಗ
ತಾಯಿ ಪಟ್ಟ ಕಟ್ಟಿ ಬಿಟ್ಟು ಹೋದನಲ್ಲ
ಬೀದಿಯಲ್ಲೇ ನಮ್ಮಿಬ್ಬರ ಬದುಕು
ನನಗೆ ನೀನು ನಿನಗೆ ನಾನು ಎಲ್ಲದಕ್ಕೂ
ನೋಯದಿರು ತಾಯಿ ನೀನು
ಸದಾ ನೆರಳಾಗಿರುವೆ ನಾನು
ಮೈಗೆ ಬಟ್ಟೆ ಇರದಿದ್ದರೇನು
ನಿನ್ನೊಲವ ಬಿಸಿಯಪ್ಪುಗೆ ಇರಲು
ಹಸಿದ ಹೊಟ್ಟೆ ಹಪಹಪಿಸಿದರೂ
ಹಂಚಿ ತಿನ್ನುವ ನಿನ್ನ ಮನವಿರಲು
ನಿನ್ನ ನೋಯಿಸಿದ ಜಗಕ್ಕಿರಲಿ
ನನ್ನದೂ ಒಂದು ದಿಕ್ಕಾರ
ನೀ ಅನುಭಿಸಿದೆಲ್ಲಾ ಅನುಮಾನವ
ಅಭಿಮಾನವಾಗಿಸಿಕೊಂಡು ಪಡೆವೆ ಸಂಸ್ಕಾರ
ತಲೆ ತಗ್ಗಿಸಿ ನಿಲ್ಲಬೇಕು ಸಮಾಜ
ನಮ್ಮದು ಪರಿಸ್ಥಿತಿಯ ಕಂಡು
ತಲೆ ಎತ್ತಿ ಬಾಳಿ ಬಾಳಿಸುವೆ
ಅಮ್ಮ ನಿನ್ನೊಲವಾಮೃತ ಉಂಡು
-ಅಮುಭಾವಜೀವಿ
ಆ ಹನಿ
ತಟ್ಟನೆ ಬೀಸಿದ ಗಾಳಿಯಷ್ಟೆ
ರಭಸದಲಿ ತೊಟ್ಟಿಕ್ಕಿತು ಕಣ್ಣೊಳಗೆ
ಬೆರಳ ತುದಿಗೆ ತಂದು
ನೋಡಬೇಕೆನ್ನುವಷ್ಟರಲ್ಲೇ
ಪಟ್ಟನೆ ಮಾಯವಾದ
ಅದರ ಹುಡುಕಾಟದಲ್ಲಿ ನಾನೂ
ಅಯ್ಯೋ
ಅಂದ ಹಾಗೆ ಅದು
ಮಳೆ ಹನಿಯಲ್ಲ ನೀರ ಹನಿಯೂ ಅಲ್ಲ
ನನ್ನ ಪ್ರಿಯ ಸಖಿಯ ಕಣ್ಣೀರ ಹನಿ
ಒಂದು ಕ್ಷಣದಲ್ಲೇ
ನನ್ನ ಕಣ್ಣೊಳಗೆ ಧುಮುಕಿ ವಿಲೀನ
ಪ್ರತ್ಯೇಕಿಸಿಲಾರದೆ ಗುರುತಿಗೂ ಸಿಗದೆ
ನನ್ನೊಳಗೆ ಎಲ್ಲೋ
ಮನ ತೊಳಲಾಟಕೆ ಸಿಕ್ಕಿ
ಹುಡುಕಾಟ ನಡೆಯುತ್ತಿದೆ ಬಲು ಎಚ್ಚರದಲಿ
ಅಳಲೇಬಾರದು ಅತ್ತು ಬಿಟ್ಟರದು
ಉದುರಿಬಿಡಬಹುದೆಂಬ ಭಯ
ಸದಾ
ನನ್ನ ಅಳುವಿಗೆ ತಡೆಗೋಡೆಯಾಗಿ
ಕಣ್ಣ ವಹಿಯೊಳಗಿರಲಿ
ಭದ್ರವಾಗಿ
-ಸುನೀತ.ಕುಶಾಲನಗರ
"ಗಜ್ಹಲ್"
ಮತ್ತದೆ ಮಾದಕ ಹೆಜ್ಜೆ ಕರೆತಂದಿದಿಂದು ನಿನ್ನ ಮನದಂಗಳಕೆ
ಮತ್ತೆ ಭಯದ ಬಯಲಿನಲಿ ನಡುಗುತಿದೆ ಮನ ಸೊಲುವೆನೆಂದು
ನಿನ್ನ ಮನವನೊಮ್ಮೆ ಕೇಳಿಬೀಡು ಮತ್ತೆ ತೋರೆದೊಗುವದೇನು?
ಮತ್ತೆ ತಲೆ ತಗ್ಗಿಸಭಾರದು ನಾನು ಪ್ರೀತಿಯ ಸೋಲಿನಲಿ
ಬದುಕು ನನ್ನನ್ನಿಲ್ಲಿ ತಂದು ನಿಲ್ಲಿಸಿದೆ, ನೀ ಬರಬೇಡ ಜೊತೆಗಿಂದು
ನೀ ಮಾಯಾವಿ, ಮೊಸದ ಚಂದಗಾತಿ, ಸಾಯಿಸಬೇಡವೆ ನನ್ನ;
ಬದುಕೊಂದು ಕದನ ನಾ ಜಯಿಸಬೇಕಿದೆ ಅದನ
ಮತ್ತೆ ಸೊಲಿನ ಸುಳಿಯಲಿ ಸಿಲುಕಿಸಿ ನಲುಗಿಸದಿರೇನ್ನ
ನೋಯುತಿಹವು ಎಷ್ಟೊ ಮನಸುಗಳು ನಿನ್ನ ನಂಭಿ ಏ ಪ್ರೀತಿಯೇ
ಇನ್ನಾದರು ನಿಲ್ಲಿಸು ನಿನ್ನಾಟವನು ಮನಸು ಮಸಣವಾಗುವ ಮುನ್ನ
ಬದುಕಿನ ಚಿಲುಮೆಯಾಗು, ನೀ ಜೀವದ ಗೆಲುವಾಗು,
ಅದನು ಬಿಟ್ಟು ಸ್ಮಶಣದ ತವರಾಗದಿರು ಪಾಪಿ ಪ್ರೇಮವೇ;…,
-ಸಿದ್ದುಯಾದವ್ ಚಿರಿಬಿ