ಬೆಳಗಲಿ ದೀಪ
***
ಹೊತ್ತಲಿ ದೀಪ
ಹೊತ್ತಿ ಉರಿಯುತ್ತಿರುವ ಭ್ರಷ್ಟರ ನಡುವೆ
ಹೊತ್ತೇರುವದರಲ್ಲಿ
ಹೊಸತನವ ಹೊಮ್ಮಿಸಲಿ
ಬೆಳಗಲಿ ದೀಪ
ಬಡವರ ಬಾಗಿಲಲಿ ಗುಡಿಸಲುಗಳಲಿ
ಬೆಳಕಾಗುವದರೊಳಗೆ
ಬದುಕು ಕತ್ತಲಿಂದ ದೂರವಾಗಲಿ
ವಿಜೃಂಭಿಸಲಿ ದೀಪ
ಸೋಲನ್ನುಂಡು ಹತಾಸೆಗೊಳಗಾದ ಮನಸುಗಳಲಿ
ಗೆದ್ದು ಬೀಗುವವರ ಸೊಕ್ಕುಮುರಿದು
ಬಿದ್ದಲ್ಲೇ ಬಿದ್ದಿರುವ ವೃದ್ಧರ ಬಾಳಲಿ
ಝೇಂಕರಿಸಲಿ ದೀಪ
ಹಣದ ಆಸೆಗೆ ಹೆಣವ ಕೆಡವಿದವರ ಚಿತೆಯೆದುರು
ಹೆಣ್ಣಿನ ದೇಹಕೆ ಕಣ್ಣ ಹಾಕುವ
ಕಾಮುಕರ ಶವದೆದುರು ಸುಡುಗಾಡಲಿ
ಶೃಂಗಾರಗೊಳ್ಳಲಿ ದೀಪ
ಸಿಂಧೂರವಿಲ್ಲದ ಹಣೆಗಳಮೇಲೆ
ಕಣ್ಣುಗಳಿಲ್ಲದ ಕುರುಡರೆದೆಯಲಿ
ಬಣ್ಣವಿರದ ಬದುಕಿನ ದಾರಿಯಲಿ
ಮೊಳಗಲಿ ದೀಪ
ಮಾನವತೆಯ ಬೆಳಕ ಚೆಲ್ಲುತ ಚದುರಿಸುತ
ಮನವನರಿತು ನಡೆಯುವವರ ಮನದಂಗಳದಲಿ
ಮನುಜ ಕುಲಕೆ ಜಯವ ನೀಡಲಿ..
=ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ.
ಬಂದೆ ನೀ ಬಂಧುವಾಗಿ
ಬಿಸಿಲ ಬೇಗೆಗೆ ಕಾದು
ಬಿರಿದು ಬಾಯಿ ಬಿಟ್ಟಿದ್ದ
ಭುವಿಗೆ ಬಂದೆ ನೀನು ಬಂಧುವಾಗಿ
ತೊಟ್ಟು ನೀರಿನ
ದಾಹವ ತೀರಿಸಲು
ಜೀವಧಾನಿಯಾಗಿ
ಬಂದೆ ನೀನು ಬಂಧುವಾಗಿ
ಮೇಘದೆಡೆಗೆ ಮೊರೆ ಮಾಡಿ
ಇಲ್ಲದಿರುವ ದೇವರ ಬೇಡಿ
ರಂಟೆ ಹೊಡೆದು
ಹಸನು ಮಾಡಲು
ನಂಬಿ ಕೂತ ರೈತಬಂಧುಗಳಿಗೆ
ವರವಾಗಿ ಬಂದೆ ಬಂಧುವಾಗಿ
ಲೋಕಕ್ಕೆಲ್ಲ ಎಚ್ಚರ
ನಿನ್ನ ಗುಡುಗಿನ ಸದ್ದು
ಪಳಪಳ ಪಳಾಯಿಸಿ
ಮುಗಿಲು ಒಡೆಯುವಷ್ಟು ಮಿಂಚಾಯಿಸಿ
ಧರೆಗೆ ಧಾರೆ ಎರೆದೆ ಬಂಧುವಾಗಿ
ಎಲೆಉದುರಿ
ಚಿಗುರೊಡೆವ ಮರಗಳಿಗೆ
ಹಸಿರಾಗಿ ಬಂದೆ ಬಂಧುವಾಗಿ
ಕಂಪಿರದೆ ಕಮರಿದ್ದ
ಕುಸುಮಗಳಿಗೆ
ಕಂಪಾಗಿ ಬಂದೆ ನೀ ಬಂಧುವಾಗಿ…
ಕ.ಲ.ರಘು.
ಬಾದರಾಯಣ………
ಆ ದಿನ
ಸಾವಿರಾರು ಬದುಕುಗಳಿರುವ
ಕಾಯಕವ ಕೈಲಾಸವಾಗಿಸಿದ ಕೇರಿಗೆ
ಸಂಧ್ಯಾಕಾಲದಲಿ ರಥಬೀದಿಯಿಂದ
ಅನ್ಯಾಯ ಅಸಮಾನತೆಯ ವೇಷತೊಟ್ಟವನೊಬ್ಬ
ನಾಟಕ ಮಾಡುತ್ತಾ
ಸಮಾನತೆಯ ಕೇರಿಗೆ ಬಂದ
ಬದುಕುಗಳು ಬರಮಾಡಿಕೊಂಡವು
ಪ್ರೀತಿಯ ಬಿತ್ತಿದವು
ಪಾದತೊಳೆದು ಕುಡಿದವು
ಇದನ್ನೇ ನೋಡುತ್ತಿದ್ದ
ಪಾದದ ಕೆಳಗೆ ಹಾಸಿದ ಹೂನೆಲ ನಕ್ಕಿತು
ಅವನ ಮುಂದಿಟ್ಟ ಅಕ್ಕಿಕಣಕ ನಾಚಿತು
ನೋಡಿದ ಗಿಡಗಂಟೆಯ ಮನ ನೋಯಿತು
ಯಾರಿಗೂ ತಿಳಿಯಲಿಲ್ಲ ಅವನ ಮಸಲತ್ತು
ಆದರೂ
ನಾಡು ಸದ್ದು ಮಾಡಿತು
ಸುದ್ದಿ ಮಾಡಿತು
ಅವನೊಬ್ಬ ಮಹಾನ್ ಸುಧಾರಣಾವಾದಿ…..
ಈ ದಿನ
ಸಮಾನತೆಯ ಕೇರಿಯಿಂದ ಬಂದ ಸಾವಿರಾರು ಜನ
ಮಹಾನ್ ಸುಧಾರಣಾವಾದಿ ಎಂದು
ಹೆಸರು ಗಿಟ್ಟಿಸಿಕೊಂಡಿದ್ದವನ
ಊರ ಗಲ್ಲಿಗಳಲ್ಲಿ ಅವನ ರಥಬೀದಿಯಲ್ಲಿ
“ಆಹಾರ ನಮ್ಮ ಆಯ್ಕೆ ಭೂಮಿ ನಮ್ಮ ಹಕ್ಕು”
ನಾವೆಲ್ಲಾ ಒಂದೇ ಎನುತ
ಬುದ್ಧ ಬಸವನ ಉಸಿರು ಹಿಡಿದು
ಕೂಗಿ ಕೂಗಿ ನ್ಯಾಯ ಕೇಳುತ್ತಿದ್ದರೆ………
ಊರಿಗೆ ಬಂದ ಕೇರಿಯ ಜನರ ಕರೆಯದೆ
ಮಾತಾಡಿಸದೆ ಕೈ ತೊಳೆಯಲು ನೀರು ಕೊಡದೆ
ಅಷ್ಟ ದಾರದವರ ಊಟದ ಪಂಕ್ತಿಯಲಿ ನೀವೇಕೆ?
ಎನುತ ಬೇಧವ ಉಪದೇಶಿಸಿ
ಬಾವಿಯ ಕಪ್ಪೆಯಂತೆ ವಟಗುಟ್ಟುತ್ತಾ
ಉಪವಾಸದ ವಿಷವ ಬಿತ್ತುತ್ತಾ
ಕೇರಿಯ ಜನರು ನಡೆದು ಬಂದ ಬೀದಿಯಲಿ
ಸಗಣಿ ಗಂಜಳವ ಚೆಲ್ಲುತ್ತಿದ್ದ
ಮುಸ್ಸಂಜೆಯ ಮಸಲತ್ತು
ಯಾರಿಗೂ ತಿಳಿಯಲಿಲ್ಲವೆಂದಲ್ಲ
ಆದರೂ
ನಾಡು ಸದ್ದು ಮಾಡಿತು ಸುದ್ದಿ ಮಾಡಿತು
ಅವನೊಬ್ಬ ಮನುವ್ಯಾಧಿ ಎಂದು……
ಆದದ್ದು ಇಷ್ಟೆ
ಅವನೇ ಕೇರಿಗೆ ಹೋಗಿ
ಪಾದ ತೊಳೆಸಿಕೊಂಡಿದ್ದ
ಕೇರಿಯ ಅವನ ಬಳಿ ಬಂದರೆ
ಕೈ ತೊಳೆಯಲು ನೀರು ನಿರಾಕರಿಸಿದ್ದ………
– ರಮೇಶ ಗಬ್ಬೂರ್
ಮಳೆ ಹನಿ
ಮಳೆಯ ಹನಿಯೊಂದು
ನೆನಪುಗಳ ಹಸಿಗೊಳಿಸಿ
ಹೃದಯಕೆ ತಂಪೆರೆದು
ಪದಗಳ ಮಾತಾಗಿಸಿದೆ
ಬರಡಾದ ಭಾವಗಳ
ಶುಷ್ಕತೆಗೆ ತೆರೆಯೆಳೆದು
ಬಳಲಿದ ಚೇತನಕೆ
ತಾಜಾತನವ ನೀಡುತಿದೆ
ಬಿರುಕಾದ ಮನದಂಗಳದಿ
ಆರ್ದ್ರತೆಯು ಆವರಿಸಿ
ಹಸಿರು ಬಸಿರೊಡಲಿಂದ
ಹೊಸಚಿಗುರು ಇಣುಕುತಿದೆ
ಬರದ ಛಾಯೆಯ ಕಳೆದು
ಒರತೆಯ ಸೆಲೆಹರಿಸಿ
ಚಿರವಾದ ಭಾವಗಂಧ
ಪಸರುವಂತೆ ಉತ್ತೇಜಿಸಿದೆ
-ಮಂಜು ಹೆಗಡೆ
ಆತ್ಮಹತ್ಯೆ
ಅವಳನ್ನೇ ಪ್ರೀತಿಸಿದೆ ನಾ
ಹಗಲಿರುಳು ಕನಸಕಡಲ
ಅವಳೊಡನೆ ದಾಟಿಹೆ ನಾ
ನನಗೆ ನಾನೆಂದರೆ, ನನ್ನದೆಂದರೆ
ಕೇವಲ ಅವಳೇ
ನನ್ನ ಉಸಿರಾಟ, ಧಮನಿಯ ಬಡಿದಾಟ
ನನ್ನಾತ್ಮ, ಅಸ್ಮಿತೆ ಎಲ್ಲವೂ ಅವಳೇ
ಮಣ್ಣು-ಹೆಣ್ಣು ಮೆಳೈಸಿ ಏಕ ಸ್ವರೂಪದಲಿ
ಮುಷ್ಟಿ ಬಿಗಿದು, ಕಣ್ಣಿಗೊತ್ತಿ
ಮುತ್ತಿಡುವ ಸರ್ವಸ್ವದಲಿ
ಅವಳೆದೆಯ ಆಳ, ನನ್ನ ಪ್ರೀತಿ ಕಣ ಕಣ ಬಿತ್ತಿ
ಸುಳಿದಾಡಬೇಕು ಅವಳಂದಕ್ಕೆ ಪಾತರಗಿತ್ತಿ
ದಿನವಿಡೀ ಅವಳೊಡನೆ
ಶ್ರಮದ ವಿಶ್ರಮಕೇ, ಸಮೃದ್ದ ಮಡಿಲೇ
ಆಶ್ರಮ
ಕೂದಲೆಳೆಯ ತರದಿ ಗಾಳಿಗೆ ಫಸಲು ತೇಲಿ
ಕೆನ್ನೆ ಸವರಿದ ತರದಿ ಎಳೆ ಪೈರು ತಾಗಿ
ಅವಳೇ ನನ್ನವಳು ನನ್ನ ಪ್ರೀತಿ ಒಡತಿ
ನನ್ನ ನಳನಳಿಸುವ ಜೀವದ ಅಸ್ಮಿತೆ
ಅವಳಿಲ್ಲದಿರೆ ಈ ಜೀವವೆ ಚಿತೆ
ನನ್ನ ಬೆವರಿಳಿದು ಅವಳೊಡಲ ತಾಕಿ
ಅವಳ ಅಗಾಧ ಪ್ರೀತಿ ಕಡಲಿಗೆ ನಾನೇ ಬಾಕಿ
ಮೊನ್ನೇಯಷ್ಟೇ, ವರದಿ ನುಡಿಯಿತಂತೆ
ನನ್ನ ಆತ್ಮಹತ್ಯೆ ‘ಪ್ರೇಮ ಪ್ರಕರಣ’
ಹೌದು, ನನಗವಳು ಬರೀಯ ಮಣ್ಣಲ್ಲ
ಹೆಣ್ಣು, ಹೊನ್ನಿನ ಸಮೀಕರಣ
ನನ್ನ ಕಣ್ಣ ಮುಂದೆ ಅವಳು ಬರಿದಾದಾಗ,
ಅವಳ ಕಣ-ಕಣದಲ್ಲೂ ನನ್ನ ಲಕ್ಷಣ
ಸಾಲದಲಿ ಕಳೆದು ಕೊಂಡಾಗ
ಬರಗಾಲದ ಅವಳ ಕೊನೆಯುಸಿರಲ್ಲಿ
ಕಣ್ಣೀರೂ ಬತ್ತಿ ಹೋದಾಗ
ಅದು, ನನ್ನ ಅಸ್ಮಿತೆಯ ಹತ್ಯೆ
ನನ್ನ ಪ್ರೀತಿಯ ಹತ್ಯೆ
ನಿಮ್ಮ ವರದಿಯ ಮುದ್ರಿತ ಅಕ್ಷರಗಳು ಅರ್ಥೈಸದ
ನನ್ನ ಪ್ರೇಮಕಾವ್ಯದ ಹತ್ಯೆ
Kavithegalu allavu channagive
ಗಬ್ಬೂರ್ ಸರ್ ಕವಿತೆ ಸಾಮಾಜಿಕ ಕಾಳಜಿ ಉಳ್ಳದ್ದು